ವೈಯಕ್ತಿಕ ಪೂರ್ವಗ್ರಹಗಳನ್ನು ಮೀರಿ ನಿಂತಿದ್ದ ಸರ್ದಾರ್ ಪಟೇಲ್

ದೇಶದ ಒಳಿತು ಸರ್ದಾರ್ ವಲ್ಲಭಭಾಯಿ ಪಟೇಲರ ಎಲ್ಲ ನಿರ್ಧಾರಗಳ ಆಧಾರವಾಗಿತ್ತು. ಸ್ವಂತಕ್ಕೆ ಆಸ್ತಿ ಮಾಡಿಕೊಳ್ಳದ, ಅಧಿಕಾರಕ್ಕೆ ಅಂಟಿಕೊಳ್ಳದ ಮೌಲ್ಯಕ್ಕೆ ಪಟೇಲರು ಬದ್ಧರಾಗಿದ್ದರು. ‘ದೇಶ ಮೊದಲು’ ಎಂಬುದಷ್ಟೇ ಪಟೇಲರ ನಿಲುವಾಗಿತ್ತು. ಹಲವು ಸವಾಲುಗಳನ್ನು ಪರಾಭವಗೊಳಿಸಿ, ದೇಶದ ಏಕತೆಯನ್ನು ಸಾಕಾರಗೊಳಿಸಿದರು. ಹಾಗಾಗಿಯೇ ಅವರು ಎಲ್ಲರಿಗೂ ಹತ್ತಿರ

****************************************

ಅಂದು 1948ರ ಜನವರಿ 30. ಮಹಾತ್ಮ ಗಾಂಧೀಜಿಯವರ ಹತ್ಯೆ ನಡೆದುಹೋಯಿತು. ದೇಶವು ಒಂದು ಸಾವಿರ ವರ್ಷಗಳ ಗುಲಾಮಗಿರಿಯಿಂದ ಹೊರಬರುತ್ತಿದ್ದಂತೆಯೇ ನಡೆದ ದೊಡ್ಡ ದುರ್ಘಟನೆ ಅದು. ಸ್ವಾತಂತ್ರ್ಯ ಲಭಿಸಿದ ತಕ್ಷಣವೇ ಅಥವಾ ಜತೆಜತೆಗೇ ನಡೆದ ದೇಶವಿಭಜನೆ ಮತ್ತು ಆ ಸಂದರ್ಭದಲ್ಲಿ ನಡೆದ ಅಮಾನುಷ ಹಿಂಸಾಚಾರ ಇನ್ನೂ ಘನಘೊರ. ಮುಸ್ಲಿಂ ಲೀಗ್ ಆರಂಭಿಸಿದ ದ್ವಿರಾಷ್ಟ್ರ ಸಿದ್ಧಾಂತದ ಫಲಸ್ವರೂಪವಾಗಿ ನಡೆದ ಈ ಘೊರ ದುರಂತದಲ್ಲಿ ಹತರಾಗಿದ್ದು ಬರೊಬ್ಬರಿ 10 ಲಕ್ಷ ಹಿಂದೂ, ಸಿಖ್ ಹಾಗೂ ಮುಸ್ಲಿಮರು. ಇವರಲ್ಲಿ ಬಹುತೇಕ ಪಾಲು ಸಂತ್ರಸ್ತರು ಹಿಂದೂ ಹಾಗೂ ಸಿಖ್ಖರು. ಮುಂದಿನ ಆರು ತಿಂಗಳ ಅವಧಿಯಲ್ಲಿ ಎರಡೂ ಬದಿಯ ಸುಮಾರಿ ಒಂದು ಕೋಟಿಗೂ ಹೆಚ್ಚು ಜನರು ವಲಸೆ ಹೋದರು.

ವಲಸೆ ಹೋಗುತ್ತಿದ್ದ ಅನೇಕ ಅಮಾಯಕರು ಕೇಳುತ್ತಿದ್ದ ಪ್ರಶ್ನೆ ಒಂದೆ, ‘ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬ ಕಾರಣಕ್ಕೆ, ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಬಾಳಿ ಬದುಕಿದ ಮನೆಗಳನ್ನು ಬಿಟ್ಟು ಏಕೆ ಹೋಗಬೇಕು?’ ಎನ್ನುವುದು. ‘ಈ ದೇಶ ಅನೇಕ ಆಡಳಿತಗಾರರನ್ನು ಕಂಡಿದೆ. ಆದರೆ ಆಡಳಿತಗಾರರು ಬದಲಾದಂತೆ ಜನರ ತಾಯ್ನಾಡು ಬದಲಾವಣೆ ಆಗುತ್ತಿರುವುದು ಇದೇ ಮೊದಲು’ ಎಂಬುದು ಅವರು ಎತ್ತಿದ ಮತ್ತೊಂದು ಅಸಹಾಯಕತೆ. ಈ ರೀತಿ ವಲಸೆಯ ನೋವಿನ ದಿನಗಳಲ್ಲಿಯೇ ಒಬ್ಬ ಹಿರಿಯ ಮಹಿಳೆಯೊಬ್ಬರು ಪಂಡಿತ್ ನೆಹರು ಅವರನ್ನು- ‘ಎಲ್ಲ ಕುಟುಂಬಗಳಲ್ಲೂ ಆಸ್ತಿ ಪಾಲಾಗುತ್ತದೆ. ಆಸ್ತಿಯು ಒಬ್ಬರ ಕೈಯಿಂದ ಇನ್ನೊಬ್ಬರಿಗೆ ಹಸ್ತಾಂತರವಾಗುತ್ತದೆ. ಆದರೆ ಕುಟುಂಬದಲ್ಲಿ ಇವೆಲ್ಲ ಶಾಂತಿಯುತವಾಗಿ ನಡೆದುಹೋಗುತ್ತವೆ. ಭಾರತದ ವಿಭಜನೆ ಸಂದರ್ಭದಲ್ಲಿ ಮಾತ್ರ ಏಕೆ ಹಿಂಸೆ, ಲೂಟಿ, ಅಪಹರಣ ನಡೆಯುತ್ತಿದೆ? ಕುಟುಂಬದಲ್ಲಿ ಆಸ್ತಿ ಪಾಲು ಮಾಡಿದಂತೆ ಇದನ್ನೂ ನ್ಯಾಯಯುತವಾಗಿ ನಡೆಸಲು ಆಗುತ್ತಿರಲಿಲ್ಲವೇ?’ ಎಂದು ಪ್ರಶ್ನಿಸಿದರಂತೆ. ನೆಹರು ಬಳಿ ಇದಕ್ಕೆ ಉತ್ತರವಿರಲಿಲ್ಲ, ಅವರು ಮೌನವಾಗಿ ತಲೆತಗ್ಗಿಸಿದರಂತೆ. ಇಂತಹ ಘೊರ ದುರಂತದಿಂದ ದೇಶ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ನಡೆದಿದ್ದು ಗಾಂಧಿ ಹತ್ಯೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳವಣಿಗೆಯನ್ನು ಆರಂಭದಿಂದಲೂ ವಿರೋಧಿಸುತ್ತಿದ್ದ ನೆಹರು ಅವರು ಗಾಂಧಿ ಹತ್ಯೆಯನ್ನು ನೆಪವಾಗಿಸಿಕೊಂಡು, ಆರ್​ಎಸ್​ಎಸ್ ಅನ್ನು ನಿಷೇಧಿಸಿದರು. ಗಾಂಧಿ ಹತ್ಯೆಯ ಹಿಂದೆ ಸಂಘದ ಕೈವಾಡವಿತ್ತು, ಆರ್​ಎಸ್​ಎಸ್ ಸ್ವಯಂಸೇವಕರು ದೇಶಾದ್ಯಂತ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ, ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಕೊಂಡಿದ್ದಾರೆ ಎಂಬುದು ಸೇರಿದಂತೆ ಅನೇಕ ಆರೋಪಗಳನ್ನು ಹೊರಿಸಲಾಗಿತ್ತು. ಆದರೆ ಇದೇ ನೆಹರು ಸರ್ಕಾರ ಆರ್​ಎಸ್​ಎಸ್ ಮೇಲಿನ ನಿಷೇಧವನ್ನು ಹಿಂಪಡೆದುಕೊಂಡಾಗ ಈ ಯಾವ ಆರೋಪಗಳ ಕುರಿತು ಉಲ್ಲೇಖವೇ ಇರಲಿಲ್ಲ. ‘ಸಂಘವು ಈಗ ಲಿಖಿತ ಸಂವಿಧಾನವನ್ನು ಹೊಂದಿರುವುದರಿಂದ ಅದು ತನ್ನ ಚಟುವಟಿಕೆಗಳನ್ನು ನಡೆಸಬಹುದಾಗಿದೆ,’ ಎಂದಷ್ಟೇ ಹೇಳಿ ಸುಮ್ಮನಾಯಿತು.

 
 
 
 
 

ಸರ್ದಾರ್ ಪಟೇಲರಾದಿಯಾಗಿ ಅನೇಕರು ಆರಂಭದ ದಿನಗಳಲ್ಲಿ ಆರ್​ಎಸ್​ಎಸ್ ನಿಷೇಧದ ಪರವಾಗಿದ್ದರು. ಹಾಗೆ ನೋಡಿದರೆ, ಸರ್ದಾರ್ ಪಟೇಲರು ಮುಖ್ಯಸ್ಥರಾಗಿದ್ದ ಗೃಹ ಸಚಿವಾಲಯವೇ ಆರ್​ಎಸ್​ಎಸ್ ಅನ್ನು ನಿಷೇಧಿಸಿತು. ಆದರೆ ಆರ್​ಎಸ್​ಎಸ್​ಗೂ ಈ ಹತ್ಯೆಗೂ ಸಂಬಂಧವಿಲ್ಲ ಎನ್ನುವುದು ತಿಳಿದ ನಂತರ ಅಷ್ಟೇ ಪ್ರಾಂಜಲ ಮನಸ್ಸಿನಿಂದ ನಿಷೇಧವನ್ನು ಹಿಂಪಡೆಯಲು ಪಟೇಲರು ಸಮ್ಮತಿಸಿದರು. ಪಟೇಲರಿಗಿದ್ದದ್ದು ಒಂದೇ ಉದ್ದೇಶ, ಈ ದೇಶ ಸುರಕ್ಷಿತವಾಗಿರಬೇಕು ಎನ್ನುವುದು. ಆದರೆ ನೆಹರು ಅವರಿಗೆ ಆರ್​ಎಸ್​ಎಸ್ ವಿರುದ್ಧ ಇದ್ದದ್ದು ವೈಯಕ್ತಿಕ ಪೂರ್ವಗ್ರಹ. ಈ ಪೂರ್ವಗ್ರಹದಿಂದ ನೆಹರು ಕೊನೆಯವರೆಗೂ ಹೊರಬರಲೇ ಇಲ್ಲ.

ದೇಶವನ್ನು ಗಣರಾಜ್ಯ ಎಂದು ಕರೆಯಬೇಕಾದರೆ ಒಂದೇ ರೀತಿಯ ಸರ್ಕಾರ ಇರಬೇಕು. ದೇಶದ ಸಂಸ್ಕೃತಿಯ ಕಾರಣಕ್ಕೆ ಇಲ್ಲಿ ರಾಜಮನೆತನಗಳು ಆಡಳಿತ ನಡೆಸುತ್ತಿದ್ದವು. ಅನೇಕ ರಾಜಮನೆತನಗಳು ಆಕ್ರಮಣಕಾರರೊಂದಿಗೆ ಸೆಣೆಸಾಡುತ್ತ ನಶಿಸಿಯೇಹೋದವು, ಕೆಲವು ರಾಜಮನೆತನಗಳು ಹಾಗೆಯೇ ಉಳಿದವು. ಕೆಲವು ರಾಜರು ಬ್ರಿಟಿಷರೊಂದಿಗೆ ಕಾದಾಡುತ್ತಲೇ ಇದ್ದರೆ, ಕೆಲವರು ಬ್ರಿಟಿಷರ ಅಧೀನದಲ್ಲಿ ಮತ್ತೊಂದು ರೂಪದ ಗುಲಾಮಗಿರಿಯನ್ನು ಒಪ್ಪಿಕೊಂಡರು. ಕೆಲವು ಮನೆತನಗಳು ಬ್ರಿಟಿಷ್ ಆಡಳಿತವನ್ನು ಒಪ್ಪಿ, ಇದೇ ಚೌಕಟ್ಟಿನೊಳಗೇ ಜನಜೀವನವನ್ನು ಸುಧಾರಿಸುವ ಮಾರ್ಗವನ್ನು ಕಂಡುಕೊಂಡವು. ಕೆಲವು ರಾಜಮನೆತನಗಳ ಈ ರೀತಿಯ ನಿರ್ಧಾರಗಳು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎನ್ನುವುದು ವಿಶ್ಲೇಷಣೆಯ ವಿಚಾರವೇ ಆದರೂ, ಈ ಲೇಖನಕ್ಕೆ ಅಷ್ಟು ಪ್ರಸ್ತುತವಲ್ಲದ್ದರಿಂದ ರ್ಚಚಿಸುತ್ತಿಲ್ಲ.

ಬ್ರಿಟಿಷರು ಹೋದ ನಂತರ ನಮ್ಮ ಸಂಸ್ಥಾನಗಳ ಆಡಳಿತವನ್ನು ನಾವೇ ನಡೆಸಿಕೊಳ್ಳಬಹುದಲ್ಲವೇ ಎಂಬ ಆಲೋಚನೆಯನ್ನು ಅನೇಕರು ಹೊಂದಿದ್ದರು. ಆದರೆ ಇಂಥ ಸಣ್ಣಪುಟ್ಟ ಸ್ವತಂತ್ರ ಸಂಸ್ಥಾನಗಳ ಮೇಲೆ ಆಕ್ರಮಣಕಾರರು ಮತ್ತೆ ದಾಳಿ ಮಾಡುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತ್ರಿ ಇರಲಿಲ್ಲ. ಇದಕ್ಕೆ ಇದ್ದ ಒಂದೇ ಪರಿಹಾರವೆಂದರೆ, ಎಲ್ಲ ರಾಜಮನೆತನಗಳೂ ತಮ್ಮ ರಾಜಕೀಯ, ಆಡಳಿತ ಅಧಿಕಾರಗಳನ್ನು ತ್ಯಜಿಸಿ ಷರತ್ತುರಹಿತವಾಗಿ ಭಾರತದೊಂದಿಗೆ ವಿಲೀನವಾಗುವುದು. 500ಕ್ಕೂ ಹೆಚ್ಚು ಇದ್ದ ಇಂತಹ ಸಂಸ್ಥಾನಗಳನ್ನು ಒಗ್ಗೂಡಿಸುವ ಹೊಣೆ ಯಾರದ್ದು? ಅದು ಲೋಹಪುರುಷ ಸರ್ದಾರ್ ವಲ್ಲಭಭಾಯಿ ಪಟೇಲರ ಹೆಗಲೇರಿದ್ದು ಸಹಜವೇ ಆಗಿತ್ತು ಹಾಗೂ ಇಂಥದ್ದೊಂದು ಆಲೋಚನೆ ಸ್ವಾತಂತ್ರ್ಯಪೂರ್ವದಲ್ಲಿಯೇ ಹೊಳೆದು, ಸರ್ದಾರ್ ಪಟೇಲರು ಇದರ ಹೊಣೆಗಾರಿಕೆಯನ್ನು ಹೊತ್ತಿದ್ದರು. ಪಾರ್ಟಿಷನ್ ಕೌನ್ಸಿಲ್ಲಿನ, ಭಾರತದ ಪರವಾದ ಸದಸ್ಯರಾಗಿ ಪಟೇಲರು ಸರ್ಕಾರಿ ಆಡಳಿತ ಯಂತ್ರಗಳ, ಆಸ್ತಿಪಾಸ್ತಿಗಳ ಸೂಕ್ತಹಂಚಿಕೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದರು.

ಸ್ವಾತಂತ್ರ್ಯದ ಬಳಿಕ, ನೆಹರು ಸಂಪುಟದಲ್ಲಿ ಉಪಪ್ರಧಾನಿಯಾಗಿ ಗೃಹಖಾತೆಯನ್ನು, ಜತೆಗೆ ಭಾರತವನ್ನು ಜೋಡಿಸುವ ಖಾತೆಯ ಜವಾಬ್ದಾರಿ ಹೊತ್ತರು. ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ, 565 ರಾಜಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ, ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಹೊಣೆಗಾರಿಕೆಯನ್ನು ನಿಭಾಯಿಸಿದರು. ಭಾರತಕ್ಕಿಂತ ಗಾತ್ರದಲ್ಲೂ, ಜನಸಂಖ್ಯೆಯಲ್ಲೂ ಚಿಕ್ಕದಾಗಿದ್ದ ಪಾಕಿಸ್ತಾನಕ್ಕೆ, ಅದರ ಗಾತ್ರಕ್ಕನುಗುಣವಾಗಿ ಸಿಗಬೇಕಾಗಿದ್ದ ಸಂಪನ್ಮೂಲಗಳ ಭಾಗಕ್ಕಿಂತ ಹೆಚ್ಚಾಗಿ ಜಿನ್ನಾ ಪಡೆದುಕೊಳ್ಳದಂತೆ ಪಟೇಲರು ಎಚ್ಚರ ವಹಿಸಿದರು.

ಅಷ್ಟೇ ಅಲ್ಲ, ಅಧಿಕಾರದ ವಿಕೇಂದ್ರೀಕರಣ, ಧಾರ್ವಿುಕ ಸಮಾನತೆ ಮತ್ತು ಸ್ವಾತಂತ್ರ್ಯ , ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ಸ್ಪಷ್ಟಪಡಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಅವರು ಮಹತ್ವದ ಕೊಡುಗೆ ನೀಡಿದರು. ರಾಜ-ಮಹಾರಾಜ-ಸಾಮಂತರುಗಳಿಂದ ತುಂಬಿದ್ದ ಬ್ರಿಟಿಷ್ ಇಂಡಿಯಾವನ್ನು ಭಾರತ ಗಣರಾಜ್ಯವಾಗಿಸಲು ಸಾಮ, ಭೇದ, ದಾನ, ದಂಡಗಳನ್ನು ಪಟೇಲರು ಬಳಸಿದರು.

ಪ್ರಜೆಗಳ ಆಶೋತ್ತರಗಳಿಗೆ ಹೊಂದಿಕೊಂಡಿದ್ದ ಮೈಸೂರು, ಇಂದೋರ್ ಮುಂತಾದ ಪ್ರಾಂತ್ಯಗಳ ಜೊತೆ ಪಟೇಲರು ಗೌರವದಿಂದ ವರ್ತಿಸಿದರು. ಕೆಲವು ಸಂಸ್ಥಾನಗಳು ಸೂಕ್ಷ್ಮವಾಗಿದ್ದವು. ಇದಕ್ಕಾಗಿ, ತಿರುವಾಂಕೂರು ಸೇರಿ ಕೆಲ ಸಂಸ್ಥಾನಗಳಿಗೆ ವಿ.ಪಿ.ಮೆನನ್​ರಂತಹ ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಆಯಾ ರಾಜರ ಮನವೊಲಿಸಿದರು.

ಸಮಸ್ಯೆಯಾಗಿದ್ದು ಜುನಾಗಢ್, ಜಮ್ಮು-ಕಾಶ್ಮೀರ, ಹೈದರಾಬಾದ್ ಪ್ರಾಂತ್ಯಗಳು. ಪಟೇಲರ ನಿಪುಣ ತಂತ್ರಗಾರಿಕೆಗೂ ಸವಾಲಾಗಿದ್ದ ಈ ಸಂಸ್ಥಾನಗಳನ್ನು ದೇಶದಲ್ಲಿ ವಿಲೀನ ಮಾಡಲು ಸೈನ್ಯವನ್ನು ಕಳಿಸುವ ಮೂಲಕ ಪರಿಹಾರ ಒದಗಿಸಿದರು. ಇತರ ಸಂಸ್ಥಾನಗಳ ವಿಲೀನದಂತೆಯೇ ಜಮ್ಮು-ಕಾಶ್ಮೀರವನ್ನೂ ಪಟೇಲರು ವಿಲೀನ ಮಾಡಲು ಯತ್ನಿಸಿದರು. ಹೈದರಾಬಾದ್ ನಿಜಾಮನ ಅಡಿಯಲ್ಲಿದ್ದ ಪ್ರದೇಶವೂ ಹೀಗೆಯೇ ಭಾರತಕ್ಕೆ ಸೇರಿತು. ಆದರೆ ಜಮ್ಮು-ಕಾಶ್ಮೀರದ ಕುರಿತು ನೆಹರು ಅವರಿಗೆ ವಿಶೇಷ ಆಸಕ್ತಿ. ಜಮ್ಮು-ಕಾಶ್ಮೀರದ ನಿಜವಾದ ವಾರಸುದಾರ ಶೇಖ್ ಅಬ್ದುಲ್ಲಾ ಅವರೇ ಹೊರತು ಹಿಂದೂ ರಾಜ ಅಲ್ಲ ಎನ್ನುವುದು ನೆಹರು ಅಂತರಾಳ. ಈ ಕಾರಣಕ್ಕೆ ಜಮ್ಮು-ಕಾಶ್ಮೀರ ವಿಚಾರವನ್ನು ತಾವು ನಿಭಾಯಿಸುವುದಾಗಿ ನೆಹರು ತಿಳಿಸಿದರು. ಪಟೇಲರು ಒಲ್ಲದ ಮನಸ್ಸಿನಿಂದಲೇ ಒಪ್ಪಿ ಸುಮ್ಮನಾದರು.

ಪಟೇಲರು ನಿರ್ವಹಣೆ ಮಾಡಿದ್ದ 564 ಸಂಸ್ಥಾನಗಳ ವಿಲೀನದಲ್ಲಿ ನಂತರವೂ ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ನೆಹರು ಅವರು ನೇರವಾಗಿ ನಿರ್ವಹಿಸಿದ ಜಮ್ಮು-ಕಾಶ್ಮೀರ ಮಾತ್ರ ಸ್ವಾತಂತ್ರ್ಯದ 70 ವರ್ಷದ ನಂತರವೂ ಗೊಂದಲದಲ್ಲೇ ಮುಳುಗಿತ್ತು. ಸಂವಿಧಾನದ ಅನುಚ್ಛೇದ 370, ಅನುಚ್ಛೇದ 35ಎ ನಂಥ ದೇಶವಿರೋಧಿ ಅಂಶಗಳ ಬಲೆಯಲ್ಲಿ ರಾಜ್ಯವು ಸಿಕ್ಕಿ ನರಳಿತು. ಜಮ್ಮು-ಕಾಶ್ಮೀರದಲ್ಲಿ ಕಠಿಣ ಕ್ರಮ ಕೈಗೊಂಡರೆ ಎಲ್ಲಿ ಮುಸ್ಲಿಮರು ಬೇಸರಗೊಳ್ಳುತ್ತಾರೆಯೋ ಎಂಬ ಅಳುಕಿನಲ್ಲಿ, ಪ್ರತ್ಯೇಕತಾವಾದಕ್ಕೂ ಮುಕ್ತ ಅವಕಾಶ ನೀಡಲಾಯಿತು. ಜಮ್ಮು-ಕಾಶ್ಮೀರ ವಿಚಾರವನ್ನು ನಿಭಾಯಿಸದೆ ಇರುವಷ್ಟು ನೆಹರು ಅಸಮರ್ಥರಾಗಿದ್ದರೇ ಎಂದರೆ ಇಲ್ಲ. ನೆಹರು ಸಮರ್ಥರೇ ಇದ್ದರು. ಆದರೆ ಆಗಲೇ ಹೇಳಿದಂತೆ, ದೇಶದ ಅನೇಕ ವಿಚಾರಗಳಲ್ಲಿ ನೆಹರು ಪೂರ್ವಗ್ರಹ ಹೊಂದಿದ್ದರು. ದೇಶದ ಒಳಿತಿನ ವಿಚಾರ ಬಂದಾಗ ತಮ್ಮ ವೈಯಕ್ತಿಕ ಆಸಕ್ತಿ, ಹಿತಾಸಕ್ತಿಗಳನ್ನು ಮೀರಿ ನಿಲ್ಲಬೇಕು ಎಂಬ ಮೂಲಭೂತ ಅಂಶವನ್ನು ಅಳವಡಿಸಿಕೊಳ್ಳಲು ನೆಹರು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಪಟೇಲರು ವೈಯಕ್ತಿಕ ಪೂರ್ವಗ್ರಹಗಳಿಂದ ಮೇಲೆದ್ದವರಾಗಿದ್ದರು. ನೆಹರು ಅವರ ಇಂತಹ ಅನೇಕ ಪೂರ್ವಗ್ರಹದಿಂದ ದೇಶಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲು ಹಗಲಿರುಳೂ ಶ್ರಮಿಸುತ್ತಿದ್ದವರು ಪಟೇಲರು. 1950ರ ಡಿಸೆಂಬರ್ 15ರಂದು ಪಟೇಲರು ನಿಧನರಾದರು. ನೆಹರು ಅವರ ವೈಯಕ್ತಿಕ ನಂಬಿಕೆಗಳಿಂದ ದೇಶಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲು ಇದ್ದ ಏಕೈಕ ನಾಯಕ ಇಲ್ಲವಾದರು. ನೆಹರು ಅವರನ್ನು ಪ್ರಶ್ನಿಸುವ ಒಬ್ಬ ನಾಯಕನೂ ಕಾಂಗ್ರೆಸ್​ನಲ್ಲಿ ಇಲ್ಲವಾದರು.

ಸರ್ದಾರ್ ಪಟೇಲರು ಆರ್​ಎಸ್​ಎಸ್ ಅನ್ನು ನಿಷೇಧಿಸಿದರು, ಇಂದು ನೋಡಿದರೆ ಅದೇ ಸಿದ್ಧಾಂತದವರು ಸರ್ದಾರ್ ಪಟೇಲರನ್ನು ಆರಾಧಿಸುತ್ತಿರುವುದು ಏಕೆ ಎಂದು ಅನೇಕರು ಪ್ರಶ್ನಿಸುತ್ತಾರೆ. ರಾಜಕೀಯ ಕಾರಣಕ್ಕೆ ಪಟೇಲರನ್ನು ತಮ್ಮವರು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದೂ ಅನೇಕರು ಆರೋಪ ಮಾಡುತ್ತಾರೆ. ಆರೋಪ ಮಾಡುವವರು ಏನು ಬೇಕಾದರೂ ಹೇಳಬಹುದು. ಸರ್ದಾರ್ ಪಟೇಲರು ಕೈಗೊಂಡ ನಿರ್ಧಾರಗಳು ಸಂಕಷ್ಟವನ್ನು ತಂದೊಡ್ಡಿರಬಹುದು, ಆದರೆ ಅದಕ್ಕೆ ವೈಯಕ್ತಿಕ ಹಿತಾಸಕ್ತಿ ಕಾರಣವಾಗಿರಲಿಲ್ಲ. ದೇಶದ ಒಳಿತು ಪಟೇಲರ ಎಲ್ಲ ನಿರ್ಧಾರಗಳ ಆಧಾರವಾಗಿತ್ತು.

ಪ್ರತಿ ನಾಯಕರೂ ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರುತ್ತಾರೆ. ಹಾಗೆಂದು ದೇಶದ ಏಳಿಗೆಯಲ್ಲಿ ಅವರ ಕೊಡುಗೆಯನ್ನು ನಿರ್ಲಕ್ಷಿಸಲಾಗದು. ಅದೇ ಉದ್ದೇಶದಿಂದ, ಮೂಲತಃ ಕಾಂಗ್ರೆಸಿಗರಾದರೂ ಸರ್ದಾರ್ ಪಟೇಲರ ಕುರಿತು ರಾಷ್ಟ್ರೀಯವಾದಿಗಳಲ್ಲಿ ಅಪಾರ ಮೆಚ್ಚುಗೆ ಇದೆ. ಸ್ವಂತಕ್ಕೆ ಆಸ್ತಿ ಮಾಡಿಕೊಳ್ಳದ, ಅಧಿಕಾರಕ್ಕೆ ಅಂಟಿಕೊಳ್ಳದ ಮೌಲ್ಯಕ್ಕೆ ಪಟೇಲರು ಬದ್ಧರಾಗಿದ್ದರು. ‘ದೇಶ ಮೊದಲು’ ಎಂಬುದಷ್ಟೇ ಪಟೇಲರ ನಿಲುವಾಗಿತ್ತು. ಹಾಗಾಗಿಯೇ ಅವರು ಎಲ್ಲರಿಗೂ ಹತ್ತಿರ. ಸರ್ದಾರ್ ಪಟೇಲರಷ್ಟೆ ಅಲ್ಲ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅತಿ ದೊಡ್ಡ ಪ್ರಶಂಸಕ ಸಮೂಹ ಎಂದರೆ ಇಂದಿಗೂ, ಬಲಪಂಥೀಯ ಎಂದು ಕರೆಯಲಾಗುವ ರಾಷ್ಟ್ರೀಯವಾದಿಗಳೇ ಹೊರತು ಕಾಂಗ್ರೆಸ್ ಅಲ್ಲ. ಕಾಂಗ್ರೆಸ್ ಎಂದಿನಂತೆ ತನ್ನ ಪೂರ್ವಗ್ರಹಪೀಡಿತ ಮನಸ್ಸಿನಿಂದಲೇ ರಾಷ್ಟ್ರೀಯ ನಾಯಕರನ್ನು ನೋಡುವ ಅಭ್ಯಾಸವನ್ನು ಮುಂದುವರಿಸಿದೆ. ಯಾರು ನೆಹರು ಕುಟುಂಬಕ್ಕೆ ನಿಷ್ಠರಾಗಿರುತ್ತಾರೆಯೋ ಅವರೇ ರಾಷ್ಟ್ರೀಯ ನಾಯಕರು ಎಂಬ ಮಾನಸಿಕತೆಯಿಂದ ಆ ಪಕ್ಷ ಹೊರಬಂದಿಲ್ಲ.

ಕಡೆಯದಾಗಿ, ನೆಹರು ಕಾಂಗ್ರೆಸ್ಸಿನಿಂದ ಹಿಡಿದು ಸೋನಿಯಾ ಕಾಂಗ್ರೆಸ್​ವರೆಗೆ ಎಲ್ಲ ಕಾಲದ ಕಾಂಗ್ರೆಸ್ ಬುದ್ಧಿಜೀವಿಗಳಿಗೆ- ಮುಸಲ್ಮಾನರನ್ನು ಓಲೈಸುವುದು ಹಾಗೂ ಸಂಘ ಪರಿವಾರವನ್ನು ವಿರೋಧಿಸುವುದೇ ಜಾತ್ಯತೀತ ಮನೋಭಾವ! ಆದರೆ, ಪಟೇಲರು ಇದಕ್ಕಿಂತ ಭಿನ್ನವಾದ ಹಾಗೂ ನೈಜವಾದ ಮಾರ್ಗ ತೋರಿಸಿದ್ದರು. ವಿಭಜನೆ ಸಂದರ್ಭದಲ್ಲಿ ಭಾರತೀಯ ಮುಸ್ಲಿಮರನ್ನು ಉದ್ದೇಶಿಸಿ ಪಟೇಲರು ಹೇಳಿದ ಮಾತು- ‘ಕಾಶ್ಮೀರ ವಿಷಯದಲ್ಲಿ ನೀವೇಕೆ ಬಾಯಿ ತೆರೆಯುತ್ತಿಲ್ಲ? ಪಾಕಿಸ್ತಾನದ ಕೃತ್ಯವನ್ನು ನೀವು ಖಂಡಿಸಬೇಕು. ಒಂದೇ ದೋಣಿಯಲ್ಲಿ ನಾವೆಲ್ಲರೂ ಪಯಣಕ್ಕೆ ಕುಳಿತಾಗ, ನೀವು ನಮ್ಮೊಂದಿಗೆ ಇರಬೇಕು. ಎರಡು ದೋಣಿಯಲ್ಲಿ ಕಾಲಿಟ್ಟು ಯಾನ ಮಾಡಲಾಗುವುದಿಲ್ಲ’ ಎಂದು ಕಿವಿಮಾತು ಹೇಳಿದ್ದರು. ಇನ್ನೊಂದೆಡೆ ಹಿಂದುತ್ವದ ಪ್ರತಿಪಾದನೆಯಲ್ಲಿ ತೊಡಗಿದ್ದ ಹಿಂದೂ ಮಹಾಸಭಾದವರಿಗೂ, ‘ನೀವು ಕಾಂಗ್ರೆಸ್ಸನ್ನು ಸೇರಿ. ನೀವಷ್ಟೇ ಹಿಂದೂಧರ್ಮದ ರಕ್ಷಕರಲ್ಲ. ಕಾಂಗ್ರೆಸ್ ಕೂಡ ಆ ಕೆಲಸ ಮಾಡುತ್ತಿದೆ. ಹಿಂದೂ ಧರ್ಮವು ಒಂದು ವಿಶಾಲ ಮನೋಭಾವವನ್ನು ಬೋಧಿಸುತ್ತದೆ. ದುಡುಕಬೇಡಿ’ ಎಂದಿದ್ದರು. ಅದರೆ, ಪಟೇಲರ ಇಂಥ ವಾದವನ್ನು ಕಾಂಗ್ರೆಸ್ ಬುದ್ಧಿಜೀವಿಗಳು ಗೇಲಿಮಾಡುತ್ತಲೇ ಇದ್ದಾರೆ. ಇಂಥ ಮನೋಭಾವ ಮಾತ್ರ ದೇಶವನ್ನು ಒಗ್ಗೂಡಿಸಬಲ್ಲದು ಎಂಬ ವಿವೇಕವೇ ಅವರಿಗಿಲ್ಲ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top