– ಹಣಕ್ಕಾಗಿ ಪತ್ನಿಯ ಕೊಲೆ, ಸ್ನೇಹಿತನ ಮರ್ಡರ್
ವಿಕ ಸುದ್ದಿಲೋಕ ಬೆಂಗಳೂರು
ಲಾಕ್‌ಡೌನ್ ಅವಧಿಯಲ್ಲಿ ಕುಡಿತದಿಂದಾಗುವ ಕೌಟುಂಬಿಕ ಹಿಂಸೆ ಪ್ರಕರಣಗಳು ಮತ್ತು ಅಪರಾಧಗಳ ಸಂಖ್ಯೆ ತಳ ಮುಟ್ಟಿತ್ತು. ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕ ಎರಡೇ ದಿನದಲ್ಲಿ ಕುಡುಕರ ಹಾವಳಿ ಮಿತಿಮೀರಿದೆ. ‘ಮದ್ಯಾಸುರ’ ಕುಟುಂಬಗಳ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದಾನೆ.
ಮೈಸೂರು ಮತ್ತು ಇಳಕಲ್‌ನಲ್ಲಿ ಮದ್ಯದ ಅಮಲಿನಿಂದಾದ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ಮತ್ತೊಂದು ಕಡೆ, ಕೋಲಾರ ಜಿಲ್ಲೆಯಲ್ಲಿ ಭೂಪನೊಬ್ಬ ಎಣ್ಣೆ ಮತ್ತಿನಲ್ಲಿ ಹಾವನ್ನೇ ಕಚ್ಚಿ ಬಿಸಾಡಿದ್ದಾನೆ!
ಇಳಕಲ್‌ನಲ್ಲಿ ಮದ್ಯ ವ್ಯಸನಿಯೊಬ್ಬ ಮದ್ಯಕ್ಕೆ ದುಡ್ಡು ಕೊಡದ ಪತ್ನಿ ಮೇಲೆ ಬೈಕ್ ಹಾಯಿಸಿ ಪ್ರಾಣ ತೆಗೆದಿದ್ದಾನೆ. ನಗರದ ವಿಜಯ ಮಹಾಂತೇಶ ಗದ್ದುಗೆ ಹಿಂದಿನ ನಿವಾಸಿ ಶಾರದಾ ಚಂದಪ್ಪ ಚವ್ಹಾಣ (38) ಮೃತಪಟ್ಟ ಮಹಿಳೆ. ಕುಡಿಯಲು ಹಣ ನೀಡದ ಪತ್ನಿ ಮೇಲೆ ಕೋಪಗೊಂಡಿದ್ದ. ಸೋಮವಾರ ಸಂಜೆ ಕಸಮುಸುರೆ ಕೆಲಸಕ್ಕೆ ಹೋಗಿ ಬರುತ್ತಿದ್ದ ಪತ್ನಿಗೆ ಹಿಂದಿನಿಂದ ಚಂದಪ್ಪ ಬೈಕ್ ಡಿಕ್ಕಿ ಹೊಡೆಸಿದ್ದಾನೆ.
ಯುವಕನ ಕೊಲೆ
ಮೈಸೂರಿನಲ್ಲಿ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆಯಾಗಿದೆ. ನಗರದ ಕ್ಯಾತಮಾರನಹಳ್ಳಿಯ ನಿವಾಸಿ ಸತೀಶ್(21) ಕೊಲೆಯಾದ ಯುವಕ. ಸತೀಶ್ ಮತ್ತು ಆರೋಪಿ ಕಿರಣ್ ಸಹೋದರನ ನಡುವೆ ಸೋಮವಾರ ರಾತ್ರಿ ಸಣ್ಣ ಜಗಳವಾಗಿತ್ತು. ದಾರಿಯಲ್ಲಿ ಹೋಗುವಾಗ ಪರಸ್ಪರ ಭುಜ ತಾಕಿದ್ದೇ ಜಗಳದ ಮೂಲ. ಬಳಿಕ ರಾತ್ರಿ 9 ಗಂಟೆ ಸಮಯದಲ್ಲಿ ಕ್ಯಾತಮಾರನಹಳ್ಳಿಯ ಹದಿನೇಳನೇ ಕ್ರಾಸ್ ಬಳಿ ನಡೆದುಕೊಂಡು ಹೋಗುತ್ತಿದ್ದ ಸತೀಶ್ ಮೇಲೆ ಮಧು ಮತ್ತು ಕಿರಣ್ ತಂಡ ದಾಳಿ ಮಾಡಿ ಸೆಂಟ್ರಿಂಗ್ ರಿಪೀಸ್ ಪಟ್ಟಿಯಿಂದ ಸತೀಶ್ ತಲೆಗೆ ಹೊಡೆದಿದ್ದಾರೆ. ಆತ ಕೆಳಗೆ ಬಿದ್ದ ನಂತರ ಆತನ ಬೆನ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾವನ್ನೇ ಕಚ್ಚಿ ಬಿಸಾಕಿದ!
ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಹಾವನ್ನೇ ಕಚ್ಚಿ ಬಿಸಾಡಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಲಾರ ಜಿಲ್ಲೆ ಮುಷ್ಟೂರು ಗ್ರಾಮದ ಕುಮಾರ್(30) ಪಾನಮತ್ತನಾಗಿ ನಂಗಲಿಯಿಂದ ತನ್ನೂರಿಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ. ವಾಹನಕ್ಕೆ ಅಡ್ಡ ಬಂದ ಹಾವನ್ನು ಹಿಡಿದು, ಅದರ ಹಲ್ಲುಗಳನ್ನು ಕಿತ್ತುಹಾಕಿದ್ದಾನೆ. ಬಳಿಕ ಹಾವನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಊರಿಗೆ ಬಂದು, ಊರಿನ ಮಧ್ಯ ಭಾಗದಲ್ಲಿ ಬೈಕ್‌ನಲ್ಲಿ ಕುಳಿತು ಹಾವನ್ನು ಕಚ್ಚಿ ಕಚ್ಚಿ ಸಾಯಿಸಿದ್ದಾನೆ. ಕುಮಾರ್ ಒಂದು ಕೈಯ್ಯಲ್ಲಿ ಮದ್ಯದ ಬಾಟಲ್ ಹಿಡಿದು, ಇನ್ನೊಂದು ಕೈಯ್ಯಲ್ಲಿ ಹಾವನ್ನು ಹಿಡಿದು ಅದನ್ನು ಕಚ್ಚಿ ಸಾಯಿಸಿದ್ದಾನೆ.
ವೈದ್ಯರ ಮೇಲೆ ಹಲ್ಲೆ
ಬೆಳಗಾವಿ ಜಿಲ್ಲೆಯ ಯಕ್ಸಂಬಾದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಇಲ್ಲಿನ ಸರಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಲ್ಲದೇ ಆಸ್ಪತ್ರೆಯ ಪೀಠೋಪಕರಣ ಧ್ವಂಸ ಮಾಡಿದ್ದಾನೆ.
ಲಾಕ್‌ಡೌನ್ ಘೋಷಣೆಯಾದ ಬಳಿಕ ಮದ್ಯಪಾನದ ಅಪಾಯಗಳಿಂದ ಕರ್ನಾಟಕ ಮುಕ್ತಗೊಂಡಿತ್ತು. ಮತ್ತೆ ಮದ್ಯದಂಗಡಿಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದ್ದು, ಗ್ರಾಮೀಣರ ನೆಮ್ಮದಿ ಹಾಳಾಗಿದೆ. ಸಂಪೂರ್ಣ ಪಾನ ನಿಷೇಧವನ್ನು ಸರಕಾರ ಜಾರಿಗೊಳಿಸಬೇಕು.
– ಎಸ್.ಎಸ್.ಪಾಟೀಲ್, ಮಾಜಿ ಸಚಿವ (ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ)