ಎಚ್.ಎಸ್.ವೆಂಕಟೇಶಮೂರ್ತಿ ಹಿರಿಯ ಕವಿ
ನಿಸಾರ್ ಅವರ ಮೊದಲ ಧ್ವನಿಸುರುಳಿ, ಕನ್ನಡದ ಮೊದಲ ಭಾವಗೀತೆಗಳ ಧ್ವನಿಸುರುಳಿ ಹೊರಬಂದಾಗ, ನಾನು ಹಾಗೂ ಬಿ ಆರ್ ಲಕ್ಷ್ಮಣ ರಾವ್ ಗಾಂಧಿ ಬಜಾರಿನಲ್ಲಿ ಹೋಗುತ್ತಿದ್ದಾಗ ಎದುರಿಗೆ ಸಿಕ್ಕರು. ಆಗ ಅವರ ಮನೆ ಜಯನಗರದಲ್ಲಿತ್ತು. ಮನೆಗೆ ಕರೆದುಕೊಂಡು ಹೋದರು. ಕ್ಯಾಸೆಟ್ ಕೇಳಿಸಿದರು. ಆಗ ಅದೆಲ್ಲ ನಮಗೆ ಹೊಸತು. ನಿಸಾರ್ ಅವರಿಗೂ ಹೊಸತೊಂದು ಸಂಚಲನದ ಭಾಗವಾದ ಉತ್ಸಾಹ. ಈ ಉತ್ಸಾಹ ಅವರಲ್ಲಿ ಕಡೆಯವರೆಗೂ ಇತ್ತು. ಹೊಸಬರ ಕಾವ್ಯ ತಪ್ಪದೆ ಓದಿ ಮೆಚ್ಚುಗೆ ಹೇಳುತ್ತಿದ್ದರು.
ನಾನೆಂದರೆ ಅವರಿಗೆ ತುಂಬ ಪ್ರೀತಿ. ಚಿತ್ರದುರ್ಗದಲ್ಲಿ ನಾನು ಪಿಯುಸಿ ಓದುತ್ತಿದ್ದೆ. ಅವರು ಅಲ್ಲಿಜಿಯಾಲಜಿ ಪ್ರೊಫೆಸರ್ ಆಗಿದ್ದರು. ಹೊಸದಾಗಿ ಅಪಾಯಿಂಟ್ ಆಗಿದ್ದರು. ನಾನು ಪದ್ಯ ಬರೆಯುತ್ತೇನೆ ಅಂತ ಗೊತ್ತಾಗಿ ನನ್ನ ಮೇಲೆ ಅವರ ಗಮನ ಹರಿಯಿತು. ‘ಪದ್ಯ ತಗೊಂಡು ಬಾರಯ್ಯ’ ಅಂತ ಮನೆಗೆ ಕರೆಯುತ್ತಿದ್ದರು. ಪದ್ಯ ಓದಿಸಿ ಕೇಳಿ ಶಭಾಷ್ ಅಂತ ಬೆನ್ನು ತಟ್ಟುತ್ತಿದ್ದರು. ನಾನೂ ಅವರ ಪದ್ಯಗಳನ್ನು ಬಹಳ ಪ್ರೀತಿಯಿಂದ ಓದುತ್ತಿದ್ದೆ. ಅವುಗಳ ಪ್ರಭಾವ ನನ್ನ ಮೇಲೆ ತುಂಬ ಆಗಿತ್ತು. ಬಹಳ ಅಕರ್ಷಕವಾಗಿ ಪದ್ಯ ಓದುತ್ತಿದ್ದರು. ನಾಟಕೀಯತೆ ಇರುತ್ತಿತ್ತು. ಅವರ ಭಾಷಣ ಎಲ್ಲಿ ಇದ್ದರೂ ಹೋಗುತ್ತಿದ್ದೆ.
ಅವರು ರಾಜರತ್ನಂ ಶಿಷ್ಯ. ಗುರುಗಳ ಪ್ರಭಾವ ಅವರ ಮೇಲೆ ತುಂಬ ಆಗಿತ್ತು. ಕುವೆಂಪು ಅಂದರೂ ಬಹಳ ಗೌರವ. ಅವರ ವೈಚಾರಿಕತೆ ನಿಸಾರ್ರನ್ನು ಪ್ರಭಾವಿಸಿತ್ತು. ಹಾಸ್ಯ ಮನೋಧರ್ಮ ಅವರಲ್ಲಿತ್ತು. ಯಾವಾಗಲೂ ತಮಾಷೆ ಮಾಡಿಕೊಂಡು ಮಾತಾಡುವವರು. ಗಂಟೆಗಟ್ಟಲೆ ಅವರ ಜೊತೆಗಿದ್ದರೂ ಬೇಸರವಾಗುತ್ತಿರಲಿಲ್ಲ. ಬೇಸರವಾದಾಗೆಲ್ಲ ನನ್ನನ್ನು ಮನೆಗೆ ಕರೆಯುತ್ತಿದ್ದರು. ಎಲ್ಲಾದ್ರೂ ಊಟ ಮಾಡೋಣ ಬನ್ನಿ ಎಂದೂ ಆಹ್ವಾನಿಸುತ್ತಿದ್ದರು. ಊಟದಲ್ಲಿ ಅತ್ಯುತ್ತಮವಾದದ್ದು ಆಗಬೇಕು, ಒಳ್ಳೆಯ ಅಭಿರುಚಿ. ಬಹಳ ಸಜ್ಜನಿಕೆಯ ವ್ಯಕ್ತಿತ್ವ. ಆದರೆ ಅಂತರ್ಮುಖಿ. ಎಲ್ಲರನ್ನೂ ಹಚ್ಚಿಕೊಳ್ಳುತ್ತಿರಲಿಲ್ಲ. ಆದರೆ ಹಚ್ಚಿಕೊಂಡವರ ಬಳಿ ಅಂತರಂಗ ಬಿಚ್ಚಿಡುತ್ತಿದ್ದರು.
ಅವರ ಡ್ರೆಸ್ ಸೆನ್ಸ್ ಅದ್ಭುತ. ಯಾವಾಗಲೂ ಸೂಟ್ ಧರಿಸಿರುತ್ತಿದ್ದರು. ‘‘ಹುಟ್ಟುವಾಗಲೇ ಸೂಟ್ ಧರಿಸಿಯೇ ಹುಟ್ಟಿದ್ದೀರಿ ನೀವು,’’ ಎಂದು ನಾನು ವಿನೋದ ಆಡುವುದಿತ್ತು. ಅದನ್ನೂ ನಗುತ್ತಾ ಸ್ವೀಕರಿಸುತ್ತಿದ್ದರು. ಅವರಿಗೆ ಎಲ್ಲಾದರೂ ಅಭಿನಂದನಾ ಕಾರ್ಯಕ್ರಮ ಆದರೆ, ಅವರ ಬಗ್ಗೆ ಭಾಷಣ ಮಾಡುವುದಕ್ಕೆ ನಾನೇ ಆಗಬೇಕಿತ್ತು ಅವರಿಗೆ. ಅವರ ಜೊತೆ ಹಲವು ಕಡೆ ಓಡಾಡಿದ್ದೇನೆ ನಾನು. ನನ್ನನ್ನು ಏಕವಚನದಲ್ಲಿ ಮಾತಾಡಿಸುತ್ತಿದ್ದ ಏಕೈಕ ಕವಿ. ನನ್ನನ್ನು ‘ಪರಮಶಿಷ್ಯ’ ಅನ್ನುತ್ತಿದ್ದರು. ಮಾತಿಗೆ ಕೂತರೆ ಅವರು ಒಡನಾಟವಿಟ್ಟುಕೊಂಡಿದ್ದ ಹಳೆಯ ಸಾಹಿತಿಗಳ ವಿಚಾರ ಹೇಳುತ್ತಿದ್ದರು. ಅಡಿಗ, ಲಂಕೇಶ್, ವೈಎನ್ಕೆ, ರಾಜರತ್ನಂ ಮುಂತಾದವರ ಬಗ್ಗೆ ಮಾತಾಡುತ್ತಿದ್ದರು. ಅವರ ಕೃತಿಗಳ ಬಗ್ಗೆ ಚರ್ಚಿಸುತ್ತಿದ್ದರು. ಆದರೆ ತಮ್ಮ ಪದ್ಯಗಳ ಬಗ್ಗೆ ತಾವಾಗಿ ಮಾತಾಡಿದ್ದು ಕಡಿಮೆ. ಬಾಲ್ಯದ ನೆನಪುಗಳನ್ನು ಹೇಳಿಕೊಳ್ಳುತ್ತಿದ್ದರು. ಅವರ ಮನೆ ಲಾಲ್ಬಾಗ್ ಹತ್ತಿರ ಇತ್ತಂತೆ. ಲಾಲ್ಬಾಗ್ನ ಕಾಂಪೌಂಡ್ ಹಾರಿ ಒಳಗೆ ಹೋಗುತ್ತಿದ್ದುದು, ವಾಚ್ಮನ್ ಅಟ್ಟಿಸಿಕೊಂಡು ಬಂದಿದ್ದು ಇಂಥ ಸಾಹಸಗಳನ್ನೆಲ್ಲ ಹೇಳುತ್ತಿದ್ದರು.
ಅವರು ಕನ್ನಡಕ್ಕಾಗಿ ಮಾಡಿದ ಕೆಲಸ ದೊಡ್ಡದು. ಕನ್ನಡದಲ್ಲಿ ಕತೆ, ಕಾದಂಬರಿ ಬಿಟ್ಟು ಮತ್ತೆಲ್ಲವನ್ನೂ ಬರೆದಿದ್ದಾರೆ. ಲ್ಯಾಟಿನ್ ಅಮೆರಿಕದ ಮಹತ್ವದ ಕವಿ ಪಾಬ್ಲೊ ನೆರೂಡನನ್ನು ಮೊದಲಿಗೆ ಕನ್ನಡಕ್ಕೆ ತಂದವರು ನಿಸಾರ್. ಅವರ ಆ ಕೆಲಸ ಕನ್ನಡಿಗರಿಗೆ ನೆರೂಡನನ್ನು ಹತ್ತಿರವಾಗಿಸಿತು. ಅವರ ‘ಸಂಜೆ ಐದರ ಮಳೆ’ ಕವನ ಸಂಕಲನದಲ್ಲಿ ಅವರ ಅತ್ಯುತ್ತಮ ಎನಿಸುವಂಥ ಪದ್ಯಗಳಿವೆ. ರಾಮನ್ ಸತ್ತ ಸುದ್ದಿ, ಸಂಜೆ ಐದರ ಮಳೆ, ಅಮ್ಮ ಆಚಾರ ಮತ್ತು ನಾನು ಇತ್ಯಾದಿ. ಆ ಕಾಲದಲ್ಲಿ ಅದು ತುಂಬ ಚೆನ್ನಾಗಿ ಅಚ್ಚಾಗಿತ್ತು. ಅವರಿಗೆ ತಮ್ಮ ಪುಸ್ತಕಗಳು ಅಚ್ಚುಕಟ್ಟಾಗಿ ಮುದ್ರಣವಾಗಬೇಕೆಂಬ ತುಡಿತ ಇತ್ತು. ಅದು ಪ್ರಿಂಟಾದ ಹೊಸದರಲ್ಲಿ ನಾನು ಶಿವಮೊಗ್ಗಕ್ಕೆ ಹೋದಾಗ ತಮ್ಮ ಕೋಣೆಗೆ ಕರೆದು, ಟ್ರಂಕಿನಡಿಯಿಂದ ಘಮಘಮಿಸುತ್ತಿದ್ದ ಪುಸ್ತಕವನ್ನು ತೆಗೆದು ಹೊಸ ಕೂಸನ್ನು ಕೊಡುವಂತೆ ನನ್ನ ಕೈಗೆ ಎಚ್ಚರಿಕೆಯಿಂದ ಕೊಟ್ಟು, ‘ಇನ್ನೂ ಯಾರಿಗೂ ಕೊಟ್ಟಿಲ್ಲ. ಇದನ್ನು ಓದಿ ನನಗೆ ನಿಮ್ಮ ಅಭಿಪ್ರಾಯ ಹೇಳಿ’ ಅಂದಿದ್ದರು. ಪುಸ್ತಕಗಳ ಬಗ್ಗೆ ಅಷ್ಟೊಂದು ಪ್ರೀತಿ. ನನ್ನ ಮೊದಲ ಕವನ ಸಂಕಲನಕ್ಕೆ ಮೊದಲ ವಿಮರ್ಶೆ ಬರೆದವರೇ ಅವರು.
ಕನ್ನಡದಲ್ಲಿ ಕ್ಯಾಸೆಟ್ನ ಹೊಸ ಪ್ರಯೋಗಕ್ಕೆ ಮೈಸೂರು ಅನಂತಸ್ವಾಮಿ ಮುಂದಾದಾಗ ಅವರಿಗೆ ಸಾಥ್ ಕೊಟ್ಟವರು ನಿಸಾರ್. ಅವರಿಬ್ಬರ ಜೋಡಿಯಿಂದ ಹುಟ್ಟಿಕೊಂಡ ‘ನಿತ್ಯೋತ್ಸವ’ ಕನ್ನಡದಲ್ಲಿ ಅತ್ಯಂತ ದೊಡ್ಡ ಹಿಟ್ ಆಯಿತು. ಅದನ್ನು ಹಾಡುವುದಕ್ಕಾಗಿಯೇ ಬರೆದರು. ಅದರಲ್ಲಿ ಬೇರೆ ಪ್ರಭಾವದಿಂದ ಬರೆದ ಪದ್ಯಗಳೂ ಇವೆ. ಅದು ಕನ್ನಡದಲ್ಲೊಂದು ಟ್ರೆಂಡ್ ಸೆಟ್ಟರ್. ಶೇಕ್ಸ್ಪಿಯರ್ನ ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ನ್ನು ಕನ್ನಡಕ್ಕೆ ತಂದದ್ದು ಜನಪ್ರಿಯವಾಯಿತು. ನಿಸಾರ್ರ ಗದ್ಯಕ್ಕಿಂತ ಪದ್ಯ ನನಗೆ ಅಚ್ಚುಮೆಚ್ಚು. ವಿಮರ್ಶಕರಿಗೂ ಓದುಗರಿಗೂ ಏಕಕಾಲದಲ್ಲಿ ಅಚ್ಚುಮೆಚ್ಚಾದ ಕವಿ ನಿಸಾರ್. ನವ್ಯದ ಕಾಲದಲ್ಲಿ, ಓದುಗರಿಗೆ ಜಟಿಲವಾಗುತ್ತಿದ್ದ ಪದ್ಯದ ಕಾಲದಲ್ಲಿ, ಓದುಗರಿಗೂ ಕಾವ್ಯಕ್ಕೂ ಒಂದು ಸೇತುವೆ ಕಾಪಾಡಿಕೊಂಡವರಲ್ಲಿ ನಿಸಾರ್ ಹೆಸರು ಪ್ರಮುಖ.
‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಪದ್ಯದಲ್ಲಿ ನಮ್ಮ ಸಾಂಸ್ಕೃತಿಕ ಪರಿಸರದ ಬಗ್ಗೆ ಅವರ ಬೇಸರ ಸ್ವಲ್ಪ ಕಾಣಿಸುತ್ತದೆ. ನಾನು ಎಷ್ಟು ಕಾಲದಿಂದಲೂ ಇಲ್ಲಿ ಜತೆಗಿದ್ದು ಒಂದಾಗಿದ್ದರೂ ಧರ್ಮದ ಹಿನ್ನೆಲೆಯಿಂದಾಗಿ ಆಳದಿಂದ ನನ್ನನ್ನು ನೀವು ಒಪ್ಪುತ್ತಿಲ್ಲ; ನನ್ನ ನಿಜವಾದ ಅಭಿಮಾನ, ಪ್ರೀತಿ ತೋರಿಸಲು ನಾನೇನು ಮಾಡಬೇಕು ಎಂದು ಅದರಲ್ಲಿ ಹೇಳಿಕೊಂಡಿದ್ದರು.