ಇಸ್ಲಾಮಿಕ್ ವಸಾಹತು ಕುರಿತು ಕಾಂಗ್ರೆಸ್ಸಿಗೇಕೆ ಜಾಣಕುರುಡು?

ನಮ್ಮಲ್ಲಿ ಬುದ್ಧಿಜೀವಿಗಳು ‘ವಸಾಹತುಶಾಹಿ ಮಾನಸಿಕತೆ’ ಕುರಿತು ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಈ ಎಲ್ಲ ಸಮಯದಲ್ಲಿ ವಸಾಹತು ಎಂದು ಬಳಸುತ್ತಿರುವುದು ಸುಮಾರು 200 ವರ್ಷ ಭಾರತವನ್ನು ಗುಲಾಮಗಿರಿಗೆ ತಳ್ಳಿದ್ದ ಬ್ರಿಟಿಷ್ ಅವಧಿಯದ್ದು ಮಾತ್ರ. ಯಾರು ಕೂಡ, ಬ್ರಿಟಿಷರಿಗಿಂತ ಹಿಂದೆ ಭಾರತದ ಮೇಲೆ ದಾಳಿ ನಡೆಸಿದ, ನಂತರ ಆಳ್ವಿಕೆ ನಡೆಸಿದ ಮುಸ್ಲಿಂ, ಪೋರ್ಚುಗೀಸರ ಕುರಿತು ‘ವಸಾಹತು’ ಎಂಬುದನ್ನು ಬಳಸುವುದಿಲ್ಲ ಏಕೆ ಎನ್ನುವುದೇ ಆಶ್ಚರ್ಯ.
***********************
ಪ್ರಧಾನಿ ನರೇಂದ್ರ ಮೋದಿ 2022ರ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಿಂದ ಅಮೃತಕಾಲದ ಪಂಚಪ್ರಾಣಗಳ ಕರ್ತವ್ಯಗಳಲ್ಲಿ ಪ್ರಮುಖವಾದ ಘೊಷಣೆ ಎಂದರೆ ‘ವಸಾಹತು ಮಾನಸಿಕತೆಯನ್ನು ಕಿತ್ತೆಸೆಯಬೇಕು’ ಎಂದು ಘೊಷಿಸಿದರು. 2047ರ ವೇಳೆಗೆ ಈ ಪಂಚಪ್ರಾಣಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮೆಲ್ಲ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡುವ ಹೊಣೆಯನ್ನು ನಾವೆಲ್ಲರೂ ಹೊರಬೇಕು. ದೇಶವು ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸುವ ವೇಳೆಗೆ ಈ ಕಾರ್ಯ ಪೂರ್ಣವಾಗಬೇಕು. ವಸಾಹತುಶಾಹಿ ಮನಃಸ್ಥಿತಿ ಅಳಿಸಿಹಾಕುವುದು; ನಾಗರಿಕರು ತಮ್ಮ ಮೂಲಸಂಸ್ಕೃತಿ, ಏಕತೆ ಹಾಗೂ ಕರ್ತವ್ಯಪ್ರಜ್ಞೆ ಕುರಿತು ಹೆಮ್ಮೆ ತಳೆಯುವಂತೆ ಮಾಡುವುದು ಈ ಅಮೃತ ಕಾಲದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಪಂಚಪ್ರಾಣ ಗುರಿ.
‘ಇನ್ನೂ ಎಷ್ಟು ಕಾಲ ಪ್ರಪಂಚವು ನಮಗೆ ಪ್ರಮಾಣಪತ್ರಗಳನ್ನು ನೀಡುವುದಕ್ಕೆ ಅವಕಾಶ ನೀಡಬೇಕು? ಇನ್ನೂ ಎಷ್ಟು ಕಾಲ ನಾವು ವಿಶ್ವದ ಪ್ರಮಾಣಪತ್ರದ ಆಧಾರದಲ್ಲಿ ಜೀವನ ನಡೆಸಬೇಕು? ನಮ್ಮದೇ ಅಳತೆಗೋಲನ್ನು ನಿರ್ಧರಿಸುವುದು ಬೇಡವೇ? 130 ಕೋಟಿ ಜನರ ದೇಶವು ತನ್ನದೇ ಅಳತೆಗೋಲನ್ನು ಮೀರಲು ಪ್ರಯತ್ನ ನಡೆಸಬಾರದೆ? ಯಾವುದೇ ಸಂದರ್ಭದಲ್ಲಿ ನಾವು ಇತರರಂತೆ ಕಾಣಲು ಪ್ರಯತ್ನ ಮಾಡಬಾರದು. ನಮ್ಮದೇ ಸಾಮರ್ಥ್ಯದ ಆಧಾರದಲ್ಲಿ ಬೆಳವಣಿಗೆ ಕಾಣಬೇಕೆಂಬ ಮನೋಭಾವ ನಮ್ಮದಾಗಬೇಕು. ನಮಗೆ ಗುಲಾಮಗಿರಿಯಿಂದ ಮುಕ್ತಿ ಬೇಕು. ಸಪ್ತಸಾಗರದ ಆಚೆಗೂ ನಮ್ಮ ಮನದಲ್ಲಿ ಎಲ್ಲಿಯೂ ಈ ಗುಲಾಮಿ ಮಾನಸಿಕತೆಯ ಒಂದಂಶವೂ ಜೀವಂತವಾಗಿ ಇರಕೂಡದು’ ಎಂದು ಪ್ರಧಾನಿ ಮೋದಿಯವರು ಕರೆಕೊಟ್ಟರು.
ನಮ್ಮಲ್ಲಿ ಸಾಹಿತಿಗಳು, ಚಿಂತಕರು, ಬುದ್ಧಿಜೀವಿಗಳು ‘ವಸಾಹತುಶಾಹಿ ಮಾನಸಿಕತೆ’ ಕುರಿತು ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಈ ಮಾನಸಿಕತೆಯಿಂದ ಹೊರಬರಬೇಕು. ಇದರಲ್ಲಿ ಸಿಲುಕಿರುವುದರಿಂದಲೇ ನಾವು ನಮ್ಮತನ ಕಂಡುಕೊಳ್ಳಲು ಆಗುತ್ತಿಲ್ಲ. ನಮ್ಮ ವೇಷಭೂಷಣ, ಆಹಾರಗಳೆಲ್ಲವೂ ವಸಾಹತುಕಾಲದಲ್ಲೇ ಸಿಲುಕಿಕೊಂಡಿದೆ ಎಂದು ಹೇಳುತ್ತಾರೆ. ಈ ಎಲ್ಲ ಸಮಯದಲ್ಲಿ ವಸಾಹತು ಎಂದು ಬಳಸುತ್ತಿರುವುದು ಸುಮಾರು 200 ವರ್ಷ ಭಾರತವನ್ನು ಗುಲಾಮಗಿರಿಗೆ ತಳ್ಳಿದ್ದ ಬ್ರಿಟಿಷ್ ಅವಧಿಯದ್ದು ಮಾತ್ರ ಎನ್ನುವುದನ್ನು ಗಮನಿಸಬೇಕು. ಸಾಮಾನ್ಯವಾಗಿ ಮಾತನಾಡುವ ಸಂದರ್ಭದಲ್ಲಿ ಯಾರು ಕೂಡ, ಬ್ರಿಟಿಷರಿಗಿಂತ ಹಿಂದೆ ಭಾರತದ ಮೇಲೆ ದಾಳಿ ನಡೆಸಿದ, ನಂತರ ಆಳ್ವಿಕೆ ನಡೆಸಿದ ಮುಸ್ಲಿಂ, ಪೋರ್ಚುಗೀಸರ ಕುರಿತು ‘ವಸಾಹತು’ ಎಂಬುದನ್ನು ಬಳಸುವುದಿಲ್ಲ ಏಕೆ ಎನ್ನುವುದೇ ಆಶ್ಚರ್ಯ.
ಸುಮಾರು 800 ವರ್ಷಗಳ ಕಾಲ ವಿವಿಧ ಇಸ್ಲಾಮಿಕ್ ದಾಳಿಕೋರರು ಭಾರತವನ್ನು ತಮ್ಮ ವಸಾಹತನ್ನಾಗಿ ಮಾಡಿಕೊಂಡಿದ್ದರು. ಪೂರ್ಣ ಭಾರತವನ್ನು ಅವರೇನು ವಸಾಹತು ಮಾಡಿಕೊಂಡಿರಲಿಲ್ಲ, ಅಲ್ಲಲ್ಲಿ ಹಿಂದು ರಾಜರೂ ಇದ್ದರು. ಹಾಗಾಗಿ ಇಡೀ ಭಾರತವನ್ನು ವಸಾಹತು ಮಾಡಿಕೊಂಡಿರಲಿಲ್ಲ ಎಂದು ಯಾರಾದರೂ ವಾದಿಸಬಹುದು. ಬ್ರಿಟಿಷರೇನು ಸಂಪೂರ್ಣ ಭಾರತವನ್ನು ವಸಾಹತು ಮಾಡಿಕೊಂಡಿದ್ದರೆ? ಭೌಗೋಳಿಕವಾಗಿ ಗಡಿಗಳನ್ನು ಗುರುತಿಸಿ ಇಡೀ ಭಾರತವನ್ನು ಆಳುತ್ತಿದ್ದೇವೆ ಎಂದು ಬ್ರಿಟಿಷರು ಭಾವಿಸಿದರೂ ಭಾರತದಲ್ಲಿ ಬ್ರಿಟಿಷರಿಗೆ ಪ್ರತಿರೋಧಗಳು ನಿರಂತರವಾಗಿದ್ದವು. 1857ರ ನಂತರವಂತೂ ಅವರು ಸುಸ್ತಾಗಿಹೋಗಿದ್ದರು. ಹಾಗಾಗಿ ಯಾವುದೇ ಆಕ್ರಮಣಕಾರರು ಇಡೀ ದೇಶವನ್ನು ಸದಾಕಾಲ ವಸಾಹತು ಮಾಡಿಕೊಂಡಿದ್ದರು ಎನ್ನಲಾಗದು. ಬ್ರಿಟಿಷರಿಗೆ ಯಾವ ಮಾನದಂಡ ಅನ್ವಯವಾಗುತ್ತದೆಯೋ ಅದೇ ಮಾನದಂಡ ಮುಸ್ಲಿಂ, ಪೋರ್ಚುಗೀಸರಿಗೂ ಅನ್ವಯ ಆಗಬೇಕಲ್ಲವೇ? ಆದರೆ ನಮ್ಮ ದೇಶದ ಬುದ್ಧಿಜೀವಿಗಳಿಗೆ ಅದು ಬೇಕಿಲ್ಲ.
ಬ್ರಿಟಿಷರು ಮಾತ್ರ ನಮ್ಮ ವಿರೋಧಿಗಳು ಎಂದು ನಮ್ಮ ತಲೆಗೆ ತುಂಬಲಾಗಿದೆ. ಅದೇ ಇಸ್ಲಾಮಿಕ್ ದಾಳಿಕೋರರಾದ ಅಕ್ಬರ್, ಟಿಪ್ಪು ಸುಲ್ತಾನ್ ಮುಂತಾದವರು ಗ್ರೇಟ್, ಟೈಗರ್ಸ್ ಎಂದು ಬಿಂಬಿಸಲಾಯಿತು. ಏಕೆ ಹೀಗೆ?
ಈ ಮಹಾನ್ ಹಿಂದು ನಾಗರಿಕತೆ ನಿರಂತರವಾಗಿ ದಾಳಿಗಳನ್ನು ಎದುರಿಸಿದೆ. ಭಾರತವು ಮೊದಲಿಗೆ ವಸಾಹತುಶಾಹಿಗಳಿಂದ ದಾಳಿ ಎದುರಿಸಿತು. ಅದರಿಂದ ಹಾಗೂ ಹೀಗೂ ಬಿಡಿಸಿಕೊಂಡು 1947ರಲ್ಲಿ ಸ್ವಾತಂತ್ರ್ಯ ಪಡೆಯಿತು. ಆದರೆ ಸ್ವಾತಂತ್ರಾ್ಯನಂತರದಲ್ಲಿ ಮತ್ತೊಂದು ರೀತಿಯ ವಸಾಹತು ಆಡಳಿತಕ್ಕೆ ದೇಶ ಒಳಗಾಯಿತು. ಮೇಲ್ನೋಟಕ್ಕೆ ಇಡೀ ದೇಶ ಪ್ರಜಾಪ್ರಭುತ್ವ ದೇಶವಾಗಿದ್ದರೂ, ತಮ್ಮ ಸಂಸ್ಕೃತಿಯ ಬೇರಿನಿಂದ ಸಂಬಂಧ ಕಳಚಿಕೊಂಡು ಆಂಗ್ಲರಂತೆಯೇ ಆಗಿದ್ದ ನಮ್ಮದೇ ದೇಶದವರಿಂದ ವಸಾಹತು ಆಡಳಿತ ನಡೆಯಿತು. ಎಲ್ಲ ಸರ್ಕಾರಗಳ ಹಿಂದೆಯೂ ಇದ್ದವರು ಇದೇ ಬ್ರಿಟಿಷ್ ಪಳೆಯುಳಿಕೆಗಳು.
ಈ ನವ ವಸಾಹತುಶಾಹಿಗಳು ಇಸ್ಲಾಮಿಕ್, ಬ್ರಿಟಿಷ್ ಹಾಗೂ ಪೋರ್ಚುಗೀಸ್ (ಗೋವಾ) ವಸಾಹತು ಸಂದರ್ಭದಲ್ಲಿ ಕತ್ತಲಿನೆಡೆಗೆ ತಳ್ಳಲ್ಪಟ್ಟಿದ್ದ ಕರಿನೆರಳಿನಿಂದ ಭಾರತದ ಆತ್ಮವು ಹೊಸಹೆಜ್ಜೆ ಇಡಲು ಅವಕಾಶವನ್ನೇ ನೀಡಲಿಲ್ಲ. ಮುಖ್ಯವಾಗಿ, ಇಸ್ಲಾಮಿಕ್ ಸಮಯದ ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರಲು ಸ್ವತಂತ್ರ ಭಾರತವು ಹೆಚ್ಚು ಹೆಣಗಾಟ ನಡೆಸಲು ಅವಕಾಶ ನೀಡಲಿಲ್ಲ. ಈ ವಸಾಹತುಶಾಹಿ ಮಾನಸಿಕತೆಯಿಂದ ಹೇಗೆ ಹೊರಬರಬೇಕು ಎಂಬ ಮಾರ್ಗವನ್ನೇ ಆಲೋಚನೆ ಮಾಡದಿರುವುದು ಈ ಸಮಸ್ಯೆಗೆ ಮುಖ್ಯ ಕಾರಣ.
ಏಕೆಂದರೆ ಇಸ್ಲಾಮಿಕ್ ಆಡಳಿತವನ್ನು ವಸಾಹತು ಆಡಳಿತ ಎಂದೇ ಈ ಬುದ್ಧಿಜೀವಿ ವಲಯ ಪರಿಗಣಿಸುವುದಿಲ್ಲ. ಏಕೆಂದರೆ, ಹಾಗೇನಾದರೂ ಇಸ್ಲಾಮಿಕ್ ಆಡಳಿತವನ್ನು ವಸಾಹತು ಎಂದು ಪರಿಗಣಿಸಿದರೆ ಈ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಮರು ವಸಾಹತುಶಾಹಿಗಳು ಎಂದು ಪರಿಗಣಿತವಾಗುತ್ತಾರೆ. ಆಗ ಇವರೆಲ್ಲರನ್ನೂ ಕೆಟ್ಟವರು, ದಾಳಿಕೋರರು ಎಂದು ಪರಿಗಣಿಸಬೇಕಾಗುತ್ತದೆ. ಹೀಗಾದಾಗ ದೇಶದಲ್ಲಿ ಬಹುಸಂಖ್ಯಾತವಾದ ಬೆಳೆಯುತ್ತದೆ. ಬಹುಸಂಖ್ಯಾತವಾದ ಬೆಳೆದರೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತದೆ… ಹೀಗೆ ಆದರೆ, ಹೋದರೆ, ಬಂದರೆ… ಎನ್ನುತ್ತಲೇ ಇಡೀ ಇತಿಹಾಸವನ್ನು ಕೈಗೊಂಬೆಯಂತೆ ಆಡಿಸಿದರು. ಲೇಖಕ ಅರುಣ್ ಶೌರಿ ಅವರು ಇವರನ್ನು ಕಮ್ಯುನಿಸ್ಟ್ ‘ಮಹಾನ್ ಇತಿಹಾಸಕಾರರು’ ಎಂದು ವ್ಯಂಗ್ಯವಾಗಿ ಗುರುತಿಸುತ್ತಾರೆ.
ಒಂದು ಉದಾಹರಣೆ ನೋಡೋಣ. ಇಡೀ ಮಾನವಕುಲವೇ ತಲೆತಗ್ಗಿಸುವಂಥ ಒಂದು ಕೊಲೆಯನ್ನು ಒಬ್ಬ ಮಾಡುತ್ತಾನೆ. ಆತನಿಗೆ ನ್ಯಾಯಾಲಯ ಶಿಕ್ಷೆ ನೀಡುತ್ತದೆ. ಆತ ಶಿಕ್ಷೆಯನ್ನು ಅನುಭವಿಸಿ ನಿಧನವಾಗುತ್ತಾನೆ. ಮುಂದೆ ಯಾವಾಗಲಾದರೂ ಇತಿಹಾಸ ಬರೆಯುವವರು ಆ ಅಮಾನವೀಯ ಘಟನೆಯನ್ನು ದಾಖಲಿಸಬೇಕೋ ಬೇಡವೋ? ಹಾಗೆ ಘಟನೆಯನ್ನು ದಾಖಲಿಸಿಬಿಟ್ಟರೆ ಅವನ ಮಕ್ಕಳು, ಮೊಮ್ಮಕ್ಕಳಿಗೆ ಅವಮಾನ ಆದಂತಾಗುತ್ತದೆ. ಹಾಗಾಗಿ ಈ ಅಮಾನವೀಯ ಕೃತ್ಯವನ್ನು ಇತಿಹಾಸದ ಎಲ್ಲಿಯೂ ದಾಖಲಿಸದೇ ಮುಚ್ಚಿಹಾಕೋಣ ಎಂದು ಯಾರಾದರೂ ತೀರ್ವನಿಸಿದರೆ ಏನಾಗುತ್ತದೆ? ಈಗಲೂ ಅದೇ ಆಗುತ್ತಿರುವುದು. ಈ ದೇಶಕ್ಕೆ ಇಸ್ಲಾಂ ಹಾಗೂ ಕ್ರೖೆಸ್ತ ಮತಗಳು ಆಗಮಿಸಿದ್ದು ದಾಳಿಕೋರರ ಮೂಲಕ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಆ ದಾಳಿಕೋರರೆಲ್ಲರೂ ಇಲ್ಲಿ ಇನ್ನಿಲ್ಲದ ದೌರ್ಜನ್ಯ ಎಸಗಿದರು ಎನ್ನುವುದಕ್ಕೂ ದಾಖಲೆಗಳಿವೆ. ಸ್ವತಃ ಅದೇ ಇಸ್ಲಾಮಿಕ್ ರಾಜರ ಹೊಗಳುಭಟ ಇತಿಹಾಸಕಾರರು ಬಡಾಯಿ ಕೊಚ್ಚಿಕೊಂಡ ದಾಖಲೆಗಳೇ ಇವನ್ನು ಹೇಳುತ್ತವೆ. ಇಸ್ಲಾಮಿಕ್ ಆಳ್ವಿಕೆಯಲ್ಲಿ ಅನೇಕ ಕಡೆಗಳಲ್ಲಿ, ಇಸ್ಲಾಂ ನಂಬದವರಿಗೆ ಜಜಿಯಾ ಎಂಬ ತೆರಿಗೆಯಿತ್ತು, ಇಸ್ಲಾಮೇತರರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಕಾಣಲಾಗುತ್ತಿತ್ತು ಎನ್ನುವುದಕ್ಕೂ ಸಾಕ್ಷ್ಯಗಳಿವೆ. ಅಂದರೆ ಇಸ್ಲಾಮಿಕ್ ಆಕ್ರಮಣಕಾರರೂ ನಮ್ಮನ್ನು ವಸಾಹತು ಆಡಳಿತಕ್ಕೆ ಒಳಪಡಿಸಿದ್ದರು ಎಂದೇ ತಾನೆ. ಹಾಗೆ ಇಸ್ಲಾಮಿಕ್ ಆಡಳಿತಗಾರರನ್ನು ಸಂಬೋಧಿಸಿದರೆ ಇಂದಿನ ಮುಸ್ಲಿಮರಿಗೆ ಅವಮಾನ ಹೇಗಾಗುತ್ತದೆ? ಈಗಿನ ಮುಸ್ಲಿಮರು ಇಸ್ಲಾಮಿಕ್ ದಾಳಿಕೋರರನ್ನು ತಮ್ಮ ಪೂರ್ವಜರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಹೇಳಿದ್ದಾದರೂ ಯಾರು? ಈ ರೀತಿ ಭ್ರಮೆಯನ್ನು ಮುಸ್ಲಿಮರ ಮನಸ್ಸಿನಲ್ಲಿ ತುಂಬಿದ್ದು ಕಮ್ಯುನಿಸ್ಟ್ ಬುದ್ಧಿಜೀವಿಗಳು ಹಾಗೂ ಇದಕ್ಕೆ ರಾಜಕೀಯ ಕೃಪಾಪೋಷಣೆ ನೀಡಿದ್ದು ಕಾಂಗ್ರೆಸ್ ಪಕ್ಷ.
ಈ ಪ್ರಕ್ರಿಯೆಯಲ್ಲಿ ಕಮ್ಯುನಿಷ್ಟರು ಮತ್ತು ಕಾಂಗ್ರೆಸ್ ಕೇವಲ ಇತಿಹಾಸಕ್ಕೆ ಅಪಚಾರ ಮಾಡಲಿಲ್ಲ, ಮುಸ್ಲಿಮರಿಗೆ ವಾಸಿಯಾಗದಂಥ ದೊಡ್ಡ ಅನಾಹುತವನ್ನೇ ಮಾಡಿದರು!
ಮುಸ್ಲಿಮರಲ್ಲಿಯೂ ಅನೇಕ ಸಾಧನೆ ಮಾಡಿರುವವರಿದ್ದಾರೆ. ದೇಶದ ಯಾವುದೇ ಮಗುವನ್ನು ಕೇಳಿದರೂ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರ ಹೆಸರೇಳುತ್ತದೆ. ಅಂಥವರನ್ನು ತನ್ನ ಸಮುದಾಯದ ನಾಯಕ ಎಂದು ಗುರುತಿಸಿಕೊಳ್ಳದೆ ದಾಳಿಕೋರರು ಹಾಗೂ ಮತಾಂಧ ಆಳ್ವಿಕೆಗಾರರನ್ನೇ ಮುಸ್ಲಿಂ ಸಮುದಾಯದ ಐಕಾನ್​ಗಳಾಗಿ ಬಿಂಬಿಸುತ್ತ ಅಥವಾ ಮುಸ್ಲಿಂ ಸಮುದಾಯದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ‘ದೋಷಪೂರಿತ ಹೆಮ್ಮೆ’ಗೆ ನೀರೆರೆದಿದ್ದು ಕಾಂಗ್ರೆಸ್. ಉದಾಹರಣೆಗೆ ಕರ್ನಾಟಕದಲ್ಲಿ 2013ರಿಂದ ಐದು ವರ್ಷ ಅಧಿಕಾರದಲ್ಲಿದ್ದ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ.
ಮುಸ್ಲಿಮರ ಒಂದು ಗುಂಪು ಅಲ್ಲಲ್ಲಿ ತನ್ನದೇ ವೆಚ್ಚ ಹಾಗೂ ಹೊಣೆಗಾರಿಕೆಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಲೇ ಬರುತ್ತಿತ್ತು. ಇಡೀ ರಾಜ್ಯದ ಎಲ್ಲ ಮುಸ್ಲಿಮರೂ ಬಹಿರಂಗವಾಗಿ ಈ ದಿನವನ್ನು ಆಚರಿಸುತ್ತಿದ್ದರು ಎಂದೇನಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರ ಈ ದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೊಷಣೆ ಮಾಡಿತು. ಸಹಜವಾಗಿಯೇ ರಾಜ್ಯದ ವಿವಿಧೆಡೆ ಅಸಮಾಧಾನ ಭುಗಿಲೆದ್ದಿತು. ಕೊಡಗು, ಮೇಲುಕೋಟೆ, ಮಂಗಳೂರು, ಚಿತ್ರದುರ್ಗ ಸೇರಿ ಟಿಪು್ಪ ಕ್ರೌರ್ಯಕ್ಕೆ ಬಲಿಯಾಗಿದ್ದ ಪ್ರದೇಶಗಳ ಜನರು ಹೆಚ್ಚು ಅಸಮಾಧಾನಗೊಂಡರು. ಈ ಅಸಮಾಧಾನವನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡ ಕಾಂಗ್ರೆಸ್, ಇಡೀ ಮುಸ್ಲಿಂ ಮತಗಳನ್ನು ತನ್ನೆಡೆ ಸೆಳೆಯಲು ಟಿಪು್ಪ ಜಯಂತಿಯನ್ನು ಮುಂದಿನ ವರ್ಷದಿಂದ ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ಆರಂಭಿಸಿತು. ಈ ಆಚರಣೆಗೆ ಮತ್ತಷ್ಟು ವಿರೋಧ ವ್ಯಕ್ತವಾಯಿತು. ಹೀಗೆ ಪ್ರತಿ ಬಾರಿ ವಿರೋಧ ಹೆಚ್ಚಾದಂತೆ ಮುಸ್ಲಿಮರಲ್ಲಿ ಅಸುರಕ್ಷತೆಯ ಭಾವವನ್ನು ಬಿತ್ತಿದ ಕಾಂಗ್ರೆಸ್ ನಾಯಕರು, ‘ನಿಮ್ಮನ್ನು ರಕ್ಷಣೆ ಮಾಡಬೇಕೆಂದರೆ ನಮ್ಮನ್ನೇ ಗೆಲ್ಲಿಸಬೇಕು’ ಎಂದು ಬ್ರೖೆನ್​ವಾಷ್ ಮಾಡಿದರು. ಬೇರೆ ಸಮುದಾಯಗಳು ಕೈಕೊಟ್ಟಿದ್ದರಿಂದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತಾದರೂ, ಮುಸ್ಲಿಂ ಸಗಟು ಮತಗಳು ಕೈಸೇರಿದವು.
2023ರಲ್ಲಿ ಮುಸ್ಲಿಂ ಮತಗಳು ಹಾಗೆಯೇ ಉಳಿದು ಇದೀಗ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಈಗಲೂ, ಕಾಂಗ್ರೆಸ್ ಸರ್ಕಾರ ಎಂದರೆ ಮುಸ್ಲಿಮರ ಸರ್ಕಾರ, ಮುಸ್ಲಿಮರ ಸ್ಪೀಕರ್ ಎನ್ನುವಂಥ ಮಾನಸಿಕತೆ ಬೆಳೆಸಲಾಗುತ್ತಿದೆ. ಇದೇ ಕಾರಣಕ್ಕೆ ಸಚಿವ ಜಮೀರ್ ಅಹಮದ್ ಇತ್ತೀಚೆಗೆ ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಮಾತನಾಡಿ, ‘2023ರ ಕರ್ನಾಟಕ ಚುನಾವಣೆಯಲ್ಲಿ ಮುಸ್ಲಿಮರಲ್ಲಿ 17 ಮಂದಿಗೆ ಟಿಕೆಟ್ ನೀಡಲಾಗಿತ್ತು. ಈ ಪೈಕಿ 7 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಅದರಲ್ಲಿ 5 ಜನರಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ನನಗೆ 3 ಖಾತೆ ನೀಡಿ ಮಂತ್ರಿ ಮಾಡಿದೆ. ರಹೀಂ ಖಾನ್ ಮಂತ್ರಿಯಾಗಿದ್ದಾರೆ. ಸಲೀಂ ಅಹ್ಮದ್ ವಿಪ್ ಆಗಿದ್ದಾರೆ. ನಸೀರ್ ಅಹ್ಮದ್ ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ರಾಜಕೀಯ ಇತಿಹಾಸದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿರಲಿಲ್ಲ. ಈಗ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್ ಪಕ್ಷ. ಈಗ ದೊಡ್ಡ ದೊಡ್ಡ ಬಿಜೆಪಿ ನಾಯಕರು ಕೂಡ ಸ್ಪೀಕರ್ ಯುಟಿ ಖಾದರ್ ಅವರಿಗೆ ನಮಸ್ಕಾರ ಎನ್ನುತ್ತಾರೆ. ಇದನ್ನು ಮಾಡಿದ್ದು ಯಾರು? ಕಾಂಗ್ರೆಸ್ ಪಕ್ಷ’ ಎಂದಿದ್ದರು.
‘ಬ್ರಿಟಿಷರು ಭಾರತಕ್ಕೆ ಆಗಮಿಸುವುದಕ್ಕೂ ಮುನ್ನ ಭಾರತದಲ್ಲಿ ತಮ್ಮದೇ ಆಡಳಿತವಿತ್ತು. ಆದರೆ ಬ್ರಿಟಿಷರು ಅಧಿಕಾರವನ್ನು ‘ಹಿಂದುಗಳಿಗೆ’ ಕೊಟ್ಟುಬಿಟ್ಟರು. ಹೇಗಾದರೂ ಮಾಡಿ ಭಾರತದ ಆಳ್ವಿಕೆಯನ್ನು ತಮ್ಮ ಸುಪರ್ದಿಗೆ ಪಡೆಯಬೇಕು, ಈ ಭೂಮಿಯನ್ನು ತಮ್ಮ ವಸಾಹತು ಮಾಡಿಕೊಳ್ಳಬೇಕು’ ಎಂಬ ಕೆಲ ಮುಸ್ಲಿಂ ಮೂಲಭೂತವಾದಿಗಳ ಮಾತಿಗೆ ಕಾಂಗ್ರೆಸ್ ತುಪ್ಪ ಸುರಿಯುತ್ತಿರುವುದಂತೂ ಸತ್ಯ. ಇದು ಯಾವುದೋ ಕಾಲದಲ್ಲಿ ಆಗಿಹೋದ ಮುಸ್ಲಿಂ ತುಷ್ಟೀಕರಣ ಅಲ್ಲ, ನಮ್ಮದೇ ಕಾಲದಲ್ಲಿ ನಡೆಯುತ್ತಿರುವ ಕೃತ್ಯ. ಮುಸ್ಲಿಂರಿಗೆ ಬೇಸರವಾಗುತ್ತದೆ ಎಂಬ ಮಾನಸಿಕತೆಯಲ್ಲಿ ಇಸ್ಲಾಂ ವಸಾಹತನ್ನು ಇತಿಹಾಸದ ಪುಸ್ತಕದಿಂದ ಮುಚ್ಚಿಹಾಕಿದ್ದರ ಪರಿಣಾಮ ಏನಾಯಿತು ಎನ್ನುವುದನ್ನು ಮುಂದಿನ ಲೇಖನದಲ್ಲಿ ರ್ಚಚಿಸೋಣ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top