ಪ್ರಧಾನಿ ಮೋದಿ ಈಗಾಗಲೆ 2047ರಲ್ಲಿದ್ದಾರೆ. ನಾವು?

ಇಂದು ಇಡೀ ವಿಶ್ವವನ್ನು ಆಳುತ್ತಿರುವುದೇ ಜ್ಞಾನ. ಭಾರತವು ಯೋಗ, ಆಧ್ಯಾತ್ಮದಂಥ ಶಕ್ತಿಯ ಮೂಲಕ ವಿಶ್ವದ ಮೇಲೆ ಪ್ರಭಾವ ಬೀರಲು ಸಾಧ್ಯವಿದೆ. ಜೊತೆಗೆ ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಗಣನೀಯ ಪ್ರಮಾಣದಲ್ಲಿ ಪ್ರವೇಶಿಸಬೇಕಿದೆ. ಭಾರತವೇನಾದರೂ ಎಐ ಕ್ಷೇತ್ರದಲ್ಲಿ ಪಾರಮ್ಯ ಮೆರೆದರೆ ಕಾನೂನುಗಳ ನಿರ್ಬಂಧ ಇಲ್ಲದೆಯೇ ನೈತಿಕತೆಯನ್ನು ಮೆರೆಯಬಹುದು.
********************************
2023ರ ಡಿಸೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿಯವರು, ದೇಶದ ವಿಶ್ವವಿದ್ಯಾಲಯಗಳ ಕುಲಪತಿಗಳು, ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದರು. ಅವರು ಹೇಳಿದ್ದು: “ಸತ್ಯಾಗ್ರಹ, ಕ್ರಾಂತಿಕಾರಿ ಮಾರ್ಗ, ಅಸಹಕಾರ, ಸ್ವದೇಶಿ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಗಳಂತಹ ಅನೇಕ ಮಾರ್ಗಗಳು ಭಾರತವನ್ನು ಸ್ವಾತಂತ್ರ್ಯದೆಡೆಗೆ ಕೊಂಡೊಯ್ದವು. ಈ ಸಮಯದಲ್ಲಿ ಕಾಶಿ ವಿದ್ಯಾಪೀಠ, ಲಖನೌ, ವಿಶ್ವಭಾರತಿ, ಗುಜರಾತ್, ನಾಗಪುರ, ಅಣ್ಣಾಮಲೈ, ಆಂಧ್ರ ಹಾಗೂ ಕೇರಳ ವಿಶ್ವವಿದ್ಯಾಲಯಗಳು ದೇಶದ ಚೈತನ್ಯವನ್ನು ಜಾಗೃತಗೊಳಿಸಿದವು. ಇಲ್ಲಿಂದ ಹೊರಬಂದ ಪ್ರತಿ ವಿದ್ಯಾರ್ಥಿಯೂ ತನ್ನ ಮನದಲ್ಲಿ ಸ್ವಾತಂತ್ರ್ಯ ಪ್ರಾಪ್ತಿಯ ಜ್ಯೋತಿಯನ್ನು ಹೊತ್ತಿಸಿಕೊಂಡಿದ್ದ. ಇಂದು ಅದೇ ರೀತಿಯಲ್ಲಿ ದೇಶದ ಪ್ರತಿ ನಾಗರಿನಕೂ 2047ರ ಹೊತ್ತಿಗೆ ವಿಕಸಿತ ಭಾರತವನ್ನಾಗಿಸುವ ಗುರಿಯನ್ನು ಹೊತ್ತು ಮುನ್ನಡೆಯಬೇಕು. ಎಲ್ಲರ ಗುರಿ, ಪ್ರಯತ್ನಗಳೂ ಇದೊಂದೇ ಆಗಿರಬೇಕು. ಭಾರತದ ವಿಕಸಿತವಾಗಬೇಕಾದರೆ ತನ್ನನ್ನು ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು”.
ಪ್ರಧಾನಿಯವರು ಈ ಮಾತಿನ ಭಾವಾರ್ಥ, ಭಾರತ ಇನ್ನೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧವಾಗುತ್ತಿದೆ ಎಂದಷ್ಟೆ. ಹಾಗೆ ನೋಡಿದರೆ, ಸ್ವಾತಂತ್ರ್ಯನಂತರ ಜನಿಸಿ, ಭಾರತದ ಪ್ರಧಾನಿ ಹುದ್ದೆ ಸ್ಥಾನಕ್ಕೆ ಏರಿದ ಮೊದಲಿಗರು ಎಂಬ ಅಗ್ಗಳಿಕೆ ಕೂಡ ನರೇಂದ್ರ ಮೋದಿ ಅವರದ್ದೆ. ನೆಹರು ಅವರಿಂದ ಮನಮೋಹನ ಸಿಂಗ್ ವರೆಗೆ ಎಲ್ಲ ಪ್ರಧಾನಿಗಳು 1947ಕ್ಕಿಂತ ಮುಂಚಿತವಾಗಿಯೇ ಜನಿಸಿದವರು. ಈ ಅರ್ಥದಲ್ಲಿ ಮೋದಿ ಅವರು ದೇಶದ ಹೊಸ ಪೀಳಿಗೆಯ, ಹೊಸ ಆಕಾಂಕ್ಷೆಯ, ಹೊಸ ನಿರೀಕ್ಷೆಗಳ ಪ್ರಧಾನಿ ಕೂಡ. ಒಂದು ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ 75 ವರ್ಷ ದಾಟಿದವರ ಸಂಖ್ಯೆ ಈಗ ಸುಮಾರು 3 ಕೋಟಿಯಷ್ಟಿದೆ. ಅಂದರೆ ಇವರೆಲ್ಲರೂ ಸ್ವಾತಂತ್ರ್ಯಪೂರ್ವದಲ್ಲಿ ಜನಿಸಿದವರು. ಆದರೆ ಸ್ವಾತಂತ್ರ್ಯ ಹೋರಾಟದ ನೆನಪಾದರೂ ಉಳ್ಳವರು ಅಂದರೆ ಸುಮಾರು 90 ವರ್ಷ ವಯಸ್ಸಿನವರು ಇರುವುದು ಕೇವಲ ಅಂದಾಜು 13 ಲಕ್ಷ. ಇನ್ನು, ನಿಜವಾಗಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರ ಸಂಖ್ಯೆ ದೇಶದಲ್ಲಿ ಬೆರಳೆಣಿಕೆಯತ್ತ ಸಾಗಿದೆ. ಈ ಮಹಾನ್ ಪೀಳಿಗೆಯು ದೇಶಕ್ಕೆ ಸ್ವಾತಂತ್ರ್ಯವನ್ನು ಪಡೆಯುವ ಕಾರ್ಯ ಮಾಡಿದೆ.
ಈಗಿನ ಪೀಳಿಗೆಯ ಮೇಲೆ ಹೊಸ ಹೊಣೆಗಾರಿಕೆಯಿದೆ. ದೇಶವನ್ನು ವಿಕಸಿತಗೊಳಿಸಬೇಕೆಂದರೆ ಭಾರತದ ಆಧಾರ ಯಾವುದು? ಭಾರತ ಎಂದರೆ, ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಜವಾಬ್ದಾರಿಯುತ ದೇಶ ಎಂಬ ಅರ್ಥವೂ ಇದೆ. ಭಾರತವು ಇಡೀ ವಿಶ್ವಕ್ಕೆ ಏನಾದರೂ ಕೊಡುಗೆ ನೀಡಬಹುದು ಎನ್ನುವುದಿದ್ದರೆ ಅದು ಜ್ಞಾನ. ಕಾಕತಾಳೀಯವೆಂಬಂತೆ ಇದು ಜ್ಞಾನದ ಯುಗ. ಇಡೀ ವಿಶ್ವಕ್ಕೆ ಬೇಕಾಗಿರುವುದು ಜ್ಞಾನವೆ ಹಾಗೂ ವಿಶ್ವದಲ್ಲಿ ಇಂದು ಮೌಲ್ಯ ಹೆಚ್ಚಾಗುತ್ತಿರುವುದು ಜ್ಞಾನಕ್ಕೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಜ್ಞಾನವರ್ಧನೆಯ ಕೇಂದ್ರಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಆದರೆ ಅವುಗಳ ಫಲಿತಾಂಶವು ಅಲ್ಲಿಂದ ಹೊರಬಂದ ವಿದ್ಯಾರ್ಥಿಗಳ ಪರಿಶ್ರಮದ ಪ್ರತಿಫಲದ ನಂತರ ಕಾಣುವುದರಿಂದ ಇದನ್ನು ನೋಡಲು ವಿಶೇಷ ಪ್ರಯತ್ನ ಮಾಡಬೇಕಾಗುತ್ತದೆ.
ಕಳೆದ 10 ವರ್ಷದಲ್ಲಿ ದೇಶದಲ್ಲಿ ಪ್ರತಿ ವಾರಕ್ಕೆ ಒಂದರಂತೆ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಪ್ರತಿ ದಿನ ಎರಡು ಹೊಸ ಕಾಲೇಜುಗಳು ಆರಂಭವಾಗಿವೆ. ಲಡಾಖ್ನಲ್ಲಿ ಸ್ವಾತಂತ್ರ್ಯಭಾರತದಲ್ಲೆ ಮೊದಲ ಬಾರಿಗೆ ವಿಶ್ವವಿದ್ಯಾಲಯವೊಂದು ಆರಂಭಗೊಂಡಿದೆ. 121 ಹೊಸ ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾದ ಪರಿಣಾಮ ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆ ಶೇ.53 ಹೆಚ್ಚಳವಾಯಿತು. ಅದೇ ರೀತಿ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಸಂಖ್ಯೆ ಶೇ.80 ಹೆಚ್ಚಳವಾಯಿತು. ಎಲ್ಲ ವಿವಿಗಳಿಗೂ ಸಮಾನ ಪರೀಕ್ಷೆಗಳು ಆರಂಬವಾದವು, ಕೌಶಲ ಭಾರತ ಯೋಜನೆಯಡಿ 1.4 ಕೋಟಿ ಯುವಕರು ತರಬೇತಿ ಪಡೆದರು. ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರ ಭಾಗವಹಿಸುವಿಕೆ (ಗ್ರಾಸ್ ಎನ್ರೋಲ್ಮೆಂಟ್ ರೇಷಿಯೊ-ಜಿಇಆರ್ ಶೇ.28 ಹೆಚ್ಚಳ) ಹೆಚ್ಚಾಯಿತು. 2024-25ರ ಬಜೆಟ್ನಲ್ಲೇ 7 ಹೊಸ ಐಐಟಿಗಳು, 7 ಹೊಸ ಐಐಎಂಗಳು, 16 ಹೊಸ ಐಐಐಟಿಗಳನ್ನು ಘೋಷಿಸಲಾಯಿತು. ಎಲ್ಲಕ್ಕಿಂತ ಹೆಚ್ಚಾಗಿ, ದೇಶದಲ್ಲಿ ಹೊಚ್ಚ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಲಾಯಿತು. ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಮುಗಿಯುವುದೇ ಇಲ್ಲ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜಾರಿಯಾಗಲಿಲ್ಲ. ದೇಶಾದ್ಯಂತ ಲಕ್ಷಾಂತತರ ಜನರಿಂದ ಸಲಹೆಗಳನ್ನು ಪಡೆದು ಅದನ್ನು ಕರಡು ರೂಪಕ್ಕಿಳಿಸಿ, ಮತ್ತೆ ಸಾರ್ವಜನಿಕ ಪರಿಶೀಲನೆಗೆ ಒಡ್ಡಲಾಯಿತು. ರಾಜ್ಯ ಸರ್ಕಾರಗಳ ವ್ಯವಸ್ಥೆಯಲ್ಲೂ ಸಮಾಲೋಚನೆ ಸಭೆಗಳನ್ನು ನಡೆಸಲಾಯಿತು. ಅನಂತರವಷ್ಟೆ ಎನ್ಇಪಿ ಜಾರಿ ಮಾಡಲಾಯಿತು. ಈಗೇನೊ ರಾಜಕೀಯ ಕಾರಣಗಳಿಗಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎನ್ಇಪಿಯನ್ನು ವಿರೋಧಿಸುತ್ತಿದೆ. ಅಚ್ಚರಿಯ ವಿಚಾರವೆಂದರೆ ಎನ್ಇಪಿ ಕುರಿತು ದೇಶಾದ್ಯಂತ ಸಮಾಲೋಚನೆ ಸಭೆಗಳು ನಡೆದಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು, ಸ್ವತಃ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಈಗ ನೋಡಿದರೆ, ಎನ್ಇಪಿ ಅನುಷ್ಠಾನಕ್ಕೂ ಮುನ್ನ ಸಾರ್ವಜನಿಕ ಚರ್ಚೆಯನ್ನೇ ಮಾಡಿಲ್ಲ ಎಂಬ ಹಸಿಸುಳ್ಳನ್ನು ಸ್ವತಃ ಸಿದ್ದರಾಮಯ್ಯ ಅವರಾದಿಯಾಗಿ ಇಡೀ ಸಚಿವ ಸಂಪುಟ ಸುಳ್ಳಿನ ಸರಣಿ ಪಟಾಕಿ ಹೊಡೆಯುತ್ತಿದೆ. ಅಂತರಾತ್ಮದ ಮಾತನ್ನು ಕೇಳುವ ಯಾರೊಬ್ಬರೂ ಇಷ್ಟು ಸುಳ್ಳು ಹೇಳಲು ಸಾಧ್ಯವಿಲ್ಲ ಬಿಡಿ.
ಇಂದು ಇಡೀ ವಿಶ್ವವನ್ನು ಆಳುತ್ತಿರುವುದೇ ಜ್ಞಾನ. ಭಾರತವು ಯೋಗ, ಅಧ್ಯಾತ್ಮದಂತಹ ಶಕ್ತಿಯ ಮೂಲಕ ವಿಶ್ವದ ಮೇಲೆ ಪ್ರಭಾವ ಬೀರಲು ಸಾಧ್ಯವಿದೆ. ಇದರ ಜತೆಗೆ ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತವು ತನ್ನ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಹೆಚ್ಚಿಸಿಕೊಳ್ಳಬೇಕು ಎನ್ನುವುದಕ್ಕಿಂತಲೂ, ಗಣನೀಯ ಪ್ರಮಾಣದಲ್ಲಿ ಪ್ರವೇಶಿಸಬೇಕಿದೆ. ಕೃತಕಬುದ್ಧಿಮತ್ತೆಯಂತಹ ಕ್ಷೇತ್ರಗಳು ಪ್ರಪಂಚವನ್ನು ಆಳುವ ಮುನ್ಸೂಚನೆ ನೀಡಿವೆ. ಆದರೆ ಈ ತಂತ್ರಜ್ಞಾನವನ್ನು ಯಾರು ಈಗ ಅಭಿವೃದ್ಧಿಪಡಿಸುತ್ತಿದ್ದಾರೆಯೋ ಅವರಿಗೆ ಉದ್ಯಮದ ಮೇಲೆ, ತಮ್ಮ ಲಾಭದ ಮೇಲೆ ಗಮನವಿದ್ದಂತೆ ಮಾತ್ರ ಕಾಣುತ್ತಿದೆ. ಯಾವುದೋ ಕಾನೂನು ನಿರ್ಬಂಧಿಸುತ್ತದೆ ಎನ್ನುವ ಕಾರಣಕ್ಕಾಗಿ ಮಾತ್ರವೇ ಅನೇಕರು ನೈತಿಕತೆಯ ಪರಿಧಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತವೇನಾದರೂ ಎಐ ಕ್ಷೇತ್ರದಲ್ಲಿ ಪಾರಮ್ಯ ಮೆರೆದರೆ ಕಾನೂನುಗಳ ನಿರ್ಬಂಧವೇ ಇಲ್ಲದೆಯೇ ನೈತಿಕತೆಯನ್ನು ಮೆರೆಯಬಹುದು. ಏಕೆಂದರೆ ಭಾರತದ ಆಲೋಚನೆಯಲ್ಲೇ ನೈತಿಕತೆ, ಪರೋಪಕಾರದಂತಹ ಮೌಲ್ಯಗಳು ಅಂತರ್ಗತವಾಗಿವೆ. ಭಾರತದ ಮೆದುಳುಗಳು ವಿಶ್ವದ ವಿವಿಧೆಡೆ ಎಐ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿವೆ. ಆದರೆ ಭಾರತದಲ್ಲಿ ಇದರ ಅಭಿವೃದ್ಧಿ ಶಿಶು ಹಂತದಲ್ಲಿದೆ.
ಇದು ಆಗಲೇ ಹೇಳಿದಂತೆ ಒಂದೆರಡು ವರ್ಷಗಳಲ್ಲಿ ಆಗುವ ವಿಚಾರವಲ್ಲ. ಇಂದು ಶಿಕ್ಷಣ ಕ್ಷೇತ್ರದಲ್ಲಿ ನರೇಂದ್ರ ಮೋದಿಯವರು ಬಿತ್ತಿರುವ ಬೀಜ ಫಲ ನೀಡಲು ದಶಕಗಳೇ ಬೇಕಾಗುತ್ತವೆ. ಈಗ ಸ್ಥಾಪನೆಯಾಗಿರುವ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಹೊರಬಂದ ಪ್ರತಿ ವಿದ್ಯಾರ್ಥಿಯೂ ತನ್ನ ಜ್ಞಾನ, ಕೌಶಲವನ್ನು ದೇಶದ ಏಳಿಗೆಗೆ ಬಳಸುವ ಸಂಕಲ್ಪ ಮಾಡಿದರಷ್ಟೇ ಇದು ಸಾಧ್ಯ. ಐಐಟಿಗಳನ್ನು ವ್ಯಾಸಂಗ ಮಾಡಿದವರನ್ನು ವಿದೇಶಿ ಕಂಪನಿಗಳು ದೊಡ್ಡ ಸಂಬಳಕ್ಕೆ ನೇಮಿಸಿಕೊಳ್ಳುವುದು ಸಾಮಾನ್ಯ. ಅದು ಸಂಪೂರ್ಣ ತಪ್ಪು ಎನ್ನಲಾಗದು. ಆದರೆ ಹೆಚ್ಚಿನ ಪ್ರಮಾಣದ, ಟಾಪ್ ವಿದ್ಯಾರ್ಥಿಗಳು ಭಾರತದಲ್ಲೇ ಉಳಿಯುವ ದೃಢ ಪ್ರತಿಜ್ಞೆ ಮಾಡಲೇಬೇಕು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಕೆಲವು ವರ್ಷಗಳ ಹೋರಾಟದಿಂದಲ್ಲ. ನಾಲ್ಕೈದು ಪೀಳಿಗೆ ತನ್ನಿಡೀ ಜೀವನವನ್ನು ಸ್ವಾತಂತ್ರ್ಯಕ್ಕೆ ಗಂಧದ ಕೊರಡಿನಂತೆ ತೇದಿದೆ. ಬತ್ತಿಯಂತೆ ತನ್ನನ್ನು ತಾನು ಉರಿಸಿಕೊಂಡು ಸ್ವಾತಂತ್ರ್ಯ ಜ್ಯೋತಿಯನ್ನು ಬೆಳಗಿದೆ. ಈಗೇನು ನೇಣಿಗೆ ಕೊರಳೊಡ್ಡುವ, ಜೈಲಿಗೆ ಹೋಗುವ, ಸಾವರ್ಕರರಂತೆ ಕಾಲಾಪಾನಿ ಶಿಕ್ಷೆಗೆ ಒಳಗಾಗುವ ಅವಶ್ಯಕತೆಯಂತೂ ಇಲ್ಲ. ತಮ್ಮ ಜೀವನವನ್ನೂ ಜೀವಿಸುತ್ತ ದೇಶದ ಏಳಿಗೆಯೊಂದನ್ನೇ ಗುರಿಯಾಗಿಸಿಕೊಂಡರೆ ಸಾಕಿದೆ. ಇದನ್ನೇ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಂದ, ವಿಶ್ವವಿದ್ಯಾಲಯಗಳ ಅಕಡೆಮಿಕ್ ವಲಯದಿಂದ ಅಪೇಕ್ಷಿಸುತ್ತಿರುವುದು.
2047ರ ಕುರಿತು ಆಲೋಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕೇವಲ ಉಪದೇಶ ಮಾಡುತ್ತಿಲ್ಲ. ಇತ್ತೀಚೆಗೆ ನಡೆದ ಇಂಡಿಯಾ ಟುಡೆ ಕಾನ್ಕ್ಲೇವ್ನಲ್ಲಿ ಪ್ರಧಾನಿ ಭಾಗವಹಿಸಿದ್ದರು. ಆರಂಭದಲ್ಲಿ ಮಾತನಾಡಿದ ಪತ್ರಿಕೆಯ ಮುಖ್ಯಸಂಪಾದಕ ಅರುಣ್ ಪೂರಿ, ಪ್ರಧಾನಿಯವರು ಇತ್ತೀಚೆಗೆ ಕೇರಳ, ತಮಿಳುನಾಡಿನಲ್ಲೆಲ್ಲ ವ್ಯಾಪ್ಕ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಈಗಾಗಲೇ 2024ರ ಲೋಕಸಭೆ ಚುನಾವಣೆ ಫಲಿತಾಂಶ ನಿಗದಿಯಾದಂತಿದೆ. (ಅಂದರೆ ಮೋದಿ ಸರ್ಕಾರ ಪುನರಾಯ್ಕೆ ಬಹುತೇಕ ಖಚಿತವಾಗಿದೆ). ಪ್ರಧಾನಿಯವರೇನು 2029ರ ಚುನಾವಣೆಗೆ ಪ್ರಚಾರ ಮಾಡುತ್ತಿದ್ದರೇ? ಎನ್ನುವಂತೆ ತಮಾಷೆ ಮಾಡಿದರು.
ನಂತರ ಮಾತನಾಡಿದ ಪ್ರಧಾನಿ ಮೋದಿ, ಅರುಣ್ ಪೂರಿಯವರನ್ನು ಉದ್ದೇಶಿಸಿ, ʼನೀವಿನ್ನೂ 2029ರಲ್ಲೇ ಇದ್ದೀರ? ನಿಮ್ಮ ಎಲ್ಲ ಪತ್ರಕರ್ತರನ್ನೂ ದೇಶಾದ್ಯಂತ ಕಳಿಸಿ ಪರಿಶೀಲನೆ ನಡೆಸಲು ಹೇಳಿ. ಮೋದಿ ಏನೆಂದು ಹುಡುಕುವ ಪ್ರಯತ್ನವನ್ನು ಅವರು ಮಾಡಲಿ. ನಾನಾಗಲೇ 2047ರ ಬಗ್ಗೆ ಕಾರ್ಯಪ್ರವೃತ್ತನಾಗಿದ್ದೇನೆʼ ಎಂದರು. ಪ್ರಧಾನಿ ಮೋದಿ ಈಗಾಗಲೆ 2047ರಲ್ಲಿದ್ದಾರೆ. ನಾವು ಯಾವಾಗ?
#hariprakashkonemane #nimmahpk
#NarendraModi #narendramodi_primeminister #ArtificialIntelligence #economicgrowth #ViksitBharatSankalpYatra #India2047

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top