ಭಾರತಕ್ಕೆ ಇನ್ನೆಷ್ಟುʼನರೇಂದ್ರ ಮೋದಿʼಗಳು ಬೇಕು?

ಪ್ರಧಾನಿ ನರೇಂದ್ರ ಮೋದಿ ಜನರ ನಿರೀಕ್ಷೆಗಿಂತಲೂ ದೊಡ್ಡ ಗುರಿಯನ್ನು ತಾವೇ ಹಾಕಿಕೊಳ್ಳುತ್ತಾರೆ‌, ಹಾಗೂ ಅಚ್ಚರಿಯೆಂಬಂತೆ ಅದನ್ನು ಈಡೇರಿಸುತ್ತಾರೆ. ಈ ವಿಚಾರಗಳು ಭಾರತೀಯರಿಗೆ ಈಗಾಗಲೇ ಮನವರಿಕೆಯೂ ಆಗಿವೆ. ಜನರೇ ಅಚ್ಚರಿಪಡುವಂಥ ಗುರಿಯನ್ನೇ ಮೋದಿಯವರು ನಿಗದಿಪಡಿಸುತ್ತಾರೆ. ಆಗ ಸ್ವಾಭಾವಿಕವಾಗಿ ಜನರ ಆಕಾಂಕ್ಷೆಗಳು ಹೆಚ್ಚಾಗುತ್ತವೆ.
********************************
ಕರ್ನಾಟಕದಲ್ಲಿ ಐಪಿಎಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ,
ಸ್ವಯಂ ನಿವೃತ್ತಿ ಪಡೆದು ಇದೀಗ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಕೆ. ಅಣ್ಣಾಮಲೈ ಅವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೋವೊಂದನ್ನು ಇತ್ತೀಚೆಗೆ ನೋಡುತ್ತಿದ್ದೆ. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ-AI) ಆಗಮನ ಹಾಗೂ ಸಮಾಜದ ಮೇಲೆ ಅದರ ಪರಿಣಾಮವನ್ನು ನೀವು ಹೇಗೆ ನೋಡುತ್ತೀರಿ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ನಮ್ಮ ಸಾಮಾನ್ಯ ರಾಜಕಾರಣಿಗಳಾಗಿದ್ದರೆ ಅದರ ಉತ್ತರ ನಮಗೆಲ್ಲ ತಿಳಿದೇ ಇದೆ. ನಮ್ಮ ಸರ್ಕಾರ ಇದಕ್ಕೆ ಪೂರಕವಾದ ನೀತಿ ರೂಪಿಸುತ್ತದೆ, ಭ್ರಷ್ಟಾಚಾರ ಹೋಗಲಾಡಿಸುತ್ತದೆ, ಎಐನಿಂದ ಬಾಧಿತರಾದ ಸಂತ್ರಸ್ತರಿಗೆ ಒಂದು ಲಕ್ಷ ಕೋಟಿ ರೂ. ಪ್ಯಾಕೇಜ್‌ ಘೋಷಿಸಿ ಅವರೆಲ್ಲರನ್ನೂ ಸಾಕುತ್ತದೆ. . . ಈ ರೀತಿ ಉತ್ತರ ಕೊಡುತ್ತಿದ್ದರು. ಅಣ್ಣಾಮಲೈ ಸಾಮಾನ್ಯ ರಾಜಕಾರಣಿಯಲ್ಲ. ಅವರೊಬ್ಬ ಆರ್ಥಿಕ ತಜ್ಞನ ರೀತಿ ಮಾತನಾಡಿದರು. ಈಗ ಭಾರತದ ಜಿಡಿಪಿ 3.8 ಟ್ರಿಲಿಯನ್‌ ಅಮೆರಿಕನ್‌‌ ಡಾಲರ್‌ ಇದೆ. ಚೀನಾ ಜಿಡಿಪಿ 17.2 ಟ್ರಿಲಿಯನ್‌, ಅಮೆರಿಕ ಜಿಡಿಪಿ 37.8 ಟ್ರಿಲಿಯನ್‌‌ ಇದೆ. ಭಾರತವು ಇನ್ನೊಂದೆರಡು ವರ್ಷದಲ್ಲಿ ಮೂರನೇ ಆರ್ಥಿಕತೆ ಆಗಲಿದೆ. ಆದರೆ 2047ಕ್ಕೆ ವಿಕಸಿತ ಭಾರತ ಆಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಹಾಗೂ ಸ್ವತಃ ತಮಗೆ ತಾವೇ ವಿಧಿಸಿಕೊಂಡಿರುವ ಗುರಿ. 2047ಕ್ಕೆ ಅಭಿವೃದ್ಧಿ ಹೊಂದಿದ ದೇಶ ಮಾಡಬೇಕು ಎಂದರೆ ಭಾರತವು ಅಮೆರಿಕದ ಆರ್ಥಿಕತೆಯನ್ನು ಹಿಂದಿಕ್ಕಬೇಕು. ಅದು ಸಾಧ್ಯವಾಗಬೇಕೆಂದರೆ ಭಾರತ ಇಂದಿನಿಂದಲೇ ಪ್ರತಿ ವರ್ಷ ಶೇ.13.5ರಷ್ಟು ದರದಲ್ಲಿ ಪ್ರತಿ ವರ್ಷ ಬೆಳವಣಿಗೆ ಕಾಣಬೇಕು. ಇದು ಒಂದೆರಡು ವರ್ಷದ ಮಾತಲ್ಲ. ಸತತ 25 ವರ್ಷ ಈ ರೀತಿ ಬೆಳವಣಿಗೆ ಆಗಬೇಕು. ಅಷ್ಟೆ ಅಲ್ಲ. ಅಮೆರಿಕದ ಆರ್ಥಿಕತೆ ಪ್ರತಿ ವರ್ಷ ಶೇ.4 ದರದಲ್ಲೇ ಮುಂದುವರಿಯಬೇಕು. ಇದರಲ್ಲಿ ಸಮಸ್ಯೆಯೇನು? ಇಲ್ಲಿವರೆಗೆ ವಿಶ್ವದಲ್ಲಿ ಯಾವುದೇ ಆರ್ಥಿಕತೆ ಶೇ.13.5 ದರದಲ್ಲಿ ನಿರಂತರ ಎರಡು ವರ್ಷಕ್ಕಿಂತ ಹೆಚ್ಚು ಅವಧಿಗೆ ಬೆಳವಣಿಗೆ ಕಂಡಿಲ್ಲ. ಅಂದರೆ ಈ ಗುರಿ ಬಹಳ ಕಷ್ಟದ್ದು. ಈ ರೀತಿ ಭಾರತ ಮುಂದಿನ 25 ವರ್ಷ ಬೆಳವಣಿಗೆ ಕಂಡರೆ 2047ಕ್ಕೆ ಭಾರತ ಹಾಗೂ ಅಮೆರಿಕದ ಆರ್ಥಿಕತೆ ಒಂದೇ ಆಗಿರುತ್ತದೆ. . .
ಅಣ್ಣಾಮಲೈ ಇನ್ನೂ ಮಾತಾಡುತ್ತಲೇ ಸಾಗಿದರು. ಅದನ್ನು ಪೂರ್ಣ ಹೇಳಲು ಇಲ್ಲಿ ಹೋಗುವುದಿಲ್ಲ. ಆದರೆ ಇಷ್ಟು ಮಾತುಗಳನ್ನು ಕೇಳುವ ಹೊತ್ತಿಗೆ ಒಂದು ಆಳೋಚನೆ ಬಂದಿತು. ನಮ್ಮೆದುರು ಎಷ್ಟೊಂದು ಸವಾಲುಗಳಿವೆಯಲ್ಲ, ಇದೆಲ್ಲವನ್ನೂ ಪರಿಹರಿಸಬೇಕೆಂದರೆ ದೇಶದ ನಾಯಕತ್ವ ಬಹಳ ಮುಖ್ಯವಲ್ಲವೇ? ನಾಯಕತ್ವ ಎಂದರೆ ಕೇವಲ ಚುನಾವಣೆಯಲ್ಲಿ ಗೆದ್ದು ಬರುವುದಷ್ಟೆ ಅಲ್ಲ, ಮುಂದಿನ 10-15-20 ವರ್ಷಗಳ ನಂತರ ದೇಶ ಹೇಗಿರಬೇಕು ಎಂದು ಕನಸು ಕಾಣುವ, ಅದಕ್ಕೆ ತಕ್ಕಂತೆ ಯೋಜನೆ ಜಾರಿಗೊಳಿಸುವ ದಾರ್ಶನಿಕತ್ವ.
ಕಳೆದ 10 ವರ್ಷದ ಹಿಂದಿನವರೆಗೆ ನಮ್ಮನ್ನಾಳಿದ ಅನೇಕರು ನಡೆದುಕೊಂಡ ರೀತಿ ಏನು? ಮುಂದಿನ 20 ವರ್ಷವಿರಲಿ. ಅಂದಿನ ಸಮಸ್ಯೆಗೇ ಅವರಲ್ಲಿ ಪರಿಹಾರ ಇರಲಿಲ್ಲ. ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಫ್ಲೈ ಓವರ್‌ ನಿರ್ಮಾಣ ಎಂದು ಘೋಷಿಸಿದರೆ, ಆ ಫ್ಲೈ ಓವರ್‌ ನಿರ್ಮಾಣ ಆಗುವ ವೇಳೆಗೆ ಅದರ ಪ್ರಸ್ತುತತೆಯೇ ಹೋಗಿಬಿಟ್ಟಿರುತ್ತದೆ. ಬೆಂಗಳೂರಿನ ಮೆಟ್ರೋ ರೈಲು ಯೋಜನೆ ಇನ್ನೂ ನಿರ್ಮಾಣ ಆಗುತ್ತಲೇ ಇದೆ. ಇದು ಬೆಂಗಳೂರಿನ ಸಮಸ್ಯೆ ಮಾತ್ರವಲ್ಲ, ದೇಶದಲ್ಲೆಲ್ಲ ಇದೇ ಸ್ಥಿತಿ. 2017ರ‌ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಯಾವ ರೀತಿ ಸರ್ಕಾರ ನಡೆಸುತ್ತಿತ್ತು ಎನ್ನುವುದನ್ನು ವಿವರಿಸಿದ್ದರು. ಯಾವುದೇ ಯೋಜನೆ ಹಾಗೂ ಕಡತವನ್ನು ʼಅಟಕಾನಾ, ಲಟಕಾನಾ ಹಾಗೂ ಭಟಕಾನಾʼ ಮೂಲಕ ಯೋಜನೆ ಜಾರಿ ಆಗುತ್ತಿತ್ತು. ಅಂದರೆ ಯೋಜನೆ ಘೋಷಿಸಿ ಅದರ ಆರಂಭಕ್ಕೆ ಅಡ್ಡಿ ಮಾಡುವುದು. ಜಾರಿಯಾದ ನಂತರ ಮಧ್ಯದಲ್ಲೆಲ್ಲೋ ಅನುದಾನ ಸಮಸ್ಯೆ ಉಂಟುಮಾಡಿ ತೂಗುಹಾಕಿಬಿಡುವುದು. ಮೂರನೆಯದು-ಯೋಜನೆಯ ಟೆಂಡರ್‌ ಪಡೆದವರು ಹಾಗೂ ಯೋಜನೆಯ ಫಲಾನುಭವಿಗಳಾಗಬೇಕಾದವರು ಸರ್ಕಾರಿ ಕಚೇರಿಗೆ ಸುತ್ತಿ ಸುತ್ತಿ ಸುಸ್ತಾಗುವುದು. ಹೀಗೇ ಇಡೀ ಸರ್ಕಾರಿ ವ್ಯವಸ್ಥೆಯ ಮಾನಸಿಕತೆ ನಿರ್ಮಾಣವಾಗಿತ್ತು..
ಈ ಮಾನಸಿಕತೆಯನ್ನು ಬದಲಾಯಿಸಲು ಕಳೆದ ಹತ್ತು ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ ಹಾಗೂ ಸಾಕಷ್ಟು ಯಶಸ್ಸನ್ನೂ ಕಂಡಿದೆ. ಭಾರತದಂತಹ ಸಂಕೀರ್ಣ ದೇಶದಲ್ಲಿ ಕೇವಲ ಹತ್ತು ವರ್ಷದಲ್ಲಿ ಬದಲಾವಣೆ ತರುವುದು ಎಂದರೆ ಸುಲಭದ ಮಾತಲ್ಲ. ಜನರ ಆಕಾಂಕ್ಷೆಗಳು ಎಷ್ಟಿರುತ್ತವೆಯೋ ಅದರಲ್ಲಿ ಶೇ.10 ಅಥವಾ ಶೇ.20ನ್ನು ಈಡೇರಿಸಿ ಬಡಾಯಿ ಕೊಚ್ಚಿಕೊಳ್ಳುವುದು ರಾಜಕಾರಣಿಗಳ ಮನಃಸ್ಥಿತಿ. ಸಧ್ಯ, ಇಷ್ಟಾದರೂ ಕೆಲಸ ಆಯಿತಲ್ಲ, ಮುಂದೆ ಮತ್ತೆ ಕೆಲಸ ಮಾಡಿಸಿಕೊಳ್ಳೋಣ ಎಂದು ಜನರು ಸುಮ್ಮನಾಗುತ್ತಾರೆ. ಹೀಗೆಯೇ ಒಂದೊಂದೇ ರಸ್ತೆ, ಒಂದು ರೈಲ್ವೆ ಯೋಜನೆ, ಒಂದು ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೊಂಡೇ ಐದೈದು ಚುನಾವಣೆಗಳನ್ನು ಗೆದ್ದ ಅದೆಷ್ಟೋ ಹೈದರು ಭಾರತದಲ್ಲಿದ್ದಾರೆ. ಒಟ್ಟಿನಲ್ಲಿ ಜನರಿಗೆ ಬಣ್ಣಬಣ್ಣದ ಮಾತುಗಳನ್ನು ಆಡುತ್ತ ಯಾಮಾರಿಸುತ್ತಿರುವುದು ಇಂಥವರ ಕೆಲಸ. ಆದರೆ ನರೇಂದ್ರ ಮೋದಿ ಜನರ ನಿರೀಕ್ಷೆಗಿಂತಲೂ ದೊಡ್ಡ ಗುರಿಯನ್ನು ತಾವೇ ಹಾಕಿಕೊಳ್ಳುತ್ತಾರೆ. ಹಾಗೂ ಅಚ್ಚರಿಯೆಂಬಂತೆ ಅದನ್ನು ಈಡೇರಿಸುತ್ತಾರೆ. ಈ ವಿಚಾರಗಳು ಭಾರತೀಯರಿಗೆ ಈಗಾಗಲೆ ಮನವರಿಕೆಯೂ ಆಗಿವೆ.
ಹೆಚ್ಚು ಅಂಕಿ ಅಂಶಗಳನ್ನು ನೀಡದೆ ಉದಾಹರಣೆಯ ರೂಪದಲ್ಲಿ ಕೆಲವು ಪ್ರಸ್ತಾಪ ಮಾಡುವುದಾದರೆ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಆಮೆಗತಿಯಿಂದ ಬುಲೆಟ್‌ ವೇಗದವರೆಗೆ ಸಾಗಿದ ದೂರ ಬಹಳ. ಹೈವೇಗಳಲ್ಲಿ ಗುಂಡಿಯಿದೆ, ಸೌಲಭ್ಯವಿಲ್ಲ ಎನ್ನುವ ದಿನಗಳಿದ್ದವು. ಇಂದು ಭಾರತದಲ್ಲಿ ವಿಮಾನವೇ ಲ್ಯಾಂಡ್‌ ಆಗುವಂತಹ ಹೈವೇಗಳು ನಿರ್ಮಾಣವಾಗಿವೆ. 2004 ರಿಂದ 2014ರವರೆಗೆ ಯುಪಿಎ ಅವಧಿಯಲ್ಲಿ ಕೇವಲ 16,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎಯ ಒಟ್ಟು 15 ವರ್ಷದ ಆಡಳಿತದಲ್ಲಿ ಒಟ್ಟು 75,000ಕಿಮಿ. ಹೆದ್ದಾರಿಯನ್ನು ನಿರ್ಮಿಸಲಾಗಿದೆ. 2014-15ರಲ್ಲಿ ದಿನಕ್ಕೆ 12.1 ಕಿ.ಮೀ ರಸ್ತೆ ನಿರ್ಮಾಣ ಆಗುತ್ತಿತ್ತು. ಆದರೆ 2021-22 ರಲ್ಲಿ ಪ್ರತಿದಿನ ಸರಾಸರಿ 28.6 ಕಿಮೀ ರಸ್ತೆ ನಿರ್ಮಾಣವಾಗುತ್ತಿದೆ.
ಮಲೇರಿಯಾ, ಪೋಲಿಯೋದಂತಹ ವ್ಯಾಕ್ಸಿನ್‌ಗಳು ಪಾಶ್ಚಿಮಾತ್ಯ ಜಗತ್ತಿನ ಜನರನ್ನೆಲ್ಲ ಸಮಾಧಾನಪಡಿಸಿ ಭಾರತಕ್ಕೆ ಆಗಮಿಸುವ ವೇಳೆಗೆ 25-30 ವರ್ಷಗಳೇ ಆಗುತ್ತಿದ್ದವು. ಆದರೆ ಇಡೀ ವಿಶ್ವ ಸಂಕಷ್ಟದಲ್ಲಿರುವಾಗ ಭಾರತವೂ ಅದರಿಂದ ಹೊರತಾಗಿರಲಿಲ್ಲ. ಒಂದೆಡೆ ದೇಶದ ಜನರ ಹೊಟ್ಟೆ ತುಂಬಿಸಬೇಕು, ಇನ್ನೊಂದೆಡೆ ಆರೋಗ್ಯ ಕ್ಷೇತ್ರದಲ್ಲಿ ಭರವಸೆ ಮೂಡಿಸಿ ಆದಷ್ಟೂ ಬೇಗನೆ ಆರ್ಥಿಕತೆಯನ್ನು ಹಳಿಗೆ ತರಬೇಕಿತ್ತು. ಹೊಟ್ಟೆ ತುಂಬಿಸಲು ಗರೀಬ್‌ ಕಲ್ಯಾಣ್‌ ಯೋಜನೆ ಘೋಷಣೆಯಾಯಿತು. ಇದೇ ವೇಳೆ ದೇಶದ ವಿಜ್ಞಾನಿಗಳ ಬೆನ್ನು ತಟ್ಟಿ ಲಸಿಕೆ ತಯಾರಿಕೆಗೂ ವೇಗ ನೀಡಿದರು. ಪ್ರಧಾನಿಯವರು ಇಟ್ಟಿದ್ದ ನಂಬಿಕೆಯನ್ನು ಹುಸಿಗೊಳಿಸದ ವಿಜ್ಞಾನಿಗಳು ಒಂದಲ್ಲ, ಎರಡು ಲಸಿಕೆ ತಯಾರಿಸಿದರು. ಇಂದು ವಿಶ್ವದ ಅನೇಕ ದೇಶಗಳ ಆರ್ಥಿಕತೆ ನಕಾರಾತ್ಮಕತೆಯತ್ತ ಸಾಗಿದರೆ ಭಾರತ ಮಾತ್ರ ಕೋವಿಡ್‌ಗೂ ಮೊದಲಿನ ಗುರಿಯನ್ನು ಇರಿಸಿಕೊಂಡು ಧನಾತ್ಮಕ ವಿಶ್ವಾಸದಿಂದ ಮುನ್ನಡೆಯುತ್ತಿದೆ.
ನರೇಂದ್ರ ಮೋದಿಯವರು ದೇಶದ ಜನರ ಆಕಾಂಕ್ಷೆಗಳನ್ನು ಅದುಮುವ ಕೆಲಸವನ್ನು ಎಂದೂ ಮಾಡಿಲ್ಲ. ಜನರೇ ಅಚ್ಚರಿಪಡುವಂತಹ ಗುರಿಯನ್ನೇ ನಿಗದಿಪಡಿಸುತ್ತಾರೆ. ಆಗ ಜನರ ಆಕಾಂಕ್ಷೆಗಳು ಹೆಚ್ಚಾಗುತ್ತವೆ. ಹವಾಯಿ ಚಪ್ಪಲಿ ಧರಿಸಿದವರೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂದು ಪ್ರಧಾನಿ ತಿಳಿಸುತ್ತಾರೆ ಎಂದರೆ ಅವರು ಸದಾ ಹವಾಯಿ ಚಪ್ಪಳಿ ಧರಿಸಿಕೊಂಡೇ ಇರಬೇಕು ಎಂದಲ್ಲ. ಮುಂದೊಂದು ದಿನ ವಿಮಾನದಲ್ಲಿ ಪ್ರಯಾಣಿಸುವ ಸಾಮರ್ಥ್ಯವನ್ನು ಎಲ್ಲರೂ ಪಡೆದುಕೊಳ್ಳುತ್ತಾರೆ ಎಂದರ್ಥ. ದುರ್ಬಲರಿಗೆ ಸರ್ಕಾರವೇ ಮನೆ ಕಟ್ಟಿಕೊಡುವುದು ಒಂದು ವಿಚಾರ. ಅದು ಅವಶ್ಯಕವೂ ಹೌದು. ಆದರೆ ಕನಿಷ್ಠ ಮುಂದಿನ ಪೀಳಿಗೆಯಾದರೂ ತಾನೇ ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬ ನಿರೀಕ್ಷೆ ಮೂಡುವಂತಾದರೆ ಸಾರ್ಥಕ.
ಅಣ್ಣಾಮಲೈ ಅವರು ಹೇಳಿದಂತೆ ಭಾರತದ ಆರ್ಥಿಕತೆ 2047ರಲ್ಲಿ ಅಮೆರಿಕಕ್ಕೆ ಸರಿಸಮನಾಗಬೇಕೆಂದರೆ ದೇಶಕ್ಕೆ ಒಳ್ಳೆಯ ನಾಯಕರು ಬೇಕು ಎನ್ನುವುದು ನಿಜ. ಅವರು ತಮ್ಮಷ್ಟಕ್ಕೆ ತಾವೇ ನಾಯಕರಾಗಿ, ದೇವರಾಗಿ, ಪ್ರತಿಮೆಗಳಾಗುವುದಲ್ಲ. ಜನರೇ ಆಕಾಂಕ್ಷೆಗಳನ್ನು ಹೆಚ್ಚಿಸಿ, ಅದನ್ನು ಸಾಧಿಸುವ ವಾತಾವರಣ ನಿರ್ಮಾಣ ಮಾಡುವ ನಾಯಕರು ಬೇಕು. ಸದ್ಯದ ಪರಿಸ್ಥಿರಿಯಲ್ಲಿ ಎಂದಲ್ಲ, ಸ್ವತಂತ್ರ ಭಾರತದಲ್ಲೇ ಬಹುಶಃ ನರೇಂದ್ರ ಮೋದಿಯವರಂತೆ ಮುಂದಿನ ಮೂವತ್ತು ನಲವತ್ತು ವರ್ಷದ ಕುರಿತು ಆಲೋಚಿಸಿ ಕಾರ್ಯವೆಸಗುವ ಪ್ರಧಾನಿಯನ್ನು ದೇಶ ಕಂಡಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಎಲ್ಲರನ್ನೂ ಮುನ್ನಡೆಸುವ ಒಬ್ಬ ನರೇಂದ್ರ ಮೋದಿ ನಮಗೆ ಸಿಕ್ಕಿದ್ದಾರೆ. ಆದರೆ ದೇಶದ ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ, ಆರೋಗ್ಯ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ದೇಶವನ್ನು ಮುನ್ನಡೆಸುವ ನಾಯಕತ್ವ ಬೇಕಾಗಿದೆ. ಆ ಎಲ್ಲ ನಾಯಕರೂ ನರೇಂದ್ರ ಮೋದಿಯವರ ರೀತಿ ಮುಂದಿನ 25-30 ವರ್ಷದ ಸ್ಥಿತಿಗೆ ದೇಶವನ್ನು ಸಿದ್ಧಪಡಿಸಬೇಕಿದೆ. ಹಾಗಾಗಿ ಭಾರಕ್ಕೆ ಇನ್ನೂ ಅನೇಕ ʼನರೇಂದ್ರ ಮೋದಿʼಗಳ ಅಗತ್ಯವಿದೆ. ಅದಕ್ಕೆ ಪೂರ್ವದಲ್ಲಿ ಈಗ ಸಿಕ್ಕಿರುವ ನರೇಂದ್ರ ಮೋದಿಯವರನ್ನು ಮೂರನೇ ಅವಧಿಗೂ ಮುಂದುವರಿಸುವ ಹೊಣೆ ಭಾರತ ದೇಶದ ಜನರ ಮೇಲಿದೆ. ಬಹುಶಃ ನಮ್ಮೆಲ್ಲರಿಗಿಂತ ಹೆಚ್ಚಾಗಿ ಜನರು ತಮ್ಮ ಹೊಣೆಯನ್ನು ಅರಿತಿದ್ದಾರೆ, ಅವರು ಸರಿಯಾದದ್ದನ್ನೇ ಮಾಡುತ್ತಾರೆ.
— ಹರಿಪ್ರಕಾಶ ಕೋಣೆಮನೆ, ರಾಜ್ಯ ಬಿಜೆಪಿ ವಕ್ತಾರ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top