– ಗೋವಿಂದ ಕಾರಜೋಳ.
‘ಜನನಾಯಕ’ ಎನ್ನುವ ಪದವೊಂದಿದೆ. ಸಾಧನೆಗಿಂತ ಸೇವೆಗೆ ಹೊಂದುವ ಅರ್ಥ ಕೊಡುವ ಪದ ಇದು. ನರೇಂದ್ರ ದಾಮೋದರ ಮೋದಿಯವರು ವಿಶ್ವದ ಜನನಾಯಕರಲ್ಲೊಬ್ಬರು. ವಿಶ್ವ ಸಮುದಾಯದೆತ್ತರಕ್ಕೆ ಭಾರತೀಯರ ಜನ-ಸೇವಾ ಕಾರ್ಯಗಳನ್ನು ಎತ್ತಿ ತೋರಿದ ಮಹಾನ್ ನಾಯಕ. ಶಾಂತಿ-ಸಹಬಾಳ್ವೆಯ ನಿರೂಪಕ, ನಿರ್ಮಾಪಕ, ದಿಗ್ದರ್ಶಕ, ಸ್ವಚ್ಛ ಭಾರತ ನಿರ್ಮಾತೃ. ಆಯುಷ್ಮಾನ್ ಭಾರತ ರೂವಾರಿ ಹಾಗೂ ಅಂತ್ಯೋದಯ ಚಿಂತನೆಗಳ ಕಾರ್ಯಸಾಧಕ.
ಪ್ರಧಾನಿ ಮೋದಿ ಜನಕಲ್ಯಾಣಕ್ಕಾಗಿ ನೂರೆಂಟು ಕಾರ್ಯಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದುದನ್ನು ಕಳೆದ ಆರು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಜನತೆ ಕಂಡಿದ್ದಾರೆ. ಈ ಪೈಕಿ ನಾಡಿನ ದೀನ-ದಲಿತರು ಮತ್ತು ಅಶಕ್ತರು ಬಹುವಾಗಿ ಸ್ಮರಿಸುತ್ತಿರುವುದು ‘ಅಂತ್ಯೋದಯ’ದ ಮಹತ್ವಪೂರ್ಣ ಅಂಶಗಳನ್ನು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಸೂತ್ರದ ಮೂಲಕ ಮೋದಿ ದೇಶದ ಆಮೂಲಾಗ್ರ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಗಾಂಧೀಜಿಯವರು ಕಂಡ ಕನಸನ್ನು ಪ್ರಾಮಾಣಿಕವಾಗಿ ನನಸು ಮಾಡುವತ್ತ ಶ್ರಮಿಸಿದ್ದಾರೆ.
ಆಯುಷ್ಮಾನ್ ಭಾರತ: ‘ಆಯುಷ್ಮಾನ್ ಭಾರತ’ ಮೋದಿಯವರ ಮಹತ್ವಪೂರ್ಣ ಯೋಜನೆಗಳಲ್ಲಿ ಮೊದಲನೆಯದು. ಸುಮಾರು 50 ಕೋಟಿ ಭಾರತೀಯರಿಗೆ, ವಿಶೇಷವಾಗಿ ಜನಸಾಮಾನ್ಯರು ಮತ್ತು ಆಸಕ್ತ ದುರ್ಬಲ-ದೀನರಿಗೆ ಅತೀ ಕಡಿಮೆ ದರದಲ್ಲಿ ಅತ್ಯುನ್ನತ ಗುಣಮಟ್ಟದಲ್ಲಿ, ವೈಜ್ಞಾನಿಕ ಹಾಗೂ ವಿಶೇಷ ಎಚ್ಚರಿಕೆಯಿಂದ ತಯಾರಿಸಲಾಗುತ್ತಿರುವ ಔಷಧ ವಸ್ತುಗಳನ್ನು ಸುವ್ಯವಸ್ಥಿತವಾಗಿ ಹಾಗೂ ಸುಲಭವಾಗಿ ದೊರಕುವಂತೆ ಮಾಡಿದೆ ಆಯುಷ್ಮಾನ್. ಆಯುಷ್ಮಾನ್ ಯೋಜನೆಯ ವ್ಯಾಪಕತೆ, ಆಯಾಮ, ಜನರಿಗಾಗುತ್ತಿರುವ ಪ್ರಯೋಜನ ಕಂಡು ಮುಂದುವರಿದ ರಾಷ್ಟ್ರಗಳು ಬೆರಗಾಗಿವೆ ಎಂದು ‘ಲ್ಯಾನ್ಸೆಟ್’ ಪತ್ರಿಕೆ ಹೇಳಿದೆ.
ಜನಧನ ಯೋಜನೆ: ಇದರ ಪೂರ್ಣ ಹೆಸರು ‘ಪ್ರಧಾನಮಂತ್ರಿ ಜನಧನ ಯೋಜನೆ.’ ಕಡುಕಷ್ಟದ ಬದುಕನ್ನು ಸಾಗಿಸುತ್ತಿದ್ದ ಸುಮಾರು 35 ಕೋಟಿ ಪ್ರಜೆಗಳಿಗೆ ಬ್ಯಾಂಕುಗಳಲ್ಲಿ, ಅವರ ಹೆಸರು, ವಿಳಾಸಗಳಲ್ಲೇ ಹಣ ಒಟ್ಟುಗೂಡಿಸುವ ಜನತಾ ಜನಾರ್ದನನ ನಿತ್ಯ ಸೇವೆ ಇದು. ಸರಕಾರದಿಂದ ಕೊಡಮಾಡುವ ಹಣ ನೇರವಾಗಿ ಬಡ ಪ್ರಜೆಗೆ ಸಂದಾಯವಾದದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಭಾಗ್ಯದ ಲಕ್ಷ್ಮಿಯಾಗಿದೆ ಜನಧನ ಯೋಜನೆ. ಅತ್ಯಂತ ಕೆಳಮಟ್ಟದಲ್ಲಿ ದುರ್ಭರ ಬದುಕು ನಡೆಸುತ್ತಿದ್ದ ದೀನ-ದಲಿತರಿಗಾಗಿ ಮೋದಿಯವರು ಜಾರಿಗೆ ತಂದಿರುವ ಮತ್ತೊಂದು ಕಾರ್ಯಕ್ರಮ ‘ಜನ ಸುರಕ್ಷಾ ಯೋಜನೆ’. ಪಿಂಚಣಿ ಮತ್ತು ವಿಮಾ ಹಣದ ಸುರಕ್ಷತೆಯ ರಕ್ಷಾ ಕವಚ ಇದು.
ಕಿಸಾನ್ ಸಮ್ಮಾನ್ ನಿಧಿ: ಕೃಷಿ ವಲಯದಲ್ಲಿ ಜನಪರವಾದ ಹಲವಾರು ಕ್ರಿಯಾಶೀಲ ಮತ್ತು ಸಮಯೋಚಿತ ಕಾರ್ಯಕ್ರಮಗಳ ಯೋಜನೆ ಹಾಗೂ ಅನುಷ್ಠಾನಕ್ಕೆ ಆದ್ಯತೆ ನೀಡಿದ್ದಾರೆ. ನಮ್ಮ ಪ್ರಧಾನಿ ಅಸಂಘಟಿತ ಕ್ಷೇತ್ರಗಳಲ್ಲಿನ ವಿವಿಧ ವರ್ಗದ ಮತ್ತು ಕೌಶಲದ ಕರ್ಮಯೋಗಿಗಳಿಗಾಗಿ, ಸುಮಾರು 42 ಕೋಟಿ ಶ್ರಮಜೀವಿಗಳಿಗಾಗಿ ಜಾರಿಗೆ ತಂದ ಶ್ರಮಯೋಗಿ ಯೋಜನೆ.
ಮಹಿಳೆಯರಿಗಾಗಿ, ಕಾಡುಮೇಡುಗಳಿಂದ ಸೌದೆ ತಂದು ಅಡುಗೆ ಮಾಡುತ್ತಿದ್ದ ಏಳು ಕೋಟಿಗೂ ಹೆಚ್ಚು ಗ್ರಾಮೀಣ ಗೃಹಿಣಿಯರಿಗಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ರೂಪಿಸಿದ್ದಾರೆ. ಸ್ವಾತಂತ್ರ್ಯಾ ನಂತರದ 70 ವರುಷಗಳಿಗೂ ಹೆಚ್ಚು ಕಾಲದಿಂದ ವಿದ್ಯುತ್ ಕಾಣದಿದ್ದ ದೇಶದ ಮೂಲೆ ಮೂಲೆಯ 18 ಸಹಸ್ರ ಗ್ರಾಮಗಳಿಗೆ ವಿದ್ಯುತ್ ವಿಸ್ತಾರ ಯೋಜನೆ; ಪ್ರಥಮ ಅಧಿಕಾರದ ಅವಧಿಯಲ್ಲಿ ಗ್ರಾಮೀಣ ವಸತಿ ಯೋಜನೆಯಡಿ 1 ಕೋಟಿ 25 ಲಕ್ಷ ಮನೆ ನಿರ್ಮಾಣ; ಕೃಷಿ ಕ್ಷೇತ್ರದ ವ್ಯಾಪಕ ಅಭಿವೃದ್ಧಿ ಮತ್ತು ಬಡರೈತನ ನೆರವಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳಂತೂ ಗ್ರಾಮೀಣ ಪುನರುಜ್ಜೀವನಕ್ಕೆ ಜ್ವಲಂತ ಸಾಕ್ಷಿಯಾಗಿವೆ.
ಈ ಮುನ್ನ ರೈತರ ನೆರವಿಗೆ ಕನಿಷ್ಠ ಐದು ಎಕರೆ ಜಮೀನಿನ ನಿಗದಿ ಕಡ್ಡಾಯವಾಗಿತ್ತು. ಇಂದು ಯಾವುದೇ ಮಿತಿ ಇಲ್ಲ. ವರುಷಕ್ಕೆ ರೈತನ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ 87,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿರುವುದನ್ನು ದೇಶದ ರೈತ ಜನಾಂಗ ಕೃತಜ್ಞತೆಯಿಂದ ಕಾಣುತ್ತದೆ.
ಜನಮನ ಮೆಚ್ಚಿಸಿದ ಅವರ ಮತ್ತೆರಡು ಕಾರ್ಯಗಳೆಂದರೆ ಬಿಜೆಪಿಗೆ ಸ್ಫೂರ್ತಿ ನೀಡಿದ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಡೆಸಿಕೊಟ್ಟ ಯಾತ್ರೆಗಳು. ಎರಡನೆಯದು ಕೋವಿಡ್ ವಿರುದ್ಧ ಭಾರತದ ಸಮರ ಸಿದ್ಧತೆ.
ಮೋದಿಯವರ ದೂರದೃಷ್ಟಿಯ ಆತ್ಮನಿರ್ಭರ ಭಾರತ ಕುರಿತು ಎರಡು ಮಾತುಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಆತ್ಮನಿರ್ಭರ ಭಾರತ ಕಲ್ಪನೆಯ ಮೂಲಕ ಪ್ರತಿಯೊಬ್ಬ ಭಾರತೀಯನೂ ಜಾಗೃತಗೊಂಡು ಸ್ವಾವಲಂಬನೆಯಿಂದ ಉತ್ಪಾದನೆ ಹೆಚ್ಚಿಸುವುದು, ಜನಶಕ್ತಿ ಸಂಪತ್ತಿನ ಸದುಪಯೋಗ ಪಡಿಸಿಕೊಳ್ಳುವುದು, ಸ್ವಾವಲಂಬಿ ಭಾರತವನ್ನು ರೂಪಿಸುವುದು ಹಾಗೂ ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಮಂತ್ರವನ್ನು ಮೋದಿ ನೀಡಿದ್ದಾರೆ. ಭಾರತಕ್ಕೆ ಅಪರೂಪದ ಅಂತಃಶಕ್ತಿ ಇದೆ. 1.ಆರ್ಥಿಕತೆ, 2.ಮೂಲಸೌಕರ್ಯ, 3.ತಂತ್ರಜ್ಞಾನ ಆಧಾರಿತ ವ್ಯವಸ್ಥೆ, 4.ಜನಸಂಖ್ಯೆ, 5.ಬೇಡಿಕೆ- ಈ 5 ಅಂಶಗಳನ್ನು ಆರ್ಥಿಕತೆಯ ಸಲುವಾಗಿ ನಾವು ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ. ಈ ಉಪಕ್ರಮದಿಂದ ನಾವು ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲಿ ನಿಲ್ಲಿಸುವುದರಲ್ಲಿ ಸಂದೇಹವಿಲ್ಲ. ಇದೇ ಅಂಶಗಳನ್ನು ಈ ಹಿಂದೆ ಮಹಾತ್ಮಾ ಗಾಂಧೀಜಿಯವರು ಸ್ವದೇಶಿ ಚಳವಳಿಯ ಮೂಲಕ ದೇಶವನ್ನು ಎಚ್ಚರಿಸಿ ದಾಸ್ಯಮುಕ್ತ ಮಾಡುವಲ್ಲಿ ಯಶಸ್ವಿ ಆಗಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.
ಕೊರೊನಾ ವಿರುದ್ಧ ಭಾರತದ ಸಮರ: ಕೊರೊನಾ ವಿರುದ್ಧ ಮೋದಿಯವರ ಸಮರ್ಥ ಆಡಳಿತದ ಜಾಗರೂಕ ಕ್ರಮಗಳ ಕುರಿತು ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ಸಮಯೋಚಿತ ಕ್ರಮಗಳು, ಬೃಹತ್ ಪ್ರಮಾಣದ ಆರೋಗ್ಯ ವ್ಯವಸ್ಥೆಗಳಿಗಾಗಿ ವಿಶ್ವನಾಯಕರು ಮುಕ್ತಕಂಠದಿಂದ ಪ್ರಶಂಶಿಸಿದ್ದಾರೆ. ಮೋದಿಯವರು ಸಂಕಷ್ಟದಲ್ಲಿ ಸಿಲುಕಿದ ಕೋಟ್ಯಂತರ ಭಾರತೀಯರಿಗಾಗಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಸಂಕಷ್ಟ ಪರಿಹಾರೋಪಾಯ ಮತ್ತು ವಿವಿಧ ಹಂತದ ರಿಯಾಯಿತಿ-ಪ್ರೋತ್ಸಾಹ ಕಾರ್ಯಕ್ರಮಗಳು ಜನತೆಗೆ ಆಶಾದಾಯಕವೆನಿಸಿವೆ.
‘ಮಾಡಿದೆ’ ಎನ್ನದ ನಾಯಕ: ಜನನಾಯಕನಲ್ಲಿ ಇರಬೇಕಾದ ಆದರ್ಶದ ಗುಣವೆಂದರೆ ಸಂಘಶಕ್ತಿ ಜನಪರ ಕಾರ್ಯಕ್ರಮಗಳು ಜನತೆಯಿಂದಲೇ ಅನುಷ್ಠಾನಗೊಳ್ಳಬೇಕೆಂಬ ಸಾಮೂಹಿಕ ನಿರ್ವಹಣಾ ಮನೋಧರ್ಮ. ಭಾರತದಂತಹ ಜನಬಾಹುಳ್ಯ ಪ್ರಜಾತಂತ್ರದ ಪ್ರಧಾನಿಯಾಗಿ ಅಭಿವೃದ್ಧಿ ಕಾರ್ಯಕ್ರಮಗಳ ಯಶಸ್ಸಿಗಾಗಿ ದಿನವಿಡೀ ಶ್ರಮಿಸಿದರೂ ಒಮ್ಮೆಯೂ ಮೋದಿ ತಾನೇ ಎಲ್ಲಕ್ಕೂ ಕಾರಣಕರ್ತ ಎಂದು ಯಾವತ್ತೂ ಹೇಳಿಕೊಂಡಿಲ್ಲ. ಸ್ವಯಂಪ್ರತಿಷ್ಠೆಯ ಗರ್ವ, ಆತ್ಮಪ್ರಶಂಸೆ- ಇಲ್ಲ. ಸಮಾಜ ಸುಧಾರಕ ಬಸವಣ್ಣನವರ ಮಾತನ್ನು ಮೋದಿಯವರ ವ್ಯಕ್ತಿತ್ವಕ್ಕೆ ಅನ್ವಯ ಮಾಡಿ ಹೇಳಿದರೆ ಸತ್ಯ ಹೇಳಿದಂತೆ: ‘‘ನಾ ಮಾಡಿದೆನೆಂಬುದು ಮನದೊಳು ಸುಳಿದೊಡೆ/ ಏಡಿಸಿ ಕಾಡಿತ್ತು ಶಿವನ ಡಂಗುರ/ ನಾ ಮಾಡಿದೆನೆನ್ನದಿರು ಲಿಂಗಕ್ಕೆ/ ನಾ ಮಾಡಿದೆನೆನ್ನದಿರು ಜಂಗಮಕ್ಕೆ/ ನಾ ಮಾಡಿದೆನೆಂಬುದು ಮನದೊಳಿಲ್ಲದಿದ್ದೊಡೆ/ ಬೇಡಿದನೀವ ನಮ್ಮ ಕೂಡಲ ಸಂಗಮದೇವ.’’
(ಲೇಖಕರು ಕರ್ನಾಟಕದ ಉಪ ಮುಖ್ಯಮಂತ್ರಿ)
—
ಮೋದಿಯ ಎರಡನೇ ಅವಧಿಯ ಮೈಲುಗಲ್ಲುಗಳು
ತ್ರಿವಳಿ ತಲಾಕ್ ರದ್ದು
2019ರ ಜುಲೈ 30: ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ತ್ರಿವಳಿ ತಲಾಕ್ ರದ್ದು ವಿಧೇಯಕ ಅನುಮೋದನೆ, ಕಾಯಿದೆ ಜಾರಿ. ಮುಸ್ಲಿಂ ಮಹಿಳೆಯರಿಗೆ ನಿರಾಳ.
ಕಾಶ್ಮೀರದ 370ನೇ ವಿಧಿ ರದ್ದು
2019 ಆಗಸ್ಟ್ 5: ಜಮ್ಮು ಮತ್ತು ಕಾಶ್ಮೀರದಲ್ಲಿ 1947ರಿಂದಲೂ ಇದ್ದ 370ನೇ ವಿಧಿ ಹಾಗೂ 35ಎ ವಿಧಿ ರದ್ದು. ಇತಿಹಾಸ ಸೇರಿದ ಕಾಶ್ಮೀರದ ಪ್ರತ್ಯೇಕ ಸ್ಥಾನಮಾನ, ಪ್ರತ್ಯೇಕ ಸಂವಿಧಾನ. ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ.
ಹೌಡಿ ಮೋದಿ
2019 ಸೆಪ್ಟೆಂಬರ್ 23: ಅಮೆರಿಕದ ಹ್ಯೂಸ್ಟನ್‌ನಲ್ಲಿ ಸುಮಾರು 50,000 ಅನಿವಾಸಿ ಭಾರತೀಯರು ಸೇರಿದ ಸಭೆಯಲ್ಲಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದರು.
ಆರ್‌ಸಿಇಪಿಯಿಂದ ಹೊರಕ್ಕೆ
2019 ನವೆಂಬರ್ 5: ಆಗ್ನೇಯ ಏಷ್ಯಾ ದೇಶಗಳ ನಡುವೆ, ಚೀನಾ ಪ್ರಾಬಲ್ಯವುಳ್ಳ ಮುಕ್ತ ಆರ್ಥಿಕ ವ್ಯಾಪಾರ ಒಪ್ಪಂದ (ಆರ್‌ಸಿಇಪಿ)ಯಿಂದ ಭಾರತ ಹೊರನಿಂತಿತು.
ರಾಮನಿಗೇ ಜನ್ಮಭೂಮಿ
2019 ನವೆಂಬರ್ 9: ದಶಕಗಳ ಕಾಲ ದೇಶವನ್ನು ಕಾಡಿದ ಅಯೋಧ್ಯಾ ರಾಮಜನ್ಮಭೂಮಿ ವಿವಾದ ಶಮನ. ಸುಪ್ರೀಂ ಕೋರ್ಟ್‌ನಿಂದ ತೀರ್ಪು. ಒಂದೇ ಒಂದು ಹಿಂಸಾತ್ಮಕ ಘಟನೆ ನಡೆಯದಂತೆ ನಿಯಂತ್ರಣ.
ಪೌರತ್ವ ಕಾಯಿದೆ
2019 ಡಿಸೆಂಬರ್ 11: ಪೌರತ್ವ ತಿದ್ದುಪಡಿ ಕಾಯಿದೆ ಜಾರಿ. ಪಾಕ್, ಬಾಂಗ್ಲಾ, ಅಫಘಾನಿಸ್ತಾನದಿಂದ ಬಂದ ಹಿಂದೂ, ಸಿಕ್ಖ್, ಜೈನ, ಪಾರ್ಸಿ, ಬೌದ್ಧ, ಜೈನರಿಗೆ ಪೌರತ್ವ ಖಾತ್ರಿ.
ಸೇನಾ ಮುಖ್ಯಸ್ಥ ಘೋಷಣೆ
2019 ಡಿಸೆಂಬರ್ 24: ಸೇನೆಯ ಮೂರು ವಿಭಾಗಗಳಿಗೂ ಒಬ್ಬ ಮುಖ್ಯಸ್ಥರಾದ ‘ಚೀಫ್ ಆಫ್ ಡಿಫೆನ್ಸ್ ಸ್ಟಾಫ್’ ಎಂಬ ಹೊಸ ಹುದ್ದೆ.
ನಮಸ್ತೆ ಟ್ರಂಪ್
2020 ಫೆಬ್ರವರಿ 24: ಭಾರತಕ್ಕೆ ಭೇಟಿ ನೀಡಿದ ಟ್ರಂಪ್. ಗುಜರಾತ್‌ನ ಅಹಮದಾಬಾದ್‌ನಲ್ಲಿ ಐತಿಹಾಸಿಕ ರ್ಯಾಲಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂನಲ್ಲಿ 1 ಲಕ್ಷ ಜನತೆಯ ಮುಂದೆ ಭಾಷಣ.
ಕೋವಿಡ್ ನಿಯಂತ್ರಣ
2020 ಏಪ್ರಿಲ್: ಮೂರು ಸತತ ಲಾಕ್‌ಡೌನ್‌ಗಳ ಮೂಲಕ ದೇಶದಲ್ಲಿ ಕೋವಿಡ್ ಕೇಸುಗಳ ಹಾಗೂ ಸಾವುಗಳ ಸಂಖ್ಯೆ ಹಿಡಿತ ತಪ್ಪುವುದನ್ನು ನಿಯಂತ್ರಿಸಲಾಯಿತು.
ಬೃಹತ್ ಪ್ಯಾಕೇಜ್
2020 ಮೇ: ಹಳಿ ತಪ್ಪಿದ ಆರ್ಥಿಕತೆಯನ್ನು ಚಿಗುರಿಸಲು ಜಿಡಿಪಿಯ 10 ಶೇ., 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಲಾಯಿತು.
ಆರೋಗ್ಯ ಸಂಸ್ಥೆ ಅಧ್ಯಕ್ಷತೆ
2020 ಮೇ: ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷತೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಂದ ನೇತೃತ್ವ.