– ಸಾಲಗಳ ಇಎಂಐ ಆಗಸ್ಟ್ ತನಕ ಮುಂದೂಡಿಕೆ
– ರಿಸರ್ವ್ ಬ್ಯಾಂಕ್ ರೆಪೊ ದರ 4.4%ನಿಂದ 4%ಗೆ ಕಡಿತ
– ಗೃಹ, ವಾಹನ, ಕಾರ್ಪೊರೇಟ್ ಸಾಲ ಇಳಿಕೆ ಸಂಭವ
– ಸಾಲಗಾರರಿಗೆ ಇಳಿದ ಹೊರೆ, ಠೇವಣಿ ದಾರರಿಗೆ ನಷ್ಟ
ಮುಂಬಯಿ: ಕೋವಿಡ್-19 ಬಿಕ್ಕಟ್ಟು ಮತ್ತು ಲಾಕ್‌ಡೌನ್ ಪರಿಣಾಮ ಸ್ಥಗಿತವಾಗಿರುವ ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತುಂಬಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಅನಿರೀಕ್ಷಿತವಾಗಿ ತನ್ನ ಅಲ್ಪಾವಧಿಯ ಸಾಲದ ಬಡ್ಡಿ ದರವನ್ನು (ರೆಪೊ) ಶೇ.4.4ರಿಂದ ಶೇ.4ಕ್ಕೆ ಕಡಿತಗೊಳಿಸಿದೆ. ಕಳೆದ ಮಾರ್ಚ್ 27ರಂದೂ ರೆಪೊ ದರ ಕಡಿತಗೊಳಿಸಲಾಗಿತ್ತು.
ಇದರ ಪರಿಣಾಮ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್ ಸಾಲಗಳ ಇಎಂಐ ಇಳಿಕೆಯಾಗಲಿದೆ. ಆದರೆ, ನಿಶ್ಚಿತ ಠೇವಣಿಗಳ ಬಡ್ಡಿ ದರಗಳೂ ಇಳಿಕೆಯಾಗಲಿವೆ. ಹಾಗಾಗಿ ಮುಖ್ಯವಾಗಿ ಹಿರಿಯ ನಾಗರಿಕರಿಗೆ ಮತ್ತು ಪಿಂಚಣಿದಾರರಿಗೆ ಬಡ್ಡಿ ಆದಾಯ ಕಡಿಮೆಯಾಗಲಿರುವುದು ಕಳವಳಕ್ಕೆ ಕಾರಣವಾಗಿದೆ.
ಕಳೆದ ಮಾರ್ಚ್ ನಂತರ ಎರಡನೇ ಬಾರಿಗೆ ರೆಪೊ ದರವನ್ನು ಇಳಿಸಲಾಗಿದೆ. ಶೇ.4ರ ರೆಪೊ ದರವು 2000ರಿಂದೀಚೆಗೆ ಅತ್ಯಂತ ಕಡಿಮೆ ಮಟ್ಟದ ಬಡ್ಡಿ ದರವಾಗಿದೆ. ರಿವರ್ಸ್ ರೆಪೊ ದರವನ್ನೂ ಶೇ.3.75ರಿಂದ ಶೇ.3.35ಕ್ಕೆ ಕಡಿತಗೊಳಿಸಲಾಗಿದೆ. ಅಗತ್ಯವಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಬಡ್ಡಿ ದರ ಕಡಿತ ಘೋಷಿಸಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಇಎಂಐ ವಿನಾಯಿತಿ
ಆರ್‌ಬಿಐ ಎಲ್ಲ ಅವಧಿ ಸಾಲಗಳ ಇಎಂಐ ಮರು ಪಾವತಿಯ ಅವಧಿಯನ್ನು ಜೂನ್ 1ರಿಂದ ಆಗಸ್ಟ್ 31ಕ್ಕೆ ಮುಂದೂಡಿದೆ. ಕೊರೊನಾ ಸಂಕಟದ ಕಾರಣ ಸಾಲದ ಇಎಂಐ ಕಟ್ಟಲು ಕಷ್ಟ ಎಂಬ ಕಾರಣದಿಂದ ಈಗಾಗಲೇ ಏಪ್ರಿಲ್‌ನಿಂದ ಮೇ ತನಕ ಮುಂದೂಡಲಾಗಿತ್ತು. ಆದರೆ, ಹಣ ಕೈಯಲ್ಲಿದ್ದರೆ ಇಎಂಐ ಕಟ್ಟುವುದು ಸೂಕ್ತ. ಏಕೆಂದರೆ ಈ ಅವಧಿಯ ಬಡ್ಡಿ ಮುಂದೆ ಹೊರೆಯಾಗುತ್ತದೆ.
ಹಿರಿಯರೇನು ಮಾಡಬೇಕು?
ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿ ಕಡಿಮೆ ಆಗದಂತೆ ಕೆಲವು ಬ್ಯಾಂಕ್‌ಗಳು ಪ್ರತ್ಯೇಕ ಯೋಜನೆ ಹೊಂದಿವೆ. ಹಿರಿಯ ನಾಗರಿಕರು ಎಲ್ಐಸಿಒ ನಿರ್ವಹಿಸುವ ‘ಪ್ರಧಾನಮಂತ್ರಿ ವಯವಂದನ’ ಯೋಜನೆಯಲ್ಲಿ ಹೂಡಿಕೆ ಮಾಡುವುದು ಸೂಕ್ತ. ಇದರಲ್ಲಿ ಶೇ.7.4ರ ಬಡ್ಡಿ ದರವಿದೆ.
ಲಾಭ ವರ್ಗಾಯಿಸದ ಬ್ಯಾಂಕ್
ಉದ್ದಿಮೆ ವಲಯ ಹಾಗೂ ಜನ ತಮ್ಮ ಸಾಲಗಳ ಬಡ್ಡಿ ದರ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಹೀಗಿದ್ದರೂ ಆರ್‌ಬಿಐ ರೆಪೊ ದರ ಕಡಿತ ಮಾಡಿದಾಗಲೆಲ್ಲ ಬ್ಯಾಂಕ್‌ಗಳೂ ಅದೇ ಮಾದರಿಯಲ್ಲಿ ಸಾಲದ ಬಡ್ಡಿ ದರ ಇಳಿಸುತ್ತಿಲ್ಲ. ಇಳಿಕೆಯ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ ಎಂಬ ದೂರಿದೆ.
ಕಳೆದ ಮಾರ್ಚ್‌ನಿಂದ ಎರಡು ಸಲ ಆರ್‌ಬಿಐ ರೆಪೊ ದರ ಕಡಿತವಾದಂತಾಗಿದ್ದು, ಒಟ್ಟು ಶೇ.1.15ರಷ್ಟು ತಗ್ಗಿದೆ. ಹೀಗಾಗಿ ಹಿರಿಯ ನಾಗರಿಕರ ನಿಶ್ಚಿತ ಠೇವಣಿಗಳ ಬಡ್ಡಿ ದರ ಶೇ.1ರಷ್ಟು ಕಡಿತವಾಗುವ ನಿರೀಕ್ಷೆ ಇದೆ.
– ಸಿ ಎ ರುದ್ರಮೂರ್ತಿ ಆರ್ಥಿಕ ತಜ್ಞರು