ಬ್ಯಾಟ್ಸ್ ಮನ್ ಆಗಿ ಸಚಿನ್ ಜಗದ್ವಿಖ್ಯಾತಿ ಪಡೆದಿರಬಹುದು. ಹಾಗೆಂದಮಾತ್ರಕ್ಕೆ ಅವರನ್ನು `ಮೇಧಾವಿಗಳ ಸದನ’ ರಾಜ್ಯಸಭೆಗೆ ನಾಮಕರಣ ಮಾಡಲು, ಸಂಸತ್ತು ಅಂದರೆ ಕ್ರಿಕೆಟ್ ಮೈದಾನ ಅಂತ ಭಾವಿಸಿದರೇ ರಾಹುಲ್ ಗಾಂಧಿ…
ಸಚಿನ್ ತೆಂಡುಲ್ಕರ್ ಒಬ್ಬ ಅದ್ಭುತ ಕ್ರಿಕೆಟಿಗ ಎಂಬುದರಲ್ಲಿ ದೂಸರಾ ಮಾತೇ ಇಲ್ಲ. ಆ ಬಗ್ಗೆ ಕೊಂಕು ತೆಗೆಯುವುದು ಬಿಲ್ಕುಲ್ ಸರಿಯಲ್ಲ. ಹಾಗೇನಾದರೂ ಮಾಡಿದರೆ ಸಚಿನ್ ಅಭಿಮಾನಿಗಳನ್ನು ಬಿಡಿ, ಇತರೆ ಜನರೂ ಅದನ್ನು ಸಹಿಸಿಕೊಳ್ಳಲಿಕ್ಕಿಲ್ಲ. ಹಾಗಂತ ಅದೇ ಸಚಿನ್ ಒಬ್ಬ ಮಾಮೂಲಿ ರಾಜಕಾರಣಿ ಆಗುವುದನ್ನು ಅವರ ಕಟ್ಟಾ ಅಭಿಮಾನಿಗಳೂ ಒಪ್ಪಿಕೊಂಡುಬಿಡುತ್ತಾರೆ ಅಂತ ಅರ್ಥವೇ? ಅನಾಹುತ ಶುರುವಾದ್ದೇ ಇಲ್ಲಿ. ಕ್ರಿಕೆಟ್ ಜನಪ್ರಿಯತೆಯನ್ನು ರಾಜಕಾರಣಕ್ಕೆ ಬಳಸಿ ಲಾಭದ ಬೆಳೆ ತೆಗೆಯಲು ಹೊರಟವರು ಪೂರ್ವಾಪರ ಆಲೋಚಿಸದೆ ಮಾಡಿದ ಪ್ರಮಾದದ ಪರಿಣಾಮ ತೆಂಡುಲ್ಕರ್ ಖ್ಯಾತಿ, ಗಳಿಸಿದ ಕೀರ್ತಿ, ಏರಿದ ಎತ್ತರ ಇವೆಲ್ಲವುಗಳಿಗಿಂತ ಹೆಚ್ಚಾಗಿ ಅವರು ಮನುಷ್ಯಸಹಜವಾಗಿ ಅಂಟಿಸಿಕೊಂಡ ಅಪಖ್ಯಾತಿಯೇ ಪ್ರಮುಖವಾಗಿ ಚರ್ಚೆಯಾಗುವಂತಾಗಿಬಿಟ್ಟಿದೆ. ಇದಕ್ಕಾಗಿ ತೆಂಡುಲ್ಕರ್ ಅವರನ್ನು ದೂರಬೇಕೋ ಯುಪಿಎ ಸರ್ಕಾರವನ್ನೋ?
ಈಗ ನೋಡಿ, ಸಚಿನ್ ರಾಜ್ಯಸಭಾ ಕಲಾಪಕ್ಕೆ ಗೈರಾಗಿರುವುದರ ಕುರಿತು ಆಗುತ್ತಿರುವ ಟೀಕಾಪ್ರಹಾರ ಏನು ಕಡಿಮೆಯೇ. ಅದು ತಪ್ಪು ಅಂತ ಹೇಳುವುದೂ ಕಷ್ಟ. ಏಕೆಂದರೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ತೆಂಡುಲ್ಕರ್ ಸದನದ ಕಡೆ ಮುಖಮಾಡದೆ ಒಂದು ವರ್ಷಕ್ಕೂ ಹೆಚ್ಚು ಕಾಲ ಆಯಿತು. ಈ ವಿಷಯ ಯಾವಾಗ ಮಾಧ್ಯಮಗಳ ಮೂಲಕ ಬಟಾಬಯಲಾಯಿತೋ ಆಗ ತಮ್ಮ ಪ್ರತಿಷ್ಠೆ ಮೂರಾಬಟ್ಟೆಯಾಗುವುದನ್ನು ತಡೆಯುವುದಕ್ಕೋಸ್ಕರ ಸಚಿನ್ ದಿಗ್ ಅಂತ ಎದ್ದು ಕುಳಿತುಕೊಳ್ಳಬೇಕಾಗಿ ಬಂತು. ಸಬೂಬು ಹೇಳಬೇಕಾಯಿತು. ಅಣ್ಣನಿಗೆ ಬೈಪಾಸ್ ಸರ್ಜರಿ ಆಗಿರುವ ಕಾರಣ ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ಆಗಲಿಲ್ಲ ಎಂಬ ಸಮಜಾಯಿಷಿ ಕೊಡಬೇಕಾಯಿತು. ಅದೂ ಸಾಲದೆಂಬಂತೆ, ಹಾಲಿ ಮಳೆಗಾಲದ ಅಧಿವೇಶನಕ್ಕೂ ಬರಲಾಗುವುದಿಲ್ಲ, ಅಧಿವೇಶನಕ್ಕೆ ಗೈರಾಗಲು ಇನ್ನಷ್ಟು ದಿನ ರಜೆ ಕೊಡಿ ಅಂತ ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿಗೆ ಅರ್ಜಿ ಹಾಕಿ ಅನುಮತಿ ಪಡೆದುಕೊಂಡರು. ಸಚಿನ್ ಈ ಕೆಲಸವನ್ನು ಮೊದಲೇ ಮಾಡಬಹುದಿತ್ತಲ್ಲ… ಪತ್ರಿಕೆ ಮತ್ತು ಟಿವಿ ಮಾಧ್ಯಮಗಳು ಬೊಬ್ಬೆಹೊಡೆದ ನಂತರವಷ್ಟೇ ಹಾಜರಾತಿ ವಿನಾಯಿತಿ ಕೋರಿ ಅರ್ಜಿಹಾಕಿದ್ದು ಯಾಕೆ? ಯಾಕೆ ಅಂದರೆ, ಪ್ರತಿಷ್ಠೆ ಮುಕ್ಕಾಗುವುದನ್ನು ತಡೆಯಲು ಬೇರೆ ಮಾರ್ಗವೇ ಇರಲಿಲ್ಲ. ಅದು ಎಂಥವನಿಗೂ ಅರ್ಥವಾಗುತ್ತದೆ. ಆಪರೇಷನ್ ಮಾಡಿಸಿಕೊಂಡ ಅಣ್ಣನಿಗೆ ಮಾತ್ರೆ ನುಂಗಿಸಲು, ಹೊತ್ತು ಹೊತ್ತಿಗೆ ಗಂಜಿ ಕಾಯಿಸಿ ಕೊಡಲು ಅಲ್ಲಿ ಸಚಿನ್ ತೆಂಡುಲ್ಕರರೇ ಸೊಂಟಕ್ಕೆ ಪಟ್ಟಿ ಕಟ್ಟಿಕೊಂಡು ನಿಂತುಕೊಳ್ಳಬೇಕಿತ್ತೇನು? ಸುಳ್ಳು ಹೇಳಿದರೂ ಅದು ನಂಬುವಂತಿರಬೇಕು. ಅಸಲಿ ವಿಷಯ ಬೇರೆಯೇ ಇದೆ. ಮೊದಲನೆಯದಾಗಿ ಸಂಸತ್ತಿನ ಅಧಿವೇಶನ ಸಚಿನ್ಗೆ ಮುಖ್ಯವೇ ಅಲ್ಲ. ಇಲ್ಲಿ ಅಧಿವೇಶನದಲ್ಲಿ ಭಾಗವಹಿಸದಿರಲು ಸಬೂಬು ಹೇಳುವ ಸಚಿನ್, ಇಂಗ್ಲೆಂಡಿನ ವಿಂಬಲ್ಡನ್ ಟೂರ್ನಮೆಂಟನ್ನು ತಪ್ಪಿಸಿಕೊಂಡರೇ? ಕಬಡ್ಡಿ ಲೀಗ್ ಮ್ಯಾಚ್ ನೋಡುವುದನ್ನು ಬಿಟ್ಟರೇ? ದಿನಗಟ್ಟಲೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಮ್ಯಾಚ್ ನೋಡಿ ಖುಷಿಪಡುವುದನ್ನು ತಪ್ಪಿಸಿಕೊಳ್ಳಲಿಲ್ಲವಲ್ಲ. ಅದೂ ಬೇಡ, ಕಳೆದ ಒಂದು ವರ್ಷದ ಈಚೆಗೆ ದೇಶ-ವಿದೇಶಗಳಲ್ಲಿ ನಡೆದ ಟಿವಿ ಜಾಹೀರಾತು ಶೂಟಿಂಗ್ನ್ನು ಸಚಿನ್ ಎಂದಾದರೂ ತಪ್ಪಿಸಿಕೊಂಡಿದ್ದಾರೆಯೇ? ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಏಕೆಂದರೆ ವರ್ಷಕ್ಕೆ ಬರುವ ಜಾಹೀರಾತು ಆದಾಯ ನೂರಾರು ಕೋಟಿ. ಆದರೆ ಇಡೀ ದೇಶವೇ ಪ್ರಜಾತಂತ್ರದ ದೇಗುಲವೆಂದು ಭಾವಿಸುವ ಸಂಸತ್ತಿಗೆ ಮಹಾನ್ ಆಟಗಾರ ಬರೀ ಬಾಯಿಮಾತಲ್ಲಷ್ಟೇ ಅಲ್ಲ, ಲಿಖಿತ ಸಬೂಬು ನೀಡಿ ಗೈರುಹಾಜರಾಗುತ್ತಾರೆಂದರೆ ಹೇಗೆ? ಬೇಸರವಾಗುತ್ತದೆ ತಾನೆ?
ಯಾಕೆ ಹೀಗೆ ಅಂದರೆ ಸಚಿನ್ ಜನ್ಮಜಾತ ಕ್ರಿಕೆಟಿಗ. ಕ್ರಿಕೆಟ್ ಆಟ ಮತ್ತು ಅದರಿಂದ ಬರುವ ಹೆಸರು, ದುಡ್ಡು ಇವಿಷ್ಟನ್ನು ಬಿಟ್ಟು ಸಚಿನ್ ಜಗತ್ತಿನ ಇತರೆ ಸಂಗತಿಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡವರಲ್ಲ. ಕ್ರಿಕೆಟ್ಟಿಗೆ ಹೊರತಾಗಿ ಸಚಿನ್ ಶಾಲಾ ಶಿಕ್ಷಣ ಪಡೆದುಕೊಂಡದ್ದೂ ಅಷ್ಟಕ್ಕಷ್ಟೆ. ಹುಟ್ಟಿನಿಂದಲೇ ಕರಗತವಾದ ಬ್ಯಾಟಿಂಗ್ ಕಲೆಯಿಂದ ಸಚಿನ್ ಜಗತ್ತಿನ ಕ್ರಿಕೆಟ್ಪ್ರೇಮಿಗಳ ಕಣ್ಮಣಿಯಾಗಿಬಿಟ್ಟರು. ಅದೆಲ್ಲಕ್ಕಿಂತ ಹೆಚ್ಚಾಗಿ ಸಚಿನ್ ಮೂಲತಃ ನಾಚಿಕೆ ಸ್ವಭಾವದವರು. ಬ್ಯಾಟ್ ಹಿಡಿದು ಬೌಂಡರಿ, ಸಿಕ್ಸರ್ ಸಿಡಿಸಿ ಕೋಟ್ಯಂತರ ಅಭಿಮಾನಿಗಳ ಕೈನಲ್ಲಿ ಚಪ್ಪಾಳೆ ಅಲೆ ಎಬ್ಬಿಸಬಲ್ಲ ಸಚಿನ್ಗೆ ಮೈದಾನದಿಂದ ಆಚೆ ಬಂದಾಗ ಮಾಧ್ಯಮಗಳ ಮುಂದೆ ನಿಂತು ಒಂದು ನಿಮಿಷವೂ ನಿರರ್ಗಳವಾಗಿ ಮಾತನಾಡಲಾಗದು. ಅಂಥ ಹಿಂಜರಿಕೆ. ಅದಕ್ಕೆ ಶೈಕ್ಷಣಿಕ ಅರ್ಹತೆ ಕುರಿತು ಇರುವ ಇನ್ಫೀರಿಯಾರಿಟಿ ಕಾರಣವಾಗಿರಲೂ ಸಾಕು. ಸಚಿನ್ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ಘಳಿಗೆಯಲ್ಲಿ ಮಾಧ್ಯಮದವರನ್ನು ಎದುರಿಸಿದ ಕ್ಷಣವನ್ನೊಮ್ಮೆ ಕಣ್ಣಮುಂದೆ ತಂದುಕೊಳ್ಳಿ. ಆಗ ಮೇಲಿನ ಮಾತು ಹೌದೆನ್ನಿಸಬಹುದು. ಕ್ರಿಕೆಟ್ ಜೀವನದುದ್ದಕ್ಕೂ ಸ್ಫೂರ್ತಿಸೆಲೆಯಾಗಿದ್ದ ಪತ್ನಿ ಡಾ.ಅಂಜಲಿ, ಕ್ರಿಕೆಟ್ ಗುರು ಅಚ್ರೇಕರ್ ಮತ್ತು ಇತರ ನಾಲ್ಕಾರು ಮಂದಿಗೆ ಕೃತಜ್ಞತೆ ಹೇಳುವುದಕ್ಕೂ ಸಚಿನ್ ನಾಲ್ಕು ಸಾಲನ್ನು ಬರೆದುಕೊಂಡೇ ಬಂದರು. ಕ್ರಿಕೆಟ್ ತಂಡದ ನಾಯಕನಾಗಿ ಅವರು ವಿಫಲನಾಗಿದ್ದೇ ಹೆಚ್ಚು. ವೈಯಕ್ತಿಕ ದಾಖಲೆ ಮಾಡಲು ಕೊಟ್ಟ ಆದ್ಯತೆಯನ್ನು ತಂಡದ ಗೆಲುವಿಗೆ ಕೊಡಲಿಲ್ಲ ಎಂಬ ಅಪವಾದವೂ ಅವರ ಮೇಲಿದೆ. ಒಟ್ಟಾರೆ ಹೇಳುವುದಾದರೆ ಬ್ಯಾಟಿಂಗ್ ಮ್ಯಾಜಿಕ್ಗೆ ಹೊರತಾಗಿ ಸಚಿನ್ ವ್ಯಕ್ತಿತ್ವದ ಹರಹೇ ಅಷ್ಟು. ಇನ್ನು ಸಚಿನ್ ವ್ಯಕ್ತಿತ್ವದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷೆ ಮಾಡುವುದೂ ತಪ್ಪು. ಅಂಥ ಹಿಂಜರಿಕೆ ಸ್ವಭಾವದ ಬ್ಯಾಟ್ಸ್ಮನ್ ಒಬ್ಬನನ್ನು ಮಾತಿನಮನೆಯೆಂದೇ ಕರೆಯುವ ರಾಜ್ಯಸಭೆಗೆ ನಾಮಕರಣ ಮಾಡಲು, ಸಂಸತ್ತು ಅಂದರೆ ಕ್ರಿಕೆಟ್ ಮೈದಾನ ಅಂತ ರಾಹುಲ್ ಗಾಂಧಿ ಭಾವಿಸಿಬಿಟ್ಟರೇ…
ಅಷ್ಟೇ ಅಲ್ಲ, ಹಾಕಿ ದಂತಕಥೆ ಧ್ಯಾನ್ಚಂದ್ರನ್ನು ಬದಿಗೆ ಸರಿಸಿ ಸಚಿನ್ಗೆ ಭಾರತ ರತ್ನ ಪುರಸ್ಕಾರ ಕೊಟ್ಟಿರುವುದಕ್ಕೂ ಕೆಲವರು ಅಪಸ್ವರ ತೆಗೆದಿರುವುದಕ್ಕೆ ಹಲವು ಕಾರಣಗಳಿವೆ. ಉದಾಹರಣೆಗೆ ಹೇಳುತ್ತೇನೆ. 2002ರಲ್ಲಿ ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ 29ನೇ ಸೆಂಚುರಿ ಬಾರಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದಾಗ, ಇಟಲಿ ಮೂಲದ ಫೆರಾರಿ ಕಂಪೆನಿ ಮಾಲೀಕ ಫಿಯೆಟ್ ಸಚಿನ್ಗೆ ದುಬಾರಿ ಫೆರಾರಿ-360 ಮೊಡೆನೊ ಕಾರನ್ನು ಉಡುಗೊರೆ ಕೊಟ್ಟ. ಫಾರ್ಮುಲಾ-1 ಡ್ರೈವರ್ ಮೈಕೆಲ್ ಶುಮಾಕರ್ ಇಂಗ್ಲೆಂಡ್ನ ಸಿಲ್ವೆಸ್ಟರ್ನಲ್ಲಿ ಆ ಕಾರನ್ನು ಸಚಿನ್ಗೆ ಹಸ್ತಾಂತರಿಸಿದ. ಆಗ ಸಚಿನ್ ಫೆರಾರಿ ಕಾರಿಗೆ ಬ್ರಾಂಡ್ ಅಂಬಾಸಡರ್ ಕೂಡ ಆಗಿದ್ದರು. ಉಡುಗೊರೆ ಪಡೆದ ಫೆರಾರಿ ಕಾರನ್ನು ಭಾರತಕ್ಕೆ ತರಬೇಕಾದರೆ ಬರೋಬ್ಬರಿ 1.13 ಕೋಟಿ ರೂ. ಆಮದು ಸುಂಕ ಪಾವತಿಸಬೇಕಿತ್ತು. ಹೀಗಾಗಿ ಆಮದು ಸುಂಕ ಮಾಫಿ ಮಾಡುವಂತೆ ಸಚಿನ್ರ ಚಾರ್ಟರ್ಡ್ ಅಕೌಂಟೆಂಟ್ ಭಾರತ ಸರ್ಕಾರಕ್ಕೆ ಮನವಿ ಮಾಡಿದರು. ಅರ್ಜುನ ಪ್ರಶಸ್ತಿ ಸಂಖ್ಯೆ ಹೆಚ್ಚಿಸಬೇಕೆಂಬ ಕ್ರೀಡಾಸಚಿವಾಲಯದ ಮನವಿಗೆ ಹಣಕಾಸಿನ ಅಭಾವದ ಕಾರಣ ನೀಡಿ ನಕಾರ ಹೇಳಿದ್ದ ಅಂದಿನ ಹಣಕಾಸು ಸಚಿವ ಜಸ್ವಂತ್ ಸಿಂಗ್, ಸಚಿನ್ ಫೆರಾರಿ ಕಾರಿಗೆ ಸುಂಕ ವಿನಾಯಿತಿ ನೀಡಲು ತುದಿಗಾಲಲ್ಲಿದ್ದರು. ಯಾವಾಗ ಈ ವಿಷಯದ ಕುರಿತು ಮಾಧ್ಯಮಗಳಲ್ಲಿ ಚರ್ಚೆ ಶುರುವಾಯಿತೋ ಆಗ ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡು ಪ್ರಧಾನಿ ವಾಜಪೇಯಿ ಮತ್ತು ಹಣಕಾಸು ಸಚಿವರಿಗೆ ನೋಟಿಸ್ ನೀಡಿದರು. ಪ್ರಕರಣ ವಿಕೋಪಕ್ಕೆ ಹೋಗುವುದನ್ನು ಅರಿತ ಫೆರಾರಿ ಮಾಲೀಕ ಆಮದು ಸುಂಕ ಪಾವತಿ ಮಾಡಿ ವಿವಾದಕ್ಕೆ ತೆರೆ ಎಳೆದರು.
ಹಾಗೇ ಮತ್ತೊಂದು ಸಂದರ್ಭ. 2001-05ನೇ ಸಾಲಿನವರೆಗೆ ಕ್ರೀಡಾ ಚಾನೆಲ್ ಇಎಸ್ಪಿಎನ್ನ ಸ್ಟಾರ್ ಸ್ಪೋಟ್ರ್ಸ್, ಪೆಪ್ಸಿ ಕಂಪೆನಿಯ ಟಿವಿ ಜಾಹೀರಾತು ಆದಾಯಕ್ಕೆ ಪ್ರತಿಯಾಗಿ ಎರಡು ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಆದಾಯಕರ ಇಲಾಖೆ ಸಚಿನ್ಗೆ ನೋಟಿಸ್ ನೀಡಿತು. ಅದನ್ನು ಸಚಿನ್ ಇನ್ಕಮ್ ಟ್ಯಾಕ್ಸ್ ಟ್ರಿಬ್ಯುನಲ್ನಲ್ಲಿ ಪ್ರಶ್ನೆ ಮಾಡಿದರು. ಕಲಾಕಾರರು, ಸಂಗೀತಗಾರರು, ನಟ-ನಟಿಯರು ಮತ್ತಿತರರಿಗೆ ಆದಾಯ ತೆರಿಗೆ ವಿನಾಯಿತಿ ನೀಡುವ ಆದಾಯ ತೆರಿಗೆ ಕಾಯ್ದೆಯ 80 ಆರ್.ಆರ್. ಪ್ರಕಾರ ತಮಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಸಚಿನ್ ವಾದ ಮುಂದಿಟ್ಟಿದ್ದರು. `ನಾನೊಬ್ಬ ಜನಪ್ರಿಯ ಮಾಡೆಲ್, ವಿವಿಧ ಕಂಪೆನಿಗಳ ಪ್ರಚಾರಕ್ಕಾಗಿ ನಟಿಸುತ್ತೇನಷ್ಟೆ’ ಎಂಬುದು ಸಚಿನ್ ಹೇಳಿಕೆಯಾಗಿತ್ತು. ಕ್ರಿಕೆಟ್ ಆಟದಿಂದ ಬರುವ ಆದಾಯವನ್ನು ಇತರೆ ಮೂಲಗಳ ಆದಾಯ ಎಂದು ಸಚಿನ್ ತೋರಿಸಿದ್ದನ್ನು ಆದಾಯಕರ ಅಧಿಕಾರಿಗಳು ಮೊದಲು ಒಪ್ಪಲಿಲ್ಲ. ಆಗ ಬೇರೊಂದು ಹಾದಿ ಹುಡುಕಿದ ಸಚಿನ್, `ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅಮಿತಾಭ್ ಬಚ್ಚನ್ಗೆ ತೆರಿಗೆ ವಿನಾಯಿತಿ ಕೊಟ್ಟಿದ್ದನ್ನೇ ಮುಂದಿಟ್ಟುಕೊಂಡು ಮರುಮನವಿ ಸಲ್ಲಿಸಿದಾಗ ಅಧಿಕಾರಿಗಳು ವಿಧಿಯಿಲ್ಲದೇ ತೆರಿಗೆ ವಿನಾಯಿತಿ ಕೊಟ್ಟರು. ಆ ವೇಳೆ ಪ್ರಮುಖ ಇಂಗ್ಲಿಷ್ ದೈನಿಕವೊಂದರಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಒಂದು ವ್ಯಂಗ್ಯಚಿತ್ರ ಬರೆದಿದ್ದರು. ಅದರಲ್ಲಿ ಓರ್ವ ಅಜ್ಜ ಮತ್ತು ಮೊಮ್ಮಗನ ನಡುವಿನ ಸಂಭಾಷಣೆಯನ್ನು ಲಕ್ಷ್ಮಣ್ ಚಿತ್ರಿಸಿದ್ದರು. `ನೀನೊಬ್ಬ ಸೂಪರ್ ಕ್ರೀಡಾಪಟು ಆಗಲು ಸ್ನಾನದ ಸಾಬೂನು, ತಂಪು ಪಾನೀಯ, ಟೂತ್ಪೇಸ್ಟ್ ಮುಂತಾದ ಉತ್ಪನ್ನಗಳಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯಿತಿ ಕೊಡಲೇ ಮಗುವೇ’ ಎಂದು ಅಜ್ಜ ಪುಟ್ಟ ಮೊಮ್ಮಗನಿಗೆ ಕೇಳುವಂತೆ ಚಿತ್ರಿಸಿ ವ್ಯಂಗ್ಯವಾಗಿ ಕುಟುಕಿದ್ದರು.
ಒಮ್ಮೆ ತೆರಿಗೆ ವಿನಾಯಿತಿ ಸಿಕ್ಕಿದ್ದೇ ತಡ, ತನ್ನ ಆಪ್ತ ಸಿಬ್ಬಂದಿಗೆ ಚಹಾ, ಸ್ನಾೃಕ್ಸ್ ಕೊಟ್ಟಿದ್ದರ ಲೆಕ್ಕ ಐವತ್ತು ಸಾವಿರ, ಸಿಬ್ಬಂದಿಯ ಮನರಂಜನೆಗೆ ಮಾಡಿದ ಖರ್ಚು ಅರವತ್ತು ಸಾವಿರ, ತಾನು ಬಳಸುವ ಕಾರು ನಿರ್ವಹಣೆ ವೆಚ್ಚ ಒಂದೂವರೆ ಲಕ್ಷ, ಮನೆ ದೂರವಾಣಿ ವೆಚ್ಚ ಲಕ್ಷಾಂತರ ರೂಪಾಯಿ…ಇಂಥ ಹತ್ತಾರು ನಮೂನೆ ಲೆಕ್ಕ ಕೊಟ್ಟು ತೆರಿಗೆ ವಿನಾಯಿತಿ ಕೊಡಿ ಅಂತ ಸಚಿನ್ ಮನವಿ ಸಲ್ಲಿಸಿಬಿಡುವುದೇ? ಆದರೆ ಅದಕ್ಕೆಲ್ಲ ಆದಾಯಕರ ಇಲಾಖೆ ಸೊಪ್ಪುಹಾಕಲಿಲ್ಲ. ಅದೇನಿದ್ದರೂ ನಿಮ್ಮ ಸ್ವಂತಕ್ಕೆ, ಮನೆಯವರಿಗೆ ಮಾಡಿದ ಖರ್ಚು, ಬಾಯಿಮುಚ್ಚಿಕೊಂಡು ತೆರಿಗೆ ಕಟ್ಟಿ ಅಂತ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ಮುಲಾಜಿಲ್ಲದೆ ಹೇಳಿಬಿಟ್ಟರು.
ಆಯಿತು, ದುಡ್ಡಿನ ಮೌಲ್ಯವನ್ನೇ ನೋಡುವವರಿಗೆ ಇದೆಲ್ಲ ದೊಡ್ಡ ವಿಷಯವಲ್ಲ, ಕಾನೂನಿನಲ್ಲಿ ಇರುವ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುವುದು ಕಾಯಿದೆ ಕಣ್ಣಿನಲ್ಲಿ ಅಪರಾಧವಲ್ಲ ಅನ್ನಬಹುದು. ಆದರೆ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಬರೀ ಇಷ್ಟೇ ಆಲೋಚನೆ ಮಾಡಿದರೆ ಸಾಕೇ ಎಂಬುದು ಮೂಲಭೂತ ಪ್ರಶ್ನೆ.
2013ರಲ್ಲಿ ಹಾಗೇ ಆಯಿತು. ಮುಂಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೇ ಟೆಸ್ಟ್ಮ್ಯಾಚ್ ಆಡಿದ ಸಚಿನ್ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಅದರ ಸಂಸ್ಮರಣೆಗೆ ಸಚಿನ್ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆ ಮಾಡಲಾಯಿತು. ವಾಸ್ತವದಲ್ಲಿ ಅಂಚೆ ಕಾಯಿದೆಯಲ್ಲಿ ಅದಕ್ಕೆ ಅವಕಾಶವೇ ಇಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಸ್ಮರಣಾರ್ಥ ಅಂಚೆಚೀಟಿ ಹೊರತರಲು ಅವಕಾಶವಿದೆಯಾದರೂ, ಅಂತಹ ವ್ಯಕ್ತಿಗಳು ಮರಣ ಹೊಂದಿ ಕನಿಷ್ಠ ಹತ್ತು ವರ್ಷಗಳಾಗಿರಬೇಕೆಂಬ ನಿಯಮವಿದೆ. ಅಥವಾ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಮಹಾನ್ ನಾಯಕನ ಅಂಚೆಚೀಟಿಯನ್ನು ಅವರ ಜೀವಿತಾವಧಿಯಲ್ಲೇ ಹೊರತರಲು ಅವಕಾಶವಿದೆ. ಆದರೆ ಸಚಿನ್ರನ್ನು ಮೆರೆಸುವ ವಿಚಾರದಲ್ಲಿ ಸರ್ಕಾರ ಅಂಚೆ ಕಾಯಿದೆಯನ್ನೇ ಗಾಳಿಗೆ ತೂರಿ, ಇಪ್ಪತ್ತು ರೂ. ದುಬಾರಿ ಮುಖಬೆಲೆಯ ಅಂಚೆಚೀಟಿ ಹೊರಡಿಸುವ ನಿರ್ಧಾರವನ್ನು ತೆಗೆದುಕೊಂಡಿತು.
ಹಾಗೆ ನೋಡಿದರೆ, ಈ ದೇಶದಲ್ಲಿ ಪುರಸ್ಕಾರ, ಶಾಸನಸಭೆಗಳ ಸದಸ್ಯತ್ವ ನೀಡಿಕೆ ಇತಿಹಾಸವೇ ವಿವಾದಾತ್ಮಕ. ಭಾರತ ರತ್ನ ಪುರಸ್ಕಾರವನ್ನು ಶಿಫಾರಸು ಮಾಡಬೇಕಿದ್ದ ನೆಹರು, ಇಂದಿರಾ ಗಾಂಧಿ ಮತ್ತು ಆ ಸರ್ಕಾರದ ಶಿಫಾರಸಿಗೆ ಅಂಕಿತ ಹಾಕಬೇಕಿದ್ದ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಇವರೆಲ್ಲ ತಮಗೆ ತಾವೇ ಭಾರತ ರತ್ನಕ್ಕೆ ಕೊರಳೊಡ್ಡಿದರು. ಪ್ರಧಾನಿಯಾಗಿದ್ದಾಗ ಭಾರತ ರತ್ನವೂ ಸೇರಿ ಎಲ್ಲ ನಾಗರಿಕ ಪುರಸ್ಕಾರಗಳನ್ನು ರದ್ದುಮಾಡಿದ್ದ ಮೊರಾರ್ಜಿ ದೇಸಾಯಿ ಮತ್ತದೇ ಪುರಸ್ಕಾರ ಸ್ವೀಕರಿಸಿ ಇತಿಹಾಸ ನಿರ್ಮಿಸಿಬಿಟ್ಟರು!
ಈಗ ಸುಭಾಷ್ ಚಂದ್ರ ಬೋಸ್, ಅಟಲ್ ಬಿಹಾರಿ ವಾಜಪೇಯಿ ಅವರನ್ನು ಗೌರವಿಸುವ ವಿಚಾರದಲ್ಲಿ ಮತ್ತೆ ಭಾರತ ರತ್ನ ಪುರಸ್ಕಾರ ಚರ್ಚೆಗೆ ಬಂದಿದೆ. ಈ ಪ್ರಶಸ್ತಿ, ಪುರಸ್ಕಾರ, ಸ್ಥಾನಮಾನಗಳು ಕಳೆದುಕೊಂಡ ಗೌರವ, ಘನತೆಯ ಮೆರುಗನ್ನು ಮುಂದಿನ ದಿನಗಳಲ್ಲಾದರೂ ಮರಳಿ ಪಡೆಯಲಿ ಅಂತ ಆಶಿಸೋಣವೇ?