ಅಮೆರಿಕದ ಸೂಚನೆಯಂತೆ ಪಾಕಿಸ್ತಾನದಲ್ಲಿ ಉಗ್ರರ ದಮನಕ್ಕೆ ಕೈಹಾಕಿದ್ದು, ಪ್ರಧಾನಿ ಮೋದಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದೇ ಪಾಕ್ ಪ್ರಧಾನಿ ಷರೀಫ್ ಪಾಲಿಗೆ ಮುಳುವಾಯಿತೇ? ಪರದೇಸಿ ಪಾಕಿಸ್ತಾನ ಮತ್ತೊಮ್ಮೆ ಸೇನಾಡಳಿತಕ್ಕೇ ಹೋಗುವುದೇ?
ಇದು ಪಾಕಿಸ್ತಾನದ ಹಣೆಬರಹ. ಮೂರು ತಿಂಗಳ ಹಿಂದೆ ದೆಹಲಿಗೆ ಬಂದು ಇಲ್ಲಿನ ಹೊಸ ಸರ್ಕಾರದೊಂದಿಗೆ ಸ್ನೇಹದ ನಸುನಗೆ ಬೀರಿ, ಆತಿಥ್ಯ ಸ್ವೀಕರಿಸಿ ಹೋದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಈಗ ತಾಯ್ನೆಲದಲ್ಲೇ ಥೇಟ್ ಅಬ್ಬೇಪಾರಿ. ಹುಂಬ ದೇಶ ಪಾಕಿಸ್ತಾನದಲ್ಲಿ ವಿವೇಚನೆ, ಮಾನವೀಯತೆ ಮತ್ತು ಆತ್ಮಸಾಕ್ಷಿಗೆ ಗುಲಗುಂಜಿಯಷ್ಟಾದರೂ ಕಿಮ್ಮತ್ತು ಸಿಗಲು ಸಾಧ್ಯವೇ? ಇಸ್ಲಾಮಾಬಾದಿನಲ್ಲಿ ಈಗ ಏಕಾಏಕಿ ಆಗಿರುವ ಬೆಳವಣಿಗೆಗಳೇ ಅದಕ್ಕೆ ಸಾಕ್ಷಿ ಮತ್ತು ಪುರಾವೆ. ಅಲ್ಲಿ ಎಷ್ಟೊತ್ತಿಗೆ ಏನು ಬೇಕಾದರೂ ಆಗಬಹುದು. ಯಾರು ಬೇಕಾದರೂ ದಂಗೆ ಏಳಬಹುದು. ಯಾವುದಕ್ಕೂ ಕಾರಣಗೀರಣ ಬೇಕಿಲ್ಲ. ಅಲ್ಲಿ ಪ್ರಧಾನಿಯಾದರೂ ಒಂದೇ, ರಾಷ್ಟ್ರಾಧ್ಯಕ್ಷರಾದರೂ ಒಂದೇ. ಜಗತ್ತಿನಲ್ಲಿ ಜನಾಂಗೀಯ ಕಿಚ್ಚು ಹಚ್ಚಲು ಹುಟ್ಟಿಕೊಂಡಿರುವ ತಾಲಿಬಾನ್ ಪಡೆಯ ಮುಖ್ಯಸ್ಥ ಮುಲ್ಲಾ ಓಮರ್‍ನಿಂದ ಹಿಡಿದು ಹಫೀಜ್ ಸಯೀದ್‍ನವರೆಗೆ ಎಲ್ಲರೂ ಒಂದೇ. ಇದನ್ನೂ ಒಂದು ದೇಶ ಅಂತ ಕರೀಬೇಕಾ ಅನ್ನುವುದು ಪ್ರಶ್ನೆ.
ಪಾಪ, ಪ್ರಧಾನಿ ನವಾಜ್ ಷರೀಫ್ ಪರಿಸ್ಥಿತಿಯನ್ನೇ ನೋಡಿ. ಅವರ ಸ್ಥಿತಿ ಈಗ ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿದೆ. ಅವರು ಸಂಪೂರ್ಣ ನಿಸ್ಸಹಾಯಕರು. ಒಂದೂವರೆ ವರ್ಷದ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಯಂಕರ ಅಕ್ರಮ ನಡೆದಿದೆ ಎಂದು ಪಾಕಿಸ್ತಾನದ ತೆಹ್ರಿಕ್-ಇ-ಇನ್ಸಾಫ್ (ಪಿಟಿಐ)ನ ಮುಖ್ಯಸ್ಥ ಇಮ್ರಾನ್ ಖಾನ್ ಹಾಗೂ ಕೆನಡಾ ಮೂಲದ ಮತ ಪ್ರಚಾರಕ, ಪಾಕಿಸ್ತಾನ್ ಆವಾಮಿ ತೆಹ್ರಿಕ್ (ಪಿಎಟಿ) ಮುಖ್ಯಸ್ಥ ತಾಹಿರುಲ್ ಕಾದ್ರಿ ಈಗ ತಗಾದೆ ತೆಗೆದಿದ್ದಾರೆ. ಇದು ಪಾಕಿಸ್ತಾನದಲ್ಲಿ ಪ್ರಜಾತಂತ್ರ ವ್ಯವಸ್ಥೆ ಮರುಸ್ಥಾಪಿಸಲು ಮಾಡುತ್ತಿರುವ ಹೋರಾಟ ಎಂಬುದು ಖಾನ್ ಮತ್ತು ಕಾದ್ರಿಯ ವಾದ. ಮೇಲ್ನೋಟಕ್ಕೆ ಇದು ನಿಜವೆಂಬಂತೆ ಕಾಣಿಸುತ್ತಿರುವುದು ಹೌದು. ಆದರೆ ಈ ಹೋರಾಟದ ಒಳಸುಳಿ ಬೇರೆಯೇ ಇದೆ. ನವಾಜ್ ಷರೀಫ್ ವಿರುದ್ಧ ಒಳಗೊಳಗೇ ಕತ್ತಿ ಮಸೆಯುತ್ತಿದ್ದ ಪಾಕಿಸ್ತಾನದ ಸೇನೆ ಹಾಗೂ ಪೊಲೀಸ್ ಮುಖ್ಯಸ್ಥರು ನಡೆಸಿರುವ ಮಸಲತ್ತು ಇದು ಅನ್ನುವುದು ಪಾಕಿಸ್ತಾನದ ಒಳಹೊರಗಿನ ವಿದ್ಯಮಾನಗಳ ಅರಿವಿರುವ ಪರಿಣಿತರು ಹೇಳುವ ಮಾತು. ಪರೋಕ್ಷವಾಗಿ ಸೇನೆಯ ಬೆಂಬಲ ಪಡೆದು ಬೀದಿಗಿಳಿದಿರುವ ಕಾದ್ರಿ ಮತ್ತು ಖಾನ್ ಇನ್ನೇನು ಅಧಿಕಾರ ಗದ್ದುಗೆಯ ಹತ್ತಿರ ಬಂದೇಬಿಟ್ಟೆವೆಂದು ಕನಸು ಕಾಣುತ್ತಿದ್ದಾರೆ. ಆದರೆ ಈ ಇಬ್ಬರು ಅವಿವೇಕಿಗಳನ್ನು ಛೂ ಬಿಟ್ಟು ಷರೀಫ್‍ಗೆ ಖೆಡ್ಡಾ ತೋಡಿರುವ ಪಾಕ್ ಸೇನಾ ಮುಖ್ಯಸ್ಥ ಜನರಲ್ ರಶೀಲ್ ಷರೀಫ್ ಅನಾಯಾಸವಾಗಿ ಅಧಿಕಾರ ಹಿಡಿಯುವ ಪಕ್ಕಾ ಲೆಕ್ಕಾಚಾರ ಇಟ್ಟುಕೊಂಡು ಕುಳಿತಿದ್ದಾರೆ. ಇದೊಂಥರಾ ಹಾವು ಮತ್ತು ಹದ್ದಿನ ಲೆಕ್ಕಾಚಾರ. ಹಾವು ಇಲಿಯ ಮೇಲೆ ಕಣ್ಣಿಟ್ಟು ನಾಲಗೆ ಮುಂದೆ ಚಾಚುತ್ತಿದ್ದರೆ, ಹದ್ದು ಹಾವಿಗೆ ಗುರಿಯಿಟ್ಟು ಕಣ್ಣರಳಿಸಿ ಹೊಂಚುಹಾಕುತ್ತಿದೆ. ಇದರಲ್ಲಿ ನ್ಯಾಯ ಯಾವುದು, ಅನ್ಯಾಯ ಯಾವುದು? ಎರಡರದ್ದೂ ಹುಟ್ಟು ಸ್ವಭಾವ. ಹೊಟ್ಟೆಪಾಡಿನ ದೃಷ್ಟಿ. ಪರಿಣಾಮ ಏನಾದೀತು? ಒಂದೋ ಷರೀಫ್ ದೇಶಾಂತರ ಪಲಾಯನ ಮಾಡಬೇಕು. ಇಲ್ಲ ಜೈಲು ಸೇರಿ ಕಂಬಿ ಎಣಿಸಲು ಮಾನಸಿಕವಾಗಿ ಅಣಿಯಾಗಬೇಕು. ಎರಡೂ ಬೇಡ ಅನ್ನುವುದಾದರೆ ರಕ್ತಪಿಪಾಸುಗಳ ಕೋವಿಗೋ, ಬಾಂಬಿಗೋ ಗುಂಡಿಗೆಯನ್ನು ಚೆಲ್ಲಲು ಸನ್ನದ್ಧರಾಗಬೇಕು. ಬೇರೆ ವಿಧಿಯಿಲ್ಲ.
ಪಾಕಿಸ್ತಾನದಲ್ಲಿ ಈಗ ಉಂಟಾಗಿರುವ ಬಿಕ್ಕಟ್ಟಿನ ಹಿಂದೆ ಸೇನೆಯ ಪಿತೂರಿ ಇದೆ ಎಂಬುದಕ್ಕೆ ಬೇಕಾದಷ್ಟು ಪುರಾವೆಗಳಿವೆ. ಅದಿಲ್ಲದೇ ಹೋಗಿದ್ದರೆ ರಕ್ಷಣಾ ಕೋಟೆ ಭೇದಿಸಿ ಇಸ್ಲಾಮಾಬಾದಿನ ಪ್ರಧಾನಿ ನಿವಾಸ, ರಾಷ್ಟ್ರಾಧ್ಯಕ್ಷರ ನಿವಾಸ, ಸಂಸತ್ ಭವನ ಇತ್ಯಾದಿ ಇರುವ ರೆಡ್ ಝೋನನ್ನು ಕಾದ್ರಿ ಮತ್ತು ಇಮ್ರಾನ್ ಲಕ್ಷಾಂತರ ಬೆಂಬಲಿಗರೊಂದಿಗೆ ತಲುಪುವುದು ಸುಲಭವೇ? ಭದ್ರತಾ ದೃಷ್ಟಿಯಿಂದ ಅತಿ ಸೂಕ್ಷ್ಮ ಪ್ರದೇಶವಾಗಿರುವ ರೆಡ್‍ಝೋನ್ ಒಳಕ್ಕೆ ಇಮ್ರಾನ್ ಜಾಥಾಕ್ಕೆ ಪ್ರವೇಶ ಕೊಡಬೇಡಿ ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್ ಕೂಡ ಸೇನೆಗೆ ಕಟ್ಟಪ್ಪಣೆ ಮಾಡಿತ್ತು. ಆದರೆ ಪಾಕ್ ಸೇನಾ ಮುಖ್ಯಸ್ಥರು ಹಾಗೂ ಇಸ್ಲಾಮಾಬಾದಿನ ಪೊಲೀಸ್ ಮುಖ್ಯಸ್ಥರು ಇದ್ಯಾವುದನ್ನೂ ಕೇಳಿಸಿಕೊಳ್ಳಲೇ ಇಲ್ಲ. ಇಮ್ರಾನ್ ಮತ್ತು ಕಾದ್ರಿಯನ್ನು ಮಾತುಕತೆಗೆ ಒಪ್ಪಿಸಿ ಎಂದು ಷರೀಫ್ ಸೇನಾ ಮುಖ್ಯಸ್ಥರಿಗೆ ಹೇಳಿದರೆ `ಸರ್ಕಾರ ಉಳಿಯಬೇಕಾದರೆ ಅಧಿಕಾರದಲ್ಲಿ ಸೇನೆಗೆ ಪಾಲು ಕೊಡಲು ತಯಾರಾಗಿ, ಮಾತುಕತೆಗೆ ಏರ್ಪಾಡು ಮಾಡುತ್ತೇನೆ’ ಅಂತ ಸೇನಾ ಮುಖ್ಯಸ್ಥರು ಕಡ್ಡಿಮುರಿದಂತೆ ಹೇಳಿಬಿಡುತ್ತಾರೆಂದರೆ ಏನರ್ಥ? ಅದಕ್ಕೆ ಪೂರಕವಾಗಿ ಷರೀಫ್ ಅಧಿಕಾರ ತ್ಯಾಗ ಮಾಡಿದರೆ ಮಾತುಕತೆ, ಇಲ್ಲ ಅಂದರೆ ಇಲ್ಲ. ಮುಂದಿನದನ್ನು ನೋಡಿಕೊಳ್ಳುತ್ತೇವೆ ಅಂತ ಇಮ್ರಾನ್ ಖಾನ್ ಹೇಳಿದ್ದಾರೆ. ಏನಿದರ ಮರ್ಮ? ಬೇರೇನೂ ಇಲ್ಲ, ಪರದೇಸಿ ಪಾಕಿಸ್ತಾನ ಮತ್ತೊಮ್ಮೆ ಸೇನೆಯ ಮುಷ್ಟಿಗೆ ಸಿಗಲು ಕ್ಷಣಗಣನೆ ಶುರುವಾಗಿದೆ ಅಂತ ಷರಾ ಬರೆಯಬಹುದು. ಈ ವಾಸನೆ ಬಡಿಯುತ್ತಿದ್ದಂತೆಯೇ ಪಾಕಿಸ್ತಾನದ ಸುಪ್ರೀಂಕೋರ್ಟ್ ಕೂಡ ಉಲ್ಟಾ ಹೊಡೆದಿದೆ. ಪಾಕಿಸ್ತಾನದ ಸಂಸತ್ತಿನ ಸುತ್ತ ಎಂಟು ದಿನಗಳಿಂದ ಬೀಡುಬಿಟ್ಟಿರುವ ಪ್ರತಿಭಟನಾಕಾರರ ತೆರವಿಗೆ ಸರ್ಕಾರ ಪರ ಹಾಕಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇದು ಆಡಳಿತಾತ್ಮಕ ವಿಚಾರ, ಕಾಯ್ದೆ ಕಾನೂನಿಗೆ ತಕ್ಕನಾಗಿ ವ್ಯವಹರಿಸಿ, ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕೋರ್ಟ್ ಹೇಳಿಬಿಟ್ಟಿದೆ. ಹಾಗಿದ್ದರೆ ಷರೀಫ್‍ಗೆ ದಾರಿ ಯಾವುದು?
ಇಂಥ ಸನ್ನಿವೇಶ ಪಾಕಿಸ್ತಾನಕ್ಕೆ ಹೊಸದಲ್ಲ. ಆಡಳಿತ ಸೂತ್ರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಈ ಹಿಂದೆ ಪಾಕ್ ಸೇನೆ ಬೇಕಾದಷ್ಟು ಸಾರಿ ಹವಣಿಸಿದ್ದಿದೆ. ಆದರೆ ಅದರಲ್ಲಿ ಸಂಪೂರ್ಣ ಯಶಸ್ವಿಯಾದದ್ದು ಮೂರು ಸಲ ಮಾತ್ರ. ಮೊದಲ ಬಾರಿಗೆ ಪಾಕ್ ಆಡಳಿತ ಸೇನೆಯ ಕೈಗೆ ಜಾರಿದ್ದು 1958ರಲ್ಲಿ. ಪಾಕಿಸ್ತಾನದ ಮೊದಲ ಅಧ್ಯಕ್ಷ ಮೇಜರ್ ಜನರಲ್ ಸಿಕಂದರ್ ಮಿರ್ಝಾ ಪಾಕ್‍ನ ಸಂವಿಧಾನ ರಚನಾ ಸಭೆ(ಕಾನ್‍ಸ್ಟಿಟ್ಯುಯೆಂಟ್ ಅಸೆಂಬ್ಲಿ)ಯನ್ನೇ ಅಮಾನತ್ತುಗೊಳಿಸಿ, ಪ್ರಧಾನಿ ಫಿರೋಜ್‍ಖಾನ್ ನೂನ್‍ರನ್ನು ಅಧಿಕಾರದಿಂದ ಎಳೆದುಹಾಕಿ ಸೇನೆಯ ಮುಖ್ಯಸ್ಥರಾಗಿದ್ದ ಅಯೂಬ್ ಖಾನ್‍ರನ್ನು ಆಡಳಿತದ ಮುಖಸ್ಥರನ್ನಾಗಿ ನೇಮಿಸಿದರು. ಮುಂದೆ ಹದಿಮೂರೇ ದಿನದಲ್ಲಿ ಅಯೂಬ್ ಖಾನ್ ಅಧ್ಯಕ್ಷ ಮಿರ್ಝಾರನ್ನೇ ಕಿತ್ತೊಗೆದು ತಾನೇ ಪಾಕ್ ಅಧ್ಯಕ್ಷ ಎಂದು ಘೋಷಿಸಿಕೊಂಡ. ಇದು ಪಾಕಿಸ್ತಾನದಲ್ಲಿ ಸೇನಾಡಳಿತದ ಕರಾಳ ಇತಿಹಾಸದ ಆರಂಭ. ಆ ನಂತರ ಜನರಲ್ ಜಿಯಾವುಲ್ ಹಕ್ ಅಯೂಬ್ ಖಾನ್‍ನ ಪರಂಪರೆಯನ್ನು ಮುಂದುವರೆಸಿದ. 1977ರ ಜುಲೈ 14 ಮಧ್ಯರಾತ್ರಿ ಸೇನಾಕ್ರಾಂತಿ ನಡೆಸಿದ ಜಿಯಾ, ಪ್ರಧಾನಿ ಜುಲ್ಫೀಕರ್ ಅಲಿಭುಟ್ಟೋ, ಭುಟ್ಟೋ ಸರ್ಕಾರದ ಮಂತ್ರಿಗಳು, ಪಾಕಿಸ್ತಾನ ಪೀಪಲ್ಸ್ ಪಕ್ಷವೂ ಸೇರಿ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರನ್ನು ಲಾಕಪ್ಪಿಗೆ ಹಾಕಿದ. ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ಮತ್ತು ಪ್ರಾದೇಶಿಕ ಶಾಸನಸಭೆಗಳನ್ನು ಅಮಾನತ್ತಿನಲ್ಲಿಟ್ಟು ಆಡಳಿತದ ಚುಕ್ಕಾಣಿಯನ್ನು ತನ್ನ ಕೈಗೆ ತೆಗೆದುಕೊಂಡ.
1999ರ ಘಟನೆ ಗೊತ್ತೇ ಇದೆ. ಆಗ ಪ್ರಧಾನಿಯಾಗಿದ್ದ ಇದೇ ನವಾಜ್ ಷರೀಫ್ ಲಂಕಾ ಪ್ರವಾಸ ಮುಗಿಸಿ ವಾಪಸು ಪಾಕ್ ನೆಲದಲ್ಲಿ ಬಂದು ಇಳಿಯಲು ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವಕಾಶ ಕೊಡಲಿಲ್ಲ. ಒಬ್ಬ ಚುನಾಯಿತ ಪ್ರಧಾನಿಯನ್ನು ಈ ರೀತಿ ನಡೆಸಿಕೊಳ್ಳುವ ಬೇರೊಂದು ದೇಶ ಜಗತ್ತಿನಲ್ಲಿ ಸಿಗಲು ಸಾಧ್ಯವೇ ಹೇಳಿ.
ಅದಕ್ಕೆ ಹೊರತಾಗಿ 1949ರಲ್ಲಿ ಮೇಜರ್ ಜನರಲ್ ಅಕ್ಬರ್ ಖಾನ್, ಲಿಯಾಕತ್ ಅಲಿ ಖಾನ್ ಸರ್ಕಾರದ ವಿರುದ್ಧ, 1980ರಲ್ಲಿ ಮೇಜರ್ ಜನರಲ್ ತಜಮ್ಮುಲ್ ಹುಸೇನ್ ಮಲಿಕ್, 1995ರಲ್ಲಿ ಮೇಜರ್ ಜನರಲ್ ಜಹಿರುಲ್ ಇಸ್ಲಾಂ ಅಬ್ಬಾಸಿ ಇವರೆಲ್ಲರೂ ಚುನಾಯಿತ ಸರ್ಕಾರಗಳನ್ನು ಬುಡಮೇಲು ಮಾಡುವ ಸಾಹಸಕ್ಕೆ ಯತ್ನಿಸಿದರಾದರೂ ಅದರಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಪಾಕ್ ಸೇನೆಯದ್ದು ಎಂಥಾ ನೀಚತನದ ಇತಿಹಾಸ ಅಂದರೆ, ಸೇನಾ ಮುಖ್ಯಸ್ಥರಾಗಿದ್ದ ಜನರಲ್ ತಜಮ್ಮುಲ್ ಹುಸೇನ್ ಜಿಯಾವುಲ್ ಹಕ್‍ರನ್ನು, ಜ.ಜಹಿರುಲ್ ಅಬ್ಬಾಸಿ ಬೇನಜಿರ್ ಭುಟ್ಟೋರನ್ನು ಹತ್ಯೆಗೈಲು ಉಗ್ರರ ಜತೆಗೂಡಿ ಸಂಚು ರೂಪಿಸಿದ್ದರು ಅಂತ ಹೇಳಲಾಗುತ್ತದೆ. ಅದಕ್ಕಿಂತಲೂ ಅಪಾಯದ ಸಂಗತಿ ಎಂದರೆ ಪಾಕಿಸ್ತಾನದ ಸೇನೆ ಮೊದಲಿಂದಲೂ ಇಸ್ಲಾಮಿಕ್ ಮೂಲಭೂತವಾದಿಗಳ ಹಿಡಿತದಲ್ಲಿ ಸಿಲುಕಿಕೊಂಡಿದೆ. ಪಾಕಿಸ್ತಾನ, ಅಪ್ಘಾನಿಸ್ತಾನದಿಂದ ಹಿಡಿದು ಇಂದು ಜಗತ್ತಿನಾದ್ಯಂತ ಬೇರುಬಿಟ್ಟಿರುವ ಉಗ್ರರ ಸಂಘಟನೆಗಳಿಗೆಲ್ಲ ಸರ್ವಾಧಿಕಾರಿ ಜಿಯಾವುಲ್ ಹಕ್‍ನೇ ಮೂಲಪುರುಷ. ಪ್ರಧಾನಿ ಜುಲ್ಫೀಕರ್ ಅಲಿ ಭುಟ್ಟೋರನ್ನು ಕೆಳಗಿಳಿಸಿ ಆಡಳಿತದ ಚುಕ್ಕಾಣಿ ಹಿಡಿದ ಜಿಯಾವುಲ್ ಹಕ್ ಮದರಸಾಗಳ ಮೂಲಕ ಇಡೀ ಪಾಕಿಸ್ತಾನದಲ್ಲಿ ಮತಾಂಧತೆಯ ವಿಷಬೀಜ ಬಿತ್ತಿದ. ಅಲ್ಲಿಂದ ಮೂಲಭೂತವಾದ ಅಘ್ಫಾನಿಸ್ತಾನದವರೆಗೂ ಹಬ್ಬಿತು. ಇದೀಗ ಇಡೀ ಜಗತ್ತನ್ನೇ ಮತಾಂಧತೆಯ ಪಿಡುಗು ಆವರಿಸಿಕೊಂಡಿದೆ. ಬೇರೆ ದೇಶಗಳ ಕತೆ ಹೇಗೂ ಇರಲಿ, ತಾನೇ ಹೆಣೆದ ಈ ವಿಷವರ್ತುಲದಲ್ಲಿ ಮತ್ತೆ ಮತ್ತೆ ಸಿಕ್ಕಿಹಾಕಿಕೊಳ್ಳುತ್ತಿರುವ ಪಾಡು ಪಾಕಿಸ್ತಾನದ್ದು. ಇದು ಸ್ವಯಂಕೃತ ಅಪರಾಧದ ಫಲ.
ಅಲ್ಲ, ಈ ಇಮ್ರಾನ್ ಖಾನ್ ಮಾತು ನಗೆಬರಿಸುವಂತಿದೆ. ಈತ ಅದೆಷ್ಟು ಮುಗ್ಧ ಅಂತ. ಪಕ್ಕಾ ಮತಾಂಧತೆಯನ್ನೇ ನರನಾಡಿಗಳಲ್ಲಿ ತುಂಬಿಕೊಂಡಿರುವ ಪಾಕ್ ಸೇನೆಯ ಬೆಂಬಲವನ್ನೇ ನೆಚ್ಚಿಕೊಂಡಿರುವ ಈ ಅಪ್ರಬುದ್ಧರು, ನವಾಜ್ ಷರೀಫರನ್ನು ಅಧಿಕಾರದಿಂದ ಕೆಳಗಿಳಿಸಿ ಭ್ರಷ್ಟಾಚಾರವನ್ನು ಸಮೂಲ ನಾಶಮಾಡುತ್ತೇವೆ, ಎಲ್ಲ ಬಡವರಿಗೆ ಮನೆ ಕಟ್ಟಿಸಿಕೊಡುತ್ತೇವೆ, ಉಚಿತ ಕಡ್ಡಾಯ ಶಿಕ್ಷಣ ಜಾರಿ ಮಾಡುತ್ತೇವೆ, ಮಹಿಳೆಯರ ಸಬಲೀಕರಣ ಮಾಡುತ್ತೇವೆ, ಭಯೋತ್ಪಾದನೆಯನ್ನು ಸಮೂಲ ನಾಶಮಾಡುತ್ತೇವೆ, ಪಾಕ್ ನೆಲದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಹಕ್ಕನ್ನು ಕೊಡಿಸುತ್ತೇವೆ, ಶಾಂತಿ ಸಹಬಾಳ್ವೆಯನ್ನು ಮರುಸ್ಥಾಪಿಸುತ್ತೇವೆ ಅಂತ ಹೇಳುತ್ತಿದ್ದಾರಲ್ಲ, ಇದರಲ್ಲಿ ಒಂದೇ ಒಂದು ಅಂಶವನ್ನಾದರೂ ಪಾಕಿಸ್ತಾನದಲ್ಲಿ ಜಾರಿಮಾಡಲು ಸಾಧ್ಯವೇ? ಇದರಲ್ಲಿ ಯಾವುದಾದರೂ ಒಂದನ್ನು ಆಚರಣೆಗೆ ತರಲು ಪಾಕ್ ಸೇನೆ, ಐಎಸ್‍ಐ ಮತ್ತು ಸೇನೆಯನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಮುಜಾಹಿದೀನ್‍ಗಳು ಬಿಡುತ್ತಾರೆಯೇ? ವಿಚಿತ್ರ ವಾದ!
ಪಾಕ್‍ನಲ್ಲಿ ನಾಗರಿಕ ದಂಗೆ ಶುರುವಾಗುವುದಕ್ಕೂ, ಕಾಶ್ಮೀರದ ಗಡಿಗುಂಟ ಅಪ್ರಚೋದಿತವಾಗಿ ಪಾಕಿಸ್ತಾನದ ಸೇನೆ ನಿರಂತರ ಗುಂಡುಹಾರಿಸಿ ಕದನವಿರಾಮ ಉಲ್ಲಂಘಿಸುವುದಕ್ಕೂ ನೇರಾನೇರ ಸಂಬಂಧವಿದೆ. ಚುನಾವಣೆಯಲ್ಲಿ ಬಹುಮತಗಳಿಸಿದ ಹುಮ್ಮಸ್ಸಿನಲ್ಲಿದ್ದ ನವಾಜ್ ಷರೀಫ್ ಅಮೆರಿಕದ ಪ್ರೋತ್ಸಾಹ ಪಡೆದು ಪಾಕಿಸ್ತಾನದ ಮೂಲೆಮೂಲೆಯಲ್ಲಿ ಬೇರುಬಿಟ್ಟಿರುವ ಭಯೋತ್ಪಾದಕರ ವಿರುದ್ಧ ದಮನ ಕಾರ್ಯಾಚರಣೆ ಕೈಗೊಂಡರು. ಅದರ ಬೆನ್ನಲ್ಲೇ ಭಾರತದ ಆಹ್ವಾನ ಮನ್ನಿಸಿ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭದಲೂ ಭಾಗವಹಿಸಿದರು. ಈ ಬೆಳವಣಿಗೆ ಭಾರತ-ಪಾಕಿಸ್ತಾನದ ಸಂಬಂಧ ವೃದ್ಧಿಯ ಕಡೆಗೆ ಹೊಸ ಭರವಸೆ ಮೂಡಿಸಿತ್ತು. ಪಾಕ್ ಸೇನೆಯ ದೃಷ್ಟಿಯಲ್ಲಿ ಇದು ನವಾಜ್ ಮಾಡಿದ ಮಹಾಪರಾಧ. ಅದರ ಪರಿಣಾಮವೇ ಗಡಿಯಲ್ಲಿ ಪಾಕಿಸ್ತಾನದ ಗುಂಡಿನ ಮೊರೆತ ಜೋರಾಗತೊಡಗಿತು. ಅತ್ತ ಹಠಾತ್ತಾಗಿ ಪಾಕಿಸ್ತಾನದಲ್ಲಿ ನವಾಜ್ ಸರ್ಕಾರದ ವಿರುದ್ಧ ಭಯಂಕರ ಪ್ರತಿಭಟನೆಯೂ ಶುರುವಾಯಿತು. ಸ್ವಲ್ಪ ಫ್ಲಾೃಷ್‍ಬ್ಯಾಕ್‍ಗೆ ಬನ್ನಿ. 1999ರ ಫೆಬ್ರವರಿಯಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಲಾಹೋರ್ ಬಸ್ ಯಾತ್ರೆ ಕೈಗೊಂಡರಲ್ಲವೇ? ಆಗಿನ ಪಾಕ್ ಪ್ರಧಾನಿ ನವಾಜ್ ಷರೀಫ್ ವಾಘಾ ಗಡಿಯಲ್ಲಿ ವಾಜಪೇಯಿ ಅವರನ್ನು ತಬ್ಬಿ ಸ್ವಾಗತಿಸಿದರು. ದೆಹಲಿ-ಲಾಹೋರ್ ಮಧ್ಯೆ ಐತಿಹಾಸಿಕ ಬಸ್ ಸೇವೆ ಶುರುವಾಗಿದ್ದು ಉಭಯದೇಶಗಳ ಬಾಂಧವ್ಯ ವೃದ್ಧಿಗೆ ಮುನ್ನುಡಿ ಅಂತಲೇ ಇಡೀ ಜಗತ್ತು ಭಾವಿಸಿತು. ಆದರೆ ಆದದ್ದೇ ಬೇರೆ. ಫೆಬ್ರವರಿಯಲ್ಲಿ ಲಾಹೋರ್ ಬಸ್ ಸೇವೆಗೆ ಹಸಿರು ನಿಶಾನೆ ತೋರಿದ ಷರೀಫ್‍ರ ವಿರುದ್ಧ ತಿರುಗಿಬಿದ್ದ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್, ಅಕ್ಟೋಬರ್‍ನಲ್ಲಿ ಅವರನ್ನು ದೇಶಾಂತರ ಕಳಿಸಿಬಿಟ್ಟರು. ಕಾರ್ಗಿಲ್ ಯುದ್ಧ, ಭಾರತದ ಸಂಸತ್ತಿನ ಮೇಲೆ ಉಗ್ರರ ದಾಳಿ ಇವೆಲ್ಲ ಆ ನಂತರದ ಪರಿಣಾಮಗಳು. ಹಾಗಾದರೆ ಇತಿಹಾಸದಿಂದ, ಪರಿಸ್ಥಿತಿಯ ಸಂಕಷ್ಟದಿಂದ ಪಾಠ ಕಲಿಯದ ಪಾಕಿಸ್ತಾನಕ್ಕೆ ಭವಿಷ್ಯವಿದೆಯೇ? ಮೂರ್ಖತನವನ್ನೇ ಹಾಸಿ ಹೊದ್ದುಕೊಂಡಿರುವ ಪಾಕಿಸ್ತಾನದ ಜತೆಗೆ ಭಾರತ ಸ್ನೇಹ ಸಲ್ಲಾಪ ಮುಂದುವರೆಸಬೇಕಿತ್ತೇ? ಪಾಕಿಸ್ತಾನದೊಂದಿಗೆ ಮಾತುಕತೆ ನಿಲ್ಲಿಸುವ ಮೋದಿ ಸರ್ಕಾರದ ನಡೆ ತಪ್ಪೇ? ಮಾತುಕತೆ ಮಾರ್ಗದ ಹೊರತಾಗಿಯೂ ಕಾಶ್ಮೀರದ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ಮಾರ್ಗಗಳೇನಾದರೂ ಇವೆಯೇ?
ಅದನ್ನೆಲ್ಲ ಮುಂದಿನ ಕಂತಿನಲ್ಲಿ ನೋಡೋಣ….