– ವಿಮಾನಯಾನ ಶುರುವಾದ ಕೂಡಲೇ ಮರಳಲು ಕಂಪನಿಗಳ ಸೂಚನೆ
– ಕೆಲವು ಉದ್ಯಮಿಗಳೂ ಅತಂತ್ರ
– ವಿಜಯ ಕೋಟ್ಯಾನ್, ಮಂಗಳೂರು
ಕೊರೊನಾ ಮಹಾಮಾರಿ ದೇಶದಲ್ಲಿ ಕಾರ್ಮಿಕ ವಲಯವನ್ನು ಕಂಗಾಲುಗೊಳಿಸಿರುವಂತೆಯೇ ಭಾರತದಿಂದ ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ದುಡಿಯುತ್ತಿರುವ ಕಾರ್ಮಿಕ ವರ್ಗವನ್ನೂ ಚಿಂತೆಗೀಡು ಮಾಡಿದೆ. ಒಂದು ಮೂಲದ ಪ್ರಕಾರ ಅಲ್ಲಿರುವ ಸುಮಾರು 10 ಲಕ್ಷ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ವಿದೇಶಕ್ಕೆ ಹೋಗಿರುವ ಭಾರತೀಯರಲ್ಲಿ ಶೇ. 30 ಮಂದಿ ಅರಬ್ ರಾಷ್ಟ್ರಗಳಾದ ಕುವೈಟ್, ಒಮಾನ್, ಬಹರೈನ್, ಕತಾರ್, ಸೌದಿ, ಯುಎಇ ರಾಷ್ಟ್ರಗಳಲ್ಲಿದ್ದಾರೆ.
ಅಟೋಮೊಬೈಲ್ಸ್, ವಾಯುಯಾನ ವಿಭಾಗ, ಗ್ಯಾರೇಜ್, ಸೇಲ್ಸ್ ಡಿಪಾರ್ಟ್‌ಮೆಂಟ್, ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿ ಯನ್, ಕೂಲಿ ಕಾರ್ಮಿಕರು, ಹೋಟೆಲ್‌ಗಳು, ಮನೆ ಕೆಲಸ.. ಹೀಗೆ ನಾನಾ ಉದ್ಯೋಗಗಳನ್ನು ಮಾಡಿಕೊಂಡಿರುವ 15 ಲಕ್ಷ ಮಂದಿ ಅರಬ್ ರಾಷ್ಟ್ರಗಳಲ್ಲಿದ್ದಾರೆ. ಅದರಲ್ಲಿ ಕನ್ನಡಿಗರ ಪಾಲು ದೊಡ್ಡದಿದೆ ಎನ್ನುತ್ತಾರೆ ಕುವೈಟ್‌ನಲ್ಲಿರುವ ಅನಿವಾಸಿ ಭಾರತೀಯ ಮೋಹನ್ದಾಸ್ ಕಾಮತ್. ಅರಬ್ ರಾಷ್ಟ್ರಗಳಲ್ಲಿ ಹೆಚ್ಚಿನ ಕಂಪನಿಗಳು ಕೈಚೆಲ್ಲಿವೆ. ಹೀಗಾಗಿ ಉದ್ಯೋಗವಿಲ್ಲದೆ, ವೇತನವಿಲ್ಲದೆ ಜನರು ಕಂಗಾಲಾಗಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡುವವರು ಹೊರತುಪಡಿಸಿ ಉಳಿದವರು ಊಟಕ್ಕೂ ತ್ರಾಸಪಡುತ್ತಿದ್ದಾರೆ ಎನ್ನುತ್ತಾರೆ ದುಬೈನಲ್ಲಿರುವ ಅನಿವಾಸಿ ಭಾರತೀಯ ಶರತ್‌ಚಂದ್ರ.
ಕುವೈಟ್‌ನಲ್ಲೇ 25 ಸಾವಿರ ಮಂದಿ ಉದ್ಯೋಗ ಕಳೆದುಕೊಂಡ ಬಗ್ಗೆ ಅರಬ್ ಟೈಮ್ಸ್ ವರದಿ ಮಾಡಿದೆ. ಕುವೈಟ್‌ನ ವಾಯುಯಾನ ಸಂಸ್ಥೆ ಎನ್ಎಎಸ್ (ನ್ಯಾಷನಲ್ ಎವಿಯೇಷನ್ ಸೆಕ್ಟರ್)ನ ಸಿಬ್ಬಂದಿ ಪೈಕಿ ಶೇ. 80 ಭಾರತೀಯರು. ಇವರಲ್ಲಿ 5 ಸಾವಿರಕ್ಕೂ ಅಧಿಕ ಭಾರತೀಯರ ಉದ್ಯೋಗಕ್ಕೆ ಕುತ್ತು ಬಂದಿದೆ. ಕಂಪನಿಗಳು ನಷ್ಟದಲ್ಲಿರುವುದರಿಂದ ವಿದೇಶಿಗರಿಗೆ ಗೇಟ್‌ಪಾಸ್ ನೀಡುತ್ತಿದೆ ಎನ್ನುತ್ತಾರೆ ಕುವೈಟ್‌ನಲ್ಲಿರುವ ಅನಿವಾಸಿ ಭಾರತೀಯ ಮೋಹನ್ದಾಸ್ ಕಾಮತ್.
ಉದ್ಯಮಿಗಳಿಗೂ ಸಂಕಟ: ವಿಶ್ವದ ನಾನಾ ಕಡೆ ಭಾರತೀಯರು ಹೋಟೆಲ್ ಉದ್ಯಮ, ಬೇಕರಿ, ಆಯಿಲ್, ಮರ, ಪ್ಲೈವುಡ್, ಶಾಪಿಂಗ್ ಮಾಲ್ ಸೇರಿದಂತೆ ನಾನಾ ಉದ್ಯಮಗಳನ್ನು ನಡೆಸುತ್ತಿದ್ದು, ಕೊರೊನಾ ಅವರಿಗೂ ದೊಡ್ಡ ಹೊಡೆತ ನೀಡಿದೆ ಎನ್ನುತ್ತಾರೆ ಕುವೈಟ್‌ನಲ್ಲಿ ಹೋಟೆಲ್ ಉದ್ಯಮಿಯಾಗಿರುವ ಸತೀಶ್ಚಂದ್ರ ಕಾರ್ಕಳ. ಕುವೈಟ್‌ನಲ್ಲಿ ಭಾರತೀಯರೇ ಹೆಚ್ಚಾಗಿರುವ ಜಿಲೆಬ್ ಅಲ್-ಸುಯೋಕ್, ಮೆಹ್ಬುಲ್ಲಾದಲ್ಲಿ ಈಗ ಸಂಪೂರ್ಣ ಕರ್ಫ್ಯೂ ಪರಿಸ್ಥಿತಿ ಇದೆ.
ಸ್ವದೇಶಕ್ಕೆ ತೆರಳಿ: ಬಹುತೇಕ ರಾಷ್ಟ್ರದಲ್ಲಿ ಕಂಪನಿಗಳನ್ನು ಸ್ಥಗಿತಗೊಳಿಸಿದ ಮಾಲೀಕರು, ಸಿಬ್ಬಂದಿಗೆ ನೋಟಿಸ್ ನೀಡಿ ವಿಮಾನಯಾನ ಪುನರಾರಂಭವಾದ ಕೂಡಲೇ ನಿಮ್ಮೂರಿಗೆ ತೆರಳಿ ಎಂದು ಹೇಳುತ್ತಿದ್ದಾರೆ. ಕೆಲವರ ಕಂಪನಿ ಪರವಾನಗಿ ಮುಗಿದಿದ್ದು, ಅದನ್ನು ಇನ್ನು ರಿನೀವಲ್ ಮಾಡಲ್ಲ ಎನ್ನುತ್ತಾರೆ. ಇನ್ನು ಕೆಲವು ಸಂಸ್ಥೆಗಳಲ್ಲಿ ನಿಮಗೆ ಊಟ-ವಸತಿ ನೀಡಲು ಆಗಲ್ಲ. ಕೆಲಸ ಬೇಕಾದರೆ 6 ತಿಂಗಳು ನಿಮ್ಮದೇ ಖರ್ಚಿನಲ್ಲಿ ನಿಲ್ಲಿ, ಇಲ್ಲದಿದ್ದರೆ ನಿಮ್ಮೂರಿಗೆ ಹೋಗಿ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅನಿವಾಸಿ ಭಾರತೀಯರು ಅತಂತ್ರರಾಗಿದ್ದಾರೆ. ಉದ್ಯೋಗವಿಲ್ಲದೆ ಅತಂತ್ರರಾಗಿರುವ ಭಾರತೀಯರನ್ನು ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಬಲವಾಗಿದೆ.
ಊರಿಗೆ ಬಂದವರು ಸ್ವಲ್ಪ ನಿರಾಳ: ಲಾಕ್‌ಡೌನ್ ಘೋಷಣೆಯಾಗುವ ಮುನ್ನ ಕೆಲವರು ರಜೆಯಲ್ಲಿ ಬಂದಿದ್ದು ಅವರು ಸ್ವಲ್ಪಮಟ್ಟಿಗೆ ನಿರಾಳರಾಗಿದ್ದಾರೆ. ಆದರೆ ಅವರಲ್ಲೂ ಕೆಲವರ ರಜೆ ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು ಬಳಿಕ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಕಂಪನಿಯ ಎಚ್‌ಆರ್‌ಗಳಲ್ಲಿ ಕರೆ ಮಾಡಿ ಕೇಳಿದರೆ ‘ಸದ್ಯ ಏನೂ ಹೇಳುವಂತಿಲ್ಲ. ನಿಮ್ಮ ರಜೆ ಮುಗಿದ ಮೇಲೆ ಮಾತನಾಡಿ’ ಎಂದಷ್ಟೇ ಉತ್ತರ ಬರುತ್ತಿದೆ ಎನ್ನುತ್ತಾರೆ ದುಬೈನಿಂದ ಆಗಮಿಸಿದ ಮಿಥುನ್.
ಅನಿವಾಸಿ ಭಾರತೀಯರು ವಿದೇಶದಲ್ಲಿ ಉದ್ಯೋಗ, ಉದ್ಯಮ ನಡೆಸುತ್ತಿದ್ದರೂ ತಮ್ಮ ಆದಾಯದಿಂದ ಊರಿನಲ್ಲೇ ಮನೆ, ವ್ಯವಹಾರ ನಡೆಸುತ್ತಿದ್ದಾರೆ. ಇದಕ್ಕಾಗಿ ಅದೆಷ್ಟೋ ಮಂದಿ ಬ್ಯಾಂಕ್‌ನಿಂದ ಲಕ್ಷಾಂತರ ರೂ. ಸಾಲ ಪಡೆದಿದ್ದು, ಉದ್ಯೋಗ ಕಳೆದುಕೊಂಡರೆ ಆ ಸಾಲ ತೀರಿಸುವುದೇ ದೊಡ್ಡ ಸವಾಲು. ಉದ್ಯಮಿಗಳು ಕೂಡ ವಿದೇಶಿ ಉದ್ಯಮ ನಂಬಿಕೊಂಡೇ ತಾಯ್ನಾಡಿನಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಸೇರಿದಂತೆ ಹಲವು ಸಂಸ್ಥೆಗಳನ್ನು ಹುಟ್ಟು ಹಾಕಿ ಪೋಷಿಸುತ್ತಿದ್ದರು. ಇನ್ನು ಕೆಲವರು ವಿದೇಶದಲ್ಲಿಯೇ ಬ್ಯಾಂಕ್‌ನಲ್ಲಿ ಲೋನ್ ಮಾಡಿದ್ದು ಅವರು ಮತ್ತಷ್ಟು ಚಿಂತಾಕ್ರಾಂತರಾಗಿದ್ದಾರೆ.