ರೆಪೊ ದರ ಇಳಿಕೆ ಯಾರಿಗೆ ಲಾಭ? – ಗ್ರಾಹಕನಿಗೆ ಲಾಭವಿಲ್ಲದ ಬಡ್ಡಿದರ ವ್ಯರ್ಥ

ಕೊರೊನಾ ಹಾವಳಿ ಮತ್ತು ಲಾಕ್‌ಡೌನ್‌ನ ಪರಿಣಾಮ ಕಳೆದ ಎರಡು ತಿಂಗಳಿನಿಂದ ನಿಶ್ಚೇತನಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತುಂಬಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಲ್ಪಾವಧಿಯ ಸಾಲದ ಬಡ್ಡಿ ದರವನ್ನು (ರೆಪೊ) ಶೇ.4.4ರಿಂದ ಶೇ.4ಕ್ಕೆ ಕಡಿತಗೊಳಿಸಿದೆ. ಮಾರ್ಚ್‌ನಲ್ಲೂ ರೆಪೊ ದರ ಕಡಿತಗೊಳಿಸಲಾಗಿತ್ತು. 2019 ಮತ್ತು ಈ ವರ್ಷದ ಅವಧಿಯಲ್ಲಿ ಒಟ್ಟಾರೆ ಎಂಟಕ್ಕೂ ಅಧಿಕ ಬಾರಿ ರೆಪೊ ದರ ಇಳಿಸಲಾಗಿದೆ. ಇದರ ಜೊತೆಗೆ ಸಾಲ ಕಂತು ಪಾವತಿಯ ಮುಂದೂಡಿಕೆಯ ಐಚ್ಛಿಕ ಸೌಲಭ್ಯವನ್ನೂ ಆರ್‌ಬಿಐ ವಿಸ್ತರಿಸಿದೆ.
ರೆಪೊ ದರ ಇಳಿಕೆಯ ಪರಿಣಾಮ ಎಂದರೆ, ಎಲ್ಲ ಬ್ಯಾಂಕ್‌ಗಳ ಎಲ್ಲ ಬಗೆಯ ಗೃಹಸಾಲ, ವಾಹನ ಸಾಲ, ಕಾರ್ಪೊರೇಟ್ ಸಾಲಗಳ ಇಎಂಐ ಇಳಿಕೆಯಾಗಬೇಕು. ಆದರೆ ಹಾಗಾಗುತ್ತಿದೆಯೇ? ಬಡ್ಡಿ ದರ ಇಳಿಕೆಯ ಲಾಭವನ್ನು ಎಷ್ಟು ಬ್ಯಾಂಕ್‌ಗಳು ಗ್ರಾಹಕನಿಗೆ ವರ್ಗಾಯಿಸುತ್ತಿವೆ? ರೆಪೊ ದರ ಏರಿದರೆ ಬ್ಯಾಂಕ್‌ಗಳು ತಕ್ಷಣವೇ ಬಡ್ಡಿ ದರ ಏರಿಸಿ ಸಾಲದ ಇಎಂಐಯಲ್ಲಿ ಬಡ್ಡಿ ಕಡಿತ ಹೆಚ್ಚಿಸುತ್ತವೆ. ಆದರೆ ರೆಪೊ ದರ ಇಳಿಕೆಯ ಸೂಚನೆ ತಮ್ಮ ಗಮನಕ್ಕೇ ಬಂದಿಲ್ಲವೆಂಬಂತೆ ವರ್ತಿಸುವ ಬ್ಯಾಂಕ್‌ಗಳೇ ಅಧಿಕ. ಈ ಲಾಭ ಗ್ರಾಹಕನಿಗೆ ವರ್ಗಾವಣೆಯಾಗದಿದ್ದರೆ ಆರ್‌ಬಿಐ ಕ್ರಮದಿಂದ ಏನೂ ಲಾಭವಿಲ್ಲ. ಉದ್ಯಮಗಳು ಕೂಡ ಬಡ್ಡಿ ಕಡಿತ ಲಾಭದ ನಿರೀಕ್ಷೆಯಲ್ಲಿರುತ್ತವೆ.
ರೆಪೊ ದರ ಇಳಿಕೆಯ ನಿಶ್ಚಿತ ಪರಿಣಾಮ ಒಂದೇ- ಗ್ರಾಹಕರ ಠೇವಣಿಗಳ ಬಡ್ಡಿ ದರಗಳ ತಕ್ಷಣ ಇಳಿಕೆ. ಹೀಗಾಗಿ ಬ್ಯಾಂಕ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟ ಗ್ರಾಹಕರು ಖಂಡಿತವಾಗಿಯೂ ತಮ್ಮ ಹಣಕ್ಕೆ ಪಡೆಯುವ ಬಡ್ಡಿ ಹಣದಲ್ಲಿ ಖೋತಾ ಅನುಭವಿಸಬೇಕಾಗುತ್ತದೆ. ಇದರಿಂದ ಹಿರಿಯ ನಾಗರಿಕರಿಗೆ ಮತ್ತು ಪಿಂಚಣಿದಾರರಿಗೆ ಬಡ್ಡಿ ಆದಾಯ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಕಳೆದ ಮಾರ್ಚ್‌ನಿಂದ ಎರಡು ಸಲ ರೆಪೊ ದರ ಕಡಿತವಾಗಿರುವುದರಿಂದ ಹಿರಿಯ ನಾಗರಿಕರ ನಿಶ್ಚಿತ ಠೇವಣಿಗಳ ಬಡ್ಡಿ ದರ ಶೇ.1ರಷ್ಟು ಕಡಿತವಾಗಬಹುದು. ಇದು ಬಡ್ಡಿ ಹಣವನ್ನೇ ಆದಾಯವಾಗಿ ಜೀವನಕ್ಕೆ ಅವಲಂಬಿಸಿದವರಿಗೆ ಸರಕಾರ ನೀಡುವ ಆಘಾತ. ಇದರ ಜೊತೆಗೆ ಭವಿಷ್ಯದಲ್ಲಿ ಮತ್ತಷ್ಟು ಬಡ್ಡಿ ದರ ಕಡಿತ ಘೋಷಿಸಲಾಗುವುದು ಎಂದು ಆರ್‌ಬಿಐ ಗವರ್ನರ್ ಘೋಷಿಸಿರುವುದು ಹೆದರಿದವರ ಮೇಲೆ ಹಾವು ಬಿಟ್ಟಂತಾಗಿದೆ.
ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ರೆಪೊ ದರ ಇಳಿಸುವುದೊಂದೇ ಪರಿಹಾರ ಎಂದು ಸರಕಾರ ತಿಳಿದಂತಿದೆ. ಯಾಕೆಂದರೆ ಆರ್ಥಿಕತೆಗೆ ಸಂಬಂಧಿಸಿದ ಏನೇ ಮಹತ್ವದ ಬೆಳವಣಿಗೆಗಳಾದರೂ ಮೊದಲು ರೆಪೊ ದರ ಬದಲಾವಣೆಗೆ ಕೈ ಹಾಕಲಾಗುತ್ತಿದೆ. ಇದು ಮಾರುಕಟ್ಟೆಯಲ್ಲಿ ಒಂದು ಬಗೆಯ ಅಸ್ಥಿರ ಸ್ಥಿತಿಯನ್ನು ನಿರ್ಮಿಸುತ್ತದೆ. ಉದ್ಯಮಗಳೂ ಸೇರಿದಂತೆ ಗ್ರಾಹಕರು ಕೂಡ ಬ್ಯಾಂಕ್‌ಗಳು ತಮ್ಮ ಹಣಕ್ಕೆ ನ್ಯಾಯ ನೀಡಬಲ್ಲವು ಎಂಬ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಈ ಬಡ್ಡಿ ದರ ಇಳಿಕೆಯ ಇತರ ಸಾಮಾಜಿಕ ಅಪಾಯಗಳನ್ನೂ ಪರಿಗಣಿಸಬೇಕು. ಬಡ್ಡಿ ಆದಾಯವನ್ನು ನೆಚ್ಚಿದವರ ಬದುಕಿನಲ್ಲಿ ಉಂಟಾಗುವ ಜೀವನಶೈಲಿಯ ವ್ಯತ್ಯಾಸ, ವೈದ್ಯಕೀಯ ವೆಚ್ಚಗಳಿಗೆ ಕೊರತೆ ಅವರಲ್ಲಿ ಖಿನ್ನತೆಯನ್ನು ಉಂಟುಮಾಡಬಹುದು. ಬ್ಯಾಂಕ್‌ಗಳಲ್ಲಿ ತಮ್ಮ ಹಣ ಲಾಭ ತರದೆಂದು ಗೊತ್ತಾದಾಗ ಹೆಚ್ಚಿನವರು ಖಾಸಗಿ ಫೈನಾನ್ಸ್‌ಗಳ ಅಥವಾ ಹೆಚ್ಚಿನ ಬಡ್ಡಿ ಹಣದ ಆಸೆ ತೋರಿಸುವ ಖೊಟ್ಟಿ ಸಂಸ್ಥೆಗಳ ಮೊರೆ ಹೋಗುತ್ತಾರೆ. ಇದರಿಂದ ಅಂಥವರು ಬಡ್ಡಿಯ ಜೊತೆಗೆ ಅಸಲನ್ನೂ ಕಳೆದುಕೊಳ್ಳಬೇಕಾದೀತು. ನ್ಯಾಯವಾದ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರಬೇಕಾದ ಹಣ ಹೀಗೆ ಕಾಳಸಂತೆಯನ್ನು ಸೇರಿ ಆರ್ಥಿಕತೆಯನ್ನು ಇನ್ನಷ್ಟು ಹಳ್ಳ ಹಿಡಿಸುತ್ತದೆ. ಇವೆಲ್ಲಈ ರೆಪೊ ಇಳಿಕೆಯ ಅಪಾಯಕಾರಿ ಉಪ ಉತ್ಪನ್ನಗಳು. ಸರಕಾರ ಬೇಗನೆ ಎಚ್ಚೆತ್ತುಕೊಂಡು ಈ ಸುಲಭದ ಹಾದಿಯನ್ನು ಬಿಟ್ಟು, ತಜ್ಞರ ಮಾತನ್ನು ಕೇಳಿಸಿಕೊಳ್ಳಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top