ಅಮೆರಿಕನ್ನರಿಗಿಂತ ಇಲ್ಲಿನವರ ರಕ್ತದ ಬೆಲೆ ಕಮ್ಮಿಯೇನು?

 

ಭಯೋತ್ಪಾದಕರ ಮೂಲ ಉದ್ದೇಶ ರಕ್ತ ಹರಿಸಿ, ಭಯ ಹುಟ್ಟಿಸಿ ಇಡೀ ಜಗತ್ತು ತಮ್ಮ ಹಾದಿಗೆ ಬರುವಂತೆ ಮಾಡುವುದು ಎಂಬುದು ಎಲ್ಲ ದೇಶಗಳಿಗೂ ಅರ್ಥವಾಗಿರುವ ಸತ್ಯ. ಹಾಗಿದ್ದರೂ, ಅಮೆರಿಕ ಅಧ್ಯಕ್ಷರ ಆದಿಯಾಗಿ ಎಲ್ಲರೂ ಉಗ್ರರ ಕಾರ್ಯಸಾಧನೆಗೆ ಸಹಕರಿಸುತ್ತಿದ್ದಾರೆಯೇ?

 

War On Terror ಎಂದು ಘರ್ಜಿಸಿದ ಅಮೆರಿಕದ ಅಧ್ಯಕ್ಷರು ಯಾಕಿಷ್ಟು ಭಯಭೀತರಾಗಿದ್ದಾರೆ? ಇತ್ತೀಚಿನ ದಿನಗಳಲ್ಲಿ ಈ ಪ್ರಶ್ನೆಯನ್ನು ಬಹಿರಂಗವಾಗಿ ಅಲ್ಲದಿದ್ದರೂ ಆಂತರಂಗಿಕವಾಗಿಯಾದರೂ ಎಲ್ಲರೂ ಕೇಳಿಕೊಳ್ಳದೇ ಇರಲು ಸಾಧ್ಯವೇ ಇಲ್ಲ! ಹಾಗಾದರೆ ಅಧ್ಯಕ್ಷ ಬರಾಕ್ ಒಬಾಮ ಅವರ ಜೀವ ಮಾತ್ರ ಅಮೂಲ್ಯವೇ? ಲಕ್ಷಾಂತರ ಭಾರತೀಯರು ಕಳೆದುಕೊಂಡ ಪ್ರಾಣಕ್ಕೆ, ಹರಿಸಿದ ರಕ್ತಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ? ಈ ಪ್ರಶ್ನೆಯನ್ನು ಒಬಾಮರಿಗೇ ನೇರವಾಗಿ ಕೇಳೋಣ ಎಂದರೆ ಅದಕ್ಕೆ ಅವಕಾಶವಾದರೂ ಎಲ್ಲಿದೆ ಹೇಳಿ. ಭಾರತ ಒಂದು ಸಾರ್ವಭೌಮ, ಸ್ವತಂತ್ರ , ಸ್ವಾಭಿಮಾನಿ ಮತ್ತು ಜವಾಬ್ದಾರಿಯುತ ದೇಶ ಎಂಬುದನ್ನೇ ಮರೆತುಬಿಟ್ಟರಾ ಒಬಾಮ? ಇವರಿಗೆ ಅಮೆರಿಕದ ಊಟಉಣಸು ಬೇಕು ಅಂದರೆ ಒಪ್ಪೋಣ. ಆದರೆ ಭಾರತ ಪ್ರವಾಸ ವೇಳೆ ರಕ್ಷಣೆಗೆ ಅಮೆರಿಕದ ಸೇನೆಯೇ ಬೇಕು ಎಂದರೆ ಹೇಗೆ? ಉಳಿದುಕೊಳ್ಳುವ ಮೌರ್ಯ ಶೆರಟನ್ ಹೋಟೆಲನ್ನು ಅಮೆರಿಕ ರಕ್ಷಣಾ ಪಡೆಯ ಸುಪರ್ದಿಗೆ ಕೊಡಬೇಕು. ಒಬಾಮ ವೈಯಕ್ತಿಕ ಭದ್ರತೆ ನಿಗಾವಹಿಸಲು ಅಮೆರಿಕದ ಶ್ವಾನದಳವೇ ಬೇಕು. ದೆಹಲಿಯ ಇಂಚಿಂಚು ನೆಲದ ಮೇಲೆ ಹದ್ದಿನ ಕಣ್ಣಿಡಲು ಅಮೆರಿಕ ಭದ್ರತಾಪಡೆಯ 1600 ಮಂದಿ ಯೋಧರೇ ಬೇಕು. ಒಬಾಮ ವಿಶೇಷ ರಕ್ಷಣೆಗೆ ಹದ್ದಿನ ಕಣ್ಣಿಡಲು ದೆಹಲಿ, ಆಗ್ರಾದಲ್ಲಿ ಅಮೆರಿಕದ 360 ಸೀಕ್ರೆಟ್ ಏಜೆಂಟ್‍ಗಳನ್ನೇ ನೇಮಿಸಿಕೊಳ್ಳಬೇಕು! ಇಷ್ಟು ವರ್ಷಗಳಲ್ಲಿ ಭಾರತಕ್ಕೆ ಅದೆಷ್ಟು ದೇಶಗಳ ಮುಖ್ಯಸ್ಥರು ಬಂದು ಹೋಗಿಲ್ಲ. ಎಂದಾದರೂ ಇಂಥ ಚಿತ್ರಣವನ್ನು ಕಂಡಿದ್ದೀರಾ? ಕೇಳಿದ್ದೀರಾ?

 

vijayavaniಅಮೆರಿಕದ ಒತ್ತಾಸೆ ಮೇರೆಗೆ ಗಣರಾಜ್ಯೋತ್ಸವ ಪರೇಡ್ ವೇಳೆ ಡ್ರೋನ್ ಸರ್ವೇಕ್ಷಣೆಯನ್ನೂ ಕೈಬಿಡಲಾಗಿದೆ; ದೆಹಲಿ-ಆಗ್ರಾ ಹೆದ್ದಾರಿಯನ್ನು ಮೂರು ದಿನ ಕಾಲ ಬಂದ್ ಮಾಡಲು ತೀರ್ಮಾನಿಸಿಯಾಗಿದೆ. ರಾಷ್ಟ್ರಪತಿ ಭವನವಿರುವ ರೈಸಿನಾ ಹಿಲ್ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶವನ್ನು ಮೂರು ದಿನ ಮುಂಚಿತವಾಗಿ ನಿರ್ಬಂಧಿಸಲಾಗಿದೆ. ರಾಜಪಥದ ಸನಿಹದಲ್ಲಿರುವ ರೈಲ್ವೆ ಭವನ, ರಾಜಭವನ, ಕೃಷಿ ಭವನ, ನ್ಯಾಷನಲ್ ಮ್ಯೂಸಿಯಂ ಸೇರಿ ಎಲ್ಲ ಕಚೇರಿಗಳು, ಇಂಡಿಯಾ ಗೇಟು, ರಫಿ ಮಾರ್ಗಗಳಿಗೆ ನರಪಿಳ್ಳೆಯೂ ಪ್ರವೇಶಿಸುವಂತಿಲ್ಲ. ಅಮೆರಿಕ ಸರ್ಕಾರ ವಿಧಿಸುತ್ತಿರುವ ಎಲ್ಲ ನಿಬಂಧನೆಗಳಿಗೆ ನಮ್ಮ ಸರ್ಕಾರ ತಲೆ ಅಲ್ಲಾಡಿಸುತ್ತಿರುವುದರಿಂದ ಕೇಂದ್ರ ದೆಹಲಿ ಪ್ರದೇಶದಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಲಿದೆ.

 

ಪ್ರತಿವರ್ಷ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿದೇಶಿ ಗಣ್ಯರು ಭಾಗವಹಿಸುವುದು ವಾಡಿಕೆ. ಚಿತ್ತಾಕರ್ಷಕ ಪರೇಡ್ ನಡೆಯುವ ರಾಜಪಥಕ್ಕೆ ಗಣರಾಜ್ಯೋತ್ಸವ ಸಮಾರಂಭದ ಅತಿಥಿಗಳು ಭಾರತದ ರಾಷ್ಟ್ರಪತಿಗಳೊಂದಿಗೆ ಅವರದೇ ಕಾರಲ್ಲಿ ಬರುವುದು ಸಂಪ್ರದಾಯ. ಆದರೆ ಈ ಸಲ ಅದರಲ್ಲೂ ಬದಲಾವಣೆಯಾಗಿದೆ. ಭಾರತ ಭೇಟಿಯ ವೇಳೆ ಬಳಸಲು ಅಮೆರಿಕದಿಂದಲೇ `ಬೀಸ್ಟ್’ ಕಾರನ್ನು ಒಬಾಮ ತರಿಸಿಕೊಂಡಿದ್ದಾರೆ. ಗಣರಾಜ್ಯೋತ್ಸವ ಸಮಾರಂಭಕ್ಕೆ ಭಾರತದ ರಾಷ್ಟ್ರಪತಿ ಮತ್ತು ವಿದೇಶದ ಅತಿಥಿ ಒಟ್ಟಾಗಿ ಆಗಮಿಸುವ ಸಂಪ್ರದಾಯ ಮುರಿಯಬಾರದು ಎನ್ನುವುದಾದರೆ ಪ್ರಣಬ್ ಮುಖರ್ಜಿ ಅಮೆರಿಕ ಕಾರಲ್ಲೇ ಬರಬೇಕು. ಆಹ್ವಾನ ನೀಡಿದ ತಪ್ಪಿಗೆ ಭಾರತ ಸರ್ಕಾರ ಯಾವುದಕ್ಕೂ ಇಲ್ಲ ಎನ್ನುವ ಹಾಗಿಲ್ಲ. ಕೊನೆಗೆ ಗಣರಾಜ್ಯೋತ್ಸವ ಪರೇಡನ್ನು ಒಬಾಮ ಗುಂಡುನಿರೋಧಕ ಗಾಜಿನ ಕೋಣೆಯಲ್ಲೇ ಕುಳಿತು ವೀಕ್ಷಣೆ ಮಾಡುತ್ತಾರೆ.
ಇವರು ಇಷ್ಟೆಲ್ಲಾ ಭಯ ಬೀಳುವುದು, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿರುವುದೆಲ್ಲ ಯಾಕೆ ಗೊತ್ತಾ? ಭಯೋತ್ಪಾದಕರು ಹೇಗಾದರೂ ಮಾಡಿ ಯಾವುದಾದರೂ ರೀತಿಯಿಂದ ಎರಗಿಬಿಟ್ಟಾರು ಎಂಬ ಭೀತಿಯಿಂದ. ಹೇಗಿದೆ ನೋಡಿ ವಿಚಿತ್ರ. ಇಡೀ ಜಗತ್ತನ್ನೇ ಕಾಡುತ್ತಿರುವ ಜಿಹಾದಿ ಉಗ್ರರನ್ನು ಬೆಳೆಸಿದ ಅಮೆರಿಕ ಈಗ ಅದೇ ಉಗ್ರರ ದಾಳಿಯ ದುಃಸ್ವಪ್ನದಿಂದ ಬಾಳುವೆ ನಡೆಸಬೇಕಾಗಿ ಬಂದಿದೆ.

 

`ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಆಫ್ ಅಫ್ಘಾನಿಸ್ತಾನ’ ಹೆಸರನ್ನು ನೀವು ಕೇಳಿರಬಹುದು. 1978ರ ಹೊತ್ತಿಗೆ ಅಫ್ಘಾನಿಸ್ತಾನದಲ್ಲಿ ರಾಜಕೀಯ ಸುಧಾರಣೆ ತಂದು, ದೇಶದಲ್ಲಿ ಬೇರುಬಿಟ್ಟಿದ್ದ ಮೂಲಭೂತವಾದಿಗಳ ಪ್ರಭುತ್ವಕ್ಕೆ ಇತಿಶ್ರೀ ಹೇಳಲು ಸಂಕಲ್ಪ ಮಾಡಿದ್ದ ರಾಜಕೀಯ ಸಂಘಟನೆಯದು. ಭೂ ಸುಧಾರಣೆ, ಶೈಕ್ಷಣಿಕ ಸುಧಾರಣೆ ಮತ್ತು ಮಹಿಳಾ ಸಮಾನತೆಯ ಸಾಕಾರಕ್ಕೆ ಪಿಡಿಪಿಎ ಕೈಹಾಕಿತ್ತು. ಅದಕ್ಕೆ ಆಗಿನ ಸೋವಿಯತ್ ಒಕ್ಕೂಟ ಬೆನ್ನೆಲುಬಾಗಿ ನಿಂತುಕೊಂಡಿತ್ತು. ಇದು ಅಫ್ಘಾನಿಸ್ತಾನದ ಮೂಲಭೂತವಾದಿ ಜಮೀನುದಾರರ ಅಸಹನೆಗೆ ಕಾರಣವಾಯಿತು. ಅಲ್ಲದೆ ಸೋವಿಯತ್ ರಷ್ಯಾ ಎಲ್ಲಿ ಪಾಕಿಸ್ತಾನ, ಇರಾನ್ ಮತ್ತು ಕೊಲ್ಲಿ ರಾಷ್ಟ್ರಗಳಿಗೂ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುವುದೋ ಎಂಬ ಆತಂಕ ಅಮೆರಿಕವನ್ನು ಕಾಡತೊಡಗಿತು.

 

ಹೀಗಾಗಿ ಪಿಡಿಪಿಎ ಮತ್ತು ಪಟ್ಟಭದ್ರ ಜಮೀನುದಾರರ ನಡುವಿನ ತಿಕ್ಕಾಟ, ಅಸಹನೆಯನ್ನೇ ದಾಳವಾಗಿ ಮಾಡಿಕೊಂಡು ಅಫ್ಘಾನಿಸ್ತಾನದಲ್ಲಿ ಸೋವಿಯತ್ ರಷ್ಯಾ ಪ್ರಭುತ್ವವನ್ನು ಕೊನೆಗಾಣಿಸಿ ತಾನು ಹಿಡಿತ ಸಾಧಿಸಬೇಕೆಂದು ಅಮೆರಿಕ ತೀರ್ಮಾನಿಸಿ ಮುಜಾಹಿದೀನ್‍ಗಳಿಗೆ ಹೇರಳ ದುಡ್ಡು, ಶಸ್ತ್ರಾಸ್ತ್ರವನ್ನು ಪೂರೈಸಲು ಮುಂದಾಯಿತು. ಅಂದು ಅಮೆರಿಕ ಇಟ್ಟ ಆ ಒಂದು ನಡೆಯೇ ಇಂದು ಕುಳಿತಲ್ಲಿ ನಿಂತಲ್ಲಿ ಅಧ್ಯಕ್ಷ ಒಬಾಮ ಜೀವಭಯಕ್ಕೆ ಸಿಲುಕಲು ಮೂಲ ಕಾರಣ.

 

ಅಂದು ಅಮೆರಿಕ ಮಾಡಿದ ಪ್ರಮಾದ ಅಂತಿಂಥದ್ದಲ್ಲ. ಅಫ್ಘಾನಿಸ್ತಾನದಲ್ಲಿ ಸೋವಿಯತ್ ಪಡೆಗಳ ವಿರುದ್ಧ ಹೋರಾಡುತ್ತಿದ್ದ ಮುಜಾಹಿದೀನ್‍ಗಳಿಗೆ ಶಸ್ತ್ರಾಸ್ತ್ರ ಪೂರೈಸಲು, ಯುದ್ಧ ತರಬೇತಿ ನೀಡಲು 1978ರಿಂದ 1992ರ ಅವಧಿಯಲ್ಲಿ 20 ಬಿಲಿಯನ್ ಡಾಲರ್ ವೆಚ್ಚ ಮಾಡಿತು. ಅಮೆರಿಕದ ಸಂಕಲ್ಪಕ್ಕೆ ಅಗತ್ಯ ಹಣಕಾಸಿನ ನೆರವು ನೀಡುವಲ್ಲಿ ಸೌದಿ ಅರೇಬಿಯಾದಂತಹ ತೈಲಸಂಪದ್ಭರಿತ ರಾಷ್ಟ್ರಗಳೂ ಕೈ ಜೋಡಿಸಿದವು.
ಆಫ್ಘನ್ ನೆಲದಲ್ಲಿ ಸುಧಾರಣೆ ತರಲು ತಲೆಯೆತ್ತಿದ ಪಿಡಿಪಿಎಯನ್ನು ಮಣ್ಣುಮುಕ್ಕಿಸಲು ಮತ್ತು ಅಲ್ಲಿಂದ ಸೋವಿಯತ್ ಪಡೆಗಳನ್ನು ಹಿಮ್ಮೆಟ್ಟಿಸಲು ಅಮೆರಿಕ ಹಾಗೂ ಕೊಲ್ಲಿ ರಾಷ್ಟ್ರಗಳ ಬೆಂಬಲದೊಂದಿಗೆ 1979ರಲ್ಲಿ ಅಖಾಡಕ್ಕಿಳಿದ ಮುಜಾಹಿದೀನ್‍ಗಳು ತಮ್ಮ ಗುರಿ ಈಡೇರಿಸಿಕೊಳ್ಳುವಲ್ಲಿ ಕೊನೆಗೂ ಯಶ ಕಂಡರು. 1989ರಲ್ಲಿ ಸೋವಿಯತ್ ಪಡೆ ಅಫ್ಘಾನಿಸ್ತಾನದಿಂದ ಹಿಂದಕ್ಕೆ ಸರಿಯಿತು. ತರುವಾಯ ಅಫ್ಘಾನಿಸ್ತಾನ ಸಂಪೂರ್ಣವಾಗಿ ಮುಜಾಹಿದೀನ್‍ಗಳ ಹಿಡಿತಕ್ಕೆ ಸಿಲುಕಿತು.

 

ಗುಲ್ಬುದ್ದೀನ್ ಹೆಕ್ಮತಿಯಾರ್ ಹೆಸರನ್ನು ನೀವು ಕೇಳಿರಬಹುದು. ಆತ ಓರ್ವ ಪುಂಡ, ಮತಾಂಧ. ಎಪ್ಪತ್ತರ ದಶಕದಲ್ಲಿ ಆತ ಬುರ್ಖಾ ಧರಿಸದ, ವೇಲ್ ತೊಡದ ಮಹಿಳೆಯರ ಮುಖದ ಮೇಲೆ ನಡುಬೀದಿಗಳಲ್ಲಿ ಆಸಿಡ್ ಎರಚುತ್ತಿದ್ದ. ಅಫ್ಘಾನಿಸ್ತಾನ, ಪಾಕಿಸ್ತಾನದ ಗಡಿಯಲ್ಲಿ ಅಪಾರ ಪ್ರಮಾಣದ ಮಾರ್ಫಿನ್, ಅಫೀಮಿನಂತಹ ಮಾರಣಾಂತಿಕ ಅಮಲು ಪದಾರ್ಥವನ್ನು ಬೆಳೆದು ಅಪಾರ ದುಡ್ಡು ಸಂಪಾದನೆ ಮಾಡುತ್ತಿದ್ದ. ಇಂಥ ಹೆಕ್ಮತಿಯಾರ್ ಕೈಗೆ ಆಫ್ಘನ್ ಅಧಿಕಾರ ಸಿಗುವಂತೆ ಮಾಡಿದ್ದು ಅಮೆರಿಕ. ಅಧಿಕಾರ ಚುಕ್ಕಾಣಿ ಹಿಡಿದ ಗುಲ್ಬುದ್ದೀನ್ ಮೊದಲು ಮಾಡಿದ ಕೆಲಸ ಅಂದರೆ ಅಮೆರಿಕ ಸರಬರಾಜು ಮಾಡಿದ್ದ ಶಸ್ತ್ರಾಸ್ತ್ರಗಳನ್ನೇ ಬಳಸಿ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಮಂದಿ ಅಮಾಯಕ ಆಫ್ಘನ್ನರನ್ನು ನಿರ್ದಯವಾಗಿ ಹತ್ಯೆಮಾಡಿದ್ದು.

 

ಗುಲ್ಬುದ್ದೀನ್ ಹೆಕ್ಮತಿಯಾರನ ಬೆನ್ನು ತಟ್ಟಿದ್ದು ಹ್ಯಾಗೂ ಇರಲಿ, ಸೋವಿಯತ್ ರಷ್ಯಾವನ್ನು ಮಣಿಸುವ ಏಕೈಕ ಉದ್ದೇಶದಿಂದ ಜಗತ್ ಕಂಟಕ ಒಸಾಮಾ ಬಿನ್ ಲಾಡೆನ್‍ನನ್ನು ಬೆಳೆಸಿ ಅಮೆರಿಕ ಬಹುದೊಡ್ಡ ಪ್ರಮಾದ ಮಾಡಿತು. ಬಹುಶಃ ಅದಕ್ಕೆ ಎಂದೂ ಕ್ಷಮೆ ಇರಲಾರದು. 1979ರ ಹೊತ್ತಿಗೆ ಜೆಡ್ಡಾ ವಿಶ್ವವಿದ್ಯಾಲಯದಲ್ಲಿ ಪದವಿ ಓದುತ್ತಿದ್ದ ಒಸಾಮಾ ಬಿನ್ ಲಾಡೆನ್ ಜೊತೆಗೆ ಅಮೆರಿಕ ಗುಪ್ತದಳವಾದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ) ಸಂಪರ್ಕ ಸಾಧಿಸಿತು. ಟರ್ಕಿಯ ರಾಜಧಾನಿ ಅಂಕಾರದಲ್ಲಿನ ಅಮೆರಿಕ ದೂತಾವಾಸ ಕಚೇರಿಯೇ ಸಿಐಎ ಮತ್ತು ಲಾಡೆನ್ ನಡುವಿನ ಸಂಪರ್ಕಕ್ಕೆ ಸೇತುವೆಯಾಯಿತು. ಈ ಮಸಲತ್ತಿನ ಪರಿಣಾಮವಾಗಿ ಮುಂದೆ ಒಂದೇ ವರ್ಷದಲ್ಲಿ (1980ರ ಹೊತ್ತಿಗೆ) ಸೋವಿಯತ್ ಪಡೆಗಳ ವಿರುದ್ಧ ಹೋರಾಡಲು ಸಾಮೂಹಿಕವಾಗಿ ಮುಜಾಹಿದೀನ್‍ಗಳ ನೇಮಕಕ್ಕೆ ಲಾಡೆನ್ ಮುಂದಾದ. ಒಸಾಮಾನ ಜಿಹಾದಿ ಸೇನೆ ಸೇರುವ ಮುಜಾಹಿದೀನ್‍ಗಳಿಗೆ ಸಿಐಎ ಅಗತ್ಯ ಮಿಲಿಟರಿ ತರಬೇತಿ ನೀಡಿತು. ಯಥೇಚ್ಛ ಶಸ್ತ್ರಾಸ್ತ್ರ ಸರಬರಾಜು ಮಾಡಿತು. ಕೇಳಿದಷ್ಟು ದುಡ್ಡುಕಾಸಿನ ನೆರವನ್ನು ನೀಡಿತು. ಒಸಾಮಾ ಜಗತ್ತಿನ ಎಲ್ಲ ಉಗ್ರಗಾಮಿ ಸಂಘಟನೆಗಳ ಪಾಲಿಗೆ ಆದರ್ಶಪ್ರಾಯ ವ್ಯಕ್ತಿಯಾಗಿ ಬೆಳೆದ. ಒಸಾಮಾನ ಸಂತತಿಯನ್ನು ಬೆಳೆಸುವ ನಿಟ್ಟಿನಲ್ಲಿ ಅಮೆರಿಕ ಎಷ್ಟು ಕುರುಡಾಗಿತ್ತು ಅನ್ನುವುದಕ್ಕೆ ಒಂದೊಳ್ಳೆ ಉದಾಹರಣೆಯಿದೆ. 1985 ಮಾರ್ಚ್ 8ರಂದು ಆಗಿನ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಮುಜಾಹಿದೀನ್‍ಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ, ಅಫ್ಘಾನಿಸ್ತಾನದ ಗುಡ್ಡಗಾಡು ಪ್ರದೇಶದಲ್ಲಿ, ಕಂಪೂಚಿಯಾದಲ್ಲಿ ಸೋವಿಯತ್ ರಷ್ಯಾ ಪ್ರಭುತ್ವದ ವಿರುದ್ಧ ಯುದ್ಧ ಸಾರಿದ್ದ ಒಸಾಮಾನ ಮುಜಾಹಿದೀನ್ ಪಡೆಗಳ ಹೋರಾಟವನ್ನು “War Against Evil Empire (USSR)” `ಅನಿಷ್ಟ ಸಾಮ್ರಾಜ್ಯ(ರಷ್ಯಾ)ದ ವಿರುದ್ಧದ ಸಮರ’ ಎಂದು ಕರೆದಿದ್ದರು. ಮುಜಾಹಿದೀನ್‍ಗಳನ್ನು Freedom fighters -ಸ್ವಾತಂತ್ರೃ ಹೋರಾಟಗಾರರು ಎಂದು ರೇಗನ್ ಹೊಗಳಿದ್ದರು.

 

ಭಸ್ಮಾಸುರ ಸಂತಾನದಂತಿರುವ ಲಾಡೆನ್ ತನ್ನನ್ನು ಬೆಳೆಸಿದ ಅಮೆರಿಕಕ್ಕೆ 2001ರ ಸೆಪ್ಟೆಂಬರ್ 11ರಂದು ತಕ್ಕ ಪ್ರತಿಫಲವನ್ನೇ ಕೊಟ್ಟ. ಒಸಾಮಾ ಬಂಟರು ಅಮೆರಿಕದ ವಿಶ್ವವಾಣಿಜ್ಯ ಕೇಂದ್ರದ ಮೇಲೆ ದಾಳಿ ಮಾಡಿದ ನಂತರ, ಆ ದೇಶಕ್ಕೆ ತಾನು ಮಾಡಿದ ತಪ್ಪಿನ ಅರಿವು ಆದಂತೆ ತೋರುತ್ತದೆ. ಅದುವರೆಗೂ ಭಯೋತ್ಪಾದನೆಯನ್ನು Internal disturbance (ಆಂತರಿಕ ದಂಗೆ) ಎಂದು ಕರೆಯುತ್ತಿದ್ದ ಅಮೆರಿಕ ಮೊದಲ ಬಾರಿ ಜಾಗತಿಕ ಭಯೋತ್ಪಾದನೆ ಎಂದು ಕರೆದು, ಅದರ ವಿರುದ್ಧ ಯುದ್ಧಸಾರುವುದಾಗಿ ಘೋಷಿಸಿತು.

 

ಇಷ್ಟಾದರೂ ಭಯೋತ್ಪಾದನೆ ವಿಚಾರದಲ್ಲಿ ಅಮೆರಿಕ ತನ್ನ ದ್ವಂದ್ವವನ್ನು ಬಿಡಲು ತಯಾರಿದೆ ಅನ್ನುವ ಹಾಗಿಲ್ಲ. ಒಸಾಮಾ ವಿರುದ್ಧ ಯುದ್ಧ ಸಾರಿದ್ದರ ಬೆನ್ನಲ್ಲೇ, ಆತನನ್ನು ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿದ್ದ ಪಾಕಿಸ್ತಾನಕ್ಕೆ ಉದಾರವಾಗಿ ಹಣಕಾಸು, ಶಸ್ತ್ರಾಸ್ತ್ರಗಳ ಸರಬರಾಜನ್ನು ಮುಂದುವರೆಸಿಕೊಂಡೇ ಬರುತ್ತಿದೆ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸುವುದನ್ನು ಪ್ರಕಟಿಸಿದ ಮರುಘಳಿಗೆಯಲ್ಲೇ, ಪಾಕಿಸ್ತಾನದ ಪ್ರಧಾನಿ ನವಾಬ್ ಷರೀಫ್‍ಗೆ ದೂರವಾಣಿ ಕರೆ ಮಾಡಿದ ಒಬಾಮ, ತಮ್ಮ ಉದ್ದೇಶಿತ ಭಾರತ ಭೇಟಿಯಿಂದ ಪಾಕಿಸ್ತಾನ ವಿಚಲಿತವಾಗಲು ಕಾರಣವಿಲ್ಲ ಎಂದರು. ಏನಿದರ ಅರ್ಥ?

 

ಇದು ಕೇವಲ ಒಬಾಮ ಒಬ್ಬರ ನಡೆಯಲ್ಲ, ಒಟ್ಟಾರೆ ಅಮೆರಿಕದ ನಿಲುವೇ ಅಂಥದ್ದು. ಇದುವರೆಗೆ ಭಾರತಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷರ ಪೈಕಿ 1978ರಲ್ಲಿ ಜಿಮ್ಮಿ ಕಾರ್ಟರ್ ಬಿಟ್ಟರೆ ಈಗ ಒಬಾಮ ಅವರೇ ಪಾಕಿಸ್ತಾನಕ್ಕೆ ಭೇಟಿ ನೀಡದೇ ಸ್ವದೇಶಕ್ಕೆ ವಾಪಸಾಗುತ್ತಿರುವವವರು. ಪಾಕಿಸ್ತಾನದಲ್ಲಿ ಜನರಲ್ ಜಿಯಾ ಉಲ್ ಹಕ್ ಸೇನಾಕ್ರಾಂತಿಗೆ ಮುಂದಾಗಿದ್ದರಿಂದ ಜಿಮ್ಮಿ ಕಾರ್ಟರ್ ಭೇಟಿ ನೀಡಿರಲಿಲ್ಲ. ಈಗ ತಾಲಿಬಾನ್ ಉಗ್ರರಿಗೆ ಅಂಜಿರುವ ಒಬಾಮ ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಅಷ್ಟೆ. 1959ರಲ್ಲಿ ಐಸೆನ್‍ಹೋವೆರ್, 69ರಲ್ಲಿ ನಿಕ್ಸನ್, 2000ದಲ್ಲಿ ಕ್ಲಿಂಟನ್, 2006ರಲ್ಲಿ ಜಾರ್ಜ್ ಡಬ್ಲುೃ ಬುಷ್ ಎಲ್ಲರೂ ಭಾರತದ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿಯೇ ತಮ್ಮ ಯಾತ್ರೆ ಪೂರ್ಣಗೊಳಿಸಿದ್ದರು.

 

ಅಮೆರಿಕದ ವುಡ್ರೋ ವಿಲ್ಸನ್ ಇಂಟರ್‍ನ್ಯಾಷನಲ್ ಸೆಂಟರ್‍ನ ಮುಖ್ಯಸ್ಥ ಸೆಲಿಂಗ್ ಹ್ಯಾರಿಸನ್ ಹೇಳುವ ಪ್ರಕಾರ ಅಮೆರಿಕದ ಗುಪ್ತಚರ ದಳ ಸಿಐಎ ಈಗಲೂ ಪಾಕಿಸ್ತಾನದ ಐಎಸ್‍ಐನೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಅದೂ ಬಿಡಿ, ಕಳೆದ ಒಂದು ತಿಂಗಳಿಂದ ಎಡೆಬಿಡದೆ ಗುಂಡಿನ ಕಾಳಗ ನಡೆಸುತ್ತಿದ್ದ ಪಾಕಿಸ್ತಾನ ಸೇನೆ `ನನ್ನ ಭೇಟಿಯ ವೇಳೆ ಪಾಕಿಸ್ತಾನ ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಬೇಕು’ ಎಂದು ಒಬಾಮ ಹೇಳಿದ ಕೂಡಲೇ ತೆಪ್ಪಗಾಗುವುದೇಕೆ? ಯೋಚನೆ ಮಾಡಬೇಕು ತಾನೆ?

 

ಇತ್ತೀಚೆಗೆ ಪೇಶಾವರ ಶಾಲೆಯಲ್ಲಿ ಭಯೋತ್ಪಾದಕರು ನಡೆಸಿದ ಪೈಶಾಚಿಕ ಹತ್ಯಾಕಾಂಡದ ಕುರಿತು ಪ್ರತಿಕ್ರಿಯಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ `ಸಾಂಪ್ರದಾಯಿಕವಾಗಿ ಬೇರೆಯಾಗಿದ್ದ ಭಾರತ-ಪಾಕಿಸ್ತಾನವನ್ನು ಬಹುಶಃ ಭಯೋತ್ಪಾದಕರ ಸವಾಲು ಒಂದುಗೂಡಿಸಬಹುದು’ ಎಂದರು. ಇದನ್ನು ಅಮೆರಿಕದ ಕುಹಕ ಎಂದು ಭಾವಿಸೋಣವೇ? ಪಾಕಿಸ್ತಾನ ಎಂದಾದರೂ ತಪ್ಪಿನಿಂದ ಪಾಠ ಕಲಿಯುವುದುಂಟೇ? ಭಯೋತ್ಪಾದನೆ ವಿರುದ್ಧ ಕೇವಲ ಭಾರತ-ಪಾಕಿಸ್ತಾನ ಒಂದುಗೂಡುವ ಮಾತೇಕೆ? ಹಾಗಾದರೆ, ಭಯೋತ್ಪಾದನೆ ವಿರುದ್ಧ ಇಡೀ ವಿಶ್ವ ಒಟ್ಟಾಗಲು ದೊಡ್ಡ ಬಲಿಯೇ ಬೀಳಬೇಕೇ? ಹಾಗಾಗುವುದಾದರೆ ಆಗಲಿ ಅನ್ನಬೇಕೇ? ಭಯಪಡುವುದು, ಬಚ್ಚಿಟ್ಟುಕೊಳ್ಳುವುದೆಲ್ಲ ಯಾತಕ್ಕೆ. ಏನಂತೀರಿ?

 

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top