ಈಗಿನ ಅರಬ್ ಸಂಘರ್ಷದ ಮೂಲ ಎಲ್ಲಿದೆ ಗೊತ್ತೇ..

ಶಿಯಾ-ಸುನ್ನಿಗಳ ಕಾರ್ಯಶೈಲಿಯನ್ನು ಗೊತ್ತುಗುರಿ ಇಲ್ಲದವರು ನಡೆಸುತ್ತಿರುವ ಹೋರಾಟ, ಹಾದಿತಪ್ಪಿದವರ ಹೋರಾಟ ಅಂತ ಕರೆಯಬಹುದೇ? ಭಯೋತ್ಪಾದನೆ, ಹಿಂಸಾಚಾರವನ್ನೇ ಅನುಸರಿಸಿಕೊಂಡು ಬಂದ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾಕ್‍ಗಳಲ್ಲಿ ಜನರ ಆರ್ಥಿಕ, ಸಾಮಾಜಿಕ ಸ್ಥ್ಥಿತಿಗತಿಗಳು ಹೇಗಿರಬಹುದು?

commentary-28-june-2014

ಇತ್ತೀಚೆಗೆ ಇರಾಕ್‍ನಲ್ಲಿ ಮತ್ತೊಂದು ಸುತ್ತಿನ ಆಂತರಿಕ ಬಿಕ್ಕಟ್ಟು ಶುರುವಾದ ಲಾಗಾಯ್ತಿನಿಂದ ಹೊರಜಗತ್ತಿನ ಜನರ ಮನಸ್ಸಿನಲ್ಲಿ ಸಹಜವಾಗಿ ಒಂದು ಪ್ರಶ್ನೆ ಉದ್ಭವವಾಗಿದೆ. ಅದು- ಈ ಮುಸ್ಲಿಂ ಮತಾನುಯಾಯಿಗಳು ಅದೇಕೆ ತಮ್ಮತಮ್ಮೊಳಗೇ ಈ ಪರಿ ಬಡಿದಾಡಿಕೊಳ್ಳುತ್ತಿದ್ದಾರೆ ಅನ್ನುವುದು. ಅದಕ್ಕೆ ಥಟ್ ಅಂತ ಜವಾಬು ಕೊಡುವುದು ಅಷ್ಟು ಸುಲಭವಲ್ಲ. ಈಗ ಇರಾಕ್‍ನಲ್ಲಿ ಶಿಯಾ ಮತ್ತು ಸುನ್ನಿ ಪಂಗಡಗಳ ನಡುವೆ ಒಂದು ನಿರ್ಣಾಯಕ ಯುದ್ಧ ಶುರುವಾಗಿದೆ. ಒಂದು ವರ್ಷದ ಕೆಳಗೆ ಸಿರಿಯಾದಲ್ಲಿ ಆರಂಭವಾದ ಸುನ್ನಿ ಬಂಡಾಯ ಇದೀಗ ರಕ್ಕಾ, ಮೊಸುಲ್, ಕಿರಕುಕ್, ತಿಕ್ರಿತ್‍ಗಳನ್ನು ದಾಟಿ ಬಾಗ್ದಾದಿನ ಸಮೀಪಕ್ಕೆ ಬಂದು ತಲುಪಿದೆ. ಅದಕ್ಕಿಂತಲೂ ತುಸು ಹಿಂದೆ ಹೋದರೆ ಈಜಿಪ್ಟ್‍ನಲ್ಲಿ ರಕ್ತಕ್ರಾಂತಿ ನಡೆದುಹೋದ ನೆನಪು ಈಗಲೂ ಹಸಿಹಸಿಯಾಗಿದೆ.

ಎಂಭತ್ತರ ದಶಕದಲ್ಲಿ ಇರಾಕ್‍ನ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್ ಮತ್ತು ಇರಾನ್ ನಡುವೆ ನಡೆದ ಕಾದಾಟವನ್ನು ನಾವು ಎಂದೂ ಮರೆಯುವ ಹಾಗಿಲ್ಲ. ಏಕೆಂದರೆ ಕಾದಾಡಿದ್ದು ಇರಾಕ್-ಇರಾನ್ ಎಂಬ ಎರಡು ದೇಶಗಳೆಂಬುದು ಮೇಲ್ನೋಟಕ್ಕೆ ಕಾಣುವ ಸತ್ಯವಾದರೂ, ಅದರಿಂದ ಜಗತ್ತಿನ ಹತ್ತಾರು ದೇಶಗಳು ಭಯಂಕರ ಕಷ್ಟನಷ್ಟಗಳನ್ನು ಅನುಭವಿಸಬೇಕಾಗಿ ಬಂದದ್ದನ್ನು ಮರೆಯಲು ಸಾಧ್ಯವೇ? ಸದ್ದಾಂ ಹುಸೇನ್ ಎಂಬ ಸರ್ವಾಧಿಕಾರಿ ಮುದ್ದಾಂ ಮೈಮೇಲೆ ಎಳೆದುಕೊಂಡ ಇರಾಕ್ ಯುದ್ಧವನ್ನು ನೆನೆಸಿಕೊಂಡರೆ, ಆ ಕಾಲಕ್ಕೆ ಅಮೆರಿಕ ವಿಮಾನಗಳ ಆರ್ಭಟದ ದೃಶ್ಯಾವಳಿಗಳನ್ನು ಕಣ್ಣಮುಂದೆ ತಂದುಕೊಂಡರೆ ಈಗಲೂ ಮೈ ಜುಂ ಎನ್ನುತ್ತದೆ.

ಇನ್ನು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ಕಥೆಯನ್ನಂತೂ ಬಿಡಿ. ಆ ಬಗ್ಗೆ ಹೊಸದಾಗಿ ಹೇಳುವುದು ಏನೂ ಉಳಿದಿಲ್ಲ. ಅಲ್ಲಿ ಬಾಂಬ್ ಸ್ಫೋಟಿಸಿ ನರಬಲಿ ಪಡೆಯುವುದು ಅಂದರೆ ನಮ್ಮೂರಿನ ಮಾರಮ್ಮನ ಜಾತ್ರೆಯಲ್ಲಿ ಕುರಿ-ಕೋಳಿಗಳನ್ನು ಬಲಿಕೊಡುವುದಕ್ಕಿಂತಲೂ ಸಲೀಸು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಶುರುವಾದ ಈ ವ್ಯಾಧಿ ಬರಬರುತ್ತ ನೈಜೀರಿಯಾ, ಕೀನ್ಯಾದಂತಹ ಆಫ್ರಿಕಾದ ದೇಶಗಳಿಗೂ ಹಬ್ಬತೊಡಗಿದೆ. ಆ ದೇಶಗಳಲ್ಲಿ ಮತಾಂಧರ ಹಾವಳಿ ಕೈ ಮೀರುವ ಹಂತಕ್ಕೆ ಹೋಗುತ್ತಿದೆ. ಅಲ್ಲಿ ದಿನ ಬೆಳಗಾದರೆ ರಕ್ತದ ಕೋಡಿ ಹರಿಯುವುದು ಮಾಮೂಲು. ಹಾಗಾದರೆ ಯಾರು ಯಾಕಾಗಿ ಯಾರ ವಿರುದ್ಧ ಇಂತಹ ರಕ್ತಸಿಕ್ತ ಹೋರಾಟ ನಡೆಸುತ್ತಿದ್ದಾರೆ ಎಂಬುದನ್ನು ಒಮ್ಮೆ ಆಲೋಚನೆ ಮಾಡಬೇಕಲ್ಲವೇ? ಮುಸ್ಲಿಮರ ವಿರುದ್ಧ ಮುಸ್ಲಿಮರೇ ಏಕೆ ಹಿಂಸಾತ್ಮಕ ಹೋರಾಟಕ್ಕೆ ಇಳಿದಿದ್ದಾರೆ? ದಾಳಿ ಮಾಡುತ್ತಿರುವವರು ಮತ್ತು ದಾಳಿಗೆ ಒಳಗಾಗಿ ಸಾವುನೋವು ಅನುಭವಿಸುತ್ತಿರುವವರು ಇಬ್ಬರೂ ಅದೇ ಮುಸ್ಲಿಂ ಜನಾಂಗಕ್ಕೆ ಸೇರಿದವರಲ್ಲವೇ? ಪರಸ್ಪರ ಬಡಿದಾಡಿಕೊಳ್ಳುತ್ತಿರುವವರ ಭಾಷೆ, ವೇಷಭೂಷಣ ಇತ್ಯಾದಿಗಳೆಲ್ಲವೂ ಒಂದೇ. ಕೊಲ್ಲುವವನೂ ಗಡ್ಡ ಬಿಟ್ಟಿರುತ್ತಾನೆ. ಟೋಪಿ ಧರಿಸಿರುತ್ತಾನೆ. ಪೈಜಾಮ-ಕುರ್ತಾ ತೊಟ್ಟಿರುತ್ತಾನೆ. ದಿನಕ್ಕೆ ಐದು ಬಾರಿ ಆಜಂ ಹೇಳುತ್ತಾನೆ. ದಾಳಿಗೆ ಒಳಗಾಗಿ ಪ್ರಾಣಕಳೆದುಕೊಳ್ಳುವವನದ್ದೂ ಅದೇ ಚಹರೆ. ಅದೇ ಲಕ್ಷಣ, ಅದೇ ಸಂಪ್ರದಾಯನಿಷ್ಠೆ. ಹೀಗೆ ಒಂದೇ ಜನಾಂಗಕ್ಕೆ ಸೇರಿದವರು ಪರಸ್ಪರ ಶರಂಪರ ಬಡಿದಾಡಿಕೊಳ್ಳುತ್ತಿದ್ದರೆ ಅಚ್ಚರಿಯಾಗುವುದು ಸಹಜ ತಾನೆ? ಬರೀ ಅಚ್ಚರಿಯೇನು ದಿಗಿಲುಂಟಾಗುತ್ತಿದೆ. ಆಲೋಚನೆ ಮಾಡಿದರೆ ನಿಧಾನವಾಗಿ ಭವಿಷ್ಯದ ಚಿಂತೆ ಆವರಿಸುತ್ತದೆ.

ಈಗ ತಾರಕಕ್ಕೆ ತಲುಪಿರುವ ಸಂಘರ್ಷಕ್ಕೆ, ಈ ಪರಿ ಕಾದಾಟಕ್ಕೆ, ಪ್ರಭುತ್ವ ಸ್ಥಾಪನೆಯ ಹೋರಾಟಕ್ಕೆ ಇಂದು ನಿನ್ನೆಯ ಕಾರಣಗಳನ್ನಷ್ಟೇ ಹುಡುಕಿದರೆ ಸಾಕೇ? ಅಮೆರಿಕವೇ ಇರಲಿ, ಮತ್ತಿನ್ನಾವುದೇ ದೇಶವೇ ಇರಲಿ, ಕೇವಲ ತಾತ್ಕಾಲಿಕ ಉಪಶಮನದ ಮಾರ್ಗಗಳನ್ನು ಕಂಡುಕೊಳ್ಳುವುದರಿಂದ ಈಗ ಬಿಡಿಸಿಕೊಳ್ಳಲಾಗದ ಸಮಸ್ಯೆಯಾಗಿ ಕಾಡುತ್ತಿರುವ ಜನಾಂಗೀಯ ಸಂಘರ್ಷವನ್ನು ಕೊನೆಗೊಳಿಸಿ ಶಾಂತಿ ಸಹಬಾಳ್ವೆಯನ್ನು ಮರುಸ್ಥಾಪಿಸಲು ಸಾಧ್ಯವೇ? ಖಂಡಿತ ಹಾಗೆ ಹೇಳಲು ಸಾಧ್ಯವಿಲ್ಲ. ಏಕೆಂದರೆ ಈಗ ಅರಬ್ ದೇಶಗಳಲ್ಲಿ ಅಥವಾ ಪಾಕಿಸ್ತಾನ, ಅಫ್ಘಾನಿಸ್ತಾನದಂತಹ ಇತರ ರಾಷ್ಟ್ರಗಳಲ್ಲಿ ಉದ್ಭವಿಸಿರುವ ಉಗ್ರರ ಜನಾಂಗೀಯ ಹಿಂಸಾಚಾರ ಹಾಗೇ ಸುಮ್ಮನೆ ಇಂದು ನಿನ್ನೆ ಹುಟ್ಟಿಕೊಂಡದ್ದಲ್ಲ, ಅದಕ್ಕೊಂದು ವ್ಯವಸ್ಥಿತ ಯೋಜನೆಯಿಂದೆ, ಬಲವಾದ ಐತಿಹಾಸಿಕ ಹಿನ್ನೆಲೆಯಿದೆ.

ಕ್ರಿಸ್ತಶಕ 632ರಲ್ಲಿ ಪ್ರವಾದಿ ಮಹಮ್ಮದರ ದೇಹಾಂತವಾಯಿತು. ಈಗ ನಮಗೆ ಕಾಣಿಸುತ್ತಿರುವ ಜನಾಂಗೀಯ ಸಂಘರ್ಷದ ಮೂಲ ಇರುವುದೇ ಅಲ್ಲಿ. ಪ್ರವಾದಿಯ ಮರಣಾನಂತರ ಉತ್ತರಾಧಿಕಾರಿ ಯಾರಾಗಬೇಕೆಂಬುದರ ಕುರಿತು ಮುಸ್ಲಿಂ ಸಂಪ್ರದಾಯದವರಲ್ಲೇ ಎರಡು ಗುಂಪುಗಳಾಗಿ ಭಿನ್ನಮತ ಮೊಳಕೆಯೊಡೆಯಿತು. ಪ್ರವಾದಿಯ ಅಳಿಯ ಅಲಿಯೇ ಇಸ್ಲಾಂನ ಉತ್ತರಾಧಿಕಾರಿ ಆಗಬೇಕೆಂದು ಒಂದು ಗುಂಪು ಹಟ ಹಿಡಿಯಿತು. ಅಲಿಯನ್ನೇ ಉತ್ತರಾಧಿಕಾರಿಯನ್ನಾಗಿ ಮಾಡುವಲ್ಲಿ ಆ ಗುಂಪು ಯಶಸ್ವಿಯೂ ಆಯಿತು. ಅಂದು ಪ್ರವಾದಿ ಅಳಿಯ ಅಲಿಯ ಬೆಂಬಲಕ್ಕೆ ನಿಂತವರೇ ಶಿಯಾಗಳೆಂದು ಕರೆಸಿಕೊಂಡರು. ಈ ಶಿಯಾ ಗುಂಪಿನ ವಾದವನ್ನು ಇನ್ನೊಂದು ಗುಂಪು ಸುತಾರಾಂ ಒಪ್ಪಲಿಲ್ಲ. ಮುಸ್ಲಿಮರೆಲ್ಲರೂ ಒಮ್ಮತದಿಂದ ಪ್ರವಾದಿಯ ಉತ್ತರಾಧಿಕಾರಿಯನ್ನು ಚುನಾಯಿಸಿಕೊಳ್ಳಬೇಕೆಂದು ಅವರು ವಾದ ಮುಂದಿಟ್ಟರು. ಅಲಿಯವರು ಮಹಮ್ಮದರ ಉತ್ತರಾಧಿಕಾರಿಯಾಗುವುದನ್ನು ವಿರೋಧಿಸಿದವರೇ ಸುನ್ನಿಗಳಾದರು. ಸುನ್ನಿಗಳ ಪ್ರತಿರೋಧದ ನಡುವೆಯೂ ಅಲಿಯೇ ಪ್ರವಾದಿಯ ಉತ್ತರಾಧಿಕಾರಿಯಾಗುತ್ತಾರೆ. ಅಷ್ಟಾದರೂ ಉಭಯ ಪಂಗಡಗಳ ನಡುವಿನ ಭಿನ್ನಾಭಿಪ್ರಾಯವೇನೂ ಶಮನವಾಗುವುದಿಲ್ಲ. ದ್ವೇಷ ಒಳಗೊಳಗೇ ಹೊಗೆಯಾಡುತ್ತಲೇ ಇರುತ್ತದೆ. ಈ ನಡುವೆ ಕ್ರಿಸ್ತಶಕ 661ರಲ್ಲಿ ಅಲಿಯ ಹತ್ಯೆಯಾಗುತ್ತದೆ. ಅದೇ ಮುಂದೆ ಶಿಯಾ ಮತ್ತು ಸುನ್ನಿ ಪಂಗಡಗಳ ನಡುವಿನ ಸಾವಿರ ವರ್ಷಗಳ ನಿರಂತರ ರಕ್ತಸಿಕ್ತ ಸಂಘರ್ಷಕ್ಕೆ ಮುನ್ನುಡಿಯಾಗುತ್ತದೆ. ಅಲಿಯ ಸಾವಿನ ಬಳಿಕ ಇಸ್ಲಾಂನಲ್ಲಿ ಪ್ರಭುತ್ವ ಸಾಧನೆಗಾಗಿ ಶಿಯಾ ಮತ್ತು ಸುನ್ನಿಗಳ ನಡುವೆ ಸಂಘರ್ಷ ಮುಂದುವರೆದುಕೊಂಡು ಬರುತ್ತದೆ. ಅದು ಜನಾಂಗೀಯ ಸಂಘರ್ಷದ ಮೂಲವಾದರೆ, ಅದರ ಪರಿಣಾಮದ ಒಂದು ಝಲಕ್ಕನ್ನು ನಾವಿಂದು ಈಜಿಪ್ಟ್, ಸಿರಿಯಾ, ಇರಾಕ್, ನೈಜೀರಿಯಾಗಳಲ್ಲಿ ಕಾಣುತ್ತಿದ್ದೇವೆ.

ಹಾಗೆ ನೋಡಿದರೆ ಜನಸಂಖ್ಯೆ ದೃಷ್ಟಿಯಿಂದ ಶಿಯಾ ಮತ್ತು ಸುನ್ನಿ ಪಂಗಡಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಪ್ರಪಂಚದಾದ್ಯಂತ ಇರುವ 1.6 ಶತಕೋಟಿ ಮುಸ್ಲಿಮರ ಪೈಕಿ ಶೇಕಡಾ ತೊಂಭತ್ತಕ್ಕಿಂತ ಹೆಚ್ಚು ಮಂದಿ ಸುನ್ನಿ ಪಂಗಡಕ್ಕೆ ಸೇರಿದವರು. ಇರಾಕ್ ಹೊರತುಪಡಿಸಿದರೆ ಪ್ರಪಂಚದ ಬೇರೆಲ್ಲಾ ದೇಶಗಳಲ್ಲಿ ಶಿಯಾ ಮುಸ್ಲಿಮರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಸಂಖ್ಯಾಬಲ ಏನೇ ಇದ್ದರೂ ಈ ಎರಡೂ ಪಂಗಡಗಳವರ ಗುರಿ ಒಂದೇ. ಅದು ಧರ್ಮಯುದ್ಧ. ಸುನ್ನಿ ಜನಾಂಗಕ್ಕೆ ಸೇರಿದವರು ಇಡೀ ಅರಬ್ ಸಾಮ್ರಾಜ್ಯವನ್ನು ಷರಿಯಾ ಕಟ್ಟುಪಾಡುಗಳಿಗೆ ಒಳಪಡಿಸಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂದು ಸಂಕಲ್ಪ ತೊಟ್ಟಿದ್ದಾರೆ. ತಾವು ಹಾಕಿಕೊಂಡಿರುವ ಗುರಿ ಸಾಧನೆಗೆ ಶಿಯಾಗಳೇ ಮೊದಲ ತೊಡಕು ಎಂದು ಸುನ್ನಿ ಹೋರಾಟಗಾರರು ಭಾವಿಸಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಸುನ್ನಿಗಳು ಮೊದಲು ಯುದ್ಧ ಸಾರಿರುವುದು ಶಿಯಾಗಳ ವಿರುದ್ಧ. ಶಿಯಾಗಳನ್ನು ಹೊರತುಪಡಿಸಿದರೆ ಸುನ್ನಿಗಳಿಗೆ ಅಮೆರಿಕವೇ ಮೊದಲ ಶತ್ರು. ಅದೇ ಕಾರಣಕ್ಕೆ ಈಗ ಅಮೆರಿಕ ಕೂಡ ಸುನ್ನಿಗಳನ್ನು ಸದೆಬಡಿಯುವ ವಿಚಾರದಲ್ಲಿ ಎರಡೆರಡು ಬಾರಿ ಆಲೋಚನೆ ಮಾಡಿ ಹೆಜ್ಜೆ ಇರಿಸತೊಡಗಿದೆ.

ಅಮೆರಿಕ ಹಾಗೆ ಮಾಡುವುದಕ್ಕೆ ಬೇಕಾದಷ್ಟು ಕಾರಣಗಳಿವೆ. ಇರಾಕ್‍ನಲ್ಲಿ ಸದ್ದಾಂ ಹುಸೇನ್ ಆಳ್ವಿಕೆ ಕೊನೆಗೊಳಿಸುವ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಇರಾಕ್ ನೆಲದಲ್ಲಿ ಒಟ್ಟು 4,500ಕ್ಕೂ ಹೆಚ್ಚು ಅಮೆರಿಕ ಯೋಧರು ಸುನ್ನಿ ಬಂಡುಕೋರರ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಇರಾಕ್‍ನಲ್ಲಿ ಸದ್ದಾಂ ಸರ್ವಾಧಿಕಾರ ಕೊನೆಗೊಳಿಸಿ ಪ್ರಜಾತಂತ್ರ ಸ್ಥಾಪನೆಗೆ ಹೊರಟ ಅಮೆರಿಕ ಒಂದು ಶತಕೋಟಿ ಡಾಲರುಗಳಷ್ಟು ದೊಡ್ಡ ಮೊತ್ತವನ್ನು ನೀರಿನಲ್ಲಿ ಹೋಮ ಮಾಡಿದೆ. ಅಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿ, ಸಹಸ್ರಾರು ಸೈನಿಕರನ್ನು ಬಲಿಕೊಟ್ಟ ಅಮೆರಿಕಕ್ಕೆ ಕೊನೆಗೂ ದಕ್ಕಿz್ದÉೀನು? ಸದ್ದಾಂನನ್ನು ಕೆಳಗಿಳಿಸಿ ನುರಿ ಅಲ್-ಮಲೀಕಿಯಂಥ ದುರ್ಬಲನನ್ನು ಪ್ರಧಾನಿ ಪಟ್ಟದಲ್ಲಿ ಕುಳ್ಳಿರಿಸಿದ್ದು ತಪ್ಪು ಅಂತ ಅಮೆರಿಕ ಈಗ ಹೇಳತೊಡಗಿದೆ. ಹೀಗಾಗಿ ಈ ಬಾರಿ ಅಮೆರಿಕ ನೇರವಾಗಿ ರಣಾಂಗಣಕ್ಕೆ ಧುಮುಕುವ ಬದಲು ಇರಾನ್ ಎಂಬ ಗುರಾಣಿಯನ್ನು ಮುಂದಿಟ್ಟುಕೊಂಡು ಹೋರಾಡುವ ಹೊಸ ತಂತ್ರವನ್ನು ಅನುಸರಿಸತೊಡಗಿದೆ. ಮತ್ತೊಂದೆಡೆ,ದುರ್ಬಲ ಪ್ರಧಾನಿ ಅಲ್ ಮಲೀಕಿ ತನ್ನ ಆಡಳಿತ ಕ್ರಮವನ್ನು ಸುಧಾರಿಸಿಕೊಳ್ಳಬೇಕು; ಸುನ್ನಿಗಳಿಗೂ ಆಡಳಿತದಲ್ಲಿ ಸಮಪಾಲನ್ನು ಕೊಡಬೇಕು; ಹಾಗೆ ಮಾಡದೆ ವಿಧಿಯೇ ಇಲ್ಲ ಎಂದೆಲ್ಲ ಅಮೆರಿಕ ಹೇಳತೊಡಗಿದೆ. ಈ ಹೇಳಿಕೆಯ ಅರ್ಥ, ಅಮೆರಿಕ ಸುನ್ನಿ ಬಂಡುಕೋರರ ಒತ್ತಡಕ್ಕೆ ಮಣಿಯುತ್ತಿದೆ ಅಂತಲೇ ಅಲ್ಲವೇ? ಅಮೆರಿಕ, ಇರಾನ್, ಇರಾಕ್‍ಗಳು ಒಂದಾಗಿ ತಂತ್ರ ಹೊಸೆಯುತ್ತಿದ್ದರೂ, ಸಿರಿಯಾದಿಂದ ಬಾಗ್ದಾದ್ ಕಡೆಗೆ ದಾಪುಗಾಲಿಟ್ಟ ಸುನ್ನಿ ಉಗ್ರರು ಉತ್ತರ ಇರಾಕ್‍ನ ಮೊಸುಲ್, ನಜಾಫ್, ಕರ್ಬಾಲಾದಂತಹ ಪ್ರಮುಖ ನಗರಗಳನ್ನು ಒಂದೊಂದಾಗಿ ಕೈವಶ ಮಾಡಿಕೊಳ್ಳುತ್ತ ಮುಂದೆ ಸಾಗುತ್ತಿದ್ದಾರೆ. ಇದು ಸುಮಾರು ಹದಿನಾಲ್ಕು ಶತಮಾನಗಳ ಹಿಂದೆಯೇ ರೂಪಿತವಾದ ಅರಬ್ ಸಾಮ್ರಾಜ್ಯ ವಿಸ್ತರಣಾ ಯೋಜನೆಯ ಮುಂದುವರೆದ ಭಾಗ ಅಂತ ಅನ್ನಿಸುವುದಿಲ್ಲವೇ?

ಅಷ್ಟೇ ಅಲ್ಲ, ಕಳೆದ ಜೂನ್ 15ರಂದು ಕರಾಚಿಯ ಜಿನ್ನಾ ಏರ್‍ಪೋರ್ಟ್ ಮೇಲೆ ನಡೆದ ಉಗ್ರರ ದಾಳಿ, ಅದೇ ದಿನ ಯಮೆನ್‍ನ ಮಿಲಿಟರಿ ಆಸ್ಪತ್ರೆಯ ಮೇಲೆ ನಡೆದ ಉಗ್ರರ ದಾಳಿ, ನೈಜೀರಿಯಾದಲ್ಲಿ ಬೋಕೋ ಹರಾಮ್ ಉಗ್ರರು ನೂರಾರು ಜನರನ್ನು ಒತ್ತೆ ಇಟ್ಟುಕೊಂಡಿರುವ ಪ್ರಕರಣ, ಅಫ್ಘಾನಿಸ್ತಾನದಲ್ಲಿ ಜೂನ್ 14ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತಚಲಾಯಿಸಿದವರ ಬೆರಳುಗಳನ್ನು ತಾಲಿಬಾನ್ ಉಗ್ರರು ಸಾಮೂಹಿಕವಾಗಿ ತುಂಡರಿಸಿದ ಪ್ರಕರಣ ಇವೆಲ್ಲವೂ ಸಹ ಒಂದಕ್ಕೊಂದು ಸಂಬಂಧ ಇರುವ ಸಂಘಟಿತ ಕ್ರಮ ಅನ್ನುವುದರಲ್ಲಿ ಏನಾದರೂ ಅನುಮಾನವಿದೆಯೇ?

ಶಿಯಾ ಉಗ್ರರ ಕಾರ್ಯಶೈಲಿಯೂ ಸುನ್ನಿಗಳಿಗಿಂತ ಭಿನ್ನವಾಗೇನೂ ಇಲ್ಲ. ಒಂದೆಡೆ ಪ್ರಪಂಚದಾದ್ಯಂತ ಸುನ್ನಿಗಳಿಂದ ಏಟು ತಿನ್ನುತ್ತಲ್ಲೇ ಇರುವ ಶಿಯಾ ಉಗ್ರರು ಹಿಂದುಗಳು, ಬೌದ್ಧರು, ಬ್ರಿಟಿಷರು, ಚೀನಿಯರು, ಕ್ರೈಸ್ತರು, ಅಮೆರಿಕನ್ನರು ಹೀಗೆ ಅನ್ಯ ಧರ್ಮ, ನಂಬಿಕೆಯ ಜನರ ಮೇಲೆ ನಿರಂತರ ದಾಳಿ ಮಾಡುತ್ತಲೇ ಇದ್ದಾರೆ. ಜಮ್ಮು-ಕಾಶ್ಮೀರದಿಂದ ಹಿಡಿದು ಭಾರತದ ನಾನಾ ಭಾಗಗಳು ಮತ್ತು ಪ್ರಪಂಚದ ನಾನಾ ದೇಶಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಿ ವಿಧ್ವಂಸಕ ಕೃತ್ಯ ನಡೆಸುತ್ತಿರುವವರಲ್ಲಿ ಶಿಯಾ ಉಗ್ರರದ್ದೂ ದೊಡ್ಡ ಪಾಲಿದೆ. ಶಿಯಾ ಮತ್ತು ಸುನ್ನಿಗಳ ಕಾರ್ಯಶೈಲಿಯನ್ನು ಗೊತ್ತುಗುರಿ ಇಲ್ಲದವರು ನಡೆಸುತ್ತಿರುವ ಹೋರಾಟ, ಹಾದಿತಪ್ಪಿದವರ ಹೋರಾಟ ಅಂತ ಕರೆಯಬಹುದೇ? ಭಯೋತ್ಪಾದನೆ, ಹಿಂಸಾಚಾರವನ್ನೇ ಅನುಸರಿಸಿಕೊಂಡು ಬಂದ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾಕ್‍ಗಳಲ್ಲಿ ಜನರ ಆರ್ಥಿಕ ಸಾಮಾಜಿಕ ಸ್ಥ್ಥಿತಿಗತಿಗಳು ಹೇಗಿರಬಹುದು? ಅದನ್ನೆಲ್ಲ ಮುಂದೆ ನೋಡೋಣ.

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top