– ಗೋಪಾಲ ನಾಗರಕಟ್ಟೆ.
ಶ್ರೀರಾಮನ ನಿರ್ಯಾಣದ ನಂತರ ಆತನ ಸುಪುತ್ರ ಕುಶನು ತನ್ನ ಪಿತನ ಜನ್ಮಸ್ಥಾನದಲ್ಲಿ ಭವ್ಯವಾದ ಮಂದಿರ ನಿರ್ಮಿಸಿದ. ಸಹಸ್ರಾರು ವರ್ಷಗಳ ನಂತರ ರಾಜಾ ವಿಕ್ರಮಾದಿತ್ಯನಿಂದ ಆ ಭವ್ಯ ಮಂದಿರ ಜೀರ್ಣೋದ್ಧಾರದ ಪವಿತ್ರ ಕಾರ್ಯ ನೆರವೇರಿತು. ಅಯೋಧ್ಯಾ ಶ್ರೀರಾಮ ಜನ್ಮಸ್ಥಾನದ ದರ್ಶನವು ಮೋಕ್ಷ ಪ್ರಾಪ್ತಿಯ ಮಾರ್ಗವೆಂಬ ಶ್ರದ್ಧೆಯಿಂದ ಜೀವನದಲ್ಲೊಮ್ಮೆಯಾದರೂ ಅಯೋಧ್ಯಾ ದರ್ಶನ ಮಾಡಲೇಬೇಕೆಂದು ಹಂಬಲಿಸಿ ತೀರ್ಥಯಾತ್ರೆ ಮಾಡುತ್ತಾರೆ. 1528ರಲ್ಲಿ ಮತಾಂಧ ಆಕ್ರಮಣಕಾರಿ ಬಾಬರನ ಆದೇಶದಂತೆ ಆತನ ಸೇನಾಧಿಪತಿ ಮೀರ್ ಬಾಕಿ ಮಂದಿರವನ್ನು ಧ್ವಂಸಗೊಳಿಸಿ ಆ ಸ್ಥಾನದಲ್ಲಿ ಬಾಬರಿ ಮಸೀದಿ ಕಟ್ಟಿಸಿದ. ಶ್ರದ್ಧಾಪೂರ್ಣ ಹಿಂದುಗಳು ಈ ಅಪಮಾನವನ್ನು ಸಹಿಸದೇ ರಾಮಜನ್ಮಭೂಮಿಗಾಗಿ 76 ಬಾರಿ ಸಂಘರ್ಷ ಮಾಡಿದ್ದಾರೆ. ಒಮ್ಮೆಯಂತೂ 3500 ಮಾತಾ ಭಗಿನಿಯರು ಕೈಯಲ್ಲಿ ಶಸ್ತ್ರ ಧರಿಸಿ ಯುದ್ಧ ಮಾಡಿದ್ದಾರೆ.
1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸಲ್ಮಾನರು ಜನ್ಮಭೂಮಿಯನ್ನು ಹಿಂದುಗಳಿಗೆ ಒಪ್ಪಿಸಿದ್ದರು. ಫೈಜಾಬಾದ್ ಪ್ರದೇಶದ ಕ್ರಾಂತಿಕಾರಿಗಳ ನಾಯಕತ್ವ ವಹಿಸಿದ್ದ ಅಮೀರ್ ಅಲಿ, ಫೈಜಾಬಾದ್ ಹಾಗೂ ಅಯೋಧ್ಯೆಯ ಮುಸಲ್ಮಾನರನ್ನು ಒಂದುಗೂಡಿಸಿ ‘ಬಾಬರಿ ಮಸೀದಿಯನ್ನು ಹಿಂದುಗಳಿಗೊಪ್ಪಿಸಿ ಅವರ ಹೃದಯ ಗೆಲ್ಲೋಣ’ ಎಂದಿದ್ದ. ಈ ಒಮ್ಮತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾಬಾ ರಾಮಚರಣದಾಸ ಹಾಗೂ ಅಮೀರ್ ಅಲಿಯನ್ನು 1858 ಮಾರ್ಚ್ 8ರಂದು ಗಲ್ಲಿಗೇರಿಸಿರುವುದನ್ನು ಸುಲ್ತಾನಪುರ ಗೆಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.
1949ರ ಡಿ.22ರಂದು ಮಧ್ಯರಾತ್ರಿ ಜನ್ಮಸ್ಥಾನದ ಬಾಬರಿ ಕಟ್ಟಡದೊಳಗೆ ‘ರಾಮಲಲ್ಲಾ’ನ ಮೂರ್ತಿ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಅಲ್ಲಿ ನಿರಂತರ ಪೂಜೆ ನಡೆಯುತ್ತಿದೆ. 1983 ಮಾರ್ಚ್, ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ದಾವುದಯಾಳ ಖನ್ನಾರವರು ಅಯೋಧ್ಯಾ ರಾಮಜನ್ಮಭೂಮಿ, ಮಥುರಾ ಕೃಷ್ಣ ಜನ್ಮಸ್ಥಾನ ಹಾಗೂ ಕಾಶೀ ವಿಶ್ವನಾಥ ಮಂದಿರವನ್ನು ಮುಕ್ತಗೊಳಿಸಿ ಭಾರತದ ಗೌರವವನ್ನು ಮರಳಿ ಪಡೆಯಬೇಕೆಂದು ಕರೆ ನೀಡಿದರು. 1984 ಎಪ್ರಿಲ್ 7, 8ರಂದು ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಸಂತ ಸಮ್ಮೇಳನ, ಮೊದಲ ಧರ್ಮ ಸಂಸತ್‌ನಲ್ಲಿ ಸಂತರೆಲ್ಲರೂ ಒಕ್ಕೊರಲಿನಿಂದ ರಾಮಜನ್ಮಭೂಮಿಯನ್ನು ಮುಕ್ತಗೊಳಿಸುವ ಸಂಕಲ್ಪ ಮಾಡಿದರು. ಅದರಂತೆ ವಿಶ್ವ ಹಿಂದೂ ಪರಿಷತ್ತಿನ ಮೂಲಕ ಜನ್ಮಭೂಮಿಗಾಗಿ 77ನೇ ಸಂಘರ್ಷದ ಶಂಖನಾದವಾಯಿತು. ಅದೇ ವರ್ಷ ರಾಮ ಜಾನಕಿ ರಥಯಾತ್ರೆ ಅಯೋಧ್ಯಾ ಆಗಮನದ ಶುಭ ಸಂದರ್ಭ ಅಕ್ಟೋಬರ್ 7ರಂದು ಸರಯೂ ನದಿ ತಟದಲ್ಲಿ ಸೇರಿದ್ದ ಸಾವಿರಾರು ರಾಮಭಕ್ತರು ಸರಯೂ ಜಲವನ್ನು ಕೈಯಲ್ಲಿ ಹಿಡಿದು ಜನ್ಮಭೂಮಿ ಮುಕ್ತಿಗಾಗಿ ಸಂಕಲ್ಪಬದ್ಧರಾದರು. 1985ರ ಉಡುಪಿ ಧರ್ಮಸಂಸದ್‌ನಲ್ಲಿ ಮುಂದಿನ ಶಿವರಾತ್ರಿ ಅಂದರೆ 1986ರ ಫೆ.6ರೊಳಗೆ ಬೀಗ ತೆಗೆಯಲು ಆಗ್ರಹಿಸಿ ಆಂದೋಲನದ ಹೂಂಕಾರವಾಯಿತು. ನಂತರ ಸರಕಾರ ಮಂದಿರದ ಬೀಗ ತೆಗೆದದ್ದು, ನಂತರ ನಡೆದ ಚಳವಳಿ, 1992ರ ಡಿಸೆಂಬರ್‌ನಲ್ಲಿ ಕರಸೇವಕರ ಉತ್ಸಾಹ ಮೇರೆ ಮೀರಿ ಕಟ್ಟಡ ಧರೆಗುರುಳಿದ್ದು ಎಲ್ಲರಿಗೂ ಗೊತ್ತೇ ಇದೆ.
ಈ ಆಂದೋಲನ ಕೇವಲ ಮಂದಿರ ಪುನರ್ನಿರ್ಮಾಣಕ್ಕೆ ಸೀಮಿವಾಗಿರದೆ ರಾಷ್ಟ್ರ ಪುನರ್ನಿರ್ಮಾಣದ, ಹಿಂದೂ ಸ್ವಾಭಿಮಾನ ಜಾಗರಣದ ಶ್ರೇಷ್ಠ ಆಂದೋಲನವಾಗಿದೆ. 1984ರಿಂದ ಆರಂಭಗೊಂಡ ಈ ಆಂದೋಲನದಲ್ಲಿ 10 ಕೋಟಿಗೂ ಅಧಿಕ ಹಿಂದುಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪಾಲ್ಗೊಂಡಿದ್ದರು. ಬ್ರಿಟಿಷರ ಷಡ್ಯಂತ್ರದಿಂದಾಗಿ ಪ್ರಾರಂಭವಾದ, ಸ್ವತಂತ್ರ ಭಾರತದಲ್ಲೂ ಮುಂದುವರಿದ ಉತ್ತರದವರು ಆರ್ಯರು ಹಾಗೂ ದಕ್ಷಿಣದವರು ದ್ರಾವಿಡರೆಂಬ ದುಷ್ಪ್ರಚಾರವು ವಿಶೇಷವಾಗಿ ತಮಿಳುನಾಡಿನಲ್ಲಿ ರಾಮ ವಿರೋಧಿ ಭಾವ ಹಾಗೂ ರಾವಣ ಪ್ರೀತಿಯನ್ನು ಮನೆ ಮಾಡಿಸಿತ್ತು. ತಮಿಳುನಾಡಿನ ಅನೇಕ ಕಡೆ ಶ್ರೀರಾಮನ ಮೂರ್ತಿಗೆ ಚಪ್ಪಲಿ ಹಾರ ತೊಡಿಸುವ, ರಾವಣ ಮೂರ್ತಿ ಸ್ಥಾಪಿಸಿ ಆತನೊಂದಿಗೆ ತಮ್ಮನ್ನು ಜೋಡಿಸಿಕೊಳ್ಳುವ ಘಟನೆಗಳು ಸಹಜವಾಗಿದ್ದವು. ಅಯೋಧ್ಯಾ ಆಂದೋಲನದ ಸತ್ಪ್ರಭಾವದಿಂದಾಗಿ ಕರಸೇವೆಗಾಗಿ ತೆರಳಿದ ತಮಿಳುನಾಡಿನ ರಾಮಭಕ್ತರಿಗೆ ಉತ್ತರಪ್ರದೇಶದ ಜನರು ನೀಡಿದ ಪ್ರೀತ್ಯಾದರದ ಸ್ವಾಗತ ದೇಶದ ವಿವಿಧ ಪ್ರಾಂತ ಭಾಷೆಯ ಜನರ ಸಹಜ ಅತ್ಮೀಯತೆಯ ದರ್ಶನ ಮಾಡಿಸಿತು. ಸಂಪೂರ್ಣ ಭಾರತವು ಒಂದೆಂಬ ರಾಷ್ಟ್ರಕತೆಯ ಅರಿವು ಮೂಡಿತು. ಭಾರತದ ಮೂಲೆ ಮೂಲೆಗಳಲ್ಲಿ ಪ್ರಾಂತ, ಭಾಷೆ, ಜಾತಿಭೇದ ದೂರವಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಸ್ಸಾಮಿನಿಂದ ಸೋಮನಾಥ ದ್ವಾರಕೆಯವರೆಗೆ ಹಬ್ಬಿರುವ ವಿಶಾಲ ಭಾರತ ಭೂಮಿ ನಮ್ಮ ತಾಯ್ನೆಲ, ನಾವೆಲ್ಲರೂ ಹಿಂದುಗಳೆಂಬ ಏಕತೆಯ ಸ್ವರ ಮೊಳಗಲಾರಂಭಿಸಿತು. ಇದು ರಾಮಜನ್ಮಭೂಮಿ ಆಂದೋಲನದ ದೊಡ್ಡ ಉಪಲಬ್ದಿ.
ಸಹಸ್ರ ವರ್ಷಗಳ ಪರಕೀಯ ಆಕ್ರಮಣ, ಹಿಂದೂ ವಿರೋಧಿ ಆಡಳಿತದಿಂದಾಗಿ ಹಿಂದುಗಳಲ್ಲಿ ಮೂಡಿದ್ದ ಹೀನಭಾವವು ನಮಗೊಂದು ಅಭಿಶಾಪವಾಗಿತ್ತು. ಆಂದೋಲನದ ಪರಿಣಾಮ ಜಾತೀಯ ಭಾವ ಮರೆಯಾಗಿ ಸರ್ವ ಸಮಾವೇಶಕ ಹಿಂದುಭಾವವು ಮಾರ್ದನಿಸಿತು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ‘ವಂದೇ ಮಾತರಂ’ ಹಾಡು ಸರ್ವರಲ್ಲಿ ರಾಷ್ಟ್ರೀಯ ಭಾವ ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅದೇ ರೀತಿ ಶ್ರೀರಾಮಜನ್ಮಭೂಮಿ ಅಂದೋಲನದಲ್ಲಿ ಮೊಳಗಿದ್ದು ‘ಜಯ್ ಶ್ರೀರಾಮ್’ ಘೋಷಣೆ. ಹಿಂದೂ ಸ್ವಾಭಿಮಾನದ ಅಭಿವ್ಯಕ್ತಿಯಾಗಿ ಈಗಲೂ ಜನಜನಿತವಿರುವ ರಾಷ್ಟ್ರೀಯ ಮಂತ್ರ ‘ಜೈ ಶ್ರೀರಾಮ್’ ಅಯೋಧ್ಯಾ ಆಂದೋಲನದ ಇನ್ನೊಂದು ಪ್ರಾಪ್ತಿ. ಪರಾಕ್ರಮದ ಆರಾಧನೆ ಹಿಂದು ಸಮಾಜದ ಸಹಜ ಸ್ವಭಾವವಾಗಿತ್ತು. ಅತಿಯಾದ ಶಾಂತಿ ಸಂದೇಶವು ಹಿಂದು ಸಮಾಜ ಬಲ ಕುಂದಿಸಿತ್ತು. ಜನ್ಮಭೂಮಿ ಆಂದೋಲನ ಹಿಂದುವಿನಲ್ಲಿ ಸ್ವಾಭಿಮಾನದ ಭಾವವನ್ನು ಜಾಗೃತಗೊಳಿಸುವುದರೊಂದಿಗೆ ಪರಾಕ್ರಮದ ನೈಜ ಸ್ವಭಾವವನ್ನು ಮರು ಸ್ಥಾಪಿಸಿತು.
ತ್ರೇತಾಯುಗದಲ್ಲಿ ಶ್ರೀರಾಮನ ಮೂಲಕ ಸಂಪತ್ಸಮೃದ್ಧ, ಸಂತಸದ ರಾಮರಾಜ್ಯ ನಿರ್ಮಾಣವಾಗಿತ್ತು. ಇಂದು ಮಂದಿರ ಪುನರ್ನಿರ್ಮಾಣ ಕಾರ್ಯವು ಭಾರತದ ನೈಜ ರಾಷ್ಟ್ರೀಯತೆಯ ಪ್ರಕಾಶದಿಂದ ಆಧುನಿಕ ರಾಮರಾಜ್ಯವನ್ನು ಕೃತಿಗಿಳಿಸುತ್ತಿದೆ.
(ಲೇಖಕರು ವಿಹಿಂಪ ರಾಜಸ್ಥಾನ, ಗುಜರಾತ್ ಕ್ಷೇತ್ರೀಯ ಕಾರ್ಯದರ್ಶಿ)