ಕೆಲವು ದೊಡ್ಡ ನಗರಗಳು ಕೋವಿಡ್-19 ಕಾಟವನ್ನು ತಡೆಯಲಾಗದೆ ಏದುಸಿರು ಬಿಡುತ್ತಿದ್ದರೆ, ಕೆಲವು ಸಣ್ಣ ಪಟ್ಟಣಗಳು ಅತ್ಯಂತ ಯಶಸ್ವಿಯಾಗಿ ಕೊರೊನಾ ಹಾವಳಿಯನ್ನು ಎದುರಿಸಿ ನಿಂತು ಮುಗುಳುನಗೆ ಬೀರುತ್ತಿವೆ. ಆ ನಗರಗಳು ಯಾವುವು, ಅವು ಹೇಗೆ ಸೋಂಕನ್ನು ಬಾಗಿಲಾಚೆ ನಿಲ್ಲಿಸಿವೆ?
ಒಂದು ತಿಂಗಳ ಹಿಂದೆ ಕೋವಿಡ್ ಸೋಂಕಿನ ಕೆಂಪು ವಲಯ ಅಂತಲೇ ಗುರುತಿಸಲಾಗಿದ್ದ ರಾಜಸ್ಥಾನದ ಭಿಲ್ವಾರಾ ನಗರದ ಇಂದಿನ ಚಿತ್ರಣವೇ ಬೇರೆ. ಅಲ್ಲಿದ್ದ 28 ಕೋವಿಡ್ ಸೋಂಕು ಪಾಸಿಟಿವ್ ಪ್ರಕರಣಗಳಲ್ಲಿ 25 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಭಿಲ್ವಾರಾದಂತೆ ಸೋಂಕು ಹರಡಿರುವ ಅನೇಕ ಕಡೆ, ಭಿಲ್ವಾರಾದ ನಿರ್ಬಂಧ ಸಾಧಿಸಲು ಸಾಧ್ಯ ಆಗಿಲ್ಲ. ಏಪ್ರಿಲ್ 4ರಂದು ಅಲ್ಲಿ 27ನೇ ಕೇಸು ಕಂಡುಬಂತು. ನಂತರ 28ನೇ ಕೇಸು ಕಂಡುಬಂದದ್ದು ಏ.9ರಂದು. ಅದರ ನಂತರ ಯಾವುದೇ ಹೊಸ ಹರಡುವಿಕೆ ರಿಪೋರ್ಟ್ ಆಗಿಲ್ಲ. ಈ ಸೋಂಕು ತಡೆ ಯಶಸ್ಸಿಗೆ ಕಾರಣ ಆಗಿರುವುದು ಅಲ್ಲಿನ ಅತ್ಯಂತ ಕಠಿಣ ನಿರ್ಬಂಧ ನಿಯಮಗಳು. ಮಾರ್ಚ್ 20ರಿಂದ ಈಚೆಗೆ ಅಲ್ಲಿ ಲಾಕ್‌ಡೌನ್ ಇದೆ. ಏ.3ರಿಂದ ಕರ್ಫ್ಯೂ ಇನ್ನಷ್ಟು ಬಿಗಿ ಮಾಡಲಾಗಿದೆ. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸ್ಥಳೀಯಾಡಳಿತ ಸಿದ್ಧವಾಗಿಲ್ಲ.
ಇಲ್ಲಿನ ಲಾಕ್‌ಡೌನ್‌ನ ಮುಖ್ಯಾಂಶ ಎಂದರೆ, ದಿನಬಳಕೆ ವಸ್ತುಗಳನ್ನು ಮನೆಮನೆಗೆ ತಲುಪಿಸುವುದು. ಸ್ಥಳೀಯಾಡಳಿತದ ಬಳಿ ನಿರ್ದಿಷ್ಟ ವೇಳಾಪಟ್ಟಿ ಇದೆ. ಪ್ರತಿದಿನ ಇಂತಿಂಥ ವೇಳೆಗೇ ಇಷ್ಟು ಸಾಮಗ್ರಿ ತಲುಪಿಸುವಿಕೆ, ಲಾಕ್‌ಡೌನ್‌ನ ಮುಂದಿನ ಹಂತದವರೆಗೆ ಹೊರಗೆ ಬರುವ ಅಗತ್ಯವೇ ಇಲ್ಲದ ಒದಗಣೆ ಇಲ್ಲಿ ನಡೆಯುತ್ತಿದೆ. ಈ ಕಠಿಣ ನಿರ್ಬಂಧ ಎಲ್ಲಿವರೆಗೆ ಮುಂದುವರಿಯುತ್ತದೆ? ಏ.12ರವರೆಗೆ ಕಾದು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ.
ಮಾ.20ರಂದು ಇಲ್ಲಿ ಖಾಸಗಿ ಆಸ್ಪತ್ರೆಯೊಂದರ ವೈದ್ಯರಿಗೆ ಕೋವಿಡ್ ಪಾಸಿಟಿವ್ ಕಂಡುಬಂತು. ಇಡೀ ನಗರದಲ್ಲಿ ಭಯ ಆವರಿಸಿತು. ಆಗಲೇ ನಗರದಲ್ಲಿ ಕಫ್ರ್ಯೂ ವಿದಿಸಲಾಯಿತು. ಅಲ್ಲಿಂದೀಚೆಗೆ 15 ದಿನಗಳಾದವು. ಪೊಲೀಸರು ಹಾಗೂ ಆರೋಗ್ಯ ಸೇವೆಯ ಸಿಬ್ಬಂದಿ ಕೈಜೋಡಿಸಿ ನಗರವನ್ನು ಸಂಪೂರ್ಣ ಮುಚ್ಚಿದ್ದಾರೆ. ಇಲ್ಲೊಂದು ಲ್ಯಾಬ್ ಕೂಡ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಮನವಿ ಮಾಡಲಾಗಿದೆ.
ಭಿಲ್ವಾರಾ ಚಿತ್ರಣ
3,874 ಆರೋಗ್ಯ ತಂಡಗಳು
4,41,953 ಮನೆಗಳ ತಪಾಸಣೆ
28 ಲಕ್ಷ ಮಂದಿಯ ತಪಾಸಣೆ
17,597 ಶಂಕಿತ ಕೇಸುಗಳ ಐಸೋಲೇಶನ್ ಮತ್ತು ಪರೀಕ್ಷೆ
28 ಪಾಸಿಟಿವ್ ಕೇಸುಗಳು
25 ಗುಣಮುಖ
2 ಸಾವು
ಭಿಲ್ವಾರಾ ಸೀಲ್‌ಡೌನ್ ಹೇಗೆ?
– ಐಪಿಸಿ 144 ಸೆಕ್ಷನ್ ಪ್ರಕಾರ ಕರ್ಫ್ಯೂ
– ಹಂತ 1: ಅಗತ್ಯ ಸೇವೆಗಳು ಮುಕ್ತ
– ಹಂತ 2: ಸಂಪೂರ್ಣ ಶಟ್‌ಡೌನ್
– ನಗರದ ಎಲ್ಲ ಗಡಿಗಳು ಪೂರ್ತಿ ಬಂದ್
– ಜಿಲ್ಲಾಗಡಿಗಳು, ಆಗಮನ- ನಿರ್ಗಮನ ದಾರಿಗಳಲ್ಲಿ ಚೆಕ್‌ಪಾಯಿಂಟ್
– ಸುತ್ತಮುತ್ತಲಿನ ಜಿಲ್ಲೆಗಳಿಗೆ ಕೂಡ ಭಿಲ್ವಾರ ಜೊತೆಗಿನ ಗಡಿ ಬಂದ್ ಮಾಡಲು ಸೂಚನೆ
– ಗೂಡ್ಸ್ ಮತ್ತು ಖಾಸಗಿ ವಾಹನಗಳ ಓಡಾಟಕ್ಕೆ ಪೂರ್ತಿ ನಿರ್ಬಂಧ
– ನಿರ್ಬಂಧಿತ ಹಾಗೂ ಬಫರ್ ಜೋನ್‌ಗಳು ‘ಓಡಾಟ ರಹಿತ’ ವಲಯಗಳೆಂದು ಘೋಷಣೆ
ಕ್ಲಸ್ಟರ್‌ಗಳ ಗುರುತು
– ಕೋವಿಡ್-19 ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ಕ್ಲಸ್ಟರ್ ಮ್ಯಾಪಿಂಗ್
– ಆರು ಕ್ಲಸ್ಟರ್‌ಗಳನ್ನು ಗುರುತಿಸಲಾಗಿದ್ದು ವಿಶೇಷ ತಂಡಗಳನ್ನು ಅಲ್ಲಿಗೆ ನಿಯೋಜಿಸಲಾಗಿದೆ
– ಶಂಕಿತ ಕೊರೊನಾ ಕೇಸುಗಳನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಪ್ರತಿದಿನದ ಸೋಂಕು ನಿವಾರಣೆ ಪ್ರಕ್ರಿಯೆ
– ನಿರ್ಬಂಧಿತ ಹಾಗೂ ಬಫರ್ ಜೋನ್‌ಗಳಲ್ಲಿ
– ಪಾಸಿಟಿವ್ ಕೇಸುಗಳು ಕಂಡುಬಂದ ಪ್ರದೇಶಗಳಲ್ಲಿ
– ಎಲ್ಲ ಆಂಬುಲೆನ್ಸ್‌ಗಳು ಹಾಗೂ ಪೊಲೀಸ್ ವಾಹನಗಳು
– ಜಿಲ್ಲಾಡಳಿತ ಕಚೇರಿ, ಪೊಲೀಸ್ ವಸತಿ ಹಾಗೂ ಸರಕಾರಿ ಕಚೇರಿಗಳು
ನಗರ ಆಸ್ಪತ್ರೆ
– ಕ್ವಾರಂಟೈನ್ ಮತ್ತು ಐಸೋಲೇಶನ್ ವಾರ್ಡ್‌ಗಳು
– 27 ಹೋಟೆಲ್‌ಗಳಲ್ಲಿ1547 ರೂಮುಗಳು
– 22 ಸಂಸ್ಥೆ, ಹಾಸ್ಟೆಲ್‌ಗಳಲ್ಲಿಒಟ್ಟು 11,659 ಬೆಡ್‌ಗಳು
– 200 ಹಾಸಿಗೆಗಳ ಜಿಲ್ಲಾಆಸ್ಪತ್ರೆ ಹಾಗೂ 427 ಹಾಸಿಗೆಗೆ ವಿಸ್ತರಿಸಲು ಅವಕಾಶ
– 4 ಖಾಸಗಿ ಆಸ್ಪತ್ರೆಗಳು 25 ಬೆಡ್‌ಗಳ ಐಸೋಲೇಶನ್ ಘಟಕಗಳೊಂದಿಗೆ ಸ್ಕ್ರೀನಿಂಗ್ ವ್ಯವಸ್ಥೆ
– ಇನ್‌ಫ್ಲುಯೆಂಜಾ ಸೋಂಕಿನ ಲಕ್ಷಣಗಳನ್ನು ಗುರುತಿಸಬಲ್ಲತಜ್ಞರ ನೇತೃತ್ವದ ಪರೀಕ್ಷಾ ತಂಡಗಳು
– ವಿದೇಶ ಪ್ರವಾಸ ಹಿನ್ನೆಲೆಯಿರುವ ಎಲ್ಲ ವ್ಯಕ್ತಿಗಳೂ ಪರೀಕ್ಷೆಗೆ
– ವಲಸಿಗರನ್ನು ಪತ್ತೆ ಹಚ್ಚಿ ಅವರನ್ನೂ ಪರೀಕ್ಷೆ
– ಮರುಕಳಿಕೆ ತಪ್ಪಿಸಲು ಸ್ಕ್ರೀನಿಂಗ್ ನಡೆಸಿದ ಪ್ರದೇಶಗಳಿಗೆ ಗುರುತು
– 10 ಸರ್ವೇ ತಂಡಗಳಿಗೆ ಒಬ್ಬ ಸೂಪರ್‌ವೈಸರ್
– ರಾಜ್ಯದ ತುರ್ತು ಪ್ರತಿಕ್ರಿಯೆ ತಂಡ, ಪೊಲೀಸ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜೊತೆ ಸಂಪರ್ಕಿತ 24 ಗಂಟೆಗಳ ವಾರ್ ರೂಮ್.
– ಸಂಪೂರ್ಣವಾಗಿ ಸ್ಕ್ರೀನಿಂಗ್ ಹಾಗೂ ಪರೀಕ್ಷೆಗೆ ಮೀಸಲಾದ ಕೇಂದ್ರ
– ಎಲ್ಲ ಶಂಕಿತ ಪ್ರಕರಣಗಳ ಹೋಮ್ ಕ್ವಾರಂಟೈನ್ ಮೇಲೆ ನಿಗಾ ಇಡಲು ವ್ಯವಸ್ಥೆ
– ಸೋಂಕು ಪತ್ತೆಯಾದ ಆಸ್ಪತ್ರೆಗೆ ಸಂಬಂಧಿಸಿದ ಪ್ರತಿಯೊಬ್ಬನನ್ನೂ ಪರೀಕ್ಷಿಸಲು ಆದ್ಯತೆ
– ಆಸ್ಪತ್ರೆಯ ಎಲ್ಲಐಸಿಯು ಪೇಷೆಂಟ್‌ಗಳು, ಒಪಿಡಿ ಭೇಟಿ ನೀಡಿದವರು, ಡಾಕ್ಟರ್‌ಗಳಿಗೆ ಸಂಪರ್ಕವಿದ್ದವರು, ನರ್ಸ್‌ಗಳ ಪತ್ತೆ ಹಚ್ಚಿ ಪರೀಕ್ಷೆ
– ಎಲ್ಲ ಪಾಸಿಟಿವ್ ಕೇಸುಗಳ ಸಂಪರ್ಕಿತರ ಪರೀಕ್ಷೆಗಳಿಗೆ ಮೊದಲ ಆದ್ಯತೆ
– ಎಲ್ಲ ಖಾಸಗಿ ಅಸ್ಪತ್ರೆಗಳ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರತ್ತ ವಿಸ್ತರಿಸಿದ ಪರೀಕ್ಷಾ ಕಾರ್ಯಕ್ರಮ
ಇಸ್ಲಾಂಪುರದ ಮಾದರಿ
ಮುಂಬಯಿ- ಬೆಂಗಳೂರು ಹೆದ್ದಾರಿಯಲ್ಲಿರುವ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ಎಂಬ ಸಣ್ಣ ಪಟ್ಟಣ, ಕ್ಲಸ್ಟರ್‌ಗಳ ನಿರ್ಬಂಧ ಹಾಗೂ ಆ ಮೂಲಕ ಸೋಂಕು ಪರಿಣಾಮಕಾರಿ ತಡೆಯಲ್ಲಿ ಮಾದರಿ ಎನಿಸಿದೆ. ಪಟ್ಟಣವನ್ನೇ ಪೂರ್ತಿಯಾಗಿ ಬಂದ್ ಮಾಡಿರುವ ಕ್ರಮ ಹಾಗೂ ಚಿಕಿತ್ಸೆಯಿಂದಾಗಿ, ಪರಿಣಾಮಕಾರಿ ತಡೆ ಸಾಧ್ಯವಾಗಿದೆ. ಇಲ್ಲಿಒಂದೇ ಕುಟುಂಬದ 26 ಮಂದಿಗೆ ಕೋವಿಡ್ ಸೋಂಕಿತ್ತು. ಈಗ 22 ಮಂದಿಯಲ್ಲಿ ಕೋವಿಡ್ ನೆಗೆಟಿವ್ ಕಂಡುಬಂದಿದೆ. ಇಡೀ ಕುಟುಂಬವನ್ನು ಪೂರ್ತಿ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಚಿಕಿತ್ಸೆ ಒದಗಿಸಲಾಗುತ್ತಿದೆ.
ಮಾರ್ಚ್ 23ರಂದು ಒಂದೇ ಕುಟುಂಬದ 4 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಾಗ, 70,000 ಮಂದಿಯಿರುವ ಈ ನಗರದಲ್ಲಿ ಆತಂಕ ಕಂಡುಬಂದಿತ್ತು. ಇದೀಗ 17 ದಿನಗಳ ನಂತರ, ಒಟ್ಟಾರೆ ಇಲ್ಲಿನ ಪ್ರಕರಣಗಳು ಕೇವಲ 26 ಹಾಗೂ ಇವೆಲ್ಲವೂ ಮೊದಲ ಸೋಂಕಿತರ ನಿಕಟ ಸಂಪರ್ಕದಲ್ಲಿದ್ದ ಅವರದೇ ಕುಟುಂಬದ ವ್ಯಕ್ತಿಗಳಿಗೆ ಬಂದಿದ್ದ ಸೋಂಕು. ಹೊರಗಡೆ ಅದು ಹರಡುವ ಮುನ್ನವೇ ಆಡಳಿತ ಎಚ್ಚೆತ್ತುಕೊಂಡಿತ್ತು.
ಮೊದಲ ಪ್ರಕರಣ ಕಂಡುಬಂದ ಕೂಡಲೇ ಕ್ರಿಯೆಗಿಳಿದ ಸಾಂಗ್ಲಿ ಜಿಲ್ಲಾಡಳಿತ, ಕುಟುಂಬದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿತ್ತಲ್ಲದೆ, ಅವರ ಮನೆಯ ಸುತ್ತಮುತ್ತಲಿನ ಒಂದು ಕಿಲೋಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿತ್ತು. 53 ಹೈ ರಿಸ್ಕ್ ಹಾಗೂ 436 ಕಡಿಮೆ ರಿಸ್ಕ್‌ನ ಸಂಪರ್ಕಿತರನ್ನು ಗುರುತಿಸಿ, ಲಕ್ಷಣಗಳಿದ್ದವರನ್ನು ಐಸೋಲೇಶನ್‌ಗೆ ಕಳಿಸಲಾಗಿತ್ತು. ನಿರ್ಬಂಧಿತ ಪ್ರದೇಶದ ಸುತ್ತಲಿನ ಒಂದು ಕಿಲೋಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ನಿರ್ಬಂಧಿತ ಪ್ರದೇಶಕ್ಕೆ ಮನೆಮನೆಗೆ ದಿನಸಿ ನೀಡಲಾಗುತ್ತಿದೆ. ಬಫರ್ ಪ್ರದೇಶದಿಂದ ಒಂದು ಮನೆಗೆ ಒಬ್ಬರು ಮಾತ್ರ ಅಗತ್ಯ ವಸ್ತುಗಳಿಗಾಗಿ ದಿನಕ್ಕೊಮ್ಮೆ ಹೊರಗೆ ಹೋಗಬಹುದು. ಇಡೀ ಪ್ರದೇಶಕ್ಕೇ ಒಂದೇ ಒಂದು ಆಗಮನ- ನಿರ್ಗಮನ ದ್ವಾರವನ್ನಿಟ್ಟು ಪಹರೆ ಹಾಕಲಾಯಿತು. ಪೊಲೀಸರ ಸಹಾಯದಿಂದ ಆರೋಗ್ಯ ಸೇವೆಯ ತಂಡಗಳು ಈ ವಲಯದಲ್ಲಿ ಮನೆಮನೆ ಭೇಟಿ ನೀಡಿ ಸದಸ್ಯರ ಆರೋಗ್ಯ ವಿವರಗಳನ್ನು ಸಂಗ್ರಹಿಸಿದವು.