ಪರಾವಲಂಬಿ ಕೊರೊನಾ ವೈರಸ್ ಸೋಲಿಸಲು ಸ್ವಾವಲಂಬಿ ಭಾರತ!

-ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ.  
2019 ರ ಡಿಸೆಂಬರ್ ಕೊನೆಯಲ್ಲಿ ಚೀನಾದ ವುಹಾನ್‌ನಲ್ಲಿ ಕೊರೊನಾ ವೈರಾಣುವಿನ ಹಾವಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಮ್ಯುನಿಸ್ಟ್ ಸರಕಾರ ಸುತ್ತಮುತ್ತಲಿನ ಐದು ನಗರಗಳಲ್ಲಿರುವ 5 ಕೋಟಿ ಜನರಿಗೆ ಊರು ಬಿಟ್ಟು ಹೋಗದಂತೆ ನಿಷೇಧಾಜ್ಞೆ ಹೊರಡಿಸಿತು. ಮನೆ ಬಿಟ್ಟು ಬರದಂತೆ ಕಟ್ಟೆಚ್ಚರ ವಹಿಸಿ, ಅವರ ಮನೆಗಳನ್ನೇ ಹೊರಗಡೆಯಿಂದ ಸೀಲ್ ಮಾಡಿ ಮುಚ್ಚಲಾಯಿತು. ಮನೆಯೊಳಗೆ ಸಿಲುಕಿದವರು ಹೊಟ್ಟೆಗೆ ತಿಂದರೋ ಬಿಟ್ಟರೂ ಲೆಕ್ಕಿಸದೆ ಊರಿಗೆ ಊರನ್ನೇ ನಿರ್ಮಲಗೊಳಿಸಲು 560 ಟನ್ ಸೋಂಕು ನಿವಾರಕ ಕಳಿಸಿ, ವುಹಾನ್‌ನಲ್ಲಿ ವೈರಾಣು ಪಸರಿಸದಂತೆ ತಡೆಗಟ್ಟಿದ ಹರಸಾಹಸ ನೋಡಿ ವಿಶ್ವವೇ ಬೆಚ್ಚಿಬಿತ್ತು. 140 ಕೋಟಿ ಜನಸಂಖ್ಯೆಯ ಚೀನಾದಲ್ಲಿ ಈ ಭಯಂಕರ ವೈರಾಣುವಿನ ವಿನಾಶಕಾರಿ ಪರಿಣಾಮ ಅರಿತು ತೆಗೆದುಕೊಂಡ ದಿಟ್ಟ ಹೆಜ್ಜೆ ನೋಡಿ, 9 ದಿನದಲ್ಲಿ ಕಟ್ಟಿದ 1500 ಹಾಸಿಗೆ ಆಸ್ಪತ್ರೆ ನೋಡಿ, ನಾವೆಲ್ಲ ಬೆಕ್ಕಸ ಬೆರಗಾಗಿ ಅಯ್ಯೋ ಭಗವಂತ ಇಂಥ ಅನಾಹುತ ನಮ್ಮ ದೇಶದಲ್ಲಾದರೆ ಏನು ಗತಿ ಎಂದು ಭಯಭೀತರಾಗಿದ್ದೆವು.
ಆದರೆ ತಮ್ಮ ವೈದ್ಯಕೀಯ ವ್ಯವಸ್ಥೆಗಳ ಬಗ್ಗೆ ಹೆಮ್ಮೆ ಪಡುತ್ತಿದ್ದ ವಿದೇಶೀಯರು ಪರಾವಲಂಬಿ ವೈರಾಣು ನಮಗೇನು ಮಾಡುತ್ತದೆ ಎಂಬ ಅಸಡ್ಡೆಯಿಂದ ಇದ್ದರು. ಇಟಲಿಯ ಮಿನಾನ್‌ನಲ್ಲಿ ಒಬ್ಬ ಚೀನಾದವನು ‘ನಾನು ವೈರಾಣು ಅಲ್ಲ, ಕೇವಲ ಒಬ್ಬ ಮನುಷ್ಯ’ ಎಂಬ ಫಲಕ ಇಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ನಿಂತಾಗ ಅಮಾಯಕರು ಅನಾಹುತದ ಅರಿವು ಇಲ್ಲದೆ ಅಪ್ಪಿಕೋ ಆಂದೋಲನ ಪ್ರಾರಂಭಿಸಿ, ತಮ್ಮ ಮಾನವೀಯತೆ ತೋರಿಸಿದರು. ಇದೇ ಇಟಲಿಯಲ್ಲಿ ಇಲಿಗಳಂತೆ ಜನ ಸಾಯಲು ಪ್ರಾರಂಭಿಸಿದಾಗ, ಕೃತಕ ಉಸಿರಾಟದಲ್ಲಿ ನರಕಯಾತನೆ ಪಡುತ್ತಿದ್ದವರನ್ನು ಕಂಡು ಸತ್ತವರನ್ನು ಹೂಳಲೂ ಆಗದೇ ಆತಂಕದಲ್ಲಿದ್ದದ್ದನ್ನು ಕಂಡು ನಾವೆಲ್ಲ ಹೌಹಾರಿದೆವು. 210,717 ಸೋಂಕಿತರು, 28,884 ಸಾವನ್ನು ಕಂಡು ಇಟಲಿಯ ಜನರು ನಿರ್ಬಂಧವಿಲ್ಲದಿದ್ದರೂ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ಮಾ.8ರಂದು ಮಹಿಳಾ ದಿನವನ್ನು ಅದ್ಧೂರಿಯಿಂದ ಲಕ್ಷಾಂತರ ಜನರು ಸೇರಿ ಆಚರಿಸಿದ ಸ್ಪೇನಿನಲ್ಲಿ ಕೊರೊನಾ ವೈರಸ್ ಕಾಡ್ಗಿಚ್ಚಿನಂತೆ ಹಬ್ಬಿದರೆ ಭಾರತ ಪರೋಪಕಾರಿಯಾಗಿ ತನ್ನ ಮತ್ತು ಮಿತ್ರ ದೇಶದ ಜನರನ್ನು ಸಾವಿನ ಕೂಪದಿಂದ ಉಳಿಸುವ ಮಹತ್ಕಾರ್ಯ ಮಾಡಿತು. ಚೀನಾದಲ್ಲಿ ಹೊಸ ವರ್ಷ ಆಚರಿಸಿ 4.5 ಲಕ್ಷ ಜನ ಚೀನಾದಿಂದ ಅಮೆರಿಕ ತಲುಪಿದರು! ಜತೆಗೆ ವೈರಾಣು ಕೂಡಾ ತೆಗೆದುಕೊಂಡು ಹೋದರು. ನ್ಯೂಯಾರ್ಕ್‌ನಲ್ಲಿ ಸಹಸ್ರಾರು ಜನ ಸೇರಿ ಕುಡಿದು, ಕುಣಿದು ಚೀನಾದ ಹೊಸ ವರ್ಷ ಆಚರಿಸಿದರು. ಪರಿಣಾಮ ಇಂದು ವಿಶ್ವದಲ್ಲೇ ಅತಿ ಹೆಚ್ಚು ಜನ ಸತ್ತಿರುವುದು ಅಮೆರಿಕದಲ್ಲಿ. ಅದೂ ಆರ್ಥಿಕ ರಾಜಧಾನಿ ನ್ಯೂಯಾರ್ಕ್‌ನಲ್ಲಿ. 65,000ಕ್ಕೂ ಹೆಚ್ಚು ಜನ ಸತ್ತರೂ ವಿಶ್ವದ ದೊಡ್ಡಣ್ಣ ಲಾಕ್‌ಡೌನ್‌ ಘೋಷಿಸಲಿಲ್ಲ. ಆದರೆ ಭಾರತವು ಅಮೆರಿಕ ಸೇರಿದಂತೆ 55 ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಸರಬರಾಜು ಮಾಡಿ ರೋಗಿಗಳ ಜೀವ ಉಳಿಸಲು ಸಂಜೀವಿನಿ ಆಯ್ತು!
‘ದಯವೇ ಧರ್ಮದ ಮೂಲ’ವೆಂದು ನಂಬಿದ ಭಾರತ ಅರ್ಥಕ್ಕಿಂತ ಹೆಚ್ಚು ಧರ್ಮಕ್ಕೆ ಮಹತ್ವ ಕೊಟ್ಟು ಸಕಾಲಕ್ಕೆ ಜನತಾ ಕಫ್ರ್ಯೂ ಅಂತ ಮನೆಯಲ್ಲಿರುವುದನ್ನು ಪ್ರೇರೇಪಿಸಿತು. ನಮ್ಮ ನೆಚ್ಚಿನ ಪ್ರಧಾನಿ ‘ಜಾನ್ ಹೈ ತೋ ಜಹಾನ್ ಹೈ’ ಅಂದರೆ, ‘ಜೀವ ಉಳಿದರೆ ಜಗತ್ತು’ ಎಂದು ಸಾರಿ ದೇಶಕ್ಕೆ 7-8 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ನಷ್ಟವಾದರೂ ಪರವಾಗಿಲ್ಲ ಸಾವು ಸಂಭವಿಸಬಾರದು ಎಂಬ ಸದ್ಭಾವನೆಯಿಂದ ಲಾಕ್‌ಡೌನ್‌ ಘೋಷಿಸಿದ್ದಲ್ಲದೇ ‘ಜಾನ್ ಭೀ ಜಹಾನ್ ಭೀ’ ಅಂದಿದ್ದಾರೆ! ಅಂದರೆ ಜೀವವೂ ಮುಖ್ಯ, ಜೀವನದೊಂದಿಗೆ ಜಗತ್ತನ್ನೂ ಪಡೆಯುವ ಮಹಾದಾಸೆಯಿಂದ ಮುಂದುವರೆಯುತ್ತಿರುವುದು ಮಾದರಿಯಾಗಿದೆ.
ಸಮರೋಪಾದಿ ಹೋರಾಡುತ್ತಿರುವ ಭಾರತವು ಕೊರೊನಾ ಎದುರಿಸಲು ಮಾಡಿದ್ದೇನು? ವಿದೇಶದವರು ಚೀನಾದಿಂದ ಕಳಪೆ ಮಾಸ್ಕ್ ಕೊಂಡುಕೊಂಡು ಜೀವ ಕಳೆದುಕೊಂಡರೆ ಭಾರತ ದಾಖಲೆ ಸಂಖ್ಯೆಯ ಮಾಸ್ಕ್‌ಗಳನ್ನು ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲಿ ತಯಾರಿಸಿತು. ‘ರಕ್ಷ ಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’(ಡಿಆರ್‌ಡಿಒ)ಯವರು ನೆಲಬಾಂಬ್ ಸ್ಫೋಟದಲ್ಲಿ ಸೈನಿಕರು ಕಣ್ಣು ಕಳೆದುಕೊಳ್ಳಬಾರದೆಂದು ಮುಖ ಕವಚ ತಯಾರಿಸುತ್ತಿದ್ದವರು ಉತ್ತಮ ಗುಣಮಟ್ಟದ ಎನ್ 95, ಎನ್99 ಮಾಸ್ಕ್ ತಯಾರಿಸಿ ವೈದ್ಯ ಸಿಬ್ಬಂದಿಗೆ ನೀಡಿದರು. ಪಾಕಿಸ್ತಾನದ ವೈದ್ಯರು ಸರಿಯಾದ ಪಿಪಿಇ ಕಿಟ್ ಇಲ್ಲದೆ ರೋಗಿಯನ್ನು ನೋಡುವುದಿಲ್ಲ ಎಂದು ಪ್ರತಿಭಟಿಸಿದಾಗ ಅಲ್ಲಿಯ ಪೊಲೀಸರು ಅವರನ್ನು ಬಂಧಿಸಿದರು. ಆದರೆ ಭಾರತದಲ್ಲಿ ಪ್ರತಿಯೊಬ್ಬ ವೈದ್ಯಕೀಯ ಸಿಬ್ಬಂದಿಯನ್ನೂ ಕೋವಿಡ್ ವಾರಿಯರ್ಸ್ ಎಂದು ಕರೆದು ಅವರ ಮೇಲೆ ಹೂವಿನ ಸುರಿಮಳೆಗೆರೆದು ಅವರಲ್ಲಿ ಸ್ಫೂರ್ತಿ ತುಂಬಿಸಲು ಮೋದಿ ಮುಂದಾದರು.
ಡಿಆರ್‌ಡಿಒ ಇಂದು ಕೋವಿಡ್ ವಾರಿಯರ್ಸ್ ರಕ್ಷಣೆಗೆ ಮತ್ತು ಸೋಂಕಿತ ರೋಗಿಗಳ ಸಂರಕ್ಷಣೆಗೆ ಎನ್ 99 ಮಾಸ್ಕ್ (ಮಲ್ಟಿಲೇಯರ್ಡ್ ಅಡ್ವಾನ್ಸ್ಡ್ ಮಾಸ್ಕ್) ಮತ್ತು ಇಡೀ ಶರೀರ ರಕ್ಷಿಸುವ ವಸ್ತ್ರ (ಪಿಪಿಇ) ಮತ್ತು ಕೃತಕ ಉಸಿರಾಟಕ್ಕಾಗಿ ವೆಂಟಿಲೇಟರ್ ಅನ್ನು ತಯಾರಿಸಿ ಭಾರತದ ಸ್ವಾಭಿಮಾನ ಹೆಚ್ಚಿಸಿದೆ. ದೇಶ, ವಿದೇಶಗಳಲ್ಲಿ ಸ್ಯಾನಿಟೈಜರ್ ಕೊರತೆಯಿಂದ ಜನ ಪರದಾಡಿದರೆ, ನಮ್ಮ ಡಿಆರ್‌ಡಿಒ ಸೈನಿಕರಿಗೆಲ್ಲ ಸ್ಯಾನಿಟೈಜರ್ ಸರಬರಾಜು ಮಾಡಿದ್ದಲ್ಲದೆ, 1,500 ಕಿಟ್ ರಕ್ಷಣಾ ಸಚಿವಾಲಯಕ್ಕೂ 300 ಕಿಟ್ ಸಂಸತ್ತಿಗೂ, ದಿಲ್ಲಿ ಪೊಲೀಸರಿಗೂ ಸರಬರಾಜು ಮಾಡಿದೆ. ಒಂದು ವೆಂಟಿಲೇಟರ್ ಹಲವು ರೋಗಿಗಳಿಗೆ ಅಳವಡಿಸುವಂತೆ ಅವಿಷ್ಕಾರ ಮಾಡಿ ವಿದೇಶಿಯರಿಗೂ ನೆರವಾಗಿದೆ. ನಮ್ಮದು ಸ್ವಾವಲಂಬಿ ಭಾರತ!
ಚೀನಾದ ಪಿಪಿಇ ಕಿಟ್ ಹರಿದು ಅವುಗಳನ್ನು ಹಲವು ದೇಶದವರು ತಿರಸ್ಕರಿಸಿ ಹಿಂದಿರುಗಿಸಿದರೆ ಡಿಆರ್‌ಡಿಒ ಸೂಟ್‌ಗಳನ್ನು ಒಗೆದು ಸ್ಟೆರಲೈಸ್ ಮಾಡಿ ಮರುಬಳಕೆ ಮಾಡುವಂಥ ಉತ್ಕೃಷ್ಟ ಕ್ಷಮತೆ ಹೊಂದಿದೆ. ಈ ಹಿಂದೆ ಚೀನಾದೊಂದಿಗೆ ಯುದ್ಧ ಮಾಡಿದಾಗ ನಮ್ಮ ಸೈನಿಕರಿಗೆ ಸರಿಯಾದ ಅಸ್ತ್ರ, ಶಸ್ತ್ರ, ವಸ್ತ್ರವಿಲ್ಲದೇ ಸೋತಿದ್ದರು. ಆದರೆ ಇಂದು ಚೀನಾದ ವೈರಸ್ ವಿರುದ್ಧದ ಯುದ್ಧದಲ್ಲಿ ಭಾರತ ಸಂಪೂರ್ಣ ಸನ್ನದ್ಧವಾಗಿ ಒಂದಾಗಿ ಹೋರಾಡುತ್ತಿದೆ.
ಹಲವು ದೇಶಗಳಲ್ಲಿ ಔಷಧದ ಕೊರತೆ ಉಂಟಾಗಿದೆ. ಆದರೆ ನಮ್ಮ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ಪ್ರಖ್ಯಾತ ವೈದ್ಯರು ಫೆ. 28ರಂದೇ ಮಾರ್ಗಸೂಚಿ ಕೊಟ್ಟಿದ್ದರು. ಅದರ ಪ್ರಕಾರ ಅಲೋಪತಿ ಔಷಧಗಳಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಜಿಂಕ್(ಸತು) ವೈರಾಣು ಜೀವಕಣಗಳನ್ನು ಪ್ರವೇಶಿಸುವುದನ್ನು ತಡೆದರೆ, ಮೂರು ಆ್ಯಂಟಿವೈರಲ್ ಡ್ರಗ್ ವೈರಾಣು ನಾಶ ಮಾಡುವ ಕ್ಷಮತೆ ಹೊಂದಿವೆ. ಇದಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಸೂಚನೆಯಂತೆ ಆಯುರ್ವೇದ ಮತ್ತು ಹೋಮಿಯೋಪತಿ ಔಷಧ ಬಳಸಲಾಗುತ್ತಿದೆ.
ಕೊರೊನಾ ಸೋಂಕಿನ ಚಿಕಿತ್ಸೆಗೆ ಭಾರತ 40 ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು 100 ದೇಶಗಳಿಗೆ 5,600 ಮೆಟ್ರಿಕ್ ಟನ್ ಪ್ಯಾರಾಸಿಟಮಲ್ ಸರಬರಾಜು ಮಾಡುತ್ತಿದೆ. ಇದರಲ್ಲಿ ಮುಂದುವರಿದ ಅಮೆರಿಕ, ಇಟಲಿ, ಇಂಗ್ಲೆಂಡ್, ಸ್ಪೇನ್, ಕೆನಡಾ ದೇಶಗಳೂ ಸೇರಿವೆ. ಚೀನಾದ ವೈರಾಣು ವಿಶ್ವಕ್ಕೆ ವಿನಾಶಕಾರಿಯಾದರೆ ಭಾರತದ ಔಷಧಗಳು ಸಂಜೀವಿನಿಯಾಗಿವೆ. ಇಡೀ ವಿಶ್ವವೇ ಥ್ಯಾಂಕ್ಯೂ ಇಂಡಿಯಾ ಎನ್ನುತ್ತಿದೆ. ಇಷ್ಟೆಲ್ಲ ಶ್ರಮಪಟ್ಟರೂ ನಾವೀಗ ಸಮುದಾಯ ಹರಡುವಿಕೆಯ ಅಪಾಯದಲ್ಲಿದ್ದೇವೆ. ಸರಕಾರದ ಇಚ್ಛಾಶಕ್ತಿಯೊಂದಿಗೆ ಜನರ ಕ್ರಿಯಾಶಕ್ತಿಯಿಂದ ವೈರಾಣು ಹಬ್ಬದಂತೆ ನೋಡಿಕೊಳ್ಳಬೇಕಿದೆ. ಸ್ವಾವಲಂಬಿ ಬಲಿಷ್ಠ ಭಾರತ ಕಟ್ಟಲು ಉತ್ಸಾಹದಿಂದ ಶ್ರಮಿಸಬೇಕಿದೆ.
(ಲೇಖಕರು ಹಿರಿಯ ವೈದ್ಯರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top