– ಡಾ.ರೋಹಿಣಾಕ್ಷ ಶಿರ್ಲಾಲು.
I am a thorough patriot.I shall relinquish all happiness and sacrifice my life for my country ಎಂದು ತನ್ನ ಬದುಕನ್ನು ರಾಷ್ಟ್ರ ಸಮರ್ಪಿಸಿದ ಧೀರ ದಾಮೋದರ್ ಹರಿ ಚಾಪೇಕರ್. ಒಂದೇ ತಾಯಿಯ ಮೂವರು ಮಕ್ಕಳು ಮಾತೃಭೂಮಿಯ ದಾಸ್ಯ ಮುಕ್ತಿಗಾಗಿ ನಡೆಸಿದ ಕ್ರಾಂತಿಯಜ್ಞಕ್ಕೆ ತಮ್ಮನ್ನು ತಾವೇ ಆಹುತಿ ನೀಡಿದ ಹುತಾತ್ಮರೆಂದರೆ ದಾಮೋದರ್ ಹರಿ ಚಾಪೇಕರ್, ಬಾಲಕೃಷ್ಣ ಚಾಪೇಕರ್ ಮತ್ತು ವಾಸುದೇವ ಚಾಪೇಕರ್. 1898-1899 ರ ಅವಧಿಯೊಳಗೆ ಮೂರು ಜನ ಸಹೋದರರು ಗಲ್ಲಿನ ಉರುಳಿಗೆ ಕೊರಳೊಡ್ಡಿದ್ದರು. ಹೀಗೆ ಭಾರತವನ್ನು ಪರಕೀಯ ಆಳ್ವಿಕೆಯ ಉರುಳಿನಿಂದ ಬಿಡುಗಡೆಗೊಳಿಸಲು ಹುತಾತ್ಮರಾದವರು ಅದೆಷ್ಟು ವೀರರೋ? ಸ್ವಾತಂತ್ರ್ಯ ಹೋರಾಟಕ್ಕೆ ಇನ್ನೂ ಮಹಾತ್ಮ ಗಾಂಧೀಜಿಯವರ ಪ್ರವೇಶ ಆಗುವ ಪೂರ್ವದಲ್ಲೇ(1918 ಗಾಂಧಿ ಪ್ರವೇಶ), ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಝಾದ್ ಹುಟ್ಟುವುದಕ್ಕೂ ಮೊದಲೆ (1906 ಹುಟ್ಟಿದ್ದು), ಮದನ್ ಲಾಲ್
ಧೀಂಗ್ರಾನ ಬಲಿದಾನಕ್ಕೂ ಪೂರ್ವದಲ್ಲೇ(1909 ಬಲಿದಾನ), ಸ್ವಾತಂತ್ರ್ಯ ವೀರ ಸಾವರ್ಕರ್ ಕ್ರಾಂತಿಕಾರಿಗಳನ್ನು ನಿರ್ಮಾಣ ಮಾಡುವುದಕ್ಕಾಗಿಯೇ ಅಭಿನವ ಭಾರತ ಸ್ಥಾಪನೆ ಮಾಡುವ ಮೊದಲೇ(1904) ಈ ದೇಶದ ಮೂವರು ಸಹೋದರರು ಸ್ವಯಂ ಸ್ಫೂರ್ತಿಯಿಂದ ಸಮರ ಭೂಮಿಗಿಳಿದು ಹುತಾತ್ಮರಾಗಿದ್ದರು. ಆಧ್ಯ ಕ್ರಾಂತಿಕಾರಿ ವಾಸುದೇವ ಬಲವಂತ ಫಡ್ಕೆ 1883ರಲ್ಲಿ ಬಲಿದಾನ ಮಾಡಿದ ಮರಾಠರ ವೀರ ಭೂಮಿಯಲ್ಲಿ ಜನ್ಮಪಡೆದ ಈ ಸಹೋದರರು ಮಹಾರಾಷ್ಟ್ರದಲ್ಲಿ ಕ್ರಾಂತಿಕಾರಿ ಚಟುವಟಿಕೆಗೆ ಮತ್ತೊಮ್ಮೆ ನಾಂದಿಹಾಡಿದ್ದರು.
ಚಾಪೇಕರ್ ಸಹೋದರರ ತಂದೆ ಹರಿಭಾವು ಹರಿಕಥನಕಾರರು. ತಂದೆಯ ಜತೆಗೆ ಬಾಲಕ ದಾಮೋದರ್ ಚಾಪೇಕರ್ ಹಾಡು ಕೇಳುತ್ತಾ, ಹಾಡುತ್ತಾ ಅನೌಪಚಾರಿಕವಾಗಿಯೇ ಅಪಾರವಾದ ಜ್ಞಾನವನ್ನು ಪಡೆದಿದ್ದ. ಈ ಸಹೋದರರು ಆಟವಾಡುವ ವಯಸ್ಸಿನ ತಾರುಣ್ಯದ ಯುವಕರನ್ನು ಸೆಳೆಯುವುದಕ್ಕಾಗಿ ಚಾಪೇಕರ್ ಕ್ಲಬ್ ಸ್ಥಾಪಿಸುತ್ತಾರೆ. ಆಟದ ಜತೆಗೆ ಅನೇಕ ವೀರರ ಹೋರಾಟದ ಕಥೆಗಳನ್ನು ಹೇಳುತ್ತಾ, ತರುಣರಲ್ಲಿ ಸ್ವಾತಂತ್ರ್ಯದ ಸ್ಫೂರ್ತಿಯನ್ನು ತುಂಬಿಸುತ್ತಿದ್ದರು. ಪುಣೆಯ ಶಾಲೆಗಳಿಗೆ ಭೇಟಿಕೊಟ್ಟು ಕ್ಞಾತ್ರಪವೃತ್ತಿಯ ವಿದ್ಯಾರ್ಥಿಗಳನ್ನು ಆಕರ್ಷಿಸಿ ತಮ್ಮ ಕ್ಲಬ್ಗೆ ಸೇರಿಸಿಕೊಳ್ಳುತ್ತಾರೆ. ಅವರೆಲ್ಲರದೂ ಒಂದೇ ಧ್ಯಾನ, ಒಂದೇ ಗುರಿ. ತಮ್ಮ ಪ್ರಾಣವನ್ನು ರಾಷ್ಟ್ರದ ಬಿಡುಗಡೆಗಾಗಿ ಸಮರ್ಪಿಸಿಕೊಳ್ಳುವು!.
ದಾಮೋದರ ಶಿವಾಜಿ, ಗಣೇಶ ಉತ್ಸವಗಳಲ್ಲಿ ಭಾರತದ ಹಿರಿಮೆಯನ್ನು ಸಾರುವ, ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡ ಬಗೆಯನ್ನು ಹಾಡಿನ ರೂಪದಲ್ಲಿ ಹೇಳುತ್ತಿದ್ದ. ಪೂನಾದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯವಾದಿ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಸಹೋದರರಿಗೆ ವಾಸುದೇವ ಬಲವಂತ ಫಡ್ಕೆಯ ಬಲಿದಾನ ಪ್ರೇರಣೆಯ ಕಿಡಿಯಾಗಿತ್ತು. ಬ್ರಿಟಿಷ್ ಪ್ರತಿರೋಧ ಪರಂಪರೆಯನ್ನು ಮುಂದುವರಿಸುವ ಸಂಕಲ್ಪ ಅವರದ್ದಾಗಿತ್ತು. ತಿಲಕರ ಪ್ರೆರಣಾದಾಯಿ ನುಡಿಗಳು ಅವರ ಕ್ರಾಂತಿಯ ಚಿಂತನೆಗೆ ಚೈತನ್ಯವನ್ನೆರೆದಿತ್ತು.
ಈ ಸಹೋದರರು ಯಾವುದೋ ಸಾಂದರ್ಭಿಕ ಘಟನೆಯಿಂದ ಉನ್ಮತ್ತರಾಗಿ ಕ್ರಾಂತಿಯ ದಾರಿ ಹಿಡಿದವರಲ್ಲ. ಹಿಂಸೆಯಿಂದ ಆನಂದಿಸುವುದಕ್ಕಾಗಿ ಬ್ರಿಟಿಷ್ ಅಧಿಕಾರಿಯ ಮೇಲೆ ಗುಂಡು ಹೊಡೆದವರಲ್ಲ. ಅವರ ಕ್ರಾಂತಿಯ ನಿರ್ಧಾರದ ಹಿಂದೆ ತೀವ್ರಸ್ವರೂಪದ ವೈಚಾರಿಕ ಸಂವೇದನೆಯೊಂದಿತ್ತು. ದುರಾದೃಷ್ಟವೆಂದರೆ ಬ್ರಿಟಿಷ್ ಅಧಿಕಾರಿಗಳು ಅವರ ಅನುಕೂಲಕ್ಕಾಗಿ ಕ್ರಾಂತಿಕಾರಿಗಳನ್ನು ಭಯೋತ್ಪಾದಕರು ಎಂದು ಕರೆದರು. ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸಕಾರರೂ ವಸಾಹತುಶಾಹಿ ಮಾನಸಿಕತೆಯಿಂದ ಹೊರಬಾರದ ಪರಿಣಾಮ ಕ್ರಾಂತಿಕಾರಿಗಳು ಭಯೋತ್ಪಾದಕರೇ ಆಗಿ ಉಳಿದರು! ಕ್ರಾಂತಿಕಾರಿಗಳನ್ನು ಗೌರವಿಸುವವರು ಎಂದು ಕೊಂಡವರೂ ಕೂಡ ಅವರು ಬಾಂಬ್ ಎಸೆದ, ಗುಂಡಿನ ದಾಳಿ ಮಾಡಿದ ,ಕೊನೆಗೆ ಗಲ್ಲಿಗೇರಿದ ಪ್ರಸಂಗವನ್ನು ವರ್ಣಿಸುತ್ತಾರೆಯೇ ಹೊರತು ಆ ನಿರ್ಧಾರವು ಬೆಳೆದ ತಾರ್ಕಿಕ ಹಾಗೂ ತಾತ್ವಿಕ ಕಾರಣಗಳನ್ನು ಮರೆತುಬಿಡುತ್ತಾರೆ. ಚಾಪೇಕರ್ ಸಹೋದರರ ಬ್ರಿಟಿಷ್ ವಿರೋಧದ ಹಿಂದೆಯೂ ಮಹತ್ವದ ಕಾರಣಗಳಿತ್ತು ಎನ್ನುವುದನ್ನು ಮರೆಯಬಾರದು.
ಬ್ರಿಟಿಷ್ ಆಳ್ವಿಕೆ ಭಾರತದಲ್ಲಿ ಕೇವಲ ರಾಜಕೀಯ ಪರಾಧೀನತೆಯನ್ನಷ್ಟೇ ಹುಟ್ಟುಹಾಕಿದ್ದಲ್ಲ. ಅದು ಭಾರತವನ್ನು ಸಾಮಾಜಿಕ ಹಾಗೂ ಧಾರ್ಮೀಕ ಪರಾಧೀನತೆಗೂ ಕೊಂಡೊಯ್ಯುತ್ತಿರುವುದು ಅರಿವಾಗುತ್ತದೆ. ಬ್ರಿಟಿಷರು ಜಾರಿಗೊಳಿಸಿದ ಶಿಕ್ಷಣವನ್ನು ಪಡೆಯುತ್ತಿರುವ ಭಾರತೀಯರು ನಿಧಾನವಾಗಿ ತಮ್ಮ ಪರಂಪರೆಯ ಮೌಲ್ಯಗಳಿಂದ ದೂರವಾಗುತ್ತಿರುವುದನ್ನು ಗುರುತಿಸುತ್ತಾರೆ. ಜತೆಗೆ ಈ ಶಿಕ್ಷಣ ಭಾರತೀಯರ ನೈತಿಕ ಅವನತಿಗೂ ಕಾರಣವಾಗುತ್ತಿರುವುದರ ಬಗೆಗೆ ಚಿಂತಿತರಾಗುತ್ತಾರೆ. “The educated are invariably addicted to vice. This may probably be the effect of liberal education” (Autobiography of Damodar Hari Chapekar) ಪರಿಣಾಮವಾಗಿ ಭಾರತೀಯರು ತಮ್ಮ ನೆಲದ ಪರಂಪರೆಗೇ ಪರಕೀಯರಾಗುತ್ತಿದ್ದಾರೆ ಅಭಿಪ್ರಾಯಪಡುತ್ತಾರೆ. ಭಾರತೀಯರನ್ನು ಅವರ ಧಾರ್ಮಿಕ ನಂಬಿಕೆಯಿಂದ ಈ ಇಂಗ್ಲಿಷ್ ಶಿಕ್ಷಣವು ದೂರಗೊಳಿಸುತ್ತಾ ಅವರನ್ನು ಸತ್ವಹೀನರನ್ನಾಗಿಸುತ್ತದೆ ಎನ್ನುತ್ತಾರೆ ದಾಮೋದರ್ ಚಾಪೇಕರ್. ಜತೆಗೆ ಬ್ರಿಟಿಷ್ ಆಡಳಿತ ಎನ್ನುವುದು ಭಾರತೀಯರ ಕ್ರೈಸ್ತೀಕರಣಕ್ಕೆ ದಾರಿ ಆಗುತ್ತಿರುವುದನ್ನು ಗುರುತಿಸುತ್ತಾರೆ. ಸರಕಾರಿ ಪ್ರಾಯೋಜಿತ ಮಿಶನರಿಗಳು ಮತಾಂತರವನ್ನು ತೀವ್ರ ಪ್ರಮಾಣದಲ್ಲಿಮಾಡಲು ಕಾರ್ಯಪ್ರವೃತ್ತರಾಗಿರುವುದರ ಬಗ್ಗೆ ಅವರಿಗೆ ಆತಂಕವಿತ್ತು. ಮಿ.ರಾರಯಂಡ್ ಪ್ಲೇಗ್ ಹರಡುವಿಕೆಯನ್ನು ತಡೆಗಟ್ಟಬೇಕಾಗಿದ್ದ ಬ್ರಿಟಿಷ್ ಅಧಿಕಾರಿ ರೋಗದ ಭಯಾನಕತೆಯ ನಡುವೆಯೇ ಹಿಂದೂಗಳ ಜತೆಗೆ ನಡೆದುಕೊಳ್ಳುವ ರೀತಿ ಈ ಸಹೋದರರು ಬ್ರಿಟಿಷ್ ಆಳ್ವಿಕೆಯನ್ನು ತೀವ್ರವಾಗಿ ದ್ವೇಷಿಸುವಂತೆ ಮಾಡಿತ್ತು. ರಾರಯಂಡ್ನ ನಡವಳಿಕೆ ಬ್ರಿಟಿಷರ ಹಿಂದೂ ವಿರೋಧಿ ಭಾವನೆಯ ಪ್ರತೀಕ ಎನ್ನುತ್ತಾರೆ. ಆತ ದೇಗುಲಗಳ ಒಳಗೆ ನುಗ್ಗಿ ಅದರ ಪಾವಿತ್ರ್ಯತೆಯನ್ನು ಕೆಡಿಸಿದ್ದಾಗಲೀ, ವಿಗ್ರಹಗಳನ್ನು ಭಗ್ನಗೊಳಿಸಿದ್ದಾಗಲೀ, ಮನೆಯೊಳಗೆ ಪ್ರವೇಶಿಸಿ ಮಹಿಳೆಯರನ್ನು ಅವಮಾನಿಸಿದ್ದಾಗಲೀ, ಧಾರ್ಮಿಕ ಗ್ರಂಥಗಳನ್ನು ಅಪಮಾನಗೊಳಿಸಿದ್ದಾಗಲೀ ಒಪ್ಪುವಂತ ನಡವಳಿಕೆಗಳಾಗಿರಲಿಲ್ಲ. ಚಾಪೇಕರ್ ಸಹೋದರರ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಇದೂ ಕೂಡ ಒಂದು ಪ್ರಮುಖ ಕಾರಣವಾಗಿತ್ತು.
ಬ್ರಿಟಿಷ್ ಆಳ್ವಿಕೆ ಭಾರತೀಯರನ್ನು ನಿರಂತರವಾಗಿ ಹಿಂಸಿಸುತ್ತಾ ಬಂದಿದೆ.
“ A system of administration so cruel as chat of the English cannot, if search be made , be found , in any region of this globe” ಎನ್ನುತ್ತಾರೆ. ಅಂದರೆ ಈ ಆಡಳಿತ ಎಷ್ಟು ಕ್ರೂರವಾಗಿದೆ ಎಂದರೆ ಜಗತ್ತಿನಲ್ಲಿ ಇನ್ನೆಲ್ಲೇ ಹುಡುಕಿದರು ಇದಕ್ಕಿಂತ ಅಮಾನವೀಯ ಹಾಗೂ ಕ್ರೂರವಾದ ಆಡಳಿತ ಸಿಗಲಾರದು! ಜನರನ್ನು ಒಡೆದು ಆಳುತ್ತಾ ಸಮುದಾಯಗಳ ನಡುವೆ ಅಪನಂಬಿಕೆಯನ್ನು ಹುಟ್ಟಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ. ಭಾರತೀಯರ ಧಾರ್ಮಿಕ ಭಾವನೆಗಳಲ್ಲೂ ಹಸ್ತಕ್ಷೇಪವನ್ನು ಮಾಡುತ್ತಿರುವ, ಜನರನ್ನು ಹಿಂಸಿಸುವ ನಡವಳಿಕೆಯ ಈ ಬ್ರಿಟಿಷರನ್ನು ಭಾರತದಿಂದ ಹೊರಗೆ ಅಟ್ಟಬೇಕಾದರೆ ಭಾರತೀಯರು ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಡೆಸಬೇಕಾಗಿದೆ, ಅದಕ್ಕಾಗಿ ಬಲಿದಾನವನ್ನು ಮಾಡುವ ಸಂದರ್ಭ ಒದಗಿ ಬಂದರೆ ಅದನ್ನೂ ನಗುನಗುತ್ತಲೇ ಸ್ವೀಕರಿಸಬೇಕೆಂಬ ಸಂಕಲ್ಪ ಅವರದ್ದಾಗಿತ್ತು. ತಾವೇ ರಚಿಸಿದ ಶ್ಲೋಕವೊಂದರಲ್ಲಿಈ ಭಾವನೆಯನ್ನು ಸ್ಪಷ್ಟವಾಗಿಯೇ ದಾಖಲಿಸಿದ್ದಾರೆ ಕೂಡ.
ಸ್ವಾತಂತ್ರ್ಯ ಹೋರಾಟಕ್ಕಾಗಿ ಹುಟ್ಟುಪಡೆದ ಸಂಸ್ಥೆ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದ್ದ ಕಾಂಗ್ರೆಸ್ನ ಹುಟ್ಟು ಮತ್ತು ಕಾರ್ಯವಿಧಾನದ ಬಗ್ಗೆ ಅವರಿಗೆ ತೀವ್ರವಾದ ಆಕ್ಷೇಪವಿತ್ತು. ಕಾಂಗ್ರೆಸ್ನ ಕಾರ್ಯವಿಧಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬರುತ್ತದೆ ಎನ್ನುವ, ಭಾಷಣ- ಸಂವಾದಗಳೆನ್ನುವ ಕಾಂಗ್ರೆಸ್ನ ನಡವಳಿಕೆಯಿಂದ ಸ್ವಾತಂತ್ರ್ಯ ಸಂಪಾದಿಸಬಹುದೆಂಬ ಭರವಸೆಯನ್ನು ಚಾಪೇಕರ್ ಸಹೋದರರು ಕಳೆದುಕೊಂಡಿದ್ದರು. ಸಶಸ್ತ್ರ ಹೋರಾಟ ಒಂದೇ ಬ್ರಿಟಿಷರನ್ನು ಭಾರತದಿಂದ ಹೊರಗೆ ಹೊಡೆದೋಡಿಸಬಲ್ಲುದು ಮತ್ತು ಅದಕ್ಕಾಗಿ ಯುವಕರ ಕ್ಷಾತ್ರಶಕ್ತಿಯೊಂದೇ ಏಕಮಾತ್ರ ದಾರಿ. ಈ ಕಾರ್ಯಕ್ಕಾಗಿಯೇ ಆಸಕ್ತ ಯುವಕರಿಗೆ ವ್ಯಾಯಾಮ, ದೈಹಿಕ ಕಸರತ್ತಿನ ತರಬೇತಿಯನ್ನು ನೀಡುತ್ತಾರೆ.
ಬ್ರಿಟಿಷ್ ಅಧಿಕಾರಿಯಾದ ರಾರಯಂಡ್ನ ಸಂಹಾರ ಅವರ ಪಾಲಿಗೆ ಒಂದು ಧಾರ್ಮಿಕ ಕರ್ತವ್ಯವಾಗಿತ್ತು. ಅದೊಂದು ದುಷ್ಟ ಸಂಹಾರದ ಕೆಲಸ. ಹಾಗೆಂದು ಭಾವನಾತ್ಮಕ ಉನ್ಮಾದ ಅಲ್ಲ. ಪ್ರಜ್ಞಾಪೂರ್ವಕವಾದ ಕ್ರಿಯೆ. ರಾಜಕೀಯ ಹತ್ಯೆ ಸ್ವಾತಂತ್ರ್ಯದ ಪಥದಲ್ಲಿಅನಿವಾರ್ಯ ಎಂದು ನಂಬಿದ್ದ ಸಹೋದರರು ರಾರಯಂಡ್ನ ಹತ್ಯೆ ಮಾಡುತ್ತಾರೆ. ಮತ್ತು ಅದಕ್ಕೆ ಪ್ರತಿಯಾಗಿ ನಗುಮೊಗದಿಂದಲೇ ಗಲ್ಲಿಗೇರುತ್ತಾರೆ. ಅಂದು ಅವರು ಚೆಲ್ಲಿದ ರಕ್ತ ತಾಯ್ನೆಲದ ಬಿಡುಗಡೆಗಾಗಿ ಚೆಲ್ಲಿದ ರಕ್ತವಾಗಿತ್ತು. ತಾವು ಇದೇ ತಾಯ್ನೆಲದ ಬಿಡುಗಡೆಗಾಗಿಯೇ ಹುತಾತ್ಮರಾಗುತ್ತಿದ್ದೇವೆನ್ನುವ ಬಲವಾದ ನಂಬಿಕೆಯೂ ಅವರಲ್ಲಿತ್ತು. ದೇಶಕ್ಕಾಗಿ ಬಲಿದಾನ ಎನ್ನುವ ಸಂದೇಶವನ್ನು ದೇಶವಾಸಿಗಳಿಗೆ ನೀಡಿದ್ದರು. ಚಾಪೇಕರ್ ಸಹೋದರರ ಬಲಿದಾನ ವ್ಯರ್ಥವಾಗಲಿಲ್ಲ. ಈ ಸಹೋದರರ ಬಲಿದಾನದಿಂದ ತತ್ಕ್ಷಣಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲದಿರಬಹುದು. ಆದರೆ ಅವರ ಬಲಿದಾನ ಮುಂದಿನ ಅದೆಷ್ಟೋ ಕ್ರಾಂತಿಕಾರಿಗಳಿಗೆ ಪ್ರೇರಣೆಯ ದಾರಿಯಾಯಿತು. ಅಂದು ಅವರು ಚೆಲ್ಲಿದ ರಕ್ತದ ಬಿಂದುಗಳು ಇಂದು ನಮ್ಮ ಪಾಲಿನ ಸೌಖ್ಯದ ಸಿಂಧುವಾಗಿದೆ. ಮತ್ತೆ ಮತ್ತೆ ನಮ್ಮ ದೇಶದ ಸ್ವಾತಂತ್ರ್ಯ ಸಾವಿರಾರು ಹುತಾತ್ಮರ ಬಲಿದಾನದಿಂದ ಪಡೆದ ಅಮೃತ ಫಲ ಎನ್ನುವುದನ್ನು ಜ್ಞಾಪಿಸುತ್ತದೆ.
(ಲೇಖಕರು ಸಹಾಯಕ ಪ್ರಾಧ್ಯಾಪಕರು ಹಾಗೂ ವಾಗ್ದೇವಿ ಪ್ರಶಸ್ತಿ ಪುರಸ್ಕೃತರು)