ಮತಾಂತರ ಕುರಿತ ಈ ಮೌನ ಯಾಕೋ ಕಾಣೆ…

 

ಮತಾಂತರದ ವಿಚಾರದಲ್ಲಿ ಬ್ರಿಟಿಷ್ ಸಂಸದ ವೆಲ್ಬ್‌ಫೋರ್ಸ್ ರ ಪಳೆಯುಳಿಕೆಗಳಂತೆ ಆಡುವ ನಮ್ಮ ಸಂಸದರಿಗೆ ನಮ್ಮ ಸಂವಿಧಾನದ ಆಶಯ, ನ್ಯಾಯಾಲಯಗಳ ತೀರ್ಪು, ತಜ್ಞ ಆಯೋಗಗಳ ವರದಿಗಳು ಹೇಳಿದ ಸತ್ಯ ಯಾಕೆ ಪಥ್ಯವಾಗುವುದಿಲ್ಲ?

ವಿಧಾನಮಂಡಳದ ಅಧಿವೇಶನವೇ ಇರಲಿ, ಸಂಸತ್ ಅಧಿವೇಶನವೇ ಇರಲಿ, ಪ್ರತಿ ಬಾರಿಯೂ ಅದು ಮುಕ್ತಾಯವಾದಾಗ ನಮ್ಮ ಮನದಲ್ಲಿ ಅಚ್ಚಾಗಿ ಉಳಿಯುವುದು ವಿಷಾದದ ಛಾಯೆ ಮಾತ್ರ! ವಿಪರ್ಯಾಸವಲ್ಲವೇ? ಈಗಿನ ಬಹುತೇಕ ಶಾಸಕರು, ಸಂಸದರಿಗೆ ಜನರ ಸಮಸ್ಯೆ, ಪರದಾಟಗಳ ನೈಜ ಅರಿವಿಲ್ಲ. ಅರಿತುಕೊಳ್ಳುವ ಆಸಕ್ತಿಯೂ ಇಲ್ಲ. ಯಾವುದೇ ಗಂಭೀರ ವಿಚಾರದ ಪೂರ್ವಾಪರ ತಿಳಿಯುವ ಕುತೂಹಲವಿಲ್ಲ. ವೈಯಕ್ತಿಕ ವ್ಯವಹಾರಗಳನ್ನು ಬಿಟ್ಟು ಅಧ್ಯಯನಕ್ಕೆ ವ್ಯವಧಾನವಿಲ್ಲ. ಪಕ್ಷಗಳ ಎಲ್ಲೆಯನ್ನು ಮೀರಿ ಸತ್ಯದ ಪರ ಮಾತನಾಡುವ ಧಾರ್ಷ್ಟ್ಯ ತೋರುವುದಂತೂ ದೂರದ ಮಾತು. ನಮ್ಮ ಶಾಸನಸಭೆಗಳ ಅಧಿವೇಶನಗಳು ಪ್ರತಿ ಸಲವೂ ಹಳ್ಳ ಹಿಡಿಯುವುದಕ್ಕೆ ಇವಿಷ್ಟೇ ಕಾರಣ.ಈಗಷ್ಟೇ ಮುಕ್ತಾಯವಾದ ಸಂಸತ್ತಿನ ಚಳಿಗಾಲದ ಅಧಿವೇಶನವನ್ನೇ ನೋಡಿ. ಮರು ಮತಾಂತರದ ಗದ್ದಲಕ್ಕೆ ಇಡೀ ಅಧಿವೇಶನ ಬಲಿಯಾದದ್ದನ್ನು ಅವಲೋಕಿಸಿದರೆ ಮೇಲಿನ ಮಾತು ಮನದಟ್ಟಾಗುತ್ತದೆ. ವಾಸ್ತವದಲ್ಲಿ ಮತಾಂತರ ಮತ್ತು ಅದಕ್ಕೆ ಪೂರಕವಾಗಿ ಆಗಿರುವ ಪರಿಣಾಮಗಳ ಕುರಿತು ನಮ್ಮ ಸಂಸತ್ತಿನಲ್ಲಿ ಎಂದೋ ಚರ್ಚೆ ಆಗಬೇಕಿತ್ತು. ಆದರೂ ನಮ್ಮ ಸಂಸದರು ಅದನ್ನು ಗಂಭೀರವಾಗಿ ಪರಿಗಣಿಸದ್ದು ದುರದೃಷ್ಟಕರ ಎನ್ನದೇ ವಿಧಿಯಿಲ್ಲ. ಅದರಲ್ಲೂ ವಿಪಕ್ಷಗಳ ಸಂಸದರು ಮತಾಂತರದ ಮೂಲವನ್ನು ತಿಳಿಯುವ, ಆ ಕುರಿತು ಆಲೋಚನೆ ಮಾಡುವ ಕನಿಷ್ಠ ಪ್ರಯತ್ನವನ್ನೂ ಮಾಡದೆ, ಮತಾಂತರ ಕ್ರಿಯೆಗೆ ಪ್ರತಿಕ್ರಿಯೆ ರೂಪದಲ್ಲಿ ನಡೆಯುತ್ತಿರುವ ಮರು ಮತಾಂತರವೆಂಬ ವಿಷಯವಲ್ಲದ ವಿಷಯದ ಕುರಿತೇ ರಚ್ಚೆ ಹಿಡಿದು ಗದ್ದಲ ಮಾಡಿ ಸಂಸತ್ತಿನ ಅಧಿವೇಶನವನ್ನು ಆಪೋಶನ ತೆಗೆದುಕೊಂಡಿದ್ದು ಸೋಜಿಗವೇ ಸರಿ.ಈ ಮರು ಮತಾಂತರದ ವಿರೋಧಿ ಗದ್ದಲ ಗೋಧ್ರೋತ್ತರ ಹತ್ಯಾಕಾಂಡದ ವಿತಂಡವಾದವನ್ನು ಮತ್ತೊಮ್ಮೆ ನೆನಪಿನ ಹಲಗೆಯ ಮೇಲೆ ತಂದು ಕೂರಿಸಿತು. ಇದು ನಮ್ಮ ಸೆಕ್ಯುಲರ್ ಸಿದ್ಧಾಂತದ ದೌರ್ಬಲ್ಯ ಮತ್ತು ದೌರ್ಭಾಗ್ಯ ಅಂತ ಕರೆಯುವುದು ಉತ್ತಮ. ಏಕೆಂದರೆ ಆ ಹತ್ಯಾಕಾಂಡದ ಕುರಿತು ಮಾತನಾಡುವ ಯಾವುದೇ ವ್ಯಕ್ತಿ ಅಮಾಯಕ ಕರಸೇವಕರನ್ನು ಜೀವಂತ ಸುಟ್ಟು ಹಾಕಿದ, ಅಥವಾ ಗೋಧ್ರೋತ್ತರ ಗಲಭೆಗೆ ಮೂಲ ಕಾರಣವಾದ ಗೋಧ್ರಾ ರೈಲ್ವೆ ಅಗ್ನಿಕಾಂಡದ ಕುರಿತು ಚಕಾರವೆತ್ತುವುದಿಲ್ಲ. ಹಾಗಾದರೆ ಗೋಧ್ರಾ ಹತ್ಯಾಕಾಂಡದ ಪರಿಣಾಮ, ಹಿಂಸೆಯ ತೀವ್ರತೆ ಕಡಿಮೆ ಎನ್ನಲು ಸಾಧ್ಯವೇ? ಭಾರತ ಇನ್ನುಮುಂದಾದರೂ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂಬ ಇಚ್ಛೆ ಇದ್ದರೆ ಯಾವುದೇ ತೆರನಾದ ಹಿಂಸೆಯೇ ಇರಲಿ, ಯಾರೇ ಮಾಡಲಿ ಅದೇ ಪರಿಶುದ್ಧ ಅಂತಃಕರಣದಿಂದ ವಿರೋಧಿಸಬೇಕಲ್ಲವೇ? ಇಲ್ಲಿ ಎಂದೂ ಹಾಗಾಗಲು ಸಾಧ್ಯವೇ ಇಲ್ಲ. ಕಾರಣ ಇಷ್ಟೆ, ಇದರ ಹಿಂದಿರುವುದು ರಾಜಕೀಯ ಲಾಭದ ದೃಷ್ಟಿ ಮತ್ತು `ನಮ್ಮ ಮನೆಮಗ ಕಲ್ಲು ಹೊಡೆಯುತ್ತಾನೆ, ಹುಷಾರಾಗಿ ಪಾರಾಗಿ, ಸಾಧ್ಯವಾದರೆ ಹಿಂದಿನ ದಾರಿಯಲ್ಲಿ ಹೋಗುವುದು ಉತ್ತಮ’ ಎನ್ನುವ ಪರಮ ಅಸಹಾಯಕತೆಯ, ಶುದ್ಧ ಮೈಮರೆವಿನ, ಅಪೌರುಷ ನಿಲುವು. ಏನಂತೀರಿ?ಸಂಸದರಾಗುವವರಿಗೆ ಇತಿಹಾಸದ ಕನಿಷ್ಠ ಜ್ಞಾನವಾದರೂ ಇರಬೇಕು. ನಮ್ಮ ಕಾನೂನು, ಸಂವಿಧಾನಗಳ ಆಶಯ ಗೊತ್ತಿರಬೇಕು. ಇಲ್ಲಿನ ಮಣ್ಣಿನ ಗುಣದ ಗಂಧ ಇರಬೇಕು. ಅದೆಲ್ಲಕ್ಕಿಂತ ಮೊದಲು ಆತ್ಮಸಾಕ್ಷಿ ಜಾಗೃತವಾಗಿರಬೇಕು. ಕಣ್ಣು, ಕಿವಿಗಳನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬಾರದು. ಅದ್ಯಾವುದೂ ಇಲ್ಲದೇ ಹೋದರೆ ಆಗುವುದು ಇಂಥ ಅನಾಹುತವೇ.ಮರು ಮತಾಂತರದ ಕುರಿತು ನಮ್ಮ ಸಂಸದರು ಸಂಸತ್ತಿನಲ್ಲಿ ಗದ್ದಲ ಮಾಡುವ ಪೂರ್ವದಲ್ಲಿ, 1813ರ ಜೂನ್ 22ರಂದು ಬ್ರಿಟನ್ ಪಾರ್ಲಿಮೆಂಟಿನಲ್ಲಿ ಸಂಸದ ವಿಲಿಯಂ ವೆಲ್ಬ್‌ಫೋರ್ಸ್  ಏನು ಭಾಷಣ ಮಾಡಿದ್ದರು ಎಂಬುದನ್ನು ಮೆಲುಕು ಹಾಕಬೇಕು. ಅಂದು ಅವರು ಹೇಳಿದ್ದು “ಭಾರತದ ಅರವತ್ತು ಮಿಲಿಯನ್ ಆತ್ಮಗಳು ಸನ್ಮಾರ್ಗಕ್ಕಾಗಿ ಕಾಯುತ್ತಿವೆ. ಸುಳ್ಳು ದೇವರುಗಳ, ಅಪವಿತ್ರ ಆಚರಣೆಗಳ ಸಂಕೋಲೆಯಲ್ಲಿ ಸಿಲುಕಿ ಆ ಆತ್ಮಗಳು ವಿಲವಿಲ ಒದ್ದಾಡುತ್ತಿವೆ. ಅವರು ತಮ್ಮ ಮಕ್ಕಳನ್ನೇ ಬಲಿ ಕೊಡುತ್ತಿದ್ದಾರೆ. ತಮ್ಮ ಹೆಂಡಿರನ್ನು ಜೀವಂತ ಸುಡುತ್ತಾರೆ. ಸೈತಾನನ ಪ್ರಭಾವಕ್ಕೊಳಗಾಗಿ ಮಣ್ಣು, ಕಲ್ಲು, ಮರಗಳಿಂದ ಮಾಡಿದ ದೇವರುಗಳನ್ನು ಪೂಜಿಸುತ್ತಾರೆ. ಮುಕ್ತಿ ದೊರಕೀತೆಂದು ಪುರಿ ಜಗನ್ನಾಥನ ರಥದ ಚಕ್ರದಡಿ ಬಿದ್ದು ಸಾಯುತ್ತಾರೆ. ಅದಕ್ಕಾಗಿ ಪುರಿ ಜಗನ್ನಾಥ ರಥಯಾತ್ರೆಯನ್ನು ನಿಷೇಧ ಮಾಡಬೇಕು. ದೇವರ ಹೆಸರಿನಲ್ಲಿ ಅಶ್ಲೀಲ ನೃತ್ಯಗಳನ್ನು ಮಾಡುತ್ತಾರೆ. ಪ್ರಚೋದಕವಾಗಿ ಹಾಡುತ್ತಾರೆ. ಸೈತಾನನ ಪ್ರಭಾವದಿಂದಾಗಿ ಅವರಲ್ಲಿ ಒಂದಿಷ್ಟೂ ನೈತಿಕತೆ ಉಳಿದಿಲ್ಲ. ಕರ್ತವ್ಯ ಮತ್ತು ನೀತಿಗಳ ಬಗ್ಗೆ ಅರಿವೇ ಅವರಲ್ಲಿಲ್ಲ. ಎಲ್ಲರೂ ಕಳ್ಳರು ಮತ್ತು ಸುಳ್ಳರು. ಅಲ್ಲಿನ ಹೆಂಗಸರೆಲ್ಲ ವ್ಯಭಿಚಾರಿಗಳು. ಯಾರಲ್ಲೂ ನಿಯತ್ತಿಲ್ಲ. ಭಾರತವೆಂದರೆ ಹೃದಯಹೀನರ ಸಾಮ್ರಾಜ್ಯ. ಇಂಡಿಯನ್ನರೆಲ್ಲ ಹೇಡಿಗಳು. ಅವರೆಲ್ಲ ನಿಜವಾದ ಧರ್ಮಮಾರ್ಗದ ಅಭಾವದಿಂದಾಗಿ ಮಾಟ, ಮಂತ್ರ, ಮೂಢನಂಬಿಕೆಗಳ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಒಟ್ಟಾರೆ ಹೇಳುವುದಾದರೆ ಭಾರತೀಯರೆಲ್ಲ ಗುಣಹೀನ ಬದುಕು ನಡೆಸುತ್ತಿರುವ ಧೂರ್ತರು. ಇಂತಹ ಅನಾಗರಿಕ ಜನರಿಗೆ ಸತ್ಯದರ್ಶನ ಮಾಡಿಸುವುದು ನಮ್ಮದೇ ಕರ್ತವ್ಯ ಮತ್ತು ಜವಾಬ್ದಾರಿ. ಭಾರತೀಯರೆಲ್ಲರಿಗೆ ಸತ್ಯದ ಮಾರ್ಗ ತೋರುವ ಮೂಲಕ ಆ ಜನರ ಎಲ್ಲಾ ದೋಷಗಳನ್ನು ಬುಡಸಮೇತ ಹೋಗಲಾಡಿಸಬೇಕು. ಜೀವನದಲ್ಲಿ ಉನ್ನತಿ, ಸನ್ಮಾರ್ಗ ಬೇಕೆಂದರೆ ಅವರೆಲ್ಲ ಕ್ರೈಸ್ತರಾಗಿ ಮತಾಂತರಗೊಳ್ಳಬೇಕು. ಅದಕ್ಕಾಗಿ ಅನಾಗರಿಕರಿಂದ ಕೂಡಿದ ಹಿಂದುಸ್ಥಾನಕ್ಕೆ ಧರ್ಮಪ್ರಚಾರಕ ಪಾದ್ರಿಗಳನ್ನು ಕಳಿಸಲು ಅನುಮತಿ ಕೊಡಿ” ಎಂಬ ನಿರ್ಣಯ ಮಂಡಿಸಿ ವೆಲ್ಬ್‌ಫೋರ್ಸ್ ತಮ್ಮ ಭಾಷಣ ಮುಗಿಸುತ್ತಾರೆ. ಇದು 1813ರ ಜೂನ್ 22ರ ಹೌಸ್ ಆಫ್ ಕಾಮನ್ಸ್ (ಬ್ರಿಟಿಷ್ ಸಂಸತ್ತಿನ ಸಾಮಾನ್ಯ ಸಭೆ)ನ ನಡಾವಳಿಯಲ್ಲಿ ದಾಖಲಾಗಿದೆ.142541312
ವೆಲ್ಬ್‌ಫೋರ್ಸ್ ರು ಬ್ರಿಟಿಷ್ ಸಂಸತ್ತಿಗೆ ಕಟ್ಟಿಕೊಟ್ಟ ಭಾರತದ ಕಲ್ಪನೆ ಸತ್ಯಕ್ಕೆ ಸಮೀಪವಾದ್ದೇ? ಜಗತ್ತಿನ ಮೂಲೆಮೂಲೆಗಳಿಂದ ಬಂದ ವಿದೇಶಿ ಪ್ರವಾಸಿಗಳು ಹಾಡಿ ಹೊಗಳಿದಂತಹ, ನೂರೈವತ್ತು ವರ್ಷಗಳ ಕಾಲ ಭಾರತವನ್ನಾಳಿದ ಬ್ರಿಟಿಷ್ ಅಧಿಕಾರಿಗಳಿಂದ ಹಿಡಿದು ಭಾರತಕ್ಕೆ ದಾಳಿಯಿಟ್ಟ ಎಲ್ಲರೂ ಕಣ್ಣಾರೆ ಕಂಡು ಅಚ್ಚರಿಯಿಂದ ಗೌರವಿಸಿದ ಶ್ರೇಷ್ಠ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ದೇಶ ಮತಾಂಧರ ಕಣ್ಣಲ್ಲಿ ಹೇಗೆ ನಿಕೃಷ್ಟವಾಯಿತು ಅಲ್ಲವೆ? ಇದು ಭಾರತದಲ್ಲಿ ಮತಾಂತರ ಪರ್ವದ ಮೂಲ ಬೇರು. ಅಂದು ವೆಲ್ಬ್‌ಫೋರ್ಸ್ ಮಾಡಿದ ಭಾಷಣವೇ ಈಗ ಭಾರತದಲ್ಲಿ ನಡೆಯುತ್ತಿರುವ ಅವ್ಯಾಹತ ಮತಾಂತರ ಚಟುವಟಿಕೆಯ ಮೂಲ. ಆದರೆ ನಮ್ಮ ಸಂಸದರು ಮತ್ತು ಚಿಂತಕರೆನಿಸಿಕೊಂಡವರು ಮತಾಂತರದ ಪರಿಣಾಮವಾಗಿ ಉದ್ಭವಿಸಿರುವ ಮರು ಮತಾಂತರದ ಸಣ್ಣದೊಂದು ಪ್ರಸಂಗದ ಕುರಿತಷ್ಟೇ ಬೊಬ್ಬೆ ಹೊಡೆಯುತ್ತಾರೆ. ಏನು ವಿಚಿತ್ರ ನೋಡಿ.
ಇಲ್ಲಿ ಇನ್ನೂ ಒಂದು ಮುಖ್ಯವಾದ ಸಂಗತಿಯನ್ನು ಮತಾಂತರವಾದಿಗಳು ಮತ್ತು ಮರು ಮತಾಂತರ ವಿರೋಧಿಗಳು ಮರೆತುಬಿಟ್ಟಿದ್ದಾರೆ. ಹೀಗಾಗಿ ಮರು ಮತಾಂತರ ಸಂವಿಧಾನ ವಿರೋಧಿ ಎನ್ನುವ ವಾದವನ್ನು ಮುಂದಿಡುತ್ತಾರೆ.
ನಮ್ಮ ಸಂವಿಧಾನದ ಪ್ರಕಾರ ಮತಾಂತರವೇ ಕಾಯಿದೆಬಾಹಿರ. ಸಂವಿಧಾನದ ವಿಧಿ 25, ಉಪವಿಧಿ 1ರಲ್ಲಿ ಉಲ್ಲೇಖಿಸಿರುವ Propagate ಪದದ ಅರ್ಥ ಪ್ರಸಾರ ಮಾಡು ಎನ್ನುವುದೇ ಹೊರತು ಕನ್ವರ್ಟ್ ಮಾಡು, ಮತಾಂತರಿಸು ಎಂದಾಗುವುದಿಲ್ಲ. ಇದನ್ನು ಒರಿಸ್ಸಾ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎರಡೂ ಸ್ಪಷ್ಟವಾಗಿ ಹೇಳಿವೆ. ಒಡಿಶಾದಲ್ಲಿ ಸಾಮೂಹಿಕವಾಗಿ ಮತ್ತು ಆಕ್ಷೇಪಾರ್ಹ ರೀತಿಯಲ್ಲಿ ಕ್ರೈಸ್ತ ಮಿಷನರಿಗಳು ಮತಾಂತರ ಚಟುವಟಿಕೆಯಲ್ಲಿ ತೊಡಗಿದ್ದಾಗ ಅಲ್ಲಿನ ಸರ್ಕಾರ `ಧಾರ್ಮಿಕ ಸ್ವಾತಂತ್ರೃ ರಕ್ಷಣಾ ಕಾಯಿದೆ’ಯನ್ನು ಜಾರಿಗೊಳಿಸಿತು. ಅದನ್ನು ಪ್ರಶ್ನಿಸಿ ಮಿಷನರಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಆಗ ಒರಿಸ್ಸಾ ಹೈಕೋರ್ಟ್ ಮೇಲಿನಂತೆ ವ್ಯಾಖ್ಯಾನ ಮಾಡಿ, ಮಿಷನರಿಗಳ ವಾದ ಹುರುಳಿಲ್ಲದ್ದೆಂದು ತಳ್ಳಿಹಾಕಿತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಹೋದಾಗ ಜಸ್ಟಿಸ್ ಎ.ಎನ್.ರೇ ಅವರೂ ಹೈಕೋರ್ಟ್ ತೀರ್ಪನ್ನೇ ಎತ್ತಿ ಹಿಡಿಯುತ್ತಾರೆ, ಒಡಿಶಾ ಸರ್ಕಾರ ತಂದ ಧಾರ್ಮಿಕ ಸ್ವಾತಂತ್ರೃ ರಕ್ಷಣಾ ಕಾಯಿದೆ ಸಂವಿಧಾನಬದ್ಧವೆನ್ನುತ್ತಾರೆ. ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ `ಅಂತಃಸಾಕ್ಷಿಯ ಸ್ವಾತಂತ್ರೃ’ದ ಭರವಸೆ ನೀಡಿದೆ. ಅದು ಯಾವುದೇ ಒಂದು ಮತಧರ್ಮದ ಅನುಯಾಯಿಗಳಿಗೆ ಮಾತ್ರ ಅನ್ವಯವಾಗುವುದಿಲ್ಲ. ಅಥವಾ ಮತಾಂತರ ಮೂಲಭೂತ ಹಕ್ಕು ಎಂದು ಯಾರೂ ಭಾವಿಸುವ ಹಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಒರಿಸ್ಸಾ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಅವಲೋಕನಕ್ಕೂ ಪೂರ್ವದಲ್ಲಿ ನಾವು ಜಸ್ಟಿಸ್ ಡಾ. ಭವಾನಿ ಶಂಕರ ನಿಯೋಗಿ ನೇತೃತ್ವದ ಐವರು ಸದಸ್ಯರ ತನಿಖಾ ಆಯೋಗ 1966ರಲ್ಲಿ ನೀಡಿದ ವರದಿಯನ್ನೊಮ್ಮೆ ಗಮನಿಸಿದರೆ ಉತ್ತಮ. ಮಧ್ಯಪ್ರದೇಶದ ಆದಿವಾಸಿಗಳನ್ನು ಕ್ರೈಸ್ತ ಮಿಷನರಿಗಳು ದೊಡ್ಡ ಪ್ರಮಾಣದಲ್ಲಿ ಮತಾಂತರ ಮಾಡುತ್ತಿದ್ದಾರೆಂಬ ಕೂಗು ಕೇಳಿಬಂದಾಗ ಅಲ್ಲಿನ ಸರ್ಕಾರ ನಿಯೋಗಿ ಕಮಿಷನ್ ನೇಮಕ ಮಾಡಿತು. ಗಾಂಧಿವಾದಿಯಾಗಿದ್ದ ಎಸ್.ಕೆ. ಜಾರ್ಜ್ ಎಂಬ ಕ್ರೈಸ್ತ ಸಮುದಾಯದ ವ್ಯಕ್ತಿಯೂ ಆಯೋಗದಲ್ಲಿದ್ದರು. ಆಯೋಗ ಮಧ್ಯಪ್ರದೇಶದ ಹದಿನಾಲ್ಕು ಜಿಲ್ಲೆಗಳ ಎಪ್ಪತ್ತೇಳಕ್ಕೂ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಿತು. ಮುನ್ನೂರ ಎಪ್ಪತ್ತೈದು ಸಂಸ್ಥೆಗಳ ಆಂತರಿಕ ವರದಿಗಳನ್ನು ಪರಿಶೀಲಿಸಿತು. ಏಳುನೂರಾ ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಂದ ಹನ್ನೊಂದು ಸಾವಿರದ ಮುನ್ನೂರಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ವರದಿ ನೀಡಿತು.

“ಶಿಕ್ಷಣ, ವೈದ್ಯಕೀಯ ಸೇವೆ ಮತ್ತು ಉದ್ಯೋಗದ ಆಮಿಷ ಒಡ್ಡಿ ಮುಗ್ಧ ಮತ್ತು ಅಮಾಯಕರನ್ನು ಮತಾಂತರಿಸಲಾಗಿದೆ. ಮತಾಂತರ ಚಟುವಟಿಕೆಗೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ಹಣಕಾಸು ನೆರವು ಹರಿದು ಬರುತ್ತಿದೆ. ಮಿಷನರಿಗಳು ವಿದೇಶಿ ಸಂಸ್ಥೆಗಳಿಂದ ನಿಯಂತ್ರಿಸಲ್ಪಡುತ್ತಿದ್ದಾರೆ. ಎಲ್ಲ ಜಾತಿ, ಧರ್ಮ, ಮತ, ಪಂಥದವರನ್ನು ಸಮಾನವಾಗಿ ಕಾಣಬೇಕೆನ್ನುವ ಜಾತ್ಯತೀತ ವಾದದಲ್ಲಿ ಮಿಷನರಿಗಳಿಗೆ ನಂಬಿಕೆಯಿಲ್ಲ. ಮತಾಂತರದ ವಿಷಯದಲ್ಲಿ ಸಂವಿಧಾನದ ಆಶಯವನ್ನೂ ಮೀರುವ ಅಧಿಕಾರ, ಹಕ್ಕನ್ನು ಅವರು ಬಯಸುತ್ತಿದ್ದಾರೆ. ಭಾರತದಲ್ಲಿ ಪ್ರತ್ಯೇಕತಾ ಚಳವಳಿಗಳನ್ನು ಮಿಷನರಿಗಳು ಬೆಂಬಲಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ತೇಜೋವಧೆ ಮಾಡಲಾಗುತ್ತಿದೆ. ಬಂಡಾಯ, ಹಿಂಸೆ ಮತ್ತಿತರ ಚಟುವಟಿಕೆಗೆ ಪ್ರೋತ್ಸಾಹಿಸುವುದು ಕಂಡುಬಂದಿದೆ. ಇದು ಇಲ್ಲಿನ ಪ್ರಜಾಪ್ರಭುತ್ವ ಮತ್ತು ಶಾಂತಿ ಸಹಬಾಳ್ವೆಗೆ ಅಪಾಯಕಾರಿ. ಆದ್ದರಿಂದ ಮತಾಂತರ ತಡೆಗಟ್ಟುವ ಶಾಸನ ರೂಪಿಸಬೇಕು” ಎಂದು ನಿಯೋಗಿ ಜಸ್ಟಿಸ್ ನಿಯೋಗಿ ಕಮಿಷನ್ ವರದಿ ಹೇಳಿತು. ಆ ವರದಿ ಎಲ್ಲ ಸರ್ಕಾರಗಳಿಗೂ ಅಪಥ್ಯವೆನಿಸಿತು. ಅವರೇ ಈಗ ಮರು ಮತಾಂತರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅಷ್ಟೇ ಅಲ್ಲ ಮತಾಂತರ ತಡೆ ಕಾಯ್ದೆ ರೂಪಿಸುವುದಕ್ಕೂ ವಿರೋಧ ಮಾಡುತ್ತಿದ್ದಾರೆ. ಈ ದ್ವಂದ್ವ ಏಕೆ? ಸಂಸತ್ತಿನಲ್ಲಿ ಮರು ಮತಾಂತರದ ವಿಚಾರವಾಗಿ ಜೋರು ಗದ್ದಲ ನಡೆಯುತ್ತಿದ್ದಾಗ ನಿವೃತ್ತ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಟ್ವೀಟ್ ಮಾಡಿ “ಮತಾಂತರ ನಿಷೇಧದ ವಿಚಾರವಾಗಿ ಸಂಸತ್ತಿನಲ್ಲಿ ಗದ್ದಲ ನಡೆಯುವುದರಿಂದ ಒಳಿತೇ ಆಗಲಿದೆ. ಮತಾಂತರದ ವಿಷಯದಲ್ಲಿ ನಿಗೂಢವಾಗಿದ್ದ ಪಕ್ಷಗಳ ನಿಲುವು ಬಟಾಬಯಲಾದರೇ ಒಳ್ಳೆಯದು, ಈ ವಿಷಯದಲ್ಲಿ ಯಾವ ಪಕ್ಷದ ನಿಲುವು ಏನೆಂಬುದು ದೇಶಕ್ಕೆ ಗೊತ್ತಾದಂತಾಗುತ್ತದೆ” ಎಂದಿದ್ದರು. ನಿಜ ತಾನೆ?

(ಮುಂದುವರೆಯುವುದು
)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top