ಕೈಗಾರಿಕೆಗಳಿಗೆ ಉತ್ತೇಜನ ನೀಡಿ – ಆರ್ಥಿಕತೆ ಚುರುಕಾಗಲು ಉದ್ಯಮ ಅಗತ್ಯ

ಹಂತಹಂತವಾಗಿ ಲಾಕ್‌ಡೌನ್ ಸಡಿಲಿಸುತ್ತಿರುವ ಸರಕಾರ, ಕೈಗಾರಿಕೆಗಳನ್ನು ಆರಂಭಿಸಲು ಅನುಮತಿ ನೀಡಿದೆ. ನಿಗದಿತ ಸಿಬ್ಬಂದಿಯಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಿದೆ. ಆದರೆ ಕೈಗಾರಿಕೆಗಳು ಈ ಎರಡು ತಿಂಗಳ ಲಾಕ್‌ಡೌನ್ ಸೃಷ್ಟಿಸಿದ ಬಹಳ ಆಳವಾದ ಸಮಸ್ಯೆಗಳಿಂದ ನರಳುತ್ತಿವೆ. ಈ ಅವಧಿಯಲ್ಲಿ ಕೆಲಸ ನಿರ್ವಹಿಸದ ಕಾರಣದಿಂದ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಿದೆ. ತಮ್ಮ ಉತ್ಪನ್ನಗಳಿಗೆ ಹೊರಗೆ ಬೇಡಿಕೆ ಯಾವ ಪ್ರಮಾಣದಲ್ಲಿದೆ ಎಂಬುದು ಗೊತ್ತಿಲ್ಲದ ಸನ್ನಿವೇಶದಲ್ಲಿ ಕೈಗಾರಿಕೆಗಳು ಕೆಲಸ ಆರಂಭಿಸಬೇಕಿದೆ. ಕಾರ್ಮಿಕರ ಕೊರತೆ ತೀವ್ರವಾಗಿದೆ. ಸಾರಿಗೆ ಸಂಪರ್ಕದ ನಿರ್ಬಂಧದಿಂದ ಕಚ್ಚಾವಸ್ತುಗಳ ಕೊರತೆ ಕಾಡುತ್ತಿದೆ. ಕಳೆದೆರಡು ತಿಂಗಳಿನಿಂದ ಯಾವುದೇ ಹಣಕಾಸಿನ ವಹಿವಾಟು ಇಲ್ಲದ ಕಾರಣ ಹೂಡಿಕೆಗೂ ಹಣ ಲಭ್ಯವಾಗುತ್ತಿಲ್ಲ. ಕೈಗಾರಿಕಾ ಕ್ಷೇತ್ರ ಇಂಥ ಹಲವು ಸಂಕಟಗಳ ಆಗರವಾಗಿದೆ.
ಇಂಥ ಲಾಕ್‌ಡೌನ್‌ಗಳಿಂದ ದೊಡ್ಡ ಹೊಡೆತ ತಿನ್ನುವುದು ಸಣ್ಣ ಹಾಗೂ ಮಧ್ಯಮ ಸ್ತರದ ಕೈಗಾರಿಕೆಗಳು. ಇವುಗಳ ಹೂಡಿಕೆ, ವ್ಯವಹಾರದ ವ್ಯಾಪ್ತಿ, ಕಾರ್ಮಿಕರಿಗೆ ನೀಡುವ ಸೌಲಭ್ಯ- ಇವೆಲ್ಲವೂ ಸೀಮಿತವಾಗಿದ್ದು ಪರಿಸ್ಥಿತಿ ಚೆನ್ನಾಗಿದ್ದಾಗ ತಕ್ಕಮಟ್ಟಿಗೆ ಲಾಭಕರವಾಗಿ ನಡೆದುಕೊಂಡು ಹೋಗುತ್ತವೆ. ಬೃಹತ್ ಕಂಪನಿಗಳು ದೊಡ್ಡ ಹೊಡೆತಗಳನ್ನೂ ತಾಳಿಕೊಂಡು ಬದುಕಿ ಉಳಿಯಬಲ್ಲವು; ಹಲವು ಕಡೆಗಳಿಂದ ನೆರವು ಪಡೆಯಬಲ್ಲವು. ಆದರೆ ಸಣ್ಣ ಉದ್ಯಮಗಳು ಒಮ್ಮೆ ನೆಲಕಚ್ಚಿದರೆ ಮೇಲೇಳುವುದೇ ಕಷ್ಟ. ಇವು ಸಾಮಾನ್ಯವಾಗಿ ವೈಯಕ್ತಿಕ ಹೂಡಿಕೆಗಳ ಮೇಲೆ ನಿಂತಿರುವುದರಿಂದ ನಷ್ಟದ ಭಾರದಲ್ಲಿ ಕುಸಿಯಲು ಆರಂಭವಾದರೆ, ಇಂಥ ಸಾವಿರಾರು ಕಿರು ಉದ್ಯಮಗಳನ್ನು ನೆಚ್ಚಿಕೊಂಡಿರುವ ಸಮಾಜ ವ್ಯವಸ್ಥೆಯೇ ಕುಸಿದುಬೀಳುತ್ತದೆ. ನಮ್ಮ ದೇಶದಲ್ಲಿ ಕೃಷಿ ವಲಯವನ್ನು ಬಿಟ್ಟರೆ, ಬಲು ದೊಡ್ಡ ಸಂಖ್ಯೆಯ ನೌಕರರು ಇರುವುದು ಕೈಗಾರಿಕೆ ವಲಯದಲ್ಲಿ. ಕೃಷಿ ಆಧಾರಿತ ಗ್ರಾಮೀಣ ವ್ಯವಸ್ಥೆಯಿಂದ ಹೊರಬೀಳುವ ಕೌಶಲರಹಿತರು, ಮಧ್ಯಮ ಕುಶಲಿಗರು ನೆಚ್ಚಿಕೊಳ್ಳುವುದು ಕೂಡ ಕೈಗಾರಿಕೆಗಳನ್ನು. ಇಂಥ ಹೊತ್ತಿನಲ್ಲಿ ಸರಕಾರ ಈ ಉದ್ಯಮಗಳ ಹಾಗೂ ಕಾರ್ಮಿಕರ ನೆರವಿಗೆ ಧಾವಿಸಬೇಕಿದೆ.
ಸರಕಾರ ಶ್ರಮಿಕ ವರ್ಗಕ್ಕೆ ನೆರವು ಘೋಷಿಸಿದೆ; ಆದರೆ ಕೈಗಾರಿಕೆಗಳ ನೆರವಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಿಲ್ಲ. ಕಾರ್ಮಿಕರ ನೆರವಿಗೆ ಸರಕಾರ ಬಂದಿರುವುದು ಸ್ವಾಗತಾರ್ಹ. ಆದರೆ ಕಾರ್ಮಿಕರಿಗೆ ನಿರಂತರ ವೇತನದ, ಬದುಕಿನ ಅವಕಾಶ ಕಲ್ಪಿಸುವ ಕೈಗಾರಿಕೆಗಳು ಬದುಕಿ ಉಳಿಯದಿದ್ದರೆ ಕಾರ್ಮಿಕರು ಉಳಿಯಲಾರರು. ಹೀಗಾಗಿ ಸರಕಾರ ಕೈಗಾರಿಕೆಗಳ ಪುನಶ್ಚೇತನಕ್ಕೆ ಒಂದು ಸಮರ್ಪಕವಾದ ಕ್ರಿಯಾಯೋಜನೆಯೊಂದಿಗೆ ಹೆಜ್ಜೆ ಮುಂದಿಡುವುದು ಅಗತ್ಯವಾಗಿದೆ. ಅತಿಯಾದ ಸಂಕಷ್ಟದಲ್ಲಿರುವ ವಲಯಗಳನ್ನು ಗುರುತಿಸಿ ಅವುಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಅದು ಸರಿಯಾದ ಕಡೆಗೆ ತಲುಪಿ ತಳಮಟ್ಟದವರೆಗೆ ಲಾಭವಾಗುವಂತೆ ಅನುಷ್ಠಾನಗೊಳ್ಳಬೇಕು. ಹಣಕಾಸಿನ ಸಂಕಷ್ಟದಲ್ಲಿರುವ ಉದ್ದಿಮೆಗಳಿಗೆ ಬ್ಯಾಂಕ್ ಸಾಲ ಸರಳವಾಗಿ ದೊರೆಯಲು ಅವಕಾಶ ಮಾಡಿಕೊಡಬೇಕು. ಬಿಡಿಭಾಗಗಳ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಿರ್ದಿಷ್ಟ ಕಾಲಾವಧಿಗೆ ತೆರಿಗೆ ವಿನಾಯಿತಿ, ವಿದ್ಯುತ್ ಬಿಲ್‌ಗಳಲ್ಲಿ ವಿನಾಯಿತಿ ನೀಡುವುದು ಕೂಡ ಎಷ್ಟೋ ನೆರವಾಗಬಹುದು. ಕಾರ್ಮಿಕರ ವಾಪಸಾತಿ ಸಾಧ್ಯವಾಗಬೇಕಾದರೆ, ಇದುವರೆಗಿನ ಕಹಿ ಅನುಭವಗಳನ್ನು ಮರೆಸುವ ಸಮರ್ಪಕ ಸಂಬಳ ಸಾರಿಗೆಗೆ ಭರವಸೆ ಅವರಿಗೆ ಸಿಗಬೇಕಿದೆ.
ಇದೆಲ್ಲದಕ್ಕೂ ಸಮರ್ಪಕವಾದ ಒಂದು ಕ್ರಿಯಾಯೋಜನೆ ಸಿದ್ಧವಾಗುವುದು ಮತ್ತು ಪ್ರಾಮಾಣಿಕರಾದ ಅಧಿಕಾರಿಗಳ ಕೈಯಲ್ಲಿ ಅದು ಅನುಷ್ಠಾನಗೊಳ್ಳುವುದು ಮುಖ್ಯ. ಈ ಕೈಗಾರಿಕೆಗಳು ನಮ್ಮ ಆರ್ಥಿಕತೆಯ ಸ್ತಂಭಗಳಲ್ಲಿ ಒಂದು ಹಾಗೂ ದೊಡ್ಡ ಸಂಖ್ಯೆಯ ಕಾರ್ಮಿಕರಿಗೆ ನೌಕರಿ ಕಲ್ಪಿಸುವ ನೆಲೆಗಳಾಗಿರುವುದರಿಂದ ಮುಂದಿನ ದಿನಗಳಲ್ಲಿ ಆರ್ಥಿಕತೆ ಪುನಶ್ಚೇತನಗೊಳ್ಳಬೇಕಿದ್ದರೆ ಇವುಗಳು ಜೀವಂತಿಕೆಯಿಂದ ನಳನಳಿಸುವ ಅಗತ್ಯವಂತೂ ಖಂಡಿತ ಇದೆ. ಸರಕಾರ ಈಗ ಸಾಲ ಮಾಡಬೇಕಾಗಿ ಬರಬಹುದು; ಆದರೆ ಆರ್ಥಿಕ ಪುನಶ್ಚೇತನದ ಸಂದರ್ಭದಲ್ಲಿ ಈ ಸಹಾಯಕ್ಕೆ ಪ್ರತಿಯಾಗಿ ಸುಂಕ ವಸೂಲಿ ಮಾಡುವ ಸಾಧ್ಯತೆಯಂತೂ ಇದ್ದೇ ಇದೆಯಷ್ಟೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top