ಕೊರೊನಾ ಶಂಕಿತರಿಗೆ ತಂತ್ರಜ್ಞಾನ ಕಡಿವಾಣ

ಭಾರತವೂ ಸೇರಿದಂತೆ ಹೆಚ್ಚಿನ ಎಲ್ಲ ದೇಶಗಳು ತಮ್ಮ ಪ್ರಜೆಗಳಲ್ಲಿ ಕೋವಿಡ್‌ ಸೋಂಕಿತರ ಮೇಲೆ ನಿಗಾ ಇಡಲು ಹಾಗೂ ಸೋಂಕು ಶಂಕಿತರನ್ನು ಪತ್ತೆ ಹಚ್ಚಲು ನಾನಾ ನಿಗಾ ವ್ಯವಸ್ಥೆಗಳನ್ನು ರೂಪಿಸಿಕೊಂಡಿವೆ. ಅಂಥ ನಿಗಾ ವ್ಯವಸ್ಥೆಗಳ ಮೇಲೊಂದು ನೋಟ ಇಲ್ಲಿದೆ.

ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ಮೊನ್ನೆ ಒಂದು ಡ್ಯಾಶ್‌ಬೋರ್ಡ್‌ ಬಿಡುಗಡೆ ಮಾಡಿದರು. ಇದರ ಕೆಲಸ, ರಾಜ್ಯದಾದ್ಯಂತ ಇರುವ ಕೋವಿಡ್‌ ಸೊಂಕಿತರು, ಶಂಕಿತರು ಹಾಗೂ ಚಿಕಿತ್ಸೆ ಕುರಿತ ಪೂರ್ಣ ವಿವರ ನೀಡುವುದು. ಇದರ ಜೊತೆಗೆ, ಕೊರೊನಾ ಸೋಂಕಿನ ಶಂಕೆಯಿಂದ ಪ್ರತ್ಯೇಕ ವಾಸಕ್ಕೆ ಶಿಫಾರಸು ಮಾಡಿದವರು ಕ್ವಾರಂಟೈನ್‌ಗಿಂತ 100 ಮೀಟರ್‌ ಆಚೀಚೆ ಹೋದರೂ ಈ ಡ್ಯಾಶ್‌ಬೋರ್ಡ್‌ನಿಂದ ತಿಳಿದುಕೊಳ್ಳಬಹುದು.
ಇತ್ತೀಚೆಗೆ ನಮ್ಮ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ)ದ ಇ- ಸರಕಾರಿ ಮೊಬೈಲ್‌ ಆ್ಯಪ್‌ಗಳ ವಿಭಾಗ ಒಂದು ಆ್ಯಪ್‌ ಬಿಡುಗಡೆ ಮಾಡಿತು. ಅದರ ಹೆಸರು ‘ಆರೋಗ್ಯ ಸೇತು.’ ಇದರ ಉದ್ದೇಶ ಏನೆಂದರೆ ಶಂಕಿತ ಕೊರೊನಾ ಕೇಸುಗಳನ್ನು ಟ್ರ್ಯಾಕ್‌ ಮಾಡುವುದು. ಸೋಂಕಿತ ವ್ಯಕ್ತಿಗಳ ನಿಕಟ ಸಂಪರ್ಕಕ್ಕೆ ಬಂದ, ಶಂಕಿತ ಸೋಂಕಿತರನ್ನು ಹಿಡಿಯಲು ಅಗತ್ಯ ಬೀಳುವ ಮನುಷ್ಯ ಪ್ರಯತ್ನವನ್ನು ಇದು ಕಡಿಮೆ ಮಾಡುತ್ತದೆ. ಈ ಆ್ಯಪ್‌ ನಿಮ್ಮ ಮೊಬೈಲ್‌ನ ಬ್ಲೂಟೂತ್‌ನ ಮೂಲಕ, ನಿಮ್ಮ ಸಮೀಪಕ್ಕೆ ಬಂದ ಇನ್ನೊಂದು ಮೊಬೈಲ್‌ ನಂಬರನ್ನು ಗುರುತಿಸಿ ನೆನಪಿನಲ್ಲಿಟ್ಟುಕೊಳ್ಳುತ್ತದೆ. ನೀವು ಯಾರಾದರೂ ಸೋಂಕಿತ ವ್ಯಕ್ತಿಯ ಆಸುಪಾಸಿನಲ್ಲಿ ಓಡಾಡಿದ್ದರೆ, ಆ ವ್ಯಕ್ತಿಯ ಕಾಂಟ್ಯಾಕ್ಟ್ ಟ್ರೇಸಿಂಗ್‌ ಮಾಡುವಾಗ ನಿಮ್ಮ ನಂಬರನ್ನು ಅದು ಗುರುತಿಸುತ್ತದೆ. ಇದು ಶಂಕಿತರನ್ನು ಕಂಡುಹಿಡಿಯುವ ಕೆಲಸವನ್ನು ಸುಲಭ ಮಾಡಲಿದೆ.
ಸರಕಾರಗಳು ಕೋವಿಡ್‌ ಸೋಂಕಿತರನ್ನು ಕಂಡುಹಿಡಿಯುವ ಕೆಲಸವನ್ನು ಸುಲಭ ಮಾಡಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗಿವೆ. ಚೀನಾ, ಭಾರತ ಸೇರಿದಂತೆ ಹೆಚ್ಚಿನ ಎಲ್ಲ ದೇಶಗಳು ದೇಶದ ಪ್ರತಿಯೊಬ್ಬ ಪ್ರಜೆಯ ಮೊಬೈಲ್‌ ಸೇರಿದಂತೆ ಹಲವು ತಂತ್ರಜ್ಞಾನ ಉಪಕರಣಗಳ ಮೂಲಕ ನಿಗಾ ಇಟ್ಟಿದ್ದು, ಕೊರೊನಾ ಹರಡದಂತೆ ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ.

ಚೀನಾ
ಮೊದಲು ಕೊರೊನಾ ಕಂಡುಬಂದ ಚೀನಾ ದೇಶ ಅದನ್ನು ವಿಶ್ವಕ್ಕೆ ಹರಡಲು ಕಾರಣವಾದ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಈಗ ತನ್ನ ಎಲ್ಲ ಪ್ರಜೆಗಳ ಮೇಲೆ ತೀವ್ರ ನಿಗಾ ಕ್ರಮಗಳನ್ನು ಕೈಗೊಂಡಿದೆ. ವುಹಾನ್‌ನಂಥ ಬಾಧೆಪೀಡಿತ ಪ್ರದೇಶಗಳಲ್ಲಿ ಎಲ್ಲ ನಾಗರಿಕರಿಗೂ ಒಂದು ಮಣಿಕಟ್ಟಿನ ಬ್ಯಾಂಡ್‌ ಕೊಡಲಾಗಿದ್ದು, ಎಲ್ಲೇ ಹೋಗುವುದಾದರೂ ಅದರಲ್ಲಿರುವ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾ‌ನ್‌ ಮಾಡಬೇಕು. ಆತ ಸೋಂಕಿತ ಅಥವಾ ಸೋಂಕು ಶಂಕಿತನಾಗಿದ್ದರೆ ಎಲ್ಲೂ ಪ್ರವೇಶ ಸಿಗುವುದಿಲ್ಲ. ಹೆಸರು, ಐಡಿ ಸಂಖ್ಯೆ, ಆ ಹೊತ್ತಿನ ದೇಹದ ಉಷ್ಣತೆ, ಟ್ರಾವೆಲ್‌ ವಿವರಗಳನ್ನು ದಾಖಲಿಸುವುದು ಕಡ್ಡಾಯ. ವೀಚಾಟ್‌, ವೀಬೋದಂಥ ಸೋಶಿಯಲ್‌ ಜಾಲತಾಣಗಳಲ್ಲಿ ಕೊರೊನಾಕ್ಕಾಗಿಯೇ ಮೀಸಲಾದ ಹಾಟ್‌ಲೈನ್‌ಗಳಿದ್ದು, ಯಾರಾದರೂ ಶಂಕಿತರು ಕಂಡುಬಂದರೆ ತಕ್ಷಣ ಅದರಲ್ಲೇ ರಿಪೋರ್ಟ್‌ ಮಾಡುವ ವ್ಯವಸ್ಥೆ ಇದೆ. ನೆರೆಹೊರೆಯಲ್ಲಿರುವ ಶಂಕಿತರನ್ನು ಗಮನಕ್ಕೆ ತಂದರೆ ಬಹುಮಾನ ನೀಡುವ ವ್ಯವಸ್ಥೆಯೂ ಇದೆ. ಹಲವು ಆ್ಯಪ್‌ಗಳನ್ನು ಚೀನೀ ಪ್ರಜೆಗಳು ಮೊಬೈಲ್‌ಗಳಲ್ಲಿ ಕಡ್ಡಾಯವಾಗಿ ಇನ್‌ಸ್ಟಾಲ್‌ ಮಾಡಲಾಗಿದೆ. ಅವರು ಯಾರಾದರೂ ಸೋಂಕಿತರ ಅಥವಾ ಶಂಕಿತರ ಸನಿಹ ಬಂದರೆ ಅದು ತಕ್ಷಣ ಅವರನ್ನು ಅಲರ್ಟ್‌ ಮಾಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮುಖ ಗುರುತಿಸುವ ತಂತ್ರಜ್ಞಾನ ಹೊಂದಿರುವ ಸಿಸಿಟಿವಿ ಕ್ಯಾಮೆರಾ ಮತ್ತಿತರ ಸಾಧನಗಳನ್ನು ಸ್ಥಾಪಿಸಲಾಗಿದೆ. ಇವು ಎಂಥ ಜನಜಂಗುಳಿಯಲ್ಲೂ, ಮುಖಕ್ಕೆ ಮಾಸ್ಕ್‌ ಹಾಕದ ವ್ಯಕ್ತಿ ಇದ್ದರೆ ಅಥವಾ ಸಾಮಾನ್ಯ ಸ್ಥಿತಿಗಿಂತ ಹೆಚ್ಚಿನ ದೇಹದ ತಾಪಮಾನ ಹೊಂದಿದ ವ್ಯಕ್ತಿ ಬಂದರೆ ಥಟ್ಟನೆ ಗುರುತಿಸುತ್ತವೆ.

ದಕ್ಷಿಣ ಕೊರಿಯ
ದಕ್ಷಿಣ ಕೊರಿಯ ದೇಶ ಈ ನಿಗಾ ಹಾಗೂ ಟ್ರ್ಯಾಕಿಂಗ್‌ ವ್ಯವಸ್ಥೆಯಲ್ಲಿ ಉಳಿದ ಎಲ್ಲ ದೇಶಗಳಿಗಿಂತ ಬಹು ಮುಂದೆ ಹೋಗಿದೆ. ಅಲ್ಲಿ ಸರಕಾರ ಒಂದು ಮ್ಯಾಪ್‌ ರಚಿಸಿದ್ದು, ಅದರಲ್ಲಿ ಯಾವುದೇ ಸೋಂಕಿತ ವ್ಯಕ್ತಿ ಹಾಗೂ ಶಂಕಿತ ವ್ಯಕ್ತಿಯ ಓಡಾಟದ ವಿವರಗಳೆಲ್ಲ ನಿಮಗೆ ಸಿಗುತ್ತವೆ. ಇದಕ್ಕಾಗಿ ಅಲ್ಲಿನ ಸರಕಾರ ಆಯಾ ವ್ಯಕ್ತಿಯ ಮೊಬೈಲ್‌ ಲೊಕೇಶನ್‌, ಜಿಪಿಎಸ್‌, ಆ್ಯಪ್‌ಗಳು ಮಾತ್ರವಲ್ಲ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ವ್ಯವಹಾರಗಳ ದಾಖಲೆಗಳನ್ನೂ ಬಳಸಿಕೊಳ್ಳುತ್ತಿದೆ. ನೀವು ಯಾರಾದರೂ ಸೋಂಕು ಶಂಕಿತರ ನಿಕಟ ಸಂಪರ್ಕಕ್ಕೆ ಬಂದಿದ್ದರೆ ನಿಮ್ಮ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ಬರುತ್ತದೆ. ಯಾವ ಗಳಿಗೆಯಲ್ಲಿ ನೀವು ಪಟ್ಟಣದ ಯಾವ ಬಾರ್‌ನಲ್ಲಿ ಇದ್ದಿರಿ ಎಂಬಂಥ ನಿಖರ ವಿವರಗಳನ್ನು ಇವು ನೀಡುತ್ತವೆ. ಇದು ಸಾರ್ವಜನಿಕವಾಗಿ ಲಭ್ಯವಿದ್ದು, ಯಾರು ಬೇಕಾದರೂ ತಮಗೆ ಸೋಂಕು ತಗುಲಿರುವ ಸಾಧ್ಯತೆ ಇದೆಯೇ ಎಂಬುದನ್ನು ಚೆಕ್‌ ಮಾಡಿಕೊಳ್ಳಬಹುದು. ಇದರಿಂದಾಗಿ, ಅಲ್ಲಿನ ಸರಕಾರ ಪ್ರಜೆಗಳ ಖಾಸಗಿತನದ ಹಕ್ಕನ್ನು ಪೂರ್ತಿಯಾಗಿ ಉಲ್ಲಂಘಿಸಿದೆ ಎಂದು ಹಲವರು ತಕರಾರು ಎತ್ತಿದ್ದಾರೆ. ಆದರೆ, ‘‘ಖಾಸಗಿತನದ ಹಕ್ಕಿನ ಎದುರು ನಾವು ಸಾರ್ವಜನಿಕರ ಹಿತದ ಪ್ರಶ್ನೆಯಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ,’’ ಎಂದು ದಕ್ಷಿಣ ಕೊರಿಯ ಸರಕಾರ ಸ್ಪಷ್ಟಪಡಿಸಿದೆ.

ಸಿಂಗಾಪುರ
ಭಾರತ ಬಳಸಲು ಮುಂದಾಗಿರುವ ‘ಆರೋಗ್ಯ ಸೇತು’ ಆ್ಯಪ್‌ಗೆ ಸೂಧಿರ್ತಿ ಸಿಂಗಾಪುರದ ‘ಟ್ರೇಸ್‌ ಟುಗೆದರ್‌’ ಆ್ಯಪ್‌. ಇದು ಸೋಂಕಿತ ವ್ಯಕ್ತಿಯ ಸುತ್ತಲಿನ 2 ಮೀಟರ್‌ ವ್ಯಾಪ್ತಿಯಲ್ಲಿ ಕನಿಷ್ಠ 30 ನಿಮಿಷ ಕಾಲ ಬಂದ ಯಾವುದೇ ವ್ಯಕ್ತಿಯ ನಂಬರನ್ನು ಗುರುತಿಸಿ ಇಟ್ಟುಕೊಳ್ಳುತ್ತದೆ. ಬೇರೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಈ ಆ್ಯಪ್‌ ಬಳಸಿಕೊಳ್ಳುವುದಿಲ್ಲ ಎಂದು ಹೇಳಲಾಗಿದೆ.

ಇರಾನ್‌
ಇರಾನ್‌ ಸರಕಾರ ಎಸಿ19 ಎಂಬ ಹೆಸರಿನ ಒಂದು ಆ್ಯಪ್‌ನ್ನು ಸಿದ್ಧಪಡಿಸಿದ್ದು, ತನ್ನ ನಾಗರಿಕರಿಗೆ ಅದನ್ನು ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳುವಂತೆ ಸೂಚಿಸಿದೆ. ಅದು ಕೊರೊನಾ ಶಂಕಿತರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದರೆ, ಅವರನ್ನು ಟ್ರೇಸ್‌ ಮಾಡುವ ಕೆಲಸ ಮಾಡುತ್ತದೆ.

ಇಸ್ರೇಲ್‌
ಮಾರ್ಚ್‌ 17ರಂದು ಇಸ್ರೇಲ್‌ ಸರಕಾರ ಒಂದು ಹೊಸ ಕಾನೂನನ್ನು ರಚಿಸಿದ್ದು, ಎಲ್ಲ ಪ್ರಜೆಗಳ ಓಡಾಟದ ವಿವರಗಳನ್ನು ಕಲೆಹಾಕುವ ಅಧಿಕಾರವನ್ನು ಸರಕಾರಕ್ಕೆ ನೀಡಿದೆ. ಇದು ಅತ್ಯಂತ ನಿರಂಕುಶ ಅಧಿಕಾರವಾಗಿದ್ದು, ಬಹುಶಃ ಎಲ್ಲ ಪ್ರಜೆಗಳ ದತ್ತಾಂಶವನ್ನೂ ಇದರ ಮೂಲಕ ಇಸ್ರೇಲ್‌ ಸಂಗ್ರಹಿಸಲಿದೆ. ‘‘ಈ ಹಿಂದೆ ಇಷ್ಟು ಕಠಿಣ ಹಾಗೂ ಆಳವಾದ ನಿಗಾ ವ್ಯವಸ್ಥೆಯನ್ನು ನಾವು ಉಗ್ರಗಾಮಿಗಳ ಮೇಲೆ ಮಾತ್ರ ಇಟ್ಟಿದ್ದೆವು. ಈಗ ಎಲ್ಲರ ಮೇಲೂ ಇಡುವ ಸ್ಥಿತಿ ಬಂದಿದೆ. ನಾವು ಇದಕ್ಕೆ ಹೊಂದಿಕೊಳ್ಳಬೇಕಿದೆ,’’ ಎಂದು ಅಲ್ಲಿನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

ತೈವಾನ್‌
ತೈವಾನ್‌ನಲ್ಲಿ ‘ಎಲೆಕ್ಟ್ರಾನಿಕ್‌ ಬೇಲಿ’ ಎಂದು ಕರೆಯಲಾಗುವ ವ್ಯವಸ್ಥೆಯೊಂದನ್ನು ರೂಪಿಸಲಾಗಿದೆ. ಇದು ಎಷ್ಟು ಪರಿಣಾಮಕಾರಿ ಎಂದರೆ, ಕ್ವಾರಂಟೈನ್‌ನಲ್ಲಿ ಇರಬೇಕಾದ ವ್ಯಕ್ತಿ, ಮನೆಯನ್ನು ತೊರೆದು ಹೊರಗೆ ಹೊರಟರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ಹೋಗುತ್ತದೆ. ಆತನನ್ನು ತಡೆಹಿಡಿಯಲಾಗುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top