– ಸೋಂಕು, ಸಾವಿಗೆ ಅಂಕುಶ | ಕೇಂದ್ರದಿಂದ ಶ್ಲಾಘನೆ
ಹೊಸದಿಲ್ಲಿ: ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡ ದೇಶದ ನಾಲ್ಕು ಉತ್ತಮ ನಗರಗಳನ್ನು ಕೇಂದ್ರ ಸರಕಾರ ಆಯ್ಕೆ ಮಾಡಿದ್ದು, ಅದರಲ್ಲಿ ಬೆಂಗಳೂರು ಸಹ ಸೇರಿದೆ.
ತಮಿಳುನಾಡಿನ ಚೆನ್ನೈ, ರಾಜಸ್ಥಾನದ ಜೈಪುರ ಮತ್ತು ಮಧ್ಯಪ್ರದೇಶದ ಇಂದೋರ್ ಇತರ ಮೂರು ನಗರಗಳು. ಈ ನಗರಗಳಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಅದರಲ್ಲಿಯೂ ಬೆಂಗಳೂರು ಮತ್ತು ಚೆನ್ನೈ ವೆಂಟಿಲೇಟರ್ಗಳನ್ನು ಗರಿಷ್ಠ ಸಂಖ್ಯೆಯಲ್ಲಿ ಬಳಸಿಕೊಂಡು ಸಾವಿನ ಪ್ರಮಾಣ ತಗ್ಗಿಸಿವೆ. ಜತೆಗೆ ಸೋಂಕಿತರ ಪತ್ತೆ, ನಿಗಾ ಹಾಗೂ ಸೋಂಕು ಪ್ರಸರಣ ನಿಯಂತ್ರಣದಲ್ಲಿಯೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿವೆ ಎಂದು ಕೇಂದ್ರ ಸರಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ‘‘ನಮ್ಮ ಕೊರೊನಾ ಯೋಧರ ಪರಿಶ್ರಮಕ್ಕೆ ಹೆಮ್ಮೆಯ ಅನುಮೋದನೆ ದೊರಕಿದೆ. ಉತ್ತಮ ಚಿಕಿತ್ಸೆ ಹಾಗೂ ಮರಣ ಪ್ರಮಾಣ ತಗ್ಗಿಸುವಲ್ಲಿ ನಮ್ಮ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ನಮ್ಮ ಇಡೀ ತಂಡಕ್ಕೆ ಅಭಿನಂದನೆಗಳು. ಈ ಉತ್ತಮ ಸೇವೆಯನ್ನು ಮುಂದುವರಿಸೋಣ,’’ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿಹೊಸ ದಾಖಲೆ
ದೇಶದಲ್ಲಿ ಕೊರೊನಾ ಸೋಂಕು ಸೋಮವಾರ ಹೊಸ ದಾಖಲೆಗೆ ಸಾಕ್ಷಿಯಾಗಿದ್ದು, 24 ಗಂಟೆಯಲ್ಲಿ 6977 ಮಂದಿಗೆ ದೃಢಪಟ್ಟಿದೆ. ಇದು ಇದುವರೆಗಿನ ಏಕದಿನ ಗರಿಷ್ಠ ದಾಖಲೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷ 44 ಸಾವಿರದ ಗಡಿ ದಾಟಿದ್ದು, ಇನ್ನೊಂದು ದಿನದಲ್ಲಿ1.5 ಲಕ್ಷ ತಲುಪುವ ಸಾಧ್ಯತೆಯಿದೆ.
ರಾಜ್ಯದಲ್ಲಿ93 ಕೇಸ್ ಪತ್ತೆ
ರಾಜ್ಯದಲ್ಲಿ ಸೋಮವಾರ ಒಟ್ಟು 93 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 3 ಮಂದಿ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದರೆ 73 ಜನರು ಅಂತಾರಾಜ್ಯ ಟ್ರಾವೆಲ್ ಹಿಸ್ಟರಿ ಇರುವವರು. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2182ಕ್ಕೆ ಜಿಗಿದಿದೆ.