ಸರಳ ಜೀವನ ಕಲಿಯೋಣ – ಸುರಂಗದ ಕೊನೆಯಲ್ಲಿ ಬೆಳಕಿದೆ

ಕೊರೊನಾ ವೈರಸ್ ಹಬ್ಬದಿರಲಿ ಎಂಬ ಮುಂದಾಲೋಚನೆಯಿಂದ ಭಾರತವೂ ಸೇರಿದಂತೆ ಹಲವು ದೇಶಗಳು ಲಾಕ್‌ಡೌನ್ ಮಾಡಿವೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಆರಂಭವಾಗಿದ್ದ ಹೊತ್ತಿನಲ್ಲೇ ಕೋವಿಡ್ ಸೋಂಕು ಕಾಣಿಸಿಕೊಂಡು, ಜಗತ್ತಿನಾದ್ಯಂತ ವ್ಯಾಪಿಸಲು ಆರಂಭವಾಗಿತ್ತು. ಇದನ್ನು ತಡೆಗಟ್ಟುವುದು, ಅದಕ್ಕಾಗಿ ಲಾಕ್‌ಡೌನ್‌ಗಳು ಅನಿವಾರ್ಯವಾಗಿದ್ದವು. ಲಾಕ್‌ಡೌನ್‌ಗಳ ಪರೋಕ್ಷ ಪರಿಣಾಮ ಆರ್ಥಿಕತೆಯ ಮೇಲೆ ಆಗಿದ್ದು ಅಂತಾರಾಷ್ಟ್ರೀಯ ವ್ಯಾಪಾರ- ವಹಿವಾಟುಗಳು ಕುಸಿದಿವೆ. ಹಲವು ವಲಯಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದು, ಕಂಪನಿಗಳು ಮುಚ್ಚಿವೆ. ಇದು ಇನ್ನಷ್ಟು ಕಾಲ ಮುಂದುವರಿಯಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ‘‘ಈ ಕಾಲವು ಅತ್ಯಂತ ಕರಾಳವಾಗಿದ್ದು, 2008ರ ಕುಸಿತಕ್ಕಿಂತ ಭೀಕರವಾಗಿರಲಿದೆ,’’ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್‌ನ ಮುಖ್ಯಸ್ಥರು ಎಚ್ಚರಿಸಿದ್ದಾರೆ. ಕಗ್ಗತ್ತಲ ಸುರಂಗದಲ್ಲಿ ಬೆಳಕಿಗಾಗಿ ಹಂಬಲಿಸುತ್ತ ಸಾಗಬೇಕಾದ ಪರಿಸ್ಥಿತಿ ಈಗ ನಮ್ಮ ಮುಂದಿದೆ.

ಇದು ಒಬ್ಬಿಬ್ಬರ ಸ್ಥಿತಿಯಲ್ಲ. ಜಗತ್ತಿನ ಬಹುತೇಕ ಎಲ್ಲರ ಸ್ಥಿತಿಯೂ ಹೀಗೇ ಇದೆ. ಹೀಗಾಗಿಯೇ ಇದು ‘ಜಾಗತಿಕ ಸಂಘಟಿತ ಪ್ರಯತ್ನದಿಂದ ನಡೆಯಬೇಕಾದ ಯುದ್ಧ’ ಎಂದು ಮುತ್ಸದ್ದಿಗಳು ಹೇಳುತ್ತಿದ್ದಾರೆ. ರಾಷ್ಟ್ರಗಳು ಇದಕ್ಕಾಗಿ ಕೈ ಜೋಡಿಸಿವೆ. ಇದು ಅಂತಾರಾಷ್ಟ್ರೀಯ ಮಟ್ಟದ ಮಾತಾಯಿತು. ವೈಯಕ್ತಿಕ ವಿಚಾರಕ್ಕೆ ಬಂದಾಗ, ನಾವು ಹೇಗೆ ಈ ಯುದ್ಧವನ್ನು ಎದುರಿಸಲಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಈ ಆರ್ಥಿಕ ಆಘಾತ ಕೃಷಿಕ- ಬ್ಯಾಂಕರ್, ವಕೀಲ- ರಾಜಕಾರಣಿ ಎನ್ನದೆ ಎಲ್ಲರನ್ನೂ ಬಾಧಿಸಲಿದೆ. ಹೀಗಾಗಿ ಎಲ್ಲರೂ ಇದಕ್ಕೆ ಈಗಿನಿಂದಲೇ ಸಜ್ಜಾಗಬೇಕಾಗಿದೆ. ಸಂಘಟನೆಗಳು ತಮ್ಮ ಆಶಯಗಳನ್ನು ಮರು ಅವಲೋಕಿಸಿಕೊಂಡು ಸದ್ಯದ ಸ್ಥಿತಿಯನ್ನು ನಿಭಾಯಿಸಲು ಮುಂದಾಗುವುದು, ಉದ್ಯೋಗ ಕಳೆದುಕೊಂಡು ಕುಟುಂಬ ಸಾಕಲು ಪಡಿಪಾಟಲು ಪಡುತ್ತಿರುವವರಿಗೆ ನೆಲೆ ಕಲ್ಪಿಸುವುದು, ಸದ್ಯಕ್ಕೆ ಗಂಭೀರ ಆರ್ಥಿಕ ಸಮಸ್ಯೆ ಇಲ್ಲದವರು ತಮ್ಮಿಂದಾದಷ್ಟು ಬಡವರಿಗೆ ನೆರವಾಗುವುದು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನೀಡುವ ಕೊಡುಗೆಯೂ ಗಣನೀಯವೆನಿಸುತ್ತದೆ. ಉದಾಹರಣೆಗೆ, ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಂಸದರು ತಮ್ಮ ಸಂಬಳದ ಶೇ.30ನ್ನು ಸಂಕಷ್ಟದ ನಿಧಿಗೆ ಮೀಸಲಾಗಿ ಇಟ್ಟಿರುವುದು ಗಮನಾರ್ಹ ನಡೆ.
ಭಾರತೀಯರು ಮೊದಲಿನಿಂದಲೂ ವರ್ಷಕ್ಕೊಂದು ಬಜೆಟ್ ಎಂದು ರೂಪಿಸಿಕೊಂಡು ಅದಕ್ಕೆ ತಕ್ಕಂತೆ ಜೀವನ ನಡೆಸುವ ಆರ್ಥಿಕ ಶಿಸ್ತಿನ ಜಾಯಮಾನದವರಲ್ಲ. ಆದರೆ ಈಗ ಶಿಸ್ತನ್ನು ರೂಢಿಸಿಕೊಳ್ಳಲೇಬೇಕಿದೆ. ಉದ್ಯೋಗದ ಲಭ್ಯತೆ ಕಡಿಮೆಯಾದ ಕಾಲದಲ್ಲಿ, ಅಥವಾ ಇರುವ ಉದ್ಯೋಗದಲ್ಲೇ ಸಂಬಳ ಗಣನೀಯ ಮಟ್ಟದಲ್ಲಿ ಕಡಿತವಾದಾಗ, ಜೀವನ ಸಾಗಿಸುವ ಬಗೆ ಹೇಗೆ ಎಂಬುದನ್ನು ಯೋಜಿಸಿಕೊಳ್ಳಬೇಕಿದೆ. ಐಷಾರಾಮಿ ಜೀವನಶೈಲಿಯನ್ನು ತ್ಯಜಿಸುವುದು, ಬೇಕುಗಳಿಗಾಗಿ ಖರ್ಚು ಮಾಡದೆ ಅಗತ್ಯಗಳಿಗಾಗಿಯಷ್ಟೇ ವೆಚ್ಚ ಮಾಡುವುದು, ಮಿತವ್ಯಯ, ಸಾಲ ಮಾಡದಿರುವುದು, ತುರ್ತು ಆರೋಗ್ಯ ನಿಧಿಗಾಗಿ ಹಣಕಾಸು ಎತ್ತಿಡುವುದು ಮುಂತಾದವುಗಳ ಮೂಲಕ ಇದನ್ನು ಸಾಧಿಸಬಹುದು. ಈ ಲಾಕ್‌ಡೌನ್‌ನ ಸಂದರ್ಭದಲ್ಲಿ ಸರಳ- ಮಿತವ್ಯಯದ ಜೀವನದ ಒಂದು ಪ್ರಾಯೋಗಿಕ ನೋಟ ನಮಗೆ ಸಿಕ್ಕಿರುತ್ತದೆ. ಜೀವನಪೂರ್ತಿ ಹೀಗೆಯೇ ಇರಬೇಕಾಗುತ್ತದೆ ಎಂದು ಭಾವಿಸಬೇಕಿಲ್ಲ. ಕರಾಳ ದಿನಗಳು ಸದ್ಯದಲ್ಲೇ ದೂರವಾಗಬಹುದು. ಎಲ್ಲ ಸುರಂಗದ ಕೊನೆಯಲ್ಲೂ ಒಂದು ಬೆಳಕು ಇದ್ದೇ ಇರುತ್ತದಲ್ಲವೇ. ಆದರೆ ಆ ದಿನವನ್ನು ಕಾಣಬೇಕಾದರೆ ನಾವು ದೃಢಚಿತ್ತರಾಗಿ ಬದುಕಿರಬೇಕು. ಈಸಿ ಜೈಸುವ ಸೂತ್ರ ನಮ್ಮದಾಗಿರಬೇಕು. ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು, ಆ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಗಳಿಸಿಕೊಳ್ಳಲು ಈ ದಿನಗಳನ್ನು ಬಳಸಿಕೊಳ್ಳಬೇಕು. ಅಸಾಂಪ್ರದಾಯಿಕ ಹಾಗೂ ಸೃಜನಶೀಲ ಉತ್ಪಾದನಾ ವಿಧಾನಗಳನ್ನು ಆವಿಷ್ಕರಿಸಿಕೊಳ್ಳಬಹುದು. ಈ ಯುದ್ಧ ದೈಹಿಕವಾದುದಕ್ಕಿಂತಲೂ ಹೆಚ್ಚಾಗಿ ಮಾನಸಿಕವಾದದ್ದು ಎಂಬುದನ್ನು ಮರೆಯದಿರೋಣ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top