ಡಾ. ಮೋಹನ್ ಭಾಗವತ್‌ರ ಮಾತನ್ನು ಅನುಸರಿಸಿದರೆ ʼರಾಮರಾಜ್ಯʼ

2022ರಲ್ಲಿ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷ ಸಮಾರೋಪ ಕಾರ್ಯಕ್ರಮದಲ್ಲಿ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಹೇಳಿದ ಮಾತು ಸಾಕಷ್ಟು ಚರ್ಚೆಯಾಗಿತ್ತು. ಅವರು ಹೇಳಿದ್ದಿಷ್ಟು:
“. . .ಈಗ ಕಾಶಿಯ ಜ್ಞಾನವಾಪಿ ವಿಚಾರ ಚಲಾವಣೆಗೆ ಬಂದಿದೆ. ಇದು ಇತಿಹಾಸ, ಅದನ್ನು ಬದಲಾಯಿಸಲು ಆಗುವುದಿಲ್ಲ. ಈ ಇತಿಹಾಸ ನಾವು ನಿರ್ಮಿಸಿದ್ದೂ ಅಲ್ಲ. ಈಗ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರೂ ಮಾಡಿಲ್ಲ, ಇಂದು ತಮ್ಮನ್ನು ತಾವು ಮುಸ್ಲಿಂ ಎಂದು ಕರೆದುಕೊಳ್ಳುವವರೂ ಮಾಡಿಲ್ಲ. ಆ ಸಮಯದಲ್ಲಿ ಈ ಘಟನೆಗಳು ನಡೆದಿವೆ. ಇಸ್ಲಾಂ ಭಾರತಕ್ಕೆ ಆಗಮಿಸಿದ್ದು ಆಕ್ರಮಣಕಾರರ ಮೂಲಕ. ಭಾರತದ ಸ್ವಾತಂತ್ರ್ಯದ ಅಪೇಕ್ಷೆಪಡುವವರನ್ನು ಮಾನಸಿಕವಾಗಿ ಕುಗ್ಗಿಸುವ ಸಲುವಾಗಿ ಈ ಆಕ್ರಮಣದ ಸಮಯದಲ್ಲಿ ದೇವಸ್ಥಾನಗಳನ್ನು ಒಡೆಯಲಾಯಿತು. ಇಂತಹ ಸಾವಿರಾರು ಉದಾಹರಣೆಗಳಿವೆ. ಅವುಗಳ ಪೈಕಿ, ಹಿಂದೂ ಸಮಾಜದ ವಿಶೇಷ ಶ್ರದ್ಧೆ ಇರುವ ಕೆಲವು ದೇವಸ್ಥಾನಗಳ ಕುರಿತು ಹೆಚ್ಚು ಚರ್ಚೆ ಆಗುತ್ತವೆ. ಇಂದು ಮುಸ್ಲಿಮರಾಗಿರುವವರ ಪೂರ್ವಜರೂ ಹಿಂದೂಗಳೇ ಆಗಿದ್ದರು. ಅವರೆಲ್ಲರ ಮನೋಬಲವನ್ನು ಕುಗ್ಗಿಸಲು ಮಂದಿರಗಳನ್ನು ಒಡೆಯಲಾಯಿತು. ಈ ದೇವಸ್ಥಾನಗಳ ಪುನರುತ್ಥಾನವಾಗಬೇಕು ಎಂದು ಹಿಂದೂಗಳು ಬಯಸುತ್ತಾರೆ. ಆದರೆ ನಾವು ಇದರ ಬಗ್ಗೆ ಚರ್ಚಿಸುತ್ತಿಲ್ಲ. ಈಗಾಗಲೆ ನವೆಂಬರ್ 9ರಂದು ಈ ಬಗ್ಗೆ ಸ್ಪಷ್ಟಪಪಡಿಸಿದ್ದೇವೆ. ನಾವು ನಮ್ಮ ಸ್ವಭಾವಕ್ಕೆ ವಿರುದ್ಧವಾಗಿ, ಯಾವುದೋ ಐತಿಹಾಸಿಕ ಕಾರಣದಿಂದಾಗಿ ಆಂದೋಲನದಲ್ಲಿ (ರಾಮಜನ್ಮಭೂಮಿ) ಕೈಜೋಡಿಸಿದೆವು. ಆ ಕೆಲಸವನ್ನು ಪೂರ್ಣಗೊಳಿಸಿದೆವು. ಇನ್ನು ನಾವು ಯಾವುದೇ ಆಂದೋಲನ ಮಾಡುವುದಿಲ್ಲ”.
“ಆದರೆ ಮನಸ್ಸಿನಲ್ಲಿ ವಿಚಾರಗಳು ಏಳುತ್ತವೆ. ಇದು ಮುಸ್ಲಿಮರ ವಿರುದ್ಧ ಎಂದು ಮುಸ್ಲಿಮರು ಭಾವಿಸುವ ಅಗತ್ಯವಿಲ್ಲ. ಒಟ್ಟಿಗೆ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಆದರೆ ಎಲ್ಲ ಸಮಯದಲ್ಲೂ ಮಾತುಕತೆಯಿಂದ ಪರಿಹಾರ ಸಿಗುವುದಿಲ್ಲ. ಆಗ ನ್ಯಾಯಾಲಯಕ್ಕೆ ಹೋಗಬೇಕು, ನ್ಯಾಯಾಲಯ ಏನು ಹೇಳುತ್ತದೆಯೋ ಅದನ್ನು ಪಾಲಿಸಬೇಕು. ನಮ್ಮ ಸಂವಿಧಾನ ಸಮ್ಮತ ನ್ಯಾಯ ವ್ಯವಸ್ಥೆಯನ್ನು ಪವಿತ್ರ, ಸರ್ವಶ್ರೇಷ್ಠ ಎಂದು ತಿಳಿದು ಅದನ್ನು ಪಾಲನೆ ಮಾಡಬೇಕು, ಪ್ರಶ್ನೆಗಳನ್ನೆತ್ತಬಾರದು. ಜ್ಞಾನವಾಪಿ ಕುರಿತು ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಿದೆ, ಅದರಲ್ಲಿ ನಮ್ಮ ಶ್ರದ್ಧೆಯಿದೆ. ಆದರೆ ದಿನನಿತ್ಯವೂ ಒಂದೊಂದು ವಿಚಾರ ತೆಗೆಯಬಾರದು. ಜಗಳ ಏಕೆ ಬೆಳೆಸಬೇಕು? ಪ್ರತಿ ಮಸೀದಿಯಲ್ಲೂ ಶಿವಲಿಂಗವನ್ನು ಹುಡುಕುವ ಪ್ರಯತ್ನವೇಕೆ? ಆ ಪೂಜಾ ಪದ್ಧತಿ (ಇಸ್ಲಾಂ) ಹೊರಗಿನಿಂದ ಬಂದದ್ದಿರಬಹುದು, ಆದರೆ ಅದೂ ಒಂದು ಪೂಜಾ ಪದ್ಧತಿಯೇ ಅಲ್ಲವೇ? ಒಂದು ವಿಚಾರ ತಿಳಿಯಬೇಕಾದ್ದೆಂದರೆ, ಇಲ್ಲಿರುವ ಮುಸ್ಲಿಮರು ಹೊರಗಿನ ಜಗತ್ತಿನೊಂದಿಗೆ ಸಂಬಂಧ ಹೊಂದಿಲ್ಲ, ಅವರು ಹೊರಗಿನಿಂದ ಬಂದವರಲ್ಲ. ಅವರೆಲ್ಲರೂ ನಮ್ಮ ಋಷಿ, ಮುನಿ, ಕ್ಷತ್ರಿಯರ ವಂಶಜರೇ ಆಗಿದ್ದಾರೆ. ನಾವೆಲ್ಲರೂ ಸಮಾನ ಪೂರ್ವಜರ ವಂಶಜರು. ನಾವು ಯಾವುದೇ ಪೂಜಾಪದ್ಧತಿಯನ್ನು ವಿರೋಧಿಸುವುದಿಲ್ಲ, ಎಲ್ಲವನ್ನೂ ಗೌರವಿಸುತ್ತೇವೆ. . .”
ಹೀಗೆ ಅನೇಕ ವಿಚಾರಗಳನ್ನು ಮೋಹನ್ ಭಾಗವತ್ ಅವರು ಚರ್ಚಿಸಿದರಾದರೂ ಪ್ರಮುಖವಾದ ಭಾಗ ಇಷ್ಟು. ಒಟ್ಟು ಭಾಷಣದ ಸಾರಾಂಶವೇನು? ಈ ದೇಶದಲ್ಲಿರುವ ಮಸೀದಿಗಳನ್ನು ಕೆಡವಿ ದೇವಸ್ಥಾನ ಕಟ್ಟುವುದೇ ಹಿಂದೂ ಪುನರುತ್ಥಾನದ ಕೆಲಸ ಎಂದು ಯಾರೂ ತಪ್ಪು ತಿಳಿಯಬಾರದು ಎನ್ನುವುದು. ಹೀಗೆ ಹೇಳಿದ ತಕ್ಷಣ ಯಾರಾದರೂ ಪ್ರಶ್ನೆ ಕೇಳಬಹುದು. ಹಾಗಾದರೆ ನಮ್ಮೂರಿನಲ್ಲಿ ಮಂದಿರವನ್ನು ಕೆಡವಿ ಕಟ್ಟಿರುವ ಮಸೀದಿಯಲ್ಲಿ ಮತ್ತೆ ದೇವರನ್ನು ಪ್ರತಿಷ್ಠಾಪಿಸಬಾರದೆ? ಅಲ್ಲಿಯೂ ರಾಮಮಂದಿರದ ರೀತಿಯಲ್ಲಿ ಭವ್ಯ ಮಂದಿರವನ್ನು ಕಟ್ಟಿದರೆ ಹಿಂದೂಗಳಲ್ಲಿ ಜಾಗೃತಿ ಉಂಟಾಗುವುದಿಲ್ಲವೇ? ಪುನರುತ್ಥಾನದ ಕಾರ್ಯ ಅಯೋಧ್ಯೆಯಿಂದ ಆರಂಭವಾಗಿದ್ದು, ಎಲ್ಲ ಕಡೆಯೂ ನಡೆಯಬೇಕು ಎಂದು ಕೆಲವರು ವಾದಿಸುತ್ತಾರೆ. ಇರಲಿ, ಅವರೇನೂ ಕೆಟ್ಟ ಉದ್ದೇಶಕ್ಕೆ ಹೀಗೆ ಹೇಳುವವರಲ್ಲ. ದೇಶದ ಸಂಸ್ಕೃತಿ, ಇತಿಹಾಸ ಮತ್ತೆ ಅಪಾಯಕ್ಕೆ ಸಿಲುಕಬಾರದು ಎಂಬ ಕಾಳಜಿಯೇ ಅಂಥವರಲ್ಲಿರುವುದರಿಂದ ಅವರ ಹೇಳಿಕೆಯನ್ನು ವಿರೋಧಿಸುವ ಅಗತ್ಯವಿಲ್ಲ. ಆದರೆ ಡಾ. ಮೋಹನ್ ಭಾಗವತ್ ಅವರ ಮಾತಿನ ಸತ್ಯವನ್ನು ಅರಿಯಬೇಕು.
ಮುಖ್ಯವಾಗಿ ಅವರು ಅಯೋಧ್ಯೆ ರಾಮಮಂದಿರದ ಕುರಿತು ಹೇಳಿದ ಮಾತು. ʼನಮ್ಮ ಸ್ವಭಾವಕ್ಕೆ ವ್ಯತಿರಿಕ್ತವಾಗಿ, ಕೆಲವು ಐತಿಹಾಸಿಕ ಕಾರಣಗಳಿಗೋಸ್ಕರ ಅಯೋಧ್ಯೆ ಹೋರಾಟಕ್ಕೆ ಇಳಿದೆವು, ಇನ್ನು ಯಾವುದೇ ಆಂದೋಲನ ಮಾಡುವುದಿಲ್ಲʼ ಎಂದಿದ್ದಾರೆ. ಹಾಗಾದರೆ ಆರ್ಎಸ್ಎಸ್ನ ನಿಜವಾದ ಸ್ವಭಾವ ಏನು? ಆರ್ಎಸ್ಎಸ್ನ ಮುಖ್ಯ ಉದ್ದೇಶ ವ್ಯಕ್ತಿ ನಿರ್ಮಾಣ. ಈ ದೇಶದಲ್ಲಿ ಪ್ರತಿ ವ್ಯಕ್ತಿಯಲ್ಲೂ ದೇಶಭಕ್ತಿ, ನೈತಿಕತೆ, ನಮ್ಮ ಪರಂಪರೆಯ ಕುರಿತು ಗೌರವಾದರಗಳನ್ನು ಮೂಡಿಸಿದರೆ ಸಾಕು, ಉಳಿದೆಲ್ಲ ಕೆಲಸವನ್ನೂ ಆ ವ್ಯಕ್ತಿಗಳ ಸಮೂಹವೇ ಮಾಡಿಕೊಂಡು ಹೋಗುತ್ತದೆ. ಅದಕ್ಕೆಂದೇ ಆರ್ಎಸ್ಎಸ್ನಲ್ಲಿ ಶಾಖೆಯ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆರ್ಎಸ್ಎಸ್ನಲ್ಲಿ ಇನ್ನೊಂದು ಮಾತಿದೆ. “ಸಂಘ್ ಕುಛ್ ನಹೀ ಕರೇಗಾ, ಸ್ವಯಂಸೇವಕ್ ಸಬ್ಕುಛ್ ಕರೇಗಾ”. ಅಂದರೆ “ಸಂಘವು ಏನನ್ನೂ ಮಾಡುವುದಿಲ್ಲ, ಆದರೆ ಸ್ವಯಂಸೇವಕ ಎಲ್ಲವನ್ನೂ ಮಾಡುತ್ತಾನೆ” ಎನ್ನುವುದು. ಇದೇ ಕಾರಣಕ್ಕೆ ಮೋಹನ್ ಭಾಗವತ್ ಅವರು, ʼಸ್ವಭಾವಕ್ಕೆ ವಿರುದ್ಧವಾದದ್ದುʼ ಎಂಬ ಪದಬಳಕೆ ಮಾಡಿದ್ದು. ಹೀಗೆಯೇ ಒಂದು ಸಂಘಟನೆ ಆಂದೋಲನಗಳ ನಂತರ ಆಂದೋಲನಗಳನ್ನು ಕೈಗೆತ್ತಿಕೊಂಡು ಹೊರಟರೆ, ಅತ್ಯಂತ ಮುಖ್ಯವಾದ ವ್ಯಕ್ತಿ ನಿರ್ಮಾಣದ ಕೆಲಸವನ್ನು ಬೇರೆ ಯಾರೂ ಮಾಡುವುದಿಲ್ಲ. ಈ ಕೆಲಸವನ್ನು ಆರ್ಎಸ್ಎಸ್ ಮಾತ್ರವೇ ಮಾಡಬೇಕು, ಅದೇ ಕಾರ್ಯಕ್ಕೆ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಇನ್ನೊಂದು ಅರ್ಥವೂ ಇದೆ. ಅಯೋಧ್ಯೆ ಎನ್ನುವುದು ಕೇವಲ ಒಂದು ದೇವಸ್ಥಾನ ನಿರ್ಮಾಣದ ಕಥೆಯಲ್ಲ.
ಅಯೋಧ್ಯೆಯಲ್ಲಿದ್ದ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದು ಎನ್ನುವುದು ಸಾಬೀತಾಗಿರುವ ವಿಚಾರ. ಈ ಕುರಿತು ಕೆಲವು ಕಮ್ಯುನಿಸ್ಟ್ ಇತಿಹಾಸಕಾರರು 1989ರಿಂದಲೇ ಗೊಂದಲ ಮೂಡಿಸಿದರು, ಆದರೂ ಸುಪ್ರೀಂಕೋರ್ಟ್ನಲ್ಲಿ ಅದನ್ನು ಸಾಬೀತುಪಡಿಸಲು ವಿಫಲವಾದರು. ಈಗಲೂ ಕೆಲ ಮುಸ್ಲಿಂ ಗುಂಪುಗಳ ನಡುವೆ ಅದೇ ಹಳೇ ಸುಳ್ಳನ್ನು ಬಿತ್ತಿ ಮತ್ತೆ ಮುಸ್ಲಿಂ ಸಮುದಾಯವನ್ನು ದಾರಿತಪ್ಪಿಸುವ ಕೆಲಸವನ್ನು ಕಮ್ಯುನಿಸ್ಟರು ಮಾಡಿದ್ದಾರೆ. ಇರಲಿ, ಅದು ಬೇರೆಯ ವಿಚಾರ.
ಭಾರತಕ್ಕೆ ಸ್ವಾತಂತ್ರ್ಯ ಏಕೆ ಬೇಕಾಗಿತ್ತು? ಉತ್ತಮ ಜೀವನ ನಡೆಸಲೆಂದೇ? ಕಟ್ಟಡಗಳ ನಿರ್ಮಾಣ ಆಗಲೆಂದೆ? ರಸ್ತೆಗಳ ನಿರ್ಮಾಣ ಆಗಲೆಂದೆ? ರೈಲ್ವೆ ಹಳಿಗಳ ನಿರ್ಮಾಣಕ್ಕೆಂದೇ? ಆಧುನಿಕ ಶಿಕ್ಷಣಕ್ಕೆಂದೆ? ಇಷ್ಟೇ ವಿಚಾರ ಆಗಿದ್ದರೆ ಇದೆಲ್ಲವನ್ನೂ ಬ್ರಿಟಿಷರೂ ಕೊಡುತ್ತಿದ್ದರಲ್ಲವೇ? ಅವರನ್ನು ಓಡಿಸಿ ನಮ್ಮವರನ್ನು ಕೂರಿಸುವ ಅಗತ್ಯವಾದರೂ ಏನಿತ್ತು? ಹಾಗಾಗಿ, ಇಲ್ಲಿ ಅಭಿವೃದ್ಧಿ, ರಸ್ತೆ, ಶಿಕ್ಷಣ ಎಲ್ಲದಕ್ಕಿಂತಲೂ ಮುಖ್ಯವಾದದ್ದು ಆತ್ಮಾಭಿಮಾನದ ಪ್ರಶ್ನೆ. ನಮ್ಮನ್ನು ಯಾರು ಆಳುತ್ತಿದ್ದಾರೆ ಎನ್ನುವುದು ಯಾವಾಗಲೂ ನಮ್ಮನ್ನು ಕಾಡುವ ವಿಚಾರ. ಇಲ್ಲಿ ಭಾವಜಾಗರಣೆಯೇ ಮಹತ್ವದ ವಿಚಾರ. ರೋಟಿ, ಕಪಡಾ ಔರ್ ಮಕಾನ್ ಅಂದರೆ ಆಹಾರ, ಬಟ್ಟೆ, ನೆಲೆಸಲು ಮನೆಯಿದ್ದರೆ ಸಾಕು ಎಂದು ಈ ಹಿಂದೆ ಕಾಂಗ್ರೆಸ್ ಪಕ್ಷ ಘೋಷಣೆ ಮಾಡುತ್ತಿತ್ತು. ಅದು ಸರಿಯಾದರೂ ಅಪೂರ್ಣ. ಹಸಿದ ವ್ಯಕ್ತಿಗೆ ಧರ್ಮಬೋಧನೆ ಮಾಡಬಾರದು ಎನ್ನುವ ವಿವೇಕಾನಂದರ ಮಾತು ಪೂರ್ಣವಾದದ್ದು. ಅಂದರೆ, ಎಲ್ಲ ವ್ಯಕ್ತಿಗೂ ಧರ್ಮ, ಅಧ್ಯಾತ್ಮ, ಕರ್ಮ, ಮೋಕ್ಷದ ಕುರಿತು ಜ್ಞಾನವೇ ಅಂತಿಮವಾದದ್ದು. ಕೇವಲ ಆಹಾರ ಸೇವಿಸಲು, ಮಕ್ಕಳನ್ನು ಮಾಡಲು ಮನುಷ್ಯ ಬದುಕಿದ್ದರೆ ಆತನಿಗೂ ಪ್ರಾಣಿಗಳಿಗೂ ಏನು ವ್ಯತ್ಯಾಸ? ರೋಟಿ, ಕಪಡಾ, ಔರ್ ಮಕಾನ್ ಆಗಲೇಬೇಕು. ಅದರ ಜತೆಜತೆಗೇ ಧರ್ಮ, ಸ್ವಾಭಿಮಾನವೂ ಮೂಡಬೇಕು. ಇದರ ಅರಿವು ಭಾರತೀಯರಿಗಿಂತಲೂ ವಿದೇಶಿಯರಿಗೆ, ಅದರಲ್ಲೂ ಮುಸ್ಲಿಂ ಆಕ್ರಮಣಕಾರರಿಗೆ ಚೆನ್ನಾಗಿ ತಿಳಿದಿತ್ತು.
ಇದೇ ಕಾರಣಕ್ಕೆ ದೇಶದಲ್ಲಿ ಸುಮಾರು 336 ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ನಾಶ ಮಾಡಿದ ದಾಖಲೆಯಿದೆ. ಎಷ್ಟು ದೇವಸ್ಥಾನ ನಾಶ ಮಾಡಿದರು ಎನ್ನುವುದಕ್ಕಿಂತಲೂ, ದೇವಸ್ಥಾನಗಳನ್ನೇ, ಗ್ರಂಥಾಲಯಗಳನ್ನೇ ಏಕೆ ನಾಶ ಮಾಡಿದರು ಎನ್ನುವುದು ಮುಖ್ಯ. ಗ್ರಂಥಾಲಯಗಳನ್ನು ನಾಶ ಮಾಡುವ ಮೂಲಕ ನಮ್ಮ ಜ್ಞಾನಭಂಡಾರವನ್ನು ನಾಶ ಮಾಡಿದೆವು ಎಂದುಕೊಂಡರು. ದೇವಾಲಯಗಳನ್ನು ಕೆಡವುವ ಮೂಲಕ ಸ್ವಾಭಿಮಾನವನ್ನು ನುಚ್ಚುನೂರು ಮಾಡಿದೆವು, ಸ್ವಾಭಿಮಾನಹೀನ ಮಾನವು ನಮ್ಮ ಗುಲಾಮರಾಗಿರಲು ಯಾವ ಸಮಸ್ಯೆಯೂ ಆಗದು ಎಂದು ಭಾವಿಸಿದರು. ಇದೇ ಕಾರಣಕ್ಕೆ ಸುಮಾರು 500 ವರ್ಷಗಳ ಕಾಲ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಯತ್ನಗಳು ನಡೆದವು. 76 ಬಾರಿ ಅಲ್ಲಿ ಮಂದಿರ ನಿರ್ಮಿಸುವ ಪ್ರಯತ್ನಗಳು ನಡೆದಿವೆ ಎಂದರೆ ಯಾರಾದರೂ ಊಹಿಸಬಹುದು.
ಅಯೋಧ್ಯೆ ರಾಮಮಂದಿರ ನಿರ್ಮಾಣ ಎನ್ನುವುದು ಸ್ವಾಭಿಮಾನದ, ಗೌರವದ, ಆತ್ಮಾಭಿಮಾನದ ಜಾಗೃತಿಯ ಪ್ರತೀಕ. ಈಗ ನಿರ್ಮಾಣವಾಗುತ್ತಿರುವ ಮಂದಿರವು ದೇಶಕ್ಕೆಲ್ಲ ಬೆಳಕು ನೀಡುವಷ್ಟು ಪ್ರಖರವಾಗಿದೆ. ಈಗಾಗಲೆ ದೇಶದ ಮೂಲೆಮೂಲೆಯಲ್ಲಿ ರಾಮನ ಸ್ಮರಣೆ ನಡೆಯುತ್ತಿದೆ. ಎಲ್ಲ ಕಡೆ ಧನಾತ್ಮಕ ವಾತಾವರಣವೇ ಇದೆ. ಮನುಷ್ಯರ ಮನಸ್ಸು ಕೆಟ್ಟದ್ದನ್ನು ಯೋಚಿಸದೆ ಧರ್ಮದತ್ತ ಕೇಂದ್ರೀಕೃತವಾಗುತ್ತಿದೆ. ಇಷ್ಟಾದರೆ ಸಾಕಲ್ಲವೇ, ದೇಶ ತನ್ನಿಂತಾನೇ ಅಭಿವೃದ್ಧಿಯೆಡೆಗೆ ಸಾಗುತ್ತದೆ. ಈಗ ಆಗಬೇಕಾದ್ದೂ ಅದೆ. ಇಂತಹ ವಿವಾದಗಳನ್ನು ಬೆಳೆಸುವುದು ಬೇಡ, ಈಗಾಗಲೆ ಹಿಂದುಗಳು ಕೇಳಿರುವ ಮಥುರಾ, ಕಾಶಿಯಂತಹ ದೇವಸ್ಥಾನಗಳಲ್ಲಿ ತಮ್ಮ ಹಿಡಿತವನ್ನು ಬಿಟ್ಟುಕೊಟುವುದೇ ಸರಿ ಎಂದು ಇನ್ನೊಂದು ಸಮುದಾಯಕ್ಕೆ ಅನ್ನಿಸಿದರೆ ಅದಕ್ಕಿಂತ ಆದರ್ಶ ಪರಿಹಾರ ಇನ್ನೊಂದಿಲ್ಲ. ಅದಾಗದಿದ್ದರೆ, ಕೆಲವು ಶ್ರದ್ಧಾಕೇಂದ್ರಗಳ ಕುರಿತು ನ್ಯಾಯಾಲಯ ತೀರ್ಪು, ರಾಜಿಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು. ಇದನ್ನು ಬಿಟ್ಟು ನಮ್ಮೂರಿನಲ್ಲೊಂದು ಮಸೀದಿಯಿದೆ, ಅಲ್ಲಿ ಬಗೆದು ನೋಡೋಣ, ದೇವಾಲಯ ಇದ್ದರೂ ಇರಬಹುದು ಎಂದು ಆಲೋಚಿಸುತ್ತ ಹೋದರೆ ಸಮಾಜ ಮುಂದೆ ಸಾಗುವುದು ಹೇಗೆ? ಇದನ್ನೇ ಡಾ. ಮೋಹನ್ ಭಾಗವತ್ ಅವರು ಹೇಳಿದ್ದು. ಸಮಾಜದಲ್ಲಿ ದಿನೇದನೆ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ವಿಶ್ವದಲ್ಲೆ ಅತಿ ದೊಡ್ಡ ಯುವಕರ ಸಂಖ್ಯೆಯನ್ನು ಈ ಸಮಯದಲ್ಲಿ ಭಾರತ ಹೊಂದಿದೆ. ಇದು ಸಂತಸದ ವಿಚಾರ. ಆದರೆ, ಇನ್ನು 25-30 ವರ್ಷದಲ್ಲಿ ಇದೇ ಯುವಸಮೂಹ ಪ್ರೌಢಸಮೂಹವಾಗಿರುತ್ತದೆ.
ಈಗ 25-30 ವರ್ಷದವರಲ್ಲಿ ಅನೇಕರು ನಿವೃತ್ತರಾಗಿರುತ್ತಾರೆ ಅಥವಾ ಇನ್ನೇನು ಮೂರ್ನಾಲ್ಕು ವರ್ಷದಲ್ಲಿ ನಿವೃತ್ತರಾಗುವವರಿರುತ್ತಾರೆ. ಆಗ ಇಡೀ ದೇಶ ವಯಸ್ಕರ ದೇಶವಾಗಿರುತ್ತದೆ. ಈಗ ಬಿಸಿರಕ್ತದ ಯುವಕರು ದೇಶದ ಆಹಾರೋತ್ಪಾದನೆ, ಉತ್ಪನ್ನ ತಯಾರಿಕೆ, ರಫ್ತು, ತಂತ್ರಜ್ಞಾನದಲ್ಲಿ ಉನ್ನತಿಯಂತಹ ಕ್ಷೇತ್ರಗಳಲ್ಲಿ ಕಟಿಬದ್ಧರಾಗಿ ದುಡಿಯಬೇಕು. ಆಗ ಮಾತ್ರವೇ ಮುಂದಿನ ಮೂರ್ನಾಲ್ಕು ದಶಕದ ನಂತರ ನಿವೃತ್ತರಾಗುವವರು ಜೀವನ ನಡೆಸಲು, ವೈದ್ಯಕೀಯ ಸೌಲಭ್ಯ ಪಡೆಯಲು ಹಣವಿರುತ್ತದೆ. ಇಲ್ಲದಿದ್ದರೆ ಆಗಿನ ಯುವಪೀಳಿಗೆಯ ಮೇಲೆ ಅಗಾಧ ಹೊರೆ ಬೀಳುತ್ತದೆ. ತಾವು ದುಡಿದದ್ದೆಲ್ಲವನ್ನೂ ಹಿರಿಯರ ಆಹಾರ, ಆರೋಗ್ಯಕ್ಕೇ ವ್ಯಯಿಸಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ದೇಶದ ಆರ್ಥಿಕತೆಯೇ ಹಿನ್ನಡೆ ಅನುಭವಿಸುವ ಅಪಾಯವಿದೆ. ಹಾಗಾಗಿಯೇ, ಈಗಿನ ಯುವ ಪೀಳಿಗೆ ಈಗ ತನ್ನ ಸಾಮರ್ಥ್ಯವನ್ನು ದೇಶದ ಆರ್ಥಿಕ ಸ್ಥಿತಿ ಉತ್ತಮಪಡಿಸುವತ್ತ ದುಡಿಯುವಲ್ಲಿ ವ್ಯಯಿಸಬೇಕು.
ರಾಮಮಂದಿರ ನಿರ್ಮಾಣದಿಂದಾಗಿ ದೇಶದ ಯುವಕರಲ್ಲಿ ಸ್ವಾಭಿಮಾನ ಜಾಗೃತವಾಗಿದೆ. ಈ ಸ್ವಾಭಿಮಾನದ ಕಿಚ್ಚು ಜಾಗೃತವಾಗಿರುವಂತೆ ಕಾಯ್ದುಕೊಳ್ಳಬೇಕಾದ್ದು ಸಮಾಜದ ಕರ್ತವ್ಯ. ಅದಕ್ಕೆ ದಿನಕ್ಕೊಂದು ಮಂದಿರ ಕಟ್ಟಬೇಕಿಲ್ಲ. ಈಗಾಗಲೆ ಇರುವ ಮಂದಿರಗಳಿಗೆ ಯುವಕರು ಬರುವಂತೆ ಮಾಡುವ, ಭಜನೆ, ಸೇವೆಯಂತಹ ಕಾರ್ಯಗಳಲ್ಲಿ ತೊಡಗಿಸುವಂತಹ ಪ್ರಯತ್ನ ಮಾಡಬಹುದು. ದೇಶದ ಪ್ರತಿ ಪ್ರಜೆಯೂ ಈ ರೀತಿಯ ಮನೋಭಾವ ಬೆಳೆಸಿಕೊಂಡಾಗ ಅದು ತನ್ನಿಂತಾನೇ ರಾಮರಾಜ್ಯವಾಗುತ್ತದೆ. ರಾಮರಾಜ್ಯ ಎನ್ನುವುದು ಒನ್ ವೇ ಟ್ರಾಫಿಕ್ ಅಲ್ಲ. ಕೇವಲ ರಾಜ ಒಳ್ಳೆಯವನಾಗಿದ್ದರೆ ಸಾಲದು. ಪ್ರಜೆಗಳಲ್ಲೂ ಅದೇ ರೀತಿಯ ಸದಾಚಾರ, ಸದ್ಭಾವನೆ, ಸಹಬಾಳ್ವೆ ಇದ್ದರೆ ಮಾತ್ರ ಅದು ರಾಮರಾಜ್ಯವಾಗುತ್ತದೆ.
*ಆಸ್ಪತ್ರೆ ಕಟ್ಟಬೇಕು ಎನ್ನುವವರಿಗೆ*
ರಾಮಮಂದಿರ ನಿರ್ಮಾಣಕ್ಕಿಂತಲೂ ಅಲ್ಲಿ ಆಸ್ಪತ್ರೆ ಕಟ್ಟಬೇಕಿತ್ತು, ಶೌಚಾಲಯ ನಿರ್ಮಿಸಬೇಕಿತ್ತು, ಶಾಲೆ ಕಟ್ಟಬೇಕಿತ್ತು ಎಂದು ಕಮ್ಯುನಿಸ್ಟರು ಬಿಟ್ಟಿ ಉಪದೇಶ ನೀಡುವುದನ್ನು ಮತ್ತೂ ಮುಂದುವರಿಸಿದ್ದಾರೆ. ಅವರೆಲ್ಲರ ಮಾಹಿತಿಗಾಗಿ. 2014-2024ರವರೆಗೆ ನರೇಂದ್ರಮೋದಿಯವರ ನೇತೃತ್ವದ ಸರ್ಕಾರ 315 ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದೆ. 1 AIIMS ಇದ್ದದ್ದು ಈಗ 25ಕ್ಕೆ ಏರಿದೆ. ಐಐಟಿಗಳು ಮೂರು ಪಟ್ಟು ಹೆಚ್ಚಿವೆ. ವೈದ್ಯಕೀಯ ಸೀಟುಗಳ ಸಂಖ್ಯೆ ದುಪ್ಪಟ್ಟಾಗಿದೆ. 70 ಸಾವಿರ ಕಿಲೋಮೀಟರ್ನಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. 10 ಸಾವಿರ ಪಂಚಾಯತಿ ಕಟ್ಟಡಗಳು ನಿರ್ಮಾಣವಾಗಿವೆ, 50 ಕೋಟಿ ಜನರಿಗೆ ಬ್ಯಾಂಕ್ ಖಾತೆ ಲಭಿಸಿದೆ, 10 ಕೋಟಿ ಜನರಿಗೆ ಎಲ್ಪಿಜಿ ಸಿಕ್ಕಿದೆ, 4 ಕೋಟಿ ಜನರಿಗೆ ಪಕ್ಕಾ ಮನೆ ಸಿಕ್ಕಿದೆ, ವಿಮಾನ ನಿಲ್ದಾಣಗಳ ಸಂಖ್ಯೆ ಬಹುತೇಕ ಮೂರು ಪಟ್ಟು ಹೆಚ್ಚಾಗಿದೆ. ಒಂದೆಡೆ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿವೆ, ರಾಮಮಂದಿರವೂ ನಿರ್ಮಾಣವಾಗುತ್ತಿದೆ. ಹಾಗಾಗಿ, ದೇಶದ ಅಭಿವೃದ್ಧಿ, ಶ್ರದ್ಧೆಯ ಕುರಿತು ಯಾವುದೇ ಸಂಬಂಧವಿಲ್ಲದ ಕಮ್ಯುನಿಸ್ಟರ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಹಾಗೂ ಅವರ, ದಾರಿತಪ್ಪಿಸುವ ತಂತ್ರಗಳಿಗೆಯಾರೂ ಕಿವಿಗೊಡುವ ಅಗತ್ಯವೂ ಇಲ್ಲ.
ಕಡೆ ಮಾತು:
ಹಾಗೆ ನೋಡಿದರೆ, ರಾಮಮಂದಿರ ವಿಷಯ ಬಿಜೆಪಿಗೆ ಚುನಾವಣಾ ರಾಜಕೀಯದ ವಿಷಯ ಎಂದು ಕಮ್ಯುನಿಸ್ಟ್ ಬುದ್ಧಿಜೀವಿಗಳು ಮೂಗುಮುರಿಯುತ್ತಲೇ ಇದ್ದಾರೆ. ಆದರೆ, ಆಡ್ವಾಣಿ ನೇತೃತ್ವದಲ್ಲಿ ಬಿಜೆಪಿ ಈ ವಿಷಯ ಕೈಗೆತ್ತಿಕೊಂಡಾಗ, ಆ ಪಕ್ಷಕ್ಕೆ ಬಹುಮತ ಬಂದಿಲ್ಲ. 2014 ಮತ್ತು 2019ರಲ್ಲಿ ಬಿಜೆಪಿಗೆ ಬಹುಮತ ಬಂದಾಗ, ಅಯೋಧ್ಯೆ ರಾಮಮಂದಿರದ ವಿಷಯ ಸದ್ದುಮಾಡಿರಲಿಲ್ಲ. ಈಗಲೂ ಅಷ್ಟೆ, ರಾಮಮಂದಿರ ನಿರ್ಮಾಣವಾಗದಿದ್ದರೂ 2024 ಬಿಜೆಪಿಯದ್ದೆ ಎನ್ನುತ್ತಿವೆ ಸಮೀಕ್ಷೆಗಳು. ಈ ಅರ್ಥದಲ್ಲಿ ಮಂದಿರ ಮುಂದಿಟ್ಟು ಕೊಂಡು ರಾಜಕೀಯ ಮಾಡುತ್ತಿರುವುದು ಬಿಜೆಪಿಯಲ್ಲ, ಅದು ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು ! ಮಂದಿರ ಭೀತಿ ಅಲ್ಪಸಂಖ್ಯಾತರ ಮತ ತರಬಹುದು ಎಂಬುದು ಈ ಪಕ್ಷಗಳ ಲೆಕ್ಕಾಚಾರ. ಆದರೆ ಸತ್ಯ ಏನೆಂದರೆ, ಕೆಲವು ಅಲ್ಪಸಂಖ್ಯಾತರೇ ರಾಮನಾಮ ಜಪದಲ್ಲಿದ್ದಾರೆ !
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top