ಮತ ಬ್ಯಾಂ​ಕೇ ಮುಖ್ಯವಾದರೆ ಮತ್ತೇನಾದೀತು… (29 .07 .2017)  

 

ಇವರ ಜಾತ್ಯತೀತವಾದದ ಹಣೆಬರಹವೇ ಇಷ್ಟು ಅನ್ನುವ ತೀರ್ಮಾನಕ್ಕೆ ಬರದೇ ವಿಧಿಯಿಲ್ಲ. ಬೇರೆಲ್ಲ ಬಿಟ್ಟು ಈಗ ಶುರು ಆಗಿದೆ ಲಿಂಗಾಯತ ಧರ್ಮ ಸ್ಥಾಪನೆಯ ಚರ್ಚೆ. ಇದಕ್ಕೆ ಕಾರಣ ಮುಂಬರುವ ವಿಧಾನಸಭೆ ಚುನಾವಣೆ ಮೇಲಿನ ದೃಷ್ಟಿ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಮಾತು ಚೆನ್ನಾಗಿ ಅರ್ಥ ಆಗಬೇಕೆಂದರೆ, ಲಿಂಗಾಯತ ಧರ್ಮ ಸ್ಥಾಪನೆಯ ವಿಚಾರಕ್ಕಿಂತ ಮೊದಲು ಬಾಕಿ ಇನ್ನೊಂದಿಷ್ಟು ಸಂಗತಿಗಳತ್ತ ಮೆಲುಕು ಹಾಕಬೇಕು.

1985ರ ಸಂದರ್ಭ. ಆಗ ರಾಜೀವ ಗಾಂಧಿ ಈ ದೇಶದ ಪ್ರಧಾನಿ ಆಗಿದ್ದರು. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರು ಮತ್ತು ಅಸ್ಸಾಂನಲ್ಲಿ ಪ್ರಾದೇಶಿಕ ಪಕ್ಷವೊಂದು ಬಲಗೊಂಡು ಕಾಂಗ್ರೆಸ್ಸಿಗರ ನಿದ್ದೆಗೆಡಲು ಕಾರಣವಾಗಿತ್ತು. ಮುಂದೆ ಕೆಲವೇ ತಿಂಗಳುಗಳಲ್ಲಿ ನಡೆಯಲಿದ್ದ ಆ ಎರಡೂ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದು ಮತ್ತೆ ಕಾಂಗ್ರೆಸ್ ಪ್ರಾಬಲ್ಯ ಮೆರೆಯಲು ಹೊಸಹೊಸ ಯೋಜನೆಗಳನ್ನು ರೂಪಿಸಲಾಗುತ್ತಿತ್ತು. ಆಗ ರಾಜೀವ ಗಾಂಧಿ ಅವರಿಗೊಂದು ಪ್ಲಾನ್ ಹೊಳೆದಿತ್ತು. ಅದು ಅಚ್ಚರಿ ಮಾತ್ರವಲ್ಲ ದೇಶದ ಹಿತದೃಷ್ಟಿಯಿಂದ ಆಘಾತಕಾರಿ ಕೂಡ ಆಗಿತ್ತು. ಏನಪ್ಪ ಅದು ಅಂತ ಅಂದರೆ, ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ತಾನಗಳಿಂದ ದೇಶದೊಳಕ್ಕೆ ಅಕ್ರಮವಾಗಿ ಬಂದು ನೆಲೆಸಿರುವ ಮತ್ತು ಮುಂದೆ ಬರುವ ಪ್ರಜೆಗಳನ್ನು ನಿಯಂತ್ರಿಸಲು ರೂಪಿಸಲಾಗಿದ್ದ ಅಕ್ರಮ ವಲಸೆ ತಡೆ ಕಾಯ್ದೆ (ಐಎಂಡಿಟಿ)ಗೆ ತಿದ್ದುಪಡಿ ತಂದು ಎಲ್ಲ ಅಕ್ರಮ ವಲಸಿಗರನ್ನು ಸಕ್ರಮ ಮಾಡುವುದು.

ಹಾಗೆ ಮಾಡುವ ಮೂಲಕ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅಕ್ರಮ ವಲಸಿಗರನ್ನು ಸಂಪ್ರೀತಗೊಳಿಸಿ ಅವರ ಮತ ಪಡೆದು ಕಾಂಗ್ರೆಸ್ ಬಲವರ್ಧನೆ ಮಾಡಿಕೊಳ್ಳುವುದು ಆ ಕಾಯಿದೆ ತಿದ್ದುಪಡಿಯ ಉದ್ದೇಶವಾಗಿತ್ತು. ಈಗ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಅದೇ ಯೋಜನೆಯನ್ನು ಬೇರೆ ಬೇರೆ ರೂಪದಲ್ಲಿ ಜಾರಿಗೊಳಿಸಿ ಮತಬ್ಯಾಂಕ್ ವಿಸ್ತರಣೆ ಮಾಡಿಕೊಳ್ಳುತ್ತಿದೆ, ಆ ಮಾತು ಬೇರೆ. ಆದರೆ ಸುದೈವವಶಾತ್ ಎಂಭತ್ತರ ದಶಕದಲ್ಲಿ ಕೊನೆಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿ ರಾಜೀವ್ ಗಾಂಧಿ ಸರ್ಕಾರದ ಈ ಮನೆಹಾಳು ಕಾಯಿದೆ ತಿದ್ದುಪಡಿ ಯೋಜನೆಗೆ ತಡೆ ನೀಡಿತ್ತು. ಹಾಗಾಗಿ ಅಕ್ರಮ ವಲಸಿಗರ ಸಕ್ರಮಗೊಳಿಸುವ ಹುನ್ನಾರಕ್ಕೆ ಆಗ ಬ್ರೇಕ್ ಬಿತ್ತು. ಒಂದು ವೇಳೆ ಆ ಯೋಜನೆ ಜಾರಿ ಆಗಿದ್ದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಕತೆ ಬೇರೆಯೇ ಆಗಿರುತ್ತಿತ್ತು.

ಇಷ್ಟಾದರೂ ಕಾಂಗ್ರೆಸ್ ಪ್ರಮುಖರು ಹಠ ಬಿಡಲಿಲ್ಲ, ಮುಂದೆ ಮನಮೋಹನ ಸಿಂಗ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇಂದ್ರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಎಂಬ ಹೊಸ ಖಾತೆಯನ್ನೇ ತೆರೆದರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಎ.ಆರ್.ಅಂತುಳೆ ಆ ಖಾತೆಯ ಮೊದಲ ಸಚಿವರಾದರು. ಒಟ್ಟಿನಲ್ಲಿ ಇಷ್ಟಾದರೂ ಮಾಡಿದೆವಲ್ಲ ಎಂಬ ನಿಟ್ಟುಸಿರನ್ನು ಕಾಂಗ್ರೆಸ್ಸಿಗರು ಬಿಟ್ಟರು ಎನ್ನಬಹುದು.

ಬಹುಶಃ ಇಂತಹ ಸ್ವಯಂಕೃತ ಅಪರಾಧಗಳು, ತಪ್ಪುನೀತಿಗಳಿಂದಲೇ ಕಾಂಗ್ರೆಸ್ ದೇಶದ ಜನರ ತಿರಸ್ಕಾರಕ್ಕೆ ಒಳಗಾಗುತ್ತಲೇ ಬಂತು. ಕಾಲ ಉರುಳಿತು, ಸರ್ಕಾರದಿಂದ ಸರ್ಕಾರ ರಚನೆ ಮಾಡುವ ಹೊತ್ತಿಗೆ ಕಾಂಗ್ರೆಸ್ ದುರ್ಬಲವಾಗುತ್ತಲೇ ಹೋಯಿತು. ಆದರೂ ಆ ಪಕ್ಷ ತನ್ನ ತಪ್ಪು ತಿದ್ದಿಕೊಳ್ಳುವ, ಆಲೋಚನಾಧಾಟಿಯನ್ನು ಬದಲಾಯಿಸಿಕೊಳ್ಳುವ ಯಾವ ಸೂಚನೆಯೂ ಕಾಣಿಸಲಿಲ್ಲ. ಅದಕ್ಕೆ ಮತ್ತೊಂದು ಉದಾಹರಣೆ ದಿವಂಗತ ಅರ್ಜುನ ಸಿಂಗ್.

2004ರಲ್ಲಿ ಮೊದಲಬಾರಿಗೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಅರ್ಜುನ ಸಿಂಗ್ ಮಾನವಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವರಾದರು. ಅವರು ಇಲಾಖೆಯ ಅಧಿಕಾರ ವಹಿಸಿಕೊಂಡ ತಕ್ಷಣ ಮೊದಲು ಮಾಡಲು ಹೊರಟಿದ್ದೇನು ಗೊತ್ತೇನು? ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಶೇ.50ರಷ್ಟು ಸೀಟುಗಳು ಮುಸ್ಲಿಮರಿಗೇ ಮೀಸಲು ಎಂಬ ನಿಯಮ ರೂಪಿಸಲು ಮುಂದಾದದ್ದು! ದೇಶದಲ್ಲಿ ಅದು ಭಾರಿ ಚರ್ಚೆಗೆ ಗ್ರಾಸವಾಯಿತು. ಆಗಲೂ ನ್ಯಾಯಾಲಯ ಮಧ್ಯಪ್ರವೇಶಿಸಿ ಇಂತಹ ಹುಚ್ಚಾಟಗಳಿಗೆ ನಮ್ಮ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯಬೇಕಾಗಿ ಬಂತು.

ಎಲ್ಲದಕ್ಕಿಂತಲೂ ಮುಖ್ಯವಾದದ್ದು ಮತ್ತು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು ದೇಶದ ಸೇನೆಯೂ ಸೇರಿದ ಹಾಗೆ ಕೇಂದ್ರ ಸರ್ಕಾರಿ ನೌಕರಿಯಲ್ಲಿ ಮುಸ್ಲಿಮರು ಎಷ್ಟು ಪ್ರಮಾಣದಲ್ಲಿದ್ದಾರೆಂದು ಲೆಕ್ಕಹಾಕಲು ನ್ಯಾ.ರಾಜೇಂದ್ರ ಸಿಂಗ್ ಸಾಚಾರ್ ನೇತೃತ್ವದಲ್ಲಿ ಆಯೋಗವನ್ನು ನೇಮಕ ಮಾಡಿದ್ದು. ಈ ಕೆಲಸಕ್ಕೆ ಮುಂದಾದದ್ದೂ ಯುಪಿಎ ಸರ್ಕಾರ ಮತ್ತು ಆ ಸರ್ಕಾರದಲ್ಲಿ ಮಾನವಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವರಾಗಿದ್ದ ಅರ್ಜುನ ಸಿಂಗ್ ಅವರೇನೆ ಎಂಬುದು ಗಮನಾರ್ಹ.

ಯುಪಿಎ ಸರ್ಕಾರ ಸಾಚಾರ್ ಕಮಿಟಿಯ ಮೂಲಕ ಭಾರತೀಯ ಸೇನೆಯಲ್ಲಿ ಮುಸ್ಲಿಮರ ಸಂಖ್ಯೆಯನ್ನು ಲೆಕ್ಕಹಾಕಲು ಮುಂದಾದಾಗ ಆಗ ಭೂಸೇನಾ ಮುಖ್ಯಸ್ಥರಾಗಿದ್ದ ಜನರಲ್ ಜೆ.ಜೆ. ಸಿಂಗ್ ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. ‘ನಮ್ಮ ಸೇನೆಯಲ್ಲಿ ಮೆರಿಟ್ ಹಾಗೂ ದೈಹಿಕ, ಮಾನಸಿಕ ಅರ್ಹತೆಯ ಆಧಾರದಲ್ಲಿ ನೇಮಕಾತಿ ನಡೆಯುತ್ತದೆಯೇ ವಿನಾ ಜಾತಿ ಅಥವಾ ಮೀಸಲಾತಿ ಆಧಾರದಲ್ಲಿ ಅಲ್ಲ. ನಮ್ಮ ಸೇನೆ ರಾಜಕೀಯಕ್ಕೆ ಅತೀತವಾದ, ನಿಜವಾಗಿಯೂ ಜಾತ್ಯತೀತವಾದ ಮತ್ತು ಪಕ್ಕಾ ವೃತ್ತಿಪರ ವ್ಯವಸ್ಥೆ.

ಪ್ರಣಬ್ ಮುಖರ್ಜಿ ಅಂಥವರು ರಕ್ಷಣಾ ಸಚಿವರಾಗಿರುವಾಗ ಇಂಥ ಜಾತಿಲೆಕ್ಕಾಚಾರದ ಕೆಲಸ ನಡೆಯುತ್ತದೆ ಎಂಬುದನ್ನು ಊಹಿಸಿಕೊಳ್ಳಲೂ ಆಗದು. ಹಾಗೇನಾದರೂ ಆದರೆ ಭಾರತೀಯ ಸೇನೆಯ ಸ್ವರೂಪವೇ ಬದಲಾಗಿಹೋಗುತ್ತದೆ. ಇದಕ್ಕೆ ಪ್ರಣಬ್ ಮುಖರ್ಜಿ ಅವಕಾಶ ಕೊಡಬಾರದು’ ಎಂದು ಜನರಲ್ ಸಿಂಗ್ ಖಡಾಖಂಡಿತವಾಗಿ ಹೇಳಿಬಿಟ್ಟರು. ಸುದೈವವಶಾತ್ ಪ್ರಣಬ್ ಮುಖರ್ಜಿ ಜನರಲ್ ಜೆ.ಜೆ. ಸಿಂಗ್​ರ

ಭಾವನೆಯನ್ನು ಸರಿಯಾಗಿಯೇ ಅರ್ಥಮಾಡಿಕೊಂಡರು. ‘ಭಾರತೀಯ ಸೇನೆಯಲ್ಲಿ ಜಾತಿ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದಿಲ್ಲ. ಹೀಗಾಗಿ ಜಾತಿ, ಧರ್ಮ, ಪ್ರಾಂತದ ಆಧಾರದಲ್ಲಿ ಸೇನೆಯಲ್ಲಿ ಯಾವುದೇ ಮಾಹಿತಿ ಸಿಗುವುದಿಲ್ಲ’ ಎಂಬ ಷರಾ ಒತ್ತಿದ ಮುಖರ್ಜಿ ವಿವಾದಕ್ಕೆ ತೆರೆ ಎಳೆದರು. ಇದೇ ಕಾರಣಕ್ಕೆ ಇಂಥ ಎಲ್ಲ ಅಪಸವ್ಯಗಳ ನಡುವೆಯೂ ಮುಖರ್ಜಿ ಗ್ರೇಟ್ ಎನ್ನಿಸಿಕೊಳ್ಳುತ್ತಾರೆ.

ಹಿಂದೆ ಯುಪಿಎ ಸರ್ಕಾರ ಇಷ್ಟೆಲ್ಲ ಸರ್ಕಸ್ ಮಾಡಿದ್ದು ದೇಶದಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕ ಆಗಿರುವ 774 ವಿಧಾನಸಭೆ ಮತ್ತು 129 ಲೋಕಸಭಾ ಕ್ಷೇತ್ರಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ. ರಾಜಕೀಯ ಲಾಭಕ್ಕಾಗಿ ಇಂಥ ಕೆಲಸ ಮಾಡಬೇಕೇ? ರಾಜಕೀಯ ಲಾಭವೇ ಉದ್ದೇಶವಾದರೆ ಇನ್ನೇನಾದರೂ ಒಳ್ಳೆಯ ಮಾರ್ಗಗಳನ್ನೂ ಕಂಡುಕೊಳ್ಳಬಹುದಲ್ಲವೇ?

ಇದೀಗ ಕರ್ನಾಟಕದ ವಿಚಾರಕ್ಕೆ ಬರೋಣ. ಸರ್ಕಾರದ ನಿಷ್ಕ್ರಿಯತೆ, ರೈತರ ಆತ್ಮಹತ್ಯೆ, ಭ್ರಷ್ಟಾಚಾರದ ಪೋಷಣೆ, ಮಿತಿಮೀರಿದ ಜಾತಿವಾದ ಇತ್ಯಾದಿ ಅಪವಾದ, ಆರೋಪಗಳನ್ನು ಬದಿಗಿಡೋಣ. ಇತ್ತೀಚೆಗೆ ಚರ್ಚೆಗೆ ಬಂದ ಎರಡು ವಿಷಯಗಳನ್ನು ಮಾತ್ರ ಇಲ್ಲಿ ಅವಲೋಕನ ಮಾಡೋಣ. ಒಂದು- ಕನ್ನಡಧ್ವಜ ಅಂತಿಮಗೊಳಿಸಲು ಸಮಿತಿ ರಚನೆ ಮಾಡಿದ್ದು. ಮತ್ತೊಂದು- ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಸಂಬಂಧಿಸಿದ್ದು. ಕಾಯಿದೆ, ಕಾನೂನು, ಸಂವಿಧಾನದ ದೃಷ್ಟಿಯಿಂದ ಇವೆರಡೂ ಒಂದೇ ತೆರನಾದ ಮಹತ್ವವನ್ನು ಹೊಂದಿವೆ. ಕಾನೂನು ಬಲ್ಲವರಾದ ಸಿಎಂ ಸಿದ್ದರಾಮಯ್ಯ ಈ ವಿಷಯದಲ್ಲಿ ಸಕ್ರಿಯ ಆಸಕ್ತಿ ತಳೆದಿರುವುದು ಅಚ್ಚರಿಗೆ ಕಾರಣವಾಗಿದೆ.

ಧ್ವಜದ ವಿಚಾರ: ಭಾರತದ ಸಂವಿಧಾನದ ಪ್ರಕಾರ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತ್ಯೇಕ ಧ್ವಜ, ಲಾಂಛನವನ್ನು ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಬೇರೆ ರಾಜ್ಯ ಹೊಂದಲು ಅವಕಾಶವಿಲ್ಲ. ಇನ್ನು ಭಾಷೆ, ಸಂಸ್ಕೃತಿ ಪ್ರತೀಕವಾಗಿ ಅಭಿಮಾನದ ಸಂಕೇತವಾಗಿ ಖಾಸಗಿ ವ್ಯಕ್ತಿಗಳು, ಸಂಘಟನೆಗಳು ಸಂಕೇತಗಳನ್ನು ಹೊಂದಲು ವ್ಯಕ್ತಿಸ್ವಾತಂತ್ರ್ಯ ನೆಲೆಯಲ್ಲಿ ಅವಕಾಶವಿದೆ. ಸಂವಿಧಾನದ ಆಶಯಕ್ಕೆ ಧಕ್ಕೆ ಆಗದ ರೀತಿಯಲ್ಲಿ. ಹಾಗೆ ನೋಡುವುದಾದರೆ, ಈಗಾಗಲೇ ಹಳದಿ/ಕೆಂಪು ಬಣ್ಣದ ಧ್ವಜವನ್ನ ಕನ್ನಡ ಧ್ವಜ ಎಂದೇ ಭಾವಿಸಲಾಗಿದೆಯಲ್ಲ. ಅದು ಬೇಡವೇ? ಅಥವಾ ಅದಕ್ಕೆ ಮೂರನೇ ಮತ್ತೊಂದು ಬಣ್ಣವನ್ನು ಸೇರ್ಪಡೆಗೊಳಿಸುವ ಯೋಚನೆ ಏನಾದರೂ ಇದೆಯೇ? ಧ್ವಜವಿವಾದ ನಿಜಕ್ಕೂ ಅನಗತ್ಯವಾಗಿತ್ತು.

ಅದಕ್ಕಿಂತ ಮುಖ್ಯವಾದ್ದು ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ವಿಚಾರ. ಜಾತಿ ಸಂಘಟನೆ, ಧರ್ಮಜಾಗೃತಿ ಕೆಲಸ ಇವನ್ನೆಲ್ಲ ವೈಯಕ್ತಿಕ ನೆಲೆಯಲ್ಲಿ ಮಾಡುವುದಕ್ಕೆ ಪ್ರತಿಯೊಬ್ಬ ಪ್ರಜೆಗೆ ನಮ್ಮ ಸಂವಿಧಾನ ಹಕ್ಕನ್ನು ನೀಡಿದೆ. ಆದರೆ ಸಂವಿಧಾನಬದ್ಧವಾಗಿ ಚುನಾಯಿತ ಸರ್ಕಾರ ಹಾಗೆ ಮಾಡಲು ಅವಕಾಶ ಇಲ್ಲ. ಕಾರಣ ನಮ್ಮ ಸಂವಿಧಾನದ ಜಾತ್ಯತೀತ ಮತ್ತು ಧರ್ಮನಿರಪೇಕ್ಷತೆಯ ಆಶಯ. 1976ರಲ್ಲಿ 42ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ ಸಂವಿಧಾನದ ಪೀಠಿಕೆಯಲ್ಲೇ ಭಾರತ ಜಾತ್ಯತೀತ ರಾಷ್ಟ್ರ, ಅಂದರೆ ಇಲ್ಲಿ ಯಾವುದೇ ಧರ್ಮಕ್ಕೆ ಸರ್ಕಾರದ ಮಾನ್ಯತೆ ಅಥವಾ ಸರ್ಕಾರದ ಮಧ್ಯಸ್ಥಿಕೆಗೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ.

ಅಂದರೆ ಯಾವುದೇ ಸರ್ಕಾರ ಧರ್ಮದ ವಿಚಾರದಲ್ಲಿ ಸಕ್ರಿಯ ಪಾಲುದಾರಿಕೆ ತೆಗೆದುಕೊಳ್ಳಬಾರದು. ಜಾತಿ/ಮತ/ಪಂಥದ ವಿಚಾರದಲ್ಲಿ ತಾರತಮ್ಯ ಮಾಡಬಾರದು. ಸರ್ಕಾರ ಹೊಸಧರ್ಮದ ಘೊಷಣೆ ಮಾಡಲು ಅಥವಾ ಮಾನ್ಯತೆ ನೀಡಲು ನಮ್ಮ ಸಂವಿಧಾನದಲ್ಲಿ ಪ್ರತ್ಯೇಕ ಅವಕಾಶ ಅಥವಾ ವಿಶೇಷ ಕಲಂ ಇಲ್ಲ. ಅಥವಾ ಯಾವುದೇ ಸಮುದಾಯದಿಂದ ಪ್ರತ್ಯೇಕ ಮತಧರ್ಮದ ಬೇಡಿಕೆ ಬಂದರೆ ಆ ಬಗ್ಗೆ ಪರಿಶೀಲನೆ ನಡೆಸುವ ಕುರಿತು ಸ್ಪಷ್ಟತೆಯೂ ಇಲ್ಲ. ನಮ್ಮದು ಜಾತ್ಯತೀತ ಆಶಯದ ಸಂವಿಧಾನ ಆಗಿರುವುದರಿಂದ ಈಗಾಗಲೇ ಗುರುತಿಸಲಾಗಿರುವ ಎಲ್ಲ ಮತ/ಧರ್ಮಗಳಿಗೂ ಇಲ್ಲಿ ಸಮಾನ ಅವಕಾಶ ನೀಡುವುದು ಗೌರವಿಸುವುದು ಮಾತ್ರ ಸರ್ಕಾರದ ಕರ್ತವ್ಯ ಎಂದಾಗಲಿಲ್ಲವೇ?

ಅಷ್ಟೇ ಅಲ್ಲ, ಇದೇ ಕಾರಣಕ್ಕಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇರುವ ಧರ್ಮವನ್ನು ವಿಂಗಡಣೆ ಮಾಡುವುದು/ಹೊಸ ಧರ್ಮ ಸ್ಥಾಪನೆ ಮಾಡುವುದು, ಮಾನ್ಯತೆ ನೀಡುವುದು ಇತ್ಯಾದಿಗಳ ಪ್ರಸ್ತಾಪ ಆಗದೇ ಇರುವುದನ್ನು ನಾವು ಗಮನಿಸಬೇಕಿದೆ.

ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದ ಮೇಲೆ, ‘ನೀವು ಲಿಂಗಾಯತ ಧರ್ಮದ ಬೇಡಿಕೆಯನ್ನು ನಮಗೆ ಅಧಿಕೃತವಾಗಿ ಕೊಡಿ. ನಾವದನ್ನು ಕೇಂದ್ರ ಸರ್ಕಾರಕ್ಕೆ ರವಾನೆ ಮಾಡುತ್ತೇವೆ’ ಎನ್ನುವುದು ರಾಜ್ಯಸರ್ಕಾರದ ಬೇಜವಾಬ್ದಾರಿ ಹೇಳಿಕೆ ಆಗುವುದಿಲ್ಲವೇ? ರಾಜಕೀಯದ ಒಣತರ್ಲೆ ಅಂತ ಅನ್ನಿಸಿಕೊಳ್ಳುವುದಿಲ್ಲವೇ?

ನಮ್ಮ ಸಂವಿಧಾನದಲ್ಲಿ ನಿಜವಾಗಿಯೂ ಪ್ರಸ್ತಾಪವಿರುವುದು ‘ರಿಲಿಜನ್’ ಎಂಬ ಪದ ಮಾತ್ರ. ಅದನ್ನು ಮತ ಎಂಬುದಕ್ಕೆ ಸಂವಾದಿಯಾಗಿ ಬಳಸಲಾಗಿದೆ ಎಂತಲೂ ಹೇಳುತ್ತಾರೆ. ಮತಗಳಿಗೆ ಪ್ರವಾದಿ ಅಥವಾ ಧರ್ಮಪ್ರವರ್ತಕ ಇರುತ್ತಾನೆ. ಉದಾ; ಕ್ರಿಸ್ತ, ಬುದ್ಧ, ಸಿಖ್, ಮುಸ್ಲಿಂ ಇತ್ಯಾದಿ. ಆದರೆ ಧರ್ಮ ಹಾಗಲ್ಲ, ಅದಕ್ಕೆ ಓರ್ವ ಸಂಸ್ಥಾಪಕ ಇರುವುದಿಲ್ಲ ಎಂಬ ಬಲವಾದ ವಾದ ಮೊದಲಿಂದಲೂ ಇದೆ. ಅದೇ ನೆಲೆಯಲ್ಲಿ ‘ಹಿಂದೂ ಧರ್ಮ ಎಂಬುದು ಈ ದೇಶದ ಜೀವನ ಪದ್ಧತಿ’ ಎಂದು ಸುಪ್ರೀಂಕೋರ್ಟ್ ವ್ಯಾಖ್ಯಾನ ಮಾಡಿದ್ದು. ಅದೇ ನೆಲೆಯಿಂದ ನೋಡಿದರೆ ಲಿಂಗಾಯತ ಮಾತ್ರವಲ್ಲ, ಬೇರೆ ಹತ್ತಾರು ಮತ, ಪಂಥ ಪಂಗಡಗಳು ಈ ಹಿಂದೂ ಎಂಬ ಹೆಮ್ಮರದ ಅಡಿಯಲ್ಲೇ ಬರುತ್ತವೆ. ಅದು ಈ ದೇಶದ ಸೆಕ್ಯುಲರ್ ಸಿದ್ಧಾಂತದ ಪಾಲನೆಗೂ ಪೂರಕ. ಇವೆಲ್ಲ ಮತಬ್ಯಾಂಕ್ ದೃಷ್ಟಿಯುಳ್ಳವರಿಗೆ ಹೇಗೆ ಅರ್ಥ ಆದೀತು..

ಕೊನೇದಾಗಿ ಈ ಸರ್ಕಾರಕ್ಕೆ ಒಂದು ಪ್ರಶ್ನೆ ಕೇಳಲೇಬೇಕು. ತರಾತುರಿಯಲ್ಲಿ ಜಾತಿಗಣತಿ ಮಾಡಿದ್ದರ ಕತೆ ಏನಾಗಿದೆ? ನೀವು ಲಿಂಗಾಯತ, ಒಕ್ಕಲಿಗ ಇತ್ಯಾದಿ ಲಾಬಿಯನ್ನು ಹುಸಿ ಅಂಕಿಸಂಖ್ಯೆಗಳಿಂದ ವಿಫಲಗೊಳಿಸುವುದಕ್ಕೇ ಅದನ್ನು ಮಾಡಿದ್ದೆಂಬ ಆರೋಪ ಇದೆಯಲ್ಲ. ಲಿಂಗಾಯತ ಮತ್ತು ವೀರಶೈವರನ್ನು ಒಡೆದು ಹಂಚಿದ ಬಳಿಕ ಜಾತಿಗಣತಿಯ ವರದಿಯನ್ನು ಶಾಶ್ವತವಾಗಿ ಸಮಾಧಿ ಕಟ್ಟುತ್ತೀರಾ?

ರೀ…ಸ್ವಾಮಿ ಅಧಿಕಾರ ಬರುತ್ತದೆ, ಹೋಗುತ್ತದೆ…

ಮಾಡಿದ ಒಳ್ಳೆ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿದುಕೊಳ್ಳುತ್ತವೆ.

ಹಾಗೆಯೇ ಅಂಟಿದ ಕಪ್ಪುಕಲೆಗಳೂ ಕೂಡ …

(ಲೇಖಕರು ‘ವಿಜಯವಾಣಿ’ ಸಂಪಾದಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top