ಸಾವರ್ಕರ್ ಫ್ಲೈಓವರ್ ಫೈಟ್

– ಸ್ವಾತಂತ್ರ್ಯವೀರನ ನಾಮಕರಣಕ್ಕೆ ಕಾಂಗ್ರೆಸ್, ಜೆಡಿಎಸ್ ವಿರೋಧ – ಕ್ಯಾಂಟೀನ್‌ಗೆ ಇಂದಿರಾ ಗಾಂಧಿ ಹೆಸರಿಟ್ಟಿರಲಿಲ್ಲವೇ ಎಂದ ಬಿಜೆಪಿ.

ವಿಕ ಸುದ್ದಿಲೋಕ ಬೆಂಗಳೂರು : ಬೆಂಗಳೂರಿನ ಯಶವಂತಪುರ ಮಾರ್ಗವಾಗಿ ಯಲಹಂಕ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಫ್ಲೈಓವರ್‌ಗೆ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಹೆಸರಿಡುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ತೀವ್ರ ಜಟಾಪಟಿ ನಡೆದಿದೆ. ಈ ವಾದ-ವಿವಾದದ ನಡುವೆಯೇ, ಮೇಲ್ಸೇತುವೆ ಉದ್ಘಾಟನೆ ಸಮಾರಂಭವನ್ನು ರಾಜ್ಯ ಸರಕಾರ ಮುಂದೂಡಿದೆ.ಫ್ಲೈಓವರ್‌ಗೆ ವೀರ ಸಾವರ್ಕರ್ ಹೆಸರಿಡಲು ಫೆಬ್ರವರಿಯಲ್ಲಿ ಬಿಬಿಎಂಪಿ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಇದನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಬೇಕಿತ್ತು. ಈ ಸಂಬಂಧ ಗುರುವಾರ ಬೆಳಗ್ಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಸರಕಾರದ ಈ ನಿಲುವು ವಿವಾದದ ಕಿಡಿ ಹೊತ್ತಿಸಿತು. ಸಾವರ್ಕರ್ ಹೆಸರು ಇಡುವುದಕ್ಕೆ ಪ್ರತಿಪಕ್ಷ ದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತಿತರರು ವಿರೋಧ ವ್ಯಕ್ತಪಡಿಸಿದರು. ಮತ್ತೊಂದೆಡೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ಡಿಸಿಎಂ ಲಕ್ಷ್ಮಣ್‌ ಸವದಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡು ಪ್ರತಿಪಕ್ಷ  ಮುಖಂಡರಿಗೆ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಪರ-ವಿರೋಧ ಚರ್ಚೆ ನಡೆದಿದೆ.ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಫ್ಲೈಓವರ್ ಉದ್ಘಾಟಿಸಲು ತೀರ್ಮಾನಿಸಿದ ಸರಕಾರ, ಈ ಸಂಬಂಧದ ಆಹ್ವಾನ ಪತ್ರಿಕೆಯಲ್ಲಿ ಸಾವರ್ಕರ್ ಹೆಸರನ್ನು ಕೈಬಿಟ್ಟಿತ್ತು. ಆದರೆ, ಫ್ಲೈಓವರ್‌ಗೆ ಸಾವರ್ಕರ್ ಹೆಸರಿಡುವ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಅಂತಿಮವಾಗಿ ಕಾರ್ಯಕ್ರಮ ಮುಂದೂಡಲಾಗಿದೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ತೆರೆ ಹಿಂದಿನ ಸೂತ್ರಧಾರರೇ ಹೊರತು, ಚುನಾಯಿತ ಸರಕಾರ ಅಲ್ಲ. ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣದ ಆತುರದ ನಿರ್ಧಾರವೇ ಇದಕ್ಕೆ ಪುರಾವೆ. -ಸಿದ್ದರಾಮಯ್ಯ, ಪ್ರತಿಪಕ್ಷ  ನಾಯಕ
ಸಾವರ್ಕರ್ ನಾಮಕರಣ ನಿರ್ಧಾರ ನಾಡಿನ ಅಭ್ಯುದಯ ಮತ್ತು ಹಿತಕ್ಕೆ ಹೋರಾಡಿದ ಸಾಧಕರಿಗೆ ಮಾಡಿದ ಅಪಮಾನ. ಇದು ಸರಕಾರಕ್ಕೆ ಶೋಭೆ ಅಲ್ಲ. ಯಲಹಂಕ ಮೇಲ್ಸೇತುವೆಗೆ ನಾಡಿನ ಸಾಧಕರೊಬ್ಬರ ಹೆಸರಿಡಿ. -ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಸಾವರ್ಕರ್ ಹೆಸರಿಗೆ ವಿರೋಧ ಮಾಡುವುದು ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ. ದೇಶದ ವಿವಿಧೆಡೆ ವೃತ್ತ, ಕಟ್ಟಡ, ಸಂಸ್ಥೆಗಳಿಗೆ ನೆಹರು, ನಕಲಿ ಗಾಂಧಿಗಳ ನಾಮಕರಣವೇ ಸ್ವಾತಂತ್ರ್ಯ ಹೋರಾಟಗಾರರಿಗೆ ‘ನಾಮದಾರ್ ಪಾರ್ಟಿ’ ಸಲ್ಲಿಸಿದ ಕೊಡುಗೆ! – ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ.
ಯಾವಾಗಲೂ ಒಂದೇ ಕುಟುಂಬದ ಹೆಸರನಿಟ್ಟು ಅಭ್ಯಾಸವಾದವರಿಗೆ ಸಾವರ್ಕರ್ ಹೆಸರು ಕೇಳಿ ಆಶ್ಚರ್ಯವಾಗುವುದು ಸಹಜ. ಒಂದು ವೇಳೆ ಈಗ ಕಾಂಗ್ರೆಸ್ ಸರಕಾರ ಇದ್ದರೆ ಖಂಡಿತ ಆ ಮೇಲ್ಸೇತುವೆಗೆ ಇಂದಿರಾ ಗಾಂಧಿಯದ್ದೋ ರಾಜೀವ್ ಗಾಂಧಿಯದ್ದೊ ಹೆಸರು ಇಡಲಾಗುತ್ತಿತ್ತು! – ನಳಿನ್ ಕುಮಾರ್, ಬಿಜೆಪಿ, ರಾಜ್ಯಾಧ್ಯಕ್ಷ. 
ನಾಗರಿಕರ ಮಿಶ್ರ ಪ್ರತಿಕ್ರಿಯೆ ‘ಯಲಹಂಕ ಫ್ಲೈಓವರ್‌ಗೆ ಸಾವರ್ಕರ್ ಹೆಸರು’ ಶೀರ್ಷಿಕೆಯಲ್ಲಿ ಸುದ್ದಿ ವಿಜಯ ಕರ್ನಾಟಕದಲ್ಲಿ ಬುಧವಾರ ಪ್ರಕಟವಾಗಿತ್ತು. ಇದನ್ನು ಆಧರಿಸಿ ಸೋಷಿಯಲ್ ಮೀಡಿಯಾದಲ್ಲೂ ಪರ-ವಿರೋಧ ಚರ್ಚೆ ನಡೆಯಿತು. ಕನ್ನಡಿಗರ ರಸ್ತೆಗೆ ಸಾವರ್ಕರ್ ಹೆಸರು ಬೇಡವೆಂದು ಕೆಲವರು ಒತ್ತಾಯಿಸಿದರೆ, ಇನ್ನು ಕೆಲವರು ಸಾವರ್ಕರ್ ಹೆಸರಿಡಲೇ ಬೇಕು ಎಂದು ಆಗ್ರಹಿಸಿದರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top