ಈ ರೀತಿ ಆಲೋಚನೆ ಮಾಡುವ ಯುವಕರು‌ ಸರಕಾರಗಳಿಗೂ ಮಾದರಿ ಅಲ್ಲವೇ?

ಮಾರುಕಟ್ಟೆಗೆ ಬಂದಿದೆ ಆಗ್ರಾಪೇಠಾ, ಅದುವೇ ಕುಂಬಳಕಾಯಿ ಪೇಡಾ!

– ವಿ-ಟೆಕ್‌ ಸಂಸ್ಥೆಯ ಶೋಧನೆ, ರೈತರ ಕೈ ಹಿಡಿದ ಕ್ರಿಯಾಶೀಲ ಕನಸುಗಾರ ಕುಂಟುವಳ್ಳಿ ವಿಶ್ವನಾಥ್‌

ತೀರ್ಥಹಳ್ಳಿ: ವಿ-ಟೆಕ್‌ ಮಲೆನಾಡಿನ ಪುಟ್ಟ ಹಳ್ಳಿ ಕುಂಟುವಳ್ಳಿಯಲ್ಲಿರುವ ರೈತಸ್ನೇಹಿ ಉದ್ಯಮ. 2 ದಶಕದ ಹಿಂದೆ ಅಡಕೆ ಸುಲಿಯುವ ಯಂತ್ರ ಆವಿಷ್ಕರಿಸಿ ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದ ಸಂಸ್ಥೆ. ಅನೇಕ ಪ್ರಯೋಗಗಳ ಮೂಲಕ ರೈತಸ್ನೇಹಿಯಾಗಿ ಯಶಸ್ಸು ಪಡೆದಿರುವ ವಿ-ಟೆಕ್‌ ಇದೀಗ ಕುಂಬಳಕಾಯಿ ಬೆಳೆದ ರೈತರ ಕೈ ಹಿಡಿಯುವ ಪ್ರಯತ್ನ ಮಾಡಿದೆ.

ಉಪಯುಕ್ತ ಕ್ರಿಯಾಶೀಲ ಕನಸುಗಳ ಮೂಟೆ ಕಟ್ಟಿಕೊಂಡಿರುವ ವಿ-ಟೆಕ್‌ ಸಂಸ್ಥೆಯ ಕುಂಟುವಳ್ಳಿ ವಿಶ್ವನಾಥ್‌ ಅವರಲ್ಲಿನ ರೈತರಿಗೆ ನೆರವು ನೀಡುವ ಜಾಗೃತ ಪ್ರಜ್ಞೆ ಹೊಸ ಭರವಸೆ ಮೂಡಿಸಿದೆ. ಕೊರೊನಾ ವೈರಸ್‌ ಕೈ ಕೊಟ್ಟ ಕಾರಣ ಬೆಳೆದ ಕುಂಬಳಕಾಯಿ ಮಾರಾಟದ ಚಿಂತೆಯಲ್ಲಿದ್ದ ರೈತರಿಗೆ ಕುಂಟುವಳ್ಳಿ ವಿಶ್ವನಾಥ್‌ ಮೌಲ್ಯವರ್ಧನೆಯ ಕೈ ಚಾಚಿದ್ದಾರೆ.

ಯಂತ್ರಗಳ ತಯಾರಿಕೆಯ ವಿ-ಟೆಕ್‌ ಸಂಸ್ಥೆಯ ಸಹೋದರ ಸಂಸ್ಥೆ ಇಬ್ಬನಿ ಫುಡ್‌ ಇಂಡಸ್ಟ್ರೀಸ್‌ ಮೂಲಕ ಕುಂಬಳ ಕಾಯಿಯಲ್ಲಿನ ಪ್ರಸಿದ್ದ ಆಗ್ರಾಪೇಠಾ(ಪೇಡಾ)ತಿನಿಸು ಸಿದ್ಧಪಡಿಸಿದ್ದಾರೆ. ರುಚಿರುಚಿಯಾದ ಅಧಿಕ ಸ್ವಾದ ಹೊಂದಿರುವ ಆಗ್ರಾಪೇಠಾಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ರೈತರ ಕೈಗೆ ಕಾಸು ಸೇರಬೇಕಾದರೆ ಸ್ಥಳೀಯವಾಗಿ ಕುಂಬಳಕಾಯಿಗೆ ಮಾರುಕಟ್ಟೆ ಲಭ್ಯವಾಗಬೇಕಿದೆ. ಇದನ್ನು ತಿಳಿದ ವಿಶ್ವನಾಥ್‌ ಹೊಸ ಪ್ರಯೋಗದ ಮೂಲಕ ರೈತರ ನೆರವಿಗೆ ಧಾವಿಸಿದ್ದಾರೆ.

ಕೊರೊನಾ ವೈರಸ್‌ ಭೀತಿಯಿಂದ ಕುಂಬಳಕಾಯಿ ಮಾರಾಟ ಮಾಡಲಾಗದೆ ಅಸಹಾಯಕ ರಾಗಿದ್ದ ರೈತರಿಗೆ ವಿಶ್ವನಾಥ್‌ ನಡೆಸಿದ ಆಗ್ರಾಪೇಠಾ ಪ್ರಯೋಗ ನಿರೀಕ್ಷೆಗಿಂತ ಹೆಚ್ಚಿನ ಫಲಿತಾಂಶ ನೀಡಿದೆ. 20 ಕ್ವಿಂಟಾಲ್‌ ಸಿದ್ಧಪಡಿಸಿದ ಆಗ್ರಾಪೇಠಾವನ್ನು ಮಾರುಕಟ್ಟೆಗೆ ಪೂರೈಸಲು ಸಂಸ್ಥೆ ತಯಾರಿ ನಡೆಸಿದೆ. ತೀರ್ಥಹಳ್ಳಿ ತಾಲೂಕಿನ ಆರಗ, ಸರಳ, ಕುಳಗೇರಿ, ಉಂಟೂರುಕಟ್ಟೆ ಕೈಮರ, ಮೇಳಿಗೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ಕುಂಬಳಕಾಯಿ ಉಪಬೆಳೆ ಕೃಷಿ ಆವಲಂಬಿಸಿದ್ದಾರೆ.

ಲಾಕ್‌ಡೌನ್‌ ಆದೇಶದಿಂದ ಕುಂಬಳಕಾಯಿ ಮಾರಾಟ ಸಾಧ್ಯವಾಗದ ರೈತರಿಗೆ ನೆರವು ನೀಡುವ ಪ್ರಯತ್ನಕ್ಕೆ ಸಿಕ್ಕ ಚಾಲನೆ ಸ್ಥಳೀಯವಾಗಿ ಇದೀಗ ಹೊಸ ಪ್ರಯೋಗಕ್ಕೆ ನಾಂದಿಯಾಗಿದೆ. ಉತ್ತರ ಭಾರತದ ರಾಜಸ್ಥಾನ್‌, ಗುಜರಾತ್‌, ಮದ್ಯಪ್ರದೇಶ, ದಿಲ್ಲಿ, ಹರಿಯಾಣ, ಪಂಜಾಬ್‌, ಉತ್ತರಪ್ರದೇಶ ಮುಂತಾದ ರಾಜ್ಯಗಳಲ್ಲಿ ಕುಂಬಳಕಾಯಿ ಆಗ್ರಾಪೇಠಾಕ್ಕೆ ಭಾರಿ ಬೇಡಿಕೆ ಇದೆ. ಮಲೆನಾಡಿನ ಹಳ್ಳಿಗಳಲ್ಲಿ ಬೆಳೆದ ಕುಂಬಳಕಾಯಿ ಉತ್ತರ ಭಾರತಕ್ಕೆ ಹೆಚ್ಚಾಗಿ ಪೂರೈಕೆ ಆಗುತ್ತದೆ.

800 ಟನ್‌ ಕುಂಬಳ ಖರೀದಿ
ಮಾರಾಟವಾಗದೆ ಉಳಿದಿದ್ದ ಕುಂಬಳಕಾಯಿ ಮೌಲ್ಯವರ್ಧನೆಗೊಳಿಸುವ ಉದ್ದೇಶದಲ್ಲಿ ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್‌ ಡಾ.ಎಸ್‌.ಬಿ.ಶ್ರೀಪಾದ್‌ ನಡೆಸಿದ ರೈತಹಿತ ಪ್ರಯತ್ನ ಯಶಸ್ಸಿನ ಮೆಟ್ಟಿಲು ತುಳಿಯುವಂತೆ ಮಾಡಿದೆ. ಕೃಷಿ ಉದ್ಯಮಿ ಕುಂಟುವಳ್ಳಿ ವಿಶ್ವನಾಥ್‌ ಅವರನ್ನು ಸಂಪರ್ಕಿಸಿ ಆಗ್ರಾಪೇಠಾ ತಯಾರಿಕೆ ಕುರಿತು ನಡೆಸಿದ ಪ್ರಾಥಮಿಕ ಚರ್ಚೆ ಈಗ ಕಾರ‍್ಯರೂಪ ಗೊಂಡಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ವಿಶ್ವನಾಥ್‌ ಅವರೊಂದಿಗೆ ಚರ್ಚಿಸಿ ಹೊಸ ಪ್ರಯೋಗಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಆಗ್ರಾಪೇಠಾ ತಯಾರಿಕೆಗೆ ಸುಮಾರು 800 ಟನ್‌ ಕುಂಬಳಕಾಯಿ ಖರೀದಿಗೆ ಮುಂದಾಗಿರುವ ವಿಶ್ವನಾಥ್‌, ರೈತರಲ್ಲಿ ಆಶಾಭಾವನೆ ಮೂಡಿಸಿದ್ದಾರೆ. ಸ್ವತಃ ತಜ್ಞರಾಗಿರುವ ವಿಶ್ವನಾಥ್‌ ಸ್ಥಳೀಯ ನೂರಾರು ಜನರಿಗೆ ಉದ್ಯೋಗ ಒದಗಿಸಿದ್ದಾರೆ. ಇಬ್ಬನಿ ಫುಡ್‌ ಉತ್ಪನ್ನಗಳ ಮೂಲಕ ಸ್ವಾದಭರಿತ ಅನೇಕ ತಿಂಡಿ ತಿನಿಸುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಆಗ್ರಾಪೇಠಾ ಸಿದ್ಧಪಡಿಸಲು ಪ್ರತಿದಿನ ರೈತರಿಂದ 10 ಟನ್‌ ಕುಂಬಳಕಾಯಿ ಖರೀದಿಗೆ ತೀರ್ಮಾನಿಸಲಾಗಿದೆ. ಆಗ್ರಾಪೇಠಾ ತಯಾರಿಸಲು ಅವಶ್ಯಕವಾಗಿರುವ ಯಂತ್ರಗಳ ತಯಾರಿಗೆ ಚಾಲನೆ ನೀಡಲಾಗಿದೆ. ರೈತಸ್ನೇಹಿ ಉದ್ದೇಶಕ್ಕೆ ವಿ-ಟೆಕ್‌ ಸಂಸ್ಥೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತದೆ.
– ಕುಂಟುವಳ್ಳಿ ವಿಶ್ವನಾಥ್‌, ವಿ-ಟೆಕ್‌ ಸಂಸ್ಥೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top