ಪ್ರತಿಪಕ್ಷಗಳ ಸಂಘಟಿತ ಕೊರೊನಾ ಹೋರಾಟ

ಹೋರಾಟ ಕೊರೊನಾ ವಿರುದ್ಧವೋ, ರಾಜ್ಯ ಸರಕಾರಕ್ಕೆ ಚುರುಕು ಮುಟ್ಟಿಸಲೋ?
– ಶಶಿಧರ ಹೆಗಡೆ

ಪೂರ್ವ ದಿಕ್ಕಿನಲ್ಲಿ ಉದಯಿಸುವ ಸೂರ್ಯ ಪಶ್ಚಿಮದಲ್ಲಿ ಅಸ್ತಂಗತನಾಗುತ್ತಾನೆ. ಇದು ಸೃಷ್ಟಿ ಸಹಜವಾದ ಕರಾರುವಾಕ್‌ ಕ್ರಿಯೆ. ರಾಜಕಾರಣ ಹಾಗಲ್ಲ. ರಾಜಕಾರಣದ ದಿಕ್ಕು ಯಾವಾಗ ಬೇಕಾದರೂ ಬದಲಾಗಬಹುದು. ಯಾವ ತಿರುವನ್ನಾದರೂ ಪಡೆಯಬಹುದು. ಅದರಲ್ಲಿ ವೈಯಕ್ತಿಕ ಆಸೆ, ಆಕಾಂಕ್ಷೆ ಹಾಗೂ ಲೋಕಕಲ್ಯಾಣವೂ ಮಿಳಿತವಾಗಿರುತ್ತದೆ. ಹಾವು, ಮುಂಗುಸಿಯಂತೆ ದ್ವೇಷ ಸಾಧಿಸಿದವರು ರಾತ್ರಿ ಬೆಳಗಾಗುವುದರ ಒಳಗೆ ಮಗ್ಗಲು ಬದಲಿಸಿ ಪರಸ್ಪರರ ಹೆಗಲ ಮೇಲೆ ಕೈಹಾಕಿಕೊಳ್ಳಬಹುದು. ಇಂತಹ ಮಜಕೂರಿಗಳು ರಾಜಕಾರಣದಲ್ಲಿ ಮಾತ್ರ ನಡೆಯಲು ಸಾಧ್ಯ. ಸದ್ಯಕ್ಕೆ ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯದ ಪ್ರತಿಪಕ್ಷಗಳಲ್ಲಿ ಹೊಂದಾಣಿಕೆ ಕಾಣಿಸಿದೆ. ಇಲ್ಲಿಯೂ ವೈಯಕ್ತಿಕ ವಾಂಛೆಗಳಿರಬಹುದು. ಆದರೆ, ಆಳುವ ಪಕ್ಷ ದ ವಿರುದ್ಧ ಪರ್ಯಾಯ ಶಕ್ತಿಯನ್ನು ಮುಂಚೂಣಿಗೆ ತಂದು ನಿಲ್ಲಿಸುವ ಲೆಕ್ಕಾಚಾರವಿದೆಯಾ ಎನ್ನುವುದನ್ನು ತುಸು ಆಳಕ್ಕಿಳಿದು ಶೋಧಿಸಿದ ಬಳಿಕವೇ ಖಾತರಿ ಪಡಿಸಿಕೊಳ್ಳಬೇಕಾಗುತ್ತದೆ. ಅದೇನೇ ಇದ್ದರೂ ಕೋವಿಡ್‌-19ರ ನಿರ್ವಹಣೆಗೆ ಸರಕಾರವನ್ನು ಎಚ್ಚರಿಸುವ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಒಂದು ರಥದ ಎರಡು ಚಕ್ರಗಳಿದ್ದಂತೆ ಎಂದು ಹೇಳಿದರೆ ಚರ್ವಿತ ಚರ್ವಿಣ ಎನಿಸಬಹುದು. ಆದರೆ, ಇದೇ ವಾಸ್ತವ. ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಉತ್ತರದಾಯಿತ್ವ ಆಳುವ ಪಕ್ಷ ದ ಸ್ವತ್ತಲ್ಲ. ಈ ದಿಶೆಯಲ್ಲಿ ವಿರೋಧ ಪಕ್ಷಗಳಿಗೂ ಅಷ್ಟೇ ಗುರುತರವಾದ ಹೊಣೆಗಾರಿಕೆ ಇರುತ್ತದೆ. ಇದೇ ಕಾರಣಕ್ಕೆ ವಿರೋಧ ಪಕ್ಷವೆಂದು ಕರೆಯುವ ಬದಲು ಪ್ರತಿಪಕ್ಷವೆಂದು ಹೆಸರಿಸುವುದು ಔಚಿತ್ಯಪೂರ್ಣ. ವಿರೋಧ ಪಕ್ಷದವರು ಎಂದಾಗ ವಿರೋಧಿಸುವರು ಎಂಬ ನೆಗೆಟಿವ್‌ ಛಾಯೆಯ ಅರ್ಥ ಹೊಮ್ಮುತ್ತದೆ. ಪ್ರತಿಪಕ್ಷವೆಂದಾಗ ಅಲ್ಲೊಂದು ರಚನಾತ್ಮಕ ಚಿಂತನೆ ಚಿಗುರೊಡೆಯಲು ಅವಕಾಶವಿರುತ್ತದೆ. ವಿಪತ್ತು ಎದುರಾದಾಗ ಆಡಳಿತ ಪಕ್ಷಕ್ಕೆ ಪ್ರತಿಪಕ್ಷದವರೂ ಹೆಗಲಿಗೆ ಹೆಗಲು ಕೊಟ್ಟು ಹೆಜ್ಜೆ ಹಾಕಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ನಿಜವಾದ ಸೊಬಗು.
ಹೊಂದಾಣಿಕೆ ಸೂತ್ರ
ಕೊರೊನಾ ವಿರುದ್ಧದ ಹೋರಾಟಕ್ಕೆ ಅಣಿಯಾದಾಗ ಸರಕಾರವೂ ಪ್ರತಿಪಕ್ಷಗಳ ಬೆಂಬಲ ಕೋರಿತು. ಪ್ರತಿಪಕ್ಷಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದವು. ಮುಖ್ಯಮಂತ್ರಿಯವರು ಪ್ರತಿಪಕ್ಷಗಳ ನಾಯಕರುಗಳೊಂದಿಗೆ ಸಭೆಯನ್ನೂ ನಡೆಸಿದರು. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗಿ ಸಲಹೆ ಕೊಟ್ಟಿದ್ದಾರೆ. ಪ್ರಾರಂಭದಲ್ಲಿ ಈ ಎಲ್ಲ ಪ್ರಕ್ರಿಯೆಗಳೂ ಸುಲಲಿತ ಎಂಬಂತೆ ನಡೆದುಕೊಂಡು ಹೋದವು. ಜನರ ದೃಷ್ಟಿಯಲ್ಲೂ ರಾಜಕಾರಣಿಗಳ ಈ ನಡೆ ಶ್ಲಾಘನೆಗೆ ಒಳಗಾದದ್ದು ದಿಟ.
ಚುರುಕಾದ ಪ್ರತಿಪಕ್ಷಗಳು
ಲಾಕ್‌ಡೌನ್‌ನ ಆರಂಭಿಕ ಹಂತದಲ್ಲಿ ಇದ್ದ ಮನಸ್ಥಿತಿಯಲ್ಲಿ ಪ್ರತಿಪಕ್ಷಗಳು ಈಗ ಇಲ್ಲ. ಪ್ರಾಯಶಃ ಕ್ಲಿಷ್ಟಕರ ಸನ್ನಿವೇಶದಲ್ಲಿ ಸರಕಾರದ ಬಗ್ಗೆ ಮೃದು ಧೋರಣೆ ತಳೆದಿದ್ದ ಪ್ರತಿಪಕ್ಷಗಳೀಗ ಸೆಟೆದು ನಿಲ್ಲತೊಡಗಿವೆ. ಆಳುವವರನ್ನು ಸದಾ ಎಚ್ಚರಿಸುವ ಕೆಲಸವನ್ನು ಪ್ರತಿಪಕ್ಷ ಮಾಡಲೇಬೇಕಾಗುತ್ತದೆ. ಅದನ್ನು ಬಿಟ್ಟು ಸಂಕಷ್ಟದ ಸಂದರ್ಭವೆಂದು ‘ಪದ್ಮಾಸನ’ ಹಾಕಿಕೊಂಡು ಕುಳಿತುಕೊಳ್ಳುವಂತಿಲ್ಲ. ಪ್ರತಿಪಕ್ಷ ಹೀಗೆ ನಿಷ್ಕ್ರಿಯವಾದರೆ ಜನರೂ ಕ್ಷ ಮಿಸುವುದಿಲ್ಲ. ಹಾಗಾಗಿ ಸಕಾಲಕ್ಕೆ ಎಂಬಂತೆ ಪ್ರತಿಪಕ್ಷಗಳು ಚುರುಕಾಗಿವೆ. ರೈತರು, ಕಾರ್ಮಿಕರು, ಬಡವರ ಪರ ಪ್ರತಿಪಕ್ಷದವರು ಧ್ವನಿ ಮೊಳಗಿಸುತ್ತಿದ್ದಾರೆ. ಈ ಸಂಬಂಧ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸತತ ಸಭೆ ನಡೆಸಿ ಕುಂದು, ಕೊರತೆ ಆಲಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ ನೇರವಾಗಿ ಫೀಲ್ಡಿಗಿಳಿದು ತೊಂದರೆಗೆ ಒಳಗಾದವರಿಗೆ ಧೈರ್ಯ ತುಂಬುತ್ತಿದ್ದಾರೆ. ಇದರಿಂದ ಸರಕಾರಕ್ಕೂ ಚಾಟಿ ಬೀಸಿದಂತಾಗಿದೆ. ಪ್ರತಿಪಕ್ಷ ಇಷ್ಟು ಕ್ರಿಯಾಶೀಲ ಆಗುತ್ತಿರುವುದು ಅಪೇಕ್ಷಿತ ಬೆಳವಣಿಗೆಯಾಗಿದೆ.
‘‘ಕೊರೊನಾ ನಿರ್ವಹಣೆ ಸಂಬಂಧ ಸರಕಾರಕ್ಕೆ ಈವರೆಗೆ ಸಹಕಾರ ನೀಡಲಾಗಿದೆ. ಇನ್ನು ನಮ್ಮ ಹೋರಾಟ ಮುಂದುವರಿಯಲಿದೆ,’’ ಎಂದು ಡಿ.ಕೆ.ಶಿವಕುಮಾರ ಸ್ಪಷ್ಟವಾಗಿಯೇ ಹೇಳಿದ್ದಾರೆ. ಅಗತ್ಯ ವಸ್ತುಗಳ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿಯೂ ಅವರು ಆರೋಪಿಸಿದ್ದಾರೆ. ಸರಕಾರದ ಬೆಂಬಲಕ್ಕೆ ಇನ್ನು ನಿಲ್ಲುವುದಿಲ್ಲ ಎನ್ನುವುದಕ್ಕೆ ಇದೇ ಅಂಶವನ್ನು ಸಮರ್ಥನೆಯಾಗಿ ನೀಡಿದ್ದಾರೆ. ಕುಮಾರಸ್ವಾಮಿ ಅವರಂತೂ ಸರಕಾರದ ವಿರುದ್ಧ ಬಿಡುಬೀಸು ವಾಗ್ದಾಳಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮೇಲಿಂದ ಮೇಲೆ ಸರಕಾರಕ್ಕೆ ಮಾನವೀಯತೆಯ ಪಾಠ ಹೇಳುತ್ತಿದ್ದಾರೆ. ಇವೆಲ್ಲವೂ ಸರಕಾರದ ಕಿವಿ ಹಿಂಡಲು ಪ್ರತಿಪಕ್ಷಗಳು ಚಳಿ ಬಿಟ್ಟು ಸನ್ನದ್ಧವಾಗುತ್ತಿವೆ ಎಂಬುದರ ದ್ಯೋತಕ.
ವಿರೋಧಿ ಬಣದಲ್ಲೂ ಒಗ್ಗಟ್ಟಿನ ಸೂತ್ರ
ವಿಷಯಾಧಾರಿತವಾಗಿ ಸರಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ಒಗ್ಗೂಡಬೇಕಾಗುತ್ತದೆ. ಪ್ರತಿಪಕ್ಷಗಳಲ್ಲಿ ಇಂತಹ ವಿಚಾರದಲ್ಲಿ ಒಮ್ಮತಾಭಿಪ್ರಾಯ ಮೂಡದಿದ್ದರೆ ಜನಹಿತ ಸಾಧನೆಯೂ ಆಗುವುದಿಲ್ಲ. ಕೊರೊನಾ ವಿಷಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಎಲ್ಲೋ ಒಂದು ಕಡೆ ಒಮ್ಮತದ ಸೂತ್ರಕ್ಕೆ ಬಂದಂತಿವೆ. ಉಭಯ ಪಕ್ಷಗಳ ಮುಖಂಡರು ಜಂಟಿ ಸಭೆ ನಡೆಸುವ ಮೂಲಕ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆಯಬಹುದೆಂದು ಈಗಲೇ ಖುಲ್ಲಂಖುಲ್ಲ ಹೇಳುವಂತಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಂತಹ ಪ್ರಾಕೃತಿಕ ವಿಕೋಪ ಬಂದಾಗ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ರಾಜಕಾರಣ ಬದಿಗಿರಿಸಿ ಕೆಲಸ ಮಾಡಿವೆ. ಆದರೆ, ಇಂತಹ ಸಂದರ್ಭದಲ್ಲಿ ಆಗಾಗ ಸರಕಾರಕ್ಕೆ ತಿವಿಯುವುದನ್ನು ಪ್ರತಿಪಕ್ಷಗಳು ಮರೆಯುವಂತಿಲ್ಲ. ಈ ಬಾರಿ ಪ್ರತಿಪಕ್ಷಗಳು ಸರಕಾರಕ್ಕೆ ತಿವಿಯುವ ಕ್ರಿಯೆಯಲ್ಲಿ ಒಂದಾಗಿರುವುದನ್ನು ರಾಜಕೀಯ ದೃಷ್ಟಿಯಿಂದ ವ್ಯಾಖ್ಯಾನಿಸಲು ಕಾಲವೂ ಪಕ್ವವಾಗಿಲ್ಲ. ಇದು ಅಂತಹ ಸಂದರ್ಭವೂ ಅಲ್ಲ.
ಅಸ್ತಿತ್ವದ ಹೋರಾಟ
ಪುತ್ರ ನಿಖಿಲ್‌ ವಿವಾಹದ ಬಳಿಕ ಎಚ್‌.ಡಿ.ಕುಮಾರಸ್ವಾಮಿ ಅವರೂ ಅಖಾಡಕ್ಕೆ ಇಳಿದಿದ್ದಾರೆ. ಅವರು ತಮ್ಮ ರಾಜಕೀಯ ಕಾರ್ಯಕ್ಷೇತ್ರ ರಾಮನಗರ ಜಿಲ್ಲೆಯಲ್ಲಿ ಫೋಕಸ್‌ ಮಾಡಿದ್ದಾರೆ. ಜತೆಗೆ ಮಂಡ್ಯ, ಹಾಸನ ಸೇರಿದಂತೆ ಪಕ್ಷ ಕ್ಕೆ ನೆಲೆಯಿರುವ ಕಡೆ ಜೆಡಿಎಸ್‌ ಲಕ್ಷ್ಯ ಕೊಟ್ಟಂತಿದೆ. ಇದು ರಾಜಕೀಯ ಅಸ್ತಿತ್ವದ ಪ್ರಶ್ನೆ. ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾಗಿ ನಿಯುಕ್ತಿಗೊಳ್ಳುವ ಹೊತ್ತಿಗೆ ಕೊರೊನಾ ಪ್ರವೇಶವಾಗಿತ್ತು. ಹಾಗಾಗಿ ಅವರಿಗೂ ಸಂಘಟನೆ ದೃಷ್ಟಿಯಿಂದ ದೊಡ್ಡ ಸಮಾವೇಶ ನಡೆಸಲು ಸಾಧ್ಯವಾಗಿಲ್ಲ. ಹಾಗಂತ ಸುಮ್ಮನೇ ಕುಳಿತರೆ ಕಾರ್ಯಕರ್ತರಲ್ಲಿನ ಆತ್ಮಸ್ಥೈರ್ಯ ಕಡಿಮೆಯಾಗುತ್ತದೆ. ಈ ದೃಷ್ಟಿಯಿಂದ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರಾಗಿ ಶಿವಕುಮಾರ ಅವರಿಗೂ ತಮ್ಮ ಸಾಮರ್ಥ್ಯ‌ವನ್ನು ಒರೆಗೆ ಹಚ್ಚುವ ಜರೂರತ್ತು ಇದೆ. ಸಿದ್ದರಾಮಯ್ಯ ಅವರಿಗೂ ಸರಿಯಾಗಿ ‘ತಾರಾನುಕೂಲ’ ಕೂಡಿ ಬಂದರೆ ಮತ್ತೊಂದು ಇನ್ನಿಂಗ್ಸ್‌ ಆಡಬಾರದೆಂದೇನೂ ಇಲ್ಲ. ಹಾಗಾಗಿ ಕೊರೊನಾ ವಿರುದ್ಧದ ಸಂಘಟಿತ ಹೋರಾಟದ ಜತೆಗೆ ಭವಿಷ್ಯದ ರಾಜಕಾರಣದ ಕನಸುಗಳನ್ನೂ ಹೊತ್ತುಕೊಂಡಿರುವ ಪ್ರತಿಪಕ್ಷಗಳ ಪ್ರಮುಖರು ಸಕ್ರಿಯರಾದಂತೆ ತೋರುತ್ತಿದೆ. ಇದನ್ನು ವ್ಯಷ್ಟಿಗಿಂತ ಸಮಷ್ಟಿಯ ಪ್ರಜ್ಞೆಯಿಂದ ನೋಡದರೆ ಕೊರೊನಾದಂತಹ ಬಿಕ್ಕಟ್ಟಿನಿಂದ ಪಾರಾಗಲು ಸರಕಾರವನ್ನು ಜಾಗೃತವಾಗಿಡಲು ಈ ವಿದ್ಯಮಾನ ಸ್ವೀಕಾರಾರ್ಹವಾದುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top