ಆಧುನಿಕ ‘ವೇದವ್ಯಾಸ’ರ ನಿರೀಕ್ಷೆಯಲ್ಲಿ

– ಶಂಕರಾನಂದ.

ಮಾನವ ಜೀವನದ ಕುರಿತ ನಮ್ಮ ಋಷಿ ಚಿಂತನೆ ನಿಜಕ್ಕೂ ಅದ್ಭುತವೇ ಸರಿ. ಪ್ರತಿ ಹೆಜ್ಜೆಯಲ್ಲೂ ವ್ಯಕ್ತಿಯ ವಿಕಾಸದೊಂದಿಗೆ ಬೆಸೆದುಕೊಂಡಿರುವ ಸಂಗತಿ ‘ಸಮಷ್ಟಿ ಹಿತ’. ವ್ಯಕ್ತಿ ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮ ಈ ನಾಲ್ಕು ಪ್ರಕಾರದ ಸುಖಗಳನ್ನು ಅನುಭವಿಸುತ್ತಾ ಧರ್ಮ, ಅರ್ಥ, ಕಾಮ, ಮೋಕ್ಷ ಗಳೆಂಬ ಚತುರ್ವಿಧ ಪುರುಷಾರ್ಥಗಳ ಪಾಲನೆಯ ಮೂಲಕ ವ್ಯಕ್ತಿಗತ ವಿಕಾಸ ಮತ್ತು ಸಮಷ್ಟಿ ಹಿತಗಳನ್ನು ಜೋಡಿಸಿಕೊಂಡು ಪರಮ ಲಕ್ಷ್ಯವನ್ನು ಸೇರುವ ಸುಂದರ ಸಮನ್ವಯ ಮಾರ್ಗವನ್ನು ನಮ್ಮ ಋುಷಿಗಳು ತಮ್ಮ ಜೀವನದ ಉದಾಹರಣೆಯಿಂದ ಜಗತ್ತಿನ ಮುಂದೆ ಇಟ್ಟಿದ್ದಾರೆ.
ಶಿಕ್ಷಕರನ್ನು ಆದರಿಸಿ : ಇದೇ ಹಿನ್ನೆಲೆಯಲ್ಲಿ ‘ವ್ಯಾಸ ಪೂರ್ಣಿಮೆ’ಯನ್ನು ನಾವು ನೋಡಬೇಕು. ಗುರುವಿನ ಮಹತ್ವವನ್ನು, ಶ್ರೇಷ್ಠತೆಯನ್ನು ಸಾರುವ ದಿನ ಇದು. ‘ಗುರು’ ಶಬ್ದವೇ ನಮಗೆ ಆಪ್ಯಾಯಮಾನ. ನಮ್ಮ ಜೀವನ ಗುರುವಿನೊಂದಿಗೆ ಗಾಢವಾಗಿ ಬೆಸೆದುಕೊಂಡಿದೆ. ಗುರು ಶಿಷ್ಯ ಪರಂಪರೆಯ ಶ್ರೇಷ್ಠ ವಾರಸಿಕೆ ನಮ್ಮ ಬೆನ್ನಿಗಿದೆ. ಇಂದು ರಾಷ್ಟ್ರ ಜೀವನದಲ್ಲಿ ಬದಲಾವಣೆಯನ್ನು ಕಾಣಬೇಕಾದರೆ ಶಿಕ್ಷ ಕರನ್ನು ನೋಡುವ ದೃಷ್ಟಿ ಬದಲಾಗಬೇಕು. ಹೀಗಾಗಿ ‘ವ್ಯಾಸಪೂರ್ಣಿಮೆ’ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಅತ್ಯಂತ ಮಹತ್ವದ ದಿನ. ಪ್ರತಿಯೊಬ್ಬರೂ ತಮ್ಮ ಶಿಕ್ಷಕರನ್ನು ನೆನಪಿಸಿಕೊಂಡು ಭಕ್ತಿಯನ್ನು ಸಲ್ಲಿಸಬೇಕಾದ ದಿನ.
ವ್ಯಾಸ ಕಾರ್ಯ : ‘ಆಷಾಢ ಹುಣ್ಣಿಮೆ’ಯನ್ನು ‘ವ್ಯಾಸ ಪೂರ್ಣಿಮೆ’ ಎಂದು ಕರೆದು, ‘ವ್ಯಾಸ ಜಯಂತಿ’ಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವ್ಯಾಸರು ಮಾಡಿದ ಬಹಳ ಮಹತ್ವದ ಕಾರ್ಯ ಚದುರಿ ಹೋಗಿದ್ದ ವೇದ ಮಂತ್ರಗಳನ್ನು ಒಂದುಗೂಡಿಸಿ ನಾಲ್ಕು ವೇದಗಳಾಗಿ ವಿಂಗಡಿಸಿದ್ದು. ಶಾಸ್ತ್ರಗಳ ಅಧ್ಯಯನ ಮಾಡಿ ಅವುಗಳ ಸಾರವನ್ನು ಸಾಮಾನ್ಯರಿಗೆ ಸರಳವಾಗಿ ತಲುಪಿಸುವ ವಿದ್ವಾಂಸರನ್ನು ‘ವ್ಯಾಸ’ರು ಎಂದು ಕರೆಯುವುದು ರೂಢಿ. ಈಗಲೂ ಕೀರ್ತನಕಾರರನ್ನು ಕೆಲವು ಕಡೆ ‘ವ್ಯಾಸ’ರೆಂದೇ ಸಂಬೋಧಿಸುತ್ತಾರೆ. ಶಾಸ್ತ್ರಚರ್ಚೆ ನಡೆಯುವ ವೇದಿಕೆಯನ್ನು ‘ವ್ಯಾಸಪೀಠ’ ಎಂದು ಕರೆಯುವುದೂ ವಾಡಿಕೆ.
ನಮ್ಮ ದೇಶದಲ್ಲಿ ಅನೇಕ ಜನ ಋುಷಿಗಳು, ಆಚಾರ್ಯರು ಇತಿಹಾಸದಲ್ಲಿ ವೇದ ಮಂತ್ರಗಳ ಸಂಕಲನ ಮತ್ತು ಸಂಪಾದನೆಯ ಕಾರ್ಯವನ್ನು ಮಾಡುತ್ತಲೇ ಬಂದಿದ್ದಾರೆ. ಇಂಥ ಎಲ್ಲ ಋುಷಿಗಳು ‘ವೇದವ್ಯಾಸ’ರೆಂದು ಕರೆಯಲ್ಪಡುತ್ತಿದ್ದರು. ವೇದಗಳು ಸಮಸ್ತ ಮಾನವೀಯ ಜ್ಞಾನಗಳ ಆಗರ. ಕಾಲಕಾಲಕ್ಕೆ ವೇದಗಳ ಪರಿಷ್ಕಾರ, ಸಂಪಾದನೆ ನಡೆಯುತ್ತಲೇ ಬರುತ್ತಿದೆ. ವೇದಗಳಲ್ಲಿ ಎರಡು ಭಾಗ. ಯಾವ ಕಾಲಕ್ಕೂ ಬದಲಾಗದಿರುವ ಶ್ರುತಿಗಳು. ಮತ್ತು ಕಾಲಕಾಲಕ್ಕೆ ಬದಲಾಗುವ ಸ್ಮೃತಿಗಳು. ಧರ್ಮದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹೊಸ ಕಾಲಕ್ಕೆ ತಕ್ಕಂತೆ ಸ್ಮೃತಿಗಳ ರಚನೆಯಾಗುತ್ತಲೇ ಇದೆ. ಸ್ಮೃತಿಗಳು ಭಾರತದಲ್ಲಿನ ಆರೋಗ್ಯಪೂರ್ಣ ವೈಜ್ಞಾನಿಕ ಜ್ಞಾನ ಪರಂಪರೆಯ ದ್ಯೋತಕ. ಕಾಲಕ್ಕೆ ತಕ್ಕಂತೆ ಹೊಸತನವನ್ನು ಸ್ವೀಕರಿಸುವ ‘ನಾವೀನ್ಯತೆ’ ಭಾರತೀಯ ಸಂಸ್ಕೃತಿಯ ಮೂಲ ಶಕ್ತಿ.
ಆಧುನಿಕ ವೇದವ್ಯಾಸರ ಅಗತ್ಯ : ಕಳೆದ 1000 ವರ್ಷಗಳ ಈಚೆಗೆ ನಿರಂತರ ಸಂಘರ್ಷದ ಕಾರಣದಿಂದ ಶಾಸ್ತ್ರಗಳ ಯುಗಾನುಕೂಲ ಪರಿಷ್ಕಾರ, ಶಾಸ್ತ್ರಗಳ ಸ್ಪಷ್ಟೀಕರಣ ಆಗಲಿಲ್ಲ. ಸ್ವರಾಜ್ಯ ಪ್ರಾಪ್ತಿಯ ನಂತರ ಆಗಬಹುದೆಂಬ ನಿರೀಕ್ಷೆಯೂ ಸಫಲವಾಗಲಿಲ್ಲ. ಇದು ಸರಕಾರದ ಕೆಲಸವಂತೂ ಅಲ್ಲ. ಸಮಾಜದ ವಿದ್ವಾಂಸರು, ಧರ್ಮಾಚಾರ್ಯರು ಸೇರಿ ಈ ‘ವ್ಯಾಸಕಾರ್ಯ’ವನ್ನು ಮಾಡಬೇಕಿತ್ತು. ಇನ್ನೊಬ್ಬ ಯಜ್ಞವಲ್ಕ್ಯ, ಇನ್ನೊಬ್ಬ ದೇವಲ ಮಹರ್ಷಿ ಉದಿತಗೊಂಡು ‘ವ್ಯಾಸಕಾರ್ಯ’ವನ್ನು ಮಾಡಬೇಕಿತ್ತು. ಧರ್ಮಾಚಾರ್ಯರು, ವಿದ್ವಾಂಸರು ಶಾಸ್ತ್ರಗಳನ್ನು ಜೀವಂತವಾಗಿಡುವ ಕೆಲಸವನ್ನಂತೂ ಮಾಡಿದ್ದಾರೆ. ಅದಕ್ಕಾಗಿ ಅವರು ಅಭಿನಂದನಾರ್ಹರು. ಆದರೆ ಯುಗಾನುಕೂಲ ‘ಧರ್ಮ ವಿವೇಚನೆ’ಯ ‘ವ್ಯಾಸಕಾರ್ಯ’ ಆಗಲಿಲ್ಲ ಎಂಬುದಂತೂ ದೊಡ್ಡ ಹಿನ್ನಡೆಯೇ ಸರಿ. ಹೊಸ ಸ್ಮೃತಿಕಾರರಿಗಾಗಿ ‘ಆಧುನಿಕ ವೇದವ್ಯಾಸ’ರಿಗಾಗಿ ದೇಶ ಎದುರು ನೋಡುತ್ತಿರುವುದಂತೂ ಸತ್ಯ.
ವ್ಯಾಸ – ಪುರಾಣ : ಜ್ಯಾಮಿತಿ (ಗಣಿತದಲ್ಲಿ) ಯಲ್ಲಿ ಒಂದು ‘ವ್ಯಾಸ’ ಇದೆ. ವೃತ್ತದ ಅಗಲವನ್ನು ‘ವ್ಯಾಸ’ದಿಂದಲೇ ಅಳೆಯುವುದು. ಇದರ ಆಧಾರದ ಮೇಲೆಯೇ ವೃತ್ತದ ಪರಿಧಿಯನ್ನು ಅಳೆಯಲಾಗುತ್ತದೆ. ಅದೇ ರೀತಿ ಜ್ಞಾನದ ವ್ಯಾಪ್ತಿಯನ್ನು ಸಂಪೂರ್ಣ ಅಳೆಯುವ ಶಕ್ತಿಯನ್ನು ಹೊಂದಿರುವವರಿಗೆ ‘ವ್ಯಾಸ’ ಎಂದು ಕರೆಯುವ ವಾಡಿಕೆ ಇದೆ. ರೂಪಕಗಳು ಮತ್ತು ಕಥೆಗಳ ಮೂಲಕ ಜ್ಞಾನದ ಗೂಢ ತತ್ವಗಳನ್ನು ಸಾಮಾನ್ಯ ಜನಗಳಿಗೆ ಅರ್ಥವಾಗುವಂತೆ ತಿಳಿಸುವ ಪುರಾಣಗಳ ರಚನೆಯ ಶಕ್ತಿ ಮತ್ತು ಅಧಿಕಾರ ಇರುವುದು ಇಂಥ ಪರಮ ಜ್ಞಾನಿಗಳಾದ ‘ವ್ಯಾಸ’ರಿಗೆ ಮಾತ್ರ. ಹದಿನೆಂಟು ಮುಖ್ಯ ಪುರಾಣಗಳ ರಚನೆಯನ್ನು ವೇದವ್ಯಾಸರೇ ಮಾಡಿದ್ದು. ಜೀವನದ ಗೂಢ ತತ್ವಗಳನ್ನು ಸರಳ ಕಥೆಗಳ ಮೂಲಕ ತಿಳಿ ಹೇಳಿ, ಅವುಗಳನ್ನು ವ್ಯವಹಾರದಲ್ಲಿ ಇಳಿಸುವ ಶಾಸ್ತ್ರೀಯ ಮಾರ್ಗವೇ ಪುರಾಣಗಳು. ಮಕ್ಕಳಿಗೆ ಜೀವನದ ಪರಮ ಸತ್ಯವನ್ನು ಸರಳವಾಗಿ ತಿಳಿಹೇಳುವ ಪ್ರಭಾವಿ ಸಾಧನಗಳಾಗಿ ಪುರಾಣಗಳು ನಮ್ಮ ಮುಂದಿವೆ. ವ್ಯಾಸ ಪೂರ್ಣಿಮೆಯ ಶುಭಸಂದರ್ಭದಲ್ಲಿ ಈ ಶಾಸ್ತ್ರ ಪುರಾಣಗಳ ಸಾಧ್ಯಾಯ ಮಾಡುವ ಸಂಕಲ್ಪವನ್ನು ಮಾಡೋಣ.
ವ್ಯಾಸ ಮಾರ್ಗ : ಜ್ಞಾನಗ್ರಹಣ ಮತ್ತು ಜ್ಞಾನಪ್ರಸರಣ ಎರಡೂ ವ್ಯಾಸ ಪೂರ್ಣಿಮೆಯ ಸಂದೇಶಗಳೇ. ಜ್ಞಾನ ಗ್ರಹಣಕ್ಕೆ ಮನಸ್ಸು ಯೋಗ್ಯವಾಗಬೇಕಾದರೆ, ಕ್ಲೇಶಗಳಿಂದ ಮುಕ್ತವಾಗಿರಬೇಕು. ಇದನ್ನೇ ‘ಚಿತ್ತ ವೃತ್ತಿ ನಿರೋಧಃ’ ಎನ್ನುವುದು. ಅಜ್ಞಾನ, ಅಸ್ಮಿತೆ, ರಾಗ, ದ್ವೇಷ ಮತ್ತು ಅಭಿನಿವೇಶ ಎಂಬ ಐದು ಕ್ಲೇಶಗಳಿಂದ ಮನಸ್ಸನ್ನು ಮುಕ್ತಗೊಳಿಸಬೇಕು. ಈ ಕ್ಲೇಶಗಳಿಂದ ಮನಸ್ಸನ್ನು ಮುಕ್ತಗೊಳಿಸಲು ಪತಂಜಲಿ ಮಹರ್ಷಿಗಳು ಸೂಚಿಸಿರುವ ಸುಂದರ ಸರಳ ಉಪಾಯವೇ ಕ್ರಿಯಾಯೋಗ. ‘ತಪಃ ಸ್ವಾಧ್ಯಾಯ ಈಶ್ವರಪ್ರಣಿಧಾನಾನಿ ಕ್ರಿಯಾಯೋಗಃ’ ಎಂದು ಹೇಳಲಾಗಿದೆ. ತಪ, ಸ್ವಾಧ್ಯಾಯ ಈಶ್ವರಪ್ರಣಿಧಾನ ಈ ಮೂರು ಕ್ರಿಯಾಯೋಗಗಳು. ಇವುಗಳ ಆಚರಣೆಯಿಂದ ಜ್ಞಾನಗ್ರಹಣ ಸುಲಭವಾಗುತ್ತದೆ.
ಕ್ರಿಯಾಯೋಗದ ‘ತಪ’ : ‘ತಪ’ದಲ್ಲಿ ಮೂರು ಪ್ರಕಾರಗಳು. ಶಾರೀರಿಕ, ವಾಙ್ಮಯ (ವಾಚಿಕ) ಮತ್ತು ಮಾನಸಿಕ.
ಶಾರೀರಿಕ ತಪ: ದೇವ, ದ್ವಿಜ, ಗುರು, ಪ್ರಾಜ್ಞ ಪೂಜನಂ – ದೇವರು, ದ್ವಿಜ (ಅರಿವಿನಿಂದಾಗಿ ಇದೇ ಜನ್ಮದಲ್ಲಿ ಇನ್ನೊಂದು ಜನ್ಮವನ್ನು ಪಡೆದವನು), ಗುರು ಮತ್ತು ಪ್ರಾಜ್ಞ (ಜ್ಞಾನಿಗಳು) ಈ ನಾಲ್ವರನ್ನು ಗೌರವಿಸುವುದು, ಮತ್ತು ಅವರ ಆದರ್ಶಗಳನ್ನು ಪಾಲಿಸುವುದು. ಶೌಚಮ್‌- ಸದಾ ಕಾಲಕ್ಕೂ ಸ್ವಚ್ಛವಾಗಿರುವುದು. ಆರ್ಜವಮ್‌- ಸರಳವಾಗಿರುವುದು, ಸಹಜವಾಗಿರುವುದು, ನೇರ ನಡೆ. ಬ್ರಹ್ಮಚರ್ಯ ಮತ್ತು ಅಹಿಂಸೆ. ಇವು ಐದು ಶಾರೀರಿಕ ತಪದ ಆಚರಣೆಗಳು.
ವಾಙ್ಮಯ ತಪ: ಅನುದ್ವೇಗಕರಂ ವಾಕ್ಯಂ- ಇನ್ನೊಬ್ಬರಿಗೆ ಉದ್ವೇಗ ಉಂಟು ಮಾಡುವ ಮಾತುಗಳನ್ನು ಆಡದೇ ಇರುವುದು. ಸತ್ಯಂ – ಸತ್ಯವನ್ನೇ ಮಾತನಾಡುವುದು. ಪ್ರಿಯಂ ಚ ಹಿತಂ ಚ ಯತ್‌- ಪ್ರಿಯವಾಗಿ ಮಾತನಾಡುವುದು, ಹಿತವಾದ ಮಾತು. ಸ್ವಾಧ್ಯಾಯ- ಗುರುವಿನ ಸಾನ್ನಿಧ್ಯದಲ್ಲಿ ಕುಳಿತು ಲೌಕಿಕ ಮತ್ತು ಪಾರಲೌಕಿಕ ಜ್ಞಾನವನ್ನು ನೀಡುವ ಗ್ರಂಥಗಳ ಅಧ್ಯಯನ. ಅಭ್ಯಸನಂ- ಆ ಎಲ್ಲ ವಿಷಯಗಳ ‘ಮನನ’ ಅಂದರೆ ವಿಶ್ಲೇಷಣೆ ಮಾಡುತ್ತ, ‘ನಿಧಿಧ್ಯಾಸನ’ ಅಂದರೆ ಜೀವನದಲ್ಲಿ ಅಳವಡಿಸಿಕೊಳ್ಳುವುದು. ಇವು ಐದು ವಾಙ್ಮಯ ತಪದ ಆಚರಣೆಗಳು.
ಮಾನಸಿಕ ತಪ: ಮನಃಪ್ರಸಾದಃ- ‘ಮನಸ್ಸು’ ಸದಾ ಕಾಲಕ್ಕೂ ಪ್ರಸನ್ನವಾಗಿರಬೇಕು. ‘ಮನಸ್ಸು’ ಪ್ರಸನ್ನವಾಗಿರುವುದು ಸ್ವಚ್ಛವಾಗಿದ್ದಾಗ ಮಾತ್ರ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಂದ ‘ಮನಸ್ಸು’ ಕೊಳೆಯಾಗದಂತೆ ಎಚ್ಚರವಹಿಸಬೇಕು. ಸೌಮ್ಯತ್ಯಂ- ‘ಸುಮನಸಾ’- ಮನಸ್ಸನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳುವುದು. ಮೌನಂ- ಮೌನವಾಗಿರುವುದು. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಇರುವ ಉತ್ತಮ ವಿಧಾನ ಇದು. ನನ್ನೊಂದಿಗೆ ನಾನು ಮಾತನಾಡಲು ಇರುವ ಉತ್ತಮ ಅವಕಾಶ.
ಆತ್ಮವಿನಿಗ್ರಹಃ- ಮಾಡಬಾರದ್ದನ್ನು ಪ್ರಾಣ ಹೋದರೂ ಮಾಡಬಾರದು. ಮಾಡಬೇಕಾದುದನ್ನು ಪ್ರಾಣ ಕೊಟ್ಟಾದರೂ ಮಾಡಬೇಕು. ಭಾವಸಂಶುದ್ಧಿಃ- ಕಪಟವಿಲ್ಲದ ನಡವಳಿಕೆ. ಮನ, ವಚನ ಕರ್ಮಗಳಲ್ಲಿ ಯಾರು ಒಂದೇ ಆಗಿರುತ್ತಾರೋ ಅವರು ‘ಮಹಾತ್ಮ’ರು. ಈ ಮೂರು ಯಾರಲ್ಲಿ ಬೇರೆ ಬೇರೆ ಆಗಿರುತ್ತದೆಯೋ ಅವರು ದುರಾತ್ಮರು. ಪಾರದರ್ಶಕ ನಡವಳಿಕೆ ಇರಬೇಕು. ವಿದ್ಯೆಯನ್ನು ಪಡೆಯುವವನು ಈ ಮೂರೂ ರೀತಿಯ ತಪಗಳನ್ನಾಚರಿಸಬೇಕು.
ಸ್ವಾಧ್ಯಾಯ : ಗುರುವಿನ ಸನ್ನಿಧಿಯಲ್ಲಿ ಅಧ್ಯಯನ, ಚಿಂತನ, ಮನನ ಮತ್ತು ನಿಧಿಧ್ಯಾಸನ ಮಾಡುತ್ತ ಜೀವನವನ್ನು ಬದುಕುವ ಕಲೆಯನ್ನು ಕಲಿಯುವುದು ಮತ್ತು ಪಾರಲೌಕಿಕ ಜೀವನವನ್ನು ಅರ್ಥ ಮಾಡಿಕೊಳ್ಳುವುದು.
ಈಶ್ವರಪ್ರಣಿಧಾನ : ಪ್ರತಿಯೊಂದು ಕರ್ಮವನ್ನು ಪರಮಾತ್ಮನಿಗೆ ಸಮರ್ಪಿಸುತ್ತ, ಅವನ ಕೈಯಲ್ಲಿನ ಒಂದು ಉಪಕರಣ ಮಾತ್ರ ನಾನು ಎಂಬ ವಿನಮ್ರತೆಯನ್ನು ತಂದುಕೊಳ್ಳುವುದು. ಪ್ರತಿಯೊಂದು ಕೆಲಸವನ್ನು ಭಗವಂತನ ಪೂಜೆ ಎಂಬ ಭಾವದಿಂದ ಮಾಡುವುದು. ಈ ಮೂರೂ ತಪಗಳನ್ನು ಮಾಡುವ ಮೂರು ವಿಧಾನಗಳಿವೆ.
ಸಾತ್ವಿಕ ತಪ- ತಪವನ್ನು ‘ಶ್ರದ್ಧಯಾ’ – ಶ್ರದ್ಧೆಯಿಂದ, ‘ಪರಯಾ’ – ಉತ್ಕೃಷ್ಟವಾಗಿ ಮತ್ತು ‘ಅಫಲಾಕಾಂಕ್ಷಿಭಿಃ’ – ಫಲಾಪೇಕ್ಷೆಯಿಲ್ಲದೇ ಆಚರಿಸಿದಾಗ ಅದು ಸಾತ್ವಿಕ ತಪವಾಗುತ್ತದೆ.
ರಾಜಸಿಕ ತಪ – ಸತ್ಕಾರಮಾನಪೂಜಾರ್ಥಂ – ಸತ್ಕಾರದ, ಮಾನ-ಸಮ್ಮಾನದ ಹಾಗೂ ಪ್ರಶಂಸೆಯ ಆಸೆಯಿಂದ ಮತ್ತು ‘ದಂಭೇನ’ – ಅಹಂಕಾರಕ್ಕೆ ವಶನಾಗಿ ತಪವನ್ನಾಚರಿಸಿದರೆ ಅದು ರಾಜಸಿಕ ತಪವಾಗುತ್ತದೆ. ಈ ರೀತಿಯ ತಪಕ್ಕೆ ಫಲ ಸಿಗದೇ ಹೋಗಬಹುದು. ಒಂದು ವೇಳೆ ಫಲ ದೊರೆತರೂ ಅದು ಸ್ಥಿರವಾಗಿರುವುದಿಲ್ಲ.
ತಾಮಸಿಕ ತಪ- ‘ಮೂಢಗ್ರಾಹೇಣಾತ್ಮನೋ’ – ಅವಿವೇಕದಿಂದ ಯುಕ್ತವಾದ ಉದ್ದೇಶವನ್ನು ಇಟ್ಟುಕೊಂಡು, ‘ಯತ್‌ಪೀಡಯಾ’ – ಸ್ವಂತದ ಶರೀರವನ್ನು ಅತಿಯಾಗಿ ದಂಡಿಸಿ, ‘ಪರಸ್ಯೋತ್ಸಾದನಾರ್ಥಂ’ – ಇನ್ನೊಬ್ಬರಿಗೆ ಕೆಡುಕನ್ನುಂಟು ಮಾಡುವ ಉದ್ದೇಶದಿಂದ ಆಚರಿಸುವ ತಪವು ತಾಮಸಿಕ ತಪ ಎಂದು ಎನಿಸಿಕೊಳ್ಳುತ್ತದೆ.
ಈ ಕ್ರಿಯಾಯೋಗದಿಂದ ಜ್ಞಾನಗ್ರಹಣ ಅಂದರೆ ಶಿಕ್ಷ ಣ ಸುಲಭ ಗ್ರಾಹ್ಯವಾಗುತ್ತದೆ. ಜ್ಞಾನಗ್ರಹಣ ಉತ್ತಮವಾಗಿ ಆದಾಗ ಜ್ಞಾನಪ್ರಸರಣವೂ ಪರಿಣಾಮಕಾರಿಯಾಗುತ್ತದೆ. ಆಲಯ (ಮನೆ) ಮತ್ತು ವಿದ್ಯಾಲಯ (ಶಾಲೆ) ಎರಡನ್ನೂ ಕ್ರಿಯಾಯೋಗದ ಈ ಮೂರು ತಪಸ್ಸಿನ ಕೇಂದ್ರಗಳನ್ನಾಗಿ ಮಾಡಿದಾಗ ವ್ಯಕ್ತಿ ನಿರ್ಮಾಣದ ಶ್ರೇಷ್ಠ ಕೇಂದ್ರಗಳಾಗಿ ಮಾರ್ಪಡುತ್ತವೆ. ಇದುವೇ ನೈಜ ‘ವ್ಯಾಸ ಕಾರ್ಯ’. ವ್ಯಾಸ ಪೂರ್ಣಿಮೆಯ ನೈಜ ಆಚರಣೆ. ನಮ್ಮ ನಮ್ಮ ಶಿಕ್ಷ ಕರನ್ನು ಗುರುತಿಸಿ, ಹುಡುಕಿ ಅವರನ್ನು ಭಕ್ತಿಯಿಂದ ಗೌರವಿಸೋಣ, ಆದರಿಸೋಣ.

(ಲೇಖಕರು ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ, ಭಾರತೀಯ ಶಿಕ್ಷಣ ಮಂಡಲ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top