ಮೋದಿ ಎಂದರೆ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ

ಪ್ರಧಾನಿ ನರೇಂದ್ರ ಮೋದಿಯವರು ವೈಯಕ್ತಿಕವಾಗಿ ಹಾಗೂ ಸಾಂಘಿಕವಾಗಿ ಕೈಗೊಳ್ಳುವ ಕಾರ್ಯ, ತೋರುವ ಧೈರ್ಯ, ನಿಸ್ವಾರ್ಥ ಭಾವ, ದೇಶ ಮೊದಲು ಎಂಬ ಮನೋಭಾವ, ಕಾರ್ಯದ ವೇಗ….ಇತ್ಯಾದಿಗಳಲ್ಲಿ ಒಂದಂಶವನ್ನೂ ಪ್ರತಿಪಕ್ಷಗಳು ಹೊಂದಿಲ್ಲ. ಅವುಗಳ ಬಳಿ ಇರುವುದು ಕೇವಲ ಜಾತಿ, ಪ್ರದೇಶ, ಲಿಂಗದ ಆಧಾರದಲ್ಲಿ ಸಮಾಜವನ್ನು ವಿಂಗಡನೆ ಮಾಡಿ ಚುನಾವಣೆಯಲ್ಲಿ ಗೆಲ್ಲುವ ಮಾರ್ಗ
***********************************
2014ರ ಮೇ 16ರಂದು ಲೋಕಸಭೆ ಚುನಾವಣೆಗಳ ಫಲಿತಾಂಶ ಹೊರಬಂತು. ಅಂದು ಭಾರತದ ಇತಿಹಾಸದಲ್ಲಿ ಮೈಲಿಗಲ್ಲು. ಅದು ಕೇವಲ ನರೇಂದ್ರ ಮೋದಿ ಪ್ರಧಾನಿಯಾದರು ಎನ್ನುವುದಕ್ಕಲ್ಲ, ಪ್ರಜಾಪ್ರಭುತ್ವದ ಸೌಂದರ್ಯ ಮತ್ತೆ ಸುಂದರವಾಗಿ ಪ್ರಕಟೀಕರಣಗೊಂಡಿದ್ದಕ್ಕೆ !
ಈ ಫಲಿತಾಂಶದ ಮಹತ್ವದ ಅರಿವಾಗಬೇಕು ಎಂದರೆ 2014ರ ಮೇ 16ರ ಫಲಿತಾಂಶಕ್ಕೆ ಮೊದಲು ʼರಾಜಕೀಯ ಪಂಡಿತರು, ಎದುರಾಳಿ ಪಕ್ಷಗಳುʼ ಏನೇನು ಹೇಳಿದ್ದರು ಎನ್ನುವುದನ್ನು ನೋಡಬೇಕು.
2014ರ ಮಾರ್ಚ್‌ 26ರಂದು ದೆಹಲಿ ಸಿಎಂ ಹಾಗೂ ಅಂದು ವಾರಾಣಸಿಯಲ್ಲಿ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧೆ ಮಾಡಿದ್ದ ಅರವಿಂದ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದರು: ʼವಾರಾಣಸಿಯಲ್ಲಿ ಕಳೆದ ಎರಡು ದಿನಗಳಿಂದ ವಾತಾವರಣವನ್ನು ನೋಡಿದರೆ, ಮೋದಿಯವರು ಇಲ್ಲಿ ಸೋಲುತ್ತಾರೆ. ಹಾಗಾಗಿ ಅವರು ವಡೋದರಾ ಕ್ಷೇತ್ರದ ಕುರಿತು ಗಮನಹರಿಸುವುದು ಒಳ್ಳೆಯದುʼ. 2014ರ ಮೇ 2ರಂದು ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌, ʼಮೋದಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲʼ ಎಂದಿದ್ದರು.
ಪ್ರಸಿದ್ಧ ಇಂಗ್ಲಿಷ್‌ ಪತ್ರಿಕೆಯೊಂದರ ಮಾಲೀಕರು ಟ್ವೀಟ್‌ ಮಾಡಿ, ಈ ಬಹುಭಾಷಾ ಭಾರತವನ್ನು ಆಳಲು ಬಯಸುತ್ತಿರುವುದು, ಕೇವಲ ಹಿಂದಿಯಲ್ಲಿ ಮಾತನಾಡುವ ಮೋದಿ. ಇಡೀ ದೇಶ ಅವರ ಮಾತನ್ನು ಕೇಳುತ್ತದೆ ಎಂದು ಅವರು ಹೇಗಾದರೂ ಭಾವಿಸುತ್ತಾರೆ?, ಎಂದಿದ್ದರು.
ಇನ್ನೂ ಅನೇಕರು ಆಗಾಗ್ಗೆ ಹೇಳುತ್ತಿದ್ದ ಮಾತೆಂದರೆ, ಇನ್ನೇನಿದ್ದರೂ ಮೈತ್ರಿ ಯುಗ. ಇನ್ನು ಮುಂದಿನ ಮೂವತ್ತು ವರ್ಷದವರೆಗೆ ಇಡೀ ದೇಶವನ್ನು ಒಂದೇ ಪಕ್ಷ ಆಳುತ್ತದೆ ಎಂದು ಹೇಳಲು ಆಗುವುದೇ ಇಲ್ಲ. ಬಿಜೆಪಿಗೆ ಅಥವಾ ಕಾಂಗ್ರೆಸ್‌ಗೂ ಬಹುಮತ ಬರುವುದೇ ಅಸಾಧ್ಯ. . . ಹೀಗೆ ಸುಮಾರು 2012ರಿಂದ ಆರಂಭವಾದ ಇಂತಹ ಹೇಳಿಕೆಗಳು 2014ರ ಮೇ 16ರವರೆಗೆ ಮುಂದುವರಿದೇ ಇದ್ದವು. ಅವರೆಲ್ಲರ ಬಾಯಿ ಮುಚ್ಚಿಸಿದ್ದು ಅಂದಿನ ಫಲಿತಾಂಶ. ಅದಕ್ಕಾಗಿಯೇ ಇದು ಐತಿಹಾಸಿನ ದಿನ. ಇದನ್ನೇ ನಾನು ಪ್ರಜಾಪ್ರಭುತ್ವದ ನೈಜ ಸೌಂದರ್ಯ ಎಂದಿದ್ದು.
ಹಾಗಾದರೆ ದೇಶದ ಚುನಾವಣಾ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗಾಗಿಸುವಂತಹ ಕೆಲಸಗಳು ಏನು ನಡೆದವು? ಜನರು ಈ ಮಟ್ಟಿಗೆ ನರೇಂದ್ರ ಮೋದಿಯವರನ್ನು ಏಕೆ ನಂಬಿದರು ಎಂದು ಇನ್ನೂ ಬಿಜೆಪಿಯ ಎದುರಾಳಿ ಪಕ್ಷಗಳಿಗೆ ಗೊತ್ತಾಗಿಲ್ಲ. ಹಾಗಾಗಿಯೇ ಹತ್ತು ವರ್ಷಗಳಾದರೂ 2024ರಲ್ಲೂ ಅವರುಗಳು ಗೆಲ್ಲುವ ಯಾವ ಲಕ್ಷಗಳೂ ಕಾಣುತ್ತಿಲ್ಲ.
ನರೇಂದ್ರ ಮೋದಿಯವರನ್ನು ನಂಬಲು ಮುಖ್ಯ ಕಾರಣ ಅವರು ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು. ಅಭಿವೃದ್ಧಿ ಎಂದ ಕೂಡಲೆ ಎಷ್ಟು ರಸ್ತೆ ಮಾಡಿದರು, ಎಷ್ಟು ಆಸ್ಪತ್ರೆ ಕಟ್ಟಿದರು, ಎಷ್ಟು ಹೊಸ ರೈಲು ತಂದರು… ಇವಿಷ್ಟೇ ಅಲ್ಲ. ಇವೆಲ್ಲವೂ ಮುಖ್ಯವೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಇವಿಷ್ಟೇ ಅಲ್ಲ. ರಾಜಕಾರಣದಲ್ಲಿ ಜನರೊಂದಿಗೆ ಸಂವಹನ ಅತಿ ಮುಖ್ಯ. 2001ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾದಾಗಿನಿಂದ 2014ರವರೆಗೆ ಪ್ರಧಾನಿಯಾಗುವವರೆಗೂ, ಅನಂತರವೂ ಅವರು ಗುಜರಾತ್‌ ಜನರೊಂದಿಗಿನ ಸಂವಹನವನ್ನು ಬಿಟ್ಟಿಲ್ಲ.
ಮುಖ್ಯವಾಗಿ ಗುಜರಾತ್‌ನ ಉದ್ಯಮಿಗಳಿಗೆ ನರೇಂದ್ರ ಮೋದಿಯವರ ಕಾರ್ಯದ ಅರಿವಾಗಿದ್ದು ಅವರು ಉದ್ಯಮ, ವ್ಯಾಪಾರಕ್ಕಾಗಿ ಹೊರರಾಜ್ಯ, ಹೊರದೇಶಗಳಿಗೆ ಹೋದಾಗ.. ನಿಮ್ಮ ಮುಖ್ಯಮಂತ್ರಿ ಎಷ್ಟು ಅಭಿವೃದ್ಧಿ ಮಾಡುತ್ತಿದ್ದಾರೆ, ನೋಡಿ. ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆಯೇ ಎನ್ನುವುದೇ ಗೊತ್ತಾಗುತ್ತಿಲ್ಲ ಎಂಬ ಮಾತುಗಳನ್ನು ಗುಜರಾತ್‌ನ ಉದ್ಯಮಿಗಳು ಅನೇಕ ಬಾರಿ ಕೇಳಿದರು. ಗುಜರಾತ್‌ ರಾಜ್ಯದವರು ತಾವು ಎಂದು ಹೇಳಿಕೊಂಡರೆ ಹೊರರಾಜ್ಯದವರು ನೀಡುತ್ತಿದ್ದ ಗೌರವದ ಪ್ರಮಾಣದಲ್ಲಿ ಬದಲಾವಣೆ ಆಗಿತ್ತು. ಇದೆಲ್ಲವೂ ಯಾವಾಗಿನಿಂದ ಆಯಿತು ಎನ್ನುವುದನ್ನು ನೋಡಿದರೆ ಸರಿಯಾಗಿ 2002ರ ಆಸುಪಾಸಿಗೆ ತಂದು ನಿಲ್ಲಿಸುತ್ತಿತ್ತು. ಹಾಗಾಗಿ, ಅಭಿವೃದ್ಧಿ ಎಂದರೆ ಸಾವಿರಾರು ಕೋಟಿ ರೂ. ವೆಚ್ಚ ಮಾಡುವ ಟೆಂಡರ್‌ ಪ್ರಕ್ರಿಯೆ ಅಲ್ಲ, ಅದು ಜನರ ಹೃದಯದಲ್ಲಿ ಸ್ಥಾನ ಪಡೆಯುವ ಕಾರ್ಯ. ಗುಜರಾತ್‌ನಲ್ಲಿ ನಡೆಸಿದ ಇದೇ ಕಾರ್ಯವನ್ನು ದೇಶದ ಜನರು ಗುರುತಿಸಿದರು, 2014ರಲ್ಲಿ ಇದೇ ಪ್ರಮುಖ ಕಾರಣವಾಯಿತು.
ಎರಡನೆಯ ಮುಖ್ಯ ಕಾರಣವೆಂದರೆ ಬಿಜೆಪಿ ಪಕ್ಷ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೆಳವಣಿಗೆ ಕಾಣಬಹುದು, ಅದಕ್ಕೆ ಕುಟುಂಬದ ಹಿನ್ನೆಲೆ, ಹಣದ ಹಿನ್ನೆಲೆ, ಜಾತಿ ಹಿನ್ನೆಲೆ ಯಾವುದೂ ಬೇಕಾಗಿಲ್ಲ ಎನ್ನುವುದಕ್ಕೆ ಇದೀಗ ದೇಶದಲ್ಲಿ ಲಭ್ಯವಿರುವ ಒಂದೇ ಉದಾಹರಣೆ ಎಂದರೆ ಬಿಜೆಪಿ. ನರೇಂದ್ರ ಮೋದಿಯವರ ಸಂಘಟನಾ ಕೌಶಲ್ಯವನ್ನು ಗುರುತಿಸಿದ ಪಕ್ಷದ ವರಿಷ್ಠರು ಅವರನ್ನು ಗುಜರಾತ್‌ ಮುಖ್ಯಮಂತ್ರಿಯಾಗಿ ನಿಯುಕ್ತಿ ಮಾಡಿದರು. ವರಿಷ್ಠರ ನಂಬಿಕೆಯನ್ನು ಪ್ರತಿ ಹೆಜ್ಜೆಯಲ್ಲೂ ಉಳಿಸಿಕೊಳ್ಳುತ್ತ ಜನನಾಯಕರಾಗಿ ಮೋದಿ ರೂಪುಗೊಂಡರು. ಅಂತಹ ಸಹಜ ನಾಯಕತ್ವವಿರುವ ವ್ಯಕ್ತಿಗೆ ಅವಕಾಶ ನೀಡಿತು ಬಿಜೆಪಿ. ಈ ಸನ್ನಿವೇಶವನ್ನು ಕಾಂಗ್ರೆಸ್‌ನಲ್ಲಿ ಊಹಿಸಿಕೊಳ್ಳುವುದೂ ಅಸಾಧ್ಯ.
2014ರಲ್ಲಿ ಅಭೂತಪೂರ್ವ ಫಲಿತಾಂಶ ಹೊರಬರಲು ಮೂರನೆಯ ಅತಿ ದೊಡ್ಡ ಕಾರಣ ಎಂದರೆ ಅದಕ್ಕೂ ಹಿಂದಿನ ಹತ್ತು ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡಿದ್ದ ಭ್ರಷ್ಟಾಚಾರಗಳ ಸರಣಿ. ಹಾಗೆ ನೋಡಿದರೆ ಕಾಂಗ್ರೆಸ್‌ ಅವಧಿಯಲ್ಲೂ ಕೆಲವು ಉತ್ತಮ ನೀತಿಗಳನ್ನು ರೂಪಿಸಲಾಯಿತು. ಕೆಲವು ಉತ್ತಮ ಯೋಜನೆಗಳಿಗೂ ಚಾಲನೆ ನೀಡಲಾಯಿತು. ನರೇಗಾದಂತಹ ಕಾಯಿದೆ ರೂಪಿಸಲಾಯಿತು. ಆಧಾರ್‌ ಯೋಜನೆಯನ್ನೂ ಆರಂಭಿಸಲಾಯಿತು. ಈಗಲೂ ಕಾಂಗ್ರೆಸ್‌ನವರು ಅದನ್ನೇ ಹೇಳುತ್ತಾರೆ. ಆದರೆ ಆ ಯೋಜನೆಗಳ ಜಾರಿ ಯಾವ ರೀತಿ ಆಗಿತ್ತು ಹಾಗೂ ಅದರ ಜಾರಿಯ ವೇಗವನ್ನು ಎನ್ನುವುದನ್ನು ನೋಡಿದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರಗಳ ನಡುವಿನ ವ್ಯತ್ಯಾಸ ತಿಳಿಯುತ್ತದೆ. ಆದರೆ ಆ ಸರ್ಕಾರದಲ್ಲಿ ಹೊರಬಂದ ಸರಣಿ ಭ್ರಷ್ಟಾಚಾರ ವಿವಾದಗಳು ಒಂದೆರಡು ಒಳ್ಳೆಯ ಕೆಲಸಗಳನ್ನು ನುಂಗಿಹಾಕಿತು. ಈ ದೇಶಕ್ಕೆ ಭವಿಷ್ಯವೇ ಇಲ್ಲವೇನೋ ಎಂಬ ಭಾವನೆಯನ್ನು ಯುವಜನರಲ್ಲಿ ಮೂಡಿಸುತ್ತಿತ್ತು. ಈ ಮೂರು ಅಂಶಗಳೂ ಸೇರಿದ್ದರಿಂದಲೇ 2014ರಂದು ಬಿಜೆಪಿಯೊಂದೇ ಸರಳ ಬಹುಮತ ಪಡೆದು ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಈ ದೇಶದ ಜನರು ನೀಡಿದರು.
ಹಾಗಾದರೆ ಕಳೆದ ಹತ್ತು ವರ್ಷಗಳಲ್ಲಿ ಈ ನಂಬಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಉಳಿಸಿಕೊಂಡಿದ್ದಾರೆಯೇ? 2019ರ ಚುನಾವಣೆ ಫಲಿತಾಂಶವೇ ಅದನ್ನು ಹೇಳಿದೆ. ಇದೀಗ 2024ರಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು ಎನ್ನುವುದೇ ಅದನ್ನು ತಿಳಿಸುತ್ತಿದೆ.
ನರೇಂದ್ರ ಮೋದಿಯವರು ಆಗಮಿಸುವ ಮೊದಲು ಚುನಾವಣಾ ಕ್ಷೇತ್ರದಲ್ಲಿ ನಡೆಯುತ್ತಿದ್ದ ಅತಿ ದೊಡ್ಡ ಲೆಕ್ಕಾಚಾರವೆಂದರೆ, ʼಆಡಳಿತ ವಿರೋಧಿ ಅಲೆʼಯದ್ದು. ಯಾವುದೇ ಸರ್ಕಾರಕ್ಕಾದರೂ ಆಡಳಿತ ವಿರೋಧಿ ಅಲೆ ಇರುತ್ತದೆ. ಇದನ್ನು ಹೇಗೆ ಮೀರುವುದು ಎನ್ನುವುದು ಎಲ್ಲ ಪಕ್ಷಗಳಿಗೂ ಇರುವ ಸವಾಲು. ಹಾಗಾಗಿ ಒಮ್ಮೆ ಗೆದ್ದ ಪಕ್ಷವು ಮತ್ತೊಮ್ಮೆ ಗೆಲ್ಲುವುದು ಬಹಳ ಕಷ್ಟದ ಕೆಲಸ. ಭಾರತದ ಚುನಾವಣೆಗಳು ಯಾವಾಗಲೂ ʼಅಡ್ವಾಂಟೇಜ್‌ ಆಪೋಸಿಷನ್‌ ಪಾರ್ಟಿʼ. . . ಹೀಗೆಯೇ ಇರುತ್ತಿದ್ದವು ವಿಶ್ಲೇಷಣೆಗಳು. ಒಟ್ಟಾರೆ ಮತದಾನದ ಪ್ರಮಾಣದಲ್ಲಿ ಕಾಣಜತ್ತಿದ್ದ ಕುಸಿತವೂ ಇದನ್ನು ಸೂಚಿಸುತ್ತಿತ್ತು. ಕೇವಲ ರಾಜಕೀಯ ಪಕ್ಷಗಳ ಮೇಲಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆಯೇ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆಯೇ ಎನ್ನಿಸುತ್ತಿತ್ತು. ಕಮ್ಯುನಿಸ್ಟರೂ ಇದನ್ನೇ ದುರುಪಯೋಗಪಡಿಸಿಕೊಂಡು ಮತಪತ್ರದಲ್ಲಿ ನೋಟಾದಂತಹ ಆಯ್ಕೆ ನೀಡಲು ಪರೋಕ್ಷವಾಗಿ ಕಾರಣರಾದರು. ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ಜನರಿಗೆ ವಿಶ್ವಾಸ ಕಡಿಮೆಯಾಗುತ್ತಿದೆ ಎನ್ನುವುದನ್ನು ಬಿಂಬಿಸುತ್ತ ಕಮ್ಯುನಿಸಂ ಬೇರನ್ನು ಗಟ್ಟಿಗೊಳಿಸುವುದೂ ಅವರ ತಂತ್ರದ ಭಾಗವೇ ಆಗಿತ್ತು.
ಆದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಅದು ಲೋಕಸಭೆ ಆಗಿರಲಿ, ವಿಧಾನಸಭೆ ಚುನಾವಣೆಗಳೇ ಆಗಿರಲಿ, ಮತದಾರರಲ್ಲಿ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಹೆಚ್ಚಾಗಿರುವುದು ಕಾಣಿಸುತ್ತಿದೆ. (ಲಹಾಗೆ ನೋಟಿದರೆ, ಮತದಾರರ ಮನಸ್ಸಿನಿಂದ ಅಳಿಸಿಹೋಗುತ್ತಿರುವುದು ಪ್ರಜಾಪ್ರಭುತ್ವದ ಸೌಂದರ್ಯವಿಲ್ಲ, ಕಮ್ಯುನಿಸಂ ಚಿಂತನೆ. ಇದೇನೆ ಇರಲಿ, ಪ್ರಧಾನಿ ಮೋದಿಯವರೇ ಹೇಳಿದಂತೆ, ʼಡೆಮಾಕ್ರೆಸಿ ಕೆನ್‌ ಡೆಲಿವರ್‌ʼ ಎಂಬುದು ಸಾಬೀತಾಗುತ್ತಿದೆ. ಅಣ್ಣ ಬಸವಣ್ಣನವರ ವಚನ ಚಳವಳಿ ನಡೆದ ನಾಡು ಭಾರತ. ಈ ನಾಡಿನಲ್ಲಿ ಸಂಸತ್ತಿನ ಪರಿಕಲ್ಪನೆಯ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಕಾಣಿಸಿದ್ದು ಬಸವಣ್ಣನವರು. ಅಂತಹ ಬಸವೇಶ್ವರರು ಜೀವಿಸಿದ ಭಾರತ ದೇಶದಲ್ಲಿ ಪ್ರಜಾಪ್ರಭುತ್ವದ ಮೇಲಿನ ಆಸಕ್ತಿ ಕಡಿಮೆಯಾಗಿಲ್ಲ, ಹೆಚ್ಚಾಗುತ್ತಿದೆ ಎನ್ನುವುದು ಮೋದಿ ಅವಧಿಯಲ್ಲಿ ಕಾಣುತ್ತಿದೆ. ಹಾಗಾಗಿಯೇ ಮೋದಿ ಎಂದರೆ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಎಂದು ಖಡಾಖಂಡಿತವಾಗಿ ಹೇಳಬಹುದು.
ಇದೀಗ ಚುನಾವಣಾ ಆಯೋಗ ಘೊಷಿಸಿದಂತೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 96.8 ಕೋಟಿ. ಇವರಲ್ಲಿ 49.7 ಕೋಟಿ ಪುರುಷರು, 47.1 ಕೋಟಿ ಮಹಿಳೆಯರು. 1.8 ಕೋಟಿ ಯುವಜನರು ಇದೇ ಮೊದಲ ಬಾರಿಗೆ ಮತದಾನದ ಹಕ್ಕನ್ನು ಪಡೆದಿದ್ದಾರೆ. 88.4 ಲಕ್ಷ ಅಂಗವಿಕಲ ಮತದಾರರಿದ್ದು, 48,000 ತೃತೀಯ ಲಿಂಗಿಗಳು ಇದ್ದಾರೆ. 20-29 ವರ್ಷದ 19.74 ಕೋಟಿ ಮತದಾರರು, ನೂರು ವರ್ಷ ದಾಟಿದ 2.18 ಲಕ್ಷ ಮತದಾರರಿದ್ದಾರೆ ಎಂದು ಹೇಳಲಾಗಿದೆ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವದ ದೇಶ ಹೀಗೆ ಒಬ್ಬ ವ್ಯಕ್ತಿಗೆ ಮನ್ನಣೆ ನೀಡುತ್ತಿರುವುದರ ಕಾರಣವನ್ನು ಪ್ರತಿಪಕ್ಷಗಳು ಅರ್ಥಮಾಡಿಕೊಂಡಿದ್ದರೆ ದೇಶಕ್ಕೆ ಒಳ್ಳೆಯ ಪ್ರತಿಪಕ್ಷಗಳಾದರೂ ಸಿಗುತ್ತಿದ್ದವು.
ನರೇಂದ್ರ ಮೋದಿಯವರು ವೈಯಕ್ತಿಕವಾಗಿ ಹಾಗೂ ಸಾಂಘಿಕವಾಗಿ ಕೈಗೊಳ್ಳುವ ಕಾರ್ಯ, ತೋರುವ ಧೈರ್ಯ, ನಿಸ್ವಾರ್ಥ ಭಾವ, ದೇಶ ಮೊದಲು ಎಂಬ ಮನೋಭಾವ, ಕಾರ್ಯದ ವೇಗ. . . ಇತ್ಯಾದಿಗಳಲ್ಲಿ ಒಂದಂಶವನ್ನೂ ಪ್ರತಿಪಕ್ಷಗಳು ಹೊಂದಿಲ್ಲ. ಅವುಗಳ ಬಳಿ ಇರುವುದು ಕೇವಲ ಜಾತಿ, ಪ್ರದೇಶ, ಲಿಂಗದ ಆಧಾರದಲ್ಲಿ ಸಮಾಜವನ್ನು ವಿಂಗಡಣೆ ಮಾಡಿ ಚುನಾವಣೆಯಲ್ಲಿ ಗೆಲ್ಲುವ ಮಾರ್ಗ. ಮೋದಿಯವರಲ್ಲಿ ಹಾಗೂ ಅವರ ಸರ್ಕಾರದಲ್ಲಿರುವ ಒಂದೂ ಗುಣವನ್ನು ಮೈಗೂಡಿಸಿಕೊಳ್ಳದೆ ಗೆಲ್ಲಿಸಿ ಎಂದರೆ ಜನರು ಹೇಗೆ ಮನ್ನಣೆ ನೀಡುತ್ತಾರೆ? ಹಾಗಾಗಿ ಇದೀಗ ಘೋಷಣೆಯಾಗಿರುವ ಚುನಾವಣೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಗೆಲ್ಲುವುದು ನಿಶ್ಚಿತ ಎನ್ನುವುದು ಹೇಗೆ ಕಣ್ಣಿಗೆ ಕಾಣಸಿಗುತ್ತಿದೆಯೋ, ಎದುರಿಗಿನ ಪಕ್ಷಗಳನ್ನು ನೋಡಿದರೆ ಮೋದಿಯವರ ಗೆಲುವು ಎಷ್ಟು ಅನಿವಾರ್ಯ ಎನ್ನುವುದೂ ಅರ್ಥವಾಗುತ್ತದೆ.
ನಿಮಗೆ ಗೊತ್ತಿರಲಿ, ಮೋದಿ‌ 15 ವರುಷಗಳ‌ ಕಾಲ ಸಂಘದ ಪ್ರಚಾರಕರಾಗಿ ಶ್ರೀಸಾಮಾನ್ಯರ ಬದುಕನ್ನು, ಅವರ ಹೋರಾಟವನ್ನು ಬಹಳ ಹತ್ತಿರದಿಂದ
ನೋಡಿದ್ದಾರೆ. ಬಳಿಕ, ದಶಕಕ್ಕೂ ಹೆಚ್ಚುಕಾಲ ಗುಜರಾತ್ ಮುಖ್ಯಮಂತ್ರಿಯಾಗಿ, ಒಂದು ರಾಜ್ಯದ ಮುಖ್ಯಸ್ಥ ಏನು ಮಾಡಬೇಕು, ಏನು ಮಾಡಬಾರದು ಎಂಬ ಎರಡೂ ಸಂಗತಿಯನ್ನು ಅರೆದುಕುಡಿದಿದ್ದಾರೆ. ಕಳೆದ ಒಂದು ದಶಕದ ಅವಧಿಯಲ್ಲಿ ಪ್ರಧಾನಿಯಾಗಿ ದೇಶ ಮುನ್ನಡೆಸಿದ್ದಾರೆ. ರೈಲುನಿಲ್ದಾಣದಲ್ಲಿ‌ ಚಹಾ ಮಾರುವ ದೀನಬಂಧುವಿನಿಂದ ಹಿಡಿದು ಧೀರುಬಾಯಿ ಅಂಬಾನಿ ಮಕ್ಕಳವರೆಗೆ, ಎಲ್ಲರ ಜತೆಗೂ ಒಡನಾಡಿದ್ದಾರೆ. ಎಲ್ಲವೂ ಸೇರಿದರೆ
ಸುದೀರ್ಘ 35 ವರುಷಗಳ ಸಾರ್ವಜನಿಕ ಹಾಗೂ ಆಡಳಿತದ ಬದುಕಿನಲ್ಲಿ ಅವರಷ್ಟು
ಸಮೃದ್ಧ ಅನುಭವ ಕಂಡ ರಾಜಕಾರಣಿಯೂ, ಈ ದೇಶದಲ್ಲಿ ಯಾರೂ ಇರಲಿಕ್ಕಿಲ್ಲ‌‌. ಬಹಳ ವರುಷಗಳ ಬಳಿಕ ಈ ದೇಶಕ್ಕೆ, ದಿನದ 24 ಗಂಟೆಯೂ ಸಮಾಜಕ್ಕಾಗಿ ತುಡಿವ, ಮಿಡಿವ ಪ್ರಜಾ ನಾಯಕನೊಬ್ಬ ಸಿಕ್ಕಿದ್ದಾನೆ !
ಈ ಕಾರಣದಿಂದಲೇ ನಮ್ಮಂಥವರು ಹೇಳುತ್ತಿರುವುದು;
2024ರಲ್ಲಿ ಮೋದಿ ಉಳಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆ. ಎನ್ನುವುದಂತೂ ಖಚಿತ.
– ಹರಿಪ್ರಕಾಶ ಕೋಣೆಮನೆ
ವಕ್ತಾರ, ಬಿಜೆಪಿ ಕರ್ನಾಟಕ
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top