ಸಾವಿರದ ಸಾವರ್ಕರ್ ಸಮರ್ಥನೆಗೆ ಸಾವಿರ ಸಂದರ್ಭಗಳಿವೆ

ಕರ್ನಾಟಕ ಸರ್ಕಾರ ಶಾಲಾಪಠ್ಯದಿಂದ ಸಾವರ್ಕರ್ ಪಾಠವನ್ನು ಕೈಬಿಟ್ಟ ಸಂದರ್ಭಕ್ಕೆ ಸರಿಯಾಗಿ ಅಡ್ಡಂಡ ಕಾರ್ಯಪ್ಪ ಅವರು ನಾವು ಕೇವಲ ಕೇಳಿದ್ದ, ಓದಿದ್ದ ಸಾವರ್ಕರ್ ಅವರನ್ನು ಕಣ್ಣಮುಂದೆ ತಂದಿದ್ದಾರೆ. ಪಾಲಕರು ಮಕ್ಕಳೊಂದಿಗೆ ಹೋಗಿ ಆ ನಾಟಕ ನೋಡುವಂತಾದರೆ ಹೆಚ್ಚು ಉಪಯೋಗ. ಈ ಅಂಕಣ ಸರಣಿಯ ಮೊದಲ ಅಂಕಣ ವೀರ ಸಾವರ್ಕರ್​ಗೆ ಸಮರ್ಪಿತ. ಅವಕಾಶಕ್ಕಾಗಿ ಡಾ.ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರಿಗೆ ಆಭಾರಿ

***********************************

‘ನಿನ್ನನ್ನು ನೋಡಿದರೆ ಸಾಕ್ಷಾತ್ ಭಾರತಾಂಬೆಯನ್ನೇ ನೋಡಿದಂತಾಗುತ್ತಿದೆ. ನೀನೇ ಕಣ್ಣೀರು ಹಾಕದೆ ಧೈರ್ಯದಿಂದಿರುವಾಗ ನಾನೇಕೆ ಕಣ್ಣೀರು ಹಾಕಲಿ? ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಲು ನನಗೆ ಮತ್ತಷ್ಟು ಶಕ್ತಿ ಸಿಕ್ಕಿದೆ’.ಸುಖಾಸುಮ್ಮನೆ ಬ್ರಿಟಿಷರು ಪ್ರಕರಣ ದಾಖಲಿಸಿ ಅಂಡಮಾನ್ ಜೈಲಿಗಟ್ಟಿದ್ದ ತಮ್ಮನ್ನು ಭೇಟಿ ಮಾಡಲು ಬಂದಿದ್ದ ಯಮುನಾಬಾಯಿ ಅವರಿಗೆ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಹೇಳಿದ ಮಾತಿದು. ನಾಟಕಕಾರ ಅಡ್ಡಂಡ ಕಾರ್ಯಪ್ಪ ರಚಿಸಿ, ನಿರ್ದೇಶಿಸಿರುವ ‘ಕರಿನೀರ ವೀರ’ ನಾಟಕದ ಈ ದೃಶ್ಯಕ್ಕೆ ಕಣ್ಣಾಲಿಗಳು ಒದ್ದೆಯಾಗದಿದ್ದರೆ ಬಹುಶಃ ಆತನಲ್ಲಿ ತೃಣಮಾತ್ರವೂ ಸಂವೇದನಾಶೀಲತೆ ಉಳಿದುಕೊಂಡಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಡಬಹುದು.

ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ, ಬ್ರಿಟಿಷರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಎದುರಿಸಿದ ಅಪಮಾನ, ಹಿಂಸೆಗಳಷ್ಟೇ ಪ್ರಮಾಣದ ಅಪಮಾನ, ಹಿಂಸೆಗಳನ್ನು ಸ್ವಾತಂತ್ರಾ್ಯನಂತರ ತನ್ನ ಜನರಿಂದಲೇ ಅನುಭವಿಸಿದ ವ್ಯಕ್ತಿಯೊಬ್ಬರಿದ್ದರೆ ಅದು ಸ್ವಾತಂತ್ರ್ಯವೀರ ಸಾವರ್ಕರ್. ಬ್ರಿಟಿಷರ ವಿರುದ್ಧ ಪ್ರಾಣವನ್ನು ಪಣಕ್ಕಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದ ಸಾವರ್ಕರ್ ಸ್ವಾತಂತ್ರ್ಯ ಬಂದ ನಂತರ ದೇಶೀಯರಿಂದಲೇ ಅಪಮಾನ, ಹೀಗಳಿಕೆ ಎದುರಿಸುವಂತಾದದ್ದು ಚರಿತ್ರೆಯ ದುರಂತವೇ. ಹಾಗೆಂದು ಸಾವರ್ಕರ್ ಮೇಲಿನ ದಾಳಿ ಸಾವರ್ಕರ್ ಕಾಲಕ್ಕೇ ಮುಗಿದಿಲ್ಲ, ಅದು ಇಂದಿಗೂ ಮುಂದುವರಿದಿದೆ. ಒಂದರ್ಥದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ದಾಳಿಗಳ ಮುಖೇನ ಸಾವರ್ಕರ್ ಕುರಿತಾದ ಚರ್ಚೆಯ ದಿಕ್ಕು ತಪ್ಪಿಸುವ ಕೆಲಸ ಮುಂದುವರಿಸಿವೆ.

ಹಾಗೆ ನೋಡಿದರೆ ಸಾವರ್ಕರ್ ಅವರಷ್ಟು ದೂರದೃಷ್ಟಿಯ, ವೈಚಾರಿಕ ಸ್ಪಷ್ಟತೆಯ, ಸೈದ್ಧಾಂತಿಕ ಬದ್ಧತೆಯ ವಿಶಿಷ್ಟ ನಾಯಕ ಇಡೀ ಸ್ವಾತಂತ್ರ್ಯ ಹೋರಾಟದಲ್ಲಿ ಇನ್ನೊಬ್ಬ ಸಿಗಲಾರ ಎನ್ನಬಹುದು. ಯಾಕೆಂದರೆ ಸಾವರ್ಕರ್ ಎಂದೂ ಏಕಮುಖವಾಗಿ ಯೋಚಿಸಿದವರಲ್ಲ. ಅವರು ಗಟ್ಟಿಯಾಗಿ ಪ್ರತಿಪಾದಿಸಿದ ಮತ್ತು ಇವತ್ತಿಗೂ ಅನೇಕ ಸಂದರ್ಭಗಳಲ್ಲಿ ಉಲ್ಲೇಖಗೊಳ್ಳುವ ಹಿಂದೂ ಧರ್ಮದ ಕುರಿತಾದ ಅವರ ದೃಷ್ಟಿಕೋನವನ್ನೇ ತೆಗೆದುಕೊಳ್ಳೋಣ. ಅವರು ಎಷ್ಟು ಗಟ್ಟಿಯಾಗಿ ಹಿಂದೂ ಧರ್ಮದ ವಿಚಾರಧಾರೆಗಳನ್ನು ಪ್ರತಿಪಾದಿಸಿದ್ದರೋ ಅಷ್ಟೇ ಗಟ್ಟಿಯಾಗಿ ಧರ್ಮದಲ್ಲಿನ ಅಸ್ಪ ೃ್ಯತೆ, ಮೌಢ್ಯಗಳ ವಿರುದ್ಧ ಧ್ವನಿ ಎತ್ತಿದ್ದರು. ಹಿಂದೂ ಧರ್ಮದ ಕುರಿತಾಗಿ ಎಷ್ಟು ಅಭಿಮಾನ ಉಳ್ಳವರಾಗಿದ್ದರೋ, ಅಷ್ಟೇ ಪ್ರಮಾಣದಲ್ಲಿ ಇಲ್ಲಿನ ದುಷ್ಟ ಆಚರಣೆಗಳನ್ನು ತೊಡೆದುಹಾಕಬೇಕು ಎಂಬ ಉತ್ಕಟ ಬಯಕೆ ಉಳ್ಳವರಾಗಿದ್ದರು. ಹಿಂದೂ ಧರ್ಮ ತನ್ನನ್ನು ತಾನು ಏಳು ರೀತಿಯಲ್ಲಿ ಬಂಧಿಸಿಕೊಂಡಿದೆ (ಸಪ್ತಬಂಧಿ) ಎಂದು ಸಾವರ್ಕರ್ ನಂಬಿದ್ದರು.

 
 
 
 
 

ಸಾವರ್ಕರ್ ಪ್ರಕಾರ ಈ ಏಳು ಬಂಧಿಯಲ್ಲಿ ಮೊದಲನೆಯದು ಜಾತಿ ವ್ಯವಸ್ಥೆ. ಅದನ್ನು ಅವರು ‘ಇತಿಹಾಸದ ಕಸದ ಬುಟ್ಟಿಗೆ ಎಸೆಯಲು ಅರ್ಹವಾದದ್ದು’ ಎಂದು ಕರೆದರು. ವೀರ ಸಾವರ್ಕರ್ ಬಯಸಿದ ಎರಡನೆಯ ಸುಧಾರಣೆ ವೈದಿಕ ಸಾಹಿತ್ಯವನ್ನು ಒಂದು ನಿರ್ದಿಷ್ಟ ಜಾತಿಗೆ ಮಾತ್ರವಲ್ಲದೆ ಎಲ್ಲರ ನಡುವೆ ಜನಪ್ರಿಯಗೊಳಿಸುವುದಾಗಿತ್ತು. ಅವರು ವೈದಿಕ ಸಾಹಿತ್ಯವನ್ನು ಇಡೀ ಮಾನವ ಜನಾಂಗಕ್ಕೆ ನಾಗರಿಕ ಜ್ಞಾನ ಮತ್ತು ಮನುಕುಲಕ್ಕೆ ಭಾರತದ ಅನನ್ಯ ಕೊಡುಗೆ ಎಂದು ಕರೆದರು. ಮೂರನೆಯದು ಜಾತಿ-ಆಧಾರಿತ ಔದ್ಯೋಗಿಕ ವ್ಯವಸ್ಥೆಯ ಬದಲಾವಣೆ. ಈ ವ್ಯವಸ್ಥೆಯನ್ನು ಬದಲಾಯಿಸಲು ಯೋಗ್ಯತೆ ಮತ್ತು ಸಾಮರ್ಥ್ಯದ ಆಧಾರದ ಮೇಲೆ ತಮ್ಮ ಆಯ್ಕೆಯ ಯಾವುದೇ ವೃತ್ತಿಯನ್ನು ಮುಂದುವರಿಸಲು ವ್ಯಕ್ತಿಗಳನ್ನು ಉತ್ತೇಜಿಸಬೇಕೆಂಬುದು ಅವರ ವಿಚಾರವಾಗಿತ್ತು.

ನಾಲ್ಕನೆಯದಾಗಿ, ಜಗತ್ತಿನ ಅತ್ಯುತ್ತಮವಾದದ್ದನ್ನು ನಮ್ಮಲ್ಲಿಗೆ ತರಲು ಮತ್ತು ಭಾರತದ ಸಂಸ್ಕೃತಿಯ ಸುಗಂಧವನ್ನು ಜಗತ್ತಿನ ಮೂಲೆಮೂಲೆಗೆ ಸಾಗಿಸಲು ಭಾರತೀಯರು ವಿದೇಶಿ ಭೂಮಿಗೆ ತೆರಳುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದರು.

ಐದನೆಯದಾಗಿ, ಸಾವರ್ಕರ್ ಅವರು ಅಂತರ-ಜಾತಿ ಭೋಜನದ ಮೇಲಿನ ನಿಷೇಧವನ್ನು ಕಿತ್ತೊಗೆಯಲು ಬಯಸಿದ್ದರು. ಅವರು ಸಹಭೋಜನ ಪದ್ಧತಿಯ ಪರವಾಗಿದ್ದರು. ‘Religion is in the heart, the soul, the spirit; not the stomach!’ ಎಂದವರು ಹೇಳಿದ್ದರು. ಈ ಐದನೆಯ ಸನ್ನಿವೇಶವನ್ನು ‘ಕರಿನೀರ ವೀರ’ ನಾಟಕದಲ್ಲೂ ನಿರ್ದೇಶಕರು ಸಮರ್ಥವಾಗಿ ಪ್ರಚುರಪಡಿಸಿದ್ದಾರೆ. ಆರನೆಯದಾಗಿ ಅಂತರ್ಜಾತಿ ವಿವಾಹದ ಪ್ರಚಾರವನ್ನು ಮಾಡುವುದರ ಮೂಲಕ ಅದನ್ನು ಪ್ರೋತ್ಸಾಹಿಸಬೇಕು ಎಂದಿದ್ದರು.

ಏಳನೇ ಅಂಶವೆಂದರೆ, ವೀರ್ ಸಾವರ್ಕರ್ ಒತ್ತಿಹೇಳಿದ್ದು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವನ್ನು. ‘ನಾವು ಯುರೋಪಿಗಿಂತ 200 ವರ್ಷಗಳ ಹಿಂದೆ ಇದ್ದೇವೆ’ ಎಂದು ಅವರು ಹೇಳಿದ್ದರು, ‘ವಿಜ್ಞಾನ, ಆಧುನಿಕ ಚಿಂತನೆಗಳು ಮತ್ತು ಕೈಗಾರಿಕೀಕರಣದ ಮೂಲಕ ಭಾರತದ ಪ್ರತಿಯೊಬ್ಬ ಪುರುಷ, ಮಹಿಳೆಗೆ ಮಾಡಲು ಕೆಲಸ, ತಿನ್ನಲು ಆಹಾರ, ಧರಿಸಲು ಬಟ್ಟೆ ಮತ್ತು ಸಂತೋಷದ ಜೀವನ ನಡೆಸಲು ಬೇಕಾದ ವಾತಾವರಣ ನಿರ್ವಿುಸಬಹುದು’ ಎಂದು ಅವರು ನಂಬಿದ್ದರು. ಹೀಗೆ ಸಾವರ್ಕರ್ ಹಿಂದೂ ಸಮಾಜದಲ್ಲಿದ್ದ ಅನಿಷ್ಟಗಳು, ಸುಧಾರಣೆಗಳನ್ನೊಳಗೊಂಡ ಈ ಏಳು ಬಂಧಿಯನ್ನು ಬೋಧಿಸಿ ಸುಮ್ಮನೆ ಕೂರಲಿಲ್ಲ. ನೇರ ಕಾರ್ಯಾಚರಣೆಗೆ ಇಳಿದರು. 1924ರಲ್ಲಿ ರತ್ನಗಿರಿಯಲ್ಲಿ ಗಣೇಶೋತ್ಸವ ಜಾತಿರಹಿತ ಕಟ್ಟುಪಾಡುಗಳೇ ಇಲ್ಲದೆ ನಡೆಯಿತು. ಅಲ್ಲಿಯವರೆಗೂ ಗಣೇಶನ ವಿಸರ್ಜನೆಯಲ್ಲಿ ಬ್ರಾಹ್ಮಣರಿಗಷ್ಟೇ ಮಹತ್ವವಿತ್ತು. ಅವರಷ್ಟೇ ಗಣೇಶನನ್ನು ಹೊರಬೇಕಾಗಿತ್ತು. ಆದರೆ, ಆ ವರ್ಷ ತಳಸಮುದಾಯದ ಮಹಾರ್, ಜಾಡಮಾಲಿಗಳು ಕೂಡ ಗಣೇಶ ಮೆರವಣಿಗೆಯಲ್ಲಿ ಹೆಗಲು ನೀಡಿದರು. ದಸರೆ ಹಬ್ಬದ ಸಂದರ್ಭದಲ್ಲಿ ಸಾವರ್ಕರ್ ದಲಿತರ ಮನೆಗೆ ಹೋಗಿ ಸಾಮೂಹಿಕ ಭೋಜನದಲ್ಲಿ ಭಾಗವಹಿಸಿದರು. ರತ್ನಗಿರಿ ಜಿಲ್ಲೆಯಲ್ಲಿ ದಲಿತ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳನ್ನು ತೆರೆದರು. ಮಹಾರ್ ಮತ್ತು ಚಮ್ಮಾರರಿಗೆ ವೇದಗಳನ್ನು ಕಲಿಸಿಕೊಟ್ಟರು. ಅಂತರ್ಜಾತೀಯ ವಿವಾಹಕ್ಕೆ ಬೆಂಬಲ ನೀಡಿದರು. ಅಷ್ಟೇ ಅಲ್ಲ, ದೇಶದ ಎಲ್ಲ ಮಂದಿರಗಳಿಗೂ ಎಲ್ಲ ಹಿಂದೂಗಳಿಗೂ ಪ್ರವೇಶವಿರಬೇಕು ಎಂಬುದು ಸಾವರ್ಕರ್ ನಿಲುವಾಗಿತ್ತು. ಆದರೆ, ಅದಕ್ಕೆ ಸಮಯ ಪಕ್ವವಾಗುವವರೆಗೆ, ಹಿಂದೂ ಸಮಾಜದ ಎಲ್ಲರೂ ದರ್ಶನ ಮಾಡಬಹುದಾದ ದೇವಸ್ಥಾನ ಇರಬೇಕು ಎಂದು ರತ್ನಗಿರಿಯಲ್ಲಿ ಪತಿತಪಾವನ ಮಂದಿರವನ್ನು ಸ್ಥಾಪಿಸಿದರು. ಈ ಮಂದಿರದ ಟ್ರಸ್ಟ್​ನಲ್ಲಿ ಎಲ್ಲ ವರ್ಗದವರೂ ಇದ್ದರು. ಅಲ್ಲಿ ಹಿಂದೂ ಧರ್ಮದ ಪೂಜಾಪದ್ಧತಿಯನ್ನು ತಿಳಿದಿರುವ ಯಾವುದೇ ಜಾತಿಗೆ ಸೇರಿದ ಹಿಂದೂ ಅರ್ಚಕ ಆಗಬಹುದಾಗಿತ್ತು. ಹೀಗೆ ಹಿಂದೂಗಳೆಲ್ಲರನ್ನೂ ಒಟ್ಟಿಗೆ ತರುವ ನಿಟ್ಟಿನಲ್ಲಿ ಏನೇನು ಪ್ರಯತ್ನಗಳಾಗಬೇಕು ಎನ್ನುವ ಚಿಂತನೆ ಮಾಡಿ ಅದನ್ನು ಸ್ವತಃ ಕಾರ್ಯರೂಪಕ್ಕೆ ತರಲು ಶ್ರಮಿಸಿದ್ದರು ಸಾವರ್ಕರ್.

ಈ ಎಲ್ಲ ಪ್ರಯತ್ನಗಳಿಂದ ಹಿಂದೂಗಳು ಒಗ್ಗಟ್ಟಾದರು ಎಂದಿಟ್ಟುಕೊಳ್ಳೋಣ. ಆಗ ಅವರಿಗಿರುವ Threat ಏನು? ಎಂಬುದನ್ನೂ ಯೋಚಿಸಿದ್ದರು ಸಾವರ್ಕರ್. ಹಾಗಾಗಿಯೇ ಸ್ವಾತಂತ್ರ್ಯಪೂರ್ವದಲ್ಲಿಯೇ ಮುಸ್ಲಿಂ ತುಷ್ಟೀಕರಣದ ವಿರುದ್ಧ ಧ್ವನಿ ಎತ್ತಿದ್ದರು. ಇಲ್ಲೊಂದು ವಿಶೇಷ ಉಲ್ಲೇಖ ಮಾಡಲೇಬೇಕು. ಸಾವರ್ಕರರ ವಿಚಾರಗಳು ನಮ್ಮ ಸಂವಿಧಾನದಲ್ಲಿ ಯಾವ ರೀತಿ ಸದ್ದಿಲ್ಲದೆ ಅಡಕವಾಗಿವೆ ನೋಡೋಣ. ಸಂವಿಧಾನ ವಿಧಿಸಿರುವ ಮೂಲಭೂತ ಕರ್ತವ್ಯಗಳಲ್ಲಿ ಅನೇಕ ಅಂಶಗಳು ಸಾವರ್ಕರ್ ವಿಚಾರದೊಂದಿಗೆ ನೇರ ಸಾಮ್ಯತೆ ಹೊಂದಿವೆ. ಉದಾಹರಣೆಗೆ:

  • ಸಂವಿಧಾನವನ್ನು ಪಾಲಿಸುವುದು, ಅದರ ಆಶಯಗಳನ್ನು ಗೌರವಿಸುವುದು. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.
  • ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಕೊಟ್ಟ ಆದರ್ಶಗಳನ್ನು ಗೌರವಿಸುವುದು ಮತ್ತು ಪಾಲಿಸುವುದು.
  • ಭಾರತದ ಸಾರ್ವಭೌಮತ್ವ, ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು.
  • ದೇಶವನ್ನು ರಕ್ಷಿಸುವುದು ಮತ್ತು ದೇಶಸೇವೆಗೆ ಸಿದ್ಧರಿರುವುದು.
  • ವಿವಿಧ ಧರ್ಮ, ಭಾಷೆ ಮತ್ತು ಪ್ರಾಂತ್ಯಗಳ ಜನರೊಂದಿಗೆ ಸೌಹಾರ್ದದಿಂದ ಇರುವುದು; ಮಹಿಳೆಯರಿಗೆ ಅಗೌರವ ತೋರುವ ಪದ್ಧತಿಗಳನ್ನು ತಿರಸ್ಕರಿಸುವುದು.
  • ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು ಕಾಪಾಡುವುದು.
  • ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವುದು; ಪ್ರಶ್ನೆ ಮಾಡುವ ಮತ್ತು ಬದಲಾವಣೆಗೆ ಒಡ್ಡಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳುವುದು.
 

ಇವು ಸಾವರ್ಕರ್ ವಿಚಾರ ಎಂಬ ಕಾರಣಕ್ಕೆ ಸಂವಿಧಾನದಲ್ಲಿ ಸೇರ್ಪಡೆ ಆಗಿವೆ ಎಂಬುದು ಈ ಮಾತಿನ ಅರ್ಥವಲ್ಲ. ಸಾವರ್ಕರ್ ಪ್ರತಿಪಾದಿಸಿದ ವಿಚಾರಗಳು ಸಾರ್ವಕಾಲಿಕ ಮೌಲ್ಯ ಹೊಂದಿದ್ದವು, ಸಮಾಜದ ಒಳಿತನ್ನೇ ಬಯಸುತ್ತಿತ್ತು. ಹಾಗಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರರು ಸಂವಿಧಾನ ರಚಿಸುವಾಗಲೂ ಅವರೂ ಈ ಅಂಶಗಳ ಪ್ರಾಮುಖ್ಯ ಮನಗಂಡಿದ್ದಾರೆ. ದೇಶ ಉನ್ನತಿಗೆ ಏರಬೇಕು ಎಂದು ಬಯಸುವ ಇಬ್ಬರು ಶ್ರೇಷ್ಠ ವ್ಯಕ್ತಿಗಳ ಆಲೋಚನೆಯಲ್ಲಿ ಸಾಮ್ಯತೆ ಇರಲೇಬೇಕಲ್ಲ? ಸಾವರ್ಕರ್ ವಿರೋಧಿಸಲು ವಿರೋಧಿಗಳು ಎಷ್ಟು ಕಾರಣ ಕೊಡುತ್ತಾರೋ, ಅದರ ನೂರರಷ್ಟು/ಸಾವಿರದಷ್ಟು ಕಾರಣಗಳನ್ನು ಸಾರ್ವಕಾಲಕ್ಕೂ ಸಾವರ್ಕರ್ ಆರಾಧಿಸಲು ನಾನು ಕೊಡಬಲ್ಲೆ. ಅವರನ್ನು ವಿರೋಧಿಸಲು ನಿಮ್ಮ ಬಳಿ ಇರುವ ಕಾರಣ ಒಂದೇ ಒಂದು, ಅದೆಂದರೆ ದೇಶವಿಭಜನೆಗೆ, ಮತಾಂಧತೆ ಮತ್ತು ತುಷ್ಟೀಕರಣ ಕಾರಣ ಎಂದು ಅವರು ನಂಬಿದ್ದು. ಮತಾಂಧತೆಯೇ ದೇಶಕ್ಕೆ ಮುಂದೆ ಮುಳುವಾಗತ್ತದೆ ಎಂದು ಹೇಳಿದ್ದು. ಹಾಗಾಗರೆ ನಾವು ಸಾವರ್ಕರ್ ಅವರನ್ನು ನಮ್ಮ ಮಕ್ಕಳಿಗೆ ಪರಿಚಯಿಸುವುದು ಬೇಡವೇ?

ಕಡೆಯದಾಗಿ, ಸಾವರ್ಕರ್ ಪ್ರತಿಪಾದಿಸಿದ ಹಿಂದೂಧರ್ಮ ಕುರಿತ ಸಪ್ತಬಂಧಿ ಫಿಲಾಸಫಿಯನ್ನು ಈ ದೇಶದ ಸಮಾಜವಾದಿಯೋ, ಎಡಪಂಥೀಯ ಚಿಂತಕರೋ ಪ್ರತಿಪಾದಿಸಿದ್ದರೆ, ನಮ್ಮ ಹಳದಿಗಣ್ಣಿನ ಇತಿಹಾಸಕಾರರು ಅವರನ್ನು ಹೊತ್ತು ಮೆರೆಯುತ್ತಿದ್ದರು. ಆದರೆ, ಇದೆಲ್ಲವನ್ನೂ ಅವರು ಹಿಂದುತ್ವವನ್ನು ನಿರಾಕರಿಸದೆ, ಎಲ್ಲವನ್ನೂ ಒಳಗೊಳ್ಳುವಿಕೆಯ ಸೂತ್ರದಡಿ ಪ್ರತಿಪಾದಿಸಿದರು. ಹಾಗಾಗಿ, ಬುದ್ಧಿಜೀವಿಗಳಿಗೆ ಕಷ್ಟವಾದರು. ಹೀಗೆ ಎಲ್ಲವನ್ನೂ ಪ್ರಾಂಜಲವಾಗಿ ಯೋಚಿಸಿದಾಗ ಅನಿಸಿದ್ದು ಸಾವರ್ಕರರಷ್ಟು ಪ್ರಖರ ‘ಹಿಂದೂ’ ಪ್ರಗತಿಪರ ಬುದ್ಧಿಜೀವಿ ಯಾರಿದ್ದಾರೆ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top