ಕನ್ನಡಿಗರ ಅಭಿಮಾನದ ನಿತ್ಯಮಂತ್ರವೆನಿಸುವ ನಿತ್ಯೋತ್ಸವ ಹಾಡು ಕೊಟ್ಟ, ರಾಜಕಾರಣಿಗಳಿಗೆ ಚಾಟಿ ಏಟಾಗಿ ಕುರಿಗಳು ಸಾರ್ ಕುರಿಗಳು ಪದ್ಯ ರಚಿಸಿದ, ಬೆಣ್ಣೆ ಕದ್ದ ನಮ್ಮ ಕೃಷ್ಣ ಎಂದು ಪುಳಕಗೊಳಿಸಿದ ಕವಿ ನಿಸಾರ್ ಅಹಮದ್ ಇನ್ನು ನೆನಪು.
ಕನ್ನಡದ ಕಾವ್ಯ ರಸಿಕರ ಎದೆಯಾಳದಿಂದ ಸದಾ ಪುಟಿದು ಬರುವ ಹಾಡು ‘ನಿತ್ಯೋತ್ಸವ.’ ಶಿವಮೊಗ್ಗೆಯ ತುಂಗಾನದಿಯ ಬಳುಕು, ಜೋಗ ಜಲಪಾತದಿಂದ ಹುಟ್ಟಿಕೊಂಡ ಬೆಳಕು, ಸಹ್ಯಾದ್ರಿಯ ಕಬ್ಬಿಣದ ಗಣಿಯ ಉತ್ತುಂಗದ ನಿಲುಕು, ತೇಗ ಗಂಧ ನಿತ್ಯ ಹರಿದ್ವರ್ಣ ತರುಗಳು, ಕನ್ನಡಿಗರ ಸದ್ವಿಕಾಸ ಶೀಲ ನಡೆ ನುಡಿ ಎಲ್ಲವೂ ಈ ಹಾಡಿನಲ್ಲಿ ಪ್ರತಿಬಿಂಬಿತವಾಗಿವೆ. ಕನ್ನಡ ತಾಯಿಗೆ ಇಲ್ಲಿನ ಜನ ಮನ ಸಂಪತ್ತಿನ ನಿತ್ಯ ಉತ್ಸವವಾಗುತ್ತಿದೆ ಎಂಬ ಪರಿಕಲ್ಪನೆಯೇ ಕನ್ನಡಿಗರ ಅಭಿಮಾನದ ನಿತ್ಯಮಂತ್ರವಾಗಿ ಸದಾ ಪುಳಕಿತಗೊಳಿಸುವಂಥ ಹಾಡಾಗಿ ಕೆ.ಎಸ್.ನಿಸಾರ್ ಅಹಮದ್ ಅವರಿಂದ ಮೂಡಿಬಂತು. ಮುಂದೆ ಇದು ಕನ್ನಡದ ಮೊದಲ ಭಾವಗೀತೆ ಕ್ಯಾಸೆಟ್‌ನ ಮೊದಲ ಹಾಡಾಗಿಯೂ ಇತಿಹಾಸ ದಾಖಲಿಸಿತು. ಕೆ.ಎಸ್.ನರಸಿಂಹಸ್ವಾಮಿ ಅವರ ‘ಮೈಸೂರು ಮಲ್ಲಿಗೆ’ಯ ಬಳಿಕ ಅತ್ಯಧಿಕ ಮುದ್ರಣಗಳನ್ನು ಕಂಡು ಜನಮನದಲ್ಲಿ ನೆಲೆನಿಂತ ಕವನ ಸಂಕಲನ ಎಂದರೆ ನಿಸಾರ್ ಅವರ ‘ನಿತ್ಯೋತ್ಸವ.’
ಕನಕಪುರ ತಾಲೂಕಿನ ಕೊಕ್ಕರೆ ಹೊಸಹಳ್ಳಿಯ ಶೇಖ್ ಹೈದರ್ ಮತ್ತು ಹಮೀದಾ ಬೇಗಂ ದಂಪತಿಗಳ ಏಳು ಜನ ಮಕ್ಕಳಲ್ಲಿ ನಿಸಾರ್ ಹಿರಿಯರು. ದೇವನಹಳ್ಳಿಯಲ್ಲಿ ಇವರ ಜನನ. ಧರ್ಮದಲ್ಲಿ ತುಂಬಾ ಭಕ್ತಿ ಶ್ರದ್ಧೆಗಳಿದ್ದ ಹಮೀದಾ ಬೇಗಂ, ನಿಸಾರ್‌ರನ್ನು ಶಿಸ್ತಿನಿಂದ ಬೆಳೆಸಿದ್ದರು. ಉದಾರವಾದಿಯಾಗಿದ್ದ ಅವರ ತಂದೆ ಮಗನಿಗೆ ಆಧುನಿಕ ಶಿಕ್ಷಣ ಒದಗಿಸಿದರು; ಕುವೆಂಪು ಅವರ ಕಿಂದರಿ ಜೋಗಿ ಮುಂತಾದ ಪುಸ್ತಕ ಓದಿಸಿದರು. ಹೊಸಕೋಟೆಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದು, ಸೆಂಟ್ರಲ್ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು 1959ರಲ್ಲಿ ಪಡೆದರು. ಹೈಸ್ಕೂಲಿನಲ್ಲಿಯೇ ಸಾಹಿತ್ಯಕ ವಾತಾವರಣವಿತ್ತು. ವನಸುಮ ಎಂಬ ಕೈಬರಹದ ಪತ್ರಿಕೆಯನ್ನು ಇವರು ಹೊರತರುತ್ತಿದ್ದರು. ಸೆಂಟ್ರಲ್ ಕಾಲೇಜಿನಲ್ಲಿ ಜಿ.ಪಿ.ರಾಜರತ್ನಂ, ವಿ.ಸೀತಾರಾಮಯ್ಯನವರು ನಿಸಾರ್ ಗುರುಗಳಾಗಿದ್ದರು. ಅವರು ನಿಸಾರ್, ಲಂಕೇಶ್, ಸುಮತೀಂದ್ರ ನಾಡಿಗ ಮುಂತಾದವರ ಪದ್ಯಗಳನ್ನು ಸೇರಿಸಿ ‘ಪದ್ಯಾಂಜಲಿ’ ಎಂಬ ಸಂಕಲನ ಹೊರತಂದರು. ಹೊಸ ಕವಿಗಳಿಗೆ ಆಗ ವೈಎನ್ಕೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಅವರಿಂದ ನಿಸಾರ್ ಉತ್ಸಾಹ ಪಡೆದುಕೊಂಡು ಪದ್ಯಗಳನ್ನು ಬರೆದರು. ಒಮ್ಮೆ ಆಕಾಶವಾಣಿಯ ನಾಡಹಬ್ಬ ಕಾರ್ಯಕ್ರಮದಲ್ಲಿ ಕುವೆಂಪು, ಪುತಿನರಂತಹ ಕವಿಗಳೊಂದಿಗೆ ಭಾಗಿಯಾಗುವ ಯೋಗ ಲಭಿಸಿತು.
ಕಲಬುರಗಿಯಲ್ಲಿ ಭೂವಿಜ್ಞಾನಿಯಾಗಿ ವೃತ್ತಿ ಆರಂಭಿಸಿದ ಅವರು ಕುವೆಂಪು ಸಹಾಯದಿಂದ ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸಕರಾದರು. ನಂತರ ಚಿತ್ರದುರ್ಗ, ಬೆಂಗಳೂರು, ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿದರು. ಎಂಟು ವರ್ಷಗಳ ಶಿವಮೊಗ್ಗದ ಜೀವನ ಅವರ ಸಾಹಿತ್ಯದ ಸುವರ್ಣ ಕಾಲ. ನಿತ್ಯೋತ್ಸವದ ಸೂಧಿರ್ತಿ ಮೂಡಿದ್ದು ಅಲ್ಲಿಯೇ. ಸಂಜೆ ಐದರ ಮಳೆ, ನಾನೆಂಬ ಪರಕೀಯ, ನಿತ್ಯೋತ್ಸವದಂತಹ ಅದ್ಭುತ ಸಂಕಲನಗಳು ಅಲ್ಲಿ ರಚನೆಯಾದವು. 2006ರಲ್ಲಿ ಶಿವಮೊಗ್ಗದಲ್ಲಿ ಅಖಿಲ ಭಾರತ 73ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ನಾಡು ಅವರನ್ನು ಅಧ್ಯಕ್ಷ ಪಟ್ಟದಲ್ಲಿ ಕೂರಿಸಿತು. 1966ರಲ್ಲಿ ಷಾನವಾಜ್ ಬೇಗಂ ಅವರನ್ನು ವಿವಾಹವಾದರು. ನಿಸಾರ್‌ಗೆ ಇಬ್ಬರು ಪುತ್ರರು, ಇಬ್ಬರು ಹೆಣ್ಣು ಮಕ್ಕಳು. ನಿಸಾರ್ ಅವರ ಓದು ಬರಹಕ್ಕೆ ಒತ್ತಾಸೆಯಾಗಿ ನಿಂತವರು ಅವರ ಸಹಧರ್ಮಿಣಿ. 1984ರಿಂದ 1987ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹೊಸ ನೀರು ತಂದರು. ಹೊರ ರಾಜ್ಯಗಳಿಗೆ ಕಾರ್ಯಕ್ರಮಗಳನ್ನು ವಿಸ್ತರಿಸಿದರು. 1985ರಲ್ಲಿ ಮೈಸೂರಿನಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ನಡೆಯಿತು.
ನಿಸಾರ್ ಅವರ ಕಾವ್ಯ ವ್ಯಕ್ತಿತ್ವ ನೂರಾರು ವಲಯಗಳಲ್ಲಿ ಹಬ್ಬಿಕೊಂಡಿದೆ. ಅವರು ‘ನಿತ್ಯೋತ್ಸವ ತಾಯಿ ನಿನಗೆ..’ ‘ಕನ್ನಡವೆಂದರೆ ಬರಿ ನುಡಿಯಲ್ಲಿ ಹಿರಿದಿದೆ ಅದರರ್ಥ’ ಅನ್ನುವಾಗ ಕನ್ನಡ ನಾಡು ನುಡಿಯ ಅಭಿಮಾನಿಯಾಗುತ್ತಾರೆ. ‘ಸಗ್ಗದ ಸಿರಿ ಬಂತೊ ನಮ್ಮೂರಿಗೆ’ ಅನ್ನುವಾಗ ಪ್ರಕೃತಿಯ ಆರಾಧಕರಾಗುತ್ತಾರೆ. ‘ನಿನ್ನ ಹಾಲುಗೆನ್ನೆ ತುಂಬ ಕೆನೆಗಟ್ಟಿದ ಮುನಿಸು ಪ್ರೀತಿ, ನಿನ್ನ ಕಣ್ಣಿನಾಳದಂಚ ಮೀನ ಮಿಂಚ ಹೊರಳು ಪ್ರೀತಿ’ ಅನ್ನುವಾಗ ಅನುರಾಗದ ರಸಿಕರಾಗುತ್ತಾರೆ. ‘ನಗರವಾಸಿಗಳು, ನಿತ್ಯ ನರಕವಾಸಿಗಳು’ ಎನ್ನುವಾಗ ಆಧುನಿಕತೆಯ ಟೀಕಾಕಾರರಾಗಿ, ‘ಮಂದೆಯಲಿ ಒಂದಾಗಿ, ಸ್ವಂತತೆಯ ಬಂದಾಗಿ, ಇದರ ಬಾಲ ಅದು ಮೂಸಿ ಸಾಗುವ ಕುರಿಗಳು ಸಾರ್’ ಅನ್ನುವಾಗ ವಿಡಂಬನಕಾರರಾಗುತ್ತಾರೆ. ‘ಲೋಕದೆದುರು ನೀರು ಹೊಯ್ದು, ಒಳಗೊಳಗೇ ಬೇರು ಕೊಯ್ದು…’ ಅನ್ನುವಾಗ ‘ನಿಮ್ಮೊಳಗಿದ್ದೂ ನಿಮ್ಮಂತಾಗದ’ ಅನಾಥಪ್ರಜ್ಞೆಯ ವಕ್ತಾರರಾಗುತ್ತಾರೆ. ನಿಸಾರ್ ಅವರ ಗದ್ಯದ ಭಾಷೆ ಸಂಸ್ಕೃತಭೂಯಿಷ್ಠವಾಗಿದ್ದು, ತರ್ಕಬದ್ಧತೆ ಹಾಗೂ ತತ್ವಬದ್ಧತೆಯಿಂದ ಕೂಡಿದೆ. ‘ಇದು ಬರಿ ಬೆಡಗಲ್ಲೋ ಅಣ್ಣ’ ಅವರ ಮಹತ್ವದ ವಿಮರ್ಶಾ ಕೃತಿ.
ಗಣ್ಯರ ಅಂತಿಮ ದರ್ಶನ
ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ನಿಸಾರ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಚಿವರಾದ ಆರ್. ಅಶೋಕ್,
ವಿ. ಸೋಮಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕವಿಯ ಅಂತಿಮ ದರ್ಶನ ಮಾಡಲಾಗದೆ ಸಾಕಷ್ಟು ಮಂದಿ ಮನೆಯಲ್ಲೇ ಕಂಬನಿ ಮಿಡಿದಿದ್ದಾರೆ.
ಸಾಲ ಮಾಡಿ ಕ್ಯಾಸೆಟ್ ತಂದ ಕವಿ
ಕೆ.ಎಸ್.ನಿಸಾರ್ ಅಹಮದ್ ಅವರ ‘ನಿತ್ಯೋತ್ಸವ’ದ ಜನಪ್ರಿಯತೆ ದೊಡ್ಡದು. ಇದು ಕನ್ನಡ ಭಾವಗೀತೆಗಳ ಮೊದಲ ಧ್ವನಿ ಸುರುಳಿ. 1978ರಲ್ಲಿ ಬಿಡುಗಡೆಯಾದ ಇದು, ಈಗಲೂ ಜನಪ್ರಿಯ. 1976ರಲ್ಲಿ ನಿತ್ಯೋತ್ಸವ ಕವನ ಸಂಕಲನ ಬಿಡುಗಡೆಯಾಯಿತು. ಆ ಸಮಯದಲ್ಲೇ ಕ್ಯಾಸೆಟ್ ಮಾಡೋ ಹಂಬಲ ನಿಸಾರ್ ಮನಸಿಗೆ ಬಂತು. ಅಷ್ಟರಲ್ಲಾಗಲೇ ಮೈಸೂರು ಅನಂತಸ್ವಾಮಿ ಅವರು ಸುಗಮ ಸಂಗೀತವನ್ನು ಜನಪ್ರಿಯಗೊಳಿಸಿದ್ದರು. ಕ್ಯಾಸೆಟ್ ಮಾಡೋ ವಿಷಯವನ್ನು ಅವರಿಗೆ ಹೇಳಿದಾಗ, ಅದೆಲ್ಲ ತಲೆನೋವು ಬೇಡ ಸುಮ್ನಿರಿ ಅಂದಿದ್ದರು. ಆಗ ಬೆಂಗಳೂರಿನಲ್ಲಿ ರೆಕಾರ್ಡಿಂಗ್‌ಗೆ ಇದ್ದದ್ದು ಪ್ರಭಾತ್ ಸ್ಟುಡಿಯೋ ಒಂದೇ. ಬ್ಯಾಂಕಲ್ಲಿ ಸಾಲ ಮಾಡಿ ಕ್ಯಾಸೆಟ್‌ಗೆ ದುಡ್ಡು ಹಾಕಿದರು ನಿಸಾರ್. ಆಗ ರೆಕಾರ್ಡಿಂಗ್ ಮಾಡುವಾಗ ವಾದ್ಯಗಳಿಂದ ಅಪಶ್ರುತಿಯಾದರೆ ಈಗಿನಂತೆ ಕಟ್ ಮಾಡಿ ಪೇಸ್ಟ್ ಮಾಡುವ ತಂತ್ರಜ್ಞಾನ ಇರಲಿಲ್ಲ. ರೆಕಾರ್ಡಿಂಗ್ ಬೋರ್ ಕೆಲಸ. ಹೇಗೋ ಕ್ಯಾಸೆಟ್ ಮಾಡಿದರು. ಗಾಂಧಿ ಬಜಾರ್‌ನ ರವೀಂದ್ರ ಸ್ಟೋರ್‌ನಲ್ಲಿ ‘ನಿತ್ಯೋತ್ಸವವ’ನ್ನು ಮಾರಾಟಕ್ಕೆ ಇಟ್ಟಿದ್ದರು. ದಿನಕ್ಕೆ 15-20 ಕ್ಯಾಸೆಟ್‌ಗೆ ಬೇಡಿಕೆ ಇರ್ತಾ ಇತ್ತು. ಆ ಮಧ್ಯೆ ಟೈಮ್ಸ್ ಆಫ್ ಇಂಡಿಯಾದವರು ನಿಸಾರ್ ಸಂದರ್ಶನ ಪ್ರಕಟಿಸಿದರು. ಅದನ್ನು ನೋಡಿದ ಐಬಿಎಚ್ ಪ್ರಕಾಶನದವರು ಕ್ಯಾಸೆಟ್ ವಿತರಣೆ ಹೊಣೆ ಹೊತ್ತರು. ಆಮೇಲೆ ಸಿ.ಡಿ ಬಂತು.
– ಹ ಚ ನಟೇಶಬಾಬು
2017ರಲ್ಲಿ ದಸರಾ ಉದ್ಘಾಟಿಸಿದ್ದ ಕವಿ
‘‘ಹಜ್‌ನಲ್ಲಿ ಮುಸ್ಲಿಮರು, ಕುಂಭಮೇಳದಲ್ಲಿ ಹಿಂದುಗಳು ಹಬ್ಬ ಆಚರಿಸುತ್ತಾರೆ. ಆದರೆ ಮೈಸೂರು ದಸರಾದಲ್ಲಿ ಮಾತ್ರ ಧರ್ಮಗಳ ಮಿತಿಯೇ ಇಲ್ಲದೆ ಎಲ್ಲರೂ ತಾಯಿ ಚಾಮುಂಡಿ ದೇವಿ ಆಶೀರ್ವಾದ ಪಡೆದು ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಇದೇ ಮೈಸೂರು ದಸರಾ ವೈಶಿಷ್ಟ.’’ 2017ರಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದ ಕೆ.ಎಸ್.ನಿಸಾರ್ ಅಹಮದ್ ಹೀಗೆ ಉದ್ಗರಿಸಿದ್ದರು. ‘‘ಸುಮಾರು 400 ವರ್ಷಗಳ ಇತಿಹಾಸ ಇರುವ ಹಬ್ಬ ಮೈಸೂರು ದಸರಾ. ನನಗೆ ಪದ್ಮಶ್ರೀ, ನಾಡೋಜ ಪ್ರಶಸ್ತಿ ಗೌರವ ಸಿಕ್ಕಿರಬಹುದು. ಆದರೆ, ದಸರಾ ಚಾಲನೆ ಮಾಡುವ ಭಾಗ್ಯ, ಗೌರವ ಸಿಕ್ಕಿರುವುದು ಇದೆಲ್ಲಕ್ಕಿಂತ ದೊಡ್ಡದು,’’ ಎಂದು ಸಂತೋಷ ವ್ಯಕ್ತಪಡಿಸಿದ್ದರು.
ಪ್ರಮುಖ ಕೃತಿಗಳು
ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬಹಿರಂತರ, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ(ಕವನ ಸಂಕಲನಗಳು). ಅಚ್ಚುಮೆಚ್ಚು, ಇದು ಬರಿ ಬೆಡಗಲ್ಲೊ ಅಣ್ಣ (ಲೇಖನಗಳು). ಒಥೆಲೊ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ (ಶೇಕ್ಸ್‌ಪಿಯರ್ ಅನುವಾದಗಳು)
ಪ್ರಶಸ್ತಿ ಪುರಸ್ಕಾರಗಳು
2006ರ ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, 1981ರ ರಾಜ್ಯೋತ್ಸವ ಪ್ರಶಸ್ತಿ, 2003ರ ನಾಡೋಜ ಪ್ರಶಸ್ತಿ. 2006ರ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
ಗುರಿ ಮುಟ್ಟುತಿರಲಿ ಈ ಜೀವ ತಾನು, ಹಿಡಿದೊಂದು ದಿಟದ ದಾರಿ
ಮರೆಯದಂತೆ ಹೊರಿಸಿರುವ ಋುಣವ, ಕೃತಿಯಲ್ಲಿಅದನು ಸಾರಿ
ನಿನ್ನೊಲವ ತೈಲ ನನ್ನೆದೆಯೊಳಿರಲಿ, ಬೆಳಗಿರಲಿ ಬಾಳ ಬುತ್ತಿ
ಕೊನೆ ಕಾಣಲಮ್ಮ ಅನುಭವದಿ ಮಾಗಿ, ನಿನ್ನಡಿಗೆ ಬಾಗಿ ನೆತ್ತಿ
-ನಿಸಾರ್ ಅಹಮದ್