ನವ ಸಾಮ್ರಾಟ ಪ್ರಧಾನಿ ನರೇಂದ್ರ ಮೋದಿ

ಮನೆಯ ಯಜಮಾನನ ವ್ಯಕ್ತಿತ್ವದಿಂದ ಇಡೀ ಕುಟುಂಬಕ್ಕೆ ಹೇಗೆ ಗೌರವ ಮತ್ತು ರಕ್ಷಣೆ ದಕ್ಕುವುದೋ ಅದೇ ರೀತಿ ಒಬ್ಬ ನಾಯಕನ ವ್ಯಕ್ತಿತ್ವವೂ ಇಡೀ ದೇಶಕ್ಕೆ ಅಂಥದೇ ಗೌರವವನ್ನು ದಕ್ಕಿಸಿಕೊಡುತ್ತದೆ. ದೇಶದ ನಾಯಕನ ಬಗ್ಗೆ ಗೌರವವಿದ್ದರೆ ಇತರ ಯಾವುದೇ ದೇಶ ಆ ದೇಶಕ್ಕೆ ಕೇಡು ಬಗೆಯಲಾರದು. ಸಮಸ್ಯೆ ಬಂದ ಮೇಲೆ ಪರಿಹರಿಸುವದು ಬೇರೆ, ಆದರೆ ಸಮಸ್ಯೆಯೇ ಬಾರದಂತೆ ತಡೆಯುವುದು ಮಹತ್ವದ ಕೆಲಸ.
********************************
ಆಹಾರ ನಿದ್ರಾ ಭಯ ಮೈಥುನಂ ಚ
ಸಮಾನಮೇತತ್ ಪಶುಭಿರ್ನರಾಣಾಂ |
ಏಕೋ ವಿವೇಕೋ ಹ್ಯಧಿಕೋ ಮನುಷ್ಯೇ
ತೇನೈವ ಹೀನಾಃ ಪಶುಭಿಃ ಸಮಾನಾಃ ||
ಆಹಾರ ಸೇವನೆ, ನಿದ್ದೆ ಮಾಡುವುದು, ಭಯಪಡುವುದು, ಗಂಡು-ಹೆಣ್ಣು ಕೂಡುವುದು ಇತ್ಯಾದಿ ಅನೇಕ ಶಾರೀರಿಕ ಕ್ರಿಯೆಗಳಲ್ಲಿ ಮನುಷ್ಯನಿಗೂ ಮತ್ತು ಪ್ರಾಣಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಆದರೆ, ವಿವೇಕ ಅಂದರೆ ಕಾರ್ಯಾಕಾರ್ಯ ಪ್ರಜ್ಞೆ ಪ್ರಾಣಿಗಳಲ್ಲಿಲ್ಲ. ಮನುಷ್ಯನಲ್ಲಿದೆ. ಅಂತಹ ವಿವೇಕ ಇಲ್ಲದೇ ಇರುವ ಮನುಷ್ಯ ಪ್ರಾಣಿಗಳಿಗೆ ಸಮಾನನಾಗುತ್ತಾನೆ ಎನ್ನುತ್ತದೆ ಹಿತೋಪದೇಶದ ಈ ಮಾತು.
ಮನುಷ್ಯನ ವರ್ತನೆಗಳಿಗೆ ವಿವೇಕ ಬರುವುದು ಧರ್ಮದ ಕಾರಣದಿಂದ. ಧರ್ಮವನ್ನು ಅನುಸರಿಸಲು ಒಬ್ಬೊಬ್ಬರಿಗೂ ಒಂದೊಂದು ಮಾರ್ಗವಿರುತ್ತದೆ. ಎಲ್ಲರಿಗೂ ಸೂಕ್ತವೆನಿಸುವ, ತಲುಪಲು ಸಾಧ್ಯವಾಗುವ, ಸುಲಭಮಾರ್ಗವೆಂದರೆ ಅದು ಧಾರ್ಮಿಕ ಕೇಂದ್ರಗಳು ಮತ್ತು ದೇವಾಲಯಗಳು. ಇವು ಏಕಕಾಲದಲ್ಲಿ ಸಾಮಾನ್ಯ ಮನುಷ್ಯರ, ನಿತ್ಯಜೀವನದ ಕಷ್ಟಗಳಿಗೂ, ವೈಯಕ್ತಿಕ ಬದುಕಿನ ಎಲ್ಲ ಹತಾಶೆಗಳಿಗೂ ಸಮಾಧಾನ/ ಸಾಂತ್ವನ ನೀಡುವ ಜಾಗಗಳಾಗಿಯೂ, ಅಲೌಕಿಕ, ಆದ್ಯಾತ್ಮಿಕ ಮತ್ತು ತಾತ್ವಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಜಾಗಗಳಾಗಿಯೂ, ಒಟ್ಟು ಮನುಷ್ಯಲೋಕದ ನಕಾರಾತ್ಮಕತೆಗಳನ್ನು ದೂರ ಸರಿಸಿ ಸಕಾರಾತ್ಮಕತೆಯನ್ನು ತುಂಬಿ, ಎಲ್ಲರ ಒಳಿತು ಬಯಸುತ್ತಾ ವಿವೇಕಯುತವಾಗಿ ಬದುಕುವಂತೆ ಮಾರ್ಗದರ್ಶನ ಮಾಡುವ ಸಾಂಸ್ಕೃತಿಕ ಕೇಂದ್ರಳಾಗಿಯೂ ಇವೆ. ಮಂದಿರಗಳು, ಧಾರ್ಮಿಕ ಕೇಂದ್ರಗಳು ಇಲ್ಲದಿದ್ದರೆ ಮನುಷ್ಯರು ಅಸಹಾಯಕ ಗಳಿಗೆಗಳಲ್ಲಿ ಮೊರೆಹೋಗಲು ಜಾಗಗಳೇ ಇರದೇ ಬಂಧುಗಳಿಲ್ಲದ ಅನಾಥರಂತೆ ಇರಬೇಕಾಗುತ್ತಿತ್ತು. ಇಂತಹ ದೇವಾಲಯಗಳನ್ನು, ಧಾರ್ಮಿಕ ಕೇಂದ್ರಗಳನ್ನೂ ನಿರ್ಮಿಸುವುದೆಂದರೆ ಅದು ಮನುಷ್ಯರ ಒಳಿತಿಗೆ ಮಾಡುವ ಕೆಲಸವೇ ಹೊರತು ಕೆಡುಕಿಗಲ್ಲ. ಮಂದಿರಗಳೇಕೆ? ಎನ್ನುವವರು ಅರ್ಥಮಾಡಿಕೊಳ್ಳಬೇಕಾದ ಮೂಲ ವಿಷಯ ಇದು. ಧಾರ್ಮಿಕ ಕೇಂದ್ರಗಳು, ದೇವಾಲಯಗಳು ಅದೇಕೆ ಬೇಕು? ಎಂದು ಕೇಳುವವರಿಗೂ ಒಳಿತನ್ನೇ ಬಯಸುತ್ತವೆ ಎಂಬುದು ಬೇರೆ ಮಾತು.
ಧಾರ್ಮಿಕ ಕೇಂದ್ರಗಳ, ದೇವಾಲಯಗಳ ಮೂಲೋದ್ದೇಶಗಳೇನೇ ಇದ್ದರೂ ಇತಿಹಾಸದುದ್ದಕ್ಕೂ ಧರ್ಮ ಎಂಬುದು ರಾಜಕಾರಣವಾಗಿ, ಸಾಮ್ರಾಜ್ಯ ವಿಸ್ತರಣೆಗಳ ಭಾಗವಾಗಿ, ಮಾಧ್ಯಮವೂ ಆಗಿ, ಈ ಎಲ್ಲವನ್ನೂ ಬೆಸೆದುಕೊಂಡೇ ಬಂದಿದೆ. ಶುದ್ಧಾನುಶುದ್ಧ ಧಾರ್ಮಿಕ, ಅಧ್ಯಾತ್ಮಿಕ ಉದ್ದೇಶದ ಜತೆಗೆ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವರು ಸಾಮಾಜಿಕ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಸ್ಥಾಪಿಸಿದ ಪತಿತಪಾವನ ಮಂದಿರದವರೆಗೆ ಹರಡಿಕೊಂಡಿವೆ.
ತನ್ನದನ್ನು ಸ್ಥಾಪಿಸಲು ಇನ್ನೊಂದು ಧರ್ಮವನ್ನೂ ಅದರ ಕುರುಹುಗಳನ್ನೂ ಅಳಿಸಿಹಾಕುವ ಪ್ರಯತ್ನಗಳ ಭಾಗವಾಗಿ ‘ಪ್ರಾರ್ಥನಾ ಕೇಂದ್ರಗಳು’ ಸ್ಥಾಪನೆ ಆಗಿವೆಯೇ ಹೊರತು ಯಾವುದೇ ‘ದೇವಾಲಯ’ ವನ್ನು ಅಂತಹ ದುರುದ್ದೇಶದಿಂದ ಸ್ಥಾಪನೆ ಮಾಡಿಲ್ಲ. ಅಂತಹ ದುರುದ್ದೇಶಪೂರಿತ ಪ್ರಯತ್ನಗಳ, ದಾಳಿಗಳ ಫಲವನ್ನು ಭಾರತ ಕಂಡು ಅನುಭವಿಸಿದೆ. ನೊಂದಿದೆ. ತಾಳ್ಮೆಯಿಂದ ಸಹಿಸಿದೆ. ಹಿಂದೂಗಳಾದ ನಾವು ದಾಳಿ ನಡೆದು ನೂರಾರು ವರ್ಷಗಳಾದರೂ ನಮ್ಮದೇ ನೆಲದಲ್ಲಿ ನಮ್ಮ ಅಸ್ಮಿತೆಯ ಪ್ರತೀಕವಾದ ನಮ್ಮ ದೇವಾಲಯಗಳನ್ನು ಮರುಸ್ಥಾಪಿಸಿಕೊಳ್ಳುವುದು ಅತ್ಯಂತ ನ್ಯಾಯಬದ್ದ ಹಕ್ಕಾದರೂ ಶಾಂತಿಯಿಂದ ಕಾದು ಕಾನೂನಿನ ಮೂಲಕವೇ ಅದನ್ನು ಮರಳಿ ಪಡೆದಿದ್ದೇವೆ. ಪರಿಣಾಮವಾಗಿ ನೂರಾರು ವರ್ಷಗಳ ನಿರಂತರ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಯಿತು. ಕಾಶಿಯ ಗ್ಯಾನವ್ಯಾಫಿ ಪ್ರಕರಣ ಹೊಸ ತಿರುವು ಪಡೆಯಿತು. ಮಥುರಾದ ಕೃಷ್ಣ ಜನ್ಮಭೂಮಿಯೂ ನಿಜಾರ್ಥದಲ್ಲಿ ಸಮುದ್ರದಾಳದಿಂದ ಎದ್ದುಬರುವ ಕಾಲ ಸನ್ನಿಹಿತವಾಗುತ್ತಿದೆ.
ಹಳೆಯ ನಿರಂತರ ದಾಳಿಗಳಲ್ಲದೇ ಈಚೆಗೆ 2002ರಲ್ಲಿ ಗುಜರಾತಿನ ಅಕ್ಷರಧಾಮದ ಮೇಲೆ ಭಯೋತ್ಪಾದಕರು ಅಟ್ಟಹಾಸ ಮೆರೆದು ಅಮಾಯಕ ಜೀವಗಳನ್ನು ಬಲಿಪಡೆದಿದ್ದರು. ಆದರೆ ಇಂದು, ಮೋದಿಯವರ ನಾಯಕತ್ವದಲ್ಲಿ ನಮ್ಮದೇ ನೆಲದಲ್ಲಿ ನಾವು ಕಳೆದುಕೊಂಡಿದ್ದ ಶ್ರದ್ಧಾಕೇಂದ್ರಗಳನ್ನು ಮರುಸ್ಥಾಪಿಸುವುದರ ಜೊತೆ ಜೊತೆಗೆ ವಿಶ್ವಾದ್ಯಂತ ನಮ್ಮ ಪರಂಪರೆಯ, ಅಸ್ಮಿತೆಯ, ಧರ್ಮದ ಮುದ್ರೆಯೊತ್ತುತ್ತಿದ್ದೇವೆ. ಇಂದು ಬಹುದೊಡ್ಡ ಹಿಂದೂ ದೇವಾಲಯ ಇರುವುದು ಭಾರತದಲ್ಲಲ್ಲ, ವಿದೇಶೀ ನೆಲದಲ್ಲಿ! ಬೇರೆ ರಾಷ್ಟ್ರಗಳನ್ನು ಬಿಡಿ, ಮುಸ್ಲಿಂ ರಾಜಮನೆತನಗಳು ಕಟ್ಟಿದ ಅರಬ್ಬರ ನಾಡಿನಲ್ಲಿ ಬರೋಬ್ಬರಿ 27 ಎಕರೆಯಷ್ಟು ವಿಶಾಲ ಜಾಗದಲ್ಲಿ, ಕಳೆದ ಫೆಬ್ರವರಿ 14 ರಂದು ನಾರಾಯಣ ಮಂದಿರ ಉದ್ಘಾಟನೆಯಾಗಿದೆ. ಅಕ್ಷರಧಾಮದ ಮೇಲೆ ದಾಳಿ ನಡೆದ 22 ವರ್ಷಗಳ ನಂತರ ಅದೇ ಅಕ್ಷರಧಾಮದ ಮಾದರಿಯ ದೇವಾಲಯವನ್ನು ಮುಸ್ಲಿಮರ ಮರಳಿನ ನಾಡಿನಲ್ಲಿಯೇ ನಿರ್ಮಿಸಲಾಗಿದೆ. 180 ಅಡಿ ಅಗಲ, 262 ಅಡಿ ಉದ್ದ 108 ಅಡಿ ಎತ್ತರದ , 7 ಶಿಖರಗಳ ಭವ್ಯ ನಾರಾಯಣ ಮಂದಿರವನ್ನು 18 ಲಕ್ಷ ಇಟ್ಟಿಗೆಗಳಿಂದ ಕಟ್ಟಲಾಗಿದೆ. 410 ಸ್ತಂಭಗಳಿರುವ ದೇಗುಲದಲ್ಲಿ, ನಮ್ಮದೇ ದೇಶದ 2 ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ರಾಮಾಯಣ, ಶಿವಪುರಾಣ, ಭಾಗವತ, ಮಹಾಭಾರತ ಮುಂತಾದ ಪುರಾಣಗಳನ್ನೂ ಪಾತ್ರಗಳನ್ನೂ ಕೆತ್ತನೆ ಮಾಡಿದ್ದಾರೆ. ಇದು ಅರಬ್ಬರ ನಾಡಿನಲ್ಲಿ ತಲೆ ಎತ್ತಿದ ಮೊಟ್ಟ ಮೊದಲ ಹಿಂದೂ ದೇವಾಲಯ!
ಅರಬ್ ನಾಡಿನಲ್ಲಿ ಅಥವಾ ವಿಶ್ವದ ಯಾವುದೇ ದೇಶದಲ್ಲಿ ಕಟ್ಟಲ್ಪಡುವ ದೇವಾಲಯ ಭಕ್ತಿಕೇಂದ್ರ ಮಾತ್ರವಲ್ಲ, ನಮ್ಮ ನಾಡಿನ ಪರಂಪರೆ, ಪುರಾಣ, ಶಿಲ್ಪಕಲೆ, ಕಲಾವಿದರ ಕೌಶಲ, ಪುರಾಣಗಳು, ಅವು ಹೇಳುವ ಕತೆಗಳು, ಅದರ ಹಿಂದಿರುವ ಮೌಲ್ಯಗಳು ಹೀಗೆ ಅನೇಕ ವಿಷಯಗಳಿಗೆ ಅಂತರಾಷ್ಟ್ರೀಯ ಮಟ್ಟದ ಗಮನ ಸೆಳೆಯುತ್ತವೆ. ಮತ್ತು ಇದು ಮುಂದೆ ಎಷ್ಟೋ ಸಾವಿರ ವರ್ಷಗಳವರೆಗೆ ಇರುತ್ತಾ ತಲೆಮಾರಿಂದ ತಲೆಮಾರಿಗೆ ಹಿಂದೂ ಧರ್ಮ ಮತ್ತು ಭಾರತೀಯ ಪರಂಪರೆಯನ್ನು ನಿರಂತರ ಪರಿಚಯಿಸುತ್ತಲೇ ಹೋಗುತ್ತದೆ. ಬೇರೆ ಬೇರೆ ಕಾರಣಗಳಿಗಾಗಿ ವಿಶ್ವಾದ್ಯಂತ ಚದುರಿ ಹೋಗುವ ಭಾರತೀಯರನ್ನು ಧರ್ಮದೊಂದಿಗೆ ಬೆಸೆದುಕೊಂಡೇ ಇರುವಂತೆ ಮಾಡಬಲ್ಲ ಮತ್ತು ಭಾರತೀಯತೆಯ ಆಧಾರದ ಮೇಲೆ ಎಲ್ಲರನ್ನೂ ಒಗ್ಗೂಡಿಸಬಲ್ಲ ಅತ್ಯಂತ ದೂರಗಾಮಿ ಉದ್ದೇಶಕ್ಕೆ ಇದು ಮುನ್ನುಡಿಯಾಗಿದೆ. ಇದು ಹಿಂದೂಧರ್ಮದ ಪುನರುತ್ಥಾನಕ್ಕೆ ಕಳಶಪ್ರಾಯವಾದ ಕೆಲಸ.
ಇತರ ದೇಶದ ಜನರಿಗೆ ಸುಲಭಕ್ಕೆ ಸೂಜಿಯಷ್ಟು ಜಾಗ ಕೊಡಲು, ಹಿಡಿಮರಳು ಕೊಡಲು ಯೋಚಿಸುವ ಅರಬ್ ದೇಶದ ನಾಯಕರು, ಮೋದಿಯವರ ಒಂದು ಮಾತಿಗೆ 27 ಎಕರೆ ಭೂಮಿಯನ್ನು ಶಾಶ್ವತವಾಗಿ ಹಿಂದೂ ದೇವಾಲಯಕ್ಕೆ ಬರೆದುಕೊಟ್ಟಿದ್ದಾರೆ. ಯಾವುದೇ ಭಯದಿಂದಲ್ಲ, ಯುದ್ಧಭೀತಿಯಿಂದಲ್ಲ, ಹೇರಿಕೆಯಿಂದಲ್ಲ, ಒತ್ತಾಯದಿಂದಲ್ಲ. ಕೇವಲ ಭಾರತ, ಮೋದಿ ಎಂಬ ಹೆಸರಿನ ಮೇಲಿನ ಪ್ರೀತಿಗಾಗಿ. ಮೋದಿ ಎಂಬ ವ್ಯಕ್ತಿಯೇ ಶಕ್ತಿಯಾಗಿ, ಆ ವ್ಯಕ್ತಿತ್ವದ ಪ್ರಭಾವದಿಂದಾಗಿ ಅರಬ್ ರಾಜಮನೆತನಗಳು ಸನಾತನ ಧರ್ಮವನ್ನು ಗೌರವಿಸಿವೆ. ಧರ್ಮಸಂಸ್ಥಾಪನೆಗೆ ದಾಳಿ ಮಾಡಬೇಕಿಲ್ಲ, ನಮ್ಮ ದೇವಾಲಯ ನಿರ್ಮಿಸಿಲು ಇನ್ಯಾರದೋ ಶ್ರದ್ಧೆಯನ್ನು ಒಡೆದುರುಳಿಸಬೇಕಿಲ್ಲ. ಪ್ರೀತಿಯಿಂದ ಕೇಳಿ ಪಡೆಯಬಹುದು ಎಂಬುದು ಅರಬ್ ದೇಶಗಳಲ್ಲಿ ನಾರಾಯಣ ದೇವಾಲಯ ಕಟ್ಟಿನಿಲ್ಲಿಸಿದ ಮೋದಿ ವಿಶ್ವಕ್ಕೆ ಕೊಟ್ಟ ಬೃಹತ್ ಸೌಹಾರ್ಧ ಸಂದೇಶ. ಮುಸ್ಲಿಂ ನಾಡಿನಲ್ಲಿ ಅವರಿಂದಲೇ ಭೂಮಿ ಪಡೆದು ‘ನಾರಾಯಣ ನಮೋಸ್ತುತೆ’ ಅನ್ನುವಂತೆ ಮಾಡಿದ್ದು ಹಿಂದೂಗಳೆಲ್ಲ ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳಬಹುದಾದ ನಡೆ.
ಇಷ್ಟೆಲ್ಲಕ್ಕೂ ಕಾರಣರಾದ ಮೋದಿ, ಇದರ ಶ್ರೇಯಸ್ಸು ನಿಮ್ಮದೆಂದು ಹೇಳಿ ಅರಬ್ಬರಿಗೆ ಧನ್ಯವಾದ ತಿಳಿಸುವ ಮೂಲಕ, ಭಾಷಣದಲ್ಲಿ ಅವರನ್ನು ಸಹೋದರರೆಂದು ಅತ್ಯಂತ ಆತ್ಮೀಯವಾಗಿ, ಭಾವುಕವಾಗಿ, ಮನಃಪೂರ್ವಕವಾಗಿ ಸಂಭೋದಿಸುವ ಮೂಲಕ ಮತ್ತೊಮ್ಮೆ ಅವರೆಲ್ಲರ ಹೃದಯ ಗೆದ್ದಿದ್ದಾರೆ. ಸಾಮ್ರಾಜ್ಯ ಸ್ಥಾಪನೆ ಅಂದರೆ ಭೌಗೋಳಿಕ ಜಾಗಗಳನ್ನು ಗೆಲ್ಲುವುದಲ್ಲ. ಗಡಿಗಳನ್ನು ಒಡೆಯುತ್ತಾ , ವಿಶ್ವಾದ್ಯಂತ ಎಲ್ಲರ ಹೃದಯ ಸಾಮ್ರಾಜ್ಯ ಗೆಲ್ಲುವುದು! ಆ ದೃಷ್ಟಿಯಿಂದ ಮೋದಿ ವಿಶ್ವದ ಕೋಟಿ ಕೋಟಿ ಹೃದಯಗಳನ್ನು ಗೆದ್ದ ಮಹಾನ್ ಸಾಮ್ರಾಟರು. ಅಶ್ವಮೇಧದ ಕುದುರೆಯೇ ಇಲ್ಲದೇ ಮೋದಿ ಜಗತ್ತನ್ನು ತಮ್ಮ ಚುಂಬಕ ಮಾತು ಮತ್ತು ಮನುಷ್ಯ ಪ್ರೀತಿಯಿಂದ ಗೆಲ್ಲುತ್ತಾ , ಹಿಂದೂ ಸಾಮ್ರಾಜ್ಯ ಕಟ್ಟುತ್ತಾ, ತನ್ಮೂಲಕ ಭಾರತೀಯರಿಗೆ ಎಲ್ಲೆಡೆ ಗೌರವ ಗರ್ವಗಳನ್ನು ಗಳಿಸುತ್ತಾ ಮುನ್ನುಗ್ಗುತ್ತಿದ್ದಾರೆ.
ಈ ಎಲ್ಲ ವಿಷಯಗಳನ್ನೂ ಧಾರ್ಮಿಕವಾಗಿ ಮತ್ತು ಭಾವುಕವಾಗಿ ನೋಡುವುದುರಾಚೆಗೂ ಯೋಚಿಸುವುದಾದರೆ ಮೋದಿ ತಮ್ಮ ವ್ಯಕ್ತಿತ್ವದಿಂದ ಗಳಿಸಿದ ವರ್ಚಸ್ಸು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅನೇಕ ಆರ್ಥಿಕ ವ್ಯವಹಾರಗಳನ್ನು ಸುಲಭಗೊಳಿಸುತ್ತದೆ ಮತ್ತು ವಿಸ್ತರಿಸುತ್ತದೆ. ಮನೆಯ ಯಜಮಾನನ ನಡೆಯಿಂದ ವ್ಯಕ್ತಿತ್ವದಿಂದ ಇಡೀ ಕುಟುಂಬಕ್ಕೆ ಹೇಗೆ ಸಮಾಜದಿಂದ ಘನತೆ ಗೌರವ ಮತ್ತು ರಕ್ಷಣೆ ದಕ್ಕುವುದೋ ಯಾವುದೇ ನಾಯಕನ ಮೇಲಿನ ಗೌರವ ಇಡೀ ದೇಶಕ್ಕೆ ಅದೇ ಗೌರವ ದಕ್ಕಿಸಿಕೊಡುತ್ತದೆ. ದೇಶದ ನಾಯಕನ ಬಗ್ಗೆ ಗೌರವವಿದ್ದರೆ ಯಾವುದೇ ದೇಶ ಆ ದೇಶಕ್ಕೆ ಕೇಡು ಬಗೆಯಲಾರದು. ಸಮಸ್ಯೆ ಬಂದ ಮೇಲೆ ಪರಿಹರಿಸುವುದು ಬೇರೆ. ಆದರೆ ಸಮಸ್ಯೆಯೇ ಬಾರದಂತೆ ತಡೆಯುವುದು ಕಣ್ಣಿಗೆ ಕಾಣದ ಆದರೆ ಅಷ್ಟೇ ಮಹತ್ವದ ಕೆಲಸ.
ವಿದೇಶೀ ನೆಲದ ದೇವಾಲಯವೆಂದರೆ ಪೂಜೆ, ಆರತಿಗಳು ನಡೆಯುವ ಸ್ಥಳ ಮಾತ್ರವಲ್ಲ. ಧರ್ಮ, ಕಲೆ, ಅಂತರಾಷ್ಟ್ರೀಯ ವರ್ಚಸ್ಸು, ಸೌಹಾರ್ಧ, ಸಮಷ್ಟಿ ಪ್ರಜ್ಞೆ, ಕಲೆ, ಭೂತದ ಗಾಯಗಳಿಗೆ ಔಷಧಿ, ಭವಿಷ್ಯದ ಕಟ್ಟುವಿಕೆ ಇತ್ಯಾದಿ ಅನೇಕ ಸಂಗತಿಗಳನ್ನು ಒಳಗೊಂಡ, ಪರೋಕ್ಷವಾಗಿ ಎಷ್ಟೆಲ್ಲಾ ಉದ್ದೇಶಗಳನ್ನು ಈಡೇರಿಸುವ ಸಮಗ್ರ ಶಕ್ತಿಕೇಂದ್ರ. ಅಬುದಾಬಿಯ ನಾರಾಯಣ ದೇವಾಲಯದ ಸ್ಥಾಪನೆಯೆಂದರೆ ಅಂತದೊಂದು ಸಮಗ್ರ ಶಕ್ತಿಕೇಂದ್ರದ ಸ್ಥಾಪನೆ ಎಂದೇ ಅರ್ಥ. ಅಂತದನ್ನು ಹಿಡಿದ ಹಠ ಬಿಡದಂತೆ ಸಾಧ್ಯವಾಗಿಸುವುದಿದೆಯಲ್ಲಾ, ಅದು ಮಂದಿರವೇಕೆ? ಎಂದು ಗಾಳಿಯಲ್ಲಿ ಪ್ರಶ್ನೆ ಎಸೆಯುವಷ್ಟು ಸರಳವೂ ಅಲ್ಲ, ಸುಲಭ ಮೊದಲೇ ಅಲ್ಲ.
ಕೊನೆಯ ಮಾತು: ದೇವಲಯ ನಿರ್ಮಾಣಕ್ಕಾಗಿ ಅಭಿದಾಬಿಯಲ್ಲಿ ಎರಡು ಮಾದರಿ ಮಾಡಲಾಗಿತ್ತು. ಮೊದಲನೆಯದು ಅಲ್ಲಿನ ಬಿಲ್ಡಿಂಗ್ ಕೋಡ್‌ಗೆ ಅನುಗುಣವಾಗಿತ್ತು. ಒಂದು ಬಿಳೀ ಕಟ್ಟಡವಷ್ಟೇ ಹೊರಗಿನಿಂದ ಕಾಣುವ ವಿನ್ಯಾಸ ಅದು. ಇನ್ನೊಂದು, ಸ್ವಾಮಿ ನಾರಾಯಣ ಸಂಪ್ರದಾಯದ ಶೈಲಿ. ಇವೆರಡರಲ್ಲಿ ಯಾವುದು ಆಯ್ಕೆ ಮಾಡುವುದು ಎಂದು ಅಲ್ಲಿನ ರಾಜನ ಮುಂದಿಟ್ಟಾಗ ಅವರು ಅಚ್ಚರಿ ಎಂಬಂತೆ ಎರಡನೇ ಮಾದರಿ ಆಯ್ಕೆ ಮಾಡಿದರು. ಇಂದು ಅದೇ ಮಾದರಿ ನಿರ್ಮಾಣವಾಗಿದೆ. ಅರಬ್ ನಾಡಿನಲ್ಲಿ ಇದು ಹೇಗೆ ಸಾಧ್ಯ? ಹಾಗಾದರೆ ಇದು ಇಸ್ಲಾಂ ಕುಸಿತದ ಆರಂಭವೇ? ಮುಂದಿನ ಲೇಖನದಲ್ಲಿ ನೋಡೋಣ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top