ಜಾಹೀರಾತಿಗೆ ಹೆಣ್ಣು, ಸಿನಿಮಾ ಗೆಲ್ಲಲು, ವ್ಯಾಪಾರಿ ಲಾಭಕ್ಕೆ ಹೆಣ್ಣು, ವಿವಾದ ಹುಟ್ಟುಹಾಕಿ ಲಾಭ ಮಾಡಿಕೊಳ್ಳಲು, ಭೋಗ ವೈಭೋಗಕ್ಕೆ ಹೆಣ್ಣು, ಅದರಾಚೆಗೆ ಕ್ರೀಡೆ, ಕಲೆ, ನೆಲೆ ಯಾವುದಕ್ಕಾದರೂ ಬೆಲೆ ಇದೆಯೇ? ಇದನ್ನೇ ಹೆಚ್ಚುಗಾರಿಕೆಯೆಂಬ ಹುಚ್ಚಿಗೆ ಬಿದ್ದವರೂ ಇದ್ದಾರಲ್ಲ.
ಹೇಳಿಕೇಳಿ ಇದು ಸುದ್ದಿ ಯುಗ ತಾನೆ… ಹೀಗಾಗಿ ಮುಂಜಾನೆದ್ದು ಕಣ್ಣುಬಿಡುವ ಹೊತ್ತಿಗೆ ದಿನಪತ್ರಿಕೆಗಳು ನಮ್ಮ ಕೈಸೇರಿರುತ್ತವೆ. ಆಗ ಮೊದಲು ಕಣ್ಣನ್ನು ಸೆಳೆಯುವ ಸಮಾಚಾರಗಳಾದರೂ ಎಂಥವು? ಅತ್ಯಾಚಾರ, ಕೊಲೆ, ಮೋಸ, ಪ್ಯಾರ್ ಔರ್ ದೋಖಾ… ಮುಖಪುಟದಲ್ಲಿ ಇಂಥ ಒಂದೆರಡಾದರೂ ಬಾತ್ಮಿ ಇಲ್ಲದೇ ಬಹುಶಃ ಪತ್ರಿಕೆಗಳು ಹೊರಬರಲು ಸಾಧ್ಯವೇ ಇಲ್ಲವೇನೋ! ಇತ್ತಿತ್ತಲಾಗಿ ಪದೇಪದೆ ಅಂಥವೇ ಪ್ರಧಾನ ಸುದ್ದಿಯ ಜಾಗವನ್ನು ಆಕ್ರಮಿಸಿಕೊಳ್ಳುತ್ತಿವೆ, ವಾರಗಟ್ಟಲೆ ಚರ್ಚೆಗೆ ಗ್ರಾಸವಾಗುತ್ತಿವೆ. ಒಳಪುಟ ತೆರೆದರೂ ಪರಿಸ್ಥಿತಿ ಭಿನ್ನವಿರಲು ಸಾಧ್ಯವಿಲ್ಲ. ಪುಟಗಟ್ಟಲೆ ಬರೇ ಅಪರಾಧ ಸುದ್ದಿಗಳು. ಓದುಗರಿಗೆ ಮಾಹಿತಿ ಕೊಡುವ ಸಲುವಾಗಿ, ಇನ್ನಾದರೂ ಜನ ಎಚ್ಚೆತ್ತುಕೊಳ್ಳಲಿ ಎಂಬ ಆಶಯದಿಂದ ಅಂಥ ಸುದ್ದಿಗಳನ್ನು ಪ್ರಕಟಿಸಬೇಕಾದ್ದು ಅನಿವಾರ್ಯ ಕೂಡ.
ಪೇಪರು ಓದಿದ್ದು ಸಾಕು ಅಂತ ಬದಿಗಿಟ್ಟು ಟಿವಿ ಆನ್ ಮಾಡುತ್ತೀರಿ ಅಂತಿಟ್ಟುಕೊಳ್ಳಿ. ಅಲ್ಲಿ ಕ್ರೈಮ್ ಡೈರಿ, ಕ್ರೈಮ್ ಸ್ಟೋರಿಗಳೇ ಅಬ್ಬರಿಸುತ್ತಿರುತ್ತವೆ. ಕೆಳಗಡೆ ಸ್ಕ್ರೋಲ್ನ ಕಡೆ ನೋಡಿ- `ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ವೃದ್ಧನಿಂದ ವೃದ್ಧೆಯ ಮೇಲೆ ಬಲಾತ್ಕಾರ’ ಮುಂತಾದ ಸಾಲುಗಳೇ ಓಡುತ್ತಿರುತ್ತವೆ. ಬ್ರೇಕಿಂಗ್ ನ್ಯೂಸ್ ಬರುತ್ತೆ ಅಂತ ಬೆರಗಾಗಿ ಕಣ್ಣರಳಿಸಿ ನೋಡುತ್ತ ನಿಲ್ಲುತ್ತೀರಿ. ಅಲ್ಲಿ ಮೂಡುವ ಸುದ್ದಿ ಮತ್ತೆ ಅದೇ! ಮಂಟಪದಿಂದ ವಧು ಪರಾರಿ, ಪ್ರಿಯಕರನೊಂದಿಗೆ ಮನೆಬಿಟ್ಟು ಓಡಿಹೋದ ಎರಡು ಮಕ್ಕಳ ತಾಯಿ, ಜೀವನದಲ್ಲಿನ ಜುಗುಪ್ಸೆಯಿಂದ ಒಂದೇ ಕುಟುಂಬದ ಐವರ ಆತ್ಮಹತ್ಯೆ… ಈ ರೀತಿಯ ಸುದ್ದಿಗಳೇ ನಿಮ್ಮನ್ನು ಆ ಕಡೆ ಈ ಕಡೆಯಿಂದ ಅಟ್ಟಾಡಿಸಿಕೊಂಡು ಬರತೊಡಗುತ್ತವೆ. ಆತಂಕದ ವಿಷಯ ಏನೆಂದರೆ ದಿನದಿನಕ್ಕೂ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ. ಇದರಿಂದ ಚಾನೆಲ್ಗಳಿಗೆ ಖುಷಿಯಾಗಬಹುದೋ ಏನೋ…ಆದರೆ ನೋಡುಗರ ಪಾಡು ಹೇಳಿ. ಯಾಕೆ ಹೀಗೆ?
ಸುಮಾರು ಒಂದು ವರ್ಷದ ಹಿಂದಿನ ಘಟನೆ. ಇಲ್ಲೇ ಬೆಂಗಳೂರಲ್ಲಿ ನಡೆದದ್ದು. ಮಹಾನಗರ ಪಾಲಿಕೆ ಆಗಷ್ಟೇ ಹುಕ್ಕಾ ಬ್ಯಾನ್ ಮಾಡಿತ್ತು. ಹೀಗಾಗಿ ಪೆÇಲೀಸರು ಕುಖ್ಯಾತ ಹುಕ್ಕಾ ಬಾರೊಂದರ ಮೇಲೆ ರೇಡ್ ಮಾಡಿದ್ದರು. ಆಗ ಅಲ್ಲಿನ ದೃಶ್ಯ ಕಂಡು ಸ್ವತಃ ಪೆÇಲೀಸರೇ ದಂಗಾಗಿಹೋಗಿದ್ದರು. ಹುಕ್ಕಾಬಾರ್ನಲ್ಲಿ ಕುಳಿತ 15-20 ಹುಡುಗ-ಹುಡುಗಿಯರು ನಶೆಯಲ್ಲಿ ತೇಲುತ್ತಿದ್ದರು. ವಯಸ್ಸು 14-16 ಇರಬಹುದು. ಅವರೆಲ್ಲರೂ ಅಲ್ಲೇ ಸಮೀಪದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಲಿಯುತ್ತಿದ್ದವರು. ನಗರದ ಪ್ರತಿಷ್ಠಿತ ಶ್ರೀಮಂತರ ಕುಟುಂಬಕ್ಕೆ ಸೇರಿದವರು. ಪೊಲೀಸರಿಗೆ ವಿಧಿಯಿರಲಿಲ್ಲ. ಒಂದು ಎಚ್ಚರಿಕೆ ನೀಡಿ ಆ ಮಕ್ಕಳನ್ನು ಅಲ್ಲಿಂದ ಕಳಿಸಿಕೊಟ್ಟರು. ಶಾಲೆಗೆ ಹೋಗಿ ಓದಬೇಕಾದ ಮಕ್ಕಳು ಹುಕ್ಕಾ ಬಾರ್ಗೆ ಹೋಗುವಂತೆ ಮಾಡಿದ ಆ ಸೆಳೆತ ಯಾವುದು?
ಹಾಗೇ ಇನ್ನೊಂದು ಘಟನೆ. ಇತ್ತೀಚೆಗೆ ಮುಂಬೈನ ಪಾಮ್ ಬೀಚ್ ರಸ್ತೆಯ ಬಾರ್ ಮೇಲೆ ಪೆÇಲೀಸರು ದಾಳಿಮಾಡಿದರು. ಅಚ್ಚರಿ ಏನೆಂದರೆ ಅಲ್ಲಿ 240 ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದರು. ಅದರಲ್ಲಿ ಅರ್ಧದಷ್ಟು ಬಾಲಕಿಯರು. ಹುಡುಗಿಯರನ್ನು ಕರೆತಂದರೆ ಹುಡುಗರಿಗೆ ಪ್ರವೇಶ ಫ್ರೀ ಎಂಬ ಆಫರ್ ನೀಡಿ ಬಾರ್ ಮಾಲೀಕ ದಿನಾಲೂ ಮಕ್ಕಳನ್ನು ಆಕರ್ಷಿಸುತ್ತಿದ್ದ. ಬೆಂಗಳೂರು, ಮುಂಬೈನಂತಹ ನಗರಗಳಲ್ಲಿ ಈ ರೀತಿ ಅದೆಷ್ಟೋ ಪ್ರಕರಣಗಳು ನಡೆಯುತ್ತಿರುತ್ತವೆ ನಿಜ. ವಿಷಯ ಅದಲ್ಲ, ಹದಿಹರೆಯದವರು ಯಾಕೆ ಹೀಗೆ ಹಾದಿ ತಪ್ಪುತ್ತಿದ್ದಾರೆ ಎಂಬುದು ಮುಖ್ಯ ವಿಚಾರ. ಇಷ್ಟು ಸಣ್ಣ ವಯಸ್ಸಿನಲ್ಲೇ ಹುಕ್ಕಾಬಾರ್, ರೇವ್ ಪಾರ್ಟಿಗಳ ಸೆಳೆತಕ್ಕೆ ಸಿಕ್ಕವರು ಮುಂದೇನಾಗಬಹುದು? ಅಂಥ ಮಕ್ಕಳ ಪಾಲಕರು ಮಾತ್ರವಲ್ಲ, ಇಡೀ ಸಮಾಜ ಆ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಲ್ಲವೇ.
ಸುತ್ತಲಿನ ವಿದ್ಯಮಾನಗಳಿಗೆ ಮುಗ್ಧ ಮನಸ್ಸುಗಳು ಹೇಗೆಲ್ಲ ಸ್ಪಂದಿಸುತ್ತವೆ ಎಂಬುದನ್ನು ಆಲೋಚಿಸಿದರೆ ಇನ್ನಷ್ಟು ಅಚ್ಚರಿಯಾಗುತ್ತದೆ. 1996ರಲ್ಲಿ ನಡೆದ ಒಂದು ದುರಂತ ಕಥೆಯನ್ನು ಹೇಳುತ್ತೇನೆ. `ಥಮ್ಸ್ ಅಪ್’ ತಂಪುಪಾನೀಯದ ಜಾಹೀರಾತಿನಲ್ಲಿ ಮಾಡೆಲ್ ಒಬ್ಬಳು ಆಕಾಶದ ಎತ್ತರದಿಂದ ತಲೆಕೆಳಗಾಗಿ ಬಂಗಿ ಜಂಪ್ ಮಾಡುವ ಸನ್ನಿವೇಶವನ್ನೇ ಅನುಕರಿಸಲು ಮುಂದಾಗುತ್ತಾಳೆ ಲಖನೌದ ರಿಂಕು ಪಾರೂಖಿ ಅನ್ನುವ ಮುದ್ದು ಹುಡುಗಿ. ಅಪಾರ್ಟ್ಮೆಂಟ್ನ ಮೂರನೇ ಮಹಡಿಯಲ್ಲಿರುವ ತನ್ನ ಮನೆಯ ಬಾಲ್ಕನಿಯಿಂದ ತಲೆಕೆಳಗಾಗಿ ಜಿಗಿದುಬಿಡುತ್ತಾಳೆ. ಪರಿಣಾಮ ಕೇಳಬೇಕೇ? ಸೂಪರ್ ಹೀರೋ ಹೃತಿಕ್ ರೋಶನ್ನ ಬ್ಲಾಕ್ ಬಸ್ಟರ್ ಸಿನಿಮಾ `ಕ್ರಿಶ್’ ಬಿಡುಗಡೆಯ ನಂತರವೂ ಹಾಗೇ ಆಯಿತು. `ಕ್ರಿಶ್’ ಸಿನಿಮಾದ ಮೋಡಿಗೊಳಗಾದ ಅದೆಷ್ಟೋ ಮಕ್ಕಳು ಎತ್ತರದ ಕಟ್ಟಡಗಳಿಂದ ಜಿಗಿಯಲು ಹೋಗಿ ಕೈಕಾಲು ಮುರಿದುಕೊಂಡರು. ಪಟನಾದ ಶಿವಮ್ ಅನ್ನುವ ಹುಡುಗ ಹಗಲುರಾತ್ರಿ ಆ ಸಿನಿಮಾದ ಕತೆಯನ್ನೇ ಬಡಬಡಿಸುತ್ತಿದ್ದ. ತನ್ನ ಮನೆ ಮೇಲಿನ ಟೆರೇಸಿನಿಂದ ಬಿದ್ದು ಕೈಕಾಲು ಪುಡಿಮಾಡಿಕೊಂಡ. ಇದನ್ನು ಆ ಬಾಲಕನ ಪಾಲಕರೇ ಫ್ಯಾಮಿಲಿ ಡಾಕ್ಟರ್ ಬಳಿ ಹೇಳಿಕೊಂಡಿದ್ದಾರೆ. `ಸೂಪರ್ಮ್ಯಾನ್’ ಚಿತ್ರ ಬಿಡುಗಡೆಯಾದ ಮೇಲೆ, ಮುಖೇಶ್ ಖನ್ನಾರ `ಶಕ್ತಿಮಾನ್’ ಧಾರಾವಾಹಿಯಿಂದ, `ಸ್ಪೈಡರ್ಮ್ಯಾನ್’ ಧಾರಾವಾಹಿಯಿಂದ ಥ್ರಿಲ್ ಆದ ಎಷ್ಟೋ ಪುಟಾಣಿಗಳು ಅದೇ ತೆರನಾದ ಸಾಹಸ ಮಾಡಲು ಹೋಗಿ ಏನೇನೋ ಅವಾಂತರ ಮಾಡಿಕೊಂಡರು. ಮೈಗೆಲ್ಲ ಬಟ್ಟೆ ಸುತ್ತಿಕೊಂಡು ಬೆಂಕಿ ಹಚ್ಚಿಕೊಂಡು ಪ್ರಾಣಕ್ಕೇ ಸಂಚಕಾರ ತಂದುಕೊಂಡರು. `ಶಕ್ತಿಮಾನ್’ ಧಾರಾವಾಹಿಯ ಅವಾಂತರಗಳಿಂದಾಗಿ ಕೆಲವರು ಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದರು. ನಮ್ಮ ದೇಶದಲ್ಲಷ್ಟೇ ಅಲ್ಲ, `ಸೂಪರ್ಮ್ಯಾನ್’ ಚಿತ್ರ ತೆರೆಕಂಡ ಮೇಲೆ ಹೊರದೇಶಗಳಲ್ಲೂ ನೂರಾರು ಮಕ್ಕಳು ತಮ್ಮ ಜೀವಕ್ಕೆ ಅಪಾಯ ತಂದುಕೊಂಡ ಉದಾಹರಣೆಗಳಿವೆ. ಎಲ್ಲಕ್ಕಿಂತ ವಿಚಿತ್ರವಾದದ್ದು, ಕೆಲ ವರ್ಷಗಳ ಹಿಂದೆ ಇಟಲಿಯಲ್ಲಿ `ಟೂನ್, ಬಗ್ಸ್ ಆ್ಯಂಡ್ ಬನ್ನಿ’ ಸೀರಿಯಲ್ ನೋಡಿದ ಮೂರೂವರೆ ವರ್ಷದ ಮೆಸ್ಸಿ ಎಂಬ ಬಾಲಕ ಅದೇ ರೀತಿಯ ಸಾಹಸ ಮಾಡಲು ಹೋಗಿ ತನ್ನ ಮನೆ ಕಿಟಕಿಯಿಂದ ಹಾರಿ ಜೀವಕ್ಕೆ ಅಪಾಯ ತಂದುಕೊಂಡದ್ದು. ನಮ್ಮ ಮನೆಯ ಟೀವಿಯಲ್ಲಿ ಬರುವ ಸಿನಿಮಾ, ಧಾರಾವಾಹಿಗಳು ನಮ್ಮ ಮಕ್ಕಳ ಮನಸ್ಸನ್ನೂ ಕದಿಯಲಾರವು ಅಂತೀರಾ?
ಟಿವಿ ಸೀರಿಯಲ್, ಸಾಹಸ ಸಿನಿಮಾಗಳ ಕತೆ ಹೀಗಾದರೆ, ಅಪರಾಧ, ಅವಾಸ್ತವ ಪ್ರೇಮಕತೆಗಳನ್ನೇ ಹಂದರ ಮಾಡಿಕೊಳ್ಳುವ ಈಗಿನ ಮಸಾಲೆ ಸಿನಿಮಾಗಳಿಂದಾಗುವ ಪರಿಣಾಮ ಇನ್ನೂ ಭಯಾನಕವಾದದ್ದು. ಈಗಷ್ಟೇ ಅಲ್ಲ, 1950-60ರ ದಶಕದ ಹಳೇ ಸಿನಿಮಾಗಳಲ್ಲೂ ರೇಪ್ ಸನ್ನಿವೇಶಗಳಿರುತ್ತಿದ್ದವು. ಕತ್ತಲೆ ಕೋಣೆ, ಅಲ್ಲಿ ವಿಲನ್ ಮತ್ತು ಹಿರೋಯಿನ್ ನಡುವಿನ ಕೊಸರಾಟ, ಅಲ್ಲಿಗೆ ಬರುವ ನಾಯಕ ನಾಯಕಿಯನ್ನು ರಕ್ಷಿಸುವ ದೃಶ್ಯಗಳಿರುತ್ತಿದ್ದವು. ಅವುಗಳೇ ಪ್ರೇಕ್ಷಕರನ್ನು ಸೆಳೆಯುವ ಚುಂಬಕಗಳಾಗಿದ್ದವು. ನಟ ಪ್ರಾಣ್ನಿಂದ ಹಿಡಿದು ಪ್ರೇಮ್ ಚೋಪ್ರಾವರೆಗೆ, ಶಕ್ತಿ ಕಪೂರ್ನಿಂದ ಹಿಡಿದು ರಂಜಿತ್ವರೆಗೆ ಎಲ್ಲರದೂ ಆ ಕಲೆಯಲ್ಲಿ ಎತ್ತಿದ ಕೈ. ಮೆಹಬೂಬ್ ಖಾನ್ರ `ಅಮರ್’ ಬಿ.ಆರ್. ಛೋಪ್ರಾರ `ಇನ್ಸಾಫ್ ಕಾ ತರಾಜು’ ಎನ್.ಎನ್. ಸಿಪ್ಪಿಯ `ಘರ್’, ರಾಜ್ಕುಮಾರ್ ಸಂತೋಷಿ ಅವರ `ದಾಮಿನಿ’ಯವರೆಗೆ ಯಾವುದೇ ಸಿನಿಮಾ ತೆಗೆದುಕೊಳ್ಳಿ, ಅಲ್ಲಿ ಪುರುಷ ಪ್ರಾಬಲ್ಯದ ಮೆರೆದಾಟ ಮತ್ತು ಸೇಡು ತೀರಿಸಿಕೊಳ್ಳುವ ಪರಾಕ್ರಮವೇ ಸಿನಿಮಾದ ಪ್ರಧಾನ ವಿಷಯವಸ್ತು. ಆದರೆ, ತಪ್ಪುಮಾಡಿದವರಿಗೆ ಶಿಕ್ಷೆಯ ಬಗ್ಗೆ ಸಿನಿಮಾ ಮಾತಾಡುವುದಿಲ್ಲ. ಇದು, ತಪ್ಪುಮಾಡಿಯೂ ಬಚಾವಾಗಬಹುದು ಎಂಬ ಸಂದೇಶವನ್ನು ರವಾನಿಸುವುದಿಲ್ಲವೇ? ಈಗಿನ ಸಿನಿಮಾಗಳಲ್ಲಿ ಅಂಥ ಸಂಬಂಧ ಸೂತ್ರಗಳೂ ಇರುವುದಿಲ್ಲ. ಪ್ರೇಕ್ಷಕರನ್ನು ಆಕರ್ಷಿಸಲು ರೇಪ್ ದೃಶ್ಯಗಳ ಜತೆಗೆ ಐಟಂ ಡಾನ್ಸ್, ಡಬಲ್ ಮೀನಿಂಗ್ ಹಾಡುಗಳೇ ಸಾಧನ. ಮುನ್ನಿ ಬದ್ನಾಮ್, ಶೀಲಾ ಕಿ ಜವಾನಿ, ಚೋಲಿಕೆ ಪೀಛೆ ಕ್ಯಾ ಹೈ ಇಂತಹ ಹಾಡುಗಳದ್ದೇ ಆಕರ್ಷಣೆ. ಇಂಥ ಸಿನಿಮಾಗಳು ನೋಡುಗರಿಗೆ ಮನರಂಜನೆ ಕೊಡುತ್ತವೆ. ಐಟಂ ಗರ್ಲ್ಗಳಾದ ವೀಣಾ ಮಲಿಕ್, ಪೂನಂ ಪಾಂಡೆ, ರಾಖಿ ಸಾವಂತ್ ಮೊದಲಾದ ಬಿಂದಾಸ್ ನಟಿಯರಿಗೆ ಮತ್ತು ಸಿನಿಮಾ ನಿರ್ಮಾಪಕರಿಗೆ ಲಕ್ಷ ಕೋಟಿಗಳ ಲೆಕ್ಕದಲ್ಲಿ ದುಡ್ಡು ಸಿಗುತ್ತದೆ ನಿಜ. ಆದರೆ ಗೌರವಸ್ಥ ಮಹಿಳಾ ಸಮೂಹಕ್ಕೆ, ಸಭ್ಯ ನಾಗರಿಕ ಸಮಾಜಕ್ಕೆ ಇದರಿಂದ ಏನು ಸಿಗುತ್ತದೆ ಹೇಳಿ? ಮುಗ್ಧ ಮಕ್ಕಳ ಮನಸ್ಸುಗಳ ಮೇಲೆ, ಹದಿಹರೆಯದವರ ಆಲೋಚನಾಕ್ರಮದ ಮೇಲೆ ಇವೆಲ್ಲ ಯಾವ ಪರಿಣಾಮ ಬೀರಬಹುದು?
ದುರಂತ ಅಂದರೆ ಸಿನಿಮಾರಂಗದ ಈ ಕಾಯಿಲೆ ಕ್ರೀಡಾ ಕ್ಷೇತ್ರಕ್ಕೂ ಅಮರಿಕೊಳ್ಳುತ್ತಿದೆ. ಕ್ರಿಕೆಟ್ನಂತಹ ಅಂತಾರಾಷ್ಟ್ರೀಯ ಕ್ರೀಡೆ ಐಪಿಎಲ್ನಂತಹ ಶುದ್ಧ ಜೂಜಿಗೆ ಹರಾಜಾದಾಗಲೇ ಅದರ ಅವಸಾನ ನಿಕ್ಕಿ ಆಗಿತ್ತು. ಯಾವಾಗ ಕ್ರಿಕೆಟ್ ಆಕರ್ಷಣೆಗೆ ಚಿಯರ್ ಗಲ್ರ್ಸ್ಗಳ ಆಗಮನವಾಯಿತೋ ಆಗ ಕ್ರಿಕೆಟ್ನ ಘನತೆಯೇ ಹರಾಜಾಯಿತು. ಇದೆಲ್ಲಾ ಬೇಕಿತ್ತೇ? ಐಪಿಎಲ್ ಕ್ರಿಕೆಟ್ನ ಕಾಮೆಂಟರಿಗೆ ಅರ್ಧಮರ್ಧ ಬಟ್ಟೆ ಧರಿಸುವ ಮಂದಿರಾ ಬೇಡಿಯೇ ಯಾಕೆ ಬೇಕು. ಕ್ರೀಡಾ ಪತ್ರಕರ್ತೆಯರಿಗೇನಾದರೂ ಬರಗಾಲ ಇದೆಯೇ? ವಿಶ್ವಕಪ್ ಫುಟ್ಬಾಲ್ ಪಂದ್ಯವನ್ನೊಮ್ಮೆ ಕಣ್ಣಮುಂದೆ ತಂದುಕೊಳ್ಳಿ. ಇಡೀ ಬ್ರೆಜಿಲ್ ದೇಶವೇ ಕೆಂಪುದೀಪದ ಪ್ರದೇಶದಂತೆ ಕಾಣದೇ ಹೋದರೆ ಹೇಳಿ. ಟಿವಿ ಕ್ಯಾಮೆರಾಗಳು, ಕ್ರೀಡಾ ಫೋಟೋಗ್ರಾಫರುಗಳ ಕಣ್ಣುಗಳು ಲಲನೆಯರ ಸೊಂಟ, ಎದೆ, ಕಾಲುಗಳ ಮೇಲೇ ನೆಟ್ಟಿರುವುದೇಕೆ? ಯಾಕೆಂದರೆ ಮತ್ತದೇ ಕೊಳಕು, ಅಗ್ಗದ ಆಕರ್ಷಣೆಯ ಗೀಳು. ಮಹಿಳೆಯರ ಪಾಲಿಗೆ ಇವೆಲ್ಲ ಗೌರವವೋ? ಅಪಮಾನವೋ? ಯೋಚಿಸಬೇಕಾದವರು ಯಾರು.
ಜಾಹೀರಾತಿಗೆ ಹೆಣ್ಣು, ಸಿನಿಮಾ ಗೆಲ್ಲಲು, ವ್ಯಾಪಾರಿ ಲಾಭಕ್ಕೆ ಹೆಣ್ಣು, ವಿವಾದ ಹುಟ್ಟುಹಾಕಿ ಲಾಭ ಮಾಡಿಕೊಳ್ಳಲು ಹೆಣ್ಣು, ಭೋಗ ವೈಭೋಗಕ್ಕೆ ಹೆಣ್ಣು, ಅದರಾಚೆಗೆ ಕ್ರೀಡೆ, ಕಲೆ, ನೆಲೆ ಯಾವುದಕ್ಕಾದರೂ ಬೆಲೆ ಇದೆಯೇ? ಇದನ್ನೇ ಹೆಚ್ಚುಗಾರಿಕೆಯೆಂಬ ಹುಚ್ಚಿಗೆ ಬಿದ್ದವರೂ ಇದ್ದಾರಲ್ಲ. ಇದಕ್ಕೇನನ್ನೋಣ.
ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲಿ ಈ ಹಿಂದೆ `ವೈಫ್ ಸ್ವಾೃಪಿಂಗ್’ನಂಥ ಅನಿಷ್ಟ ಟ್ರೆಂಡ್ ಹುಟ್ಟಿಕೊಂಡಿದ್ದನ್ನು ಕೇಳಿರಬಹುದು. ಬೇಜಾರಾದಾಗ ಯಾವಾಗಲೋ ಒಮ್ಮೆ ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಅದಲುಬದಲು ಮಾಡಿಕೊಂಡು ಮೋಜುಮಸ್ತಿ ಮಾಡುವ ಮೃಗೀಯ ಪ್ರವೃತ್ತಿಯವರ ಕರ್ಮ ಇದು. ಈಗ ಇನ್ನೂ ಒಂದು ರೀತಿಯ ಟ್ರೆಂಡ್ ಹುಟ್ಟಿಕೊಳ್ಳುತ್ತಿದೆ. ಅದು ತಾಯಿ, ಹೆಣ್ಣಿನ ಬಗ್ಗೆ ನಮಗಿರುವ ನಂಬಿಕೆಯನ್ನೇ ಘಾಸಿಗೊಳಿಸುವಂಥದ್ದು. ಫುಡ್ ಜಂಕ್ಷನ್, ರೆಸ್ಟೋರೆಂಟ್ಗಳಿಗೆ ಅನರ್ಥಕಾರಿ ಹೆಸರಿಡುವ ಉಡಾಫೆ ಧೋರಣೆಯೊಂದು ಸದ್ದಿಲ್ಲದೇ ಹಬ್ಬುತ್ತಿದೆ. ಉದಾಹರಣೆಗೆ; Mother Cluckers ಎಂಬುದು ಒಂದು ಹೊಟೇಲಿನ ಹೆಸರು. ಇಲ್ಲಿ ಕ್ಲಕರ್ಸ್ ಪದಕ್ಕೆ ಅರ್ಥವೇ ಇಲ್ಲ. ಅದರ ಅನರ್ಥ (ತಾಯಿ ಬಗ್ಗೆಯೇ ಅಸಭ್ಯ ಕಲ್ಪನೆ) ಏನು ಅನ್ನುವುದನ್ನು ಹೇಳಲಿಕ್ಕೇ ಮುಜುಗರವಾಗುತ್ತದೆ. ಹಾಗೇ WTF ಅನ್ನುವುದು ಇನ್ನೊಂದು ಹೆಸರು. ಏನದರ ಅರ್ಥ ಅಂತ ಕೇಳಿದರೆ What the food ಎಂಬ ತೋರಿಕೆಯ ವಿವರಣೆಯೇನೋ ಸಿಗುತ್ತದೆ. ಆದರೆ ಅದರ ಮೂಲ ಉದ್ದೇಶವೇ ಬೇರೆ. ಹಾಗೇ HCUK ಎನ್ನುವ ನಾಲ್ಕಕ್ಷರಗಳ ಹೆಸರನ್ನು ಗಾರ್ಮೆಂಟ್ ಕಂಪೆನಿಯೊಂದು ತನ್ನ ಬ್ರಾಂಡ್ ಮಾಡಿಕೊಂಡಿದೆ. ಆ ಪದಕ್ಕೆ ಸ್ವೀಡಿಶ್, ಜರ್ಮನ್ ಭಾಷೆಗಳಲ್ಲಿ ಕೆಟ್ಟ ಅರ್ಥವಿದೆ (ಅದೂ ತಾಯಿಯ ಬಗ್ಗೆ). ಭಾರತದಂತಹ ದೇಶದಲ್ಲಿ ಇಂಥ ಪ್ರವೃತ್ತಿ ಬೆಳೆಯಲು ಬಿಡಬೇಕೇ? ಇದನ್ನೆಲ್ಲಾ ಮೌನವಾಗಿ ಸಹಿಸಿಕೊಳ್ಳಬೇಕಾ?
ಇತ್ತಿತ್ತಲಾಗಿ ರೇಪ್ ಪ್ರಕರಣಗಳು ಹೆಚ್ಚಾಗುತ್ತಿವೆಯಲ್ಲ, ಅದಕ್ಕಾಗಿ ಇಷ್ಟೆಲ್ಲಾ ಆಲೋಚನೆಗಳು ಹಾದುಹೋದವು. ಎಲ್ಲೆಲ್ಲೂ ಮಹಿಳಾ ರಕ್ಷಣೆಯ ಕೂಗೂ ಜೋರಾಗುತ್ತಿದೆ. ಬರೀ ಪೊಲೀಸ್ ಪಹರೆಯಿಂದ ಮಹಿಳಾ ಸುರಕ್ಷೆ ಸಾಧ್ಯವೇ? ಪೊಲೀಸರು ಎಷ್ಟು ಮಂದಿ ಮಹಿಳೆಯರಿಗೆ ಅಂತ ರಕ್ಷಣೆ ಕೊಟ್ಟಾರು. ಇದು ಏಕಾಏಕಿ ಸೃಷ್ಟಿಯಾದ ಸಮಸ್ಯೆಯೂ ಅಲ್ಲ. ಎರಡು ತಲೆಮಾರುಗಳ ನಡುವಿನ ಅಂತರದ ಕಾರಣವೂ ಇದರ ಹಿಂದಿದೆ. ಹೊಸ ಪೀಳಿಗೆಯಲ್ಲಿ ಸ್ವಂತಿಕೆ, ಸ್ವಾಭಿಮಾನ, ಮಾನಸಿಕ ದೃಢತೆ ಬೆಳೆಸದ ಹೊರತು, ಸುತ್ತಲಿನ ಕಲುಷಿತ ವಾತಾವರಣ ತಿಳಿಗೊಳಿಸಲು ಸಮಾಜ ಮೈಕೊಡವಿ ಎದ್ದುನಿಲ್ಲದ ಹೊರತು ಈ ಗೋಳು ತಪ್ಪಿದ್ದಲ್ಲ. ಅಲ್ಲವೇ?