ಗಾಂಧಿಗೂ ಮುನ್ನ ನಡೆದಿತ್ತು ಉಪ್ಪಿನ ಹೋರಾಟ

ಗಾಂಧೀಜಿ ನಡೆಸಿದ ಉಪ್ಪಿನ ಸತ್ಯಾಗ್ರಹಕ್ಕಿಂತಲೂ ಮುಂಚೆಯೇ ಕರ್ನಾಟಕದಲ್ಲಿ ನಡೆದ ಅಮರಸುಳ್ಯ ಹೋರಾಟ ಬ್ರಿಟಿಷರ ವಿರುದ್ಧ ರಣಕಹಳೆಯನ್ನು ಮೊಳಗಿಸಿತು. ಜನಸಾಮಾನ್ಯರೇ ಒಂದಾಗಿ ನಡೆಸಿದ ಈ ಹೋರಾಟವು ಸ್ವಾತಂತ್ರ್ಯ ಸಂಘರ್ಷದ ಇತಿಹಾಸದಲ್ಲಿ ಪ್ರಮುಖವಾದುದು, ಅವಿಸ್ಮರಣೀಯವಾದುದು.

****************************************************

ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಹಾಗೆ ನೋಡಿದರೆ ವಿಶ್ವದ ಪ್ರಾಚೀನ ನಾಗರಿಕತೆಯಾದ ನಮಗೆ ಮುಕ್ಕಾಲು ಶತಮಾನ ಯಾವ ಲೆಕ್ಕವೂ ಅಲ್ಲ. ಆದರೆ ಆಧುನಿಕ ಕಾಲದಲ್ಲಿ ಹಾಗೂ ಕಾಲದ ಚಲನೆಯಲ್ಲಿ ಉಂಟಾಗಿರುವ ವೇಗವು ಪ್ರತಿ ವರ್ಷವನ್ನೂ, ಪ್ರತಿ ದಿನವನ್ನೂ ಮುಖ್ಯವಾಗಿಸಿದೆ. ‘ಮುಂದಿನ 25 ವರ್ಷ ಅಮೃತ ಕಾಲವಾಗಿದ್ದು, ಈ ಸಮಯದಲ್ಲಿ ಭಾರತದ ನಿಜವಾದ ಗುಣಧರ್ಮವನ್ನು ವಿಶ್ವದ ಮುಂದೆ ತೆರೆದಿಡೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಯವರು ಹೇಳಿದ್ದಾರೆ. ಹಾಗಾದರೆ, ಸ್ವಾತಂತ್ರ್ಯನಂತರದ ಏಳೂವರೆ ದಶಕಗಳ ಸತ್ವವನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಆಧಾರವೇ ಸ್ವಾತಂತ್ರ್ಯವಲ್ಲವೇ? ಅಂಥ ಸ್ವಾತಂತ್ರ್ಯ ನಿಜವಾಗಿ ಲಭಿಸಿದ್ದು ಯಾರಿಂದ ಎಂಬ ಅರಿವನ್ನೂ ಮೂಡಿಸಿಕೊಳ್ಳದೆ ಹೋದರೆ ಯಾವ ಆಧಾರದಲ್ಲಿ ಶತಮಾನೋತ್ಸವ ಆಚರಿಸಬೇಕು ಎಂಬ ವಿವೇಕ ಬರುವುದಿಲ್ಲ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ 1930ರ ಮಾರ್ಚ್ 12ನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಅಂದು ದಂಡಿ ಯಾತ್ರೆ ಆರಂಭವಾಯಿತು. ಈ ಯಾತ್ರೆ 24 ದಿನಗಳ ಕಾಲ ನಡೆಯಿತು. ಗಾಂಧೀಜಿಯವರ ಸಬರಮತಿ ಆಶ್ರಮದಿಂದ ದಂಡಿಯವರೆಗೆ ನಡೆದ ಈ ಯಾತ್ರೆಯಲ್ಲಿ ಸಾವಿರಾರು ದೇಶವಾಸಿಗಳು ಸೇರಿಕೊಂಡರು. ದಂಡಿ ಯಾತ್ರೆ ಆರಂಭಕ್ಕೆ ಒಂದು ಪ್ರಮುಖ ಕಾರಣವಿದೆ. ಸಾಂಪ್ರದಾಯಿಕವಾಗಿ ಭಾರತೀಯರು ಉಪ್ಪಿನ ಉತ್ಪಾದನೆ ಮಾಡುತ್ತಿದ್ದರು. ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಜೀವನೋಪಾಯದ ದಾರಿ ಕಂಡುಕೊಂಡಿದ್ದರು. ಆದರೆ ಬ್ರಿಟಿಷ್ ಆಳ್ವಿಕೆಯು ಉಪ್ಪಿನ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವ ಕಾನೂನು ಜಾರಿಗೆ ತಂದಿತು. ಅಲ್ಲದೆ ಗಣನೀಯ ಪ್ರಮಾಣದಲ್ಲಿ ಉಪ್ಪಿನ ಮೇಲೆ ತೆರಿಗೆಯನ್ನು ವಿಧಿಸಿತು. ಈ ನಿಯಮವನ್ನು ಮುರಿಯಲೆಂದೇ ಗಾಂಧೀಜಿಯವರು ದಂಡಿ ಯಾತ್ರೆ ಕೈಗೊಂಡರು. ನಮಗೆಲ್ಲ ತಿಳಿದಿರುವಂತೆ, ಉಪ್ಪು ಮತ್ತು ಚರಕ ಭಾರತ ಸ್ವಾತಂತ್ರ್ಯ ಹೋರಾಟದ ಎರಡು ಮಹಾರೂಪಕಗಳು. ಉಪ್ಪು ಅಸಹಕಾರದ ಸಂಕೇತವಾದರೆ, ಚರಕ ಸ್ವಾವಲಂಬನೆಯ ಹೆಗ್ಗುರುತು. ಅಂತಿಮವಾಗಿ, ಈ ಎರಡೂ ಸಂಕೇತಗಳು ಒಗ್ಗೂಡಿ ಹೊರಹೊಮ್ಮಿದ್ದೇ- ಅಹಿಂಸೆ!

ಇಂಥ ಮಹತ್ವದ ದಂಡಿ ಸತ್ಯಾಗ್ರಹಕ್ಕೂ ಹಲವು ದಶಕಗಳ ಮೊದಲು ಕರ್ನಾಟಕದಲ್ಲೊಂದು ಹೋರಾಟ ನಡೆದಿತ್ತು. ಆ ಹೋರಾಟದಲ್ಲೂ ‘ಉಪ್ಪಿನ ಅಂಶ’ ಇತ್ತು. ಕರ್ನಾಟಕದವರಿಗೇ ಹೆಚ್ಚು ಗೊತ್ತಿಲ್ಲದ ‘ಅಮರಸುಳ್ಯ’ ಹೋರಾಟ ಅದು. ಈಗಿನ ದಕ್ಷಿಣ ಕನ್ನಡದ ಸುಳ್ಯ ಪ್ರದೇಶಕ್ಕೆ ಸೇರಿದ್ದ ‘ಪಡ್ನೂರು ಸೀಮೆ’ ಹಾಗೂ ‘ಮುಡ್ನೂರು’ ಸೀಮೆಗಳನ್ನು ಒಟ್ಟಾಗಿ ‘ಅಮರ ಸೀಮೆ’ ಎನ್ನಲಾಗುತ್ತಿತ್ತು. ಅಮರ ಎಂದರೆ ಗೌಡ ಕನ್ನಡ ಹಾಗೂ ತುಳುವಿನಲ್ಲಿ ‘ಅವಳಿ’ ಎಂದರ್ಥ. ಅಮರ ಸೀಮೆಗೆ ತಾಗಿಕೊಂಡಂತೆ ಇರುವುದು ಸುಳ್ಯ ಸೀಮೆ. ಅಮರ ಸೀಮೆ ಹಾಗೂ ಸುಳ್ಯ ಸೀಮೆಗಳನ್ನು ಸೇರಿಸಿ ‘ಅಮರಸುಳ್ಯ’ ಎಂದು ಕರೆಯಲಾಗುತ್ತಿತ್ತು.

ಅಮರಸುಳ್ಯ ಸೀಮೆ ಹಿಂದಿನಿಂದಲೂ ಕೊಡಗಿನ ಭಾಗವಾಗಿತ್ತು. ಇದನ್ನು ಇಕ್ಕೇರಿಯ ಶಿವಪ್ಪ ನಾಯಕನು ಕೊಡಗಿನ ಮುದ್ದುರಾಜನಿಗೆ ಉಡುಗೊರೆಯಾಗಿ ನೀಡಿದ್ದ. 1834ರಲ್ಲಿ ಕೊಡಗಿನಲ್ಲಿ ಬ್ರಿಟಿಷರು ದೊರೆ ಚಿಕ್ಕವೀರ ರಾಜೇಂದ್ರರನ್ನು ಸೋಲಿಸಿ ಕಂಪನಿ ಆಡಳಿತವನ್ನು ಹೇರಿದರು. ರಾಜಾಡಳಿತ ಕೊನೆಗೊಂಡಿದ್ದು ಹೆಚ್ಚಿನ ಜನರಿಗೆ ಇಷ್ಟವಾಗಲಿಲ್ಲ. ಬ್ರಿಟಿಷ್ ಸರ್ಕಾರದ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅವರಿಗೆ ಕಷ್ಟವಾಗತೊಡಗಿತು. ಮೊದಲನೆಯದಾಗಿ ಅರಸ ಚಿಕ್ಕವೀರ ರಾಜೇಂದ್ರರನ್ನು ಪದಚ್ಯುತಗೊಳಿಸಿದ್ದು ಜನರಲ್ಲಿ ಅಸಮಾಧಾನ ಮೂಡಿಸಿತು. ಎರಡನೆಯದಾಗಿ 1834ರಲ್ಲೇ ಪುತ್ತೂರು ಮತ್ತು ಸುಳ್ಯಗಳ 110 ಗ್ರಾಮಗಳನ್ನು ಕೊಡಗಿನಿಂದ ಬೇರ್ಪಡಿಸಿ ಕೆನರಾ ಜಿಲ್ಲೆಗೆ ಸೇರ್ಪಡೆ ಮಾಡಲಾಯಿತು. ಮೂರನೆಯದಾಗಿ ಉಪು್ಪ ಮತ್ತು ಹೊಗೆಸೊಪ್ಪುಗಳ ಉತ್ಪಾದನೆಯ ಏಕಸ್ವಾಮ್ಯವನ್ನು ಸರ್ಕಾರವೇ ತನ್ನ ವಶಕ್ಕೆ ತೆಗೆದುಕೊಂಡಿತು. ಇಂತಹ ಅಂಶಗಳಿಂದ ಜನರು ಕುದ್ದುಹೋದರು.

ಉಪ್ಪಿಗೆ ಸುಂಕ ವಿಧಿಸುವ ಪದ್ಧತಿಯು ಯಾವ ಅವಧಿಯಲ್ಲೂ ಇರಲಿಲ್ಲ. ಉಪ್ಪು ಎನ್ನುವುದು ಭಾರತೀಯರ ಭಾವನಾತ್ಮಕ ಅಂಶ. ಉಪ್ಪು ತಿನ್ನುವುದು ಎಂದರೆ ಋಣವನ್ನು ಮೈಮೇಲೆ ಹೊರಿಸಿಕೊಂಡಂತೆ. ಉಪ್ಪನ್ನು ಯಾರೂ ಕದಿಯುವುದಿಲ್ಲ. ಇದೇ ಕಾರಣಕ್ಕೆ ಇಂದಿಗೂ ಅನೇಕ ಅಂಗಡಿಗಳ ಎದುರು ಉಪ್ಪನ್ನು ಹೊರಗೆ ಇಡಲಾಗುತ್ತದೆ. ಆದರೆ ಈ ಭಾವನಾತ್ಮಕ, ಸಾಂಸ್ಕೃತಿಕ ವಿಚಾರದ ಅರಿವಿಲ್ಲದ ಬ್ರಿಟಿಷರು ಉಪ್ಪಿಗೂ ಸುಂಕ ವಿಧಿಸಿದರು. ತಮ್ಮ ಪಾಡಿಗೆ ಉಪ್ಪು, ಹೊಗೆಸೊಪ್ಪು ಉತ್ಪಾದನೆ ಮಾಡಿಕೊಂಡಿದ್ದ ರೈತರು ಅನಿವಾರ್ಯವಾಗಿ ಬ್ರಿಟಿಷರ ವಿರುದ್ಧ ಶಸ್ತ್ರ ಹಿಡಿಯಬೇಕಾಯಿತು. ಅಲ್ಲಿಯವರೆಗೂ ಅನೇಕ ವಸ್ತುಗಳನ್ನು ವಿನಿಮಯ ಮಾಡಿಕೊಂಡೇ ಜೀವನ ನಡೆಸುತ್ತಿದ್ದ ರೈತರಿಗೆ, ಎಲ್ಲ ತೆರಿಗೆಯನ್ನೂ ಹಣದ ರೂಪದಲ್ಲೇ ನೀಡಬೇಕೆಂಬ ಬ್ರಿಟಿಷ್ ನಿಯಮವೂ ತೊಂದರೆಯಾಯಿತು. ರೈತರು ದುಡ್ಡಿಗಾಗಿ ಮಾರುಕಟ್ಟೆಯನ್ನು ಅವಲಂಬಿಸಬೇಕಾಯಿತು. ಮಾರುಕಟ್ಟೆಗಳಲ್ಲಿ ದಲ್ಲಾಳಿಗಳು ಹುಟ್ಟಿಕೊಂಡರು. ರೈತರ ಉತ್ಪನ್ನಗಳ ಬೆಲೆಯನ್ನು ದಲ್ಲಾಳಿಗಳು ನಿರ್ಧಾರ ಮಾಡಲು ಆರಂಭಿಸಿದರು. ಇದೆಲ್ಲವೂ ಬ್ರಿಟಿಷರ ವಿರುದ್ಧ ಆಕ್ರೋಶ ಮಡುಗಟ್ಟಲು ಕಾರಣವಾಯಿತು.

ಅಮರಸುಳ್ಯದ ಹೋರಾಟದಲ್ಲಿ ಪ್ರಮುಖವಾಗಿ ಅಪರಂಪಾರ, ಹುಲಿ ಕಡಿದ ನಂಜಯ್ಯ, ಪುಟ್ಟಬಸಪ್ಪ ಮತ್ತು ಕಲ್ಯಾಣಸ್ವಾಮಿ ಹೆಸರುಗಳು ಕೇಳಿಬರುತ್ತವೆ. ಅಪರಂಪಾರನು ಚಿಕ್ಕ ವಯಸ್ಸಿನಲ್ಲೇ ತನ್ನ ಊರಾದ ತುಮಕೂರಿನ ಕಡಗನೂರು ಗ್ರಾಮವನ್ನು ತೊರೆದು ಜಂಗಮನಾದ. 20 ವರ್ಷಗಳ ನಂತರ ವಾಪಸಾದಾಗ ಅನೇಕ ಪವಾಡಗಳನ್ನು ಮಾಡುತ್ತ ಗುರುವಾದನು. ಬ್ರಿಟಿಷರು ಭಾರತೀಯರನ್ನು ಮತಾಂತರ ಮಾಡುವುದನ್ನು ತಡೆಯುವ ಸಲುವಾಗಿ ಕೊಡಗಿನಾದ್ಯಂತ ಸಂಚರಿಸುತ್ತಿದ್ದ ಅಪರಂಪಾರನನ್ನು ಬ್ರಿಟಿಷರು 1836ರಲ್ಲಿ ಬಂಧಿಸಿ ದೂರದ ತಿರುಚಿರಾಪಳ್ಳಿಯ ಜೈಲಿಗಟ್ಟಿದರು.

ಕಲ್ಯಾಣ ಸ್ವಾಮಿಯು ಚಿಕ್ಕವೀರ ರಾಜನ ಸುಬೇದಾರ. ಬ್ರಿಟಿಷರ ಧ್ವಜ ಹಾರುವುದನ್ನು ನೋಡಲು ಸಾಧ್ಯವಾಗದೆ, ಮಡಿಕೇರಿಯಿಂದ ದೂರ ಸಾಗಿ ಜಂಗಮನಾದವ. ಪುಟ್ಟಬಸಪ್ಪ ಶನಿವಾರಸಂತೆಯ ಒಬ್ಬ ರೈತ, ಸೋಮಾರಿಯಾಗಿದ್ದವ. ಕೆಲಸವೇ ಮಾಡದ ಇವನನ್ನು ಹೆಂಡತಿ ಮನೆಯಿಂದ ಹೊರಹಾಕಿದ ಮೇಲೆ ಜಂಗಮನಾದ. ಹುಲಿ ಕಡಿದ ನಂಜಯ್ಯ ಹಾಗೂ ಕೆದಂಬಾಡಿ ರಾಮೇಗೌಡರು ಸ್ವಂತ ಇಚ್ಛೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು.

ಅಪರಂಪಾರ ಹಾಗೂ ಹುಲಿಕಡಿತ ನಂಜಯ್ಯ ಸೇರಿಕೊಂಡು ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಲು ಆರಂಭಿಸಿದರು. ಕೊಡಗಿನಲ್ಲಿ ರಾಜಾಡಳಿತವನ್ನು ಪುನರ್ ಸ್ಥಾಪಿಸುವುದೇ ಮುಖ್ಯ ಎನ್ನುವುದನ್ನು ಜನರ ಮನಸ್ಸಿನಲ್ಲಿ ಬಿಂಬಿಸಿದರು. ಆದರೆ ಆಂತರ್ಯದಲ್ಲಿ ಮುಖ್ಯವಾಗಿ ಬ್ರಿಟಿಷ್ ಸರ್ಕಾರವನ್ನು ಕೊನೆಗಾಣಿಸುವುದು ಅವರ ಉದ್ದೇಶವಾಗಿತ್ತು. ಈ ಹೋರಾಟಕ್ಕಾಗಿ ಸಹಾಯ ಕೋರಿ ಗ್ವಾಲಿಯರ್, ಲಾಹೋರ್, ಪೇಶಾವರ, ಹೈದರಾಬಾದ್, ಮೈಸೂರು ಸೇರಿ ಅನೇಕ ಕಡೆ ಸಂಚರಿಸಿದರು.

ಅಪರಂಪಾರನಿಗೆ ಅಪ್ಪಯ್ಯಗೌಡರ ಮೂಲಕ ಸುಳ್ಯ ಪರಿಸರದ ರೈತರ ಸಂಪರ್ಕವಾಯಿತು. ಅಪ್ಪಯ್ಯಗೌಡರು ಸಹೋದರ ಮಲ್ಲಪ್ಪಗೌಡರ ಮೂಲಕ ಬ್ರಿಟಿಷರ ವಿರುದ್ಧ ಜನರನ್ನು ಒಂದುಗೂಡಿಸಲು ನೆರವಾದರು. ಇದೇ ಸಮಯದಲ್ಲಿ ಸುಳ್ಯ ಪರಿಸರದಲ್ಲಿ ಹೆಸರುವಾಸಿಯಾಗಿದ್ದ ರೈತ ಕೆದಂಬಾಡಿ ರಾಮಗೌಡನೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಪರಂಪಾರನಿಗೆ ಜತೆಯಾದ. ಬ್ರಿಟಿಷರ ಕ್ರೂರ ಕಂದಾಯ ನಿಯಮವನ್ನು ವಿರೋಧಿಸಿ ಜನರನ್ನು ಒಗ್ಗೂಡಿಸಿದ.

1836ರ ಹೊತ್ತಿಗೆ ಅಪರಂಪಾರನ ಆಶಯದಂತೆ ಪಟೇಲ ಅಪ್ಪಯ್ಯಗೌಡರು ಇನ್ನೂರು ಜನ ರೈತರ ಪುಟ್ಟ ದಂಡೊಂದನ್ನು ಕಟ್ಟಿದರು. ಈ ವಿಷಯವನ್ನು ತಿಳಿದ ಕೊಡಗಿನ ಆಡಳಿತಾಧಿಕಾರಿ ಲೀ ಹಾರ್ಡಿ, ಬೋಪು ದಿವಾನನ ನೇತೃತ್ವದಲ್ಲಿ ತುಕಡಿಯೊಂದನ್ನು ಕಳಿಸಿಕೊಟ್ಟ. ಇದನ್ನು ಕಂಡ ಪಟೇಲನ ದಂಡು ಪಲಾಯನ ಮಾಡಿತು. ಈ ಸಮಯದಲ್ಲೇ ಅಪರಂಪಾರನನ್ನು ಬಂಧಿಸಿ ತಿರುಚಿರಾಪಳ್ಳಿಗೆ ಅಟ್ಟಲಾಯಿತು. ಆನಂತರ ಅಪರಂಪಾರ ಜೈಲಿನಲ್ಲೇ ಬಹುತೇಕ ಜೀವನವನ್ನು ಕಳೆದ. ಜೈಲಿನಲ್ಲಿದ್ದುಕೊಂಡೇ ತನ್ನ ಶಿಷ್ಯರ ಮೂಲಕ ಅಮರಸುಳ್ಯದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟವನ್ನು ಜೀವಂತವಾಗಿ ಇರಿಸಿದ. 34 ವರ್ಷ ಜೈಲುವಾಸದಲ್ಲಿದ್ದ ಅಪರಂಪಾರನನ್ನು ವೃದ್ಧಾಪ್ಯದಲ್ಲಿ ಅಂದರೆ 1870ರಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಯಿತು, ಬೆಂಗಳೂರಿಗೆ ಬಂದ. ‘ಬೆಂಗಳೂರಿನಲ್ಲಿ ಬೇಡ, ಮೈಸೂರಿನಲ್ಲಿ ಇರಬೇಕು’ ಎಂದು ಬ್ರಿಟಿಷರು ಹೇಳಿದರು. ಆದರೆ ಶ್ರೀರಂಗಪಟ್ಟಣದಲ್ಲಿಯೇ, ದಾರಿಮಧ್ಯೆ ಅಪರಂಪಾರ ಕೊನೆಯುಸಿರೆಳೆದ. ಈ ಮೂಲಕ, ಅಮರಸುಳ್ಯದಲ್ಲಿ ಬ್ರಿಟಿಷ್ ವಿರೋಧಿ ಧ್ವಜ ಹಾರಿಸಲು ಕಿಚ್ಚು ಹೊತ್ತಿಸಿದ ಜಂಗಮನ ಅಂತ್ಯವಾಯಿತು.

ಅಪರಂಪಾರನ ಶಿಷ್ಯ ಕಲ್ಯಾಣ ಸ್ವಾಮಿಯು ಹೋರಾಟವನ್ನು ಮುಂದುವರಿಸಿದ. ಬ್ರಿಟಿಷರು ಹುಡುಕುತ್ತಿರುವುದನ್ನು ಕಂಡ ಜನರೇ, ಕಲ್ಯಾಣಸ್ವಾಮಿಯನ್ನು ಗುಪ್ತವಾಗಿರಿಸಿ ಕಾಪಾಡಿದರು. ಆದರೆ ಲೀ ಹಾರ್ಡಿ, ಕಲ್ಯಾಣ ಸ್ವಾಮಿಯನ್ನು ಸೆರೆಹಿಡಿಯುವ ಪ್ರಯತ್ನ ಬಿಡಲೇ ಇಲ್ಲ. ಇನ್ನು ಕೊಡಗಿನಲ್ಲಿರುವುದು ಸಾಧ್ಯವೇ ಇಲ್ಲ ಎನ್ನುವಂತಾದಾಗ ಕಲ್ಯಾಣ ಸ್ವಾಮಿಯು ತಪ್ಪಿಸಿಕೊಂಡು ದಕ್ಷಿಣ ಕನ್ನಡಕ್ಕೆ ಹೋದ. ಇದನ್ನು ಅರಿತ ಬ್ರಿಟಿಷರು ಬೈತೂರಿನಲ್ಲಿ ಅವನನ್ನು ಸೆರೆ ಹಿಡಿದು, ಗಲ್ಲಿಗೇರಿಸಿದರು. ಅಲ್ಲಿಗೆ ಅಮರಸುಳ್ಯ ಹೋರಾಟದ ಎರಡನೇ ಹಂತವು ಮುಗಿದಿತ್ತು.

ಇದೆಲ್ಲ ಹೋರಾಟದ ನಡುವೆಯೇ, ಮೂರನೇ ಹಂತವಾಗಿ ನಡೆದ ಅಮರಸುಳ್ಯ ಹೋರಾಟ ಪ್ರಬಲವಾಗಿತ್ತು. 1837ರ ವೇಳೆಗೆ ರೈತರು, ವ್ಯಾಪಾರಿಗಳು ಬ್ರಿಟಿಷರ ತೆರಿಗೆಯಿಂದ ಬೇಸತ್ತುಹೋಗಿದ್ದರು. ತೆರಿಗೆ ಕಟ್ಟುವ ಸಲುವಾಗಿ ಆಸ್ತಿಪಾಸ್ತಿ ಮಾರಬೇಕಾದ ಸ್ಥಿತಿಯಿತ್ತು. ಅನೇಕರು ಮಾರಾಟವನ್ನೂ ಮಾಡಿದ್ದರು. ಇದೆಲ್ಲದರ ಆಕ್ರೋಶ ಮಡುಗಟ್ಟಿತ್ತು. 1837ರ ಮಾರ್ಚ್ 30ರಂದು ಕೆದಂಬಾಡಿ ರಾಮಗೌಡನು ತನ್ನ ಮಗನ ಮದುವೆ ಎಂದು ಸುದ್ದಿ ಹಬ್ಬಿಸಿ, ಸುಳ್ಯ ಸಮೀಪದಲ್ಲಿ ತನ್ನ ವಿಶಾಲವಾದ ಗದ್ದೆಯಲ್ಲಿಯೇ ಚಪ್ಪರ ಹಾಕಿಸಿ ಊರಿನ ಜನರನ್ನು ಆಮಂತ್ರಿಸಿದ. ಮಗನ ಮದುವೆಯನ್ನೂ ಮಾಡಿದ. ಸಾವಿರಕ್ಕೂ ಹೆಚ್ಚು ಜನರು ಖಡ್ಗ, ಬರ್ಜಿ, ಕತ್ತಿ, ಬಂದೂಕು ಹಿಡಿದರು. ಮದುವೆಯಾಗಿ ಒಂದೇ ರಾತ್ರಿ ಕಳೆದ ರಾಮಗೌಡನ ಮಗನೂ ಬಂದೂಕು ಹಿಡಿದು ಬ್ರಿಟಿಷರ ವಿರುದ್ಧ ಸೆಣೆಸಲು ಹೊರಟ. ಈ ಪ್ರದೇಶವನ್ನು ಆನಂತರದಲ್ಲಿ ಮದುವೆಗದ್ದೆ ಎಂದೇ ಕರೆಯಲಾಗುತ್ತಿತ್ತು. ಬಂಡಾಯದ ಪರವಾಗಿಯೇ ಇದ್ದ ಅಟ್ಲೂರು ರಾಮಪ್ಪಯ್ಯ ಆನಂತರದಲ್ಲಿ ಏಕೋ ಹಿಂಜರಿದ.

ಈತನನ್ನು ಬಂಡಾಯದಲ್ಲಿ ಸೇರಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ಆತ ಬ್ರಿಟಿಷರಿಗೆ ಮಾಹಿತಿ ಸೋರಿಕೆ ಮಾಡುವ ಅಪಾಯವಿತ್ತು. ರಾಮಪ್ಪಯ್ಯ

ನನ್ನು ಒಲಿಸುವ ಪ್ರಯತ್ನ ವಿಫಲವಾಯಿತು. ಅಲ್ಲದೆ, ಮನವೊಲಿಸಲು ಹೋದವರ ಮೇಲೆಯೇ ಗುಂಡು ಹಾರಿಸಿ ಕೊಲ್ಲಲು ಆತ ಮುಂದಾದ. ಆಗ ರಾಮಪ್ಪಯ್ಯ, ಆತನ ಅಣ್ಣ ಶಿವಣ್ಣ ಹಾಗೂ ಕುದುರೆಗಳನ್ನು ಬಂಧಿಸಲಾಯಿತು. ರಾಮಪ್ಪಯ್ಯನನ್ನು ದಂಡಿನೊಂದಿಗೆ ಕೈಕಟ್ಟಿಕೊಂಡು ಹೋಗುವುದು ಸರಿಯಲ್ಲ, ಆತ ಒಪ್ಪಿಕೊಳ್ಳದಿದ್ದರೆ ಮುಗಿಸುವುದೇ ಒಳ್ಳೆಯದು ಎಂದು ರಾಮಗೌಡ ಭಾವಿಸಿದ. ಕೊನೆಗೂ ಬಂಡಾಯದೊಂದಿಗೆ ಸೇರಲು ಒಪ್ಪದ ರಾಮಪ್ಪಯ್ಯನ ಕತ್ತನ್ನು ಕತ್ತರಿಸಲಾಯಿತು.

ಬ್ರಿಟಿಷ್ ಮಾಹಿತಿದಾರನಾಗಿದ್ದ ರಾಮಪ್ಪಯ್ಯನನ್ನು ಮುಗಿಸಿದ ನಂತರ ಹೋರಾಟಗಾರರು ಮತ್ತಷ್ಟು ಚುರುಕುಗೊಂಡರು. ಸಾವಿರ ಜನರಿದ್ದ ದಂಡು ಬೆಳ್ಳಾರೆಯಲ್ಲಿ ಸಭೆ ನಡೆಸಿ ಅನೇಕ ತೀರ್ಮಾನ ಕೈಗೊಂಡರು. ಒಂದು ತಂಡವು ಮೊದಲಿಗೆ ಪುತ್ತೂರನ್ನು ವಶಕ್ಕೆ ಪಡೆಯಿತು. ಎರಡನೆಯ ತಂಡವು ಕಾಸರಗೋಡಿನತ್ತ ಸಾಗಿ ಹೋರಾಡಿತು. ತಹಶೀಲ್ದಾರರ ಕಚೇರಿಯನ್ನು ವಶಪಡಿಸಿಕೊಂಡು ತಮ್ಮವರನ್ನೇ ಅಧಿಕಾರಿಗಳನ್ನಾಗಿ ನೇಮಿಸಿದರು. ಅಲ್ಲಿಂದ ಮಂಗಳೂರು ಕಡೆಗೆ ಹೊರಟು ಕುಂಬಳೆಯನ್ನು, ಬಳಿಕ ಮಂಗಳೂರನ್ನೂ ವಶಕ್ಕೆ ಪಡೆದರು. 1837ರ ಏಪ್ರಿಲ್ 5ರಂದು ಹೋರಾಟಗಾರರು ಕಲೆಕ್ಟರ್ ಆಫೀಸಿನಲ್ಲಿ ಹಾರುತ್ತಿದ್ದ ಬ್ರಿಟಿಷ್ ಬಾವುಟವನ್ನು ಕೆಳಗಿಳಿಸಿ ಹಾಲೇರಿ ರಾಜಲಾಂಛನದ ಬಾವುಟ ಹಾರಿಸಿದರು. ಇಂದು ಆ ಸ್ಥಳವನ್ನು ಬಾವುಟಗುಡ್ಡೆ ಎಂದೇ ಕರೆಯಲಾಗುತ್ತದೆ. ಪಣಂಬೂರು, ಮುಲ್ಕಿ ಪ್ರದೇಶಗಳೂ ಹೋರಾಟಗಾರರ ವಶಕ್ಕೆ ಬಂದವು. ದಂಗೆಯ ಪ್ರಮುಖರನ್ನು ಹಿಡಿದುಕೊಟ್ಟವರಿಗೆ 500-1000 ರೂ. ಬಹುಮಾನವನ್ನು ಬ್ರಿಟಿಷರು ಘೊಷಿಸಿದರು. ಆದರೆ ಅದಕ್ಕೆ ಜನರು ತಲೆಕೆಡಿಸಿಕೊಳ್ಳಲಿಲ್ಲ.

ಈ ಸಮಯದಲ್ಲಿ ಮತ್ತೊಂದು ತಂಡವು ಮಡಿಕೇರಿಗೆ ಮುತ್ತಿಗೆ ಹಾಕಲು ಹೊರಟಿತು. ಆದರೆ ಅಷ್ಟು ಹೊತ್ತಿಗಾಗಲೇ ಮಡಿಕೇರಿ ತಲುಪಿದ್ದ ಮೇಜರ್ ಡ್ರಾಯರನ ಬೆಟಾಲಿಯನ್, ಕೊಡಗಿನ ಸುಬೇದಾರ ಅಪ್ಪಚ್ಚುವನ್ನು ಸೆರೆ ಹಿಡಿಯಿತು. ಮಡಿಕೇರಿಯ ಉತ್ತರ ದಿಕ್ಕಿನ ಉಕ್ಕಡದ ಬಳಿ ಗುಂಡಿನ ಕಾಳಗ ನಡೆಯಿತು. ಈ ಸಂಗ್ರಾಮದಲ್ಲಿ ಅಮರಸುಳ್ಯ ಹೋರಾಟಗಾರರಿಗೆ ಸೋಲಾಯಿತು. ಅಸಂಘಟಿತವಾಗಿ ನಡೆದ ಹೋರಾಟದಲ್ಲಿ ಕೆಲವು ಲೋಪಗಳಿದ್ದದ್ದರಿಂದ, ಒಳಗಿನವರೇ ಕೆಲವೊಮ್ಮೆ ಮೋಸ ಮಾಡಿದ್ದರಿಂದಲೂ ಅಮರಸುಳ್ಯ ಹೋರಾಟ ಹೀಗೆ ಕೊನೆಯಾಯಿತು. ಆದರೆ ಬ್ರಿಟಿಷರನ್ನು ಎದುರಿಸಿ ಗೆಲ್ಲಬಹುದು ಎಂಬ ಆಶಾಕಿರಣವನ್ನು ಅಮರಸುಳ್ಯ ಹೋರಾಟವು ನೀಡಿತು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಬಲವನ್ನು ತಂದುಕೊಟ್ಟಿತು. ನಾಯಕನಿಲ್ಲದೆ ಜನಸಾಮಾನ್ಯರು ನಡೆಸಿದ ಹೋರಾಟ ಎಂದು ಇತಿಹಾಸದಲ್ಲಿ ದಾಖಲಾಯಿತು. ಇಂಥ ಅನೇಕ ಅರ್ನ್ಯಘ ರತ್ನಗಳು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಡಗಿವೆ. ಮುಂದಿನ ದಿನಗಳಲ್ಲಿ ಅವುಗಳನ್ನು ನೋಡೋಣ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top