ಬ್ಯಾಂಕ್‌ಗಳ ಸಂಕಷ್ಟಕ್ಕೂ ಬಜೆಟ್‌ ಸಂಕಟಕ್ಕೂ ಸಂಬಂಧವಿದೆ

ಬ್ಯಾಂಕ್‌ಗಳ ಸಂಕಷ್ಟಕ್ಕೂ ಬಜೆಟ್‌ ಸಂಕಟಕ್ಕೂ ಸಂಬಂಧವಿದೆ
ಭಾರತದ ಹಣಕಾಸು ಕ್ಷೇತ್ರದಲ್ಲಿ ಉಂಟಾಗಿರುವ ತಲ್ಲಣಕ್ಕೆ ಬಿಗಿ ನಿಯಂತ್ರಣ ವ್ಯವಸ್ಥೆ ರೂಪಿಸುವುದೊಂದೇ ಪರಿಹಾರ
– ಹರಿಪ್ರಕಾಶ್‌ ಕೋಣೆಮನೆ
ಯೆಸ್‌ ಬ್ಯಾಂಕ್‌ ಸಂಕಷ್ಟದ ಬೆಳವಣಿಗೆಗೂ ಕರ್ನಾಟಕ ಸರಕಾರದ ಬಜೆಟ್‌ಗೂ ನೇರವಾಗಿ ಯಾವುದೇ ಸಂಬಂಧ ಇಲ್ಲ. ಆದರೆ ಆ ಎರಡೂ ವಿದ್ಯಮಾನಗಳ ನಡುವೆ ಕೆಲ ಸಾಮ್ಯತೆಗಳಿರುವುದು ಮಾತ್ರ ನಿಜ.
ಯೆಸ್‌ ಬ್ಯಾಂಕ್‌ ದಿವಾಳಿ ಹಾದಿಯಲ್ಲಿ ದಾಪುಗಾಲಿಟ್ಟಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾಗೆಯೇ ದೇಶ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನ ಪರಿಣಾಮ ರಾಜ್ಯ ಸರಕಾರದ ಕಾರ್ಯನಿರ್ವಹಣೆಯ ಮೇಲೆ ಗಾಢ ಪರಿಣಾಮ ಬೀರಿರುವುದು ಬಿಎಸ್‌ವೈ ಬಜೆಟ್‌ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿದೆ. ಮುಖ್ಯವಾಗಿ ಈ ಎರಡೂ ಸಂಗತಿಗಳು ದೇಶದ ಹಾಗೂ ರಾಜ್ಯದ ಆರ್ಥಿಕ ಸ್ಥಿತಿಗತಿಯ ನೇರ ಪರಿಣಾಮಕ್ಕೆ ಸಂಬಂಧಿಸಿವೆ ಎಂಬುದನ್ನು ಗಮನಿಸಬೇಕಿದೆ.
ಮೊದಲು ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಹಗರಣ ಆಚೆ ಬಂತು. 2019ರ ಸೆಪ್ಟೆಂಬರ್‌ನಲ್ಲಿ ಪಿಎಂಸಿ (ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌) ದಿವಾಳಿ ಹಂತ ತಲುಪಿರುವುದು ಬಹಿರಂಗವಾಯಿತು. ಅದಾಗಿ ಇನ್ನೂ ವರ್ಷವಾಗಿಲ್ಲ. ಆಗಲೇ ಯೆಸ್‌ ಬ್ಯಾಂಕ್‌ ಕೂಡ ಅದೇ ಹಾದಿಯಲ್ಲಿ ಸಾಗುತ್ತಿರುವುದು ಆ ಬ್ಯಾಂಕಿನ ಲಕ್ಷಾಂತರ ಮಂದಿ ಗ್ರಾಹಕರಿಗೆ ಆಘಾತ ತಂದಿದೆ. ಇಲ್ಲಿ ಉಲ್ಲೇಖಿಸಿದ ಎಲ್ಲ ಬ್ಯಾಂಕುಗಳ ಕೇಂದ್ರ ಕಚೇರಿ ಮುಂಬೈನಲ್ಲಿವೆ. ವಿಶೇಷವಾಗಿ ಈ ಬ್ಯಾಂಕುಗಳು ಮರುಪಾವತಿಯಾಗದ ಸಾಲ ವಿತರಣೆ ಮಾಡಿ ಸಂಕಷ್ಟಕ್ಕೆ ಸಿಲುಕಿರುವುದೇ, ಅವುಗಳ ನಡುವೆ ಇರುವ ಸಾಮ್ಯತೆ ಮತ್ತು ವಿಶೇಷತೆ.
ವಿಜಯ್‌ ಮಲ್ಯ, ನೀರವ್‌ ಮೋದಿ ಮೊದಲಾದವರು ದೊಡ್ಡ ಮೊತ್ತದ ಸಾಲ ತೆಗೆದುಕೊಂಡು ಮರುಪಾವತಿ ಮಾಡದ ಕಾರಣ ಎಸ್‌ಬಿಐ ಕೂಡ ಸಂಕಷ್ಟಕ್ಕೆ ಸಿಲುಕಿತ್ತು. ಸರಕಾರ ಮಧ್ಯಪ್ರವೇಶ ಮಾಡಿದ ಪರಿಣಾಮ ಎಸ್‌ಬಿಐ ಚೇತರಿಸಿಕೊಂಡಿತು. ಬ್ಯಾಂಕ್‌ನ ನಿರ್ವಹಣೆಗೆ ಅಗತ್ಯವಾದ ಹಣಕಾಸಿನ ಕೊರತೆಯಿಂದ ಎಸ್‌ಬಿಐ ಬಳಲುತ್ತಿದ್ದಾಗ ಕೇಂದ್ರ ಸರಕಾರ ದೊಡ್ಡ ಮೊತ್ತದ ಹಣಕಾಸು ನೆರವನ್ನು ಒದಗಿಸಿ ಜೀವದಾನ ನೀಡಿತು. ಐಸಿಐಸಿಐ ಬ್ಯಾಂಕಿನ ಕತೆ ತುಸು ವಿಭಿನ್ನ. ಐಸಿಐಸಿಐ ಬ್ಯಾಂಕಿನ ಸಂಕಷ್ಟದ ಕಾರಣ ಮತ್ತು ಸ್ವರೂಪ ವಿಭಿನ್ನವಾದರೂ ಗ್ರಾಹಕರು ಎದುರಿಸಿದ ಆತಂಕದ ಸ್ವರೂಪ ಒಂದೇ ತೆರನಾದದ್ದು.
ಇಲ್ಲಿ ಒಂದು ಪ್ರಶ್ನೆಯನ್ನು ಯಾರಾದರೂ ಕೇಳಬಹುದು. ಖಾಸಗಿ ಬ್ಯಾಂಕುಗಳು ದಿವಾಳಿ ಆದರೆ ಸರಕಾರಗಳು ಏನು ಮಾಡಲು ಸಾಧ್ಯ ಎಂದು. ಯಾರೋ ಒಬ್ಬ ಯಃಕಶ್ಚಿತ್‌ ವ್ಯಕ್ತಿ ಈ ಪ್ರಶ್ನೆಯನ್ನು ಕೇಳಬಹುದು. ಆದರೆ ಕಲ್ಯಾಣ ರಾಜ್ಯ(welfare state) ಸ್ಥಾಪನೆಯ ಭರವಸೆಯನ್ನು ನೀಡುವ ಯಾವುದೇ ಒಂದು ಜವಾಬ್ದಾರಿ ಸರಕಾರ ಹಾಗೆ ಹೇಳಲು ಸಾಧ್ಯವಿಲ್ಲ. ಹಾಗಾದರೆ ಕಲ್ಯಾಣ ರಾಜ್ಯದ ಕಲ್ಪನೆಯ ನಿರೀಕ್ಷೆಯಾದರೂ ಏನು? ನಿರೀಕ್ಷೆ ಇಷ್ಟೆ, ‘‘ಯಾವುದೇ ಒಂದು ಸರಕಾರ ಜನರ ಸಾಮಾಜಿಕ ಮತ್ತು ಆರ್ಥಿಕ ಆಶಯಗಳ ಸಂಪೂರ್ಣ ಸಂರಕ್ಷ ಣೆ ಮಾಡಬೇಕು.’’
ಟಿ. ಎಚ್‌. ಮಾರ್ಶಲ್‌ನ ಮಾತೊಂದು ಈಗಿನ ಸಂದರ್ಭಕ್ಕೆ ಹೆಚ್ಚು ಅನ್ವರ್ಥವಾಗಿದೆ. ಆತ ಆಧುನಿಕ ಕಲ್ಯಾಣ ರಾಜ್ಯದ ಕಲ್ಪನೆಯನ್ನು ಹೀಗೆ ವ್ಯಾಖ್ಯಾನಿಸುತ್ತಾನೆ. ಆತನ ಪ್ರಕಾರ, ಆಧುನಿಕ ಕಲ್ಯಾಣ ರಾಜ್ಯ ಎಂಬುದು ಪ್ರಜಾಪ್ರಭುತ್ವ, ಪ್ರಜಾ ಕಲ್ಯಾಣ ಮತ್ತು ಬಂಡವಾಳಶಾಹಿಯ ಸಮ್ಮಿಶ್ರಣ! ಅಂದರೆ, ಒಂದು ಜವಾಬ್ದಾರಿಯುತ ಸರಕಾರ- ತಾನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವ್ಯವಹರಿಸುವ ಗ್ರಾಹಕರ ಹಿತಕ್ಕೆ ಮಾತ್ರ ನಿಲ್ಲುವೆ, ಅವರಷ್ಟೇ ನನ್ನ ಕಾಳಜಿ ಎಂದು ಹೇಳಬಾರದು. ಖಾಸಗಿ ಬ್ಯಾಂಕುಗಳು, ಸಹಕಾರಿ ವಲಯಕ್ಕೆ ಸೇರಿದ ಹಣಕಾಸು ಸಂಸ್ಥೆಗಳ ಒಳಿತು ಕೆಡುಕುಗಳಿಗೂ ಸರಕಾರ ಜವಾಬ್ದಾರಿ ಹೊರಬೇಕು.
ಈಗ ಬ್ಯಾಂಕಿಂಗ್‌ ಕ್ಷೇತ್ರ ಎದುರಿಸುತ್ತಿರುವ ಸಂಕಷ್ಟ, ಸವಾಲುಗಳಿಗೆ ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದ್ದು, ಈಗಾಗಲೇ ಚರ್ಚಿತವಾಗಿರುವ ಹಾಗೆ ಬ್ಯಾಂಕುಗಳು ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಅಳತೆ ಅಂದಾಜಿಲ್ಲದೆ ಅಕ್ರಮವಾಗಿ ನೀಡಿರುವ ಬೃಹತ್‌ ಮೊತ್ತದ ಸಾಲ ಕಾರಣ. ವಿಜಯ್‌ ಮಲ್ಯ, ನೀರವ್‌ ಮೋದಿ, ನರೇಶ್‌ ಗೋಯೆಲ್‌ ಇತ್ಯಾದಿಗಳೆಲ್ಲ ಆ ಕೆಟಗರಿಯಲ್ಲಿ ಬರುತ್ತಾರೆ. ಅದೇ ರೀತಿಯಾಗಿ ಕಳೆದ ಮೂರ್ನಾಲ್ಕು ವರ್ಷಗಳ ಈಚೆ ಉಂಟಾಗಿರುವ ಆರ್ಥಿಕ ತಲ್ಲಣಗಳ ಪರಿಣಾಮ, ಈಗ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ನಿರ್ದಿಷ್ಟ ಮತ್ತು ಪ್ರಾಮಾಣಿಕ ಉದ್ದೇಶಕ್ಕೆ ಸಾಲ ಪಡೆದವರೂ ಸಹ ಸಾಲ ಮರುಪಾವತಿ ಮಾಡಲಾಗದ ಸಂದಿಗ್ಧಕ್ಕೆ ಸಿಲುಕಿದ್ದಾರೆಂಬುದೂ ಅಷ್ಟೇ ಸತ್ಯ.
ಪರಿಹಾರ ಏನು?
ಭಾರತದ ಹಣಕಾಸು ಕ್ಷೇತ್ರದಲ್ಲಿ ಉಂಟಾಗಿರುವ ತಲ್ಲಣಕ್ಕೆ ಬಿಗಿ ನಿಯಂತ್ರಣ ಇಲ್ಲದಿರುವುದೊಂದೇ ಕಾರಣ ಹಾಗೂ ಬಿಗಿ ನಿಯಂತ್ರಣ ವ್ಯವಸ್ಥೆ ರೂಪಿಸುವುದೊಂದೇ ಪರಿಹಾರ ಹೊರತು ಸದ್ಯಕ್ಕೆ ಬೇರೆ ಏನೂ ಇಲ್ಲ.
ಭಾರತದ ಹಣಕಾಸು ಸಂಸ್ಥೆಗಳು ನಡೆಸಿರುವ ಅಕ್ರಮಗಳಿಗೆ, ಈಗ ಎದುರಿಸುತ್ತಿರುವ ಸಂಕಷ್ಟಗಳಿಗೆ ಸರಕಾರ, ಭ್ರಷ್ಟಾಚಾರ ಏನೆಲ್ಲ ಕಾರಣಗಳನ್ನು ಕೊಡಬಹುದಾದರೂ, ಸಾಂಸ್ಥಿಕವಾಗಿ ಹೊಣೆ ಹೊರಬೇಕಾದದ್ದು ಆರ್‌ಬಿಐ ಮಾತ್ರ. ಇನ್ನಾದರೂ ಆರ್‌ಬಿಐ ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತದೆ ಮತ್ತು ಕ್ರಮ ತೆಗೆದುಕೊಳ್ಳಲು ಸರಕಾರದ ಮೇಲೆ ಯಾವ ರೀತಿಯ ಒತ್ತಡ ಹೇರುತ್ತದೆ ಎಂಬುದರ ಮೇಲೆ ಮುಂದಿನ ಪರಿಣಾಮ ನಿರ್ಧರಿತವಾಗಿದೆ.
ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಒದಗಿರುವ ಅಪಾಯ
ಈಗ ಉಂಟಾಗಿರುವ ಹಣಕಾಸು ಪರಿಸ್ಥಿತಿಯ ತಲ್ಲಣವನ್ನು ಎಸ್‌ಬಿಐ, ಪಿಎನ್‌ಬಿ, ಪಿಎಂಸಿ, ಯೆಸ್‌ ಬ್ಯಾಂಕ್‌ ಎಂದು ಬಿಡಿಬಿಡಿಯಾಗಿ ನೋಡಬೇಕಿಲ್ಲ. ಇದನ್ನು ಒಟ್ಟಾರೆಯಾಗಿ ಹಣಕಾಸು, ಬ್ಯಾಂಕಿಂಗ್‌ ಕ್ಷೇತ್ರದ ಪರಿಸ್ಥಿತಿ ಎಂದು ಅವಲೋಕಿಸಬೇಕಿದೆ. ಈಗ ಉಂಟಾಗಿರುವ ಬೆಳವಣಿಗೆಯಿಂದ ಎರಡು ಅಪಾಯಗಳು ಘಟಿಸುವ ಸಾಧ್ಯತೆಗಳಿವೆ. ಮೊದಲನೆಯದ್ದು ಗ್ರಾಹಕರು ಸಾರಾಸಗಟಾಗಿ ಸಹಕಾರಿ ವಲಯದ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲಿ ವಹಿವಾಟನ್ನು ಸ್ಥಗಿತಗೊಳಿಸಬಹುದು. ಹಾಗಾದಾಗ ದೇಶದ ಬ್ಯಾಂಕಿಂಗ್‌ ವಲಯದ ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ಖಾಸಗಿ/ಸಹಕಾರಿ ಬ್ಯಾಂಕಿಂಗ್‌ ವಲಯ ದಿಕ್ಕೆಟ್ಟು ಹೋಗಬಹುದು. ಇನ್ನು ಎರಡನೆಯದು ಜನರು ಬ್ಯಾಂಕಿಂಗ್‌ ಸಂಸ್ಥೆಗಳಲ್ಲಿ ಹೂಡಿಕೆ ಮತ್ತು ಉಳಿತಾಯ ಮಾಡುವುದರಿಂದ ವಿಮುಖವಾಗಬಹುದು. ಇವೆರಡೂ ಭಾರತದ ಬ್ಯಾಂಕಿಂಗ್‌ ವಲಯಕ್ಕೆ ಆತಂಕಕಾರಿ.
ಅವೈಜ್ಞಾನಿಕ ಮತ್ತು ಅಪೂರ್ಣ ಪರಿಹಾರ ಕ್ರಮ
ಬ್ಯಾಂಕಿಂಗ್‌ ಸಂಸ್ಥೆಗಳ ಹಿತರಕ್ಷ ಣೆಗೆ ಮತ್ತು ಬ್ಯಾಂಕ್‌ ಗ್ರಾಹಕರ ಹಿತರಕ್ಷ ಣೆಗೆ ಇದುವರೆಗೆ ಸ್ಪಷ್ಟ ಮಾನದಂಡ, ಉಪಕ್ರಮಗಳೇ ಇರಲಿಲ್ಲ. ಇದ್ದರೂ ವೈಜ್ಞಾನಿಕವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಈ ಸಲದ ಕೇಂದ್ರ ಮುಂಗಡಪತ್ರದಲ್ಲಿ ಕೆಲ ಉಪಕ್ರಮಗಳನ್ನು ಕೇಂದ್ರ ಹಣಕಾಸು ಸಚಿವರು ಪ್ರಸ್ತಾಪ ಮಾಡಿದ್ದಾರೆ. ಉದಾಹರಣೆಗೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟ ಗ್ರಾಹಕನೊಬ್ಬ ಮೋಸ ಹೋದರೆ ಆತನಿಗೆ ಗರಿಷ್ಠ 5 ಲಕ್ಷ ರೂ. ವರೆಗೆ ಸರಕಾರ ಪರಿಹಾರ ನೀಡುವ ಕುರಿತು ಪ್ರಸ್ತಾಪಿಸಲಾಗಿದೆ. ಈ ಪರಿಹಾರ ಮೊತ್ತ ಒಂದರಿಂದ ಐದು ಲಕ್ಷ ಠೇವಣಿ ಇಡುವವನಿಗೂ ಒಂದೇ, ಒಂದು ಕೋಟಿ ರೂ. ಠೇವಣಿ ಇಟ್ಟು ಕೈ ಸುಟ್ಟುಕೊಳ್ಳುವವನಿಗೂ ಒಂದೇ. ಈ ಪರಿಹಾರ ಠೇವಣಿ ಪ್ರಮಾಣಕ್ಕೆ ಅನುಗುಣವಾಗಿ ಇರಬೇಕಲ್ಲವೇ? ಇಲ್ಲದಿದ್ದರೆ ಗ್ರಾಹಕ ಬ್ಯಾಂಕುಗಳ ಮೇಲೆ ವಿಶ್ವಾಸವಿರಿಸಲು ಹೇಗೆ ಸಾಧ್ಯ?
ಇದು ಬ್ಯಾಂಕುಗಳ ಕತೆ, ಈ ಸ್ಥಿತಿಗೆ ನಮ್ಮ ರಾಜ್ಯ ಸರಕಾರಗಳೂ ಹೊರತಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಿದೆ.
ದೇಶದ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ರಾಜ್ಯ ಸರಕಾರಗಳ ಕಾರ್ಯನಿರ್ವಹಣೆ ಮೇಲೆ ಹೇಗೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂಬುದು ಬಿಎಸ್‌ವೈ ಮುಂಗಡ ಪತ್ರದಲ್ಲಿ ಸ್ಪಷ್ಟವಾಗಿ ಅನಾವರಣವಾಗಿದೆ. ಬ್ಯಾಂಕಿಂಗ್‌ ಕ್ಷೇತ್ರದ ತಲ್ಲಣಗಳ ಕುರಿತು ಚರ್ಚೆ ಮಾಡುವಾಗ ಕರ್ನಾಟಕದಂತಹ ಪ್ರಮುಖ ರಾಜ್ಯ ಎದುರಿಸುತ್ತಿರುವ ತಲ್ಲಣಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲೇ ಬೇಕಾಗುತ್ತದೆ. ದೇಶದ ಆರ್ಥಿಕತೆಗೆ ಜಿಎಸ್ಟಿ ಮೂಲಕ ಮೂರನೇ ಗರಿಷ್ಠ ಕೊಡುಗೆ ನೀಡುವ ಕರ್ನಾಟಕಕ್ಕೆ ಜಿಎಸ್ಟಿ ಪಾಲು ಮತ್ತು ಕೇಂದ್ರದ ಕೊಡುಗೆ ಎರಡೂ ಸೇರಿ ಸರಿಸುಮಾರು 12 ಸಾವಿರ ಕೋಟಿ ರೂಪಾಯಿ ಖೋತಾ ಆಗಿದೆ. ಅದರ ಜೊತೆಗೇ ಮುಂದಿನ ವರ್ಷ ಕೇಂದ್ರದ ಪಾಲಿನ ಖೋತಾ ಇನ್ನೂ ಹೆಚ್ಚಾಗಲಿದೆ ಎಂಬುದನ್ನೂ ಅದೇ ಬಜೆಟ್‌ ಪುಸ್ತಕದಲ್ಲೇ ನಮೂದಿಸಲಾಗಿದೆ. ಏನಿದರ ಅರ್ಥ? ಮುಂದಿನ ವರ್ಷವೂ ಕೂಡ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳಲಾರದು ಎಂದೇ?
ಒಂದು ಸರಕಾರ ಅಥವಾ ಹಣಕಾಸು ಸಂಸ್ಥೆಗಳು ಉತ್ಪಾದಕ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡಲಾಗದೆ ದೈನಂದಿನ ವ್ಯವಹಾರಗಳ ನಿಭಾವಣೆಗೇ ಹೆಣಗುವಂತಾದರೆ ಆರ್ಥಿಕತೆ ಸುಧಾರಿಸುವ ಮಾರ್ಗವೆಂತು?
ಡೇವಿಡ್‌ ಥೋರೋ ಹೇಳಿದ ಪ್ರಸಿದ್ಧ ಮಾತಿದೆ. ‘‘The government is best which governes least’’ ಅದನ್ನೇ ಪ್ರಧಾನಿ ಮೋದಿ ಆಗಾಗ ಹೀಗೆ ಹೇಳುತ್ತಿರುತ್ತಾರೆ. Maximum governance, minimum government ಅಂತ. ಹಾಗಾದರೆ ವಾಸ್ತವದಲ್ಲಿ ಏನಾಗುತ್ತಿದೆ? ಆರ್‌ಬಿಐನಂತಹ ಸಂಸ್ಥೆಗಳು, ಆರ್ಥಿಕ ತಜ್ಞರು ಈಗ ಮುಖ್ಯಭೂಮಿಕೆಗೆ ಬರಬೇಕಲ್ಲವೆ?
ಕಡೆ ಮಾತು: 60ರ ದಶಕಕ್ಕೂ ಮುನ್ನ ಬ್ಯಾಂಕಿಂಗ್‌ ಕ್ಷೇತ್ರ ಖಾಸಗಿಯವರ ಕೈನಲ್ಲಿ ಇದೆ, ಬ್ಯಾಂಕಿಂಗ್‌ ಜಾಲ ಎಲ್ಲ ಕಡೆ ವಿಸ್ತರಣೆಯಾಗುತ್ತಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಇಂದಿರಾ ಗಾಂಧಿ ಅವರು 1969ರಲ್ಲಿ ಭಾರತದ 14 ಪ್ರಮುಖ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದರು. ಇದಾದ ಆರಂಭದ ಕೆಲವು ವರ್ಷಗಳಲ್ಲಿ ಬ್ಯಾಂಕಿಂಗ್‌ ಕ್ಷೇತ್ರ ಸುಧಾರಿಸಿದಂತೆ ಕಂಡುಬಂದಿತು. ಆದರೆ, ಆಳದಲ್ಲಿ ಅದು ಆಡಳಿತಶಾಹಿಯ ಕೆಂಪು ಪಟ್ಟಿ, ವಿಳಂಬ ದ್ರೋಹಕ್ಕೆ ಸಿಕ್ಕಿ ನಲುಗಲಾರಂಭಿಸಿತು. ಮುಂದೆ 1990ರ ಬಳಿಕ ಮತ್ತೊಮ್ಮೆ ದೇಶದಲ್ಲಿ ಖಾಸಗೀಕರಣದ ಪರ್ವ ಶುರುವಾಯಿತು. ಆದರೂ ಈ ಎಲ್ಲ ಅವಧಿಯಲ್ಲಿ ಯಾವುದೇ ರೀತಿಯ ದೊಡ್ಡ ಮಟ್ಟದ ಸುಧಾರಣೆ ಎಂಬುದು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆಗಲೇ ಇಲ್ಲ. ಬ್ಯಾಂಕ್‌ ರಾಷ್ಟ್ರೀಕರಣಕ್ಕೆ ಐದು ದಶಕಗಳು ತುಂಬಿರುವ ಈ ಹೊತ್ತಲ್ಲಾದರೂ ಸರಕಾರ, ಬ್ಯಾಂಕಿಂಗ್‌ ಸುಧಾರಣೆಯತ್ತ ಗಮನ ಹರಿಸಬೇಕಿದೆ.

ಓದುಗರ ಒಡಲಾಳ
ಹಣಕಾಸಿನ ಮುಗ್ಗಟ್ಟು, ಕೇಂದ್ರದ ನೆರವು ಬಾರದಿರುವುದು ಹೀಗೆ ನಾನಾ ಕಾರಣಕ್ಕೆ ಕೈಗಾರಿಕೆ, ಮೂಲಸೌಕರ್ಯಕ್ಕೆ ತಕ್ಕ ಅನುದಾನವನ್ನು ಈ ಸಲದ ರಾಜ್ಯ ಬಜೆಟ್‌ನಲ್ಲಿ ನೀಡಲಾಗಿಲ್ಲ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಕೂಡ ಜನಪ್ರಿಯ ಕಾರ್ಯಕ್ರಮಗಳಿಗೇ ಒತ್ತು ಕೊಟ್ಟಿದ್ದರು. ಹೀಗೇ ಮುಂದುವರೆದರೆ ಕರ್ನಾಟಕವೂ ಬೀಮಾರು ರಾಜ್ಯದ ಸಾಲಿಗೆ ಸೇರುವುದಿಲ್ಲವೇ?
ಎಂ.ನರೇಂದ್ರ, ಇಂದಿರಾನಗರ, ಬೆಂಗಳೂರು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top