50 ದಿನಗಳ ನಂತರ ಇಂದಿನಿಂದ ಮದ್ಯ ಮಾರಾಟ ಆರಂಭ
ವಿಕ ಸುದ್ದಿಲೋಕ ಬೆಂಗಳೂರು.
ಸುಮಾರು ಐವತ್ತು ದಿನಗಳಿಂದ ಮದ್ಯದ ಘಾಟಿನ ಸುಳಿವಿಲ್ಲದೆ ಬರಗೆಟ್ಟವರಂತಾಗಿರುವ ಎಣ್ಣೆಪ್ರಿಯರು ‘ಅಮಲು ತೈಲ’ಕ್ಕಾಗಿ ತುದಿಗಾಲ ಮೇಲೆ ನಿಂತಿದ್ದಾರೆ. ಕೊರೊನಾದಿಂದಾಗಿ ಬಂದ್ ಆಗಿದ್ದ ಮದ್ಯ ಮಾರಾಟ ಸೋಮವಾರದಿಂದ ಆರಂಭವಾಗಲಿದ್ದು, ಮೊದಲ ದಿನವೇ ಮದ್ಯಪ್ರಿಯರು ಮುಗಿಬಿದ್ದರೆ ಕಂಟ್ರೋಲ್ ಮಾಡೋದು ಹೇಗೆ ಎಂಬ ಚಿಂತೆಯಲ್ಲಿ ಪೊಲೀಸರಿದ್ದಾರೆ!
ನಿರ್ಬಂಧಿತ ಪ್ರದೇಶ ಹೊರತುಪಡಿಸಿ ಉಳಿದೆಲ್ಲೆಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಅದು ಚಿಲ್ಲರೆ ಮಾರಾಟ ಮಳಿಗೆಗಳು, ವೈನ್ ಶಾಪ್‌ಗಳು ಮತ್ತು ಎಂಎಸ್‌ಐಎಲ್ ಮಳಿಗೆಗಳಲ್ಲಿ ಮಾತ್ರ. ರಾಜ್ಯಾದ್ಯಂತ ಸುಮಾರು 4700 ಅಂಗಡಿಗಳಲ್ಲಿ ಮದ್ಯ ಮಾರಾಟ ಆರಂಭವಾಗಲಿದೆ. ಆದರೆ, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಸದ್ಯ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲದಿರುವುದರಿಂದ ಅಷ್ಟೇನೂ ಗಲಾಟೆ ಆಗದು ಎನ್ನುತ್ತಾರೆ ಎಂಆರ್‌ಪಿ ಔಟ್‌ಲೆಟ್‌ನ ಮಾಲೀಕರು. ಹಲವು ಕಡೆ ಮದ್ಯದ ಅಂಗಡಿಗಳ ಮುಂದೆ ಎಲ್ಲೆಲ್ಲಿ ನಿಲ್ಲಬೇಕು ಎಂದು ಮಾರ್ಕಿಂಗ್ ಮಾಡಿದ್ದರೆ, ಇನ್ನೂ ಕೆಲವೆಡೆ ಸರ್ವೆ ಕಡ್ಡಿಗಳನ್ನು ಕಟ್ಟಿ ಕ್ಯೂ ನಿಲ್ಲಲು ಅವಕಾಶ ಮಾಡಿಕೊಡಲಾಗಿದೆ.
ಎಲ್ಲಿ ಮದ್ಯ ದೊರಕಲಿದೆ?
ಸಿಎಲ್-2: 3946 ಚಿಲ್ಲರೆ ಮದ್ಯದ ಅಂಗಡಿಗಳು, ಅಂದರೆ ವೈನ್‌ಶಾಪ್ ಮತ್ತು ಎಂಆರ್‌ಪಿ ಔಟ್‌ಲೆಟ್‌ಗಳು.
ಸಿಎಲ್ -11: 789 ಎಂಎಸ್ ಐಎಲ್ ಮಳಿಗೆಗಳು
ಸಮಯ: ಬೆಳಗ್ಗೆ 9ರಿಂದ ಸಂಜೆ 7
ಎಷ್ಟು ಸ್ಟಾಕ್ ಇದೆ?
ಸದ್ಯ ಮದ್ಯದ ಅಂಗಡಿಗಳಲ್ಲಿರುವ ದಾಸ್ತಾನು ಅಲ್ಲದೆ, ಕರ್ನಾಟಕ ಪಾನೀಯ ನಿಗಮದ 71 ಡಿಪೋಗಳಲ್ಲಿ 27 ಲಕ್ಷ ಲೀಟರ್ ಐಎಂಎಲ್ ಮತ್ತು 16 ಲಕ್ಷ ಲೀಟರ್ ಬಿಯರ್ ದಾಸ್ತಾನು ಇದೆ. ಇದು ಸುಮಾರು 10 ದಿನಕ್ಕೆ ಸಾಕಾಗುತ್ತದೆ ಎನ್ನುತ್ತಾರೆ ಪಾನೀಯ ನಿಗಮದ ಅಧಿಕಾರಿಗಳು. ಜತೆಗೆ, ಡಿಸ್ಟಿಲರಿಗಳಿಗೆ ಶನಿವಾರವೇ ಮದ್ಯ ಉತ್ಪಾದನೆಗೆ ಆದೇಶ ನೀಡಿರುವುದರಿಂದ ಈ ದಾಸ್ತಾನು ಮುಗಿಯುವಷ್ಟರಲ್ಲಿ ಮದ್ಯ ಪೂರೈಕೆ ಆರಂಭವಾಗಲಿದೆ. ಹಾಗಾಗಿ, ಮದ್ಯದ ಕೊರತೆ ಎದುರಾಗದು.
ಮುನ್ನೆಚ್ಚರಿಕೆ ಕ್ರಮಗಳೇನು?
ಗ್ರಾಹಕರು ಗುಂಪು ಗುಂಪಾಗಿ ಪ್ರವೇಶಿಸುವಂತಿಲ್ಲ
ಒಂದು ಬಾರಿಗೆ ಐವರು ಗ್ರಾಹಕರಿಗೆ ಅವಕಾಶ
ಸರದಿಯಲ್ಲಿ ನಿಲ್ಲುವವರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
ಮದ್ಯದ ಅಂಗಡಿ ನೌಕರರು, ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯ
ಮಾರಾಟ ಸ್ಥಳದಲ್ಲಿ ಸ್ಯಾನಿಟೈಸರ್ ಇಟ್ಟಿರಬೇಕು.