ವಿಕ ಸುದ್ದಿಲೋಕ ಬೆಂಗಳೂರು.
ಉತ್ತರದ ರಾಜ್ಯಗಳಲ್ಲಿ ರೈತರ ಬೆಳೆ ತಿಂದಿರುವ ಮಿಡತೆಯ ಹಾವಳಿ ರಾಜ್ಯವನ್ನು ಬಾಧಿಸುವ ಸಾಧ್ಯತೆ ತೀರಾ ಕಡಿಮೆ ಇದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಯ ನೀಡಿದ್ದಾರೆ.
ಮಿಡತೆ ಹಾವಳಿ ರಾಜ್ಯವನ್ನು ಬಾಧಿಸದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಕಾಸಸೌಧದಲ್ಲಿ ಗುರುವಾರ ಕೃಷಿ ಅಧಿಕಾರಿಗಳು, ಕೃಷಿ ವಿ.ವಿ. ಸಂಶೋಧಕರು ಹಾಗೂ ಕೀಟಶಾಸ್ತ್ರಜ್ಞರ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘‘ಕೋಲಾರದಲ್ಲಿ ಕಂಡು ಬಂದಿರುವುದು ಸಾಮಾನ್ಯ ಎಕ್ಕೆಗಿಡದ ಮಿಡತೆ’’ ಎಂದು ಸ್ಪಷ್ಟಪಡಿಸಿದರು.
‘‘ಮಿಡತೆಗಳ ಸಂಚಾರ ಗಾಳಿಯನ್ನು ಅವಲಂಬಿಸಿದೆ. ಗಾಳಿಯ ದಿಕ್ಕು ಬದಲಾದಂತೆ ಮಿಡತೆಗಳು ಹಾರುವ ದಿಕ್ಕೂ ಬದಲಾಗುತ್ತದೆ. ಕೃಷಿ ತಜ್ಞರ ಪ್ರಕಾರ ಕರ್ನಾಟಕಕ್ಕೆ ಮಿಡತೆ ಹಾವಳಿ ಸಾಧ್ಯತೆ ಕಡಿಮೆ. ಮೇ 26ರಿಂದ ಎರಡು ದಿನಗಳು ಮಾತ್ರ ದಕ್ಷಿಣಾಭಿಮುಖವಾಗಿ ಗಾಳಿ ಬೀಸುತ್ತಿದ್ದು, ಎರಡು ದಿನಗಳ ಬಳಿಕ, ಅಂದರೆ ಮೇ 30ರ ವೇಳೆಗೆ ಅದರ ದಿಕ್ಕು ಬದಲಾಗುವ ಸಾಧ್ಯತೆಯಿದೆ,’’ ಎಂದರು.
‘‘ಒಂದು ವೇಳೆ ಗಾಳಿ ದಿಕ್ಕು ಬದಲಾಗದೇ ಮಿಡತೆಗಳು ಕರ್ನಾಟಕ ಮುಟ್ಟಿದರೆ ಯಾವ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಕ್ರಿಯಾ ಯೋಜನೆ ಸಿದ್ಧಗೊಳಿಸಲಾಗಿದೆ,’’ ಎಂದರು.
‘‘ಮಹಾರಾಷ್ಟ್ರದ ಕೃಷಿ ಆಯುಕ್ತರೊಂದಿಗೆ ರಾಜ್ಯದ ಕೃಷಿ ಆಯುಕ್ತರು ಪ್ರತಿ ಗಂಟೆಗೊಮ್ಮೆ ಮಿಡತೆಗಳ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೀಟನಾಶಕ ಸಿಂಪರಣೆಗಾಗಿ ಅಗ್ನಿಶಾಮಕ ದಳ ವಾಹನ, ಟ್ರ್ಯಾಕ್ಟರ್ ಚಾಲಿತ ಸ್ಪ್ರೇಯರ್ಗಳು ಹಾಗೂ ಡ್ರೋಣ್ಗಳ ವ್ಯವಸ್ಥೆ ಮಾಡಲಾಗಿದೆ,’’ ಎಂದು ನಿರ್ವಹಣಾ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು.
ಜಿಲ್ಲಾಮಟ್ಟದ ನಿರ್ವಹಣಾ ಸಮಿತಿ
ಜಿಲ್ಲಾಮಟ್ಟದಲ್ಲಿ ಕೀಟನಾಶಕ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿಯಿದ್ದು, ಸಮಿತಿಯಲ್ಲಿ ಜಂಟಿ ಕೃಷಿ ನಿರ್ದೇಶಕರು, ಸಿಇಒ, ತೋಟಗಾರಿಕಾ ಉಪನಿರ್ದೇಶಕರು, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ನೆರೆಯ ಆಂಧ್ರದಲ್ಲಿ ಮಿಡತೆ ದಾಳಿ
ಮೊಳಕಾಲ್ಮುರು: ಪಟ್ಟಣದಿಂದ ಕೇವಲ 15 ಕಿ.ಮೀ ದೂರದ ನೆರೆಯ ಆಂಧ್ರದ ರಾಯದುರ್ಗದಲ್ಲಿ ಕಳೆದ ಎರಡು ದಿನಗಳಿಂದಲೂ ಮಿಡತೆಗಳ ಹಿಂಡು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಈ ಭಾಗದ ರೈತರು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದಾರೆ. ಈ ನಡುವೆ ಮಿಡತೆ ದಾಳಿ ನಿಯಂತ್ರಣಕ್ಕೆ ಕೃಷಿ ಇಲಾಖೆ ಕೂಡ ಸಜ್ಜಾಗುತ್ತಿದೆ. ರಾಯದುರ್ಗ ಪಟ್ಟಣದ ದಾಸಪ್ಪ ರಸ್ತೆಯಲ್ಲಿನ ಎಕ್ಕೆಗಿಡಗಳಲ್ಲಿ ಬುಧವಾರ ಮಿಡತೆಗಳ ಹಿಂಡು ಕಾಣಿಸಿಕೊಂಡಿದ್ದವು. ಬೆಳಿಗ್ಗೆ ಗಿಡಗಳ ತುಂಬಾ ರಾರಾಜಿಸುತ್ತಿದ್ದ ಎಲೆಗಳು ಮಧ್ಯಾಹ್ನದ ಸಮಯಕ್ಕೆ ಖಾಲಿಯಾಗಿ ಗಿಡಗಳು ಬೋಳಾಗಿದ್ದವು. ಈ ಮಿಡತೆಗಳನ್ನು ಕಾಣಲು ಸ್ಥಳೀಯರು ಮುಗಿಬಿದ್ದದ್ದು ಕಂಡು ಬಂದಿತ್ತು.
ಅಗತ್ಯ ಸಂದರ್ಭ ಸೃಷ್ಟಿಯಾದರೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ಶೇ.25 ರಷ್ಟನ್ನು ಮಿಡತೆ ನಿರ್ವಹಣೆಗೆ ಬಳಸಲು ಸರಕಾರ ಒಪ್ಪಿಗೆ ನೀಡಿದೆ.
– ಬಿ.ಸಿ.ಪಾಟೀಲ್ ಕೃಷಿ ಸಚಿವ
ಉತ್ತರ ಭಾರತದ ಮಿಡತೆಗಳು ಕರ್ನಾಟಕದತ್ತ ಬರುವುದು ಅನುಮಾನವಾದರೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ನಮ್ಮ ಇಲಾಖೆಯಲ್ಲಿ ಚರ್ಚೆ ನಡೆದಿದೆ. ಕೃಷಿ ಇಲಾಖೆಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಯಲಿದೆ.
-ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ
ಏನು ಮಾಡಬಹುದು?
– ತಗಡಿನ ಡಬ್ಬಿ, ಡ್ರಮ್ಮು, ತಟ್ಟೆ ಇವುಗಳನ್ನು ಬಾರಿಸುವ ಮೂಲಕ ಭಾರಿ ಶಬ್ದ ಮಾಡಿ.
– ರೇಡಿಯೊ ಅಥವಾ ಎಲೆಕ್ಟ್ರಾನಿಕ್ ಸೌಂಡ್ ಶುರು ಮಾಡಿ
– ದುಬಾರಿ ಬೆಳೆಗಳಿದ್ದಲ್ಲಿ ಬೇವು ಆಧಾರಿತ ಕೀಟನಾಶಕಗಳನ್ನು ಸಿಂಪಡಿಸಬೇಕು.
– ಮಿಡತೆಗಳು ಸಂಜೆಗೆ ಮರ, ಗಿಡಗಳ ಮೇಲೆ ಕೂರುತ್ತದೆ. ಆ ವೇಳೆ ಕ್ಲೋರ್ಫೈರಿಫಾಸ್ ಅಥವಾ ಲಾಮ್ಡಾಸಿಹಲೋತ್ರಿನ್ ಔಷಧಿಗಳ ಸಿಂಪರಣೆ ಮಾಡಬೇಕು.
– ಬೆಂಕಿ ಹಾಕುವುದು, ಧೂಳೀಕರಣದ ಮೂಲಕ ಮಿಡತೆ ದಾಳಿ ತಡೆಯಬಹುದು
ನಿರುಪದ್ರವಿ ಮಿಡತೆಗಳು
ಕೋಲಾರ: ತಾಲೂಕಿನ ದಿಂಬಗೇಟ್ ಬಳಿ ಕಂಡುಬಂದಿರುವ ಮಿಡತೆಗಳಿಂದ ರೈತರ ಬೆಳೆಗಳಿಗೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಕೇಂದ್ರೀಯ ಸಮಗ್ರ ಕೀಟ ನಿರ್ವಹಣ ಕೇಂದ್ರ ವಿಜ್ಞಾನಿಗಳು ಭರವಸೆ ನೀಡಿದ್ದಾರೆ. ಗುರುವಾರ ಬೆಳಗ್ಗೆ ಜಿಲ್ಲೆಗೆ ಭೇಟಿ ನೀಡಿದ ವಿಜ್ಞಾನಿಗಳು ಮಿಡತೆಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಸ್ಯ ಸಂಕ್ಷರಣ ವಿಭಾಗದ ವಿಜ್ಞಾನಿ ಷಹೀರ್ ಕಾರ್ತಿಕ್, ‘‘ದಿಂಬ ಗ್ರಾಮದಲ್ಲಿಕಂಡು ಬಂದಿರುವುದು ಸ್ಥಳೀಯ ಜಾತಿಯ ಮಿಡತೆಗಳಾಗಿದ್ದು, ಇವುಗಳಿಂದ ರೈತರ ಬೆಳೆಗಳಿಗೆ ಯಾವುದೇ ರೀತಿಯ ಹಾನಿಯಿಲ್ಲ,’’ ಎಂದರು. ‘‘ದಿಂಬ ಗ್ರಾಮದ ಮಿಡತೆಗಳು ಪ್ರೌಢವಸ್ಥೆಯಲ್ಲಿದ್ದು, ಇನ್ನು ರೆಕ್ಕೆಗಳು ಸಹ ಬಂದಿಲ್ಲ. ಈ ಕಾರಣದಿಂದ ಮಿಡತೆಗಳು ಒಂದೇ ಕಡೆಯಿರುವುದು ಕಂಡುಬಂದಿದೆ,’’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಶಿವಕುಮಾರ್ ಮಾಹಿತಿ ನೀಡಿದರು.
ಮುನ್ಸೂಚನೆ ವ್ಯವಸ್ಥೆ
ಮಿಡತೆಗಳು ಹಗಲಿಗಿಂತ ರಾತ್ರಿ ವೇಳೆ ಹೆಚ್ಚು ಸಂಚರಿಸುತ್ತವೆ. ಭಾರತೀಯ ಹವಾಮಾನ ಸಂಸ್ಥೆಯಿಂದ ಸತತವಾಗಿ ಗಾಳಿಯ ವೇಗ ಹಾಗೂ ದಿಕ್ಕಿನ ಮಾಹಿತಿ ಸಂಗ್ರಹಿಸಿ ಅಧಾರದ ಮೇಲೆ ಮುನ್ಸೂಚನೆ ನೀಡುವಂತಹ ವ್ಯವಸ್ಥೆ ಮಾಡಲಾಗಿದೆ.
ರಾಜ್ಯಮಟ್ಟದ ತಂಡ
ಮುಂಜಾಗ್ರತಾ ಕ್ರಮವಾಗಿ ರಾಜ್ಯಮಟ್ಟದಲ್ಲಿ ಕೃಷಿ ಮತ್ತು ತೋಟಗಾರಿಕಾ ನಿರ್ದೇಶಕರು ಹಾಗೂ ಉನ್ನತಮಟ್ಟದ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ. ಈ ತಂಡ ಬೀದರ್, ಕೊಪ್ಪಳ, ಕಲಬುರಗಿ,ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿ ಮಿಡತೆ ನಿಯಂತ್ರಣ ಮುನ್ನೆಚ್ಚರಿಕೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಬೀದರ್ನಲ್ಲಿ ಸಭೆ
ಶಿವನ ಕುದುರೆ ಜಾತಿಗೆ ಸೇರಿದ ಡೆಸರ್ಟ್ ಲೋಕಸ್ಟ್ ಮಿಡತೆಯು ಈಗ ಮಹಾರಾಷ್ಟ್ರದ ನಾಗಪುರದಲ್ಲಿ ಇರುವ ಮಾಹಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ್ ಅವರ ಅಧ್ಯಕ್ಷ ತೆಯಲ್ಲಿ ಬೀದರ್ನಲ್ಲಿ ಎರಡು ಸುತ್ತಿನ ತುರ್ತು ಸಭೆಗಳು ನಡೆದವು. ಯಾದಗಿರಿ ಜಿಲ್ಲೆಯಲ್ಲೂ ಕೃಷಿ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡ ರಚನೆ ಮಾಡಲಾಗಿದೆ.