– ಚೀನಾದಿಂದ ಕಂಪನಿಗಳು ಬರಲು ಸೂಕ್ತ ವಾತಾವರಣ ಸೃಷ್ಟಿಸಬೇಕು.
ಐದು ನಿರಂತರ ಪ್ರೆಸ್‌ಮೀಟ್‌ಗಳ ಮೂಲಕ ಜಗತ್ತಿನ ಮೂರನೇ ಅತಿ ದೊಡ್ಡ ಪ್ಯಾಕೇಜ್ ಘೋಷಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಬಗ್ಗೆ ಹೆಚ್ಚಿನ ವಿವರಗಳನ್ನು ವಿಜಯ ಕರ್ನಾಟಕದ ಸಹೋದರ ಪತ್ರಿಕೆ ‘ಟೈಮ್ಸ್ ಆಫ್ ಇಂಡಿಯಾ’ದ ರಾಜೀವ ದೇಶಪಾಂಡೆ, ಸಿದ್ಧಾರ್ಥ, ಸುರೋಜಿತ್ ಗುಪ್ತಾ ಜೊತೆಗೆ ನಡೆಸಿದ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
– ಪ್ಯಾಕೇಜ್‌ಗೆ ನೀವು ಪರಿಗಣಿಸಿದ ಅಂಶಗಳೇನು?
– ಲಾಕ್‌ಡೌನ್ ಘೋಷಿಸಿದ ಗಳಿಗೆಯಿಂದಲೂ ಇದರ ಅವಶ್ಯಕತೆ ನಮ್ಮ ಗಮನದಲ್ಲಿತ್ತು. ಆದ್ದರಿಂದಲೇ, ಮೊತ್ತ ಮೊದಲು ಸಮಸ್ಯೆ ಅನುಭವಿಸಿದ ಬಡವರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಮೊದಲ ಪ್ಯಾಕೇಜ್ ಹೊರಡಿಸಲಾಯಿತು. ಅಡುಗೆ ಅನಿಲಕ್ಕಾಗಿ ಸ್ವಲ್ಪ ಹಣವನ್ನೂ ನೀಡಲಾಯಿತು. ತೀರಾ ಅಗತ್ಯದಲ್ಲಿದ್ದವರಿಗೆ ಪಿಎಂ ಗರೀಬ್ ಕಲ್ಯಾಣ ಯೋಜನೆ ನೆರವಿಗೆ ಬಂತು. ನಂತರ ಮುಖ್ಯಮಂತ್ರಿಗಳು, ವಿತ್ತ ಸಚಿವರುಗಳು ಅನೇಕ ಸಮಸ್ಯೆಗಳನ್ನು ಮುಂದಿಡತೊಡಗಿದರು. ಪ್ರಧಾನ ಮಂತ್ರಿಗಳು ಸಮಾಜದ ಎಲ್ಲರೊಂದಿಗೆ ಸಾಕಷ್ಟು ಸಮಾಲೋಚನೆ ನಡೆಸಿದರು.
– ಸಂತ್ರಸ್ತರಿಗೆ ನೇರ ಹಣ ವರ್ಗಾವಣೆ ಮಾಡಲು ಸಲಹೆಗಳಿದ್ದವು…
– ಅದನ್ನು ಸ್ವಲ್ಪ ಮಟ್ಟಿಗೆ ಪಿಎಂ ಗರೀಬ್ ಕಲ್ಯಾಣ ಯೋಜನೆಯಲ್ಲಿ ಮಾಡಲಾಗಿದೆ. ಮಾಸಿಕ 500 ರೂ.ಗಳನ್ನು 1500 ರೂ.ಗೆ ವಿಸ್ತರಿಸಲಾಗಿದೆ. ಆದರೆ ಇದು ಸಾಲದು ಎಂದು ಒಪ್ಪಿಕೊಳ್ಳುತ್ತೇನೆ. ಐದು ತಿಂಗಳಿಗೆ ಆಹಾರಧಾನ್ಯಗಳನ್ನು ಪಡೆದುಕೊಳ್ಳಲು ಸೌಲಭ್ಯ ಒದಗಿಸಲಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಲು ಹಣ ನೀಡಬೇಕೆಂದು ಹೇಳಲಾಗಿದೆ. ಆದರೆ ನಾವು ನೇರವಾಗಿ ಕೈಗೆ ನೀಡುವ ಬದಲು ಹೆಚ್ಚುವರಿ ಸಾಲಗಳ ಮೂಲಕ, ದುಡಿಯುವ ಬಂಡವಾಳದ ಮೂಲಕ, ಬ್ಯಾಂಕ್‌ಗಳ ಮೂಲಕ ಕೊಡುತ್ತಿದ್ದೇವೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮೂಲಕವೂ ಕೊಡಲಾಗುತ್ತಿದೆ. ಇದೆಲ್ಲವೂ ಬೇಡಿಕೆಯನ್ನು ಸೃಷ್ಟಿಸುವುದಿಲ್ಲವೇ? ಉದ್ಯಮದ ಪುನಶ್ಚೇತನದ ಮೂಲಕ ಹಣ ನೀಡುವ ಪ್ರಕ್ರಿಯೆ ರೂಪಿಸಲಾಗಿದೆ.
– ಈ ಸನ್ನಿವೇಶದಲ್ಲಿ ಬ್ಯಾಂಕ್‌ಗಳು ಸಾಲ ಕೊಡಲು ಮುಂದೆ ಬರುತ್ತವೆಯೇ?
– ನಾನು ಬ್ಯಾಂಕ್‌ಗಳನ್ನು ದೂರಲಾರೆ. ಹಣವನ್ನು ರಿವರ್ಸ್ ರೆಪೊದಲ್ಲಿ ಇಡುವುದಾದರೆ ಅದರ ಬದಲು ನನಗೆ ಕೊಡಿ ಎಂದು ಬ್ಯಾಂಕ್‌ಗಳಿಗೆ ನಾನು ಹೇಳಿದೆ. ಆದರೆ ಉದ್ಯಮಗಳು ಸಾಲ ಪಡೆಯಲು ಆಸಕ್ತವಾಗಿವೆ. ಆದರೆ ಲಾಕ್‌ಡೌನ್ ತೆರವಾಗುವುದನ್ನೇ ಕಾಯತ್ತಿವೆ. ಇದಕ್ಕೆ ಬ್ಯಾಂಕ್‌ಗಳು ನನಗೆ ಸಾಕ್ಷಿ ತೋರಿಸಿವೆ.
– ನೇರವಾಗಿ ಹಣ ನೀಡುವುದರಿಂದ ಉದ್ದೇಶ ಹೆಚ್ಚು ಸಫಲವಾಗುತ್ತಿತ್ತು ಎಂದು ಅನಿಸುತ್ತದೆಯೇ?
– ಇದೊಂದು ತಾತ್ವಿಕ ಪ್ರಶ್ನೆ. ಬಡವರಿಗೆ ನೆರವಾಗುವ ಉದ್ದೇಶದಿಂದಲೇ ಮನರೇಗಾಕ್ಕೆ 40,000 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆದರೆ ನೆರವಾಗುವ ಬಗೆ ಹೇಗೆ? ಪ್ರಧಾನಿ ಮೋದಿ ಮತ್ತು ಬಿಜೆಪಿ, ಜನಸಂಘದ ದಿನಗಳಿಂದಲೂ ನೆಚ್ಚಿಕೊಂಡಿರುವ ಸಿದ್ಧಾಂತ ಎಂದರೆ ಬಡವನಿಗೆ ಮೀನು ನೀಡುವ ಬದಲು ಮೀನು ಹಿಡಿಯುವ ಕಲೆ ಕಲಿಸು ಎಂಬುದಾಗಿದೆ. ಇದರಿಂದ, ಆತ ಜೀವನಾದ್ಯಂತ ಬದುಕಿಕೊಳ್ಳುತ್ತಾನೆ.
– ಈ ಪ್ಯಾಕೇಜ್ ರೂಪಿಸುವಾಗ ಒಟ್ಟಾರೆ ವಿತ್ತ ಪರಿಸ್ಥಿತಿ ಹೇಗಿತ್ತು?
– ಲಾಕ್‌ಡೌನ್‌ಗಿಂತ ಮುನ್ನ ಹಲವು ಉದ್ಯಮ ವಲಯಗಳು ಚೇತರಿಸಿಕೊಳ್ಳುತ್ತಿದ್ದು. ದಿಢೀರೆಂದು ಲಾಕ್‌ಡೌನ್ ಸಂಭವಿಸಿತು. ನಮ್ಮ ಆದಾಯ ಇಳಿದಿದೆ, ನಿಜ. ಆದರೆ ಇದೆಲ್ಲವೂ ನಮ್ಮ ಗಮನದಲ್ಲಿದೆ.
– ಪ್ಯಾಕೇಜ್ ವಿನ್ಯಾಸದಲ್ಲಿ ನಮ್ಮ ದೇಶದ ಅಂತಾರಾಷ್ಟ್ರೀಯ ರ್ಯಾಂಕಿಂಗ್ ಕುಸಿತ ಏನಾದರೂ ಪರಿಣಾಮ ಬೀರಿದೆಯೇ?
– ಹಾಗೆ ಯೋಚಿಸುವುದಾದರೆ, ನಮ್ಮ ದೇಶಕ್ಕೆ ಮಾತ್ರ ಸಮಸ್ಯೆಯಿದ್ದು ಉಳಿದವರೆಲ್ಲ ಸಮಸ್ಥಿತಿಯಲ್ಲಿರಬೇಕಿತ್ತು. ಆದರೆ ಕೊರೊನಾ ಇಡೀ ವಿಶ್ವವನ್ನು ಬಾಧಿಸಿದೆ. ಹೀಗಾಗಿ ರ್ಯಾಂಕಿಂಗ್ ಎಂಬುದು ಕೂಡ ಪರಸ್ಪರ ಸಂಬಂಧಿತ. ನಮ್ಮ ದೇಶದ ಕಿರು ಆರ್ಥಿಕ ಮೂಲವ್ಯವಸ್ಥೆಗಳು ಸುಭದ್ರವಾಗಿದ್ದರೆ, ಅದು ಕೂಡ ರ್ಯಾಂಕಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರೈತರಿಗೆ ಹಣ ಸಿಗುತ್ತಿದೆ; ರಾಬಿ ಬೆಳೆ ಚೆನ್ನಾಗಿ ಬಂದಿದೆ. ರೈತರಿಗೆ ಕೇಂದ್ರದ ಹಣ ತಲುಪುತ್ತಿದೆ. ಹೀಗಾಗಿ ಅಗತ್ಯ ಚಟುವಟಿಕೆಗಳು ನೆರವೇರುತ್ತಿವೆ. ಪ್ರಧಾನಿ ಮೋದಿ ಹೊಣೆಯರಿತ ನಾಯಕ. ದೀರ್ಘಕಾಲಿಕ ರಿಸ್ಕ್ ಉಂಟುಮಾಡುವ ತಕ್ಷಣದ ಪರಿಹಾರಗಳಲ್ಲಿ ಅವರಿಗೆ ನಂಬಿಕೆಯಿಲ್ಲ.
– ಖಾಸಗೀಕರಣಕ್ಕೆ ನೀವು ಗುರುತಿಸಿದಂತೆ ಪ್ರಮುಖ ವಲಯಗಳು ಯಾವುವು?
– ದೇಶದ ಪ್ರತಿಯೊಂದು ವಲಯವೂ ಖಾಸಗಿಗೆ ಲಭ್ಯವಿದೆ. ಅಧಿಸೂಚಿತ ವಲಯಗಳಲ್ಲೆಲ್ಲ ಖಾಸಗಿಗೆ ಅವಕಾಶ ನೀಡಲಾಗುಧಿವುದು. ಯಾವುದೇ ವಲಯದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಗರಿಷ್ಠ ಸಂಖ್ಯೆ ನಾಲ್ಕು. ಸಾಧ್ಯವಿದ್ದಲ್ಲಿ ಕೆಲವನ್ನು ವಿಲೀನಗೊಳಿಸಿ ವಿಸ್ತರಣೆ ಮಾಡಲಾಗುವುದು. ಸಾಧ್ಯವಿಲ್ಲದ ಪಕ್ಷದಲ್ಲಿ ಖಾಸಗೀಕರಣಕ್ಕೆ ತೆರೆಯಲಾಗುವುದು. ಯಾವುದೇ ವಲಯದಲ್ಲೂ ಖಾಸಗಿಯವರಿಗೆ ಸ್ಪರ್ಧೆಯ ಸಾಧ್ಯತೆ ಇದ್ದೇ ಇದ್ದರೂ, ಒಂದಾದರೂ ಸರಕಾರಿ ಸಂಸ್ಥೆ ಇರಲಿದೆ. ತೈಲ, ಇಂಧನ, ವಾಯುಯಾನ, ಬ್ಯಾಂಕಿಂಗ್ ಹೀಗೆ ಎಲ್ಲವೂ.
– ಸರಕಾರಿ ಸಂಸ್ಥೆಗಳ ಕಾರ್ಯಾಚರಣೆ ಹೇಗಿರಬೇಕೆಂಬ ಬಗ್ಗೆ ಚಿಂತಿಸಿದ್ದೀರಾ?
– ಹೆಚ್ಚು ಪಾರದರ್ಶಕ ಮತ್ತು ವೃತ್ತಿಪರತೆಯ ಅಗತ್ಯವಿದೆ. ಉತ್ತಮ ಉದಾಹರಣೆಗಳೆಂದು ಶಸ್ತ್ರಾಸ್ತ್ರ ತಯಾರಿಕೆ ಸಂಸ್ಥೆಗಳು. ಈ ವೃತ್ತಿಪರತೆ ಸಾಧಿಸುವುದು ಕಷ್ಟಸಾಧ್ಯ. ಉತ್ತಮ ಆಡಳಿತ ನಿರ್ವಹಣೆ ಅದಕ್ಕೆ ಅಗತ್ಯ. ಲಾಭ ಪಡೆಯುವ ಸಂಸ್ಥೆಯಂತೆ ಪರಿಣಾಮಕಾರಿತ್ವ, ಚುರುಕುತನ, ಬರಬೇಕಿದೆ. ಹೆಚ್ಚಿನವು ಪ್ರಾಮಾಣಿಕ ನಿರ್ವಹಣೆ ಮಾಡುತ್ತಿವೆ. ಆದರೆ ಕೊಟ್ಟ ಕೊನೆಯಲ್ಲಿ, ಇದಕ್ಕಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳಿಗೆ ಹೋಲಿಸುವುದು ಕಷ್ಟವಾಗುತ್ತದೆ.
– ಹಾಗಿದ್ದರೆ ಯಾವ ವಲಯವನ್ನೂ ಖಾಸಗಿಯಿಂದ ದೂರ ಇಡುವುದಿಲ್ಲವೇ?
– ಹೌದು. ಭಾರತದ ಯಾವುದೇ ವ್ಯಕ್ತಿ ಯಾವುದೇ ವಲಯದಲ್ಲಿ ಉದ್ಯಮ ಆರಂಭಿಸಬಹುದು. ಪ್ರಮುಖ ವಲಯಗಳಲ್ಲಿ ಮಾತ್ರ ಸರಕಾರಿ ಸಂಸ್ಥೆಗಳೊಂದಿಗೆ ಸ್ಪರ್ಧಿಸಬೇಕು.
– ಚೀನಾದಿಂದ ಇಲ್ಲಿಗೆ ಕಂಪನಿಗಳು ಬರುವ ಸಾಧ್ಯತೆ ಎಷ್ಟು?
– ಅವು ವ್ಯಾಪಾರಿ ನಿರ್ಧಾರಗಳು. ನಾವು ಅವರಿಗೆ ಉತ್ತಮ ವಾತಾವರಣ ಸೃಷ್ಟಿಸಬಹುದು. ತೆರಿಗೆ ಸ್ನೇಹಿ, ಉದ್ಯಮ ಸ್ನೇಹಿ, ಪೂರೈಕೆ ಸ್ನೇಹಿಯಾಗಿರುವ ವಾತಾವರಣವನ್ನು ಸೃಷ್ಟಿಸಬಹುದು. ಅತ್ಯುತ್ತಮ ಹೂಡಿಕೆಗಳು ಹೇಗೆ ಬರಲಿವೆ ಎಂಬುದರತ್ತ ನಮ್ಮ ಆದ್ಯತೆ. ಅದೇ ವೇಳೆಗೆ ಮೂಲ ವ್ಯವಸ್ಥೆಯನ್ನೂ ನಾವು ಎಲ್ಲರಿಗೆ ಅನುಕೂಲವಾಗುವಂತೆ ಸುಧಾರಿಸಬೇಕಾಗಿದೆ. ಔಷಧ ಸಂಸ್ಥೆಗಳಿಗಿಂತ ಚಿಪ್ ತಯಾರಕರಿಗೆ ಬೇಕಿರುವ ಮೂಲವ್ಯವಸ್ಥೆ ಬೇರೆ. ಅವರೆಲ್ಲರಿಗೂ ಲಾಭಾಂಶದ ಸಾಧ್ಯತೆ ಎಷ್ಟಿದೆ ಎಂಬುದೇ ಮುಖ್ಯವಾಗಿರುತ್ತದೆ. ಅವರಲ್ಲಿ ವಿಶ್ವಾಸ ಮೂಡಿಸುವುದಕ್ಕೆ ಇದೆಲ್ಲ ಅಗತ್ಯ.
– ವಲಸೆ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ಏನು ಮಾಡುತ್ತೀರಿ?
– ಅವರಿಗೆ ಯಾವಾಗ ಮರಳಿ ಬರಬೇಕು ಅನಿಸುತ್ತದೆಯೋ ಆಗ ಬರಬಹುದು. ಅವರು ಈ ದೇಶದ ಮುಕ್ತ ಪ್ರಜೆಗಳು. ಅವರ ದುಡಿಮೆಯಿಂದ ಪ್ರತಿಯೊಂದು ರಾಜ್ಯವೂ ಲಾಭ ಪಡೆದಿದೆ. ಅವರನ್ನು ಅವರಿದ್ದಲ್ಲಿಯೇ ಇರಗೊಟ್ಟು, ಸಂಬಳ ಹಾಗೂ ಊಟ ನೀಡುತ್ತಿರುವ ಸಂಸ್ಥೆಗಳನ್ನು ನಾನು ಬಲ್ಲೆ. ಸಹಾಯ ಮಾಡುತ್ತಿರುವ ಎನ್‌ಜಿಓಗಳೂ ಸಾಕಷ್ಟಿವೆ. ಆದರೆ ಅವರಲ್ಲಿ ಭಯ ಮೂಡಿದೆ. ನಾವೆಲ್ಲ ಈ ಸಂಕಷ್ಟದಲ್ಲಿ ಅವರ ಜೊತೆಗಿದ್ದು, ನಮ್ಮಿಂದ ಸಾಧ್ಯವಿದ್ದ ಸಹಾಯವನ್ನು ನೀಡುತ್ತಿದ್ದೇವೆ.
2008ರ ಸನ್ನಿವೇಶ ಮತ್ತು ಈಗಿನ ಸಂದರ್ಭ ಬೇರೆ…
ಆ ಸನ್ನಿವೇಶವನ್ನು ಕಾಂಗ್ರೆಸ್ ಸರಕಾರ ನಿಭಾಯಿಸಿದ ರೀತಿಯನ್ನು ನೋಡಿ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಅವರು ಅಂದು ಬ್ಯಾಂಕ್‌ಗಳಿಗೆ ಕರೆ ಮಾಡಿ ತಮ್ಮ ಆಪ್ತರಿಗೆಲ್ಲ ಸಾಲ ನೀಡುವಂತೆ ಹೇಳಿದರು. ಅವರಲ್ಲಿ ಹೆಚ್ಚಿನವರು ತಾವು ಸಾಲ ಮರಳಿಸುವ ಅಗತ್ಯವೇ ಇಲ್ಲವೆಂದು ತಿಳಿದರು. ಕೊನೆಯಲ್ಲಿ ಬ್ಯಾಲೆನ್ಸ್ ಶೀಟ್ ಸಮಸ್ಯೆ ಕಾಣಿಸಿಕೊಂಡಿತು. ಆರ್ಥಿಕತೆಯ ಮೇಲೆ ಇದರಿಂದ ಉಂಟಾಗಬಹುದಾದ ಪರಿಣಾಮ ಅವರು ಊಹಿಸಿರಲಿಲ್ಲ. ಅವರು ಮೊದಲೇ ಎಚ್ಚೆತ್ತಿದ್ದರೆ ಕೆಲವು ಬ್ಯಾಂಕ್‌ಗಳನ್ನಾದರೂ ಉಳಿಸಿಕೊಳ್ಳಬಹುದಿತ್ತು. ಅವರು ತೆಗೆದುಕೊಂಡ ಕೆಲವು ಕ್ರಮಗಳಿಂದಾಗಿ ಆಹಾರದ ಉಬ್ಬರ ಶೇ.10ರಷ್ಟು ಹೆಚ್ಚಿತು. ಇವೆಲ್ಲ ಏನು ಮಾಡಬಾರದು ಎಂಬುದಕ್ಕೆ ಉದಾಹರಣೆಗಳು.
—
ಕುಸಿದಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ಪ್ರಧಾನಿ ಮೋದಿಯವರು ಘೋಷಿಸಿದ್ದ 20 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಪ್ಯಾಕೇಜ್‌ನ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ಕಂತುಗಳಲ್ಲಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ ಮೆಗಾ ಪ್ಯಾಕೇಜ್‌ನ ಒಳನೋಟ ಇಲ್ಲಿದೆ.
ಹೂಡಿಕೆ, ಉತ್ಪಾದನೆಗೆ ಒತ್ತು ನೇರ ನಗದೂ ಕೊಡಬಹುದಿತ್ತು.
ಉದ್ದಿಮೆ, ವ್ಯಾಪಾರ, ವಾಣಿಜ್ಯ, ಕೃಷಿ ಸೇರಿದಂತೆ ಪ್ರಮುಖ ವಲಯಗಳಲ್ಲಿ ಹೂಡಿಕೆ ಮತ್ತು ಉತ್ಪಾದನೆಯನ್ನು ಚುರುಕುಗೊಳಿಸಿ ಆರ್ಥಿಕ ಬೆಳವಣಿಗೆಗೆ ಮರು ಚಾಲನೆ ನೀಡುವ ನೀತಿಗೆ ‘ಆತ್ಮ ನಿರ್ಭರ ಭಾರತ’ ಪ್ಯಾಕೇಜ್ ವಿಶೇಷ ಗಮನ ಹರಿಸಿದೆ ಎನ್ನುತ್ತಾರೆ ಬಹುಪಾಲು ಆರ್ಥಿಕ ತಜ್ಞರು. ಉದಾಹರಣೆಗೆ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ವ್ಯಾಖ್ಯಾನವನ್ನೇ ಬದಲಿಸಿರುವುದು, ಸರಕಾರವೇ 3 ಲಕ್ಷ ಕೋಟಿ ರೂ. ಎಂಎಸ್ಎಂಇ ಸಾಲಕ್ಕೆ ಗ್ಯಾರಂಟಿ ನೀಡುತ್ತಿರುವುದು, ಕೃಷಿಕರಿಗೆ 2.3 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ, ಖಾಸಗೀಕರಣದ ವಿಸ್ತರಣೆ ಇತ್ಯಾದಿ ಕ್ರಮಗಳಿಂದ ಹೂಡಿಕೆ ಮತ್ತು ಉತ್ಪಾದನೆ ಚುರುಕಾಗಲಿದೆ. ಮೇಕ್ ಇನ್ ಇಂಡಿಯಾಗೆ ಉತ್ತೇಜನ ಸಿಗಲಿದೆ. ಸ್ವಾವಲಂಬನೆಗೆ ಇದು ಸಹಕಾರಿ ಎನ್ನುತ್ತಾರೆ ಕಾಸಿಯಾ, ಎಫ್‌ಕೆಸಿಸಿಐ, ಅಸೊಚೆಮ್ ಇತ್ಯಾದಿ ಕೈಗಾರಿಕೆ ಸಂಘಟನೆಗಳ ಪ್ರಮುಖರು. ಹೀಗಿದ್ದರೂ, ಉತ್ಪಾದನೆಯಾಗುವ ವಸ್ತು ಹಾಗೂ ಸೇವೆಗಳಿಗೆ ಬೇಡಿಕೆಯ ಸೃಷ್ಟಿಯೂ ಅಷ್ಟೇ ಮುಖ್ಯ. ಈ ಬೇಡಿಕೆಯನ್ನು ಉತ್ತೇಜಿಸಲು ನೇರ ನಗದು ವಿತರಣೆಯ ಬೆಂಬಲವನ್ನು ಮತ್ತಷ್ಟು ಹೆಚ್ಚಿಸಬಹುದಿತ್ತು ಎಂದೂ ವಾದಿಸುವ ಅರ್ಥಶಾಸ್ತ್ರಜ್ಞರಿದ್ದಾರೆ.
20,97,503 ಕೋಟಿ ರೂ.ಆತ್ಮ ನಿರ್ಭರ ಪ್ಯಾಕೇಜ್‌ನ ಒಟ್ಟು ಮೊತ್ತ. ಈ ಪೈಕಿ 801,603 ಕೋಟಿ ರೂ. ಈ ಮೊದಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಘೋಷಣೆಯಾಗಿದೆ.
ಪ್ಯಾಕೇಜ್‌ನ ಆದ್ಯತೆಗಳೇನು?
– ಸುಧಾರಣೆ- ಎಂಎಸ್ಎಂಇ ಅಥವಾ ಸಣ್ಣ ಮತ್ತು ಮಧ್ಯಮ ಉದ್ದಿಮೆ ವಲಯಕ್ಕೆ ಹೊಸ ವ್ಯಾಖ್ಯಾನ
– ಕೃಷಿ ಮಾರುಕಟ್ಟೆ ಸುಧಾರಣೆ
– ಕಲ್ಲಿದ್ದಲು, ಖನಿಜ ವಲಯಗಳ ಉದಾರೀಕರಣ
– ರಕ್ಷಣಾ ಉತ್ಪಾದನೆಯಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಳ
– ವಿಮಾನ ನಿಲ್ದಾಣ, ಡಿಸ್ಕಾಮ್ ಖಾಸಗೀಕರಣ
– ಪಿಎಸ್‌ಯುಗಳಿಗೆ ಹೊಸ ನೀತಿ
ಹಣಕಾಸು ನೆರವು
– ಸಣ್ಣ ಉದ್ದಿಮೆಗೆ ಜಾಮೀನು ಮುಕ್ತ ಸಾಲ
– ಎನ್‌ಬಿಎಫ್‌ಸಿ ಗಳಿಗೆ ವಿಶೇಷ ಹಣಕಾಸು ನೆರವು, ಭಾಗಶಃ ಖಾತರಿ
– ಡಿಸ್ಕಾಮ್‌ಗಳಿಗೆ ಫಂಡ್, ಪಿಎಫ್ ರಿಲೀಫ್
– ರೈತರಿಗೆ ಹೆಚ್ಚುವರಿ 2.3 ಲಕ್ಷ ಕೋಟಿ ರೂ. ನೆರವು
ಮೂಲಸೌಕರ್ಯಕ್ಕೆ ಪುಷ್ಟಿ
– ವಲಸಿಗರಿಗೆ ಬಾಡಿಗೆ ವಸತಿ ವ್ಯವಸ್ಥೆ
– ಮಧ್ಯಮ ಆದಾಯದವರಿಗೆ ವಸತಿ ಯೋಜನೆ ವಿಸ್ತರಣೆ
– ಕೃಷಿ ಮೂಲಸೌಕರ್ಯ ನಿಧಿ
– ಸಾಮಾಜಿಕ ಮೂಲ ಸೌಕರ್ಯಕ್ಕೆ ವಿಜಿಎಸ್ ಫಂಡ್ ಹೆಚ್ಚಳ
– ಒತ್ತಡದಲ್ಲಿರುವ ಉದ್ದಿಮೆಗೆ ಸಹಾಯಹಸ್ತ
– ಐಬಿಸಿ ಕಾಯಿದೆಯಲ್ಲಿ ವಿನಾಯಿತಿ
– ಹಣಕಾಸು ನೆರವು/ರಿಫಂಡ್- ಒತ್ತಡದಲ್ಲಿರುವ ಎನ್‌ಬಿಎಫ್‌ಸಿಗೆ ನಿಧಿ
ಪ್ಯಾಕೇಜಿನಲ್ಲಿ ಇನ್ನೇನಿರಬೇಕಿತ್ತು?
– ಬಿಸಿನೆಸ್, ಉದ್ಯಮಶೀಲತೆಗೆ ಉತ್ತೇಜನ ನೀಡಿದ ರೀತಿಯಲ್ಲೇ, ಕುಸಿದಿರುವ ಬೇಡಿಕೆಯನ್ನು ಉತ್ತೇಜಿಸಲು, ಅರ್ಥಾತ್ ಜನತೆಯ ಕೈಗೆ ಮತ್ತಷ್ಟು ಹಣ ವಿತರಿಸಿದ್ದರೆ ಸೂಕ್ತವಾಗಿರುತ್ತಿತ್ತು ಎನ್ನುತ್ತಾರೆ ಕೆಲ ಆರ್ಥಿಕ ತಜ್ಞರು.
– ಆರ್ಥಿಕತೆಯ ಬೆಳವಣಿಗೆಯಲ್ಲಿ 60 ಪರ್ಸೆಂಟ್ ಖರ್ಚು ವೆಚ್ಚಗಳೇ ಹೊಂದಿವೆ. ಹೀಗಾಗಿ ಅವರ ಜೇಬಿನಲ್ಲಿ ದುಡ್ಡು ಸಾಧ್ಯವಾದಷ್ಟು ಸೇರುವಂತೆ ನೋಡುವುದು ನಿರ್ಣಾಯಕ. ಉದ್ಯೋಗ ನಷ್ಟ, ವೇತನ ಕಡಿತದ ಪರಿಣಾಮ ಜನ ಖರ್ಚು ವೆಚ್ಚಗಳನ್ನು ಮಾಡಲು ಯೋಚಿಸುತ್ತಿದ್ದಾರೆ. ಆದ್ದರಿಂದ ನೇರವಾಗಿ ಉದ್ಯೋಗ ಸೃಷ್ಟಿಸಲು ಸಾಧ್ಯವಿದೆಯೇ ಎಂಬುದನ್ನು ಪ್ರಯತ್ನಿಸಬಹುದಿತ್ತು.
– ಬಡ ಜನತೆಗೆ ನೇರ ನಗದು ವಿತರಣೆಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಲು ಪರಿಶೀಲಿಸಬಹುದಿತ್ತು. ಸಂಕಷ್ಟದಲ್ಲಿರುವ ಮಧ್ಯಮ ವರ್ಗದ ಜನತೆಯ ಹಿತ ಗಮನದಲ್ಲಿಟ್ಟುಕೊಂಡು ಇನ್ನಷ್ಟು ನೆರವು ಪ್ರಕಟಿಸಬಹುದಿತ್ತು. ಇದು ಆರ್ಥಿಕತೆಯಲ್ಲಿಬೇಡಿಕೆಯನ್ನು ಚುರುಕುಗೊಳಿಸುತ್ತದೆ.
ಆರ್ಥಿಕತೆ, ಉದ್ದಿಮೆ ಮತ್ತು ಕೃಷಿ ವಲಯಕ್ಕೆ ಆರ್ಥಿಕ ನೆರವಿನ ಪ್ಯಾಕೇಜ್ ಅನಿವಾರ್ಯವಿತ್ತು. ಅದೀಗ ಸಿಗುತ್ತಿದೆ. ಲಾಕ್‌ಡೌನ್ ಸುದೀರ್ಘಕಾಲ ಮುಂದುವರಿದರೆ ಮಾತ್ರ ಚೇತರಿಕೆ ವಿಳಂಬವಾಗಬಹುದು. ಇಲ್ಲದಿದ್ದರೆ ಆರ್ಥಿಕತೆ ಶೀಘ್ರ ಸಹಜ ಸ್ಥಿತಿಗೆ ಚೇತರಿಸಲಿದೆ. -ಎಸ್.ಎಸ್ ಭಟ್, ಡೆವಲಪ್ಮೆಂಟ್ ಬ್ಯಾಂಕರ್, ಅಹಮದಾಬಾದ್.