ಅಂತರಿಕ್ಷವೇರಿದ ಮೊದಲ ಖಾಸಗಿ ತೇರು

– ಸುಧೀಂದ್ರ ಹಾಲ್ದೊಡ್ಡೇರಿ. 

ಬಸ್ಸಿರಲಿ, ವಿಮಾನವಿರಲಿ ಸಾರಿಗೆ ಸೇವೆ ‘ಖಾಸಗಿ’ ಎಂದರೆ ನಮ್ಮ ಜನರಿಗೆ ರೋಮಾಂಚನ. ಖಾಸಗಿಯೆಂದರೆ ಸೇವೆ ಉತ್ಕೃಷ್ಟವಾಗಿರಲೇಬೇಕು ಎಂಬ ನಿರೀಕ್ಷೆ. ಈ ವಿಷಯದಲ್ಲಿ ಅಮೆರಿಕವೂ ಹೊರತಲ್ಲ. ಮೊನ್ನೆ ಶನಿವಾರ ರಾತ್ರಿ ಫ್ಲಾರಿಡಾದ ಕೇಪ್‌ ಕ್ಯಾನವೆರಲ್‌ನಲ್ಲಿ ಲಕ್ಷಾಂತರ ಮಂದಿ ನೆರೆದಿದ್ದರು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ನೂರಾರು ನೌಕೆಗಳನ್ನು ಬಾಹ್ಯಾಕಾಶಕ್ಕೆ ತೂರಿದೆ. ಅವೆಲ್ಲದರ ಉಡ್ಡಯನ ಸಮಯದಲ್ಲಿ ಇಷ್ಟೊಂದು ಜನ ಜಮಾಯಿಸಿರಲಿಲ್ಲ. ಆದರೆ, ಈ ಬಾರಿ ಸಾರ್ವಜನಿಕ ಪ್ರವೇಶಕ್ಕೆ ನೂರೆಂಟು ನಿರ್ಬಂಧಗಳಿದ್ದರೂ ಜನ ಕಾದಿದ್ದರು. ಮಾಧ್ಯಮ ಪ್ರತಿನಿಧಿಗಳು, ಬಾಹ್ಯಾಕಾಶದ ಗಂಭೀರ ಆಸಕ್ತರು, ಇವರ ನಡುವೆ ಸರಕಾರದ ವೈಮಾನಿಕ ಪಯಣ ನಿಯಂತ್ರಣ ಸಂಸ್ಥೆಯ (ಫೆಡರಲ್‌ ಏವಿಯೇಶನ್‌ ಅಡ್ಮಿನಿಸ್ಪ್ರೇಶನ್‌) ಪ್ರಧಾನರೂ ಇದ್ದರು. ಕೊರೊನಾ ಹಾವಳಿ, ಧುತ್ತೆಂದು ಭುಗಿಲೆದ್ದಿರುವ ಜನಾಂಗೀಯ ಗಲಭೆಗಳ ಪ್ರಕ್ಷುಬ್ಧತೆ ನಡುವೆಯೂ ಫ್ಲಾರಿಡಾಗೆ ಬಂದಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉಪಾಧ್ಯಕ್ಷ ಮೈಕೆಲ್‌ ಪೆನ್ಸ್‌ ಸಹಾ ಈ ಉಡ್ಡಯನ ವೀಕ್ಷಿಸಿದರು.
ಭಾನುವಾರ ಮುಂಜಾನೆ ಭಾರತೀಯ ಕಾಲಮಾನ ಒಂದು ಗಂಟೆಯ ಹೊತ್ತಿಗೆ ‘ನಾಸಾ’ದ ಕೆನಡಿ ಕೇಂದ್ರದಲ್ಲಿರುವ ‘ಪ್ಯಾಡ್‌ 39 ಎ’ ಉಡ್ಡಯನ ಪೀಠದಿಂದ ಒಂದು ಐತಿಹಾಸಿಕ ಉಡ್ಡಯನ ಆಯಿತು. ಇದೇ ಪೀಠದಿಂದ ಐವತ್ತೊಂದು ವರ್ಷ ಹಿಂದೆ ಉಡ್ಡಯನವಾಗಿದ್ದು ನೀಲ್‌ ಆರ್ಮ್‌ಸ್ಟ್ರಾಂಗ್‌ ಹಾಗೂ ಬಝ್‌ ಆಲ್ಡ್ರಿನ್‌ ಅವರನ್ನು ಚಂದ್ರನತ್ತ ಹೊತ್ತೊಯ್ದ ‘ಅಪೋಲೋ-11’ ರಾಕೆಟ್‌. ನಿನ್ನೆ ಉಡ್ಡಯಿಸಿದ ‘ಸ್ಪೇಸ್‌ಎಕ್ಸ್‌’ ಕಂಪನಿಯ ‘ಫಾಲ್ಕನ್‌-9’ ರಾಕೆಟ್‌ ತನ್ನೊಡಲೊಳಗಿದ್ದ ಸಂಪುಟವನ್ನು ಅದರ ನಿಗದಿತ ಕಕ್ಷೆಗೆ ಸೇರಿಸಿತು. ‘ಕ್ರ್ಯೂ ಡ್ರಾಗನ್‌’ ಹೆಸರಿನ ಆ ಸಂಪುಟದಲ್ಲಿ ಪಯಣಿಸಿದವರು ವ್ಯೋಮಯಾನಿಗಳಾದ ಬಾಬ್‌ ಬೆಹ್ನ್‌ಕೆನ್‌ ಮತ್ತು ಡೌಗ್‌ ಹರ್ಲೆ. ಇವರಿಬ್ಬರೂ ಹಿಂದೆ ಮಿಲಿಟರಿ ವಿಮಾನಗಳ ಪೈಲಟ್‌ಗಳಾಗಿ ಕೆಲಸ ಮಾಡಿದವರು, ಬಾಹ್ಯಾಕಾಶ ಶಟಲ್‌ ನಡೆಸಿದ ಅನುಭವಿಗಳು. ಬೆಹ್ನ್‌ಕೆನ್‌ ಅವರು ಎರಡು ಬಾರಿ ಬಾಹ್ಯಾಕಾಶ ಶಟಲ್‌ಗಳನ್ನು ಚಲಾಯಿಸಿದ್ದಾರೆ, ಆರು ಬಾರಿ ಬಾಹ್ಯಾಕಾಶದಲ್ಲಿ ನಡೆದಾಡಿದ್ದಾರೆ. ಈ ಬಾರಿಯ ಉಡ್ಡಯನ ಜವಾಬ್ದಾರಿ ಹೊತ್ತ ಹರ್ಲೆ ಈ ಹಿಂದೆ ಎರಡು ಬಾಹ್ಯಾಕಾಶ ಶಟಲ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಸದ್ಯ ಅಂತರಿಕ್ಷ ದಲ್ಲಿ ಪರಿಭ್ರಮಿಸುತ್ತಿರುವ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ಕ್ಕೆ(ಐಎಸ್‌ಎಸ್‌) ‘ಕ್ರ್ಯೂ ಡ್ರಾಗನ್‌’ ಸಂಪುಟ ಯಶಸ್ವಿಯಾಗಿ ಜೋಡಣೆಯಾಗಿದೆ. ಉಡ್ಡಯನಕ್ಕೂ ಮುನ್ನ ಹರ್ಲೆ ಅವರು ‘ನಾವು ಈ ಮೇಣದಬತ್ತಿಯನ್ನು ಹೊತ್ತಿಸೋಣ’ ಎಂದರು. 1961ರಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಬಾಹ್ಯಾಕಾಶ ಪ್ರವೇಶಿಸಿದ ಅಮೆರಿಕ ವ್ಯೋಮಯಾನಿ ಅಲನ್‌ ಶೆಫರ್ಡ್‌ ಅವರು ಇದೇ ಮಾತನ್ನು ಉದ್ಗರಿಸಿದ್ದರು.
ರಾಕೆಟ್‌ ಮೇಲೇರಿ, ಅದರೊಳಗಿನ ಸಂಪುಟ ಯಶಸ್ವಿಯಾಗಿ ಕಕ್ಷೆ ಸೇರಿದಂತೆ ಡೊನಾಲ್ಡ್‌ ಟ್ರಂಪ್‌ ಜನರನ್ನು ಉದ್ದೇಶಿಸಿ ಮಾತನಾಡಿದರು. ಹಿಂದಿನ ಅಧ್ಯಕ್ಷರ ಆಡಳಿತ ಅವಧಿಯಲ್ಲಿನ ಸಾಧನೆಗಳನ್ನು ಜಾಣತನದಿಂದ ಮರೆತು, ಇಡೀ ಯೋಜನೆಯ ಯಶಸ್ಸಿನಲ್ಲಿ ತಮ್ಮ ವೈಯಕ್ತಿಕ ಕೊಡುಗೆಗಳನ್ನು ಮಾತ್ರ ಸ್ಮರಿಸಿಕೊಂಡರು. ಸೋಂಕು, ಸಾವು, ಗಲಭೆ, ಕುಸಿದ ಅರ್ಥವ್ಯವಸ್ಥೆಯಿಂದ ಜರ್ಜರಿತರಾಗಿರುವ ಟ್ರಂಪ್‌, ಈ ಅವಕಾಶವನ್ನು ತಮ್ಮ ಚುನಾವಣೆಗೂ ಮುಂಚಿನ ಪ್ರಚಾರಕ್ಕಾಗಿ ಬಳಸಿಕೊಂಡರು. ಮೂರು ದಿನ ಮೊದಲೇ ನಡೆಯಬೇಕಿದ್ದ ಈ ಉಡ್ಡಯನವನ್ನು ಪ್ರತಿಕೂಲ ಹವಾಮಾನದಿಂದ ಮುಂದೂಡಲಾಗಿತ್ತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನರ ಸೇರುವಿಕೆಗೆ ಅಡೆತಡೆಯಿದ್ದರೂ, ಸುಮಾರು ಒಂದೂವರೆ ಲಕ್ಷ ಜನ ಸ್ಥಳಕ್ಕೆ ಆಗಮಿಸಿದ್ದರು.
ಐಎಸ್‌ಎಸ್‌ ಅನ್ನು ತಲುಪಲು ‘ಕ್ರ್ಯೂ ಡ್ರಾಗನ್‌’ ಸಂಪುಟ ಸುಮಾರು 19 ಗಂಟೆ ತೆಗೆದುಕೊಂಡಿದೆ. ಈ ಅವಧಿಯಲ್ಲಿ ವ್ಯೋಮಯಾನಿಗಳು ಕ್ರ್ಯೂ ಡ್ರಾಗನ್‌ ಒಳಗಿನ ನಿಯಂತ್ರಣ ವ್ಯವಸ್ಥೆ, ಸುರಕ್ಷಾ ವ್ಯವಸ್ಥೆಗಳ ಕಾರ್ಯಾಚರಣೆಯನ್ನು ಪರೀಕ್ಷಿಸಿದ್ದಾರೆ. ಪಯಣಕಾಲದಲ್ಲಿ ಅಮೂಲ್ಯ ಮಾಹಿತಿಗಳನ್ನು ದಾಖಲಿಸಿಕೊಂಡಿದ್ದಾರೆ. ಬಾಹ್ಯ ನಿಯಂತ್ರಣದ ಹಂಗಿಲ್ಲದೆ ಐಎಸ್‌ಎಸ್‌ ಅನ್ನು ತಲುಪಬಲ್ಲ ಸ್ವಾಯತ್ತತೆಯನ್ನು ಈ ಸಂಪುಟ ಹೊಂದಿದೆ. ಆದರೆ, ವಿಮಾನ ನಿಯಂತ್ರಣ ವ್ಯವಸ್ಥೆಗಳಲ್ಲಿರುವಂತೆ, ಅಗತ್ಯ ಬಿದ್ದಾಗ ವ್ಯೋಮಯಾನಿಗಳು ಸಂಪುಟದ ಚಲನೆಯ ನಿಯಂತ್ರಣವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬಹುದು.
ವ್ಯೋಮಯಾನಿಗಳ ವಾಸ್ತವ್ಯದ ಅವಧಿಯು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಇದರಲ್ಲಿ ಅವರ ಸಂಪುಟದ ಸೌರ ಫಲಕಗಳ ಯಶಸ್ವಿ ಕಾರ್ಯಾಚರಣೆ, ಮುಂದೆ ಆಗಮಿಸಲಿರುವ ವ್ಯೋಮಯಾನಿಗಳ ವೇಳಾಪಟ್ಟಿ ಮುಂತಾದವೂ ಸೇರಿರುತ್ತದೆ. ಒಂದು ಅಂದಾಜಿನಂತೆ ಆಗಸ್ಟ್‌ ಅಂತ್ಯದಲ್ಲಿ ತಮ್ಮ ಕ್ರ್ಯೂ ಡ್ರಾಗನ್‌ ಸಂಪುಟವನ್ನು ಸೇರಿಕೊಳ್ಳಲು ಸಿದ್ದರಾಗಬೇಕು. ಅದನ್ನು ಸೇರಿ ಹೊರಟರೆ, ಅದು ಹಿಂದೆ ಚಂದ್ರಯಾತ್ರಿಗಳು ಆಗಮಿಸಿದಂತೆ ಸಮುದ್ರದ ಮೇಲಿನ ನಿಗದಿತ ಸ್ಥಳದಲ್ಲಿ ಸಂಪುಟ ಸಮೇತ ಬೀಳುತ್ತಾರೆ. ಅಟ್ಲಾಂಟಿಕ್‌ ಸಾಗರದಲ್ಲಿ ಅವರಿಗಾಗಿ ಕಾಯುತ್ತಿರುವ ನೌಕಾಪಡೆಯ ಸುರಕ್ಷಾ ಸಿಬ್ಬಂದಿ ಅವರನ್ನು ಕರೆತರುತ್ತಾರೆ. ಮುಂದಿನ ಕ್ರ್ಯೂ ಡ್ರಾಗನ್‌ ಪಯಣದಲ್ಲಿ ಮೂವರು ನಾಸಾ ವ್ಯೋಮಯಾನಿಗಳು- ವಿಕ್ಟರ್‌ ಗ್ಲೋವರ್‌, ಮೈಕ್‌ ಹಾಪ್ಕಿನ್ಸ್‌ ಮತ್ತು ಶಾನನ್‌ ವಾಕರ್‌ ಹಾಗೂ ಜಪಾನಿನ ವ್ಯೋಮಯಾನಿ ಸೊಯ್ಚಿ ನೊಗುಚಿ ಇರುತ್ತಾರೆ.
ಅಮೆರಿಕದಲ್ಲಿ ಕಳೆದ ಒಂದು ದಶಕದಿಂದ ಬಾಹ್ಯಾಕಾಶ ಯೋಜನೆಗಳು ನನೆಗುದಿಗೆ ಬಿದ್ದಿದ್ದವು. 2011ರ ಜುಲೈನ ‘ಅಟ್ಲಾಂಟಿಸ್‌’ ನೌಕೆಯ ಉಡ್ಡಯನವೇ ‘ನಾಸಾ’ದ ಕೊನೆಯ ಕಾರ್ಯಕ್ರಮವಾಗಿತ್ತು. ಇದರ ಚಾಲನೆಯ ನೇತೃತ್ವವನ್ನು ಹರ್ಲೆಯವರೇ ವಹಿಸಿಕೊಂಡಿದ್ದರು. ಐಎಸ್‌ಎಸ್‌ ನಿರ್ಮಾಣದ ಹಲವು ಉಡ್ಡಯನಗಳ ಕಾರ್ಯ, ಹಬಲ್‌ ದೂರದರ್ಶಕದ ಉಡ್ಡಯನ ಸೇರಿ ಮೂರು ದಶಕ ಮಹತ್ತರ ಯೋಜನೆಗಳನ್ನು ನಿರ್ವಹಿಸಿದ್ದ ಅಮೆರಿಕದ ಬಾಹ್ಯಾಕಾಶ ಯೋಜನೆಗಳಿಗೆ ತೆರೆಬಿದ್ದಿದ್ದು 2010ರಲ್ಲಿ. ಬಾಹ್ಯಾಕಾಶ ಯೋಜನೆಗಳನ್ನು ಖಾಸಗೀಕರಿಸುವ ಮಹತ್ವಾಕಾಂಕ್ಷೆಗೆ ಆಗ ಚಾಲನೆ ದೊರಕಿತು. ಇತ್ತ ಬಾಹ್ಯಾಕಾಶ ಪಯಣದ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲು ರಷ್ಯಾದ ಸೋಯುಝ್‌ ರಾಕೆಟ್‌ ಉಡ್ಡಯನಗಳನ್ನು ಅಮೆರಿಕ ಬಳಸಿಕೊಂಡಿತು.
ಬಾಹ್ಯಾಕಾಶ ಪಯಣ ವಹಿವಾಟಿನ ಖಾಸಗೀಕರಣ ಆರಂಭವಾದಂತೆ, ಎಲಾನ್‌ ಮಸ್ಕ್‌ ಅವರ ‘ಸ್ಪೇಸ್‌ಎಕ್ಸ್‌’ ಹಾಗೂ ವಿಮಾನ ತಯಾರಿಕಾ ದೈತ್ಯ ‘ಬೋಯಿಂಗ್‌’ ಕಂಪನಿಗಳು ಸ್ಪರ್ಧೆಗೆ ಸಜ್ಜುಗೊಂಡವು. ಕೆಳಕಕ್ಷೆಯತ್ತ ಉಡ್ಡಯಿಸಬಲ್ಲ ನೌಕೆಗಳ ವಿನ್ಯಾಸ, ನಿರ್ಮಾಣ ಪರೀಕ್ಷೆಗಳಿಗೆಂದು 2014ರಲ್ಲಿ ಬೋಯಿಂಗ್‌ ಕಂಪನಿಗೆ 420 ಕೋಟಿ ಡಾಲರ್‌ ಹಾಗೂ ಸ್ಪೇಸ್‌ಎಕ್ಸ್‌ ಕಂಪನಿಗೆ 260 ಕೋಟಿ ಡಾಲರ್‌ ಮೌಲ್ಯದ ಕಾಂಟ್ರ್ಯಾಕ್ಟ್ಗಳನ್ನು ನಾಸಾ ನೀಡಿತು. ಸ್ಪೇಸ್‌ಎಕ್ಸ್‌ ಕಂಪನಿಯು 2019ರ ಮಾರ್ಚ್‌ನಲ್ಲಿ ಮಾನವರಹಿತ ಸಂಪುಟವೊಂದನ್ನು ಐಎಸ್‌ಎಸ್‌ಗೆ ಯಶಸ್ವಿಯಾಗಿ ಜೋಡಿಸಿತು. ನಿನ್ನೆ ಮುಂಜಾನೆಯ ‘ಫಾಲ್ಕನ್‌-9’ ರಾಕೆಟ್‌ ಉಡ್ಡಯನಕ್ಕೂ 3 ಗಂಟೆ ಮೊದಲು ಬೆಹ್ನ್‌ಕೆನ್‌ ಮತ್ತು ಹರ್ಲೆ ‘ಪ್ಯಾಡ್‌ 39 ಎ’ನತ್ತ ನಡೆಸಿದ ಪಯಣ ವಿಶಿಷ್ಟವಾಗಿತ್ತು. ಬಿಳಿಯ ಟೆಸ್ಲಾ ಮಾಡೆಲ್‌ ಎಕ್ಸ್‌ ಕಾರನ್ನು ಬಳಸಿದರು. ಅದರ ಮೇಲೆ ನಾಸಾ ಸಂಸ್ಥೆಯ ಹಳೆಯ ಶೈಲಿಯ ಲೋಗೋ ಬರೆಯಲಾಗಿತ್ತು. (ಸ್ಪೇಸ್‌ಎಕ್ಸ್‌ ಸಂಸ್ಥಾಪಕ ಮತ್ತು ಸಿಇಒ ಎಲಾನ್‌ ಮಸ್ಕ್‌ ಕೂಡ ತಮ್ಮ ಕಂಪನಿಯ ವಿದ್ಯುತ್‌ ಕಾರು ಟೆಸ್ಲಾವನ್ನೇ ಚಲಾಯಿಸುತ್ತಾರೆ.)
ಈಗಾಗಲೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಯೋಜನೆಗಳ ಹಲವು ಭಾಗಗಳನ್ನು ಖಾಸಗಿ ಕಂಪನಿಗಳಿಗೆ ವಹಿಸಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ಖಾಸಗಿ ಕಂಪನಿಗಳು ಇಸ್ರೋ ವಿನ್ಯಾಸಕ್ಕೆ ಅನುಗುಣವಾಗಿ ಉಪಗ್ರಹ ಹಾಗೂ ರಾಕೆಟ್‌ ನಿರ್ಮಾಣಗಳ ಜವಾಬ್ದಾರಿ ವಹಿಸಿಕೊಳ್ಳಬಹುದು. ಅನ್ಯದೇಶಗಳ ಉಪಗ್ರಹಗಳ ಉಡ್ಡಯನಗಳಿಗೆ ಸೀಮಿತವಾಗಿರುವ ಸದ್ಯದ ವಹಿವಾಟು, ಉಪಗ್ರಹ ಹಾಗೂ ರಾಕೆಟ್‌ ನಿರ್ಮಾಣಕ್ಕೂ ವಿಸ್ತರಿಸುವ ಸಾಧ್ಯತೆಗಳು ಹೆಚ್ಚಿವೆ. ಖಾಸಗಿ ಕಂಪನಿಗಳ ಸಹಭಾಗಿತ್ವದಿಂದ ಇದು ತ್ವರಿತವಾಗಬಹುದು. ಬಾಹ್ಯಾಕಾಶಕ್ಕೆ ವ್ಯೋಮಯಾನಿಗಳನ್ನು ಕಳುಹಿಸಿ, ಸುರಕ್ಷ ವಾಗಿ ಕರೆತರಬಲ್ಲ ಸಂಪುಟಗಳ ಮೊದಲ ಮಾದರಿ (ಮಾನವರಹಿತ) ಪರೀಕ್ಷೆಗಳನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ. ಇಂಥ ಸಂಪುಟಗಳನ್ನು ಇತರ ದೇಶಗಳಿಗೂ ಭಾರತ ಮಾಡಿಕೊಡಬಹುದು. ‘ಸ್ವಾವಲಂಬಿ ಭಾರತ’ ನಿರ್ಮಾಣ ಯೋಜನೆಯಡಿಯಲ್ಲಿ ಬಾಹ್ಯಾಕಾಶ ಬ್ಯುಸಿನೆಸ್‌ ಅನ್ನು ಬಲಪಡಿಸುವ ಕಾರ್ಯವೂ ಸೇರಿಕೊಂಡಿದೆ. ಅಂತೆಯೇ ಈ ವಹಿವಾಟಿನ ಮೊತ್ತ ನೂರಾರು ಪಟ್ಟು ಹಿಗ್ಗಬಹುದು.
(ಲೇಖಕರು ಹಿರಿಯ ವಿಜ್ಞಾನಿ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top