ಮಾನ್ಯ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇದೇ ಜುಲೈ 26ಕ್ಕೆ ಒಂದು ವರುಷವಾಗುತ್ತದೆ. ಆಡಳಿತವನ್ನು ಕನ್ನಡ ನಾಡಿನ ಜನಮೆಚ್ಚುವಂತೆ ನಿರ್ವಹಿಸುವುದು ಸುಲಭವಲ್ಲ. ದಕ್ಷ ಮತ್ತು ಪಾರದರ್ಶಕ ಆಡಳಿತಕ್ಕೆ ನಮ್ಮ ನಾಡು ಭಾರತದಲ್ಲೇ ಹೆಸರುವಾಸಿಯಾಗಿದೆ. ಖ್ಯಾತನಾಮರಾದ ಜನನಾಯಕರಲ್ಲಿ ಇಂದಿನ ಮುಖ್ಯಮಂತ್ರಿಗಳು ಮುಂಚೂಣಿಯಲ್ಲಿ ನಿಂತಿದ್ದಾರೆ.
ಈ ಕಾಲಾವಧಿಯ ವಿಶೇಷತೆಯೆಂದರೆ ಹಿಂದೆಂದೂ ಕಂಡರಿಯದಷ್ಟು, ಕೇಳರಿಯದಷ್ಟು ಕಷ್ಟ ಸಂಕೋಲೆಗಳನ್ನು ಕರ್ನಾಟಕ ಈ ಒಂದು ವರುಷದ ಅವಧಿಯಲ್ಲಿ ಕಂಡಿದೆ. ಬರ, ಅತಿವೃಷ್ಟಿ, ಪ್ರವಾಹ, ಪ್ರಕೃತಿವಿಕೋಪ ಇವೇ ಮೊದಲಾದ ಸಂಕಷ್ಟ ಪರಿಸ್ಥಿತಿ ಜನಜೀವನವನ್ನು ಘಾಸಿಗೊಳಿಸಿದೆ. ಸಾಲದೆನ್ನುವಂತೆ ಸಾಂಕ್ರಾಮಿಕ ಹೆಮ್ಮಾರಿ ಕೊರೊನಾ ಜನಾರೋಗ್ಯವನ್ನು ಅಲ್ಲೋಲಕಲ್ಲೋಲ ಮಾಡಿದೆ.
ಯಡಿಯೂರಪ್ಪನವರ ಆಡಳಿತದ ಮೊದಲ ವರುಷದ ಪ್ರಾರಂಭ ರಾಜ್ಯ ಬರಗಾಲ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದ್ದು ಜನತೆಯ ನೆನಪಿನಲ್ಲಿದೆ. ರಾಜ್ಯ ಸರಕಾರ ಬರಪರಿಸ್ಥಿತಿಯನ್ನು ಎದುರಿಸಿ ನೆರೆಸಂತ್ರಸ್ತರಿಗೆ ಗಂಜಿಕೇಂದ್ರಗಳನ್ನು ವ್ಯವಸ್ಥೆಗೊಳಿಸಿ, ಸುರಕ್ಷಿತ ಸ್ಥಳಗಳಿಗೆ ಸಾಗಿಸಿ ಸುಮಾರು 4485 ಕೋಟಿ ರೂ.ಗಳ ವೆಚ್ಚದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿತು. ಅತಿವೃಷ್ಟಿ ಪರಿಹಾರದಿಂದ ರಾಜ್ಯಕ್ಕೆ 35 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಯಿತು. ಮುಖ್ಯಮಂತ್ರಿಯವರು ಪ್ರವಾಹ ಪರಿಹಾರ ಮಾರ್ಗಸೂಚಿ ಅನ್ವಯ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ 1869 ಕೋಟಿ ರೂ.ಗಳ ಅನುದಾನ ಪಡೆಯುವಲ್ಲಿ ಯಶಸ್ವಿಯಾದರು.
ಪರಿಶಿಷ್ಟ ಮಕ್ಕಳ ಬಗೆಗೆ ಗೌರವ
ಕರ್ನಾಟಕ ಸರಕಾರದ ಇಂದಿನ ಆದ್ಯತೆಗಳ ಪೈಕಿ ಅತಿ ಮುಖ್ಯವಾದದ್ದು ಪರಿಶಿಷ್ಟ ಜಾತಿ ವರ್ಗಗಳ ಮಕ್ಕಳ ಶಿಕ್ಷಣ ಸೌಲಭ್ಯಗಳ ಪೂರೈಕೆ. 2019-20ರ ಅವಧಿಯಲ್ಲಿ ಪರಿಶಿಷ್ಟ ಜಾತಿ ವರ್ಗದ ಮಕ್ಕಳ ವಸತಿ ಶಾಲೆ ಮತ್ತು ಹಾಸ್ಟೆಲ್‌ಗಳ ವ್ಯವಸ್ಥೆ.47 ವಸತಿ ಶಾಲೆಗಳ ಕಾಮಗಾರಿ ಮತ್ತು 96 ಹಾಸ್ಟೆಲ್‌ಗಳ ನಿರ್ಮಾಣದಿಂದಾಗಿ ಈ ವರ್ಷ 12 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಂಡು ಓದಲು ಸಂಪೂರ್ಣ ವ್ಯವಸ್ಥೆ ಮಾಡಲಾಯಿತು. ಇದಕ್ಕಾಗಿ ತಗುಲಿದ ವೆಚ್ಚ 995 ಕೋಟಿ ರೂ. ಇದೇ ಅವಧಿಯಲ್ಲಿ 181 ವಸತಿ ಶಾಲೆಗಳು ಮತ್ತು141 ಹಾಸ್ಟೆಲ್‌ಗಳಿಗೆ ಶಾಶ್ವತ ಕಟ್ಟಡ ನಿರ್ಮಿಸಲು ಸರಕಾರ ಮುಂದಾಯಿತು.
ಇದರ ಜತೆ ಸಮಾಜ ಕಲ್ಯಾಣ ಇಲಾಖೆಯು 3 ಲಕ್ಷ 71 ಸಾವಿರ ಬಡ ಮಕ್ಕಳಿಗೆ ಸಮವಸ್ತ್ರ, ಬಟ್ಟೆ ಬರೆ, ಕಾಲಿಗೆ ಶೂ ಮತ್ತಿತರ ಸಲಕರಣೆ ಒದಗಿಸುತ್ತಿದೆ. ಒಂದು ವಿಶೇಷ ಸಂಗತಿಯೆಂದರೆ ರಾಜ್ಯ ಸರಕಾರದ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಮಕ್ಕಳು ವಾರ್ಷಿಕ ಪರೀಕ್ಷೆಗಳಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ರಾಜ್ಯದ ಸರಾಸರಿ ಉತ್ತೀರ್ಣ ಶೇ.61ರಷ್ಟು ಇದ್ದರೆ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಶೇ. 86ರಷ್ಟು ಉತ್ತೀರ್ಣರಾಗಿದ್ದಾರೆ.
ಸರಕಾರದ ಮತ್ತೊಂದು ಸಾಧನೆಯೆಂದರೆ ಪರಿಶಿಷ್ಟ ಜಾತಿ ವರ್ಗದ 11,377 ಫಲಾನುಭವಿಗಳಿಗೆ 400 ಕೋಟಿ ರೂಪಾಯಿಗಳನ್ನು ಸ್ವಯಂ ಉದ್ಯೋಗಕ್ಕಾಗಿ ಬಿಡುಗಡೆ ಮಾಡಲಾಗಿದೆ. ಅಂತೆಯೇ ಭೂಮಿ ಖರೀದಿಯಲ್ಲೂ ವಿಶೇಷ ಪ್ರಗತಿ ಸಾಧ್ಯವಾಗಿದೆ. 2100 ಕುಟುಂಬಗಳಿಗೆ 260 ಕೋಟಿ ರೂ. ಖರ್ಚಿನಲ್ಲಿ 2800 ಎಕರೆ ಭೂಮಿಯನ್ನು ಸರಕಾರ ಖರೀದಿಸಿ ವಿತರಿಸಿದೆ. ಪರಿಶಿಷ್ಟ ಜಾತಿ ವರ್ಗದ ರೈತರ ಕೃಷಿಭೂಮಿಗೆ ಕೊಳವೆಬಾವಿ ಸೌಲಭ್ಯ ಒದಗಿಸುವಲ್ಲಿ ವಿಶೇಷ ಆದ್ಯತೆ ದೊರಕಿದೆ. ಗಂಗಾಕಲ್ಯಾಣ ಯೋಜನೆಯಡಿ 8517 ಕೊಳವೆಭಾವಿಗಳು ನಿರ್ಮಾಣಗೊಂಡಿವೆ.
ನೀರಾವರಿ: ಜಲಮಟ್ಟ ಏರಿಕೆ
ಮಹದಾಯಿ ಜಲವಿವಾದ ನ್ಯಾಯಾಧಿಕರಣದ ತೀರ್ಪು ಕರ್ನಾಟಕಕ್ಕೆ ಹೆಚ್ಚಿನ ಅನುಕೂಲ ಒದಗಿಸಿದೆ. ತೀರ್ಪಿನ ಫಲವಾಗಿ ಒದಗುವ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಯೋಜನೆಗಳಿಗೆ ಮುಖ್ಯಮಂತ್ರಿ ವಿಶೇಷ ಗಮನ ನೀಡಿದ್ದಾರೆ. ಮಹದಾಯಿ ಅಷ್ಟೇ ಅಲ್ಲದೆ ಕೃಷ್ಣಾ ಮೇಲ್ದಂಡೆ ಯೋಜನೆ, ಮೇಕೆದಾಟು, ಭದ್ರಾ ಯೋಜನೆ ಮೊದಲಾದ ನೀರಾವರಿ ಯೋಜನೆಗಳ ತ್ವರಿತ ನಿರ್ಮಾಣ ಕಾರ್ಯಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. ಸುಮಾರು 15424 ಹೆಕ್ಟೇರ್ ಜಮೀನಿಗೆ ನೀರು ಸೌಲಭ್ಯ ಮತ್ತು ರಾಜ್ಯದ ಉದ್ದಗಲ 1130 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕಾರ್ಯತಗೊಳಿಸಿದೆ.
ಹೆಚ್ಚಿನ ನೀರಾವರಿ ಸಾಮರ್ಥ್ಯ
ರೈತರಿಗೆ ನೆಮ್ಮದಿ ತಂದಿರುವ ಸರಕಾರದ ಮತ್ತೊಂದು ಸಾಧನೆಯೆಂದರೆ 2019-20ನೇ ಸಾಲಿನಲ್ಲಿ ರಾಜ್ಯದಲ್ಲಿ ಸುಮಾರು 15,424 ಹೆಕ್ಟೇರ್ ಜಮೀನಿಗೆ ಲಭ್ಯವಾಗಿರುವ ನೀರಾವರಿ ಸಾಮರ್ಥ್ಯ. ಪ್ರಮುಖವಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 45 ಕೆರೆಗಳು, ಬಾಗಲಕೋಟೆ ಜಿಲ್ಲೆಯಲ್ಲಿ 15 ಕೆರೆಗಳು ಮತ್ತು ಗದಗ ಜಿಲ್ಲೆಯಲ್ಲಿ 12 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳು. ಈ ಕಾರ್ಯಯೋಜನೆಗೆ 1864 ಕೋಟಿ ರೂ. ಗಳನ್ನು ಕಾಯ್ದಿರಿಸಲಾಗಿತ್ತು.
ವಾಣಿವಿಲಾಸ ಸಾಗರದಿಂದ ಚಿತ್ರದುರ್ಗ ಜಿಲ್ಲೆಯ 12 ಕೆರೆಗಳು, ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ ತಾಲೂಕಿನ 58 ಕೆರಗಳಿಗೆ, ಮೊಳಕಾಲ್ಮೂರು ಮತ್ತು ಪಾವಗಡ ತಾಲೂಕಿಗೆ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿವಮೊಗ್ಗ ಮತ್ತು ಸೊರಬ ತಾಲೂಕಿನ ಕೆರೆಗಳಿಗೆ, ಹೊಸಪೇಟೆ, ಭರಮಸಾಗರ, ಹಾನಗಲ್ಲು, ಬ್ಯಾಡಗಿ, ಹಿರೇಕೆರೂರು, ಮುಂಡಗೋಡು, ಬೆಳಗಾವಿ, ಚಿಕ್ಕನಾಯಕನಹಳ್ಳಿಯ ಚಾಮರಾಜಪುರ ಕೆರೆ ಮತ್ತು ರಾಯಚೂರು ಜಿಲ್ಲೆಯ ಗಣೇಕಲ್ ಜಲಾಶಯಕ್ಕೆ ಇದೇ ರೀತಿ ನೀರು ತುಂಬಿಸುವ ಕಾರ್ಯಯೋಜನೆಗಳು ಸರಕಾರದ ಕಾರ್ಯಕ್ರಮದಲ್ಲಿ ಸೇರಿದೆ.
ಕುಸಿಯುತ್ತಿರುವ ಭೂಗರ್ಭದ ಜಲಮಟ್ಟವನ್ನು ಮೇಲೆತ್ತಿ, ರೈತರಿಗೆ ನೆರವಾಗುವ ವಿಶ್ವಾಸ ಮಾನ್ಯ ಯಡಿಯೂರಪ್ಪನವರದು. ಹೀಗಾಗಿ ಇನ್ನು ಮುಂದೆ ರಾಷ್ಟ್ರೀಯ ಇಲ್ಲವೇ ರಾಜ್ಯ ಹೆದ್ದಾರಿಗಳಲ್ಲಿ ನಿರ್ಮಿಸಲಾಗುವ ಸೇತುವೆಗಳ ಅಡಿಯಲ್ಲಿ ಕನಿಷ್ಟ ಒಂದು ಮೀಟರ್ ನೀರು ಹಿಡಿದಿಡುವ ತಂತ್ರಜ್ಞತೆಗೆ ಒತ್ತುಕೊಡಲಾಗುತ್ತಿದೆ.
ಪ್ರಮುಖ ರಸ್ತೆಗಳ ದುರಸ್ತಿ
2019ರ ಅತಿವೃಷ್ಟಿ ಮತ್ತು ಪ್ರವಾಹದಿಂದ ಅಪಾರವಾಗಿ ಹಾನಿಗೊಳಗಾಗಿರುವುದು ರಾಜ್ಯದ ಹೆದ್ದಾರಿಗಳು. ಇದರೊಂದಿಗೆ ಶಾಲಾ ಕಟ್ಟಡ ಮತ್ತು ಖಾಸಗಿ ಮನೆ-ಜಮೀನುಗಳನ್ನು ಸರಕಾರ ಕೈಗೆತ್ತಿಕೊಂಡಿದೆ. ಕರ್ನಾಟಕದಲ್ಲಿ ಸುಮಾರು 76257 ಕಿ.ಮೀ. ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಿವೆ. ಇದರೊಂದಿಗೆ ಕಳೆದ ಒಂದು ವರ್ಷದಲ್ಲಿ 3900 ಕಿ.ಮೀ. ಉದ್ದದ ಹೆದ್ದಾರಿಗಳು ಅಭಿವೃದ್ಧಿಗೊಂಡಿವೆ. ಲೋಕೋಪಯೋಗಿ ಇಲಾಖೆಯ ಮತ್ತೊಂದು ಪ್ರಮುಖ ಕಾರ್ಯಕ್ರಮವೆಂದರೆ ನಬಾರ್ಡ್ ನೆರವಿನೊಂದಿಗೆ ಪ್ರವಾಹ- ಮಳೆ ಹಾನಿಗೊಳಗಾಗಿದ್ದ 6143 ಶಾಲಾ ಕೊಠಡಿಗಳ ಪುನರ್ ನಿರ್ಮಾಣ.
ಮುಖ್ಯಮಂತ್ರಿಯವರ ಗ್ರಾಮೀಣ ರಸ್ತೆ ಅಭಿವೃದ್ಧಿಯೋಜನೆಯಡಿ 785 ಕಿ.ಮೀ ರಸ್ತೆ ನಿರ್ಮಾಣ, ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನೆಗೆ ಕರ್ನಾಟಕಕ್ಕೆ 4762 ರೂ. ಕೋಟಿ ಅನುದಾನ ದೊರೆತಿರುವುದು ಗಮನಾರ್ಹ. ಇದೆಲ್ಲದರ ಜತೆಗೆ ಲೋಕೋಪಯೋಗಿ ಇಲಾಖೆಯು ರಾಜ್ಯ ಸರಕಾರದ 36 ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅವಶ್ಯಕವೆನಿಸಿದ ಹಲವಾರು ಕಾರ್ಯಯೋಜನೆಗಳನ್ನು ಕೈಗೆತ್ತಿಕೊಂಡಿದೆ.
ಕೋವಿಡ್ ವಿರುದ್ಧ ಹೋರಾಟ
ಕೊನೆಯದಾಗಿ ಕೊರೊನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸಿ, ರಾಜ್ಯದ ಜನಾರೋಗ್ಯವನ್ನು ರಕ್ಷಿಸುವ ಕೆಲಸ. ಮುಖ್ಯಮಂತ್ರಿ ಯಡಿಯೂರಪ್ಪನವರು ಅಹರ್ನಿಶಿ ಈ ಮಹಾತ್ಕಾರ್ಯದಲ್ಲಿ ಮುಳುಗಿದ್ದಾರೆ ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ. ಕರ್ನಾಟಕ ಸರಕಾರ ಕೋವಿಡ್ ಹೋರಾಟವನ್ನು ಸವಾಲಾಗಿ ಸ್ವೀಕರಿಸಿದೆ ಎಂದರೂ ತಪ್ಪಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರಕಾರ ಆದೇಶಿಸುತ್ತಿರುವ ಕ್ರಮಗಳನ್ನು ಅನುಷ್ಟಾನಗೊಳಿಸುವಲ್ಲಿ ರಾಜ್ಯ ಸರಕಾರ ವಿಶೇಷ ಗಮನ ನೀಡುತ್ತಿದೆ. ಮೋದಿಯವರು ಮತ್ತು ಯಡಿಯೂರಪ್ಪನವರು ಕೊರೊನಾ ಹೊಡೆದೋಡಿಸಲು ಇನ್ನುಳಿದ ನಾಯಕರ ಹಾಗೂ ಜನಸಾಮಾನ್ಯರ ಸಹಕಾರ ಕೋರುತ್ತಿದ್ದಾರೆ. ಸಂಘಟಿತ ಪ್ರಯತ್ನದಿಂದ ದೇಶ ಶೀಘ್ರದಲ್ಲಿಯೇ ಕೊರೊನಾ ಆತಂಕದಿಂದ ಪಾರಾಗುವುದೆಂಬ ವಿಶ್ವಾಸ -ಭರವಸೆ ಸರಕಾರಕ್ಕಿದೆ.
(ಲೇಖಕರು ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿಗಳು)