ಎರಡು ವರ್ಷದ ಹೊತ್ತಿನಲ್ಲಿ ಎರಡು ಮಾತು

ಅರಸು ಚಿಂತನೆಯ ನೆರಳಲ್ಲಿ ಮತ್ತು ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ರಾಜಕೀಯದಲ್ಲಿ ಹಂತಹಂತವಾಗಿ ಮೇಲೇರಿ ಸಿಎಂ ಪಟ್ಟದವರೆಗೆ ತಲುಪಿದ ಸಿದ್ದರಾಮಯ್ಯ, ಅಧಿಕಾರದ ಉತ್ತರಾರ್ಧದಲ್ಲಾದರೂ ತಮ್ಮ ಮೂಲತನವನ್ನು ನೆನಪಿಸಿಕೊಂಡು ಆಡಳಿತದಲ್ಲಿ ಸ್ವಂತಿಕೆಯ ಛಾಪೊತ್ತುವರೇ?

ಸಿದ್ದರಾಮಯ್ಯನವರು ಎರಡು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿದ ಕ್ಷಣ..
ಸಿದ್ದರಾಮಯ್ಯನವರು ಎರಡು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿದ ಕ್ಷಣ..

ಅಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ನಡೆಸಿದ ಪಾದಯಾತ್ರೆಯ ನೆನಪು ಈಗಲೂ ಹಚ್ಚಹಸಿರು. ರಾಜ್ಯ ರಾಜಕೀಯದ ಪಾಲಿಗೆ ಅದೇ ಪರಿವರ್ತನೆಯ ರಣಕಹಳೆ ಆದದ್ದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿಡಿದಿದ್ದ ಗ್ರಹಣ ಬದಿಗೆ ಸರಿಯಲೂ ಅದೇ ಮೂಲ ಆಯಿತು ಅನ್ನಿ. ಹೇಗೆ ದಿನಗಳು ಉರುಳಿಹೋಗಿ ಕಾಲಚಕ್ರ ಬದಲಾಗುತ್ತದೆ ನೋಡಿ. ಒಂಭತ್ತು ವರ್ಷಗಳ ಅಜ್ಞಾತವಾಸದ ನಂತರ ರಾಜ್ಯ ಕಾಂಗ್ರೆಸ್‍ನ ಪಾಲಿಗೆ ಅಧಿಕಾರದ ಭಾಗ್ಯದ ಬಾಗಿಲು ತೆರೆದ ಸಿದ್ದರಾಮಯ್ಯ ಸರ್ಕಾರಕ್ಕೆ ಎರಡು ವರ್ಷ ಭರ್ತಿಯಾಗುತ್ತಿದೆ.

ಒಬ್ಬ ಮನುಷ್ಯನ ಆಯಸ್ಸಿನಲ್ಲಿ ಎರಡು ವರ್ಷ ಅಂದರೆ ಏನೇನೂ ಅಲ್ಲ. ಅದೇ ಒಂದು ಸರ್ಕಾರದ ಸಂದರ್ಭದಲ್ಲಿ ಹಾಗೆ ಹೇಳಲಾಗದು. ಯಾವುದೇ ಮಂತ್ರಿ, ಮುಖ್ಯಮಂತ್ರಿ ಐದು ವರ್ಷ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರೆ ಅದು ಅವರ ಪುಣ್ಯ. ಆ ಐದು ವರ್ಷಗಳ ಪೈಕಿ ಮೊದಲ ಒಂದು ವರ್ಷ ಸರ್ಕಾರದ ಕೆಲಸ ಕಾರ್ಯಗಳು ಟೇಕಾಫ್ ಆಗಲು ಹೆಣಗಾಡುವುದರಲ್ಲೇ ಕಳೆದುಹೋಗುತ್ತದೆ. ಮತ್ತೊಂದು ವರ್ಷ ಕಳೆದರೆ ಎರಡನೇ ವರ್ಷಾಚರಣೆ ಮಾತ್ರವಲ್ಲ, ಆ ಸರ್ಕಾರ ಅರ್ಧಹಾದಿ ಕ್ರಮಿಸಿದ ಆಯಾಸ ಪರಿಹಾರಕ್ಕೆ ಹಾತೊರೆಯುತ್ತಿರುತ್ತದೆ. ಐದರ ಪೈಕಿ ಕೊನೇ ವರ್ಷದಲ್ಲಿ ಸರ್ಕಾರ ಚುನಾವಣಾ ಮೂಡಿಗೆ ಷಿಫ್ಟ್ ಆಗಿರುತ್ತದೆ. ಹೀಗಾಗಿ ಸರ್ಕಾರ ಜನಪರ ಕೆಲಸ ಮಾಡಲು ಸಿಗುವ ಗಟ್ಟಿ ಕಾಲಾವಧಿ ಅಂದರೆ ಮೂರು ಮೂರೂವರೆ ವರ್ಷಗಳು ಮಾತ್ರ.

ಈ ಲೆಕ್ಕಾಚಾರ ಸಿದ್ದರಾಮಯ್ಯ ಸರ್ಕಾರಕ್ಕೂ ಅನ್ವಯ. ಅಂದಹಾಗೆ ಸಿಎಂ ಸಿದ್ದರಾಮಯ್ಯ ಈಗ ಬರೋಬ್ಬರಿ ಅರ್ಧಹಾದಿ ಕ್ರಮಿಸಿ ಮುಂದಿನ ಹೆಜ್ಜೆ ಇಡಲು ಉದ್ಯುಕ್ತರಾಗುತ್ತಿದ್ದಾರೆ. ಅವರು ಕಳೆದುಹೋದ ಎರಡು ವರ್ಷಗಳನ್ನು ಒಮ್ಮೆ ಮೆಲುಕು ಹಾಕುತ್ತಾರಾ? ಕುಂದಿದ ಸರ್ಕಾರದ ವರ್ಚಸ್ಸಿಗೆ ಹೊಸ ಹೊಳಪು ಕೊಡಲು ಮನಸ್ಸು ಮಾಡುತ್ತಾರಾ?

ಸಿದ್ದರಾಮಯ್ಯ ಒಪ್ಪುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ಒಂದು ಮಾತಂತೂ ನಿಜ, ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿದ ಬಾಲಗ್ರಹ ಪೀಡೆ ಇಂದಿಗೂ ಬಿಟ್ಟಿಲ್ಲ. ಆವರಿಸಿದ ಜಡತ್ವವನ್ನು ಝಾಡಿಸಿ ಸರ್ಕಾರ ಮೈ ಕೊಡವಿ ಮೇಲೇಳಲೇ ಇಲ್ಲ. ಇದು ಸಾರ್ವತ್ರಿಕ ಅಭಿಪ್ರಾಯ. ಅದಕ್ಕೆ ಕಾರಣ ಸಿದ್ದರಾಮಯ್ಯ ಮಾತ್ರವಲ್ಲ, ಅವರ ಮಂತ್ರಿಮಂಡಲದ ಸರ್ವ ಸದಸ್ಯರೂ ಕಾರಣ. ಸರ್ಕಾರಕ್ಕೆ ಎರಡು ವರ್ಷ ತುಂಬುವ ಹೊತ್ತಿನಲ್ಲಾದರೂ ಸಿದ್ದರಾಮಯ್ಯ ಈ ಸತ್ಯವನ್ನು ಅರಿಯುವರೇ? ಕಾದು ನೋಡೋಣ.

ಸಿದ್ದರಾಮಯ್ಯ ಸರ್ಕಾರ ಎರಡನೇ ವರ್ಷಾಚರಣೆಗೆ ಅಣಿಯಾಗುತ್ತಿರುವ ಹೊತ್ತಿನಲ್ಲಿ ಉತ್ತಮ ಸರ್ಕಾರ, ಪರಿಣಾಮಕಾರಿ ಆಡಳಿತದ ಚರ್ಚೆ ಮಾಡಲು ಮುಂದಾದರೆ ನಮಗೆ ದಿವಂಗತ ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆ ಈ ಇಬ್ಬರು ನಾಯಕರು ನೀಡಿದ ಅಪರೂಪದ ಆಡಳಿತದ ಇತಿಹಾಸ ಬೇಡವೆಂದರೂ ನೆನಪಾಗಿ ಕಾಡುತ್ತದೆ. ರಾಜ್ಯ ರಾಜಕೀಯ ಇತಿಹಾಸದಲ್ಲಿ ನಿಜಾರ್ಥದಲ್ಲಿ ಸಾಮಾಜಿಕ ನ್ಯಾಯ ಮತ್ತು ಪರಿಣಾಮಕಾರಿ ಆಡಳಿತ ನೀಡಿದ ಮೊದಲ ಮುಖ್ಯಮಂತ್ರಿ ಅರಸು ಎಂಬ ಮಾತಿದೆ. ಅವರು ಸ್ವತಃ ಹಿಂದುಳಿದ ವರ್ಗದಿಂದ ಬಂದು, ಉತ್ತಮ ಆಡಳಿತದ ಮೂಲಕ ಆ ವರ್ಗದ ಜನರ ಪಾಲಿಗೆ ಗಟ್ಟಿದನಿಯಾದರು. ಅದಕ್ಕಿಂತ ಹೆಚ್ಚಾಗಿ ಅವರು ತಮ್ಮ ಆಲೋಚನೆಗಳನ್ನು ಅಕ್ಷರಶಃ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಡೈನಾಮಿಕ್ ಮಂತ್ರಿಗಳ ತಂಡವನ್ನು ಕಟ್ಟಿದ್ದರು. ಉತ್ತಮ ಆಡಳಿತ ಮತ್ತು ಸಾಮಾಜಿಕ ನ್ಯಾಯದ ಪರಿಪಾಲನೆ ವಿಚಾರದಲ್ಲಿ ರಾಮಕೃಷ್ಣ ಹೆಗಡೆ ಅವರು ಅರಸುಗಿಂತಲೂ ತುಸು ಭಿನ್ನ ಅನ್ನಿಸಿಕೊಳ್ಳುತ್ತಾರೆ. ಸಾಮಾಜಿಕ ನ್ಯಾಯದ ವಿಷಯ ಬಂದಾಗ ಹಿಂದುಳಿದ ಜಾತಿಗೆ ಸೇರಿದ ಅರಸು ಮೊದಲು ನೆನಪಾಗುತ್ತಾರಾದರೂ, ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಹೆಗಡೆ ಜಾತ್ಯತೀತತೆ, ಸಾಮಾಜಿಕ ನ್ಯಾಯ ಪರಿಪಾಲನೆ ದೃಷ್ಟಿಯಿಂದ ಅರಸುಗಿಂತಲೂ ತುಸು ವಿಶೇಷ ಅನ್ನಿಸಿಕೊಳ್ಳುತ್ತಾರೆ. ರಾಜ್ಯ ರಾಜಕೀಯದ ಉತ್ತುಂಗದಲ್ಲಿದ್ದಾಗ ಅವರು ಲಿಂಗಾಯತ, ಮುಸ್ಲಿಂ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಜನರ ಕಣ್ಮಣಿಯಾಗಿ ಕಂಗೊಳಿಸಿದರು. ಮುಖ್ಯವಾಗಿ ಹೆಗಡೆ ಕೇವಲ ಸಿದ್ಧಾಂತವನ್ನು ಹೇಳಲಿಲ್ಲ. ನಿತ್ಯಜೀವನದಲ್ಲಿ ಪಾಲಿಸಿದರು.

ಅದಕ್ಕಿಂತ ಹೆಚ್ಚಾಗಿ ಅರಸು ಮತ್ತು ಹೆಗಡೆ ಈ ಇಬ್ಬರೂ ನಾಯಕರು ತಮ್ಮ ತತ್ತ್ವ, ಸಿದ್ಧಾಂತವನ್ನು ಪಾಲನೆ ಮಾಡಬಲ್ಲ, ತಮ್ಮ ಆಲೋಚನೆಯನ್ನು ಕಾರ್ಯರೂಪಕ್ಕೆ ಇಳಿಸಬಲ್ಲ ಎರಡನೇ ಹಂತದ ವರ್ಚಸ್ವಿ ನಾಯಕರ ಪಡೆಯನ್ನೇ ನಿರ್ಮಿಸಿದ್ದರು. ನಜೀರ್ ಸಾಬ್, ಆಳ್ವ, ಪ್ರಕಾಶ್, ಬೈರೇಗೌಡ ಇಂಥ ನಾಯಕರು ಕೆಲ ಉದಾಹರಣೆ ಮಾತ್ರ. ಆ ಪೈಕಿ ರಾಜಕೀಯದ ಮೇಲ್‍ಸ್ತರದಲ್ಲಿ ಈಗಲೂ ಚಾಲ್ತಿಯಲ್ಲಿರುವವರು ಸಿದ್ದರಾಮಯ್ಯ ಹಾಗೂ ದೇಶಪಾಂಡೆ ಅವರಿಬ್ಬರೇ ಅಂತ ತೋರುತ್ತದೆ. ಅರಸು ಮತ್ತು ಹೆಗಡೆ ಸರ್ಕಾರಕ್ಕೆ ಸಾರ್ವಕಾಲಿಕ ಚಾರ್ಮ್ ತಂದುಕೊಡುವುದರಲ್ಲಿ ಅವರ ಮಂತ್ರಿಮಂಡಲದ ಸದಸ್ಯರ ಕೊಡುಗೆ ದೊಡ್ಡದಿತ್ತು. ಆ ದೃಷ್ಟಿಯಿಂದ ನೋಡಿದರೆ ಇಂದು ಸಿದ್ದರಾಮಯ್ಯ ಜೊತೆಗೆ ಯಾರಿದ್ದಾರೆ? ಸರಿಯಾಗಿ ನೋಡಿದರೆ ಒಬ್ಬರೂ ಸಿಗುವುದಿಲ್ಲ ಎಂಬುದು ಕಟುಸತ್ಯ. ಎಲ್ಲದಕ್ಕಿಂತ ಮುಖ್ಯವಾಗಿ ಆರೋಪ ಬಂದಾಗ, ರಾಜೀನಾಮೆ ಬಿಸಾಕಿ ಮತ್ತೆ ಚುನಾವಣೆ ಎದುರಿಸುತ್ತೇನೆ, ವಾಪಸ್ ಅಧಿಕಾರಕ್ಕೆ ಬರುತ್ತೇನೆಂಬ ಧಾಷ್ರ್ಟೃ ಅಂದಿನ ನಾಯಕರಲ್ಲಿತ್ತು. ಆ ಛಾತಿಯನ್ನು ಈಗೆಲ್ಲಿ ಹುಡುಕೋಣ ಹೇಳಿ?
ಸಿದ್ದರಾಮಯ್ಯ ಆಲೋಚನೆಯಲ್ಲಿ, ನಡೆನುಡಿಯಲ್ಲಿ, ಹಾವಭಾವಗಳಲ್ಲಿ ಅರಸು ಮತ್ತು ಹೆಗಡೆಯವರನ್ನು ಮತ್ತೆ ಮತ್ತೆ ನಮಗೆ ನೆನಪಿಸುತ್ತಾರೆ ನಿಜ. ಹಾಗೇ ಆಚರಣೆಯಲ್ಲೂ ಅವರಂತೆಯೇ ಆದರೆ ಎಷ್ಟು ಚೆನ್ನ ಅಲ್ಲವೇ? ಕೆಲವೇ ವರ್ಗಗಳ ಪರ ಎಂಬ ತಮ್ಮ ಮೇಲಿನ ಆಪಾದನೆಯನ್ನು ನಿವಾರಿಸಿಕೊಂಡು ಸರ್ವರ ಪರ ಎಂಬ ಭಾವನೆಯನ್ನು ಅವರು ಬಿತ್ತಬಲ್ಲರೇ? ಇನ್ನಾದರೂ ಅವರು ಹಾಗೆ ಯೋಚನೆ ಮಾಡುತ್ತಾರೆಯೇ? ಕಾಲ ಮಿಂಚಿಲ್ಲ.

ಸರ್ಕಾರಕ್ಕೆ ಎರಡು ವರ್ಷ ತುಂಬಿದೆ ನಿಮ್ಮ ಸಾಧನೆಯೇನು ಅಂತ ಕೇಳಿದರೆ, ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಸರ್ಕಾರದಲ್ಲಿರುವ ಎಲ್ಲರೂ ಹೇಳುವ ಮಾತು ಒಂದೇ, ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ಶಾದಿಭಾಗ್ಯ. ಬಹುಶಃ ಅರಸು ಮತ್ತು ಹೆಗಡೆ ಈ ಕಾಲದಲ್ಲಿ ಅಧಿಕಾರದಲ್ಲಿದ್ದಿದ್ದರೆ ಇಂಥ ಪರಾವಲಂಬಿ ಬದುಕಿಗೆ ಪ್ರೇರಣೆ ಕೊಡುವ ಯೋಜನೆಯನ್ನು ಜಾರಿಗೊಳಿಸುತ್ತಿದ್ದರೋ ಇಲ್ಲವೋ ಕಾಣೆ. ಅಂದು ಅವರು ಜೀತಮುಕ್ತಿ, ಪಂಚಾಯತ್‍ರಾಜ್ ವ್ಯವಸ್ಥೆ, ವಿಧವಾ ವೇತನ, ಶಾಲಾ ಮಕ್ಕಳ ಬಸ್ ಪಾಸ್, ಸಮವಸ್ತ್ರ, ಗ್ರಾಮೀಣ ಕುಡಿಯುವ ನೀರು ಯೋಜನೆ ಇಂಥ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿ ಜನಪ್ರಿಯರಾದರು. ನಾವಿಲ್ಲಿ ಗಮನಿಸಬೇಕಾದ ಮುಖ್ಯಸಂಗತಿ ಅಂದರೆ, ಒಂದು- ಅಂದಿನ ಕಾಲಕ್ಕೆ ಅಂಥ ಯೋಜನೆಗಳು ಬೇಕಿದ್ದವು. ಮತ್ತೊಂದು- ಅವರು ಯಾವುದೇ ಯೋಜನೆಯನ್ನಾದರೂ ಎಲ್ಲ ಜನಜಾತಿ ವರ್ಗಗಳ ಬಡ ಫಲಾನುಭವಿಗಳನ್ನು ಕಣ್ಣ ಮುಂದಿಟ್ಟುಕೊಂಡು ರೂಪಿಸುತ್ತಿದ್ದರು. ಬಹುಪಾಲು ಯೋಜನೆಗಳು ಜಾತ್ಯತೀತವಾಗಿ ಎಲ್ಲ ಬಡಬಗ್ಗರಿಗೆ ಅನುಕೂಲ ಆಗುವಂತೆ ಜಾರಿಮಾಡಿದ್ದರು. ಅದೆಲ್ಲದಕ್ಕಿಂತ ಮುಖ್ಯವಾಗಿ ಪ್ರತಿ ಊರು, ತಾಲೂಕು, ಜಿಲ್ಲೆಯಲ್ಲಿ ಆಯಾ ಜನಜಾತಿಯನ್ನು ಪ್ರತಿನಿಧಿಸುವ, ಅವರ ಕಷ್ಟಕೋಟಲೆಗಳಿಗೆ ಪ್ರಾಮಾಣಿಕ ಧ್ವನಿಯಾಗಬಲ್ಲ ಸಾವಿರಾರು ಮಂದಿ ಮೂರನೇ ಹಂತದ ನಾಯಕರನ್ನು ಅರಸು ಮತ್ತು ಹೆಗಡೆ ರೂಪಿಸಿದ್ದರು. ಆ ವಾರಸುದಾರರು ಎಲ್ಲಿ ಹೋದರೂ ಈಗಲೂ ಕಾಣಸಿಗುತ್ತಾರೆ. ನಿಜವಾದ ಸಾಮಾಜಿಕ ನ್ಯಾಯ-ಜಾತ್ಯತೀತತೆಯ ಕಲ್ಪನೆ ಮತ್ತು ಆಚರಣೆ ಅಂದರೆ ಅದೇ ಅಲ್ಲವೇ? ಹಾಗಾದರೆ ಇಂದೇನಾಗಬೇಕು? ಸ್ವತಃ ಸಿದ್ದರಾಮಯ್ಯನವರು ಮೈಚಳಿ ಬಿಟ್ಟು ಆಲೋಚಿಸಬೇಕು.

ಇರಲಿ, ಇತಿಹಾಸವನ್ನು ಎಷ್ಟು ಹೇಳಿದರೂ ಅಷ್ಟೇ ಅಲ್ಲವೇ? ಈಗ ಏನಾಗಬೇಕಿತ್ತು, ಏನಾಗಿದೆ ಎಂದು ಪರಿಶೀಲಿಸೋಣ. ಕೆಲ ಪ್ರಮುಖ ಘಟನಾವಳಿಗಳನ್ನು ಹಾಗೇ ಮೆಲುಕುಹಾಕುತ್ತ ಹೋಗೋಣ. ಮಂತ್ರಿಮಂಡಲ ವಿಸ್ತರಣೆ, ಪುನಾರಚನೆ ಎಂಬುದು ಗಣೇಶನ ಮದುವೆಯಂತಾಗಿ ವಿಧಾನಸೌಧದ ಮುಂದೆ `ನಾಳೆ ಬಾ’ ಎಂಬ ಬೋರ್ಡ್ ತೂಗುಹಾಕುವುದೊಂದೇ ಬಾಕಿ! ಕಾರಣಾಂತರಗಳಿಂದ ಮಂತ್ರಿಮಂಡಲದ ಗಾತ್ರವೇ ಕಿರಿದಾಗಿದೆ. ಅದರಲ್ಲೂ ಆರೆಂಟು ಸ್ಥಾನಗಳನ್ನು ಎರಡು ವರ್ಷಗಳಿಂದ ಖಾಲಿ ಇಟ್ಟುಕೊಂಡು ಕುಳಿತುಕೊಂಡರೆ ಏನೆನ್ನಬೇಕು? ಇನ್ನು ನಿಗಮ ಮಂಡಲಿ ವಿಚಾರ. ವೈಯಕ್ತಿಕವಾಗಿ ಹೇಳುವುದಾದರೆ ಇದು ಶುದ್ಧ ದಂಡದ ಬಾಬ್ತು. ಅನಗತ್ಯ ಸರ್ಕಾರಿ ವೆಚ್ಚಕ್ಕೆ ಕಡಿವಾಣ ಹಾಕಲು ನಿಗಮ ಮಂಡಳಿಗಳಿಗೆ ನೇಮಕ ಮಾಡುವುದಿಲ್ಲ ಎಂದು ಹೇಳಿ ಕೈತೊಳೆದುಕೊಂಡಿದ್ದರೆ ಸಿದ್ದರಾಮಯ್ಯನವರ ನೇರನಡೆಯನ್ನು ರಾಜ್ಯದ ಆರು ಕೋಟಿ ಜನರು ಮನಸಾರೆ ಮೆಚ್ಚಿಕೊಳ್ಳುತ್ತಿದ್ದರು. ಇಂಥ ದಂಡದ ನೇಮಕಗಳನ್ನು ಬಿಲ್‍ಕುಲ್ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರಲ್ಲ ಹಾಗೆ. ಅದಿಲ್ಲ ಅಂದರೆ ಖರ್ಚು ವೆಚ್ಚ ಏನೇ ಇರಲಿ, ಕೆಳಹಂತದ ನಾಯಕರ ಕೈಗೆ ಅಧಿಕಾರ ಹಂಚುತ್ತೇನೆಂಬ ದಿಟ್ಟ ನಿಲುವು ತಾಳಿ ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಕೊಟ್ಟು ಆ ಚರ್ಚೆಗೊಂದು ಅಂತ್ಯ ಹೇಳಬಹುದಿತ್ತು. ಆ ಕೆಲಸ ಆರಂಭಿಸುವುದಕ್ಕೇ ಒಂದೂವರೆ ವರ್ಷ ಹಿಡಿಯಿತು. ಕೊನೆಗೂ ಆದದ್ದು ಅರ್ಧಂಬರ್ಧ ಅಧಿಕಾರ ಹಂಚಿಕೆ ಕೆಲಸ. ಎಲ್ಲದರಲ್ಲೂ ಹೀಗೇ ಮಾಡುತ್ತ ಹೋದರೆ ಒಂದು ಸರ್ಕಾರದ ವರ್ಚಸ್ಸು ವೃದ್ಧಿಯಾಗಲು ಹೇಗೆ ಸಾಧ್ಯ?

ಪ್ರಮುಖ ಘಟನಾವಳಿಗಳನ್ನು ನಿಭಾಯಿಸಿದ ರೀತಿಯನ್ನೊಮ್ಮೆ ನೋಡಿ. ಬೆಳಗಾವಿಯಲ್ಲಿ ರೈತನ ಆತ್ಮಹತ್ಯೆ ಪ್ರಕರಣ ಸರ್ಕಾರಕ್ಕೆ ತೀರಾ ಇರುಸುಮುರುಸು ಉಂಟುಮಾಡಿತು. ತುಸು ಎಚ್ಚೆತ್ತುಕೊಂಡಿದ್ದರೆ ಅದನ್ನು ತಪ್ಪಿಸಬಹುದಿತ್ತು. ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಪ್ರಕರಣವನ್ನು ನಿಭಾಯಿಸುವಲ್ಲೂ ಸರ್ಕಾರ ಎಡವಿ ಮುಖಭಂಗ ಅನುಭವಿಸಿತು. ಜತೆಗೆ ಮೊದಲ ಬಾರಿ ಈ ಸರ್ಕಾರ ಈ ಪರಿ ಜನಾಕ್ರೋಶದ ಬಿಸಿಯನ್ನು ಎದುರಿಸುವಂತಾಯಿತು.

ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಆದದ್ದೂ ಅದೇ. ಅಧಿಕಾರ ವಿಕೇಂದ್ರೀಕರಣವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಹೆಗಡೆಯವರ ಮೂಸೆಯಲ್ಲಿ ಬೆಳೆದು ಬಂದ ಕಾರಣಕ್ಕಾಗಿಯಾದರೂ ಸಮಯಕ್ಕೆ ಸರಿಯಾಗಿ ಚುನಾವಣೆಯನ್ನು ನಡೆಸುವ ತೀರ್ಮಾನ ತೆಗೆದುಕೊಳ್ಳಬಹುದಿತ್ತು. ಬಿಬಿಎಂಪಿ ವಿಭಜನೆ ಮಾಡಬೇಕೇ ಬೇಡವೇ ಎಂಬುದು ಇನ್ನೂ ಸಾಕಷ್ಟು ಚರ್ಚೆಮಾಡಿ ತೆಗೆದುಕೊಳ್ಳಬೇಕಾದ ತೀರ್ಮಾನ. ಆ ವಿಭಜನೆಯಿಂದ ಸಾಧಕಕ್ಕಿಂತಲೂ ಬಾಧಕವೇ ಜಾಸ್ತಿ. ಅಂಥದ್ದರಲ್ಲಿ ವಿಭಜನೆ ನೆಪವೊಡ್ಡಿ ಚುನಾವಣೆ ಮುಂದೂಡುವುದು ಯಾವ ಕಾರಣಕ್ಕೂ ವಿವೇಕಯುತ ತೀರ್ಮಾನ ಆಗಿರಲಿಲ್ಲ. ಹಾಗೆ ಮಾಡಿದರೆ ಕೋರ್ಟ್‍ನಲ್ಲಿ ಸರ್ಕಾರಕ್ಕೆ ಮುಖಭಂಗ ಆಗುತ್ತದೆ ಎಂಬುದು ಜನಸಾಮಾನ್ಯರಿಗೂ ಗೊತ್ತಿತ್ತು. ಆದರೆ ಆ ತಿಳಿವಳಿಕೆ ಸರ್ಕಾರ ನಡೆಸುವವರಿಗೆ ಇರದಿರುವುದು ಅಚ್ಚರಿಯ ಸಂಗತಿಯಲ್ಲವೇ?

ಒಂದು ಕಾಲದಲ್ಲಿ ಕೈಗಾರಿಕೋದ್ಯಮಿಗಳ ಪಾಲಿಗೆ ಆಕರ್ಷಣೆಯ ಕೇಂದ್ರವಾಗಿದ್ದ ರಾಜ್ಯ ಇಂದು ಯಾರಿಗೂ ಬೇಡ ಎನ್ನುವಂತಾಗಿದೆ. ಹೊಸ ಕೈಗಾರಿಕೆಗಳು ಬರುವುದಿರಲಿ, ಇದ್ದ ಕೈಗಾರಿಕೆಗಳೂ ಪರರಾಜ್ಯಗಳಿಗೆ ಗುಳೆ ಹೊರಟಿವೆ. ಸರ್ಕಾರ ಆಡಳಿತಾತ್ಮಕವಾಗಿ ಕೆಲವೊಂದು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆಯಾದರೂ ಅದನ್ನು ಜಾರಿಗೊಳಿಸುವಲ್ಲಿ ವಿಫಲವಾಗುತ್ತಿದೆ. ಅದಕ್ಕೆ ಸರ್ಕಾರದ ಚುಕ್ಕಾಣಿ ಹಿಡಿದವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಜೊತೆಗಿಟ್ಟುಕೊಂಡು ದುಡಿಸಿಕೊಳ್ಳುವಲ್ಲಿ ವಿಫಲವಾಗುತ್ತಿರುವುದೇ ಕಾರಣ ಎಂಬ ಮಾತು ವಿಧಾನಸೌಧದ ಮೊಗಸಾಲೆಯಲ್ಲೇ ಕೇಳಿಬರುತ್ತಿದೆ. ಇದೆಲ್ಲ ಸಿದ್ದರಾಮಯ್ಯ ಅವರ ಕಿವಿಯನ್ನು ತಲುಪುವುದು ಯಾವಾಗ?
ಬಾಕಿ ಎಲ್ಲ ಹೇಗೂ ಇರಲಿ, ಕೊನೇ ಪಕ್ಷ `ಈ ಅವಧಿಯ ನಂತರ ಮತ್ತೆ ಮುಂದೆ ಸಕ್ರಿಯ ರಾಜಕಾರಣದಲ್ಲಿ ಇರಲಾರೆ’ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಹಲವರು ಶಹಬ್ಬಾಸ್ ಅಂದಿದ್ದರು. ಆದರೆ ರಾಜಕೀಯ ಎದುರಾಳಿಗಳಿಗೆ ಪ್ರತ್ಯುತ್ತರ ಕೊಡುವ ಅನಿವಾರ್ಯಕ್ಕೆ ಕಟ್ಟುಬಿದ್ದ ಕಾರಣಕ್ಕೆ ಆ ಮಾತನ್ನೂ ಹಿಂದಕ್ಕೆ ಪಡೆದು ನಿರಾಸೆ ಮೂಡಿಸಿಬಿಟ್ಟರು. ಸಿದ್ದರಾಮಯ್ಯನವರು ಭವಿಷ್ಯದ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಬದಿಗಿಟ್ಟು ತಮ್ಮೊಳಗಿರುವ ಮೂಲಸ್ವಭಾವವನ್ನು ಜಾಗೃತ ಮಾಡಿಕೊಂಡು ಉಳಿದ ಅಧಿಕಾರಾವಧಿಯನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುತ್ತಾರೆಂದು ನಿರೀಕ್ಷಿಸೋಣವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top