ಅಪ್ರತಿಮ ಕ್ರಾಂತಿಕಾರಿ ಸುಖದೇವ್

(ಇಂದು ಕ್ರಾಂತಿಕಾರಿ ಸುಖದೇವ್ ಜನ್ಮದಿನ)

– ಮಯೂರಲಕ್ಷ್ಮಿ
ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಕ್ರಾಂತಿಕಾರಿಗಳು. ಅವರ ಬಲಿದಾನವನ್ನು ದೇಶ ಇಂದಿಗೂ ಸ್ಮರಿಸುತ್ತಿದೆ. ಈ ಮೂವರ ಪೈಕಿ ಸುಖದೇವ್ ಅವರ ಪೂರ್ತಿ ಹೆಸರು ಸುಖದೇವ್ ಥಾಪರ್. ಪಂಜಾಬಿನ ಲೂಧಿಯಾನಾದಲ್ಲಿ ಮೇ 15, 1907ರಲ್ಲಿ ರಾಮಲಾಲ್ ಥಾಪರ್ ಮತ್ತು ರಲ್ಲಿದೇವಿ ಅವರ ಪುತ್ರನಾಗಿ ಜನಿಸಿದವರು ಸುಖದೇವ್. ಪಂಜಾಬಿನ ಕ್ರಾಂತಿಕಾರಿ ಪಕ್ಷದಲ್ಲಿ ಕಾರ್ಯಕರ್ತರಾಗಿದ್ದ ರಾಮ್‌ಲಾಲ್‌ ಅವರ ನಿಧನದ ನಂತರ ಸುಖದೇವ್ ಚಿಕ್ಕಪ್ಪ ಲಾಲಾ ಅಚಿಂತ್ಯರಾಮ್ ಮಾರ್ಗದರ್ಶನದಲ್ಲಿ ಬೆಳೆದರು. ಸುಖದೇವ್ ಬಾಲ್ಯದಿಂದಲೇ ಸ್ವತಂತ್ರ ಮನೋಭಾವ ಮತ್ತು ಸಂಘಟನಾ ಚಾತುರ್ಯ ಹೊಂದಿದ್ದರು. ಲಾಹೋರಿನ ನ್ಯಾಷನಲ್ ಕಾಲೇಜ್ ಆವರಣದಲ್ಲಿ ಸ್ನೇಹಿತರೊಡಗೂಡಿ ಸ್ವಾತಂತ್ರ್ಯ ಚಳವಳಿಯ ಕುರಿತು ಚಿಂತನಾ ಸಭೆಗಳನ್ನು ಆಯೋಜಿಸುತ್ತಿದ್ದ ಸಾಹಸಿ. ನಂತರದ ದಿನಗಳಲ್ಲಿ ಭಗತ್ ಸಿಂಗ್, ರಾಜಗುರು ಮುಂತಾದ ಕ್ರಾಂತಿಕಾರಿಗಳೊಡನೆ ‘ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಷಿಯೇಷನ್’(ಎಚ್ಎಸ್ಆರ್‌ಎ) ಸಂಘಟನೆಯಲ್ಲಿಸಕ್ರಿಯರಾದರು. ಸ್ವಾತಂತ್ರ್ಯ ಸಂಗ್ರಾಮದ ಪರಮ ನೇತಾರರಾಗಿದ್ದ ಲಾಲಾ ಲಜಪತ್ ರಾಯ್ ಅವರ ಮೇಲೆ ಹಲ್ಲೆ ನಡೆದು, ಅವರ ನಿಧನಕ್ಕೆ ಕಾರಣವಾಗಿದ್ದ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ಹತ್ಯೆಯಲ್ಲಿ ಭಗತ್ ಸಿಂಗ್, ರಾಜಗುರು, ಆಜಾದ್ ಅವರೊಂದಿಗೆ ಸುಖದೇವ್ ಜೊತೆಗೂಡಿದರು.
ಬ್ರಿಟಿಷರನ್ನು ಹಿಮ್ಮೆಟ್ಟಿಸಲು ಅವಶಕ್ಯವಾಗಿದ್ದ ಬಾಂಬ್ ತಯಾರಿಕೆಗೆ ಕ್ರಾಂತಿಕಾರಿಗಳು ಮುಂದಾದರು. ಸ್ಯಾಂಡರ್ಸ್ ಹತ್ಯೆಯ ನಂತರದ ಅವರ ಗುರಿ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿತ್ತು. ಇದಕ್ಕಾಗಿ ಬಾಂಬ್ ತಯಾರಿಯಲ್ಲಿ ಸುಖದೇವ್‌ರ ಪ್ರಮುಖ ಪಾತ್ರ ನಿರ್ವಹಿಸಿದರು. ಯೋಜನೆಯಂತೆ ಏಪ್ರಿಲ್ 8ರಂದು ದಿಲ್ಲಿಯ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿ ಹಾಲ್‌ನಲ್ಲಿ ಭಗತ್ ಸಿಂಗ್ ಮತ್ತು ಭಗವತಿ ಚರಣ್ ಬಾಂಬ್ ಸ್ಫೋಟಿಸಿದರು. ಯಾವುದೇ ಸಾವು ನೋವುಗಳಾಗದಿದ್ದರೂ ಬ್ರಿಟಿಷರು ಕ್ರಾಂತಿಕಾರಿಗಳ ಚಟುವಟಿಕೆಗಳ ಬಗ್ಗೆ ಆಂತಕ್ಕೊಳಗಾದರು. ಸುಖದೇವ್, ರಾಜಗುರು ಮತ್ತು ಭಗತ್ ಸಿಂಗ್ ಅವರ ಶೋಧವನ್ನು ಬ್ರಿಟಿಷ್ ಸರಕಾರ ಆರಂಭಿಸಿತು. ಇದರಿಂದಾಗಿ ಲಾಹೋರ್‌ಗೆ ತೆರಳಿದ ಸುಖದೇವ್ ಇನ್ನಷ್ಟು ತೀವ್ರ ಬಾಂಬ್ ತಯಾರಿಗೆ ಮುಂದಾದರು. ಪೊಲೀಸರಿಗೆ ಸುಳಿವು ಸಿಕ್ಕಿದ್ದರಿಂದ ಅಲ್ಲಿಂದ ಹೊರಟು ಆಗ್ರಾ ತಲುಪಿದರು. ಅಲ್ಲಿ ಗುಲಾಮ್ ರಸೂಲ್ ವ್ಯಾಪಾರಿಯ ಕಟ್ಟಡದ ನೆಲಮಾಳಿಗೆಯಲ್ಲಿ ರಹಸ್ಯವಾಗಿ ಸ್ಫೋಟಕ ತಯಾರಿ ನಡೆಸಿದರು. ಪಿಕ್ರಿಕ್ ಆಮ್ಲ, ಗನ್-ಹತ್ತಿ ಮತ್ತು ಪಾದರಸದಂಥ ಸೂಕ್ಷ್ಮ ರಾಸಾಯನಿಕಗಳೊಂದಿಗೆ ಹಗಲೂ ರಾತ್ರಿ ಸುಖದೇವ್ ಬಾಂಬ್‌ಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾದರು. ಆದರೆ, ದುರದೃಷ್ಟವಶಾತ್ ಬ್ರಿಟಿಷ್ ಪೊಲೀಸರಿಗೆ ಹೇಗೋ ಈ ಚಟುವಟಿಕೆಗಳ ಕುರಿತು ಮಾಹಿತಿ ದೊರೆಯಿತು. ಎಚ್ಚರಿಕೆಯಿಂದಿರಬೇಕೆಂದು ಸಂಘಟನೆಯ ಸ್ನೇಹಿತರು ಕೊಟ್ಟ ಎಚ್ಚರಿಕೆಯನ್ನೂ ಉಪೇಕ್ಷಿಸಿದ ಸುಖದೇವ್ ತಮ್ಮ ಕೆಲಸ ನಿಲ್ಲಿಸಲಿಲ್ಲ. 1929ರ ಏಪ್ರಿಲ್ 15 ಸುಖದೇವ್ ಇದ್ದ ಕಟ್ಟಡವನ್ನು ಪೊಲೀಸರು ಸುತ್ತುವರಿದರು. ಸುಖದೇವ್‌ರೊಡನೆ ಕಿಶೋರಿಲಾಲ್ ಮತ್ತು ಜೈಗೋಪಾಲ್ ಅವರನ್ನು ಸೆರೆ ಹಿಡಿದು, ಲಾಹೋರ್ ಕಾರಾಗೃಹದಲ್ಲಿಡಲಾಯಿತು. ಸುಖದೇವ್ ತಮ್ಮ ಕೃತ್ಯಗಳನ್ನು ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳು ನಡೆಸಿದ ದಿಟ್ಟ ಹೋರಾಟ ಎಂದು ವಾದಿಸಿದರು. ವಿಚಾರಣೆ ವೇಳೆ ಜೈಗೋಪಾಲ್ ಸಂಘಟನೆ ನಡೆಸುತ್ತಿದ್ದ ಎಲ್ಲ ಕಾರ್ಯಚಟುವಟಿಕೆಗಳ ಬಗ್ಗೆ ಬ್ರಿಟಿಷರಿಗೆ ತಿಳಿಸಿದ. ಕ್ರಾಂತಿಕಾರಿ ಚಟುವಟಿಕೆ, ಸ್ಯಾಂಡರ್ಸ್ ಕೊಲೆ ಮತ್ತು ಅಸೆಂಬ್ಲಿ ಹಾಲ್ ಸ್ಫೋಟಗಳ ಹಿನ್ನೆಲೆಯಲ್ಲಿ ಭಗತ್ ಸಿಂಗ್, ರಾಜಗುರು ಜೊತೆಗೆ ಸುಖದೇವ್ ಅವರಿಗೂ ಮರಣದಂಡನೆ ವಿಧಿಸಲಾಯಿತು. 1931 ಮಾರ್ಚ್ 23ರಂದು ಲಾಹೋರಿನ ಸೆಂಟ್ರಲ್ ಸೆರೆಮನೆಯಲ್ಲಿ ತನ್ನ ಸ್ನೇಹಿತರಾದ ಭಗತ್ ಮತ್ತು ರಾಜಗುರು ಜತೆಯಲ್ಲೇ ಸುಖದೇವ್ ನಗುನಗುತ್ತಾ ನೇಣಗಂಬಕ್ಕೇರಿದರು. ಸುಖದೇವ್ ಭಾರತ ಕಂಡ ಅಪರೂಪದ ಬಲಿದಾನಿ. ಪಂಜಾಬ್‌ನಲ್ಲಿ ಸುಖದೇವ್ ವಾಸಿಸುತ್ತಿದ್ದ ಅವರ ಪೂರ್ವಿಕರ ಕಾಲದ ಮನೆ ನೌಘಾರಾದಲ್ಲಿದ್ದು, ಅಲ್ಲಿ ಅವರ ಸ್ಮರಣಾರ್ಥ ಸ್ಮಾರಕ ನಿರ್ಮಾಣ ಮಾಡಲಾಗಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top