ಸಂಪೂರ್ಣವಾಗಿ ಕಳಚಿತು ಕಾಂಗ್ರೆಸ್ ಮುಖವಾಡ

ಬೇರೆ ಬೇರೆ ದೇಶಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಕುಸಿತ ಆಗುತ್ತಿದ್ದರೆ ಭಾರತವು ತನ್ನ ಸುಧಾರಣೆಗಳ ಮುಖಾಂತರ ಯಶಸ್ವಿಯಾಗಿ ಮುನ್ನಡೆದಿದೆ. ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಸುಧಾರಣೆ ಮೂಲಕ ಭಾರತವು ಹಣಕಾಸು ಕ್ಷೇತ್ರದಲ್ಲಿ ಸದೃಢವಾಗಿದೆ. ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ.
**************************
ದಕ್ಷಿಣ ಭಾರತ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮುಂದಿಡಬೇಕಿದೆ ಎಂದು ಕಾಂಗ್ರೆಸ್ ಪಕ್ಷದ ಕರ್ನಾಟಕದ ಸಂಸದರೊಬ್ಬರು ದನಿ ಎತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್, ಹಾಗಾಗಿ ದೇಶದ ಅಧಿಕಾರ ನಡೆಸುವುದು ತನ್ನ ಆಜನ್ಮ ಸಿದ್ಧಹಕ್ಕು, ಇಡೀ ದೇಶ ತನಗೆ ದೊರೆತಿರುವ ಬಳುವಳಿ ಎಂದೆಲ್ಲಾ ಭಾವಿಸಿರುವ ಕಾಂಗ್ರೆಸ್ ಹಾಗೂ ಅದರ ಮಾನಸಿಕತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ವಾಸ್ತವವಾಗಿ ಈ ದೇಶಕ್ಕೆ ಸ್ವಾತಂತ್ರ್ಯಬಂದ ತಕ್ಷಣ ರಚನೆಯಾದ ಜವಹಾರಲಾಲ್ ನೆಹರು ನೇತೃತ್ವದ ಸರಕಾರದಲ್ಲಿ, ಕಾಂಗ್ರೆಸ್ಸಿನ ಕಟ್ಟಾ ವಿರೋಧಿಗಳಾದ ಬಾಬಾ ಸಾಹೇಬ್ ಅಂಬೇಡ್ಕರ್, ಜನಸಂಘದ ಶ್ಯಾಂ ಪ್ರಸಾದ್ ಮುಖರ್ಜಿ ಸಹಿತ ಕಾಂಗ್ರೆಸ್ಸೇತರ ಹೋರಾಟಗಾರರೂ ಇದ್ದರು. ಯಾಕೆ ಹೀಗೆ ಎಂದು ಕೇಳಿದಾಗ, ಸ್ವಾತಂತ್ರ್ಯ ಬಂದಿದ್ದು ದೇಶಕ್ಕೆ ಹೊರತು ಕಾಂಗ್ರೆಸ್ಸಿಗಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದರಂತೆ ! ಈ ಕಾರಣದಿಂದಲೋ ಏನೋ, ಗಾಂಧೀಜಿ ಅವರು ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜಿಸಿ ಎಂದು ಕರೆ ನೀಡಿದ್ದರು. ಹೀಗಿದ್ದರು ಕಾಂಗ್ರೆಸಿಗರು ಮಾತ್ರ ಅಧಿಕಾರದ ಹಕ್ಕಿನ ವಾರಸುದಾರರಂತೆ ಈಗಲೂ ಮಾತನಾಡುತ್ತಾರೆ. ಇಂಥದ್ದೊಂದು ಮಾನಸಿಕತೆ ಬಂದಿದ್ದು ಎಲ್ಲಿಂದ ? ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಕಾಂಗ್ರೆಸ್ಸಿನ ಹುಟ್ಟು-ಬೆಳವಣಿಗೆ ಅರ್ಥ ಮಾಡಿಕೊಳ್ಳಬೇಕು.
ಕಾಂಗ್ರೆಸ್ ಆರಂಭಿಸಿದವರೂ ಒಬ್ಬ ಬ್ರಿಟಿಷರೇ ಆಗಿದ್ದರು. ಸ್ವಾತಂತ್ರ್ಯ ಚಳವಳಿ ಎನ್ನುವುದು ಕೆಲವು ನಾಯಕರ ನೇತೃತ್ವದಲ್ಲಿ ನಡೆಯುತ್ತಲೇ ಇತ್ತು. ಹೋರಾಟದ ಪ್ರಮುಖ ನಾಯಕರ ನಡುವೆ ಸಂಪರ್ಕಗಳು, ಸಂವಹನಗಳು ಇದ್ದವಾದರೂ ಒಟ್ಟಾರೆ ಹೋರಾಟ ವಿಕೇಂದ್ರೀಕೃತವಾಗಿತ್ತು. ಈ ಹೋರಾಟವನ್ನು ಮಹಾತ್ಮಾ ಗಾಂಧಿಯವರು ಒಂದು ಸಮೂಹಿಕ ಆಂದೋಲನವಾಗಿಸಿದರು. ಸ್ವತಃ ಬ್ಯಾರಿಸ್ಟರ್ ಆದರೂ ತುಂಡು ಬಟ್ಟೆಯನ್ನೇ ಧರಿಸಿ ಫಕೀರರಾದರು. ಸ್ವಾತಂತ್ರ್ಯ, ಬ್ರಿಟಿಷರ ಆಡಳಿತ, ಇತಿಹಾಸದ ಕುರಿತು ಮಾತನಾಡುವುದಕ್ಕಿಂತಲೂ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಲು ಆರಂಭಿಸಿದ್ದೇ ಗಾಂಧೀಜಿ ಆಂದೋಲನಕ್ಕೆ ಯಶಸ್ಸು ಸಿಗಲು ಪ್ರಮುಖ ಕಾರಣ. ಗಾಂಧೀಜಿ ಜತೆಗೆ ತೀವ್ರಗಾಮಿಗಳು, ಬಂಡಾಯಗಾರರು ಹೋರಾಟ ನಡೆಸುತ್ತಿದ್ದರು. ಇದೆಲ್ಲಾ ಕಾರಣಗಳಿಂದ ಬ್ರಿಟಿಷರು ದೇಶವನ್ನು ಬಿಟ್ಟು ಹೋಗುವುದು ಅನಿವಾರ್ಯವಾಯಿತು. ಇದೆಲ್ಲದರ ಸಾರ ಇಷ್ಟೆ- ಕಾಂಗ್ರೆಸ್ ಪಕ್ಷವು, ಭಾರತದ ಒಂದು ಸಾವಿರ ವರ್ಷದ ಸ್ವಾತಂತ್ರ್ಯ ಹೋರಾಟದ ಉತ್ತರಾಧಿಕಾರಿಯಲ್ಲ. ಪಕ್ಷದ ನಾಯಕರಿಗೆ ಅದು ಅರಿವಿಗೇ ಬರಲಿಲ್ಲ !
ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷವು ನಿಜವಾಗಿಯೂ ಒಂದು ರಾಷ್ಟ್ರೀಯವಾದಿ ಪಕ್ಷ. ಪಕ್ಷದ ಹೆಸರಿನಲ್ಲಿಯೇ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಎಂದಿದೆ. ಈಗಾಗಲೇ ಹೇಳಿದಂತೆ, ದೇಶಾದ್ಯಂತ ಸ್ವಾತಂತ್ರ್ಯ ಹೋರಾಟವನ್ನು ಪಸರಿಸಿದ್ದು, ಏಕಸೂತ್ರದಲ್ಲಿ ಬೆಸೆಯುವಂತೆ ಮಾಡಿದ್ದೇ ಕಾಂಗ್ರೆಸ್. ಆದರೆ ಅಲ್ಲಿನ ನಾಯಕರಿಗೆ ಈ ವಿಚಾರ ಮೈಗೂಡಲಿಲ್ಲ. ಬರಹಗಳಲ್ಲಿ, ಭಾಷಣದಲ್ಲೇನೋ ಪುಂಖಾನುಪುಂಖವಾಗಿ ರಾಷ್ಟ್ರೀಯತೆಯನ್ನು ಹೇಳುತ್ತಲೇ ಇದ್ದರು. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆಡಳಿತದಲ್ಲಿ ಪ್ರಮುಖವಾಗಿ ಅನುಸರಿಸಿದ್ದು ಆರು ಅಂಶಗಳು. 1. ಜಾತ್ಯತೀತತೆ, 2. ಸಮಾಜವಾದಿ, 3. ಯೋಜನೆ, 4. ಪತ್ರಿಕಾ ಸ್ವಾತಂತ್ರ್ಯ, 5. ಅಂತಾರಾಷ್ಟ್ರೀಯತೆ ಹಾಗೂ 6. ರಾಷ್ಟ್ರೀಯತೆ. ಈ ವಿಚಾರಗಳಲ್ಲಿ ಕೆಲವಕ್ಕೆ ಹೆಚ್ಚು ಆದ್ಯತೆ, ಕೆಲವಕ್ಕೆ ಕಡಿಮೆ ಆದ್ಯತೆ ನೀಡಿರಬಹುದು. ಆದರೆ ಎಲ್ಲವನ್ನೂ ಪಾಲಿಸಿದ್ದಾರೆ ಎನ್ನಬಹುದು. ರಾಷ್ಟ್ರೀಯತೆಯು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ, ರಾಷ್ಟ್ರೀಯತೆಯಿಂದಲೇ ಸಾಕಷ್ಟು ಪ್ರಮಾಣದಲ್ಲಿ ದೇಶದ ಜನರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ ಎಂದು ನಂಬಿದ್ದರು. ಆದರೇನು ಮಾಡುವುದು? ರಾಷ್ಟ್ರೀಯತೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರತಿಪಾದನೆ ಮಾಡಿಬಿಟ್ಟರೆ ಮುಸ್ಲಿಮರಿಗೆ ಬೇಸರವಾಗುತ್ತದೆ ಎಂಬ ಭಯ. ತಮ್ಮ ಆರು ಸಿದ್ಧಾಂತಗಳ ಪೈಕಿ ಜಾತ್ಯತೀತತೆಗೆ ಧಕ್ಕೆಯಾಗುತ್ತದೆ ಎಂಬ ಆತಂಕ. ಇದೇ ಕಾರಣಕ್ಕೆ ರಾಷ್ಟ್ರೀಯತೆ ಜತೆ ರಾಜಿಯಾಗುತ್ತಿದ್ದರು.
ಒಂದೆಡೆ ದೇಶದ ಅಖಂಡತೆ, ಸಾರ್ವಭೌಮತೆ ವಿಚಾರದಲ್ಲಿ ಮಾತನಾಡುತ್ತಿದ್ದ ನೆಹರೂ, ಅರುಣಾಚಲ ಪ್ರದೇಶದ ವಿಚಾರ ಬಂದ ಕೂಡಲೆ ತಣ್ಣಗಾಗುತ್ತಿದ್ದರು ಒಂದು ಹುಲ್ಲುಕಡ್ಡಿಯೂ ಹುಟ್ಟದ ಆ ಪ್ರದೇಶದ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಕೇಳುತ್ತಿದ್ದರು. ಈ ಮಾತಿಗೆ ಪ್ರತಿಕ್ರಿಯಿಸಿದ್ದ ನಾನಾಜಿ ದೇಶಮುಖ್, ನನ್ನ ಬೊಕ್ಕ ತಲೆಯಲ್ಲಿ ಒಂದು ಕೂದಲೂ ಇಲ್ಲ. ಇದನ್ನು ತೆಗೆದುಹಾಕಬೇಕೆ ಎಂದು ಪ್ರಶ್ನಿಸಿದ್ದರು. ದೇಶದ ಭೌಗೋಳಿಕತೆ ಜತೆಗೆ, ಇಲ್ಲಿನ ಬಹುಸಂಖ್ಯಾತ ಹಿಂದೂಗಳು ಹಾಗೂ ಹಿಂದುತ್ವದ ಬಗ್ಗೆ ಕಾಂಗ್ರೆಸ್ಸಿಗಿದ್ದ ಧೋರಣೆಯನ್ನು ನೋಡೋಣ.
ನೆಹರೂ ಅವರ ಕಾಲದಲ್ಲಿ ಕಾಂಗ್ರೆಸ್ ಅನುಸರಿಸಿಕೊಂಡುಬಂದಿದ್ದು ʼನಕಲಿ ಜಾತ್ಯತೀತವಾದʼ (ಸೂಡೋ ಸೆಕ್ಯುಲರಿಸಂ). ಆದರೆ ಆ ಸಂದರ್ಭದಲ್ಲೂ ಕಾಂಗ್ರೆಸ್ ವ್ಯಕ್ತಿತ್ವದಲ್ಲಿ ಹಿಂದೂ ಧರ್ಮದ ಕುರಿತು ಧ್ವೇಷಭಾವನೆ ಬೆಳೆದಿರಲಿಲ್ಲ. ನೆಹರೂ ಸಮಯದಲ್ಲಷ್ಟೆ ಅಲ್ಲ, ರಾಜೀವ್ ಗಾಂಧಿ ಕಾಲದವರೆಗೂ ಪರೋಕ್ಷವಾಗಿಯಾದರೂ ಹಿಂದೂ ಧರ್ಮದ ಕುರಿತು ಹಾಗೂ ದೇಶದ ಸಮಗ್ರತೆ, ಅಖಂಡತೆ ಕುರಿತು ಮೃದು ಭಾವನೆ ಹೊಂದಿತ್ತು. ಆದರೆ ಅಸಲಿಗೆ ಸೋನಿಯಾ ಗಾಂಧಿಯವರು ಭಾರತದ ರಾಜಕೀಯಕ್ಕೆ ಪ್ರವೇಶಿಸಿದ ನಂತರದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಪ್ರಮಾಣದಲ್ಲಿ ʼಹಿಂದೂ ವಿರೋಧಿʼಯಾಗಿ ತನ್ನ ಪೊರೆಯನ್ನು ಕಳಚಿಕೊಂಡು ನಿಂತಿತು.
ಈಗ ಸಂಸದ ಡಿ.ಕೆ. ಸುರೇಶ್ ಅವರ ಪ್ರತ್ಯೇಕ ದೇಶದ ಕೂಗಿನ ಬಗ್ಗೆ ಚರ್ಚಿಸೋಣ ಕೇಂದ್ರ ಸರ್ಕಾರವು ತಮಗೆ ಅನುದಾನವನ್ನು ಸರಿಯಾಗಿ ಹಂಚಿಕೆ ಮಾಡದೇ ಹೋದರೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡಬೇಕಾಗುತ್ತದೆ ಎಂಬುದು ಅವರ ಆಕ್ರೋಶ. ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸಿದ ನಂತರ ಈ ಮಾತನ್ನು ಹೇಳಿದ್ದಾರೆ. ಹಾಗಾದರೆ ಹಣಕಾಸು ಹಂಚಿಕೆಯಲ್ಲಿ ಅವಮಾನ ಆದ ಕೂಡಲೆ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡುವುದು ಪರಿಹಾರವೇ?
ಇದಕ್ಕೆ ಕಾಂಗ್ರೆಸ್ ಹಾಗೂ ದ್ರಾವಿಡ ಪಕ್ಷಗಳು ವಿಚಿತ್ರ ವಾದವನ್ನು ಮುಂದಿಡುತ್ತವೆ. ಕೇಂದ್ರ ಸರ್ಕಾರವು ರಾಜ್ಯಗಳಿಂದ ತೆರಿಗೆಯನ್ನು ಸಂಗ್ರಹಿಸುತ್ತದೆ, ಆದರೆ ಅದೇ ಪ್ರಮಾಣದಲ್ಲಿ ಹಂಚಿಕೆ ಮಾಡುವುದಿಲ್ಲ, ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿ, ದಕ್ಷಿಣದ ರಾಜ್ಯಗಳನ್ನು ಕಡೆಗಣಿಸುತ್ತದೆ ಎಂದು ಹೇಳುತ್ತಾರೆ. ಈ ಹಣಕಾಸು ಹಂಚಿಕೆ ನಡೆಯುವುದು ಹಣಕಾಸು ಆಯೋಗದ ಶಿಫಾರಸಿನ ಆಧಾರದಲ್ಲಿ. ಹೀಗಿದ್ದರೂ ತಾರತಮ್ಯದ ಆರೋಪವನ್ನು ಕೇಂದ್ರ ಸರ್ಕಾರದ ಮೇಲೆ ಏಕೆ ಹೊರಿಸಲಾಗುತ್ತದೆ ಎನ್ನುವುದಕ್ಕೆ ಅವರಲ್ಲಿ ಉತ್ತರವಿಲ್ಲ.
ಹಣಕಾಸು ಆಯೋಗವು ಜನಸಂಖ್ಯೆಯ ಆಧಾರದಲ್ಲಿ ಹಣಕಾಸನ್ನು ಹಂಚಿಸುತ್ತದೆ, ಉತ್ತರ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನನ್ನು ಪಾಲಿಸಿಲ್ಲವಾದ್ಧರಿಂದ ಅವರಿಗೆ ಹೆಚ್ಚು ಅನುದಾನ ನೀಡಿದ್ದಾರೆ ಎಂಬ ಅವೈಜ್ಞಾನಿಕ ಹೇಳಿಕೆಯನ್ನೂ ಕೇಳುತ್ತಿದ್ದೇವೆ. ಹಣಕಾಸು ಆಯೋಗವು ಜನಸಂಖ್ಯೆ ಜತೆಗೆ ಭೂಭಾಗ, ಆಯಾ ರಾಜ್ಯಗಳ ಹಣಕಾಸು ಸ್ಥಿತಿಗತಿ, ಭವಿಷ್ಯದ ಬೆಳವಣಿಗೆ ಹಾಗೂ ಸಂವಿಧಾನದ ಆಶಯಗಳನ್ನು ಆಧರಿಸಿ ಹಣ ಹಂಚಿಕೆಗೆ ಸೂತ್ರ ನಿಗದಿಮಾಡಿರುತ್ತದೆ. ಜಿಎಸ್ಟಿ ಜಾರಿ ನಂತರ ರಾಜ್ಯಗಳಿಗೆ ಅನುದಾನದಲ್ಲಿ ಮೋಸವಾಗಿದೆ ಎನ್ನುವುದು ಇನ್ನೊಂದು ವಾದ. ಜಿಎಸ್ಟಿ ಜಾರಿಯಾಗಿದ್ದು ಬಹುಮತದಿಂದಲ್ಲ, ಸರ್ವಾನುಮತದಿಂದ ಎಂದು ಈ ಕಾಂಗ್ರೆಸಿಗರಿಗೆ ಹೇಳಬೇಕಿದೆ. ಆಗ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರ ಪರಿಶ್ರಮದಿಂದಾಗಿ, ಎಲ್ಲ ರಾಜ್ಯಗಳೂ ಸರ್ವಾನುಮತದಿಂದ ಜಿಎಸ್ಟಿ ಜಾರಿಗೊಳಿಸಿದ್ದವು. ಬಿಜೆಪಿ, ಎನ್ಡಿಎ ಆಡಳಿತವಿರುವ ರಾಜ್ಯಗಳಷ್ಟೆ ಅಲ್ಲದೆ, ಕರ್ನಾಟಕದಂತಹ ಕಾಂಗ್ರೆಸ್ ಆಡಳಿತದ ರಾಜ್ಯಗಳೂ ಇದರಲ್ಲಿದ್ದವು. ಆಗೆಲ್ಲ ಒಪ್ಪಿದ ಪಕ್ಷ ಈಗ ರಾಜಕೀಯ ಕಾರಣಗಳಿಗಾಗಿ ಪ್ರತ್ಯೇಕತಾವಾದಕ್ಕೆ ಬೆಂಬಲ ನೀಡುತ್ತಿದೆ.
ಇರಲಿ, ಇಷ್ಟಕ್ಕೂ ಕರ್ನಾಟಕಕಕ್ಕೆ ಯಾರ ಅವಧಿಯಲ್ಲಿ ಎಷ್ಟು ಅನುದಾನ ಕೇಂದ್ರದಿಂದ ಬಂದಿದೆ ಎಂಬುದರ ಬಗ್ಗೆ ಗಮನಹರಿಸೋಣ. ಹಾಗೆ ನೋಡಿದರೆ ಕೇಂದ್ರ ಸರಕಾರದ ಕಳೆದ 10 ವರ್ಷಗಳ ಬಜೆಟಿನ ಕೇಂದ್ರ ವಸ್ತುವೆ- ವಿಕಸಿತ ಭಾರತ. ಇದರಲ್ಲಿ ವಿಕಸಿತ ಕರ್ನಾಟಕವೂ ಸೇರಿದೆ ಎಂಬುದನ್ನು ನಾವು ಮರೆಯಬಾರದು. ಜತೆಗೆ, ಅವರು ಎಂಥಾ ಸಂದರ್ಭದಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಹಾಗೂ ಏನು ನೀಡಿದ್ದಾರೆ ಎಂಬುದು ಕೂಡ ಮುಖ್ಯವೇ. ಬೇರೆಬೇರೆ ದೇಶಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಕುಸಿತ ಆಗುತ್ತಿದ್ದರೆ, ಭಾರತವು ತನ್ನ ಸುಧಾರಣೆಗಳ ಮುಖಾಂತರ ಅತ್ಯಂತ ಯಶಸ್ವಿಯಾಗಿ ಮುನ್ನಡೆದಿದೆ. ಹಲವು ದಶಕಗಳ ತಪ್ಪಿನ ನಂತರ ನರೇಂದ್ರ ಮೋದಿಜೀ ಅವರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಸುಧಾರಣೆ ಮೂಲಕ ಭಾರತವು ಹಣಕಾಸು ಕ್ಷೇತ್ರದಲ್ಲಿ ಸದೃಢವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕಕ್ಕೂ ಕೂಡ ಮೋದಿಜೀ ಕಳೆದ 10 ವರ್ಷಗಳಲ್ಲಿ ಅನೇಕ ಯೋಜನೆಗಳನ್ನು ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟ ಡಿ.ಕೆ.ಸುರೇಶ್ ಹಾಗೂ ಹೇಳಿಕೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿರುವ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ನಾನಿಲ್ಲಿ ಒಂದಿಷ್ಟು ಅಂಕಿ-ಸಂಖ್ಯೆಯನ್ನು ನೀಡುವೆ. ಇದೆಲ್ಲಾ ಕರ್ನಾಟಕದ ಜನತೆಗೆ ಗೊತ್ತಿರುವ ವಿಷಯ. ಆದರೆ ಏನು ಮಾಡುವುದು ? ಇದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲ!
ತೆರಿಗೆ ವಿತರಣೆ ಕುರಿತು ಹೇಳುವುದಾದರೆ, ಯುಪಿಎ ಅವಧಿಯ 2004-2014ನೇ ಸಾಲಿನಲ್ಲಿ ಕರ್ನಾಟಕಕ್ಕೆ ಬಂದಿರುವ ಪಾಲು 81,795 ಕೋಟಿ ರೂ. ಆದರೆ, ಮೋದಿ ನೇತೃತ್ವದ ಬಿಜೆಪಿ ಸರಕಾರದ
2014-2024ರ ಅವಧಿಯಲ್ಲಿ ಕರ್ನಾಟಕ ಪಡೆದಿರುವ ತೆರಿಗೆ ಪಾಲು 2,82,791 ಕೋಟಿ ರೂ. ಅಂದರೆ ಹತ್ತಿರಹತ್ತಿರ 2 ಸಾವಿರ ಕೋಟಿ ರೂ ಅಧಿಕ
ಅಭಿವೃದ್ಧಿ ಅನುದಾನ ಯುಪಿಎ ಅವಧಿಯ ಹತ್ತು ವರ್ಷಗಳಲ್ಲಿ 60,779 ಕೋಟಿ ರೂ. ಆದರೆ, ಎನ್ಡಿಎ ಅವಧಿಯ ಕಳೆದ 10 ವರ್ಷದಲ್ಲಿ ಇದರ ಪ್ರಮಾಣ 2,08,882 ಕೋಟಿ ರೂ.ನಷ್ಟಿದೆ. ತಾರತಮ್ಯ ಮಾಡಿದ್ದು ಯಾರು ಸುರೇಶ್ ಅವರೇ ? ಇಂಥಾ 20 ಸಂಗತಿಗಳನ್ನು ಮುಂದಿಡುವೆ. ಅಭಿವೃದ್ಧಿ ತಾರತಮ್ಯ ಎಂದು ವಾದಿಸುವವರು ಸಾವಧಾನವಾಗಿ ಓದಬೇಕಷ್ಟೆ,
ಸ್ವಾತಂತ್ರ್ಯ ಬಂದ 1947ರಿಂದ ಯುಪಿಎ ಸರಕಾರೆದ ಕಟ್ಟಕಡೆಯ ಆಡಳಿತ ವರ್ಷವಾದ 2014ರವರೆಗೆ ಕರ್ನಾಟಕದಲ್ಲಿ ನಿರ್ಮಾಣಗೊಂಡ ರಾಷ್ಟ್ರೀಯ ಹೆದ್ದಾರಿಯ ಪ್ರಮಾಣ 6750 ಕಿ. ಮೀ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ 13,500 ಕಿ.ಮೀ. ಹೆದ್ದಾರಿ ನಿರ್ಮಾಣಗೊಂಡಿದೆ. ರಾಜ್ಯದ ರೈಲ್ವೆ ಯೋಜನೆಗಳಿಗೆ
2009-2014ರ ಅವಧಿಯಲ್ಲಿ 835 ಕೋಟಿ ರೂ, ಬಿಡುಗಡೆಯಾಗಿದ್ದರೆ, 2014-2023ರ ನಡುವೆ 11,000 ಕೋಟಿ ರೂ. ಹರಿದು ಬಂದಿದೆ. (2023-24 ರ ಬಜೆಟ್ ನಲ್ಲೆ ಕರ್ನಾಟಕಕ್ಕೆ ರೈಲ್ವೆಗೆ 7,524 ಕೋಟಿ ರೂ. ಹಂಚಿಕೆ )
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸಿದ ಅವಧಿಯಲ್ಲಿ ರೈಲ್ವೆ ವಿದ್ಯುದೀಕರಣವಾಗಿದ್ದು ಬರೀ 16 ಕಿಲೋಮೀಟರ್ ಮಾತ್ರ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇದರ ಪ್ರಮಾಣ 3,265 ಕಿಲೋ ಮೀಟರ್ !
ಮನೆ ಮನೆಗೆ ನಲ್ಲಿ ನೀರು ಜೋಡಿಸುವ ಕೆಲಸ 2014ರವರೆಗೆ ಕರ್ನಾಟದಲ್ಲಿ ಆಗಿದ್ದು 24 ಲಕ್ಷ ಮನೆಗಳಿಗೆ ಮಾತ್ರ. ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಜಲ್ ಜೀವನ್ ಮಿಶನ್ ದೆಶೆಯಿಂದಾಗಿ 73.75 ಲಕ್ಷ
ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಗಿದೆ. ಬೆಂಗಳೂರು ಸಾರಿಗೆ ಸವಾಲನ್ನು ಕಡಿಮೆ ಮಾಡಿರುವ ಮೆಟ್ರೋ ವಿಸ್ತಾರಗೊಳ್ಳುತ್ತಿರುವುದು ಕೂಡ ಮೋದಿ ಕಾಲದಲ್ಲಿಯೇ. 2014ರವರೆಗೆ 7 ಕಿಲೋಮೀಟರ್ ಮಾತ್ರ ಮೆಟ್ರೋ ಸಂಪರ್ಕ ಇತ್ತು. ಈಗ ಅದು ಹತ್ತುಪಟ್ಟು, ಅಂದರೆ 73 ಕಿಲೋಮೀಟರ್ಗೆ ವೃದ್ಧಿಸಿದೆ. ಮನಮೋಹನ್ ಸಿಂಗ್ ಅವರ ಅಧಿಕಾರವಧಿ ಮುಗಿಯುವ ವೇಳೆಗೆ ಕರ್ನಾಕಟದಲ್ಲಿದ್ದ ಏರ್ಪೋರ್ಟ್ ಸಂಖ್ಯೆ 7 ಮಾತ್ರ. ಈ ಹತ್ತು ವರ್ಗಗಳಲ್ಲಿ ಅದು 14ಕ್ಕೆ ಏರಿದೆ.
ಕರ್ನಾಟಕದ ಸಾರಿಗೆ, ಮೂಲ ಸೌಕರ್ಯಕ್ಕೆ ಮಾತ್ರವಲ್ಲ ಇಲ್ಲಿನ ಶೈಕ್ಷಣಿಕ ಹಾಗೂ ಜನಜೀವನದ ಅಭಿವೃದ್ಧಿಗೂ ಮೋದಿ ಸರಕಾರದ ಕೊಡುಗೆ ಅಪಾರವಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3000 ಕೋಟಿ ರೂ ಅನುಮೋದನೆ ನೀಡಿದ್ದಾರೆ. ಕರ್ನಾಟಕಕ್ಕೆ ಮೊದಲ ಐಐಟಿ ಮಂಜೂರು ಮಾಡಿದ್ದಾರೆ. ಚಿಕ್ಕಬಳ್ಳಾಪುರ, ಹಾವೇರಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುವು ಮಾಡಿಕೊಟ್ಟಿದ್ದಾರೆ. ಚಿತ್ರದುರ್ಗ ಸೀಮೆಯ ಬರಪೀಡಿತ ಜನರಿಗಾಗಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಿಸಿದ್ದಾರೆ. ಬೆಂಗಳೂರಿನ ಔಟರ್ ರಿಂಗ್ ರೋಡಿಗೆ 5,500 ಕೋಟಿಗೂ ಹೆಚ್ಚು ಹಣ ಒದಗಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ 7 ನಗರಗಳಿಗೆ 7,281 ಕೋಟಿ ಹರಿದು ಬಂದಿದೆ. ಕಿಸಾನ್ ಸಮ್ಮಾನ್ ಅಡಿಯಲ್ಲಿ ರಾಜ್ಯದ ರೈತರಿಗೆ ನೀಡಿರುವ 10,990 ಕೋಟಿ ರೂ. ರೈತರ ಮುಖದಲ್ಲಿ ನಗು ತಂದಿದೆ,
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ, ಮೋದಿ ಅವರು ರಾಜ್ಯದ 62 ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ಪಡೆದಿದ್ದಾರೆ. ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ 10 ಕೋಟಿ ಉಚಿತ ಡೋಸ್ ಹಾಕಿಸಿಕೊಂಡಿದ್ದಾರೆ.
ಪಿಎಂ ಗತಿ ಶಕ್ತಿ, ಸಾಗರಮಾಲಾ, ಪಿಎಂ ಆವಾಸ್, ಸಾಗರ್ ಮಾಲಾ ಯೋಜನೆಯಡಿ ರಾಜ್ಯಕ್ಕೆ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ನೆರವು ಸಿಕ್ಕಿದೆ. ಇನ್ನೂ ಹೇಳಬೇಕಿರುವ ಸಂಗತಿಗಳು ಬಹಳಷ್ಟಿವೆ.
ಯಾಕೆ ಈ ಪಟ್ಟಿಯನ್ನು ನೀಡಿದೆ ಎಂದರೆ, ಮೋದಿ ಅವರು ರಾಮಮಂದಿರ, ಹಿಂದೂತ್ವ, ರಾಷ್ಟ್ರೀಯತೆ ಎಂಬ ಭಾವನಾತ್ಮಕ ಸಂಗತಿಗಳ ಮೇಲೆ ಮತಕೇಳುತ್ತಾರೆ. ಹಿಂದಿ ಭಾಷಿಕರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಾಗಾಗಿ ಜನ ಅವರನ್ನು ಆಯ್ಕೆ ಮಾಡುತ್ತಾರೆ ಎಂದೇ ಈ ದೇಶದ ಒಂದು ವರ್ಗದ ಬುದ್ಧಿಜೀವಿಗಳು ಹೇಳುತ್ತಾ ಬಂದಿದ್ದಾರೆ. ಅದರೆ, ಮೋದಿಯನ್ನು ನಂಬಿರುವ ಜನ ಬುದ್ಧಿವಂತರು. ಕಳೆದ ದಶಕದಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸುತ್ತಲೇ ಇದ್ದಾರೆ. ಅಭಿವೃದ್ಧಿ ಅವರ ಕಣ್ಣಿಗೆ ಕಾಣುತ್ತಿದೆ ಹಾಗೂ ಅದು ಅವರ ಜೀವನವನ್ನು ಸರಳವಾಗಿಸಿದೆ !
ಈಗ ಮತ್ತೆ ಕರ್ನಾಟಕದ ಸಂಸದ ಸುರೇಶ್ ಅವರ ಹೇಳಿಕೆ ಕಡೆ ಬರೋಣ.
ಕರ್ನಾಟಕ ರಾಜ್ಯವು ಏಕೀಕರಣವಾಗಿ ಐದು ದಶಕಗಳೇ ಕಳೆದರೂ ಕಲ್ಯಾಣ ಕರ್ನಾಟಕ ಭಾಗ (ಈ ಹಿಂದೆ ಹೈದರಾಬಾದ್ ಕರ್ನಾಟಕ) ಅಭಿವೃದ್ಧಿಯ ಅನೇಕ ಮಾನದಂಡಗಳಲ್ಲಿ ಹಿಂದುಳಿದಿತ್ತು. ಇದನ್ನು ಸರಿಪಡಿಸಲೆಂದೇ ಸಂವಿಧಾನದ ಅನುಚ್ಛೇದ 371 ಜೆ ಜಾರಿಗೆ ಹೋರಾಟ ನಡೆಸಿ ಅನುಷ್ಠಾನ ಮಾಡಲಾಗಿದೆ. ಅನುಚ್ಛೇದ 371 ಜೆ ಜಾರಿ ಮಾಡಿದ್ದು ತಾವೇ ಎಂದು ಸ್ವತಃ ಕಾಂಗ್ರೆಸಿಗರು ಬಢಾಯಿ ಕೊಚ್ಚಿಕೊಳ್ಳುತ್ತಾರೆ. ಈಗ ಕರ್ನಾಟಕದ ಯಾವುದೇ ಭಾಗದಲ್ಲಿ ಸರ್ಕಾರಿ ನೌಕರಿಗೆ ಅರ್ಜಿ ಆಹ್ವಾನಿಸಿದರೂ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಮೀಸಲಾತಿ ನೀಡಲಾಗುತ್ತದೆ. ಕರ್ನಾಟಕದ ಇತರೆ ಭಾಗದ ಜನರು ಎಂದಾದರೂ ಇದನ್ನು ವಿರೋಧಿಸಿದ್ದಾರೆಯೇ? ಹಾಗೊಂದು ವೇಳೆ ವಿರೋಧಿಸಿದರೂ ಅದು ಸರಿಯೇ? ಬೆಂಗಳೂರಿನಿಂದಲೇ ಬಹಳಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತದೆ. ಬೆಂಗಳೂರಿನ ತೆರಿಗೆಯನ್ನು ಇಲ್ಲಿಯೇ ಖರ್ಚು ಮಾಡಬೇಕು, ದೂರದ ವಿಜಯಪುರಕ್ಕೆ ಕೊಡಕೂಡದು ಎಂದರೆ ಅದರಷ್ಟು ಅರ್ಥಹೀನ ಹೇಳಿಕೆ ಇನ್ನೊಂದು ಇರುವುದಿಲ್ಲ
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top