ಜಗತ್ತಿನಲ್ಲಿ ಹಲವರು ಅಮೆರಿಕವನ್ನು ಇಷ್ಟಪಡುತ್ತಾರೆ, ಕೆಲವರು ವಿರೋಧ ಮಾಡುತ್ತಾರೆ. ಆದರೆ ಎಲ್ಲರೂ ಅಮೆರಿಕದ ಆಗು ಹೋಗನ್ನು ಗಮನಿಸಿಯೇ ಗಮನಿಸುತ್ತಾರೆ ಏಕೆಂದರೆ….
ನವೆಂಬರ್ 4, 2008- ಇತಿಹಾಸದ ಪುಟದಲ್ಲಿ ಅಮೆರಿಕ ಹೊಸ ಅಧ್ಯಾಯ ಬರೆದ ದಿನ. ಇಡೀ ಜಗತ್ತಿನಲ್ಲಿ ಹೊಸ ಆಲೋಚನೆ, ಹೊಸ ಸಂಚಲನಕ್ಕೆ ಮುನ್ನುಡಿ ಬರೆದ ಕ್ಷಣ ಅದು. ಕರಿಯ ವರ್ಣದ ನಾಯಕನೊಬ್ಬ ಮೊಟ್ಟಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ. ಮರುಗಳಿಗೆಯಿಂದಲೇ ಹೊರಜಗತ್ತು ಅಮೆರಿಕವನ್ನು ನೋಡುವ ರೀತಿಯೇ ಬದಲಾಗುವಂತೆ ಕಂಡಿತು. ಚುನಾವಣಾ ಗೆಲುವಿಗಿಂತಲೂ, ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬರಾಕ್ ಒಬಾಮಾ ಹುಟ್ಟೂರು ಇಲಿನಾಯ್ಸ್ ರಾಜ್ಯದ ಚಿಕಾಗೋ ನಗರದ ಗ್ರಾಂಟ್ ಪಾರ್ಕ್‍ನಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ರ್ಯಾಲಿಯಲ್ಲಿ ಮಾಡಿದ ಅವರು ಮಾಡಿದ ಭಾಷಣವೇ ಹೆಚ್ಚು ಗಮನಸೆಳೆದಿತ್ತು. “ಅಮೆರಿಕದಲ್ಲಿ ಏನು ಬೇಕಾದರೂ ಸಾಧ್ಯ ಎಂಬುದನ್ನು ಈಗಲೂ ಕೆಲವರು ಅನುಮಾನದಿಂದ ನೋಡುತ್ತಾರೆ. ಬಲಾಢ್ಯ ಅಮೆರಿಕಕ್ಕೆ ಬುನಾದಿ ಹಾಕಿದ ಜಫರಸನ್, ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್‍ರಂಥ ಮಹಾನ್ ನಾಯಕರ ಕನಸು ಈಗಲೂ ಅಮೆರಿಕದಲ್ಲಿ ಜೀವಂತವಾಗಿದೆ ಎಂಬುದನ್ನು ಅನೇಕರು ಸುತರಾಂ ಒಪ್ಪುವುದಿಲ್ಲ. ಅಮೆರಿಕ ಪ್ರಜಾಪ್ರಭುತ್ವದ ತಾಕತ್ತನ್ನೇ ಪ್ರಶ್ನಿಸುವವರು ಅನೇಕರಿದ್ದಾರೆ. ಆದರೆ ಈ ಎಲ್ಲರ ಗೊಂದಲ, ಸಂದೇಹದ ಪ್ರಶ್ನೆಗಳಿಗೆ ಅಮೆರಿಕದ ಪ್ರಜೆಗಳಾದ ನೀವು ಪುಟವಿಟ್ಟಂತೆ ಉತ್ತರಿಸಿದ್ದೀರಿ” ಎಂಬ ಒಬಾಮಾ ಮಾತು ಕೋಟ್ಯಂತರ ಅಮೆರಿಕನ್ನರನ್ನು ರೋಮಾಂಚನಗೊಳಿಸಿತ್ತು, ಹೊರಜಗತ್ತಿಗೂ ಹೊಸಸಂದೇಶ ನೀಡಿತ್ತು.
ಅಮೆರಿಕಕ್ಕೆ ಸಂಬಂಧಿಸಿ ಹೇಳುವುದಾದರೆ, ಅಲ್ಲಿ ಹತ್ತು ಹಲವು ವಿಷಯಗಳಲ್ಲಿ ವೈರುಧ್ಯಗಳಿರುವುದು ನಿಜ. ಮೇಲ್ನೋಟಕ್ಕೇ ನಮಗದು ಢಾಳಾಗಿ ಕಾಣುತ್ತದೆ. ಅಲ್ಲಿ ಬಡತನವಿದೆ, ವರ್ಗಸಂಘರ್ಷವಿದೆ. ಆರ್ಥಿಕ, ಸಾಮಾಜಿಕ ಅಸುರಕ್ಷತೆಯ ಭೀತಿಯಿದೆ. ಒಳಗೊಳಗೇ ಅತೃಪ್ತಿ, ಅಸಮಾಧಾನದ ಕುದಿ ಇದೆ. ಆದರೆ ಎಲ್ಲೋ ಒಂದುಕಡೆ ಅವೆಲ್ಲವನ್ನೂ ಜೀರ್ಣಿಸಿ, ಜಯಿಸಿ ಮುನ್ನಡೆಯುವ ಶಕ್ತಿ ಸಾರ್ಮಥ್ರ್ಯವೂ ಆ ದೇಶಕ್ಕಿದೆ. ಆಲೋಚನೆ ಮಾಡುತ್ತ ಹೋದರೆ ನಮಗೆ ಒಂದೊಂದಾಗಿ ಮನವರಿಕೆಯಾಗುತ್ತದೆ. ಇಟ್ಟುಕೊಂಡ ಭರವಸೆ ಹುಸಿಯಾಗುವುದೆಂದು ಅನ್ನಿಸತೊಡಗಿದರೆ ಅಮೆರಿಕನ್ನರಿಗೆ ಒಬಾಮಾ ಕೂಡ ನಗಣ್ಯರೆನಿಸುತ್ತಾರೆ.
ಅಮೆರಿಕದಲ್ಲಿನ ವರ್ಗ-ತಾರತಮ್ಯ ಕೊನೆಗಾಣಿಸಲು 50 ವರ್ಷಗಳ ಹಿಂದೆ ನಾಗರಿಕ ಹಕ್ಕುಗಳ ಚಳವಳಿಯ ಅಲೆ ಹುಟ್ಟುಹಾಕಿದ ಮಾರ್ಟಿನ್ ಲೂಥರ್ ಕಿಂಗ್ ಆಡಿದ್ದ `I have a dream’ ಎಂಬ ಮಾತು ಎಲ್ಲರಿಗೂ ಗೊತ್ತು. ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಅದೇ ಡೈಲಾಗನ್ನೇ ಮತ್ತೆಮತ್ತೆ ಹೇಳಿದ ಬರಾಕ್ ಒಬಾಮಾ, ಅಮೆರಿಕದ ಕೋಟ್ಯಂತರ ಜನರಲ್ಲಿ ಹೊಸ ಭರವಸೆಯ ಅಲೆ ಎಬ್ಬಿಸಿದ್ದೂ ಗೊತ್ತು. 2008ರ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಯ ಆರಂಭದ ದಿನದಿಂದ ಹಿಡಿದು, ಮುಂದೆ ವಿಜಯೋತ್ಸವದ ರ್ಯಾಲಿಯವರೆಗೆ `We can’ ಎಂಬ ಹೊಸಘೋಷಣೆ ಕೇಳಿ ಅಮೆರಿಕವೇನು ಇಡೀ ಜಗತ್ತೇ ಥ್ರಿಲ್ ಆಗಿದ್ದೂ ಗೊತ್ತು. ಅದೇ ಒಬಾಮಾ ಅಧ್ಯಕ್ಷ ಪದವಿಯಲ್ಲಿ ಕುಳಿತು 6 ವರ್ಷ ಕಳೆಯುವ ಹೊತ್ತಿಗೆ ಅಲ್ಲಿನ ಜನರಿಗೆ ಬೋರಾಗುತ್ತಿದ್ದಾರೆ. `We can’ ಎಂದಾಗ ಕಿವಿ ಹರಿದುಹೋಗುವಂತೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದ ಜನರೇ ಈಗ You Can’t’ ಅಂತ ಅಷ್ಟೇ ಗಟ್ಟಿಯಾಗಿ ಹೇಳುತ್ತಿದ್ದಾರೆ. ಆರು ವರ್ಷದ ಹಿಂದೆ ಶೇ. 70ರಷ್ಟಿದ್ದ ಒಬಾಮಾ ಜನಪ್ರಿಯತೆ ಈಗ ಸರ್ರಂತ ಶೇ. 30ಕ್ಕೆ ಕುಸಿದು ಕೂತಿದೆ. ಅದರ ಪರಿಣಾಮವೇ ಇತ್ತೀಚೆಗೆ ಸೆನೆಟ್‍ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಒಬಾಮಾರ ಡೆಮಾಕ್ರಟಿಕ್ ಪಕ್ಷವನ್ನು ಅಮೆರಿಕದ ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಅಮೆರಿಕ ಕಾಂಗ್ರೆಸ್ಸಿನ ಎರಡೂ ಸದನಗಳಲ್ಲಿ ಒಬಾಮಾರ ಡೆಮಾಕ್ರಟಿಕ್ ಪಕ್ಷ ಪ್ರಾಬಲ್ಯ ಕಳೆದುಕೊಂಡಿರುವುದರಿಂದ ಬಾಕಿ ಇರುವ 2 ವರ್ಷ ಅಧಿಕಾರಾವಧಿಯಲ್ಲಿ ವರ್ಚಸ್ಸನ್ನು ಸುಧಾರಿಸಿಕೊಳ್ಳುವುದು ಬಲುಕಷ್ಟ ಎಂಬುದು ಪರಿಣತರ ಅಂಬೋಣ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು, ಯಾರೋ ಒಬ್ಬ ಅಧ್ಯಕ್ಷನ ಜನಪ್ರಿಯತೆಯ ಏರಿಳಿತವನ್ನಲ್ಲ. ಅಮೆರಿಕದ ಜನರು ಎಷ್ಟು ಬೇಗ ತಮ್ಮ ಆಯ್ಕೆ, ಒಲವು-ನಿಲುವುಗಳನ್ನು ಬದಲಿಸಿಕೊಳ್ಳುವ ಶಕ್ತಿ, ಸಾಮಥ್ರ್ಯವನ್ನು ಹೊಂದಿದ್ದಾರೆ ಎಂಬುದನ್ನು ಆಲೋಚಿಸಬೇಕಿದೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಸಶಕ್ತವಾಗಿ ನಿಲ್ಲಲು ಇದಕ್ಕಿಂತ ದೊಡ್ಡ ಟಾನಿಕ್ ಬೇರೊಂದು ಬೇಕಿಲ್ಲ ಅಲ್ಲವೇ?
ಈ ಸಲದ ಸೆನೆಟ್ ಚುನಾವಣೆ ವೇಳೆ ವಿರೋಧಿ ರಿಪಬ್ಲಿಕನ್ ಪಕ್ಷದ ನಾಯಕರು ಒಬಾಮಾ ವಿರುದ್ಧ ತಮ್ಮ ಬತ್ತಳಿಕೆಯಿಂದ ಹತ್ತಾರು ಟೀಕಾಸ್ತ್ರಗಳನ್ನು ಪ್ರಯೋಗಿಸಿದರು. ಹದಗೆಟ್ಟ ಅಮೆರಿಕ ಆರ್ಥಿಕತೆಗೆ ಮಾಂತ್ರಿಕಸ್ಪರ್ಶ ನೀಡುವಲ್ಲಿ ಒಬಾಮಾ ಆಡಳಿತ ಸೋತಿದೆ. ಆಂತರಿಕ ಸುರಕ್ಷೆಗೆ ಆದ್ಯತೆ ಸಾಕಾಗದು. ರಾಜತಾಂತ್ರಿಕವಾಗಿಯೂ ಹೇಳಿಕೊಳ್ಳುವಂಥ ಕೆಲಸಗಳಾಗಲಿಲ್ಲ. ಭಯೋತ್ಪಾದನೆಯ ದಮನದಂತಹ ಸಂಕೀರ್ಣ ವಿಚಾರಗಳಲ್ಲಿ ಸ್ಪಷ್ಟತೆ ಗೋಚರಿಸಲಿಲ್ಲ ಎಂಬ ಟೀಕೆಗಳ ಜತೆಗೆ, ಉದ್ಯೋಗದಲ್ಲಿ ಲಿಂಗ ಸಮಾನತೆ (ಮಹಿಳೆ ಮತ್ತು ಪುರುಷರಿಗೆ ಸಮಾನ ವೇತನದ ಭರವಸೆ) ಮತ್ತು ವರ್ಣ ಸಾಮರಸ್ಯ(ಕಪ್ಪು ಮತ್ತು ಬಿಳಿಯರ ನಡುವೆ ಸಮಾನತೆ-ಸೌಹಾರ್ದ ಕಾಪಾಡುವುದು)ದ ವಿಷಯದಲ್ಲಿ ಒಬಾಮಾ ನಾಯಕತ್ವಕ್ಕಿಂತಲೂ ತಮ್ಮ ಪಕ್ಷವೇ ಹೆಚ್ಚು ವಿಶ್ವಾಸಾರ್ಹ ಎಂಬುದನ್ನು ಡೆಮಾಕ್ರಟಿಕ್ ನಾಯಕರು ಚುನಾವಣಾ ಪ್ರಚಾರದ ವೇಳೆ ಪ್ರಮುಖವಾಗಿ ಪ್ರಸ್ತಾಪಿಸಿದರು. ಡೆಮಾಕ್ರಟಿಕ್ ಪಕ್ಷದ ಭರವಸೆಯನ್ನು ಅಲ್ಲಿನ ಮತದಾರರು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ್ದು ಚುನಾವಣಾ ಫಲಿತಾಂಶದಲ್ಲಿ ಸಾಬೀತಾಯಿತು.
ನಿಜ, ಒಂದು ಕಾಲದಲ್ಲಿ ವರ್ಣಭೇದ ನೀತಿ ಅಮೆರಿಕದ ಪಾಲಿಗೆ ಕಳಂಕವಾಗಿತ್ತು. ಅದನ್ನು ಹೋಗಲಾಡಿಸಲು ಅನೇಕ ವರ್ಷಗಳ ಕಾಲ ಪರಿಶ್ರಮಿಸಬೇಕಾಯಿತು. ಆದರೆ ಕಳೆದ 2008ರ ಚುನಾವಣಾ ಕಾಲಕ್ಕೆ ಒಬಾಮಾರನ್ನು ಮಾರ್ಟಿನ್ ಲೂಥರ್ ಕಿಂಗ್ ಜತೆ ಸಮೀಕರಿಸಲಾಯಿತು. ಅದರ ಪರಿಣಾಮ, ಕಪ್ಪುವರ್ಣದವರು ಸಾರಾಸಗಟಾಗಿ ಒಬಾಮಾರನ್ನು ಬೆಂಬಲಿಸಿ ಕೇಕೆಹಾಕಿ ಖುಷಿಪಟ್ಟರು. ಅದರ ಫಲವಾಗಿ ಅಮೆರಿಕದಂಥ ಪ್ರಬುದ್ಧ ಸಮಾಜದಲ್ಲೂ ಗೊತ್ತಿಲ್ಲದಂತೆ ಕಂದಕ ನಿರ್ಮಾಣವಾಯಿತು ಎಂಬುದನ್ನು ಅಮೆರಿಕದ ಸಾಮಾಜಿಕ-ರಾಜಕೀಯ ಬೆಳವಣಿಗೆಗಳ ವಿಶ್ಲೇಷಕರು ಈಗ ಚರ್ಚಿಸಲಾರಂಭಿಸಿದ್ದಾರೆ. ಈಗ ಫಗ್ರ್ಯುಸನ್ ಪ್ರಾಂತದಲ್ಲಿ ಹೊತ್ತಿರುವ ವರ್ಣಸಂಘರ್ಷದ ಕಿಡಿ, ಅದರ ಪರಿಣಾಮದ ಒಂದು ಝಲಕ್ ಎನ್ನಲಡ್ಡಿಯಿಲ್ಲ. ಬೇರೆಬೇರೆ ಕಾರಣಗಳಿಗೆ ಅಮೆರಿಕದ ಸಾಮಾಜಿಕ ಸ್ತರಗಳಲ್ಲಿ ಒಳಗೊಳಗೇ ಇರುವ ಆಕ್ರೋಶ, ಅತೃಪ್ತಿ, ಅಸಮಾಧಾನಗಳೆಲ್ಲ ಅಲ್ಲಲ್ಲಿ ಹೊರಬೀಳುತ್ತಿವೆ ಎನ್ನಬಹುದು. ಈಗ ಎದ್ದಿರುವ ಆಕ್ರೋಶದ ಜ್ವಾಲೆ ಅಷ್ಟು ಬೇಗ ತಣಿಯುವ ಲಕ್ಷಣವೂ ಇಲ್ಲ ಎನ್ನಲಾಗುತ್ತಿದೆ. ಏಕೆಂದರೆ ಈ ಬೆಳವಣಿಗೆಯ ಹಿಂದೆ ಐತಿಹಾಸಿಕ ಕಾರಣಗಳಿವೆ. ಈ ಸೂಕ್ಷ್ಮವನ್ನು ರಿಪಬ್ಲಿಕನ್ ಪಕ್ಷ ಬಹಳ ಮುಂಚಿತವಾಗಿಯೇ ಗ್ರಹಿಸಿ ಮತದಾರರೆದುರು ತೆರೆದಿಟ್ಟಿತು. ಮತದಾರರೂ ರಿಪಬ್ಲಿಕನ್ನರನ್ನು ಬೆಂಬಲಿಸಲು ತೀರ್ಮಾನಿಸಿದರು. ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್‍ರ ಯುದ್ಧೋನ್ಮಾದದ ಪರಿಣಾಮ ಸೋತು ಸುಣ್ಣವಾಗಿದ್ದ ರಿಪಬ್ಲಿಕನ್ ಪಕ್ಷ ಮತ್ತೆ ಭರವಸೆಯ ಬುಗ್ಗೆಯಾಗಿ ಹೊರಹೊಮ್ಮಿತು. ಇದೇ ಟ್ರೆಂಡ್ 2016ರ ಅಧ್ಯಕ್ಷೀಯ ಚುನಾವಣೆವರೆಗೂ ಮುಂದುವರಿದರೆ ಅಚ್ಚರಿಯಿಲ್ಲ ಎಂಬ ಮಾತುಗಳು ಅಲ್ಲಿನ ರಾಜಕೀಯ ವಲಯದಲ್ಲೀಗ ಕೇಳಿಬರುತ್ತಿವೆ. ಇಲ್ಲೂ ಸಹ, ಬಲುಬೇಗನೆ ಹೊಸ ಆಯ್ಕೆಯ ಕಡೆಗೆ ಹೊರಳುವ ಅಮೆರಿಕನ್ನರ ಗುಣಸ್ವಭಾವವನ್ನು ನಾವು ಗುರುತಿಸಬಹುದು.
ಹಾಗೆ ನೋಡಿದರೆ, ಅಮೆರಿಕದ ರಾಜಕೀಯ ವ್ಯವಸ್ಥೆ ಬಲು ಸಂಕೀರ್ಣ. ಸಂಸತ್ತಿನ ಉಭಯ ಸದನಗಳ (ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್) ಕಾರ್ಯಶೈಲಿ ಮತ್ತು ಸಂಬಂಧಗಳು ಸೂಕ್ಷ್ಮ. ಪ್ರತಿ 2 ವರ್ಷಕ್ಕೊಮ್ಮೆ ಸಂಸತ್ತಿನಲ್ಲಿ ಪಕ್ಷಗಳ ಬಲಾಬಲವೇ ಏರುಪೇರಾಗಬಹುದಾದರೂ, ಸರ್ಕಾರದ ಸುಗಮ ಕಾರ್ಯನಿರ್ವಹಣೆಗೆ ಭಂಗಬರುವ ಸಾಧ್ಯತೆ ಕಡಿಮೆ. 5 ವರ್ಷದ ಅಧಿಕಾರಾವಧಿಯೇ ಸಾಲದೆಂದು ನಮ್ಮ ಸಂಸದರು, ಶಾಸಕರು ಗೊಣಗುತ್ತಿರುವಾಗ, ಅಮೆರಿಕದಲ್ಲಿ `ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್’ನ ಸದಸ್ಯರು ಪ್ರತಿ 2 ವರ್ಷಕ್ಕೊಮ್ಮೆ ಹೊಸದಾಗಿ ಜನರಿಂದ ನೇರ ಆಯ್ಕೆಯಾಗಿ ಬರುತ್ತಾರೆ. ಹಳಬರು ನಿವೃತ್ತಿ ಹೊಂದುತ್ತಾರೆ. ಅಮೆರಿಕದ ಅಧ್ಯಕ್ಷ ಜನರಿಂದ ನೇರವಾಗಿ ಆಯ್ಕೆಯಾಗುವುದರಿಂದ ಆತ ಸಂಸತ್ತಿಗೆ ಹೊಣೆಗಾರನಾಗಬೇಕಿಲ್ಲ. ಆದರೂ ಸಂಸತ್ತಿನ ಅಸ್ತಿತ್ವವನ್ನು ಅಧ್ಯಕ್ಷ ಅನಾದರ ಮಾಡುವದಿಲ್ಲ, ಸಂಸತ್ತನ್ನು ಎಂದೂ ಕಡೆಗಣಿಸುವುದಿಲ್ಲ. ಅಲ್ಲಿ ಸಂವಿಧಾನವೆಂಬ ಅನಗತ್ಯ ಹೊರೆಯಿಲ್ಲ. ಬೇಕಾಬಿಟ್ಟಿ ತಿದ್ದುಪಡಿಗಳ ಗೊಂದಲ-ಗೋಜಲುಗಳಿಲ್ಲ. 50 ವಿಭಿನ್ನ ರಾಜ್ಯಗಳಿದ್ದರೂ ಒಗ್ಗಟ್ಟಿಗೆ ಸಮಸ್ಯೆಯಿಲ್ಲ. ಪ್ರತಿ ರಾಜ್ಯಕ್ಕೂ ಅದರದ್ದೇ ಆದ ಕಾಯಿದೆ-ಕಾನೂನು, ನೀತಿ-ನಿಯಮಾವಳಿಗಳಿದ್ದರೂ ಒಕ್ಕೂಟವ್ಯವಸ್ಥೆಗೆ ಭಂಗವಿಲ್ಲ. ಸ್ವಯಂಶಿಸ್ತು, ಅನುಶಾಸನ ಅಳವಡಿಸಿಕೊಳ್ಳುವ ಅಮೆರಿಕದ ಪ್ರಬುದ್ಧ ನಾಗರಿಕ ಸಮಾಜವೇ ಇದಕ್ಕೆಲ್ಲ ಮೂಲಕಾರಣ ಎನ್ನಲೇಬೇಕು.
ರಾಜಕೀಯ ವ್ಯವಸ್ಥೆಗಿಂತಲೂ ನಮಗೆ ಬಹಳ ಇಷ್ಟವಾಗುವುದು ಅಮೆರಿನ್ನರ ಅಚ್ಚುಕಟ್ಟುತನ ಮತ್ತು ಜವಾಬ್ದಾರಿಯುತ ನಡವಳಿಕೆ. ಅಲ್ಲಿ ಪ್ರತಿಯೊಬ್ಬ ಪ್ರಜೆಯೂ ತಾನು ಮಾಡುವ ಕೆಲಸದ ಮೂಲಕ ಅಮೆರಿಕದ ಘನತೆ, ಗೌರವ ಕಾಪಾಡಲು ತುಡಿಯುತ್ತಾನೆ. ಉದಾಹರಣೆಗೆ, ಅಮೆರಿಕದಲ್ಲಿ ಒಂದು ಸ್ಮಾರಕ/ಪ್ರತಿಮೆ ಇದ್ದರೆ, ಅದರೊಳಗೆ ಒಂದು ಕರಾರುವಾಕ್ಕಾದ ಮಾಹಿತಿಯೂ ಇರುತ್ತದೆ. ಅದೇ ವೇಳೆಗೆ ನಮ್ಮ ದೇಶದ ಚಿತ್ರಣವನ್ನೊಮ್ಮೆ ಕಣ್ಣಮುಂದೆ ತಂದುಕೊಳ್ಳಿ. ನೀವು ಯಾವುದೇ ಐತಿಹಾಸಿಕ ಸ್ಮಾರಕ, ದೇವಾಲಯಗಳಿಗೆ ಹೋಗಿ, ತಲೆಗೊಂದು ಇತಿಹಾಸ ಹೇಳುವವರು ಅಲ್ಲಿ ಸಿಗುತ್ತಾರೆ; ಎಲ್ಲೂ ಖಚಿತತೆ ಇರುವುದಿಲ್ಲ. “ಈ ದೇವಾಲಯ, ಈ ಸ್ಮಾರಕ 100 ವರ್ಷ ಹಳೆಯದು” ಅಂತ ಒಬ್ಬ ಹೇಳಿದರೆ, ಅಲ್ಲೇ ಬದಿಯಲ್ಲಿರುವ ಮತ್ತೊಬ್ಬ, “ಛೇ ಛೆ, ಇದಕ್ಕೆ 300 ವರ್ಷದ ಇತಿಹಾಸವಿದೆ” ಅಂತ ಪ್ರತ್ಯಕ್ಷ ನೋಡಿದವನಂತೆ ಹೇಳುತ್ತಾನೆ. ನಾವು ಗಾಂಧಿ, ನೆಹರು, ಅಂಬೇಡ್ಕರರಿಂದ ಹಿಡಿದು ಪುಡಿ-ಪುಢಾರಿಗಳವರೆಗೆ ಎಲ್ಲರ ಪ್ರತಿಮೆಗಳನ್ನು ಎಲ್ಲಿ ಬೇಕಾದಲ್ಲಿ ನಿಲ್ಲಿಸುತ್ತೇವೆ. ಆದರೆ ಅದರ ಮೇಲೆ ಅವರ ಹೆಸರನ್ನೂ ಕೆತ್ತಿರುವುದಿಲ್ಲ. ಮಾರನೇ ದಿನದಿಂದ ಅದರ ಧೂಳು ಝಾಡಿಸುವವರೂ ಇರುವುದಿಲ್ಲ. ಅನಾಥ ಪ್ರತಿಮೆಗೆ ಭೂಮಿಯೇ ಆಧಾರ, ಆಕಾಶವೇ ಹೊದಿಕೆ. ಯಾತಕ್ಕೆ ಈ ಅನಾದರ… ಬೇಜವಾಬ್ದಾರಿ… ಒಮ್ಮೆಯಾದರೂ ಆಲೋಚನೆ ಮಾಡುತ್ತೇವಾ..? ಇಲ್ಲಿ ಇನ್ನೊಂದು ಉದಾಹರಣೆ ಕೊಡಲೇಬೇಕು. ವಾಷಿಂಗ್ಟನ್‍ನಲ್ಲಿ `ನ್ಯೂಸಿಯಮ್’ ನಿರ್ಮಿಸಿರುವ ರೀತಿ ಕಂಡರೆ ಮೂಗಿನ ಮೇಲೆ ಬೆರಳಿಡಬೇಕು. ಗಾಂಧಿ ಹತ್ಯೆಯಿಂದ ಹಿಡಿದು 9/11 ಭಯೋತ್ಪಾದಕ ದಾಳಿಯವರೆಗೆ ಯಾವ ದಿನ ಜಗತ್ತಿನ ಯಾವ ಪತ್ರಿಕೆ ಏನು ವರದಿ ಮಾಡಿತ್ತು, ಹೇಗೆ ಮಾಡಿತ್ತು ಎಂಬುದರ ಸಚಿತ್ರ ಮಾಹಿತಿ ಅಲ್ಲಿ ಸಿಗುತ್ತದೆ. ಪತ್ರಿಕೆ, ರೇಡಿಯೋ, ಟಿವಿ ಮಾಧ್ಯಮದ ಹುಟ್ಟು ಬೆಳವಣಿಗೆಯ ಪ್ರತಿ ಹಂತದ ದಾಖಲೆ ಇಲ್ಲಿದೆ. ನಮ್ಮಲ್ಲಿನ ಯಾರಾದರೂ ಚಾಲಾಕಿ ಪತ್ರಕರ್ತ ಅಲ್ಲಿಗೆ ಹೋದರೆ, ಅಲ್ಲೇ ಕುಳಿತು ಮಾಧ್ಯಮದ ಹುಟ್ಟು, ಬೆಳವಣಿಗೆ ಕುರಿತು ಪಿಎಚ್.ಡಿ ಪ್ರಬಂಧ ಸಿದ್ಧಪಡಿಸಿಕೊಂಡು ಆಚೆ ಬರಬಹುದು. ಅದೊಂದೇ ಅಲ್ಲ, ಯಾವುದೇ ಮ್ಯೂಸಿಯಂ, ಸ್ಮಾರಕ, ಸದನಕ್ಕೆ ಹೋದರೂ, ಅಲ್ಲಿನ ಭರಪೂರ ಮಾಹಿತಿ ಮತ್ತು ಅಚ್ಚುಕಟ್ಟುತನ ಖುಷಿ ಕೊಡುತ್ತವೆ. ಅಮೆರಿಕದ ರಸ್ತೆಗಳು ಸ್ವಚ್ಛ, ಸಪಾಟಾಗಿರುವುದು ಅಲ್ಲಿನ ಝಾಡಮಾಲಿಗಳ ಶ್ರಮದಿಂದಷ್ಟೇ ಅಲ್ಲ, ನಾಗರಿಕರ ಜವಾಬ್ದಾರಿಯ ಕೊಡುಗೆಯೂ ಇದಕ್ಕಿದೆ. ಅಲ್ಲಿ `ಸ್ವಚ್ಛ ಅಮೆರಿಕ’ ಅಭಿಯಾನವನ್ನು ಯಾರೂ ಮಾಡಬೇಕಿಲ್ಲ. ನಾವೇಕೆ ಹಾಗೆ ಆಲೋಚನೆ ಮಾಡುವುದಿಲ್ಲ, ನಡವಳಿಕೆ ರೂಢಿಸಿಕೊಳ್ಳುವುದಿಲ್ಲ..?
ಬಫೆಲೋ ಪ್ರಾಂತದ ನಯಾಗರಾ ಜಲಪಾತ ಜಗತ್ತಿನ ಅದ್ಭುತಗಳಲ್ಲೊಂದು. ದಿನಕ್ಕೆ ಸಾವಿರಾರು ಪ್ರವಾಸಿಗರು ಅಲ್ಲಿಗೆ ಬಂದು ಪ್ರಾಕೃತಿಕ ಸೌಂದರ್ಯವನ್ನು ಸವಿದು ಆನಂದಿಸುತ್ತಾರೆ. ಆದರೂ ನಯಾಗರಾದ ಸಹಜ ಸೌಂದರ್ಯ ಒಂದಿಷ್ಟೂ ಮುಕ್ಕಾಗುವ ಮಾತೇ ಇಲ್ಲ. ಎಲ್ಲೂ ಟಿಕೆಟ್ಟಿಲ್ಲ, ಫೋಟೊ ತೆಗೆಯುವವರ ಕಿರಿಕಿರಿಯಿಲ್ಲ. ಬಿಯರು ಬಾಟಲಿ, ಲವ್ ಸ್ಲೋಗನ್‍ಗಳ ಕೊಳಕು ಕೆತ್ತನೆ ಯಾವೊಂದೂ ಇಲ್ಲ. ಅಪಾಯದ ಮುನ್ಸೂಚನಾ ಫಲಕಗಳಿಲ್ಲ. ಬದಲಾಗಿ ಪ್ರವಾಸಿಗರ ಸುರಕ್ಷೆಗೆ ಬೇಕಾದ ಪಕ್ಕಾವ್ಯವಸ್ಥೆ ಮಾಡಿದ್ದಾರೆ. ಎಲ್ಲಿ ಬೇಕಾದಲ್ಲಿ ಹೋಗಬಹುದು. ರಭಸವಾಗಿ ಹರಿಯುವ ನದಿಬದಿಯ ಸೆರಗಿನಿಂದ ಹಿಡಿದು, ನೀರು ಧುಮ್ಮಿಕ್ಕುವ ಆಳದವರೆಗೆ ಹೋಗಿ ಬರಬಹುದು. ನಮ್ಮ ಪ್ರವಾಸೋದ್ಯಮ ಇಲಾಖೆ ಎಂದಾದರೂ ಹಾಗೆ ಆಲೋಚನೆ ಮಾಡಬಹುದೇ?
ಅಮೆರಿಕ ಪ್ರವಾಸದ ವೇಳೆ ಎಂಎಸ್‍ಎನ್‍ಬಿಸಿಯಂಥ ಅಮೆರಿಕದ ನಂಬರ್ 1 ಟಿವಿ ಚಾನಲ್‍ನಿಂದ ಹಿಡಿದು, ಪ್ರಾದೇಶಿಕ ಜನಪ್ರಿಯ ಚಾನಲ್ ಎಬಿಸಿ ನ್ಯೂಸ್ 9 ಕಚೇರಿಗಳಿಗೆ ಭೇಟಿನೀಡಿದ್ದು ಮರೆಯಲಾಗದ ಅನುಭವ. ಅವೆಲ್ಲವುಗಳ ಪೈಕಿ ಮತ್ತೆಮತ್ತೆ ನೆನಪಾಗುವುದು ಪ್ರತಿಷ್ಠಿತ `ನ್ಯೂಯಾರ್ಕ್ ಟೈಮ್ಸ್’ ಕಚೇರಿಯಲ್ಲಿ ಕಳೆದ ಆ ಒಂದು ಗಂಟೆಯ ಅವಧಿ. ನ್ಯೂಯಾರ್ಕ್ ಟೈಮ್ಸ್ ಕಚೇರಿಯೇ ಒಂದು ದೊಡ್ಡ ಜಗತ್ತು. ಇಲ್ಲಿಗೆ ಭೇಟಿನೀಡಿದ ನಮ್ಮ ಜತೆ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪತ್ರಿಕೆಯ ಮಾಜಿ ಸಂಪಾದಕ ಕ್ಲ್ಲಾರ್ಕ್ ಎಚ್. ಅವರು, “ಜಗತ್ತಿನಲ್ಲಿ ಹಲವರು ಅಮೆರಿಕವನ್ನು ಇಷ್ಟಪಡುತ್ತಾರೆ, ಕೆಲವರು ವಿರೋಧ ಮಾಡುತ್ತಾರೆ. ಆದರೆ ಎಲ್ಲರೂ ಅಮೆರಿಕದ ಆಗುಹೋಗನ್ನು ಗಮನಿಸಿಯೇ ಗಮನಿಸುತ್ತಾರೆ. ನ್ಯೂಯಾರ್ಕ್ ಟೈಮ್ಸ್ ಕೂಡ ಅಮೆರಿಕ ಇದ್ದ ಹಾಗೇ” ಅಂತ ಹೇಳಿ, ಇರಾಕ್ ಯುದ್ಧದ ಸಂದರ್ಭದಲ್ಲಿ ವರದಿಮಾಡಲು ಹೋಗಿ ಪ್ರಾಣಾರ್ಪಣೆ ಮಾಡಿದ ಪತ್ರಕರ್ತ ಜಾನ್ ಮೈಕೆಲ್‍ನ ಸ್ಮರಣಾರ್ಥ ಇರುವ ಕಾನ್ಫರೆನ್ಸ್ ಹಾಲ್‍ನ ಪ್ರವೇಶದ್ವಾರದ ಮೇಲೆ ಕಟ್ಟುಹಾಕಿಸಿಟ್ಟಿರುವ ಘೋಷವಾಕ್ಯವನ್ನು ಪರಿಚಯಿಸಿದರು. ಬಹಳ ಹೊತ್ತು ಮನಸ್ಸಿನಲ್ಲಿ ಕ್ಲಾರ್ಕ್ ಮಾತೇ ಮಾರ್ದನಿಸುತ್ತಿತ್ತು.