– ಕಾರ್ಖಾನೆಗಳು ತೆರೆದರೂ ಕಾರ್ಮಿಕರು, ಕಚ್ಚಾ ವಸ್ತು ಕೊರತೆ | ಬರುತ್ತಿಲ್ಲ ಹೊಸ ಆರ್ಡರ್
– ವಲಸೆಯದೇ ದೊಡ್ಡ ಹೊಡೆತ | ನೌಕರರಿಗೆ ಸೋಂಕು ತಗುಲಿದರೆ ಮತ್ತೆ ಮುಚ್ಚುವ ಆತಂಕ
– ಸುದರ್ಶನ ಚನ್ನಂಗಿಹಳ್ಳಿ ಬೆಂಗಳೂರು
ಲಾಕ್‌ಡೌನ್ ಸಡಿಲಿಕೆಯಾಗಿ ಕೈಗಾರಿಕೆಗಳ ಮರು ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಟ್ಟು ವಾರ ಕಳೆದರೂ ಉದ್ಯಮಗಳ ಲಾಕ್ ಇನ್ನೂ ಪೂರ್ಣ ಪ್ರಮಾಣದಲ್ಲಿತೆರೆದುಕೊಂಡಿಲ್ಲಮತ್ತು ಸದ್ಯಕ್ಕೆ ತೆರೆಯುವ ಲಕ್ಷಣವೂ ಕಾಣುತ್ತಿಲ್ಲ.
ಒಂದು ಕಡೆ ಕಾರ್ಮಿಕರ ವಲಸೆ, ಇನ್ನೊಂದು ಕಡೆ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಉತ್ಪಾದನೆ ಆರಂಭಕ್ಕೆ ಹಿನ್ನಡೆಯಾಗಿದೆ. ಅದಕ್ಕೆ ಪೂರಕವಾಗಿ ಯಾವುದೇ ಹೊಸ ಆರ್ಡರ್ ಕೂಡಾ ಸಿಗುತ್ತಿಲ್ಲ. ಹೀಗಾಗಿ ತೆರೆದುಕೊಂಡಿರುವ ಸುಮಾರು ಶೇ. 75ರಷ್ಟು ಕೈಗಾರಿಕೆಗಳೂ ತಮ್ಮ ಸಾಮರ್ಥ್ಯದ ಒಂದು ಪಾಲಿನಷ್ಟೂ ಕೆಲಸ ಆರಂಭಿಸಲು ಸಾಧ್ಯವಾಗಿಲ್ಲ.
ವಾಣಿಜ್ಯ ಚಟುವಟಿಕೆಗಳು ನಡೆದರೆ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕೈಗಾರಿಕೆಗಳಿಗೆ ಸರಕಾರ ಅನುಮತಿ ನೀಡಿದೆ. ಆದರೆ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಕೈಗಾರಿಕೆಗಳು ಚೇತರಿಸಿಕೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಕನಿಷ್ಠ ಆರು ತಿಂಗಳು ಕಾಲಾವಕಾಶ ಬೇಕಾಗಲಿದೆ. ಪ್ರಮುಖವಾಗಿ ಅಂತಾರಾಜ್ಯ ಸರಕು ಸಾಗಣೆ ಆರಂಭಗೊಳ್ಳದ ಕಾರಣ ಕಾರ್ಖಾನೆಗಳು ಕಚ್ಚಾ ಪದಾರ್ಥಗಳ ಕೊರತೆ ಎದುರಿಸುತ್ತಿವೆ. ಉತ್ಪಾದನೆ ಮಾಡಲು ಬಿಡಿಭಾಗಗಳು ಲಭ್ಯವಿಲ್ಲ. ಬೆಂಗಳೂರಿನೊಳಗೆ ಕಚ್ಚಾಪದಾರ್ಥಗಳನ್ನು ಸರಬರಾಜು ಮಾಡಿಕೊಳ್ಳಬಹುದು. ಆದರೆ ಹೊರ ಜಿಲ್ಲೆಹಾಗೂ ಹೊರ ರಾಜ್ಯಗಳಿಂದ ಬರಬೇಕಾದ ವಸ್ತುಗಳಿಗಾಗಿ ಕೈಗಾರಿಕೆಗಳು ಎದುರು ನೋಡುತ್ತಿವೆ.
ಇದಕ್ಕೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡದೆ ಇರುವುದರಿಂದ ಕೈಗಾರಿಕೆಗಳಿಗೆ ಪ್ರಮುಖವಾಗಿ ಬೇಕಾದ ಕಚ್ಚಾ ಪದಾರ್ಥಗಳು ಸಿಗುತ್ತಿಲ್ಲ.
ಎಲ್ಲಿಂದ ಬರಬೇಕಿದೆ?
ಕೈಗಾರಿಕೆಗಳಿಗೆ ಬೇಕಾದ ಕೆಮಿಕಲ್ಸ್, ಪ್ರಿಂಟಿಂಗ್ ಪ್ಲೇಟ್ಸ್ ಮುಂಬಯಿನಿಂದ ಬರಬೇಕಿದೆ. ರಾಜ್ಯದಲ್ಲಿ ಪೇಪರ್ ಮಿಲ್ ಇಲ್ಲದ ಕಾರಣ ತಮಿಳುನಾಡಿನಿಂದಲೇ ಬರಬೇಕಿದೆ. ಇನ್ನು ಆಟೊ ಬಿಡಿಭಾಗಗಳು, ಪಂಫ್ಸ್ , ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ , ಮಿಕ್ಸಿ ಮತ್ತು ಗ್ರೈಂಡರ್ ಸೇರಿದಂತೆ ಇತರೆ ಗೃಹೋಪಯೋಗಿ ಉತ್ಪನ್ನಗಳು ಕೊಯಮತ್ತೂರಿನಿಂದ ಬರಬೇಕಿದೆ. ಹಾಗೆಯೇ ಟೆಕ್ಸ್ ಟೈಲ್ಸ್ ಇಂಡಸ್ಟ್ರೀಸ್‌ಗೆ ಮಧುರೈನಿಂದ ಯಾರ್ನ್, ಬಟನ್ಸ್ ಸೇರಿದಂತೆ ಇತರೆ ಕಚ್ಚಾ ಪದಾರ್ಥಗಳು ಸಾಗಣೆಯಾಗಬೇಕಿದೆ. ಕಟ್ಟಡ ಹಾಗೂ ಸಿವಿಲ್ ಕಾಮಗಾರಿಗೆ ಸಿಮೆಂಟ್, ಸ್ಟೀಲ್ ಸಿಗುತ್ತಿದೆ. ಆದರೆ ಪ್ಲೇವುಡ್ ಹಾಗೂ ಮನೆ ನಿರ್ಮಾಣಕ್ಕೆ ಬೇಕಾದ ಇತರೆ ಬಿಡಿ ಭಾಗಗಳು ಸಿಗುತ್ತಿಲ್ಲ.
ಎಷ್ಟು ಉದ್ಯೋಗ ಕಡಿತ?
ಲಾಕ್‌ಡೌನ್, ಆರ್ಥಿಕ ಸ್ಲೋಡೌನ್‌ನಿಂದ ಕೈಗಾರಿಕೆಗಳು ನಷ್ಟದಲ್ಲಿ ಮುಳುಗಿವೆ. ಇದರಿಂದ ಉದ್ಯೋಗ ಕಡಿತ ಆಗಬಹುದು. ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ 8ಲಕ್ಷ ಮಂದಿ ಕಾರ್ಮಿಕರು ಇದ್ದಾರೆ. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ 65 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಒಟ್ಟಾರೆ 1.20 ಕೋಟಿ ಕಾರ್ಮಿಕರು ಇದ್ದಾರೆ. ಪರೋಕ್ಷವಾಗಿ 2 ಕೋಟಿಗೂ ಅಧಿಕ ಮಂದಿ ಕೈಗಾರಿಕೆಗಳನ್ನು ಅವಲಂಬಿಸಿದ್ದಾರೆ. ಕೈಗಾರಿಕೆ ನಷ್ಟದಿಂದ ಇದರಲ್ಲಿ ಶೇಕಡ 40 ರಿಂದ 50 ರಷ್ಟು ಉದ್ಯೋಗ ಕಡಿತ ಆಗಬಹುದು ಎಂದು ಅಸೋಚೆಮ್ ಮಾಜಿ ಅಧ್ಯಕ್ಷ ಸಂಪತ್ ರಾಮನ್ ಹಾಗೂ ಕಾಸಿಯಾ ಅಧ್ಯಕ್ಷ ಕೆ.ರಾಜು ಅಂದಾಜು ಮಾಡುತ್ತಾರೆ.
ಕೈಗಾರಿಕೆಗಳು ಉತ್ಪಾದನೆ ಆರಂಭಿಸಲು ಪ್ರಮುಖವಾಗಿ ಕಚ್ಚಾಪದಾರ್ಥಗಳು ಬೇಕಿದೆ. ಇದಕ್ಕೆ ಸರಕಾರ ಅಂತರ್ ರಾಜ್ಯ ಸರಕು ಸಾಗಣೆಗೆ ಅವಕಾಶ ನೀಡಬೇಕು. ಜತೆಗೆ ಕಾರ್ಮಿಕರಿಗೆ ಊಟ ಸಿಗಲು ಹೋಟೆಲ್ ಆರಂಭಿಸಲು ಅನುಮತಿ ಕೊಡಬೇಕು.
– ಸಿ.ಆರ್.ಜನಾರ್ದನ್ ಅಧ್ಯಕ್ಷರು, ಎಫ್‌ಕೆಸಿಸಿಐ
ಬೆಂಗಳೂರಿಗೆ ಬಂದರೆ 14 ದಿನ ಕ್ವಾರಂಟೈನ್ ಮಾಡುತ್ತಾರೆ ಹಾಗೂ ಸೋಂಕು ಹರಡಬಹುದೆಂಬ ಭಯದಿಂದ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಸುಧಾರಿಸಲು ಇನ್ನಷ್ಟು ಸಮಯ ಬೇಕು.
– ಕೆ.ರಾಜು, ಅಧ್ಯಕ್ಷರು, ಕಾಸಿಯಾ
ಕೈಗಾರಿಕೆಗಳು ತೆರೆದರೂ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿವೆ. ಬ್ಯಾಂಕ್‌ಗಳಿಂದ ಹೆಚ್ಚುವರಿ ಶೇ.10ರಷ್ಟು ಸಾಲು ಕೊಡಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಪ್ರಕಟಿಸಿದ್ದರೂ ಅದಕ್ಕೆ ವಿಧಿಸಿರುವ ಷರತ್ತುಗಳಿಂದ ಕಾರ್ಖಾನೆಗಳು ಸಾಲ ಸಿಗುತ್ತಿಲ್ಲ.
– ಸಂಪತ್ರಾಮನ್, ಮಾಜಿ ಅಧ್ಯಕ್ಷರು, ಅಸೋಚೆಮ್ ರಾಜ್ಯ ಘಟಕ
ಕೈಗಾರಿಕೆಗಳ ಉತ್ಪಾದನೆಗೆ ಅಡ್ಡಿ ಏನು?
ಹೊರ ರಾಜ್ಯದಿಂದ ಕಚ್ಚಾ ಪದಾರ್ಥ ಬರುತ್ತಿಲ್ಲ
ಕಾರ್ಖಾನೆಗಳಿಗೆ ಹೊಸ ಆರ್ಡರ್ ಸಿಗುತ್ತಿಲ್ಲ
ತರಬೇತಿ ಹೊಂದಿರುವ ಕಾರ್ಮಿಕರ ಕೊರತೆ
ನಷ್ಟಕ್ಕೆ ಬಿದ್ದಿರುವ ಕೈಗಾರಿಕೆಗಳಿಗೆ ಸೂಕ್ತ ಸಾಲ
ಕಾರ್ಮಿಕರ ಸಮಸ್ಯೆ ಏನು?
ಉತ್ತರ ಭಾರತೀಯರು, ರಾಜ್ಯದ ಅನ್ಯ ಭಾಗದವರ ವಲಸೆ
ಹೊರರಾಜ್ಯದಿಂದ ಮರಳಿ ಬಂದರೆ ಕ್ವಾರಂಟೈನ್‌ನಲ್ಲಿಡುವ ಭಯ
ಹೋಟೆಲ್ ತೆರೆಯದ ಕಾರಣ ಕಾರ್ಮಿಕರಿಗೆ ಊಟ ಸಿಗುತ್ತಿಲ್ಲ
ಊರಲ್ಲೇ ಇರುವ ಕಾರ್ಮಿಕರಿಗೂ ಮನೆಯಲ್ಲಿ ನಿರ್ಬಂಧ
ಹೊಸ ಆರ್ಡರ್ ಏಕೆ ಸಿಗುತ್ತಿಲ್ಲ?
ಉತ್ಪನ್ನಗಳನ್ನು ಖರೀದಿ ಮಾಡುವವರಿಲ್ಲ
ಜನರ ಬಳಿ ಹಣ ಇಲ್ಲ; ಇದ್ದರೂ ಖರೀದಿಗೆ ಹಿಂದೇಟು
ವಾಣಿಜ್ಯ ಚಟುವಟಿಕೆ ಪೂರ್ಣವಾಗಿ ಆರಂಭವಾಗಿಲ್ಲ
ಎಲ್ಲ ಚಟುವಟಿಕೆ ಶುರುವಾದರೆ ಮಾತ್ರ ಸುಧಾರಣೆ
ಸರಕಾರ ಏನು ಮಾಡಬಹುದು?
ಲಾಕ್‌ಡೌನ್ ಸಡಿಲಿಸಿ ಕಾರ್ಮಿಕರ ಸಂಚಾರಕ್ಕೆ ಅನುವು
ಕಚ್ಚಾ ವಸ್ತು ಪೂರೈಕೆಗಾಗಿ ಸರಕು ಸಾಗಣೆಗೆ ಅವಕಾಶ
ಕಾರ್ಮಿಕರಿಗೆ ಆಹಾರ ಸಿಗಲು ಹೋಟೆಲ್ ತೆರೆಯಬೇಕು