– ನಾ. ತಿಪ್ಪೇಸ್ವಾಮಿ.
ಕೊರೊನಾ ಮಹಾಮಾರಿಯಿಂದಾಗಿ ಅಮೆರಿಕ, ರಷ್ಯಾ, ಚೀನಾ, ಸ್ಪೇನ್ ಮುಂತಾದ ಶ್ರೀಮಂತ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಅತ್ಯಧಿಕ ಸಂಖ್ಯೆಯಲ್ಲಿಸಾವು ನೋವುಗಳು ಸಂಭವಿಸಿವೆ. ಈ ವೈರಸ್ ಭಾರತದಲ್ಲಿಯೂ ಹರಡಿದೆ. ಆದರೆ ಅಷ್ಟೊಂದು ದೊಡ್ಡ ಪ್ರಮಾಣದ ಪ್ರಾಣಹಾನಿಯನ್ನು ಮಾಡಲಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತದ ನಾಯಕತ್ವ ತೆಗೆದುಕೊಂಡ ನಿರ್ಣಯಗಳು ಹಾಗೂ ಈ ದೇಶದಲ್ಲಿಆಚರಣೆಯಲ್ಲಿರುವ ರೀತಿ ನೀತಿಗಳು.
ಪ್ರಧಾನಿ ಮೋದಿ ಮಾ.22ರಂದು 21ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದರು. ಇದು ಅನೇಕರನ್ನು ದಿಗ್ಭ್ರಮೆಗೊಳಿಸಿತು. 130 ಕೋಟಿ ಜನರಿರುವ ಭಾರತದಲ್ಲಿ ಅನೇಕ ರೀತಿಯ ಜನರಿದ್ದಾರೆ. ವಿಶೇಷವಾಗಿ ಅವತ್ತಿನ ದಿನದ ಊಟಕ್ಕೆ ಅಂದಿನ ದುಡಿಮೆಯನ್ನೇ ನಂಬಿರುವ ಜನ ಸಮುದಾಯವೇ ಹೆಚ್ಚಾಗಿರುವ ಭಾರತದಲ್ಲಿ ಕೇವಲ 21 ದಿನಗಳು ಮಾತ್ರವಲ್ಲ ನಂತರ 19 ದಿನಗಳ ಕಾಲ ವಿಸ್ತರಣೆ ಸೇರಿದಂತೆ ಒಟ್ಟು 40ಕ್ಕೂ ಅಧಿಕ ದಿನಗಳ ಕಾಲದ ಲಾಕ್‌ಡೌನ್ ಹೇಗೆ ಸಫಲವಾಗುತ್ತದೆ ಎನ್ನುವುದು ಅನೇಕರ ಊಹೆಗೂ ನಿಲುಕದ ಸಂಗತಿಯಾಗಿತ್ತು. ಇದಕ್ಕೆ ನಾಯಕತ್ವದ ದಿಟ್ಟತನ ಮತ್ತು ಸಮಾಜವನ್ನು ನಿರ್ವಹಿಸುವಂಥ ಧೈರ್ಯದ ಜೊತೆಗೆ ಸಮಾಜದ ಸಹಭಾಗಿತ್ವವೂ ಪ್ರಮುಖ ಕಾರಣವಾಗಿದೆ.
ಲಾಕ್‌ಡೌನ್ ವೇಳೆ ನಮಗೆ ವಿಶ್ವಾಸ ಮತ್ತು ಪ್ರೇರಣೆ ತಂದುಕೊಡುವ ಅನೇಕ ಸಂಗತಿಗಳು ನಡೆದವು. ಮೊದಲನೆಯದಾಗಿ, ಈ ದೇಶದ ಬಹುತೇಕರು ಪ್ರಧಾನಿಗಳ ಮನವಿಯನ್ನು ಸ್ವಯಂಪ್ರೇರಣೆಯಿಂದ ಪಾಲಿಸಿದರು. ಮನೆಯಲ್ಲಿಯೇ ಉಳಿಯಬೇಕು ಎಂದಾಗ ಶೇ.98ರಷ್ಟು ಜನ ತಮ್ಮ ಮನೆಯಲ್ಲಿಯೇ ಉಳಿದು, ಅಂತರವನ್ನು ಕಾಯ್ದುಕೊಂಡು ಸರಕಾರ ನೀಡಿದ ಸೂಚನೆಗಳ ಪಾಲನೆಯನ್ನು ಮಾಡಿದರು.
ಎರಡನೆಯದು, ಪ್ರಧಾನಿಯವರು ಸಮಯಕ್ಕೆ ತಕ್ಕಂತೆ ಸೂಚನೆಗಳನ್ನು ನೀಡಿದರು. ಅದು ಚಪ್ಪಾಳೆ ತಟ್ಟುವುದು ಇರಬಹುದು, ದೀಪ ಹಚ್ಚುವುದು ಇರಬಹುದು. ಇದು ಸಣ್ಣ ಸಂಗತಿಗಳೇ ಇರಬಹುದು. ಆದರೆ ದೇಶದ ಜನ ಅತ್ಯಂತ ಶ್ರದ್ಧೆಯಿಂದ ಅದನ್ನು ಪಾಲಿಸಿದರು. ನಮಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿರುವ ವೈದ್ಯರು, ಪೊಲೀಸರು, ಪೌರಕಾರ್ಮಿಕರು ಮುಂತಾದ ಕೊರೊನಾ ವಾರಿಯರ್ಸ್‌ಗೆ ಗೌರವ ಸೂಚಿಸಲು ದೇಶಕ್ಕೆ ದೇಶವೇ ಏಕತೆಯಿಂದ ಚಪ್ಪಾಳೆ ಹೊಡೆದದ್ದು, ಇಡೀ ದೇಶ ಅತ್ಯಂತ ಸಂಭ್ರಮ, ಶ್ರದ್ಧೆಯಿಂದ ದೀಪ ಬೆಳಗಿಸಿದ್ದು – ಇದು ಈ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದೇ ಆಗಿದೆ.
ಮೂರನೆಯದು, ಬೇರೆಯವರಿಗಾಗಿ ಬದುಕಬೇಕು ಎನ್ನುವುದು ಈ ದೇಶದಲ್ಲಿ ಕಲಿಸಿಕೊಟ್ಟಂಥ ರೀತಿ. ನಮ್ಮ ಋುಷಿ ಮುನಿಗಳೂ ಇದನ್ನೇ ಹೇಳಿದರು- ಪರೋಪಕಾರಾಯ ಪುಣ್ಯಾಯ, ಪಾಪಾಯ ಪರಪೀಡನಂ ಎಂದು. ವಿವೇಕಾನಂದರು ‘‘ಯಾರು ಬೇರೆಯವರಿಗಾಗಿ ಬದುಕುತ್ತಾರೋ ಅವರು ಬದುಕಿದಂತೆ, ಉಳಿದವರು ಬದುಕಿದ್ದೂ ಸತ್ತಂತೆ,’’ ಎಂದಿದ್ದಾರೆ. ಬೇರೆಯವರಿಗಾಗಿ ಬದುಕುವುದೇ ಒಂದು ಪುಣ್ಯದ ಕೆಲಸ ಎಂಬ ಋುಷಿ ಮುನಿಗಳ ಮಾತಿನಂತೆ ನಮ್ಮ ಸಮಾಜ ಈ ಸಂಕಟದ ಕಾಲದಲ್ಲಿ ನಡೆದುಕೊಂಡಿತು. ದೇಶ ಸಂಕಷ್ಟದಲ್ಲಿದ್ದಾಗ ನನ್ನ ನೆರೆಹೊರೆಯವರು, ಅಕ್ಕಪಕ್ಕದವರಿಗೆ ಸಂಕಟವಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ ಎಂದು ಭಾವಿಸಿತು. ಇದು ಈ ದೇಶದ ಸಂಸ್ಕೃತಿ. ಕೊರೊನಾದ ಈ ಕಠಿಣ ಪರಿಸ್ಥಿತಿ ನಮಗೆ ಅನೇಕ ಒಳ್ಳೆಯ ಸಂಗತಿಗಳನ್ನು ಕಲಿತುಕೊಳ್ಳುವಂತೆ ಮಾಡಿದೆ. ಈ ಸಂಗತಿಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಮತ್ತು ಈ ಕುರಿತು ಇನ್ನಷ್ಟು ಚಿಂತನೆ ನಡೆಸಬೇಕಾದ ಅಗತ್ಯತೆ ಈಗ ನಮ್ಮೆದುರಿಗಿದೆ.
ಸ್ವಚ್ಛ ಪರಿಸರ
ಅಗಾಧ ವಾಹನ ಸಂಚಾರ ಮುಂತಾದವುಗಳಿಂದ ವಾಯುಮಾಲಿನ್ಯಗೊಂಡಿದ್ದ ಪರಿಸರ ಸ್ವಚ್ಛವಾಗಿರುವುದನ್ನು ಕಾಣುತ್ತಿದ್ದೇವೆ. ರೈಲ್ವೆ, ಬಸ್ ನಿಲ್ದಾಣದಂಥ ಸಾರ್ವಜನಿಕ ಸ್ಥಳಗಳಿಂದ ನಮ್ಮ ಮನೆಗಳು ಸ್ವಚ್ಛಗೊಂಡಿವೆ. ಪಕ್ಷಿಗಳ ಧ್ವನಿಗಳನ್ನೇ ಕೇಳಿರದ ಬೆಂಗಳೂರು ಮುಂತಾದ ನಗರ ಪ್ರದೇಶಗಳಲ್ಲಿ ಇದೀಗ ಪಕ್ಷಿಗಳ ಕಲರವ ಕೇಳಿಸುತ್ತಿದೆ. ಈ ಆನಂದದ ವಾತಾವರಣ ಮುಂದುವರಿಯಬೇಡವೇ?
ಪರಿಸರ ಸಂರಕ್ಷಣೆ
ಕೊರೊನಾ ಲಾಕ್‌ಡೌನ್ ಸಂದರ್ಭ ನಮಗೆ ಒಂದು ಪಾಠವನ್ನು ಕಲಿಸಿದೆ. ಪ್ರಕೃತಿಯನ್ನು ನಾವು ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಉಪಯೋಗ ಮಾಡಬೇಕು. ಹಾಗೆಯೇ ಮರಗಳನ್ನು ಬೆಳೆಸುವುದು, ಮರಗಳನ್ನು ಕಡಿಯದೇ ಇರುವುದು, ಪ್ಲಾಸ್ಟಿಕ್ ಬಳಸದೇ ಇರುವುದು, ಇವು ನಮ್ಮ ಸಂಕಲ್ಪಗಳಾಗಬೇಕು. ಪ್ರಕೃತಿಯನ್ನು ಕಾಪಾಡಿದಾಗ ನಮಗೆ ಶುದ್ಧವಾದ ಗಾಳಿ, ನೀರು ಸಿಗುತ್ತದೆ. ಪ್ರಕೃತಿಯಲ್ಲಿನಮಗೆ ನೀರು ಸಿಗುತ್ತದೆ. ಅದನ್ನು ಮಿತವಾಗಿ ಬಳಸುವುದು ಹೇಗೆ? ನೀರನ್ನು ಸಂರಕ್ಷಣೆ ಮಾಡುವುದು ಹೇಗೆ ಎನ್ನುವುದನ್ನು ನಾವು ಯೋಚನೆ ಮಾಡಬೇಕಾಗಿದೆ. ವಾರ್ಧಾದಲ್ಲಿನಡೆದ ಘಟನೆ ಇದು- ಒಮ್ಮೆ ಊಟದ ನಂತರ ಕೈತೊಳೆಯಲು ನೆಹರು ಯಥೇಚ್ಛ ನೀರನ್ನು ಬಳಸುತ್ತಿರುವುದನ್ನು ನೋಡಿದ ಗಾಂಧಿಜೀ ಕಡಿಮೆ ನೀರನ್ನು ಬಳಸುವಂತೆ ತಿಳಿಸಿದರು. ನೆಹರು, ನಮ್ಮೆದುರಿಗೇ ಹರಿಯುತ್ತಿರುವ ನರ್ಮದಾ ನದಿಯಲ್ಲಿ ಸಾಕಷ್ಟು ನೀರು ಇದೆಯಲ್ಲಾ ಎಂದರು. ಆಗ ಗಾಂಧಿಜೀ ನರ್ಮದಾ ಹರಿಯುತ್ತಿರುವುದು ನಮಗೊಬ್ಬರಿಗಾಗಿ ಅಲ್ಲ; ಇಲ್ಲಿಯ ಎಲ್ಲ ಜನರಿಗಾಗಿ ಎನ್ನುತ್ತಾರೆ. ಈ ಭಾವ ನಮ್ಮಲ್ಲಿಬರಬೇಕು. ಪ್ರಕೃತಿಯಲ್ಲಿರುವುದನ್ನು ನಮಗೆ ಅಗತ್ಯವಾದಷ್ಟನ್ನು ಮಾತ್ರ ಬಳಸಬೇಕು.
*ಕುಟುಂಬದ ಮಹತ್ತ್ವ *
ಕೆಲಸದ ಧಾವಂತದಲ್ಲಿ ಒತ್ತಡದ ಜೀವನಶೈಲಿಯಿಂದ ಕುಟುಂಬದವರೊಂದಿಗೆ ಒಟ್ಟಿಗೆ ಸೇರಲು ಸಾಧ್ಯವಾಗುತ್ತಿರಲಿಲ್ಲ. ಒಟ್ಟಿಗೆ ಸೇರುವ, ಒಬ್ಬರಿಗೊಬ್ಬರು ಅರಿತುಕೊಳ್ಳಲು ಅವಕಾಶ ಸಿಗುತ್ತಿರಲಿಲ್ಲ. ಇದೀಗ ಕುಟುಂಬಗಳೊಂದಿಗೆ ಸಮಯ ಕಳೆಯುವ ಸಂದರ್ಭ ಅನಿವಾರ್ಯವಾಗಿ ಒದಗಿದೆ. ಸಹಜವಾಗಿ ಕುಟುಂಬದಲ್ಲಿ ಸಿಗುವ ಅನೇಕ ಸಂಸ್ಕಾರ, ಸಂಸ್ಕೃತಿಗಳ ಅನುಭವ ನಮಗಾಗಿದೆ. ಅನೇಕ ವಿಷಯಗಳ ವಿಚಾರ ವಿನಿಮಯಕ್ಕೆ, ಆರೋಗ್ಯಪೂರ್ಣ ದಿನಚರಿಗಳನ್ನು ರೂಪಿಸಿಕೊಳ್ಳುವುದನ್ನು ನಮಗೆ ಕಲಿಸಿದೆ. ಅನೇಕರು ಮನೆಯಲ್ಲಿಯೇ ಅಡುಗೆ ಮಾಡಿ ಊಟಮಾಡುತ್ತಿರುವುದರಿಂದ ಆರೋಗ್ಯ ಬಹಳ ಸುಧಾರಣೆಯಾಗಿದೆ ಎಂದು ನನ್ನಲ್ಲಿ ಹೇಳಿದ್ದಾರೆ. ಹೋಟೆಲ್ ಊಟ ಬಿಟ್ಟು ಮನೆಯಲ್ಲೇ ಮಾಡಿದ ಅಡುಗೆಯನ್ನು ಕುಟುಂಬದವರೆಲ್ಲರೂ ಮನೆಯವರೆಲ್ಲರೂ ಒಟ್ಟಿಗೆ ಸೇರಿ ನಗುನಗುತ್ತಾ ಆನಂದದಿಂದ ಊಟ ಮಾಡುತ್ತಿರುವುದರಿಂದ ನಮ್ಮ ಆರೋಗ್ಯವೃದ್ಧಿಯ ಜೊತೆಗೆ ನಾವು ಮಾನಸಿಕವಾಗಿಯೂ ಸದೃಢರಾಗುತ್ತೇವೆ. ಇಂಥ ಸನ್ನಿವೇಶದಲ್ಲಿ ಒಂದು ಉತ್ತಮ ಆರೋಗ್ಯಕರ ಸಮಾಜವನ್ನು ಉಂಟು ಮಾಡುವ ದೃಷ್ಟಿಯಲ್ಲಿನಾವು ಅನೇಕ ಮುಖಗಳಲ್ಲಿ ಯೋಚನೆ ಮಾಡಬೇಕಾಗಿದೆ.
ಜನರಲ್ಲಿ ಉತ್ತಮ ಭಾವನೆ, ಸಂಸ್ಕೃತಿ ಬೆಳೆಸುವ ನಮ್ಮ ದೇಶದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದಂಥ ಒಂದು ಪದ್ಧತಿ ಇದೆ. ಅದುವೇ ನಮ್ಮ ಕುಟುಂಬ ವ್ಯವಸ್ಥೆ. ನಮ್ಮ ಕುಟಂಬ ವ್ಯವಸ್ಥೆಯನ್ನು ಗಟ್ಟಿಗೊಳಿಸಿದಾಗ ಮಾತ್ರ ಒಂದು ಆರೋಗ್ಯಕರವಾದ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಕುಟುಂಬ ನಮ್ಮಲ್ಲಿ ಸಹಕಾರ ಮನೋಭಾವವನ್ನು, ಒಬ್ಬರು ಇನ್ನೊಬ್ಬರನ್ನು ಅರಿತು ಬದುಕುವುದನ್ನು, ಒಬ್ಬರು ಇನ್ನೊಬ್ಬರಿಗಾಗಿ ಬದುಕುವುದನ್ನು ಕಲಿಸುತ್ತದೆ. ಎಂಥದ್ದೇ ಸಂಕಟದ ಪರಿಸ್ಥಿತಿಯಲ್ಲಿಯೂ ನಮ್ಮ ಸುತ್ತಮುತ್ತಲಿರುವ ಎಲ್ಲರನ್ನೂ ನನ್ನ ಬಂಧುಗಳು, ಸಹೋದರರು ಎಂಬಂತೆ ಅತ್ಯಂತ ಪ್ರೇಮದಿಂದ, ಸೇವಾ ಮನೋಭಾವದಿಂದ ಕೆಲಸ ಮಾಡುವ(ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವ)ಆ ಗುಣ ನಿರ್ಮಾಣವಾಗುವುದು ನಮ್ಮ ಕುಟುಂಬ ಪದ್ಧತಿಯಲ್ಲಿ.
ನಮ್ಮ ಬದುಕಿನ ಬಗೆಗೆ ಸರಳ ಜೀವನ ಉನ್ನತ ಚಿಂತನೆ ಎಂಬ ಮಾತನ್ನು ನಾವು ಕೇಳಿದ್ದೇವೆ. ಹೀಗೆ ಸರಳವಾದ ಜೀವನ ನಡೆಸುವುದನ್ನೂ ನಮಗೆ ಕುಟುಂಬ ಕಲಿಸುತ್ತದೆ. ‘‘ಶೇ.50ಕ್ಕಿಂತ ಹೆಚ್ಚು ಅನಗತ್ಯವಾದ ವಸ್ತುಗಳನ್ನು ಶೇಖರಿಸಿಟ್ಟಿರುವುದು ಕೊರೊನಾ ಸಂದರ್ಭದಲ್ಲಿ ತಿಳಿಯಿತು,’’ ಎಂದು ನನ್ನ ಕೆಲವು ಸ್ನೇಹಿತರು ಹೇಳುತ್ತಿದ್ದರು. ನಮಗೆ ಬೇಡವಾದುದನ್ನೂ ತಂದು ಇಟ್ಟುಕೊಳ್ಳುವ ಈ ಮಾಲ್ ಸಂಸ್ಕೃತಿ ಬದಲಾಗಬೇಕು. ಅನಗತ್ಯವಾದುದನ್ನೆಲ್ಲ ತಂದು ಇಟ್ಟುಕೊಳ್ಳದೆ, ತನಗೆಷ್ಟು ಬೇಕು, ಯಾವುದು ಬೇಕು ಎಂಬುದನ್ನು ಅರಿತು ಸರಳ ಜೀವನ ನಡೆಸುವುದನ್ನೂ ಕುಟುಂಬ ಕಲಿಸುತ್ತದೆ.
ನಮ್ಮ ಮಾತೃಭಾಷೆಯನ್ನು ಬಳಸುವುದು, ನಮ್ಮ ದೇಶದಲ್ಲಿ ಉತ್ಪಾದಿಸಿದ ವಸ್ತುಗಳನ್ನು ಬಳಸುವುದು. ಪೇಸ್ಟ್, ಬ್ರಶ್, ಸ್ನಾನದ ಸೋಪ್, ಬಟ್ಟೆಯ ಸೋಪ್ ಹೀಗೆ ನಾವು ದಿನ ನಿತ್ಯ ಬಳಸುವ ವಸ್ತುಗಳನ್ನು ಕಡ್ಡಾಯವಾಗಿ ನಮ್ಮ ದೇಶದಲ್ಲಿಯೇ ಉತ್ಪಾದಿಸುವಂಥ ವಸ್ತುಗಳನ್ನು ಬಳಸೋಣ. ಸ್ವದೇಶಿ ವಸ್ತುಗಳ ಬಳಕೆಯಿಂದ ನಮ್ಮ ದೇಶದ ಆರ್ಥಿಕ ಸದೃಢವಾಗುತ್ತದೆ ಮತ್ತು ಅನೇಕ ಜನರಿಗೆ ಉದ್ಯೋಗವೂ ದೊರೆಯುತ್ತದೆ. ಈ ದೃಷ್ಟಿಯಿಂದ ನಾವು ಸ್ವದೇಶಿ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು.
ನಮ್ಮ ದಿನಚರಿ ಹೇಗಿರಬೇಕು?
ಆರೆಸ್ಸೆಸ್‌ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಇತ್ತೀಚೆಗೆ ಮಾತನಾಡುತ್ತಾ ಏಕಾಂತದಲ್ಲಿ ಆತ್ಮ ಸಾಧನೆ ಎಂಬ ಮಾತನ್ನು ಹೇಳಿದರು. ಕೊರೊನಾ ಮಹಾಮಾರಿಯ ಈ ಸಂದರ್ಭದಲ್ಲಿ ನಾವು ನಮ್ಮ ವ್ಯಕ್ತಿಗತ ಜೀವನವನ್ನು ಚೆನ್ನಾಗಿಟ್ಟುಕೊಳ್ಳುವ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ಅನೇಕ ಸಂಗತಿಗಳನ್ನು ಮಾಡುತ್ತಿದ್ದೇವೆ. ಪುಸ್ತಕಗಳನ್ನು ಓದುವುದು, ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ ಮಾಡುವುದು- ಹೀಗೆ ಶಾರೀರಿಕವಾಗಿ, ಮಾನಸಿಕವಾಗಿ ಬೌದ್ಧಿಕವಾಗಿ ಬೆಳೆವಣಿಗೆ ಹೊಂದುವುದನ್ನು ಕಲಿತಿದ್ದೇವೆ. ವೈಯಕ್ತಿಕ ಸಾಧನೆ ಮಾಡುವುದನ್ನು ಕಲಿತಿದ್ದೇವೆ.
ನಮ್ಮ ವ್ಯಕ್ತಿಗತ ಆರೋಗ್ಯವನ್ನು ರೂಪಿಸಿಕೊಳ್ಳುವ ದೃಷ್ಟಿಯಿಂದ ಒಂದು ದಿನಚರಿಯನ್ನು ರೂಪಿಸಿಕೊಳ್ಳಬೇಕು. ಇಡೀ ಕುಟುಂಬ ಒಟ್ಟಾಗಿ ಮನಸ್ಸಿಗೆ ಶಾಂತಿಯನ್ನು ತಂದುಕೊಡುವ ಸತ್ಸಂಗ, ಭಜನೆ ಹಾಗೂ ಬೇರೆ ಬೇರೆ ವಿಚಾರಗಳ ಕುರಿತು ಚರ್ಚೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಾಮರಸ್ಯದ ಜೀವನ, ನಾವೆಲ್ಲರೂ ಒಂದು ಎಂಬ ಭಾವನೆ, ಅಕ್ಕಪಕ್ಕದಲ್ಲಿರುವ ಎಲ್ಲರನ್ನೂ ಸಹೋದರರಂತೆ ಕಾಣುವ ಮನೋಭಾವ ರೂಢಿಸಿಕೊಳ್ಳೋಣ. ಸಮಾಜದಲ್ಲಿ ಎಲ್ಲಿ ಕೊರತೆ ಇದೆ, ಅದನ್ನು ತುಂಬುವಂಥ ರೀತಿಯಲ್ಲಿ ನಾವು ಸಮಾಜಮುಖಿಗಳಾಗಿ ಯೋಚನೆ ಮಾಡಬೇಕು. ಇಂಥ ಸಂಗತಿಗಳು ಕುಟುಂಬದಲ್ಲಿ ಚರ್ಚೆಗಳಾಗಬೇಕು. ಆಗ ನಮ್ಮ ಮನೆ ಒಂದು ಸಾಮಾಜಿಕ ಕೇಂದ್ರವಾಗುತ್ತದೆ. ಹೀಗೆ ಪ್ರತಿಯೊಂದು ಮನೆಯೂ ಒಂದು ಸಾಮಾಜಿಕ ಕೇಂದ್ರವಾದಾಗ ಒಂದು ಉತ್ತಮ ಸಶಕ್ತ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.
ನಮ್ಮದು ಗ್ರಾಮಗಳ ದೇಶ. ಹೀಗಾಗಿ ಗ್ರಾಮಗಳಿಗೆ ನಾವು ಹೆಚ್ಚಿನ ಒತ್ತು ಕೊಡಬೇಕು. ಗ್ರಾಮಗಳಲ್ಲಿರುವ ಗುಡಿ ಕೈಗಾರಿಕೆ, ಕೃಷಿ ಪ್ರಧಾನ ಚಟುವಟಿಕೆ ಮುಂತಾದವುಗಳಿಗೆ ಪ್ರೋತ್ಸಾಹ ಬೆಂಬಲ ದೊರೆಯುವಂತೆ ಮಾಡಬೇಕಾಗಿದೆ. ಎಪಿಜೆ ಅಬ್ದುಲ್ ಕಲಾಂ ಅವರು ಒಮ್ಮೆ ಸಂಸದರೊಂದಿಗೆ ಮಾತನಾಡುತ್ತಾ, PURA – Providing Urban Amenities to Rural Areas ಎಂಬ ಸಂಗತಿಯನ್ನು ಹೇಳಿದರು. ಹಳ್ಳಿಗಳಲ್ಲಿಯೂ ನಗರಗಳಲ್ಲಿ ಸಿಗುವಂಥ ಸವಲತ್ತುಗಳು (ಅದು ಶಿಕ್ಷಣ, ಮಾರುಕಟ್ಟೆ ಮುಂತಾದ ಪರಿಕರಗಳಿರಬಹುದು) ದೊರೆಯುವಂತಾಗಬೇಕು. ಗ್ರಾಮ ವಿಕಾಸವಾದಾಗ ದೇಶ ಸಹಜವಾಗಿ ವಿಕಾಸವಾಗುತ್ತದೆ.
ಗ್ರಾಮ ಭಾರತ
ಕೊರೊನಾದ ಈ ಸಂದರ್ಭದಲ್ಲಿ ಅನೇಕರು ನಗರಗಳಿಂದ ಗ್ರಾಮಗಳಿಗೆ ಹೋಗಿ ವಾಸ ಮಾಡುತ್ತಿದ್ದಾರೆ. ಅನೇಕರು ನಗರಗಳಿಗೆ ಹೋಗಲೋ ಇಲ್ಲೇ ಇರಲೋ ಎಂದು ಯೋಚನೆ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಾವು ಅನೇಕ ಗುಡಿ ಕೈಗಾರಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು. ಉದಾಹರಣೆಗೆ ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಮ್ಮ ಕೆಲವು ಕಾರ್ಯಕರ್ತರು ಗಾಣದ ಮೂಲಕ ಬೆಲ್ಲವನ್ನು ತಯಾರಿಸುವುದನ್ನು ಪ್ರಾರಂಭಿಸಿದರು. ಈ ಮೂಲಕ ಹತ್ತಾರು ಮಂದಿಗೆ ಕೆಲಸ ಸಿಕ್ಕಂತಾಗಿದೆ. ಸಾಂಬಾರು ಪದಾರ್ಥಗಳಿರಬಹುದು, ಮೇಕ್ ಇನ್ ಇಂಡಿಯಾ ಮೂಲಕ ಹಳ್ಳಿಗಳಲ್ಲಿ ತಯಾರಿಸಬಹುದಾದಂಥ ಸಂಗತಿಗಳನ್ನು ಅವರಿಗೆ ಒದಗಿಸಿದಾಗ ಅಥವಾ ಜೋಡಿಸಿದಾಗ ಅವರು ಹಳ್ಳಿಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗುತ್ತದೆ.
ಜೈವಿಕ ಕೃಷಿಗೆ, ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಗೋ ಸಂರಕ್ಷಣೆ ಹೆಚ್ಚು ಒತ್ತು ಕೊಡಬೇಕು. ಗೋವು ಕೇವಲ ಹಾಲು ಕೊಡುವ ಯಂತ್ರವಾಗಿ ಉಳಿದಿಲ್ಲ. ಗೋವು ಗೊಬ್ಬರದಿಂದ ಹಿಡಿದು ಅನೇಕ ರೀತಿಯ ಔಷಧಗಳ ತಯಾರಿಕೆಗೂ ನೆರವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರಧಾನಿಯವರು ಮೇಕ್ ಇನ್ ಇಂಡಿಯಾ ಎಂಬುದನ್ನು ಹೇಳುತ್ತಾ ಬಂದಿದ್ದಾರೆ. ಅಂದರೆ ನಮ್ಮ ದೇಶ ಆಧುನಿಕ ತಂತ್ರಜ್ಞಾನವನ್ನು ಬಳಸಿ, ನಮ್ಮ ದೇಶದಲ್ಲಿಯೇ ಉತ್ಪಾದನೆ ಮಾಡುವಂಥ ಎಲ್ಲ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ನಮ್ಮ ದೇಶಕ್ಕೆ ಆ ಸಾಮರ್ಥ್ಯ ಇದೆ. ಇದಕ್ಕೆ ಉತ್ತಮ ಉದಾಹರಣೆ ಕೊರೊನಾಕ್ಕೂ ಮುನ್ನ ನಮ್ಮದೇಶದಲ್ಲಿ ಮಾಸ್ಕ್‌ಗಳ ತಯಾರಿಯೇ ಇರಲಿಲ್ಲ. ದೊಡ್ಡ ಪ್ರಮಾಣದ ಮಾಸ್ಕ್‌ಗಳ ಅಗತ್ಯತೆ ಎದುರಾಯಿತು. ಇದರ ಪರಿಣಾಮ ನಾವಿಂದು ನಿತ್ಯ ಲಕ್ಷಾಂತರ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದೇವೆ. ಅನೇಕ ರೀತಿಯ ಔಷಧಗಳ ತಯಾರಿಕೆ, ದಿನೋಪಯೋಗಿ ವಸ್ತುಗಳಾದ ಬಟ್ಟೆ, ಸಾಂಬಾರು ಪದಾರ್ಥಗಳನ್ನು ನಾವು ನಮ್ಮ ದೇಶದಲ್ಲಿಯೇ ಉತ್ಪಾದನೆ ಮಾಡುವಂತಾಗಬೇಕು. ಆಗ ಸ್ವಂತ ಬಲದ ಮೇಲೆ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ಇಡೀ ಜಗತ್ತನ್ನೇ ನೆಮ್ಮದಿಯಲ್ಲಿರುವಂತಾಗಬೇಕು(ಸರ್ವೇಜನೋಃ ಸುಖಿನೋ ಭವಂತು) ಎಂಬ ನಮ್ಮ ಪೂರ್ವಜರ ಚಿಂತನೆಯಂತೆ ನಾವು ಯೋಚಿಸಬೇಕು. ಜಗತ್ತಿನಲ್ಲಿರುವ ಎಲ್ಲರೂ ನೆಮ್ಮದಿಯಿಂದ ಇರಬೇಕೆಂಬ ಮನೋಭಾವನೆ, ಆ ದಿಕ್ಕಿನ ಚಿಂತನೆಗಳು ನಡೆಯಬೇಕು. ಭಾರತ ಮತ್ತೊಮ್ಮೆ ಜಗತ್ತಿಗೆ ಬೆಳಕು ಕೊಡುವಂತಾಗಬೇಕು. ಈ ದಿಕ್ಕಿನಲ್ಲಿ ನಾವು ಮುನ್ನಡೆಯೋಣ.
(ಲೇಖಕರು ಪ್ರಧಾನ ಮಾರ್ಗದರ್ಶಕರು, ಸಮರ್ಥ ಭಾರತ)