ಕಾಶ್ಮೀರದಲ್ಲಿ ಚುನಾವಣೆಯೆಂಬ ನಿರ್ಣಾಯಕ ಹೋರಾಟ

ಜಮ್ಮು-ಕಾಶ್ಮೀರದ ಐತಿಹಾಸಿಕ ಮತ್ತು ಭೌಗೋಳಿಕ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಬ್ರಿಟಿಷರು ಅದಕ್ಕೆ ಕಿಂಚಿತ್ತೂ ಚ್ಯುತಿಯಾಗದಂತೆ ನಡೆದುಕೊಂಡಿದ್ದರು. ಆದರೆ

ಆ ಸಂಗತಿಯನ್ನು ನೆಹರು ಸರ್ಕಾರ ಅರಿಯದೇ ಹೋದದ್ದು ನಿಜಕ್ಕೂ ಅಚ್ಚರಿಯ ಸಂಗತಿಯಲ್ಲವೇ? 

ಹಾಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರದ ಚುನಾವಣೆ ಗುಲಾಮ್ ನಬಿ ಆಜಾದ್ ನೇತೃತ್ವದ ಕಾಂಗ್ರೆಸ್, ಮೆಹಬೂಬಾ ಮುಫ್ತಿ ಸಯೀದರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಉಮರ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಇತ್ಯಾದಿ ಪಕ್ಷಗಳ ಪಾಲಿಗೆ ಮತ್ತೊಂದು ಆವರ್ತಿ ರಾಜಕೀಯ ಅಧಿಕಾರದ ಗದ್ದುಗೆ ಹಿಡಿಯುವ ಕಸರತ್ತಿಗೆ ವೇದಿಕೆ ಮಾತ್ರ. ಹೀಗಾಗಿ ಆ ರಾಜ್ಯದಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳ ಅತಿಕ್ರಮಣ, ಅಮೆರಿಕದ ಅವಕಾಶವಾದಿತನಗಳೆಲ್ಲ ಗಂಭೀರ ವಿಚಾರವೇ ಅಲ್ಲ. ಪಾಕಿಸ್ತಾನ ಸರ್ಕಾರದ ನೇರ ಕುಮ್ಮಕ್ಕಿನಿಂದ ಜಮ್ಮು-ಕಾಶ್ಮೀರದಲ್ಲಿ ಕಳೆದ ಐವತ್ತು ವರ್ಷಗಳಿಂದಲೂ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳು ಕಣಿವೆ ರಾಜ್ಯದ ರಾಜಕೀಯ ನಾಯಕರಿಗೆ ಮತ್ತು ಪಕ್ಷಗಳಿಗೆ ಪ್ರಮುಖ ಚುನಾವಣಾ ವಿಷಯ ಅಂತ ಅನ್ನಿಸುತ್ತಿಲ್ಲ. ಆದರೆ ಒಂದು ಸಂಗತಿ ನಿಜ. ಅದೇನೆಂದರೆ ಈ ಸಲದ ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆ ಮತ್ತು ಆ ನಂತರ ಆಗಬಹುದಾದ ಬೆಳವಣಿಗೆಗಳ ಕುರಿತು ಪಾಕಿಸ್ತಾನ ಸರ್ಕಾರ, ಜಮಾತ್ ಉದ್-ದವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಆತನ ಸಂತಾನದಂತಿರುವ ಇತರ ಉಗ್ರಗಾಮಿ ಸಂಘಟನೆಗಳಿಗೆ ಸ್ಪಷ್ಟ ಕಲ್ಪನೆಯಿದೆ. ಪಾಕಿಸ್ತಾನ ಮಾತ್ರವಲ್ಲ, ಚೀನಾ ಹಾಗೂ ಅಮೆರಿಕಗಳಿಗೂ ಆ ಬಗ್ಗೆ ಸ್ಪಷ್ಟ ಅಂದಾಜಿದೆ.

ಕಾಶ್ಮೀರ ಕಣಿವೆ ಪ್ರದೇಶದಲ್ಲಿ ದಿನೇದಿನೆ ಭಯೋತ್ಪಾದಕ ಚಟುವಟಿಕೆ ಅಂಕೆ ಮೀರುತ್ತಿರುವುದಕ್ಕೂ ಈ ಮುನ್ಸೂಚನೆಗೂ ನೇರಾನೇರ ಸಂಬಂಧವಿದೆ. ಚುನಾವಣೆಯ ಮೊದಲೆರಡು ಚರಣಗಳಲ್ಲಿ ಮತದಾರರು ತೋರಿದ ಅದಮ್ಯ ಉತ್ಸಾಹ ಕಂಡು ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಭಯೋತ್ಪಾದನೆ ಮೂಲಕ ಜಮ್ಮು-ಕಾಶ್ಮೀರದಲ್ಲಿ, ತನ್ಮೂಲಕ ಭಾರತದ ಉಳಿದ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಿಸಿ ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಪಣ ತೊಟ್ಟಿರುವ ಪಾಕಿಸ್ತಾನದ ಗುಪ್ತಚರದಳ ಐಎಸ್‍ಐ ಮತ್ತು ನೂರಾರು ಭಯೋತ್ಪಾದಕ ಸಂಘಟನೆಗಳೂ ಚಿಂತೆಗೀಡಾಗಿವೆ. ಭಾರತದಲ್ಲಿ ರಾಜಕೀಯ ಅಧಿಕಾರ ಪಲ್ಲಟವಾಗುತ್ತಿದ್ದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುರಕ್ಷಿತ ಅಡಗುತಾಣದ ಶೋಧ ನಡೆಸುತ್ತಿದ್ದಾನೆಂದರೆ ಬಾಕಿ ಎಲ್ಲವನ್ನು ನಾವು ಊಹಿಸಿಕೊಳ್ಳಬಹುದು. ಎಲ್ಲವೂ ಅಂದುಕೊಂಡಂತೆ ಆದರೆ ಕಾಶ್ಮೀರ ಚುನಾವಣೆಯ ನಂತರ ಬಹುಶಃ ಭಯೋತ್ಪಾದಕರು ಮತ್ತು ಅವರಿಗೆ ಪ್ರೇರಣೆ ಕೊಡುವವರು ಇಬ್ಬರೂ ತಮ್ಮ ಆಟಾಟೋಪವನ್ನು ನಿಲ್ಲಿಸದೆ ವಿಧಿ ಇರುವುದಿಲ್ಲ.

ಆದರೆ ಭಾರತದಲ್ಲಿ ಕೇವಲ ಅಧಿಕಾರಕ್ಕಾಗಿ ಹಪಹಪಿಸುವ ರಾಜಕೀಯ ನಾಯಕರಿಗೆ ಈ ಸತ್ಯ ಅರ್ಥವಾಗುವ ಲಕ್ಷಣ ಕಾಣಿಸುತ್ತಿಲ್ಲ. ಒಂದು ವೇಳೆ ಅರ್ಥವಾದರೂ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಮತ್ತು ಅದಕ್ಕನುಸಾರವಾಗಿ ತಮ್ಮ ನೀತಿ ನಿಲುವುಗಳನ್ನುಬದಲಾಯಿಸಿಕೊಳ್ಳುವ ದೊಡ್ಡ ಗುಣವನ್ನು ಆ ನಾಯಕರು ತೋರುವುದಿಲ್ಲ ಎಂಬುದೇ ಸೋಜಿಗದ ಸಂಗತಿ.

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗೆ ನಿಜಾರ್ಥದಲ್ಲಿ ಲೋಕಸಭಾ ಚುನಾವಣೆಗಿರುವಷ್ಟೇ ಮಹತ್ವವಿದೆ; ಅದಕ್ಕಿಂತ ತುಸು ಜಾಸ್ತಿಯೇ ಮಹತ್ವವಿದೆ ಎಂದರೂ ತಪ್ಪಾಗಲಾರದು. ಕಾರಣ ಇಷ್ಟೆ, ಈಗ ಭಾರತ ಎದುರಿಸುತ್ತಿರುವ ಭಯೋತ್ಪಾದನೆಯಂತಹ ಭಯಂಕರ ಸಮಸ್ಯೆಗೆ, ರಾಷ್ಟ್ರದ ಉದ್ದಗಲಕ್ಕೂ ಕಾಡುತ್ತಿರುವ ಅಸುರಕ್ಷತೆಯ ಭೀತಿಗೆ ಕಾರಣವೇ ಈ ಕಾಶ್ಮೀರ. ಪರಿಹಾರವೂ ಕಾಶ್ಮೀರವೇ. ಒಮ್ಮೆ ದೇಶದ ಗಡಿಯಲ್ಲಿನ ಭೀತಿವಾದಕ್ಕೆ ಪೂರ್ಣವಿರಾಮ ಬಿತ್ತು ಎಂದಾದರೆ, ಪಾಕಿಸ್ತಾನದಲ್ಲಿ ತರಬೇತಿ ಪಡೆದು ಶಸ್ತ್ರಸಜ್ಜಿತರಾಗಿ ಜಮ್ಮು-ಕಾಶ್ಮೀರದ ಮೂಲಕ ಭಾರತದ ಗಡಿಯೊಳಕ್ಕೆ ಉಗ್ರರು ಒಳನುಸುಳುವುದನ್ನು ಸಂಪೂರ್ಣವಾಗಿ ತಡೆಯುವುದುkashmir ಸಾಧ್ಯವಾಯಿತು ಅಂತಾದರೆ ಬಾಕಿ ಎಲ್ಲ ಸಮಸ್ಯೆಗಳು ಭಾರತಕ್ಕೆ ದೊಡ್ಡ ಸವಾಲೇ ಅಲ್ಲ. ಈ ದೃಷ್ಟಿಯಿಂದಲೇ ಹೇಳಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಕೇವಲ ಒಂದು ಚುನಾವಣೆಯಲ್ಲ, ಕಾಶ್ಮೀರದಲ್ಲಿ ಭಾರತದ ಸಾರ್ವಭೌಮತೆಯನ್ನು ಮರುಸ್ಥಾಪಿಸಲು ನಡೆಯುತ್ತಿರುವ ನಿರ್ಣಾಯಕ ಹೋರಾಟ ಅಂತ. ಕಾಶ್ಮೀರವನ್ನು ಭಾರತ ಭದ್ರವಾಗಿಟ್ಟುಕೊಳ್ಳಲು ಸಿಗುವ ಕೊನೇ ಅವಕಾಶ ಎಂದು ಹೇಳಿದರೂ ತಪ್ಪಲ್ಲ. ಚುನಾವಣೆಯಲ್ಲಿ ಮತದಾನದ ಪ್ರಮಾಣ ಐತಿಹಾಸಿಕವೆಂಬಂತೆ ಹೆಚ್ಚಳವಾಗುತ್ತಿರುವುದನ್ನು ನೋಡುತ್ತಿದ್ದರೆ ಕಾಶ್ಮೀರಿಗಳಿಗೂ ಈ ಅಂಶ ಮನವರಿಕೆ ಆಗಿರುವಂತೆ ತೋರುತ್ತಿದೆ. ಪರಿಣಾಮ ಗೊತ್ತಾಗಲು ಬಹಳ ದಿನ ಕಾಯಬೇಕಿಲ್ಲ.

ಹೇಗಿದ್ದ ಕಾಶ್ಮೀರ ಹೇಗಾಯಿತು ನೋಡಿ. ಅದನ್ನು ಹಾಗೆಯೇ ಬಿಡಬೇಕೇ ಎಂಬುದೇ ಈಗ ಕೇಳಿಕೊಳ್ಳಬೇಕಿರುವ ಮೂಲಭೂತವಾದ ಪ್ರಶ್ನೆ.
ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ವಿಸ್ತೀರ್ಣ ಸುಮಾರು 2 ಲಕ್ಷ 22 ಸಾವಿರ ಚದರ ಕಿಲೋಮೀಟರ್ ಆಗಿತ್ತು. ಭೌಗೋಳಿಕವಾಗಿ ಗಾತ್ರದಲ್ಲಿ ಅದು ಆಗಿನ ಮುಂಬೈ ಪ್ರಾಂತದ ಮೂರನೇ ಎರಡು ಭಾಗಕ್ಕಿಂತಲೂ ದೊಡ್ಡದಾಗಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಆ ರಾಜ್ಯದ ವಿಸ್ತೀರ್ಣ ಆಗಿನ ಮೈಸೂರು, ಗ್ವಾಲಿಯರ್, ಹೈದರಾಬಾದ್ ಮತ್ತು ಬಿಕನೇರ್ ಈ ನಾಲ್ಕೂ ರಾಜ್ಯಗಳ ಒಟ್ಟೂ ವಿಸ್ತೀರ್ಣಕ್ಕಿಂತಲೂ ವಿಸ್ತಾರವಾಗಿತ್ತು. ದೇಶಕ್ಕೆ ಸ್ವಾತಂತ್ರೃ ಬರುವ ಹೊತ್ತಿನಲ್ಲಿ ಮೈಸೂರು, ಬರೋಡಾ, ಗ್ವಾಲಿಯರ್ ಮತ್ತು ಹೈದರಾಬಾದ್ ಪ್ರಾಂತಗಳ ಜತೆಗೆ ಜಮ್ಮು-ಕಾಶ್ಮೀರ ಸಂಸ್ಥಾನ ಕೂಡ ಬ್ರಿಟಿಷ್ ಗವರ್ನರ್ ಜನರಲ್‍ನ ನೇರ ಆಳ್ವಿಕೆಗೆ ಒಳಪಟ್ಟಿತ್ತು. ಅದರೊಟ್ಟಿಗೆ ಪ್ರಮುಖವಾಗಿ ಗಮನಿಸಬೇಕಾದ ಮತ್ತೊಂದು ಸಂಗತಿಯಿದೆ. ಅದೆಂದರೆ- ಮೈಸೂರು, ಬರೋಡಾ, ಗ್ವಾಲಿಯರ್ ಮತ್ತು ಹೈದರಾಬಾದ್‍ನ ಮಹಾರಾಜರಿಗೆ 21 ತೋಪುಗಳ ಗೌರವ ಸಲ್ಲಿಸುವ ಸಂಪ್ರದಾಯವನ್ನು ಬ್ರಿಟಿಷ್ ಸರ್ಕಾರ ಆಚರಣೆಗೆ ತಂದಿತ್ತು. ಕಾಶ್ಮೀರದ ರಾಜ ಹರಿಸಿಂಗ್ ಬಹಾದೂರರು ಕೂಡ ಅಂಥ ಗೌರವಕ್ಕೆ ಪಾತ್ರರಾಗಿದ್ದರು.

ಬ್ರಿಟಿಷರು ಜಮ್ಮು-ಕಾಶ್ಮೀರಕ್ಕೆ ಇಷ್ಟೊಂದು ಮಹತ್ವ ನೀಡಲು ಮುಖ್ಯ ಕಾರಣಗಳು ಎರಡು. ದೇಶದ ಸುರಕ್ಷೆಯ ದೃಷ್ಟಿಯಿಂದ ಆಯಕಟ್ಟಿನ ಗಡಿಪ್ರದೇಶವನ್ನು ಈ ರಾಜ್ಯ ಹೊಂದಿದೆ ಎಂಬುದು ಒಂದು ಕಾರಣ. ಎರಡನೆಯದು ಕಾಶ್ಮೀರದಲ್ಲಿ ಅಪರೂಪ ಎನ್ನಬಹುದಾದ ಹಿಂದು-ಮುಸ್ಲಿಂ ಐಕ್ಯತೆ ನೆಲೆಸಿತ್ತು ಎಂಬುದು. ಅದನ್ನು ಬ್ರಿಟಿಷರು ವಿಶೇಷವಾಗಿ ಪರಿಗಣಿಸಿದ್ದರು. ಸ್ವಾತಂತ್ರೃಪೂರ್ವದಲ್ಲಿ ಅಫ್ಘಾನಿಸ್ತಾನ, ತಜಕಿಸ್ತಾನ (ಆಗ ಸೋವಿಯತ್ ರಷ್ಯಾದ ಭಾಗವಾಗಿತ್ತು) ಚೀನಾ ಮತ್ತು ಟಿಬೆಟ್ ಇವುಗಳಿಗೆ ಹೊಂದಿಕೊಂಡಿದ್ದ ಆಯಕಟ್ಟಿನ ಗಡಿಯ ಮಹತ್ವ ಅರಿತಿದ್ದ ಬ್ರಿಟಿಷರು ಸಹಜವಾಗಿ ಕಾಶ್ಮೀರಕ್ಕೆ ವಿಶೇಷ ಆದ್ಯತೆ ನೀಡಿದ್ದರು. ಆಯಕಟ್ಟಿನ ಗಿಲ್ಗಿಟ್ ಪ್ರದೇಶದ ರಕ್ಷಣೆಗೆಂದೇ `ಗಿಲ್ಗಿಟ್ ಸ್ಕೌಟ್ಸ್’ ಎಂಬ ಅನೌಪಚಾರಿಕ ಸೈನಿಕ ಪಡೆಯನ್ನೂ ಸ್ಥಾಪಿಸಿದ್ದರು. ಅದೇ ರೀತಿ ಬ್ರಿಟಿಷರ ಕಾಶ್ಮೀರದ ಆಸಕ್ತಿಗೆ ಕಾರಣವಾದದ್ದು ಎಂದರೆ ಎಲ್ಲ ಪ್ರಜೆಗಳನ್ನು ಸಮಾನ ಪ್ರೀತ್ಯಾದರದಿಂದ ನೋಡುತ್ತಿದ್ದ ಕಾಶ್ಮೀರದ ರಾಜಮನೆತನದವರ ದೊಡ್ಡಗುಣ. ಆ ಕಾಲದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿದ್ದೂ ಮುಸಲ್ಮಾನ ರಾಜರ ಆಳ್ವಿಕೆಗೆ ಒಳಗಾದ ಬೇಕಾದಷ್ಟು ರಾಜ್ಯಗಳಿದ್ದವು. ಆದರೆ ಶೇ.75ರಷ್ಟು ಮುಸಲ್ಮಾನರ ಜನಸಂಖ್ಯೆಯಿದ್ದೂ, ಹಿಂದು ರಾಜನ ಆಳ್ವಿಕೆಗೆ ಸೇರಿದ ಏಕೈಕ ರಾಜ್ಯ ಜಮ್ಮು-ಕಾಶ್ಮೀರವಾಗಿತ್ತು. ಜನಾನುರಾಗಿಗಳಾಗಿದ್ದ ಡೋಗ್ರಾ ರಾಜಮನೆತನದವರು ಹಿಂದು-ಮುಸಲ್ಮಾನರನ್ನು ಸಮಾನ ದೃಷ್ಟಿಯಿಂದ ನೋಡುತ್ತಿದ್ದುದನ್ನು ಬ್ರಿಟಿಷ್ ಆಡಳಿತಗಾರರು ಮೆಚ್ಚಿಕೊಂಡಿದ್ದರು.

ಆದರೇನು ಬಂತು? ಸ್ವಾತಂತ್ರಾೃ ನಂತರ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪಂಡಿತ್ ನೆಹರು ಮತ್ತು ಅವರ ಪರಿವಾರದವರು ಹಾಗೂ ಕಾಂಗ್ರೆಸ್ ಪಕ್ಷದ ವಾರಸುದಾರರು ಕಾಶ್ಮೀರದ ವಿಷಯದಲ್ಲಿ ಅನುಸರಿಸಿದ ತಪ್ಪು ರಾಜನೀತಿ ಮತ್ತು ಬೇಜವಾಬ್ದಾರಿ ನಡವಳಿಕೆಗಳ ಪರಿಣಾಮವಾಗಿ ಮುಂದೆ ಆ ರಾಜ್ಯ ಎಲ್ಲ ರೀತಿಯಿಂದಲೂ ತನ್ನ ಐತಿಹಾಸಿಕ ಹಾಗೂ ಭೌಗೋಳಿಕ ಮಹತ್ವವನ್ನು ಕಳೆದುಕೊಳ್ಳುತ್ತಲೇ ಹೋಗುವಂತಾಯಿತು. ಈ ಸತ್ಯವನ್ನು ಕಾಂಗ್ರೆಸ್ಸಿಗರು ಈಗಲೂ ಒಪ್ಪಿಕೊಳ್ಳಲು ತಯಾರಿಲ್ಲದೇ ಇರುವುದು ದುರಂತ.

ಅಫ್ಘಾನಿಸ್ತಾನ, ತಜಕಿಸ್ತಾನ, ಚೀನಾ, ಟಿಬೆಟ್ ಮತ್ತು ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಕಾಶ್ಮೀರದ ಗಿಲ್ಗಿಟ್ ಹಾಗೂ ಬಾಲ್ತಿಸ್ತಾನ ಭಾರತದ ರಕ್ಷಣೆಯ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶಗಳು. ರಣತಂತ್ರ ರೂಪಿಸುವ ದೃಷ್ಟಿಯಿಂದಲೂ ಈ ಪ್ರದೇಶ ಅತ್ಯಂತ ಮಹತ್ವದ್ದು. ಗಿಲ್ಗಿಟ್ ಮತ್ತು ಬಾಲ್ತಿಸ್ತಾನದಲ್ಲಿ ಸೈನಿಕ ನೆಲೆ ಹೊಂದುವ ಯಾವುದೇ ದೇಶ ಸಹಜವಾಗಿ ಇಡೀ ಏಷ್ಯಾದ ಮೇಲೆ ತನ್ನ ಪ್ರಭುತ್ವ ಸಾಧಿಸಲು ಸಾಧ್ಯ. ಆದರೆ ಆ ಭಾಗಗಳು ನಮ್ಮ ಸರ್ಕಾರಗಳ ಹೊಣೆಗೇಡಿ ನೀತಿಯಿಂದ ನಮ್ಮ ಕೈತಪ್ಪಿ ಹೋಗಿವೆ. ಅವು ಸಂಪೂರ್ಣವಾಗಿ ತನ್ನ ಪ್ರದೇಶವೆಂದು ಈಗ ಪಾಕಿಸ್ತಾನ ಸಾಬೀತು ಮಾಡಿದೆ. 42 ಸಾವಿರ ಚ.ಕಿ.ಮೀ.ನಷ್ಟು ಗಿಲ್ಗಿಟ್ ಮತ್ತು 20 ಸಾವಿರ ಚ.ಕಿ.ಮೀ.ನಷ್ಟು ಬಾಲ್ತಿಸ್ತಾನದ ಮೇಲೆ ಪಾಕಿಸ್ತಾನ ಸಂಪೂರ್ಣ ಪ್ರಭುತ್ವ ಸ್ಥಾಪಿಸಿದೆ.

ಹಾಗೇ ಪಾಕಿಸ್ತಾನ ಜಮ್ಮುವಿನ 10 ಸಾವಿರ ಚ.ಕಿ.ಮೀ. ಪ್ರದೇಶ ಮತ್ತು ಕಾಶ್ಮೀರದ 6 ಸಾವಿರ ಚ.ಕಿ.ಮೀ. ಪ್ರದೇಶವನ್ನೂ ಅತಿಕ್ರಮಿಸಿಕೊಂಡಿದೆ. ಪಾಕಿಸ್ತಾನ ಅತಿಕ್ರಮಣ ಮಾಡಿಕೊಂಡದ್ದು ಸಾಲದು ಎಂಬಂತೆ 1962 ಯುದ್ಧದ ನಂತರ ಚೀನಾ ಲಡಾಕ್‍ನ 36,500 ಚ.ಕಿ.ಮೀ ಪ್ರದೇಶವನ್ನು ಕಬಳಿಸಿಕೊಂಡಿದೆ. ಸದಾ ಭಾರತದ ವಿರುದ್ಧ ಕತ್ತಿ ಮಸೆಯುವ ಚೀನಾಕ್ಕೆ ಮತ್ತಷ್ಟು ಶಕ್ತಿ ಬರಲಿ ಎಂಬ ಕಾರಣಕ್ಕೆ ಪಾಕಿಸ್ತಾನ ಅದಕ್ಕೆ ಮತ್ತೆ 5,500 ಚ.ಕಿ.ಮೀ ಪ್ರದೇಶವನ್ನು `ಪ್ರೇಮದ ಕಾಣಿಕೆ’ಯಾಗಿ ನೀಡಿದೆ. ಆಗಲೂ ನಮ್ಮನ್ನಾಳಿದ ಸರ್ಕಾರಗಳು ಎಚ್ಚೆತ್ತುಕೊಳ್ಳಲೇ ಇಲ್ಲ.

ಹೇಗೆಂದರೆ… 1947ರಲ್ಲಿ ಜಮ್ಮು-ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾದ ಬಳಿಕ ಭಾರತ ಸೇನೆಯ ಯೋಧರು ಶೌರ್ಯ ಪರಾಕ್ರಮದಿಂದ ಹೋರಾಡಿ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಅತಿಕ್ರಮಿಸಿಕೊಂಡಿದ್ದ ಉರಿವರೆಗಿನ ಪ್ರದೇಶವನ್ನು ಆಕ್ರಮಣಕಾರರಿಂದ ಮುಕ್ತಗೊಳಿಸಿದರು. ಅಷ್ಟೇ ಅಲ್ಲ, ಜಮ್ಮು-ಕಾಶ್ಮೀರದ ಸಂಪೂರ್ಣ ಭೂ ಪ್ರದೇಶವನ್ನು ಅತಿಕ್ರಮಣಕಾರರಿಂದ ಮರಳಿ ಪಡೆಯಲು ಭಾರತೀಯ ಸೇನೆ ಸಂಕಲ್ಪ ತೊಟ್ಟಿತ್ತು. ಸೇನೆ ತನ್ನ ನಿಲುವನ್ನು ಆಗಿನ ಪ್ರಧಾನಿ ನೆಹರು ಮುಂದೆ ಹೇಳಿಯೂ ಇತ್ತು. ಆದರೆ ಸರ್ಕಾರ ಸೇನೆಗೆ ಅಂತಹ ಆದೇಶ ನೀಡಲು ಸುತರಾಂ ಒಪ್ಪಲಿಲ್ಲ. ಸೇನೆಯ ಇಂಗಿತ ತಿಳಿದೂ ಹದಿಮೂರು ತಿಂಗಳ ಕಾಲ ಮೌನವಹಿಸಿದ ನೆಹರು ಸರ್ಕಾರ ಬಳಿಕ 1949ರಲ್ಲಿ ಏಕಾಏಕಿ ಯುದ್ಧವಿರಾಮ ಘೋಷಿಸಿಬಿಟ್ಟಿತು. ಪಾಕ್ ಅತಿಕ್ರಮಣ ತೆರವುಗೊಳಿಸಲು ಸೇನೆಗೆ ಆದೇಶ ನೀಡದೇ ಹೋದದ್ದು ಮತ್ತು ಮುಗುಮ್ಮಾಗಿ ಯುದ್ಧವಿರಾಮ ಘೋಷಿಸಿದ್ದು ಇಂದಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ. ಅದರ ಪರಿಣಾಮ ಭಾರತದ 86 ಸಾವಿರ ಚ.ಕಿ.ಮೀ ಪ್ರದೇಶ ಅನ್ಯಾಯವಾಗಿ ಈಗಲೂ ಪಾಕಿಸ್ತಾನದ ಬಳಿಯೇ ಉಳಿಯುವಂತಾಗಿದೆ. ಎಲ್ಲದಕ್ಕಿಂತ ಹೆಚ್ಚು ಬೇಸರ ಮೂಡಿಸುವ ಸಂಗತಿಯೆಂದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ನರಮೇಧದಲ್ಲಿ ಸಿಖ್ ಮತ್ತು ಇತರ ಹಿಂದು ಸಮುದಾಯಕ್ಕೆ ಸೇರಿದ 50 ಸಾವಿರ ಜನರು ವಿನಾಕಾರಣ ಪ್ರಾಣ ಕಳೆದುಕೊಂಡದ್ದು. ಯುದ್ಧದ ಪರಿಣಾಮ ಲಕ್ಷಾಂತರ ಮಂದಿ ಹಿಂದುಗಳು ನಿರಾಶ್ರಿತರಾಗಿ ಜಮ್ಮು-ಕಾಶ್ಮೀರ ಮತ್ತು ಭಾರತದ ಇತರ ಭಾಗಗಳಲ್ಲಿ ನಿರ್ವಸಿತರ ಶಿಬಿರಗಳಲ್ಲಿ ಜೀವನ ಕಳೆಯುವಂತಾಯಿತು.

ಹೇಳುತ್ತ ಹೋದರೆ ಕಾಶ್ಮೀರದ ವಿಚಾರದಲ್ಲಿ ಗೊತ್ತಿದ್ದೂ ಗೊತ್ತಿದ್ದೂ ಭಾರತ ಮಾಡಿದ ಪ್ರಮಾದ ಸರಣಿ ಒಂದಲ್ಲ ಎರಡಲ್ಲ…
ಮುಂದಿನ ಭಾಗ ಮುಂದಿನ ವಾರ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top