ಇದನ್ನು ಅಮೆರಿಕದ ಪ್ರಜಾತಂತ್ರದ ಸೊಬಗು ಅಂತ ಕರೆಯೋಣವಾ, ಇಲ್ಲ ಅಮೆರಿಕದ ರಾಜಕೀಯ ಇತಿಹಾಸದಲ್ಲಿನ ಕಪ್ಪುಚುಕ್ಕೆ ಅನ್ನೋಣವಾ? ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಆಯ್ಕೆಯೇ ಮಹಾ ಮೋಸ ಎಂಬ ಜಪವನ್ನೇ ಮಾಡುತ್ತಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ಡಿಸಿಯಲ್ಲಿರಿಪಬ್ಲಿಕನ್ ಪಕ್ಷ ದ ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ, ‘‘ಹೋಗಿ, ಪ್ರತಿಭಟಿಸಿ, ನುಗ್ಗಿ, ಸಂಸತ್ತನ್ನು ವಶಕ್ಕೆ ಪಡೆದುಕೊಳ್ಳಿ,’’ ಎಂಬ ಮಾತುಗಳಿಂದ ಉದ್ರೇಕಿತರಾದ ರಿಪಬ್ಲಿಕನ್ ಪಕ್ಷದ ಪುಂಡ ಬೆಂಬಲಿಗರು ಐತಿಹಾಸಿಕ ಕ್ಯಾಪಿಟಲ್ ಹಿಲ್ನಲ್ಲಿರುವ ಅಮೆರಿಕ ಸಂಸತ್ತಿನ ಮೇಲೆ ಅನಪೇಕ್ಷಿತ ದಾಳಿ ನಡೆಸಿಬಿಟ್ಟರು. ದಾಳಿ ನಡುವೆಯೇ ಅದೇ ಅಮೆರಿಕ ಕಾಂಗ್ರೆಸ್ನಲ್ಲಿಜೋ ಬೈಡೆನ್ ಅವರು 46ನೇ ಅಧ್ಯಕ್ಷ ರಾಗಿ ಚುನಾಯಿತರಾಗಿರುವುದನ್ನು ಅಧಿಕೃತ ಘೋಷಣೆ ಮಾಡಲಾಯಿತು! ಟ್ರಂಪ್ ರಂಪಾಟ, ಆಕ್ರೋಶ, ಹತಾಶೆ, ಆರೋಪ, ಇಷ್ಟು ಮಾತ್ರವಲ್ಲ, ಆತನ ಬೆಂಬಲಿಗರು ಎಸಗಿದ ಹಿಂಸೆ ಸೇರಿದಂತೆ ಯಾವ ಸಂಗತಿಯೂ ಸಾಂವಿಧಾನಿಕ ಮತ್ತು ಸಾಂಪ್ರದಾಯಿಕ ನಡಾವಳಿಗಳಿಗೆ ಭಂಗ ತರಲಿಲ್ಲ. ಇದಕ್ಕೆ ಕಾರಣವಾಗಿದ್ದು ಅಮೆರಿಕದ ಆಡಳಿತ ಮತ್ತು ಸಂಸದೀಯ ವ್ಯವಸ್ಥೆಗೆ ಭದ್ರ ತಳಪಾಯವೇ ಆಗಿರುವ ಅಲ್ಲಿನ ಸಂವಿಧಾನ ಹಾಗೂ ಆ ಸಂವಿಧಾನ ಕುರಿತು ಅಲ್ಲಿನ ಶಾಸಕಾಂಗ ಹೊಂದಿರುವ ನಿಷ್ಠೆ ಹಾಗೂ ಅಚಲ ಶ್ರದ್ಧೆ ಎಂಬುದರಲ್ಲಿ ಎರಡು ಮಾತಿಲ್ಲ.
ಕ್ಯಾಪಿಟಲ್ ಹಿಲ್ನಲ್ಲಿ ಟ್ರಂಪ್ ಬೆಂಬಲಿಗರು ಬುಧವಾರ ನಡೆಸಿದ ದಾಳಿ, ದಾಂಧಲೆ ಅಮೆರಿಕದ 200 ವರ್ಷಗಳ ರಾಜಕೀಯ ಇತಿಹಾಸದಲ್ಲಿನ ಕಪ್ಪು ಚುಕ್ಕೆ ಎಂಬುದು ಜಗತ್ತಿನ ಬಹುತೇಕ ಮಾಧ್ಯಮಗಳು ತದನಂತರ ವ್ಯಕ್ತಪಡಿಸಿರುವ ಅನಿಸಿಕೆ, ಅಭಿಪ್ರಾಯ. ಅಮೆರಿಕ ಆದಿಯಾಗಿ ಜಗತ್ತಿನ ಬಹುತೇಕ ದೇಶಗಳ ರಾಜಕೀಯ ನಾಯಕರೂ ಇದೇ ತೆರನಾದ ತೀಕ್ಷ್ಣ ಹಾಗೂ ಬೇಸರದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಆದರೆ ವಾಸ್ತವವಾಗಿ, ನಾಲ್ಕು ವರ್ಷಗಳ ಹಿಂದೆ ಟ್ರಂಪ್ ಅಮೆರಿಕದ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದೇ ಬಹಳ ಅಚ್ಚರಿದಾಯಕವಾಗಿತ್ತು. ನ್ಯೂಯಾರ್ಕ್ನ ರಿಯಲ್ ಎಸ್ಟೇಟ್ ವ್ಯಾಪಾರಿ, ಶೋಕಿವಾಲ ಎಂದೇ ಕುಖ್ಯಾತಿಯಾಗಿದ್ದ ಟ್ರಂಪ್ ‘ಅಮೆರಿಕಾ ಫಸ್ಟ್’ ಎಂಬ ಬಣ್ಣ ಬಣ್ಣದ ಮಾತುಗಳನ್ನಾಡುತ್ತಲೇ, ಉದಾತ್ತ ಪ್ರಜಾಪ್ರಭುತ್ವವಾದಿ ದೇಶದ ಮೊದಲ ಪ್ರಜೆಯಾಗಿ ಆಯ್ಕೆಯಾಗಿದ್ದು, ನಿಜಕ್ಕೂ ಒಂದು ಕಪ್ಪು ಚುಕ್ಕೆ, ಅಪಸವ್ಯ ಎಂದೇ ಕೆಲವರು ವ್ಯಾಖ್ಯಾನಿಸಿದ್ದರು. ಇಂಥ ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷ ಚುನಾವಣೆಯಲ್ಲಿಸೋತದ್ದು ಬಹು ನಿರೀಕ್ಷಿತವೇ ಆಗಿತ್ತು.
ಅಬ್ರಾಹಂ ಲಿಂಕನ್, ಜಾರ್ಜ್ ವಾಷಿಂಗ್ಟನ್, ಫ್ರಾಂಕ್ಲಿನ್ ರೂಸ್ವೆಲ್ಟ್, ಬರಾಕ್ ಒಬಾಮಾ ಅವರಂಥ ಮಹನೀಯರು ಅಧ್ಯಕ್ಷ ರಾಗಿ ಹೋದ ಅಮೆರಿಕಾದಂಥ ದೇಶ ಮುನ್ನಡೆಸಲು ಟ್ರಂಪ್ ಯೋಗ್ಯ ವ್ಯಕ್ತಿಯೇ ಅಲ್ಲ ಎಂಬುದು ಬಹುತೇಕರ ಖಚಿತ ಅಭಿಪ್ರಾಯ. ಇಂಥ ಮನುಷ್ಯನನ್ನು ಒಂದು ಅವಧಿಗಾದರೂ ಅಮೆರಿಕನ್ನರು ಗೆಲ್ಲಿಸಿದರಾದರೂ ಹೇಗೆ ಎಂದು ಟ್ರಂಪ್ ಆಯ್ಕೆಯಾದ 2017ರಲ್ಲೇ ಬಹುತೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಇಂಥವನನ್ನು ಆಯ್ಕೆ ಮಾಡಬಾರದಿತ್ತು ಎಂದು ನಂತರದ ವರುಷಗಳಲ್ಲಿಅಮೆರಿಕನ್ನರಿಗೆ ಅನಿಸಿತ್ತೇನೋ. ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿ ಬಳಿಕ, ಅಂಥ ಜನರಿಗಾದರೂ 2017ರ ಟ್ರಂಪ್ ಆಯ್ಕೆ ಕುರಿತು ಪಾಪಪ್ರಜ್ಞೆ ಕಾಡುತ್ತಿರಬೇಕು.
ಅಮೆರಿಕ ದೊಡ್ಡ ದೇಶ ನಿಜ. ಆದರೆ ಆ ದೇಶದ ಸಂವಿಧಾನ ಗಾತ್ರದಲ್ಲಿ ಅತಿ ಕಿರಿದು. ಆ ದೇಶದ ಜನ ಅದೆಷ್ಟೇ ಆಧುನಿಕ, ಉದಾರವಾದಿ ಹಾಗೂ ಮಹತ್ವಾಕಾಂಕ್ಷೆ ಗುಣ ಹೊಂದಿದ್ದರೂ ಅವರು ಸ್ವಭಾವತಃ ಸಂಪ್ರದಾಯ, ರೂಢಿ, ನೈತಿಕ ಕಟ್ಟುಪಾಡುಗಳಿಗೂ ಪ್ರಾಮುಖ್ಯತೆ ನೀಡುತ್ತಾರೆ. ಹಾಗಾಗಿಯೇ ಏನೋ, ಅಲ್ಲಿನ ಜನರಿಗೆ ಸಂವಿಧಾನದ ಲಿಖಿತ ನಿಯಮಗಳಿಗಿಂತ ಅಲಿಖಿತ ಸಂಪ್ರದಾಯಗಳೇ ಆಪ್ಯಾಯಮಾನ. ಮುಖ್ಯವಾಗಿ ವ್ಯಕ್ತಿಗೌರವ, ನೈತಿಕತೆ ಮತ್ತು ರಾಷ್ಟ್ರಪ್ರೇಮ ಅಮೆರಿಕದ ಹಿರಿಮೆ. ಅಮೆರಿಕದಲ್ಲಿಪಕ್ಷ ಪಂಗಡಗಳ ತಿಕ್ಕಾಟ, ಪ್ರತಿಷ್ಠೆಯ ಹಣಾಹಣಿ ಇದೆ ನಿಜ. ಆದರೆ ಅದು ಸಾಂವಿಧಾನಿಕ ಸ್ಥಾನಮಾದ ಘನತೆ ಗೌರವಗಳಿಗೆ ಎಂದೂ ಕುಂದುಂಟು ಮಾಡಲು ಅವಕಾಶ ನೀಡಿಲ್ಲ. ಆ ದೇಶದ ಇತಿಹಾಸದುದ್ದಕ್ಕೂ ಈ ಸಂಗತಿಯನ್ನು ನಾವು ಸ್ಪಷ್ಟವಾಗಿ ಗಮನಿಸಬಹುದು. ಆದರೆ, ಟ್ರಂಪ್ ತಮ್ಮ ಅಧಿಧಿಕಾರಾವಧಿಧಿಯ ನಾಲ್ಕು ವರ್ಷಗಳಲ್ಲಿಆ ಎಲ್ಲ ಹಿರಿಮೆ ಗರಿಮೆಗಳನ್ನು ಮಣ್ಣುಪಾಲು ಮಾಡಿದರು ಎಂಬುದು ಅಮೆರಿಕದ ಪ್ರಜ್ಞಾವಂತರ ನೋವು.
ಟ್ರಂಪ್ ಕುಖ್ಯಾತಿಗೆ ಹೊಸ ಸೇರ್ಪಡೆ
ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆದಿರುವುದು ಇದೇ ಮೊದಲು ಎನ್ನುವ ಹಾಗಿಲ್ಲ. ಹಲವು ಬಾರಿ ಬೇರೆ ಬೇರೆ ಕಾರಣಗಳಿಗೆ ದಾಳಿಗಳು ನಡೆದ ಉದಾಹರಣೆಗಳಿವೆ. ಆ ರೀತಿ ಮೊದಲ ದಾಳಿ ನಡೆದದ್ದು 1814ರಲ್ಲಿ. ಅಮೆರಿಕ ಸಂಯುಕ್ತ ಸಂಸ್ಥಾನ(ಯುಎಸ್ಎ) ಅಸ್ತಿತ್ವಕ್ಕೆ ಬಂದು ಹತ್ತು ವರ್ಷ ಆಗಿತ್ತು ಅಷ್ಟೆ. ಆ ವೇಳೆ ಅಮೆರಿಕ ಬ್ರಿಟನ್ ಜೊತೆಗೆ ವಾಣಿಜ್ಯ ಸಮರಕ್ಕೆ ಇಳಿದಿತ್ತು. ಫ್ರಾನ್ಸ್ನೊಂದಿಗೆ ಅಮೆರಿಕ ವ್ಯಾಪಾರ ಸಂಬಂಧ ಮುಂದುವರೆಸುವುದು ಬ್ರಿಟನ್ಗೆ ಸುತಾರಾಂ ಇಷ್ಟವಿರಲಿಲ್ಲ. ಆಗ ಅದಕ್ಕೆ ಪ್ರತೀಕಾರವಾಗಿ ಬ್ರಿಟನ್ ವಿರುದ್ಧ ಅಮೆರಿಕ ಯುದ್ಧ ಸಾರಿತು. ಅಮೆರಿಕದ ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಮುಂದಾದ ಬ್ರಿಟನ್ ತನ್ನ ಸೇನೆಯನ್ನು ಅಮೆರಿಕದ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿಸಿತು. ಅದಾದ ನಂತರ 1835ರಲ್ಲಿ ಅಧ್ಯಕ್ಷ ಆಂಡ್ರೂ ಜಾಕ್ಸನ್ ಹತ್ಯೆಯ ಪ್ರತೀಕಾರವಾಗಿ ಕ್ಯಾಪಿಟಲ್ ಕಟ್ಟಡದ ಮೇಲೆ ಜಾಕ್ಸನ್ ಬೆಂಬಲಿಗರು ದಾಳಿ ಮಾಡಿದ್ದರು. ಆ ಘಟನೆ ನಂತರ ಕ್ಯಾಪಿಟಲ್ ಕಟ್ಟಡದ ಮೇಲೆ ಐದಾರು ಬಾರಿ ದಾಳಿಗಳು ನಡೆದಿವೆ. ಆ ಎಲ್ಲದಾಳಿಗಳಿಗೆ ಹೋಲಿಸಿದರೆ ಬ್ರಿಟನ್ ಸೇನಾ ದಾಳಿಯೇ ಘನಘೋರ ಎನ್ನಬೇಕು. ಆದರೆ ಅಮೆರಿಕದ ಸಂಸತ್ತಿನ ಸಾರ್ವಭೌಮತೆ ಕಾಪಾಡಬೇಕಾದ ವರ್ತಮಾನದ ಅಧ್ಯಕ್ಷ ರೇ ಹೋಗಿ ನುಗ್ಗಿ, ವಶಪಡಿಸಿಕೊಳ್ಳಿ ಎಂದು ಹುರಿದುಂಬಿಸಿ, ತನ್ನ ಬೆಂಬಲಿಗರು ದಾಳಿ ಮಾಡುವಂತೆ ಮಾಡಿದ್ದು ಅಮೆರಿಕದ ಇತಿಹಾಸದಲ್ಲಿಇದೇ ಮೊದಲು. ನಮ್ಮ ಕುಮಾರವ್ಯಾಸ ಹೇಳಿದಂತೆ, ಅರಸು ರಾಕ್ಷ ಸ, ಬೆಂಬಲಿಗರು ಮೊರೆವ ಹುಲಿ, ಪರಿವಾರ ಹದ್ದಿನ ನೆರವಿಯಾದ ಸಂಕಟ ಅಮೆರಿಕನ್ನರದು. ಆ ಕುಖ್ಯಾತಿ ಟ್ರಂಪ್ ಎಂಬ ಅರಸನ ಹೆಸರಲ್ಲೇ ಶಾಶ್ವತವಾಗಿ ಉಳಿಯುತ್ತದೆ.
ನ್ಯಾಯ ವ್ಯವಸ್ಥೆಯ ಅಪೇಕ್ಷೆ ಏನು?
ಈ ಪ್ರಶ್ನೆಗೆ ಕ್ಲಿಂಟನ್ ಆಡಳಿತಾವಧಿಯ ಒಂದು ಘಟನೆ ಸಾರ್ವಕಾಲಿಕ ನಿದರ್ಶನವಾಗಿ ನಿಲ್ಲುತ್ತದೆ. ಬಿಲ್ ಕ್ಲಿಂಟನ್ ಅಮೆರಿಕದ ಅಧ್ಯಕ್ಷರಾಗಿದ್ದ ವೇಳೇ ತಮ್ಮ ಕಚೇರಿ ಸಹಾಯಕಿಯಾಗಿದ್ದ ಲಿವಿನೋಸ್ಕಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡರೆಂಬ ಹಗರಣ ಇಡೀ ಜಗತ್ತಿಗೇ ಗೊತ್ತಿರುವ ಸಮಾಚಾರ. ಆ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದ ಸುಪ್ರೀಂ ಕೋರ್ಟ್ನಲ್ಲಿವಿಚಾರಣೆ ನಡೆಯುತ್ತಿದ್ದ ವೇಳೆ ನ್ಯಾಯಾಧೀಶರು ಮಾಡಿದ ಉಲ್ಲೇಖ ಅಮೆರಿಕದಲ್ಲಿನೈತಿಕ ಮೌಲ್ಯಗಳಿಗೆ ಎಂಥಾ ಪ್ರಾಧಾನ್ಯತೆ ಇದೆ ಎಂಬುದಕ್ಕೆ ದೊಡ್ಡ ಉದಾಹರಣೆ. ಕ್ಲಿಂಟನ್ ಮತ್ತು ಲಿವಿನೋಸ್ಕಿ ನಡುವಿನ ದೈಹಿಕ ಸಂಬಂಧದ ಕುರಿತ ವಿಚಾರದ ನ್ಯಾಯ ಅನ್ಯಾಯದ ಸಂಗತಿಯನ್ನು ಆಮೇಲೆ ನೋಡೋಣ. ಆದರೆ ಆ ಪ್ರಕರಣಕ್ಕೆ ಸಂಬಂಧಿಧಿಸಿದಂತೆ ಅಧ್ಯಕ್ಷ ರಾದವರು ದೇಶದ ಜನರು ಮತ್ತು ಸಂಸತ್ತಿಗೆ ಸುಳ್ಳು ಹೇಳಿದ್ದು ದೊಡ್ಡ ಅಪರಾಧವಲ್ಲವೇ ಎಂದು ಆ ನ್ಯಾಯಾಧಿಧೀಶರು ಪ್ರಶ್ನಿಸಿದ್ದರು. ಅಲ್ಲಿನ ಜನ ಕೂಡ, ಅಮೆರಿಕಾದ ಶ್ರೀಸಾಮಾನ್ಯ ಪ್ರಜೆಯಾಗಿ ಕ್ಲಿಂಟನ್ ಹೇಗಾದರೂ ಇರಲಿ, ಯಾರ ಬಳಿಯಾದರೂ ಸಂಪರ್ಕ-ಸಹವಾಸ ಹೊಂದಿರಲಿ. ಆದರೆ, ಅಮೆರಿಕಾದ ಅಧ್ಯಕ್ಷನಾಗಿ ಹೀಗಿದ್ದರೆ ಹೇಗೆ ಎಂದೇ ಕ್ಲಿಂಟನ್ ಗುಣವನ್ನು ನಿರಾಕರಿಸಿದ್ದರು. ‘ಸೀಜರನ ಹೆಂಡತಿ ಸಂಶಯಾತೀತಳಾಗಿರಬೇಕು’ ಎಂಬುದು ಅಲ್ಲಿನ ಜನರ ಸಾಂಪ್ರದಾಯಿಕ ನಂಬಿಕೆ. ಈ ಸಂಗತಿಯನ್ನು ಡೊನಾಲ್ಡ… ಟ್ರಂಪ್ ತಾನು ಅಧ್ಯಕ್ಷ ನಾಗುವ ಪೂರ್ವದಲ್ಲಿಯೇ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿತ್ತು.
ಅನನುಭವದ ಅವಾಂತರವೇ?
ಟ್ರಂಪ್ ವಿಷಯಕ್ಕೆ ಬಂದಾಗ ಹಲವು ಮೊದಲುಗಳು ದಾಖಲಾಗುತ್ತವೆ. ಆ ಪೈಕಿ ರಾಜಕೀಯ ಅನುಭವವೇ ಇಲ್ಲದ, ಸಾರ್ವಜನಿಕ ಜೀವನದ ಗಂಧವೇ ಇಲ್ಲದ ವ್ಯಕ್ತಿಯೊಬ್ಬ ಹಠಾತ್ತಾಗಿ ಚುನಾವಣೆ ಎದುರಿಸಿ ಅಧ್ಯಕ್ಷ ಪಟ್ಟ ಅಲಂಕರಿಸಿದ್ದೂ ಕೂಡ ಅಮೆರಿಕದ ಸುದೀರ್ಘ ರಾಜಕೀಯ ಇತಿಹಾಸದಲ್ಲಿಇದೇ ಮೊದಲು. ಹೀಗಾಗಿ ಇಷ್ಟೆಲ್ಲಅಪಸವ್ಯಕ್ಕೆ ಕಾರಣವಾದ್ದು ಟ್ರಂಪ್ಗಿರುವ ರಾಜಕೀಯ ಅನುಭವದ ಕೊರತೆ ಎಂಬುದು ಬಹುತೇಕ ರಾಜಕೀಯ ಪಂಡಿತರು ವ್ಯಕ್ತಪಡಿಸುವ ಸಾಮಾನ್ಯ ಅಭಿಪ್ರಾಯ. ಅದಿಲ್ಲದೇ ಹೋದರೆ 60 ಮಿಲಿಯನ್ಗೂ ಹೆಚ್ಚು ಜನರ ಮತ ಪಡೆದು ಬೈಡೆನ್ ಆಯ್ಕೆಯಾದದ್ದನ್ನು ಮೋಸ, ದಗಾ, ವಂಚನೆ, ಸುಳ್ಳು ಎಂದೆಲ್ಲಇಷ್ಟೊಂದು ದೊಡ್ಡ ಧ್ವನಿಯಲ್ಲಿಬಹಿರಂಗವಾಗಿ ಜರಿಯುತ್ತಿರಲಿಲ್ಲ. ಇದನ್ನೆಲ್ಲ ನೋಡುತ್ತಿದ್ದರೆ ಈ ವ್ಯಕ್ತಿಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆಯ ವಾಸ್ತವದ ಅರಿವೇ ಇಲ್ಲವೇನೋ ಅನಿಸಿಬಿಡುವುದು ಸಹಜ.
ಅಧಿಧಿಕಾರ ವ್ಯವಸ್ಥೆಯ ಕುರಿತು ಲಾರ್ಡ್ ಆಕ್ಟನ್ ಹೇಳಿದ ಮಾತು ಜನಜನಿತ. ಆತ ಧರ್ಮ ಗುರುವೊಬ್ಬರಿಗೆ ಬರೆದ ಪತ್ರದಲ್ಲಿಹೀಗೇ ಹೇಳುತ್ತಾನೆ. ‘ಅಧಿಕಾರ ವ್ಯಕ್ತಿಯನ್ನು ಭ್ರಷ್ಟನನ್ನಾಗಿ ಮಾಡುತ್ತದೆ, ಅಪರಿಮಿತ ಅಧಿಕಾರ ಅದೇ ವ್ಯಕ್ತಿಯನ್ನು ಅಪರಿಮಿತ ಭ್ರಷ್ಟನನ್ನಾಗಿಸುತ್ತದೆ’ ಎಂದು. ಈ ಮಾತಿನ ಮುಂದುವರೆದ ಭಾಗವಾಗಿ ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಇನ್ನೊಂದು ಮಾತನ್ನು ಹೇಳುತ್ತಾರೆ. ‘ಕೆಲವೊಮ್ಮೆ ಮಾನಸಿಕ ಭ್ರಮೆ, ಅಸುರಕ್ಷ ತೆಯ ಭಾವ ಮನುಷ್ಯನನ್ನು ಅಪರಿಮಿತ ಅಧಿಕಾರದ ಹಪಾಹಪಿಗೆ, ಸದಾ ತಾನು ಬೇರೆಲ್ಲರಿಗಿಂತಲೂ ಸರ್ವಶ್ರೇಷ್ಠ ಎಂಬ ಅನಾರೋಗ್ಯಕರ ಸ್ಪರ್ಧೆಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ’. ಜಾರ್ಜ್ ವಾಷಿಂಗ್ಟನ್ ಪ್ರಜಾತಂತ್ರದ ಭವಿಷ್ಯದ ದೃಷ್ಟಿಯಿಂದ ಹೇಳಿದ ಮಾತು ಟ್ರಂಪ್ ಕುರಿತೇ ಆಡಿದಂತೆ ಭಾಸವಾಗುತ್ತದೆ ಅಲ್ಲವೇ?
ಟ್ರಂಪ್ ಭ್ರಮೆಯಲ್ಲಿರುವುದು ನಿಜ, ಆದರೆ ಖಂಡಿತವಾಗಿ ಟ್ರಂಪ್ ದಡ್ಡ ಅಥವಾ ಮುಗ್ಧ ಎಂದು ಭಾವಿಸಲು ಕಾರಣ ಇಲ್ಲ. ಅದಕ್ಕೆ ಅಮೆರಿಕದಂತಹ ದೊಡ್ಡ ದೇಶದಲ್ಲಿಟ್ರಂಪ್ ಅಧ್ಯಕ್ಷೀಯ ಚುನಾವಣೆ ಗೆದ್ದಿರುವುದೇ ಸಾಕ್ಷಿ. ಮೊದಲ ಅವಧಿಧಿಯ ಚುನಾವಣೆಗೆ ಸ್ಪರ್ಧೆ ಮಾಡುವ ಪೂರ್ವದಲ್ಲಿ ಟ್ರಂಪ್ ಅಮೆರಿಕನ್ನರ ನಾಡಿಮಿಡಿತವನ್ನು ಚೆನ್ನಾಗಿ ಅರಿತುಕೊಂಡಿದ್ದರು. ಇಸ್ಲಾಮಿಕ್ ಭಯೋತ್ಪಾದಕತೆ ವಿಷಯದಲ್ಲಿಅಮೆರಿಕನ್ನರಿಗಿರುವ ಅಸುರಕ್ಷ ತೆ ಭಾವನೆ ಹಾಗೂ ವ್ಯಾಪಾರ, ಆರ್ಥಿಕತೆ, ಉದ್ಯೋಗ, ಉದ್ಯಮದ ವಿಷಯದಲ್ಲಿ ಅಮೆರಿಕನ್ನರಿಗಿರುವ ಶ್ರೇಷ್ಠತೆಯ ಪ್ರಜ್ಞೆಯನ್ನೇ ಬಂಡವಾಳ ಮಾಡಿಕೊಂಡು, ‘ಅಮೆರಿಕ ಫಸ್ಟ್’ ಎಂಬ ಭ್ರಮಾಲೋಕ ಸೃಷ್ಟಿಸಿ ಮತದಾರರನ್ನು ವಿಸ್ಮಿತರನ್ನಾಗಿಸಿ ಅಚ್ಚರಿಯ ರೀತಿಯಲ್ಲಿಅಧ್ಯಕ್ಷೀಯ ಚುನಾವಣೆಯಲ್ಲಿಗೆದ್ದರು. ಅದೇ ಅಮೆರಿಕನ್ನರಿಗೆ ಟ್ರಂಪ್ ನೈಜ ಬಂಡವಾಳ ಅರ್ಥವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ. ಚೀನಾ ವಿರುದ್ಧದ ವ್ಯಾಪಾರ ಸಮರ, ಮೆಕ್ಸಿಕೋದಿಂದ ಹಿಡಿದು ನೆರೆಹೊರೆಯ ರಾಷ್ಟ್ರಗಳೊಂದಿಗಿನ ಅನಗತ್ಯ ಜಗಳ, ವೀಸಾ ನೀತಿಯ ಹುಚ್ಚಾಟಗಳು ಅಮೆರಿಕದ ಉದ್ಯಮ, ಉದ್ಯೋಗದಿಂದ ಹಿಡಿದ ದೈನಂದಿನ ಜೀವನದವರಗೆ ಸಮಸ್ಯೆಗಳ ಸಂಕೋಲೆಯನ್ನೇ ಸೃಷ್ಟಿಸಿತು. ಇದೆಲ್ಲದರ ಪರಿಣಾಮ ನಾಲ್ಕು ವರ್ಷಗಳು ಕಳೆಯುವಷ್ಟರಲ್ಲಿಸಾಕಪ್ಪ ಸಾಕು ಇವರ ಸಹವಾಸ ಎಂದು ಅದೇ ಅಮೆರಿಕನ್ನರು ಏದುಸಿರು ಬಿಡುವಂತಾಗಿತ್ತು. ಅದರ ಪರಿಣಾಮವೇ ತೀರಾ ವಯಸ್ಸಾದ, ಹೇಳಿಕೊಳ್ಳುವ ಬಲಿಷ್ಠ ನಾಯಕನಲ್ಲದ ಬೈಡನ್ನೇ ಎಷ್ಟೋ ವಾಸಿ ಎಂಬ ತೀರ್ಮಾನಕ್ಕೆ ಅಮೆರಿಕನ್ನರು ಬಂದುಬಿಟ್ಟರು. ಭ್ರಮಾಲೋಕದಲ್ಲಿದ್ದ ಟ್ರಂಪ್ಗೆ ಅದನ್ನು ಅರಗಿಸಿಕೊಳ್ಳಲಾಗಲಿಲ್ಲ. ಅದರ ಪರಿಣಾಮವೇ ಇಷ್ಟೆಲ್ಲಅವಾಂತರಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣಿಸುವ ಸಂಗತಿ.
ಟ್ರಂಪ್ ಮುಂದಿನ ಭವಿಷ್ಯ ಏನು?
ಈ ಕುರಿತು ಅಮೆರಿಕ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಪಡಸಾಲೆಯಲ್ಲಿವ್ಯಾಪಕ ಚರ್ಚೆ ನಡೆಯುತ್ತಿದೆ. ಕ್ಯಾಪಿಟಲ್ ಹಿಲ್ನಲ್ಲಿ ಟ್ರಂಪ್ ಬೆಂಬಲಿಗರು ನಡೆಸಿದ ದಂಗೆಯ ನಂತರ ತಕ್ಷ ಣಕ್ಕೆ ಜಾರಿಗೆ ಬರುವಂತೆ ಮುಂದಿನ 13 ದಿನಗಳಿಗೆ ಇರುವ ಟ್ರಂಪ್ ಅಧಿಕಾರಾವಧಿಯನ್ನು ಮೊಟಕುಗೊಳಿಸಬೇಕು ಎಂಬುದು ಅಮೆರಿಕ ರಾಜನೀತಿಜ್ಞರು ತಕ್ಷ ಣಕ್ಕೆ ನೀಡಿರುವ ಪ್ರತಿಕ್ರಿಯೆ. ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯ ಪ್ರಕಾರ ಅಮೆರಿಕದ ಉಪಾಧ್ಯಕ್ಷರು ಅಮೆರಿಕದ ಕಾಂಗ್ರೆಸ್ಸಿನ ಅನುಮೋದನೆ ಪಡೆದ ಅಧ್ಯಕ್ಷ ರನ್ನು ಪದಚ್ಯುತಗೊಳಿಸಬಹುದು. ಉಪಾಧ್ಯಕ್ಷ ಮೈಕ್ ಪೆನ್ಸ್ ಆ ಕೆಲಸಕ್ಕೆ ಮುಂದಾಗುತ್ತ್ತಾರಾ ಎಂಬುದು ಈಗ ಉದ್ಭವಿಸಿರುವ ಪ್ರಶ್ನೆ. ಆದರೆ ಒಂದಂತೂ ನಿಜ, ನಾಲ್ಕು ವರ್ಷಗಳ ಕಾಲ ಕಟ್ಟಾ ಟ್ರಂಪ್ ಬೆಂಬಲಿಗರಾಗಿದ್ದ ಪೆನ್ಸ್, ಟ್ರಂಪ್ ಮತ್ತು ಅವರ ಬೆಂಬಲಿಗರ ಅಟಾಟೋಪವನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾರೆ. ಮಾತ್ರವಲ್ಲ, ಹೊಸ ಅಧ್ಯಕ್ಷರ ಆಯ್ಕೆ ಪ್ರಕಿಯೆಯನ್ನು ರದ್ದು ಪಡಿಸುವಂತೆ ಕೋರಿದ ಟ್ರಂಪ್ ಮಾತನ್ನು ಮೂಲೆಗೆ ತಳ್ಳಿದ್ದಾರೆ. ಸದ್ಯಕ್ಕೆ ಟ್ರಂಪ್ ಗರ್ವ ಭಂಗಕ್ಕೆ ಅಷ್ಟು ಸಾಕು.
ಬೈಡೆನ್ ಸೇಡು ತೀರಿಸಿಕೊಳ್ತಾರಾ?
ಇದು ಈಗ ಎಲ್ಲರೂ ಕೇಳುತ್ತಿರುವ ಪ್ರಶ್ನೆ. 1974ರಲ್ಲಿಅಧ್ಯಕ್ಷ ರಾಗಿದ್ದ ಗೆರಾಲ್ಡ್ ಫೋರ್ಡ್ ನಿಕಟಪೂರ್ವ ಅಧ್ಯಕ್ಷ ನಿಕ್ಸನ್ ವಿರುದ್ಧ ಸೇಡುತೀರಿಸಿಕೊಳ್ಳುವ ಅವಕಾಶ ಆಯ್ದುಕೊಂಡು ಕೈಬಿಟ್ಟಿದ್ದರು. ಈಗಲೂ ಅಷ್ಟೆ, ಸೇಡು ತೀರಿಸಿಕೊಳ್ಳುವುದಾದರೆ ಜೋ ಬೈಡೆನ್ಗೆ ಟ್ರಂಪ್ ವಿರುದ್ಧ ಬೇಕಾದಷ್ಟು ಕಾರಣಗಳಿವೆ. ಮೊದಲ ಅಧ್ಯಕ್ಷೀಯ ಚುನಾವಣೆಯಲ್ಲಿರಷ್ಯದ ನೆರವು ಪಡೆದ ಕ್ರಿಮಿನಲ್ ಆಪಾದನೆ, ಆರ್ಥಿಕತೆ ಹಾಳುಗೆಡವಿದ್ದು, ಇತ್ತೀಚಿನ ವರ್ಣಭೇದ ನೀತಿ ಒಂದೆಡೆಧಿಯಾದರೆ ಕ್ಯಾಪಿಟಲ್ ಹಿಲ್ ಮೇಲಿನ ರಿಪಬ್ಲಿಕನ್ ಪುಂಡರ ದಾಳಿ ಹೊಸ ಸೇರ್ಪಡೆ. ಬೈಡೆನ್ ಮನದಾಳವನ್ನು ತಿಳಿಯುವುದು ಹೇಗೆ?
ನೆನಪಾದ ಪೊಲೀಸ್ ನೈತಿಕತೆ
ಕೆಲ ತಿಂಗಳ ಹಿಂದೆ ಅಮೆರಿಕಾದ ಪೊಲೀಸರು ನಿಯಮ ಪಾಲಿಸದ ಕಪ್ಪು ಬಣ್ಣದ ಪ್ರಜೆಯೊಬ್ಬನನ್ನು ಕೊಂದು ಹಾಕಿದ್ದರು. ಆಗ ಇಡೀ ಅಮೆರಿಕಾದ ಯುವ ಜನರು ಒಟ್ಟಾಗಿ ಪ್ರತಿಭಟಿಸಿದ್ದರು. ಈ ಪ್ರತಿಭಟನೆಯನ್ನು ಟ್ರಂಪ್ ಪುಂಡಾಟ ಎಂದು ವ್ಯಾಖ್ಯಾನಿಸಿದ್ದರು. ಆದರೆ, ಅಮೆರಿಕಾದ ಪೊಲೀಸರು ಮಾತ್ರ, ತಮ್ಮ ತಪ್ಪಿಗೆ ದೇಶವಾಸಿಗಳ ಕ್ಷಮೆಯಾಚಿಸಿದರು. ಮಾತ್ರವಲ್ಲ, ಅಲ್ಲಿನ ಪೊಲೀಸ್ ಅಧಿಧಿಕಾರಿಯೊಬ್ಬ, ಅಮೆರಿಕಾ ಅಧ್ಯಕ್ಷ ಟ್ರಂಪ್ಗೆ ಸರಿಯಾಗಿ ಮಾತನಾಡಲು ಬರುವುದಿಲ್ಲಎಂದಾದರೆ, ಬಾಯ್ಮುಚ್ಚಿಕೊಂಡು ಮನೆಗೆ ಹೋಗಲಿ ಎಂದಿದ್ದರು ! ಟ್ರಂಪ್ ಬೆಂಬಲಲಿಗರ ಕ್ಯಾಪಿಟಲ್ ಹಿಲ್ ದಾಳಿ ಬಳಿಕ, ಅಮೆರಿಕಾ ಅಧಿಧಿಕಾರಿಗಳ ಕ್ಷಮೆಯಾಚನೆ ಮತ್ತು ದಿಟ್ಟತನ- ಎರಡನ್ನೂ ಮತ್ತೆ ನೆನಪಿಸಿಕೊಳ್ಳೋಣ.
ಭಾರತದ ಪ್ರತಿಕ್ರಿಯೆ ಏನು?
ಕ್ಯಾಪಿಟಲ್ ಹಿಲ್ನಲ್ಲಿ ಟ್ರಂಪ್ ಬೆಂಬಲಿಗರು ನಡೆಸಿದ ದಾಂಧಲೆಯನ್ನು ತಕ್ಷ ಣ ಖಂಡಿಸಿ, ಸುಲಲಿತ ಅಧಿಧಿಕಾರ ಹಸ್ತಾಂತರಕ್ಕೆ ಟ್ರಂಪ್ಗೆ ಕಿವಿಮಾತು ಹೇಳಿ ಪ್ರಧಾನಿ ಮೋದಿ ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ಮುಖ್ಯವಾಗಿ ಮೇಲಿಂದ ಮೇಲೆ ಭಾರತದ ಸಂಸತ್ತು, ವಿಧಾನಸಭೆಗಳಲ್ಲಿಇಂಥದ್ದೇ ಬಡಿದಾಟವನ್ನು ನೋಡುವ ಭಾರತೀಯರಿಗೆ ಅಮೆರಿಕದಲ್ಲೂ ಹೀಗಾಯಿತೆಂಬುದೊಂದೇ ವಿಶೇಷ!
ಆ ಘಟನೆ ಏನೂ ಇರಲಿ, ರಾಜಕೀಯ ಮೇಲಾಟಗಳ ವಿಷಯ ಬಂದಾಗ ನಮಗೆ ಗಾಂಧಿಧೀಜಿ ನಿಲುವೇ ಒಂದು ಮೌಲ್ಯ. ‘‘ನೈತಿಕತೆಧಿಯಿಲ್ಲದ ರಾಜಕೀಯ ಪಾಪ, ರಾಜಕೀಯ ಎಂದರೆ ಸೇವೆಯೇ ಹೊರತು ಪ್ರತಿಷ್ಠೆ, ಅಹಂಕಾರ, ಅಟಾಟೋಪಗಳಿಗೆ ಸ್ಥಾನವಿಲ್ಲ!’’
ಗಾಂಧಿಧೀಜಿ ಮಾತೇ ಸತ್ಯ ಮತ್ತು ನಿತ್ಯ!
