ಕೊರೊನಾ ಕಾಲದಲ್ಲಿ ಶಿಕ್ಷಣರಂಗದ ಪುನಃಶ್ಚೇತನ, ವರ್ತಮಾನ, ಭವಿಷ್ಯದ ಸವಾಲುಗಳ ಹಾಗೂ ಆನ್‌ಲೈನ್ ಶಿಕ್ಷಣದ ಸಾಧಕ, ಬಾಧಕಗಳ ಕುರಿತು ವಿಜಯ ಕರ್ನಾಟಕ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಸರಕಾರದ ಇಬ್ಬರು ಸಚಿವರು, ಶೈಕ್ಷಣಿಕ ತಜ್ಞರು, ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿ ಸುಮಾರು ಎರಡೂ ಕಾಲು ಗಂಟೆ ಸಮಾಲೋಚಿಸಿದರು. ಸರಕಾರ, ಶಿಕ್ಷಣ ಸಂಸ್ಥೆಗಳು, ಪಾಲಕರು ನಿರ್ವಹಿಸಬೇಕಾದ ಪಾತ್ರ, ವಿದ್ಯಾರ್ಥಿಗಳ ಭವಿಷ್ಯದ ಚಿಂತನ ಮಂಥನ ನಡೆಯಿತು. ಆನ್‌ಲೈನ್ ಶಿಕ್ಷಣದ ಸಾರ್ವತ್ರೀಕರಣಕ್ಕೆ ಎದುರಾಗಿರುವ ಸವಾಲು ಮತ್ತು ಅದನ್ನು ಎದುರಿಸುವ ಬಗೆ, ಶಾಲೆ, ಕಾಲೇಜು ಆರಂಭದ ಗೊಂದಲ, ಸಿಇಟಿ, ಸಿಲೆಬಸ್ ಕಡಿತಗಳು ಚರ್ಚೆಯಲ್ಲಿ ಹಾದುಹೋದ ಸಂಗತಿಗಳು. ಕೊರೊನಾ ಕಾಲದಲ್ಲಿ ಶಿಕ್ಷಣರಂಗದ ಪುನಃಶ್ಚೇತನ, ವರ್ತಮಾನ, ಭವಿಷ್ಯದ ಸವಾಲುಗಳ ಹಾಗೂ ಆನ್‌ಲೈನ್ ಶಿಕ್ಷಣದ ಸಾಧಕ, ಬಾಧಕಗಳ ಕುರಿತು ವಿಜಯ ಕರ್ನಾಟಕ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಸರಕಾರದ ಇಬ್ಬರು ಸಚಿವರು, ಶೈಕ್ಷಣಿಕ ತಜ್ಞರು, ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿ ಸುಮಾರು ಎರಡೂ ಕಾಲು ಗಂಟೆ ಸಮಾಲೋಚಿಸಿದರು. ಸರಕಾರ, ಶಿಕ್ಷಣ ಸಂಸ್ಥೆಗಳು, ಪಾಲಕರು ನಿರ್ವಹಿಸಬೇಕಾದ ಪಾತ್ರ, ವಿದ್ಯಾರ್ಥಿಗಳ ಭವಿಷ್ಯದ ಚಿಂತನ ಮಂಥನ ನಡೆಯಿತು. ಆನ್‌ಲೈನ್ ಶಿಕ್ಷಣದ ಸಾರ್ವತ್ರೀಕರಣಕ್ಕೆ ಎದುರಾಗಿರುವ ಸವಾಲು ಮತ್ತು ಅದನ್ನು ಎದುರಿಸುವ ಬಗೆ, ಶಾಲೆ, ಕಾಲೇಜು ಆರಂಭದ ಗೊಂದಲ, ಸಿಇಟಿ, ಸಿಲೆಬಸ್ ಕಡಿತಗಳು ಚರ್ಚೆಯಲ್ಲಿ ಹಾದುಹೋದ ಸಂಗತಿಗಳು.
ಸಂಯೋಜಿತ ಶಿಕ್ಷಣಕ್ಕೆ ಸಿದ್ಧತೆ ಅನಿವಾರ್ಯ: ಹಳ್ಳಿ ಹಳ್ಳಿಗೂ ಇಂಟರ್ನೆಟ್ ನಮ್ಮ ಟಾರ್ಗೆಟ್ ಎಂದ ಡಿಸಿಎಂ ಅಶ್ವತ್ಥನಾರಾಯಣ ಆಫ್‌ಲೈನ್ ಬೆಸೆದ ಸಂಯೋಜಿತ ಶಿಕ್ಷಣ ಕೋವಿಡ್ ಕಾಲದಲ್ಲಿ ಮಾತ್ರವಲ್ಲ, ಭವಿಷ್ಯದ ದೃಷ್ಟಿಯಿಂದಲೂ ಅನಿವಾರ್ಯ ಎನ್ನುವುದು ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವರೂ ಆಗಿರುವ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಖಚಿತ ಮಾತು. ತರಗತಿ ಪಾಠದ ಕಲಿಕಾ ವ್ಯವಸ್ಥೆ ಜತೆಗೆ ಆನ್‌ಲೈನ್‌ನಲ್ಲಿ ಶಿಕ್ಷಣ ನೀಡುವುದು ಕೂಡಾ ಅಗತ್ಯವಾಗಿದೆ. ಎರಡಕ್ಕೂ ಒತ್ತು ನೀಡುವ ಹೊಸ ಸಂಯೋಜನೆಯನ್ನು ರೂಪಿಸಬೇಕು. ಆನ್‌ಲೈನ್ ಶಿಕ್ಷಣ ಹಳ್ಳಿ ಹಳ್ಳಿಗೆ ತಲುಪಬೇಕೆಂದರೆ, ಇಂಟರ್‌ನೆಟ್ ಕ್ರಾಂತಿ ಆಗಬೇಕು ಎಂದರು. ಹಳ್ಳಿ ಹಳ್ಳಿಗೂ ನೀರಿನ ಸಂಪರ್ಕ ನೀಡಿರುವಂತೆ ಕಾಡು-ಮೇಡುಗಳಲ್ಲೂ ಇಂಟರ್‌ನೆಟ್ ಸಿಗುವಂತೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಅಂತರ್ಜಾಲ ಆಯೋಜಕ ಕಂಪನಿಗಳಿಗೆ ಸೂಚನೆ ನೀಡಲಾಗುತ್ತಿದೆ. ಕೇಬಲ್, ಟವರ್ ನಿರ್ಮಾಣಕ್ಕೂ ಒತ್ತು ಕೊಡುತ್ತಿದ್ದೇವೆ. ಸದ್ಯೋಭವಿಷ್ಯದಲ್ಲಿ ಇದೆಲ್ಲ ಸಾಕಾರವಾಗಲಿದೆ ಎಂದು ಹೇಳಿದರು. ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಕೇಂದ್ರ ಸರಕಾರ ತೀವ್ರ ಒತ್ತನ್ನು ನೀಡಿದೆ. ರಾಜ್ಯದಲ್ಲೂ ಈ ನಿಟ್ಟಿನಲ್ಲಿ ಹಲವು ಸಫಲ ಪ್ರಯೋಗಗಳು ನಡೆಯುತ್ತಿವೆ. ಜ್ಞಾನನಿಧಿ ಪೋರ್ಟಲ್‌ನಲ್ಲಿ 50,000 ಗಂಟೆಗಳಷ್ಟು ಪಾಠವನ್ನು ಅಪ್‌ಲೋಡ್ ಮಾಡಲಾಗಿದೆ. ಕೆ-ಸೆಟ್ ಮತ್ತು ನೀಟ್ ಪರೀಕ್ಷೆಗೆ ಆನ್‌ಲೈನ್ ತರಬೇತಿಗಳನ್ನು ನೀಡಲಾಗಿದೆ ಎಂದು ವಿವರಿಸಿದರು.
ವಿಕ ಕಾರ್ಯಕ್ಕೆ ಶ್ಲಾಘನೆ : ರಾಜ್ಯದ ಹಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಜಯ ಕರ್ನಾಟಕ ಕೆಲಸ ಮಾಡುತ್ತಿದೆ. ಸಮಾಜ ಮತ್ತು ಸರಕಾರದ ನಡುವೆ ಸೇತುವೆಯಾಗಿರುವುದು ಶ್ಲಾಘನೀಯ ಎಂದರು ಡಿಸಿಎಂ.
ಇನ್ನಷ್ಟು ಸ್ಮಾರ್ಟ್ ಕ್ಲಾಸ್ ರೂಂ : ರಾಜ್ಯದಲ್ಲಿ ಪ್ರಸಕ್ತ 1,000 ಸ್ಮಾರ್ಟ್ ಕ್ಲಾಸ್ ರೂಂಗಳ ಮೂಲಕ ಡಿಜಿಟಲಿ ಶಿಕ್ಷಣ ನೀಡಲಾಗುತ್ತಿದೆ. ಇನ್ನೂ 1000 ಕ್ಲಾಸ್ ತೆರೆಯಲು ಸರಕಾರ ಚಿಂತನೆ ನಡೆಸಿದೆ. ಅಕ್ಟೋಬರ್‌ನಲ್ಲಿ ತರಗತಿ ಆರಂಭವಾಗುವ ಹೊತ್ತಿಗೆ ಇದು ಸಿದ್ಧವಾಗಲಿದೆ ಎಂದರು.
ಇಡೀ ವಿಶ್ವದ ತಂತ್ರಜ್ಞಾನ ತವರು ಮನೆ ಬೆಂಗಳೂರು. ಆನ್ ಲೈನ್ ಶಿಕ್ಷಣದ ಯಶಸ್ಸು ನಾವಲ್ಲದೆ ಬೇರೆ ಯಾರಿಂದ ಸಾಧ್ಯ?- ಡಾ. ಸಿ.ಎನ್. ಅಶ್ವತ್ಥನಾರಾಯಣ ಉಪಮುಖ್ಯಮಂತ್ರಿ.
ಆಗಸ್ಟ್ 15ರ ಹೊತ್ತಿಗೆ ಸ್ಪಷ್ಟ ಚಿತ್ರಣ: ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗದು ಎಂದ ಶಿಕ್ಷಣ ಸಚಿವ ಸುರೇಶಕುಮಾರ್ .
ಶಾಲೆ ಆರಂಭ ಯಾವಾಗ, ಎಲ್ಲರಿಗೂ ಆನ್‌ಲೈನ್ ಶಿಕ್ಷಣ ನೀಡಲು ಸಾಧ್ಯವೇ ಎಂಬ ಪೋಷಕರು, ವಿದ್ಯಾರ್ಥಿಗಳ ಆತಂಕಕ್ಕೆ ಬಹುತೇಕ ಆಗಸ್ಟ್ 15ರ ಹೊತ್ತಿಗೆ ಉತ್ತರ ದೊರೆಯುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರಾದ ಸುರೇಶ್ ಕುಮಾರ್ ಹೇಳಿದರು. ಈಗಿನ ಪರಿಸ್ಥಿತಿಯಲ್ಲಿ ಒಂದೊಮ್ಮೆ ಶಾಲೆ ತೆರೆದರೂ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಹೆಚ್ಚಿನ ಪೋಷಕರು ಹೇಳಿರುವುದು ಸಮೀಕ್ಷೆಯಲ್ಲಿ ದಾಖಲಾಗಿದೆ. ಸರಕಾರಿ ಶಾಲೆ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವಲ್ಲಿ ಹಲವಾರು ಸಮಸ್ಯೆಗಳಿವೆ. ಇದೆಲ್ಲದಕ್ಕೂ ಒಂದು ಪರಿಹಾರ ಕಂಡುಕೊಳ್ಳುವುದು ಖಚಿತ. ತಂತ್ರಜ್ಞಾನದ ಕೊರತೆಯಿಂದಾಗಿ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಹೊಣೆ ನಮ್ಮದು ಎಂದು ಭರವಸೆಯ ಮಾತುಗಳನ್ನಾಡಿದರು.
ಇನ್ನೊಂದು ಚಾನೆಲ್‌ಗೆ ಬೇಡಿಕೆ : ದೂರದರ್ಶನ ಮತ್ತು ಚಂದನ ಚಾನೆಲ್‌ಗಳನ್ನು ಬಳಸಿಕೊಂಡು ಶಿಕ್ಷಣ ನೀಡಲಾಗುತ್ತಿದೆ. ಜುಲೈ 20ರಿಂದ ಸೇತುಬಂಧ ಕಾರ್ಯಕ್ರಮ ನಡೆಯಲಿದೆ. 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಹಿಂದಿನ ತರಗತಿಯ ಪಾಠದ ಮನನ ಮತ್ತು ಮುಂದಿನ ತರಗತಿಯ ಪಠ್ಯದ ವಿವರ ನೀಡಲಾಗುತ್ತದೆ. ದಿನಕ್ಕೆ ನಾಲ್ಕು ಗಂಟೆ ಕ್ಲಾಸಿದೆ. ಇದೀಗ ಇನ್ನೊಂದು ಚಾನೆಲ್ ಬೇಡಿಕೆ ಇಟ್ಟಿದ್ದೇವೆ ಎಂದು ಸಚಿವರು ತಿಳಿಸಿದರು.
50% ಮಕ್ಕಳಲ್ಲಿ ಮೊಬೈಲ್ ಇಲ್ಲ :ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ, ಸರಕಾರಿ ಶಾಲೆಯ 50% ಮಕ್ಕಳಲ್ಲಿ ಸ್ಮಾರ್ಟ್ ಫೋನ್, ಇಂಟರ್‌ನೆಟ್ ಯಾವುದೂ ಇಲ್ಲ. ಉಳಿದವರಲ್ಲೂ ಅಪ್ಪನಿಗೊಂದು ಮೊಬೈಲ್ ಇರುವುದೇ ಹೆಚ್ಚು. ಇಂಥ ಪರಿಸ್ಥಿತಿಯಲ್ಲಿ ಜಾಗರೂಕ ಹೆಜ್ಜೆ ಇಡಬೇಕಾಗುತ್ತದೆ ಎಂದರು ಸುರೇಶ್ ಕುಮಾರ್.
ಜನರಲ್ಲಿ ಭರವಸೆ ತುಂಬುವ ಸ್ತುತ್ಯರ್ಹ ಕೆಲಸವನ್ನು ವಿಜಯ ಕರ್ನಾಟಕ ಮಾಡುತ್ತಿದೆ. ಇದು ಕೊರೊನಾ ಕಾಲದ ನಿಜವಾದ ಅವಶ್ಯಕತೆ.- ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು.
ಗ್ರಾಮೀಣ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ
ಕೊರೊನಾ ಬಿಕ್ಕಟ್ಟಿನಲ್ಲಿ ನಾವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಬಗ್ಗೆ ಹೆಚ್ಚು ಗಮನಿಹರಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ಅಗತ್ಯ ಮಾತ್ರವಲ್ಲ; ಅನಿವಾರ್ಯವೂ ಹೌದು. ಆದರೆ, ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ನಾವು ಆನ್‌ಲೈನ್ ಶಿಕ್ಷ ಣ ಪೂರೈಸಲು ಸಾಧ್ಯವೇ? ಆ ಮಟ್ಟಿನ ವ್ಯವಸ್ಥೆಯನ್ನು ನಾವು ಸಿದ್ಧ ಮಾಡಿಕೊಂಡಿದ್ದೆವೆಯೇ ಎಂಬುದು ಮುಖ್ಯವಾಗುತ್ತದೆ. ನಗರ ಮತ್ತು ಪಟ್ಟಣಗಳ ಪ್ರದೇಶಗಳಲ್ಲಿನ ಬಹುತೇಕ ಮಕ್ಕಳಿಗೆ ಸವಲತ್ತುಗಳು ದೊರೆಯುತ್ತದೆ. ಆದರೆ, ಇದೇ ಮಾತನ್ನು ನಾವು ಗ್ರಾಮೀಣ ಪ್ರದೇಶ ಮಕ್ಕಳಿಗೆ ಹೇಳಲಾಗುವುದಿಲ್ಲ; ಈ ಬಗ್ಗೆ ಚರ್ಚೆಯಾಗಬೇಕಿದೆ. ಇಂಟರ್‌ನೆಟ್, ಸ್ಮಾರ್ಟ್ ಫೋನ್ ಇಲ್ಲವೇ ಲ್ಯಾಪ್‌ಟಾಪ್‌ಗಳಿಲ್ಲದೇ ಆನ್‌ಲೈನ್ ಶಿಕ್ಷಣ ಸಾಧ್ಯವಿಲ್ಲ. ಎಲ್ಲ ಮಕ್ಕಳಿಗೆ ಈ ಸೌಲಭ್ಯಗಳನ್ನು ಸಿಗುವ ಹಾಗೆ ಮಾಡಬೇಕು. ಕೆಲವು ವರ್ಷಗಳ ಹಿಂದೆಯೇ ಕೇಂದ್ರ ಸರಕಾರ ಜಾರಿಗೆ ತಂದಿರುವ ‘ಡಿಜಿಟಲ್ ಇಂಡಿಯಾ’ ಕಾರ್ಯಕ್ರಮವನ್ನು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸಮರ್ಥವಾಗಿ ಬಳಸಿಕೊಳ್ಳಬೇಕು. ಎಲ್ಲಿ ಆನ್‌ಲೈನ್ ಸಾಧ್ಯವಿಲ್ಲವೋ ಅಲ್ಲಿ ದೂರದರ್ಶನದ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ದೊರೆಯವಂತೆ ಮಾಡಬಹುದು. ರಾಜ್ಯ ಸರಕಾರ ಈಗಾಗಲೇ ಸಂಪೂರ್ಣವಾಗಿ ಶಿಕ್ಷಣಕ್ಕೆ ಮೀಸಲಾದ ದೂರದರ್ಶನ ಚಾನೆಲ್ ಆರಂಭಿಸಲಿದೆ ಎಂದು ಹೇಳಿದೆ. ಹಾಗೆಯೇ ಕೇಂದ್ರ ಸರಕಾರ ಕೂಡ ಇಂಥದ್ದೇ 12 ಚಾನೆಲ್ ಆರಂಭಿಸಲಿದೆ. ಈ ಟಿವಿ ಮತ್ತು ಆನ್‌ಲೈನ್ ವ್ಯವಸ್ಥೆಯನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷ ಣವನ್ನು ಪೂರೈಸಬಹುದು. – ಪ್ರೊ. ಎಂ.ಆರ್.ದೊರೆಸ್ವಾಮಿ, ರಾಜ್ಯ ಸರಕಾರದ ಶೈಕ್ಷಣಿಕ ಸಲಹೆಗಾರರು ಮತ್ತು ಪಿಇಎಸ್ ವಿವಿ ಕುಲಾಧಿಪತಿ, ಬೆಂಗಳೂರು
ಪವರ್, ಇಂಟರ್‌ನೆಟ್ ಲ್ಯಾಪ್‌ಟಾಪ್…
ಆನ್‌ಲೈನ್ ಶಿಕ್ಷಣ ಈ ಕ್ಷ ದ ಅಗತ್ಯ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಹಾಗಾಗಿ, ಈ ದಿಶೆಯಲ್ಲಿ ಪವರ್, ಇಂಟರ್‌ನೆಟ್ ಮತ್ತು ಲ್ಯಾಪ್‌ಟಾಪ್… ಈ ಮೂರು ಸಂಗತಿಗಳು ಮುಖ್ಯವಾಗುತ್ತಿವೆ. ನಗರ ಪ್ರದೇಶವಾಗಲೀ, ಗ್ರಾಮೀಣ ಪ್ರದೇಶವಾಗಲೀ ಆನ್‌ಲೈನ್ ಶಿಕ್ಷಣಕ್ಕೆ ಬೇಕಿರುವ ಮೂಲಭೂತ ಸೌಕರ್ಯ ಕಲ್ಪಿಸಲೇಬೇಕು. ಕೆಲವು ಪೋಷಕರಿಗೆ ಈ ಸಾಧನಗಳನ್ನು ಖರೀದಿಸುವ ಸಾಮರ್ಥ್ಯ ಇರುತ್ತದೆ. ಮತ್ತೆ ಕೆಲವರಿಗೆ ಇರುವುದಿಲ್ಲ. ಅಂಥವರನ್ನು ಗುರುತಿಸಿ ಅವರನ್ನು ಮುನ್ನೆಲೆಗೆ ತರಬೇಕು. ಇನ್ನು ಕೋವಿಡ್‌ನಿಂದ ಹೆಚ್ಚು ಬಾಧಿತರಾಗುವುದು ವಿದ್ಯಾಸಂಸ್ಥೆಗಳು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಹಾಗಿದ್ದೂ, ಆನ್‌ಲೈನ್ ಆಗಲಿ, ಆಫ್‌ಲೈನ್ ಶಿಕ್ಷಣವನ್ನು ನೀಡುವುದರಲ್ಲಿ ಅವುಗಳ ಜವಾಬ್ದಾರಿ ಹೆಚ್ಚಿದೆ. ಅದೇ ಕಾರಣಕ್ಕೆ ರೇವಾ ವಿಶ್ವವಿದ್ಯಾಲಯವು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿದ್ದು, ತನ್ನ ವ್ಯಾಪ್ತಿಯ 11 ಸರಕಾರಿ ಕಾಲೇಜುಗಳನ್ನು ದತ್ತು ಪಡೆದು ಅಲ್ಲಿನ ವಿದ್ಯಾರ್ಥಿಗಳಿಗೆ ಅತ್ಯುನ್ನುತ ಶಿಕ್ಷಣ ಪೂರೈಸುವ ಕೆಲಸವನ್ನು ಆರಂಭಿಸಿದೆ. ಇದು ನಮ್ಮ ಕರ್ತವ್ಯವೂ ಹೌದು. ಕೋವಿಡ್ ಪೂರ್ವ ಕ್ಯಾಂಪಸ್‌ಗಳೆಲ್ಲವೂ ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದವು. ಈಗ ಬಿಕೋ ಎನ್ನುತ್ತಿವೆ ಎನ್ನುವುದು ನಿಜವೇ ಆದರೂ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಕಾರ್ಯ ಚಟುವಟಿಕೆಗಳ ನಿಂತಿಲ್ಲ. ಪರ್ಯಾಯವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಇನ್ನು ‘ಮೆಂಟರಿಂಗ್’ ಕೂಡ ಬಹಳ ಮುಖ್ಯವಾಗುತ್ತಿದೆ. ವಿಶೇಷವಾಗಿ ಪೋಷಕರನ್ನು ಈ ದಿಸೆಯಲ್ಲಿ ಹೆಚ್ಚು ಸಶಕ್ತರನ್ನಾಗಿ ಮಾಡಬೇಕಾದ ಅಗತ್ಯವಿದೆ. ಕೋವಿಡ್ ಸಂದರ್ಭದಲ್ಲಿ ನಾವೆಲ್ಲರೂ ಹೆಚ್ಚೆಚ್ಚು ಜವಾಬ್ದಾರಿಯನ್ನು ಹೊರಬೇಕಿದೆ.- ಡಾ. ಪಿ.ಶ್ಯಾಮರಾಜು, ಕುಲಾಧಿಪತಿ, ರೇವಾ ವಿಶ್ವವಿದ್ಯಾಲಯ, ಬೆಂಗಳೂರು.
ಶಿಕ್ಷಣವೆಂದರೆ ಆನ್‌ಲೈನ್ ಅಷ್ಟೇ ಅಲ್ಲ
ಕಳೆದ ನಾಲ್ಕು ತಿಂಗಳಿನಿಂದ ವೃತ್ತಿ ಶಿಕ್ಷಣದ ಕೋರ್ಸ್‌ಗಳಲ್ಲಿ ಶೇ. 60ರಷ್ಟು ‘ಜಾಲ ವಿಧಾನ’ವನ್ನು ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶಿಕ್ಷಣವೆಂದರೆ ಆನ್‌ಲೈನ್ ಅಲ್ಲ. ಶಿಕ್ಷಣವೆಂದಾಗ ಕೌಶಲಗಳೂ ಬೇಕು; ಮೌಲ್ಯಗಳೂ ಬೇಕು; ಆರೋಗ್ಯಕರ ದೃಷ್ಟಿಕೋನವನ್ನೂ ಬೆಳೆಸಬೇಕಾಗುತ್ತದೆ. ಜ್ಞಾನಾಧರಿತ ಮತ್ತು ಸ್ಪರ್ಧಾ ಆಧರಿತ ಶಿಕ್ಷಣ ವ್ಯವಸ್ಥೆಯನ್ನು ಯೋಗ್ಯ ರೀತಿಯಲ್ಲಿ ಸಂಯೋಜಿಸಬೇಕು. ಹಳ್ಳಿ ಮತ್ತು ನಗರಗಳಲ್ಲಿರುವ ಎಲ್ಲ ಬಗೆಯ ಅಂತರಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಕು. ಈ ಸಂದರ್ಭದಲ್ಲಿ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದು ಮತ್ತು ನಮ್ಮ ಮನೋರೂಪಣೆ(ಮೈಂಡ್ ಸೆಟ್) ಮುಖ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಕಾಲೇಜು ಶಿಕ್ಷಣ ತೆಳುವಾಗಲು ಬಿಡಿಬಾರದು. ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಈ ಬದಲಾದ ಕಾಲ ಘಟ್ಟದಲ್ಲಿ ವಿಶ್ವಾಸಾರ್ಹತೆ ನೆಲೆಗೊಳಿಸಬೇಕು. ಈ ನಿಟ್ಟಿನಲ್ಲಿ ಸರಕಾರ, ಸರಕಾರೇತರ ಮತ್ತು ನಾಗರಿಕ ಸಮಾಜ – ಎಲ್ಲರೂ ಕೈ ಜೋಡಿಸಬೇಕು. – ಡಾ. ಎಸ್.ಚಂದ್ರಶೇಖರ ಶೆಟ್ಟಿ, ಕುಲಪತಿ, ಆದಿಚುಂಚನಗಿರಿ ಯೂನಿರ್ವಸಿಟಿ, ಬೆಳ್ಳೂರ್ ಕ್ರಾಸ್, ನಾಗಮಂಗಲ.
ಅಸಮತೋಲನವಾದೀತು!
ನೀಟ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ರಾಜ್ಯದ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಇಂಗ್ಲಿಷ್‌ನಲ್ಲಿ ವಿಶೇಷ ಪರಿಣತಿ ಇಲ್ಲದಿದ್ದರೂ ನೀಟ್ ಪರೀಕ್ಷೆಯಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳಷ್ಟು ವ್ಯಾಪಕವಾಗಿ ಕರ್ನಾಟಕದ ವಿದ್ಯಾರ್ಥಿಗಳು ಕಂಡು ಬರುತ್ತಿಲ್ಲ. ಈ ರೀತಿಯ ಹಿಂದುಳಿಯುವಿಕೆಯನ್ನು ತಪ್ಪಿಸದಿದ್ದರೆ ಭವಿಷ್ಯದ ದಿನಗಳಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು. ರಾಜ್ಯಕ್ಕೆ ಅನ್ಯಾಯವಾಗಬಹುದು. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳೂ ನೀಟ್‌ನಂಥ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಅನುಕೂಲವಾಗುವಂತೆ ಸರಕಾರ ಸೂಕ್ತ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮುಖ್ಯವಾಗಿ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಹೆಚ್ಚಿನ ಸಹಕಾರ ನೀಡಬೇಕು. ಉತ್ತರ ಕರ್ನಾಟಕದ ನಾನಾ ಪ್ರದೇಶಗಳಲ್ಲಿ ಶಾಲಾ ಶಿಕ್ಷ ಣದ ವ್ಯವಸ್ಥೆ ಈಗಲೂ ಕ್ಲಿಷ್ಟಕರವಾಗಿದೆ. ಹಲವು ಕೊರತೆಗಳು ಇಲ್ಲಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು.- ಡಾ. ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷರು, ಕೆಎಲ್‌ಇ ಶಿಕ್ಷಣ ಸಂಸ್ಥೆ, ಬೆಳಗಾವಿ.
ಖಾಸಗಿ ಶಿಕ್ಷಣ ಸಂಸ್ಥೆಗಳ ದೂರಬೇಡಿ
ರಾಜ್ಯದ ಶೈಕ್ಷಣಿಕ ವಲಯದಲ್ಲಿ ಸರಕಾರಿ ಅನುದಾನ ಪಡೆಯದ ಅನುದಾನ ರಹಿತ ಖಾಸಗಿ ಶಿಕ್ಷ ಣ ಸಂಸ್ಥೆಗಳು ಮಹತ್ವದ ಸೇವೆ ಸಲ್ಲಿಸುತ್ತಿವೆ. ಸರಕಾರದ ಯಾವುದೇ ನೆರವು ಇಲ್ಲದೆ ಅವುಗಳು ಕೋವಿಡ್ ಬಿಕ್ಕಟ್ಟಿನ ನಡುವೆ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ 80 ಸಾವಿರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿದ್ದು, ಅವುಗಳಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳೂ ಇವೆ. ಆದರೆ ಅನುದಾನ ರಹಿತ ಶಾಲೆಗಳು ಶೋಷಣೆ ಮಾಡುತ್ತವೆ ಎಂಬ ಆರೋಪ ಸಲ್ಲದು. ಅವು ಹಲವು ಸಮಸ್ಯೆಯಲ್ಲಿವೆ. ಹೀಗಾಗಿ ಏಕಮುಖ ಆರೋಪ ಮಾಡುವುದು ಸಮಂಜಸವಲ್ಲ. ಆನ್‌ಲೈನ್ ಶಿಕ್ಷಣದ ಪ್ರಯೋಜನಗಳು ಹಲವು. ಆದ್ದರಿಂದ ಮಕ್ಕಳು ಮತ್ತು ಪೋಷಕರಲ್ಲಿ ಇದರ ಮಹತ್ವದ ಬಗ್ಗೆ ಜಾಗೃತಿ ಅಗತ್ಯ. ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು.- ಪ್ರೊ. ಎಂ.ಬಿ. ಪುರಾಣಿಕ್, ಅಧ್ಯಕ್ಷರು, ಶಾರದಾ ವಿದ್ಯಾಸಂಸ್ಥೆಗಳು, ಮಂಗಳೂರು.
ಸಿಲೆಬಸ್ ಕಡಿತ ಬೇಡವೇ ಬೇಡ
ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸಿಲೆಬಸ್‌ನಲ್ಲಿ ಕಡಿತಗೊಳಿಸುವ ಬಗ್ಗೆ ಪ್ರಸ್ತಾಪ ಇದೆ. ಆದರೆ ಪಠ್ಯಕ್ರಮವನ್ನು ಕಡಿತಗೊಳಿಸುವುದು ಸಮಂಜಸವಲ್ಲ. ಯಾಕೆಂದರೆ ಇದರಿಂದ ವಿದ್ಯಾರ್ಥಿಯ ಜ್ಞಾನದ ಮಟ್ಟ ಕಡಿಮೆಯಾಗಿ ಭವಿಷ್ಯದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪಠ್ಯಕ್ರಮವನ್ನು ಕಡಿತಗೊಳಿಸುವ ಬದಲಿಗೆ ಶೈಕ್ಷಣಿಕ ವರ್ಷವನ್ನೇ ಸ್ವಲ್ಪ ಮುಂದೂಡುವುದು ಸೂಕ್ತ. ಇದರಿಂದ ಸಿಲೆಬಸ್ ಕಡಿತಗೊಳಿಸುವ ಪ್ರಶ್ನೆ ಬರುವುದಿಲ್ಲ. ಎರಡನೆಯದಾಗಿ 6 ವಿಷಯಗಳ ಬದಲಿಗೆ 5 ವಿಷಯಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸುವುದು ಸೂಕ್ತ. ಇತರ ರಾಜ್ಯಗಳಲ್ಲಿಈ ಮಾದರಿ ಇದೆ. ಇದರಿಂದ ಅನಗತ್ಯ ವಿಷಯಗಳನ್ನು ಕಲಿಯಬೇಕಾದ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಬರುವುದಿಲ್ಲ.- ಡಾ. ಸುಧಾಕರ ಶೆಟ್ಟಿ, ಅಧ್ಯಕ್ಷರು, ಜ್ಞಾನಸುಧಾ ಎಜುಕೇಷನ್ ಇನ್‌ಸ್ಟಿಟ್ಯೂಷನ್, ಕಾರ್ಕಳ.
ದೂರದರ್ಶನ ಹೆಚ್ಚು ಬಳಕೆಯಾಗಲಿ
ಆನ್‌ಲೈನ್ ಶಿಕ್ಷಣ ಎಂದಾಗ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಖರೀದಿ ಮಾಡಬೇಕಾಗುತ್ತದೆ. ಅನೇಕರಿಗೆ ಇದು ಕಷ್ಟ. ಆದರೆ, ಶೇ.90ರಷ್ಟು ಜನರ ಮನೆಗಳಲ್ಲಿ ಟಿವಿ ಇದೆ. ಹೀಗಾಗಿ, ಸರಕಾರವು ಶಿಕ್ಷಣಕ್ಕಾಗಿಯೇ ಒಂದು ಟಿವಿ ಚಾನೆಲ್ ಅನ್ನು ಆರಂಭಿಸಬೇಕು. ಒಂದೇ ದಿನದಲ್ಲಿ ರಾಜ್ಯದ ಎಲ್ಲ ಮಕ್ಕಳನ್ನೂ ತಲುಪಲು ಸಾಧ್ಯವಾಗುತ್ತದೆ. ಇಲ್ಲವೇ, ಕಲಿಕೆಯ ಕಿಟ್ ಅನ್ನು ಸರಕಾರವು ಮಕ್ಕಳಿಗೆ ತಲುಪಿಸಬೇಕು. ಇದರಿಂದ ಅಂತರ್ಜಾಲ ಸಮಸ್ಯೆಯನ್ನು ತಪ್ಪಿಸಬಹುದು. ಕೋವಿಡ್ ಬಿಕ್ಕಟ್ಟು ಎಷ್ಟು ದಿನವಿರುವುದೋ ಗೊತ್ತಿಲ್ಲ. ಒಂದೊಂದು ತರಗತಿಗೆ ಒಂದೊಂದು ದಿನದಂತೆ ವಿದ್ಯಾರ್ಥಿಗಳನ್ನು ಬ್ಯಾಚ್‌ಗಳಾಗಿ ವಿಂಗಡಿಸಿ ತರಗತಿ ನಡೆಸಬಹುದು. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬಹುದು. ಶಿಕ್ಷಕರಿಗೆ/ಉಪನ್ಯಾಸಕರಿಗೆ ಸಂಬಳ ನೀಡಲು ಖಾಸಗಿ ಸಂಸ್ಥೆಗಳಿಗೂ ಅನುಕೂಲವಾಗುತ್ತದೆ. -ಮಂಜಪ್ಪ ಕೆ.ಎಂ., ನಿರ್ದೇಶಕರು ಸಿದ್ದೇಶ್ವರ ಪಿಯು ಕಾಲೇಜು ಮತ್ತು ಟೀಮ್ ಅಕಾಡೆಮಿ ಅಧ್ಯಕ್ಷರು, ದಾವಣಗೆರೆ.
ಸಾಂಘಿಕ ಪ್ರಯತ್ನ ಬೇಕು
ಆನ್‌ಲೈನ್ ಎಜುಕೇಷನ್ ಬೇಕೋ, ಬೇಡ್ವೋ ಅನ್ನೋದು ಈಗ ಚರ್ಚೆಯ ವಿಷಯವಲ್ಲ. ಅದು ಈಗ ಅನಿವಾರ್ಯ. ಆದರೆ, ಆನ್‌ಲೈನ್ ಶಿಕ್ಷಣಕ್ಕೆ ಅನುಕೂಲತೆ ಇದೆಯೋ ಇಲ್ಲವೋ, ಕುಟುಂಬದ ಸ್ಥಿತಿಗತಿಗಳ ಚರ್ಚೆ ಮುಖ್ಯ. ಕಲ್ಪಿತ ವಿದ್ಯಾರ್ಥಿ ಸಮುದಾಯ, ಗ್ರಾಮೀಣ ಅಥವಾ ಪಟ್ಟಣ ಪ್ರದೇಶ ಎನ್ನುವ ವಿಂಗಡನೆಗಳು ಸೂಕ್ತವಲ್ಲ. ಕೊರೊನಾದಿಂದಾಗಿ ಮಕ್ಕಳ ಭೌತಿಕ ಸ್ಥಾನ ಬದಲಾಗಿದೆ. ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಶಿಕ್ಷಣ ಎಂದಾಕ್ಷಣ ಶಿಕ್ಷಣ ಇಲಾಖೆಗೆ ಮಾತ್ರ ಸಂಬಂಧಿಸಿದ್ದಲ್ಲ. ಉಳಿದ ಇಲಾಖೆಗಳೂ ಕೈಜೋಡಿಸಬೇಕು. ಸಾಂಘಿಕ ಪ್ರಯತ್ನದ ಮೂಲಕ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಸಿಗುವಂತೆ ಮಾಡಬೇಕಿದೆ. -ಡಾ. ಬಿ.ಎಂ. ಪುಟ್ಟಯ್ಯ ಶಿಕ್ಷ ಣ ತಜ್ಞರು, ಹಂಪಿ ಕನ್ನಡ ವಿವಿ, ಬಳ್ಳಾರಿ.
ಸಾಮರ್ಥ್ಯ ಆಧರಿತ ಶಿಕ್ಷಣ
ದೌರ್ಬಲ್ಯ ಆಧರಿತ ಕಲಿಕಾ ವ್ಯವಸ್ಥೆ ನಮ್ಮಲ್ಲಿದೆ. ಅಂದರೆ, ಮಕ್ಕಳ ಕಲಿಕಾ ದೌರ್ಬಲ್ಯಗಳನ್ನು ಗುರುತಿಸಿ ಶಿಕ್ಷಣ ನೀಡುವುದು ಸದ್ಯದ ಪದ್ಧತಿ. ಇದರ ಬದಲಿಗೆ ಸಾಮರ್ಥ್ಯ ಆಧರಿತ ಶಿಕ್ಷಣಕ್ಕೆ ನಾವು ವರ್ಗಾವಣೆಯಾಗಬೇಕಿದೆ. ಮುಂದಿನ 10-15 ವರ್ಷಗಳಲ್ಲಿ ಶಿಕ್ಷಣ ಪದ್ಧತಿ ಹೇಗಿರಬೇಕು ಎಂದು ಭಾವಿಸುತ್ತೇವೆಯೋ ಅದನ್ನು ಈಗಲೇ ಸಾಧ್ಯವಾಗಿಸಲು ಕೋವಿಡ್ ಸಂದರ್ಭವು ಸೂಕ್ತವಾಗಿದೆ. ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡುವ ಪದ್ಧತಿಯೂ ಬದಲಾಗಬೇಕು. ಆನ್‌ಲೈನ್ ಶಿಕ್ಷಣ ಅಥವಾ ಟೆಕ್ನಾಲಜಿ ಎನ್ನುವುದು ಕೇವಲ ಎಜುಕೇಷನ್‌ನ ಮುಂದುವರಿಕೆ ಮಾತ್ರ. ಇದರಾಚೆಗೆ ಸಾಮರ್ಥ್ಯ ಆಧರಿತ ಕಲಿಕಾ ವ್ಯವಸ್ಥೆ ಜಾರಿಗೊಳಿಸಲು ಕಾಲ ಸಮರ್ಪಕವಾಗಿದೆ. – ಕಿರಣ್ ಕುಮಾರ್, ಓಪನ್ ಮೈಂಡ್ಸ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್, ಶಿವಮೊಗ್ಗ.
ಸ್ಪ್ಲಿಟ್ ಕ್ಲಾಸ್ ಮಾದರಿ ಅನುಸರಿಸುವುದು ಸೂಕ್ತ
ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ‍್ಯತೆಯನ್ನು ಕೋವಿಡ್-19 ಸೃಷ್ಟಿಸಿದ್ದು, ಕೊರೊನೋತ್ತರದಲ್ಲಿ ಶೈಕ್ಷಣಿಕವಾಗಿ ಬದಲಾವಣೆ ತಂದುಕೊಳ್ಳುವ ನಿಟ್ಟಿನಲ್ಲಿನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಆನ್‌ಲೈನ್ ಶಿಕ್ಷಣ, ಶಾಲೆ ಆರಂಭದಲ್ಲಿನ ವಿಳಂಬ, ಕಲಿಕೆಯಿಂದ ವಿಮುಖರಾಗುವುದು, ಪರೀಕ್ಷೆಗಳು, ಸುರಕ್ಷತೆ ಮತ್ತಿತರ ವಿಚಾರಗಳ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಿದ್ದು, ಮಾನಸಿಕ ಅಥವಾ ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಆನ್‌ಲೈನ್ ತರಗತಿಗಳನ್ನು ನಡೆಸುವ ಜೊತೆಗೆ ಮುಂದಿನ ದಿನಗಳಲ್ಲಿ ‘ಸ್ಪ್ಲಿಟ್ ಕ್ಲಾಸ್’ ಮಾದರಿಯಲ್ಲಿ ತರಗತಿಗಳನ್ನು ಆರಂಭಿಸುವ ಸಲುವಾಗಿ ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ‘ಕೃತಕ ಬುದ್ಧಿಮತ್ತೆ’ಯನ್ನು ಸದ್ಬಳಕೆ ಮಾಡಿಕೊಳ್ಳುವ ಕುರಿತು ಔದ್ಯಮಿಕ ರಂಗದ ನೆರವನ್ನು ಪಡೆದುಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ತರಬೇತಿಯನ್ನು ಇನ್ನಷ್ಟು ಸುಧಾರಿಸಲು ಕ್ರಮ ಕೈಗೊಳ್ಳಬೇಕು. -ಕೆರೋನ್ ರೆಡ್ಡಿ, ಸಿಇಒ, ಎಐಎಂಎಸ್ ಇನ್ಸ್ಟಿಟ್ಯೂಟ್, ಬೆಂಗಳೂರು.
ಕಂಟೆಂಟ್ ರೂಪಿಸಬೇಕಿದೆ
ಇವತ್ತಿನ ಸನ್ನಿವೇಶದಲ್ಲಿ ಜಾಲ ಶಿಕ್ಷಣದ ಅನಿವಾರ್ಯತೆ ಕುರಿತು ಎಲ್ಲರೂ ಮಾತನಾಡುತ್ತಿದ್ದಾರೆ. ಈಗ ನಡೆಯುತ್ತಿರುವುದನ್ನು ನೋಡಿದರೆ ಅದು ಭೌತಿಕ ತರಗತಿಗಳನ್ನು ಆನ್‌ಲೈನ್ ರೂಪಕ್ಕೆ ಮಾರ್ಪಡಿಸಲಾಗಿದೆ ಅಷ್ಟೆ. ಕೇವಲ ಪುಸ್ತಕಗಳಲ್ಲಿರುವುದನ್ನು ಯಥಾವತ್ ಆಗಿ ದಾಟಿಸುವುದರಿಂದ ಯಾವುದೇ ಉಪಯೋಗವಾಗುವುದಿಲ್ಲ. ಖಂಡಿತ ನಮ್ಮ ಶಿಕ್ಷಕರು ಆನ್‌ಲೈನ್‌ಗೆ ಸಜ್ಜುಗೊಂಡಿಲ್ಲ. ಇದಕ್ಕೆ ಬೇಕಾದ ತರಬೇತಿ ಮತ್ತು ಬೋಧನಾ ವಿಧಾನಗಳನ್ನು ರೂಪಿಸಿಕೊಂಡಿಲ್ಲ. ಆನ್‌ಲೈನ್ ಕಂಟೆಂಟ್ ರೂಪಿಸಬೇಕಿದೆ. ಶಿಕ್ಷಕರಿಗೆ ತರಬೇತಿ ನೀಡಬೇಕಾಗಿದೆ. ಕೋವಿಡ್ ಕಾಲದ ತುರ್ತು ಸಂಗತಿಗಳಿವು. -ಡಾ. ಅಶೋಕ್ ಶೆಟ್ಟರ್, ಕುಲಪತಿ ಕೆಎಲ್‌ಇ ಟೆಕ್ ವಿವಿ, ಹುಬ್ಬಳ್ಳಿ.
ಮೂಲ ಸೌಕರ್ಯ ಒದಗಿಸಿ
ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಕೋವಿಡ್ ಕುರಿತು ಇನ್ನೂ ಹೆಚ್ಚು ಜಾಗೃತಿ ಮತ್ತು ಪ್ರಜ್ಞೆ ಹೊಂದಿರುತ್ತಾರೆ. ಹೀಗಾಗಿ ಅವರಿಗೂ ಪರೀಕ್ಷೆ ನಡೆಸುವುದು ಉತ್ತಮ. ಆನ್‌ಲೈನ್ ಶಿಕ್ಷಣಕ್ಕೆ ಮೂಲ ಸೌಕರ್ಯವನ್ನು ಸಂಸ್ಥೆಗಳ ನಿಟ್ಟಿನಲ್ಲೂ ಒದಗಿಸಬೇಕು. ವಿದ್ಯಾರ್ಥಿಗಳ ಮಟ್ಟದಲ್ಲೂ ಒದಗಿಸಬೇಕಾಗುತ್ತದೆ. ಸರಕಾರಿ ಶಾಲೆಗಳಲ್ಲಂತೂ ವಿದ್ಯಾರ್ಥಿಗಳು ಹಾಜರಾದರೂ ಅವರನ್ನು ಕಲಿಕಾ ಪ್ರಕ್ರಿಯೆಗೆ ತೊಡಗಿಸಲು ಸೌಲಭಗಳ ಕೊರತೆ ಇದೆ. ಇನ್ನು ಆನ್‌ಲೈನ್‌ಗೆ ಅವರನ್ನು ತಯಾರು ಮಾಡುವುದಾದರೂ ಹೇಗೆ? ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಇನ್ನು ಎಷ್ಟು ದಿನ ಕಾಯಬೇಕು? ಇವರಿಗೆ ಸೌಕರ್ಯ ಒದಗಿಸುವ ತನಕ ನಗರ, ಪಟ್ಟಣ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಆನ್‌ಲೈನ್ ಶಿಕ್ಷಣವನ್ನು ಮುಂದೂಡಬೇಕೆ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕು.-ಎನ್.ಬಿ. ಪ್ರದೀಪ್ ಕುಮಾರ್ ಕಾರ್ಯದರ್ಶಿಗಳು, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳು, ತುಮಕೂರು.